National

93 ವರ್ಷ ಕಳೆದರೂ ಆ ದರೋಡೆಯ ನೆನಪು ರೋಮಾಂಚನ ತರಿಸುವಂಥದ್ದು!!

ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರು ಹಲವರು. ಕೆಲವರು ಮಹಾತ್ಮಾ ಗಾಂಧೀಜಿಯಂತೆ ಅಹಿಂಸಾ ಮಾರ್ಗವನ್ನು ಆಯ್ದುಕೊಂಡರೆ ಮತ್ತಷ್ಟು ಮಂದಿ ಕ್ರಾಂತಿಕಾರಿಗಳಾಗಿ ಧುಮುಕಿದರು. ಹೀಗೆ ಕ್ರಾಂತಿಕಾರಿಗಳಾಗಿ ತಾಯಿ ಭಾರತಿಯ ಸೇವೆ ಮಾಡುತ್ತಾ ತಮ್ಮನ್ನೇ ದೇಶಕ್ಕಾಗಿ ಅರ್ಪಿಸಿಕೊಂಡವರು ಸುಮಾರು ಆರುವರೆ ಲಕ್ಷ ಜನ!

ಕ್ರಾಂತಿಕಾರಿಗಳೆಂದಾಕ್ಷಣ ಮೊದಲು ನೆನಪಾಗುವ ಹೆಸರೇ ಚಂದ್ರಶೇಖರ್ ಆಜಾದನದ್ದು. ಬಾಲ್ಯದಲ್ಲಿಯೇ ಆಂಗ್ಲರ ವಿರುದ್ಧ ಧ್ವನಿಎತ್ತಿದ್ದ ಚಂದ್ರಶೇಖರ್ ತಿವಾರಿ ‘ಆಜಾದ್’ ಆಗಿದ್ದು ಆಗಲೇ. ರಾಮ್ ಪ್ರಸಾದ್ ಬಿಸ್ಮಿಲ್, ಶಚೀಂದ್ರನಾಥ್, ಆಜಾದ್ ಹೀಗೆ ಕ್ರಾಂತಿಕಾರಿಗಳನ್ನೆಲ್ಲಾ ಒಂದುಗೂಡಿಸಿ ಭಾರತದ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಸಂಸ್ಥೆ ಕಟ್ಟುಕೊಂಡು ಕೆಲಸ ಮಾಡಲು ಪ್ರಾರಂಭಿಸಿದರು. ಜನರನ್ನು ಜಾಗೃತಗೊಳಿಸುವ ಕರಪತ್ರಗಳನ್ನು ಬರೆದು ಹಂಚುವುದು, ಸ್ವಾತಂತ್ರ್ಯದ ಕುರಿತ ಪುಸ್ತಕಗಳನ್ನು ಹೊರತರುವುದು, ಆಂಗ್ಲ ಸಾಮ್ರಾಜ್ಯಶಾಹಿಯ ವಿರುದ್ಧ ನೇರ ಜಟಾಪಟಿಗಿಳಿಯುವುದು ಇವೆಲ್ಲಾ ಅವರ ಕೆಲಸಗಳ ಸಾಲಿಗೆ ಸೇರಿತ್ತು. ಆಗೆಲ್ಲಾ ಅವರಿಗೆ ಇದ್ದದ್ದು ಒಂದೇ ಸಮಸ್ಯೆ, ಹಣದ್ದು! ಇಷ್ಟೆಲ್ಲಾ ಕೆಲಸ ಮಾಡುವಾಗ ಅವರ ಬಳಿ ಉತ್ಸಾಹಕ್ಕಾಗಲೀ, ಸ್ಫೂರ್ತಿಗಾಗಲೀ ಯಾವ ಕೊರತೆಯೂ ಇರಲಿಲ್ಲ; ಇದ್ದದ್ದು ಹಣದ ಕೊರತೆ ಮಾತ್ರವೇ! ಈ ಸಮಯದಲ್ಲಿಯೇ ಹಣ ಸಂಪಾದನೆಗಾಗಿ ದರೋಡೆಗಳು ಶುರುವಾದದ್ದು. ಕ್ರಾಂತಿಕಾರಿಗಳು ಎಲ್ಲರಿಂದ ಹಣವನ್ನು ದೋಚುತ್ತಿರಲಿಲ್ಲ. ಬ್ರಿಟೀಷರ ಹುಟ್ಟಡಗಿಸಲು ಬ್ರಿಟೀಷ್ ಸರ್ಕಾರದ ಸಂಪತ್ತನ್ನೇ ಕಸಿದುಕೊಳ್ಳುತ್ತಿದ್ದರು. ಭಾರತೀಯರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರು.

ಅದು 1925 ರ ಸಮಯ. ಆಗೆಲ್ಲಾ ಕ್ರಾಂತಿಕಾರಿಗಳು ಶಸ್ತ್ರಾಸ್ತ್ರಗಳನ್ನು ಕಡಿಮೆ ಬೆಲೆಗೆ ವಿದೇಶದಿಂದ ತರಸಿಕೊಳ್ಳುತ್ತಿದ್ದರು. ಬ್ರಿಟೀಷರ ವಿರುದ್ಧ ನೇರ ಕಾದಾಟಕ್ಕೆ ನಿಲ್ಲಲು ಅವರಿಗಿದ್ದದ್ದು ಅದೊಂದೇ ಹಾದಿ. ಹಾಗೆ ವಿದೇಶದಿಂದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವವರು ಹಣ ಕೊಟ್ಟ ನಂತರವೇ ಶಸ್ತ್ರಗಳನ್ನು ಕ್ರಾಂತಿಕಾರಿಗಳ ಕೈಯಲ್ಲಿಡುತ್ತಿದ್ದುದು. ಶಸ್ತ್ರಲಕ್ಷ್ಮಿ ಇವರ ಬಳಿಗೆ ಬರಲು ಸಿದ್ಧ; ಆದರೆ ಹಣ ಮಾತ್ರ ಇರಲಿಲ್ಲ. ಕ್ರಾಂತಿಕಾರಿಗಳು ತಂತಮ್ಮ ಮನೆಯಿಂದ ಸಾಧ್ಯವಾದಷ್ಟು ಹಣವನ್ನು ಒಟ್ಟುಗೂಡಿಸಿದರೂ ಅದು ಸಾಲದೇ ಬೀಳುತ್ತಿತ್ತು. ಕ್ರಾಂತಿಕಾರಿಗಳ ತಾಳ್ಮೆ ತಪ್ಪಿತು. ದೊಡ್ಡದೊಂದು ದರೋಡೆಯ ಯೋಜನೆ ಮಾಡುತ್ತಿದ್ದರು.

ಈ ಸಮಯದಲ್ಲಿಯೇ ಬಿಸ್ಮಿಲ್ಲರು ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿರುವಾಗ ಪ್ರತಿ ಸ್ಟೇಷನ್ ನಲ್ಲೂ ಸ್ಟೇಷನ್ ಮಾಸ್ಟರ್ ಹಣವನ್ನು ರೈಲಿನಲ್ಲಿ ತುಂಬುವುದನ್ನು ಕಂಡದ್ದು. ರೈಲಿನ ವೇಳಾಪಟ್ಟಿಯನ್ನೆಲ್ಲಾ ಗಮನಿಸಿದ ಬಿಸ್ಮಿಲ್ಲರಿಗೆ ತಿಳಿದದ್ದು ಷಹಜನ್ ಪುರದಿಂದ ರೈಲು ಲಕ್ನೊಗೆ ಹೋಗುವಷ್ಟರಲ್ಲಿ ಸುಮಾರು ಹತ್ತು ಸಹಸ್ರ ರೂಪಾಯಿಗಳಷ್ಟು ಹಣ ಕೂಡುತ್ತದೆಯೆಂದು. ತಕ್ಷಣ ಬೇರೆ-ಬೇರೆ ಸ್ಥಳಗಳಲ್ಲಿ ನಿರತರಾಗಿದ್ದ ಕ್ರಾಂತಿಕಾರಿಗಳನ್ನೆಲ್ಲಾ ಲಕ್ನೊವಿಗೆ ತುರ್ತಾಗಿ ಬರಲು ಹೇಳಿದರು. ಬಿಸ್ಮಿಲ್, ಆಜಾದ್, ಅಶ್ಫಾಕ್, ರೋಶನ್, ಕುಂದನ್ ಲಾಲ್, ರಾಮಕೃಷ್ಣ ಖತ್ರಿ ಹೀಗೆ ಹೆಬ್ಬುಲಿಗಳೆಲ್ಲಾ ಸಭೆ ಸೇರಿ ಕಾಕೋರಿಯಲ್ಲಿ ರೈಲಿನಲ್ಲಿ ಸಾಗಿಸುತ್ತಿದ್ದ ಹಣವನ್ನು ದರೋಡೆ ಮಾಡುವ ಯೋಜನೆ ಹಾಕಿದರು.

ಲಕ್ನೊವಿನ 8 ಮೈಲಿ ದೂರದಲ್ಲಿ ಕಾಕೋರಿ ಇರುವುದು. ದರೋಡೆ ಮಾಡುವ ಮುನ್ನ ಕ್ರಾಂತಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬಂದಿದ್ದರು. ಆಗಸ್ಟ್ 8, 1925 ರಂದು ಪ್ರಥಮ ಪ್ರಯತ್ನವನ್ನು ಮಾಡಿ ಸೋತಿದ್ದರು. ಮರುದಿನ ಅಂದರೆ ಆಗಸ್ಟ್ 9 ರಂದು ಯೋಜನೆಯಲ್ಲಿ ಕೊಂಚ ಬದಲಾವಣೆ ತಂದು ದರೋಡೆಗೆ ಎಲ್ಲರೂ ಸಿದ್ಧರಾದರು! ಈ ಕಾಕೋರಿ ದರೋಡೆಯಲ್ಲಿ ರಾಮಪ್ರಸಾದ್ ಬಿಸ್ಮಿಲ್, ಚಂದ್ರಶೇಖರ್ ಆಜಾದ್, ಅಶ್ಫಾಕ್ ಉಲ್ಲಾ ಖಾನ್, ರಾಜೇಂದ್ರ ಲಾಹಿರಿ, ಶಚೀಂದ್ರ ಬಕ್ಷಿ, ಮುಕುಂದಿ ಲಾಲ್, ಠಾಕೂರ್ ರೋಶನ್ ಸಿಂಗ್, ಮನ್ಮಥನಾಥ ಗುಪ್ತ, ಮುರಾರಿ ಲಾಲ್, ಕುಂದನ್ ಲಾಲ್, ಬನ್ವಾರಿ ಲಾಲ್ ಹೀಗೆ ಅನೇಕ ಕ್ರಾಂತಿಕಾರಿಗಳು ಪಾಲ್ಗೊಂಡಿದ್ದರು. ಆಗಸ್ಟ್ ಒಂಭತ್ತರ ರಾತ್ರಿ ಕಾರ್ಗತ್ತಲಲ್ಲಿ ಕಾರ್ಯಾಚರಣೆಗೆ ಮುಂದಾದರು.

ರೈಲು ಕಾಕೋರಿಯಿಂದ ಮುಂದೆ ಸಾಗುತ್ತಿದ್ದಂತೆ ಕ್ರಾಂತಿಕಾರಿಗಳಲ್ಲೊಬ್ಬ ರೈಲಿನ ಚೈನು ಎಳೆದು ನಿಲ್ಲಿಸಿದ. ನಂತರ ನಡೆದದ್ದನ್ನು ಮನ್ಮಥನಾಥ ಗುಪ್ತ ಅವರೇ ವಿವರಿಸುತ್ತಾರೆ, ‘ರೈಲಿನ ಗಾರ್ಡ್ ಡಬ್ಬಿಯೊಳಕ್ಕೆ ನುಗ್ಗಿದೆವು. ಶಚೀಂದ್ರ ಬಕ್ಷಿ ಅವನನ್ನು ಕೆಳಕ್ಕೆ ಬೀಳಿಸಿ ಮುಖ ಕೆಳಗೆ ಮಾಡಿ ಮಲಗಿಸಿದ. ಅನಂತರ ಅನೇಕ ಸ್ಥಳಗಳಿಂದ ಸಂಗ್ರಹಿಸಿಕೊಂಡು ಬಂದಿದ್ದ ಸರಕಾರಿ ಕಂದಾಯದ ಹಣವಿದ್ದ ಸಂದೂಕನ್ನು ಗಾರ್ಡ್ ಡಬ್ಬಿಯಿಂದ ಕೆಳಕ್ಕೆ ಬೀಳಿಸಲಾಯ್ತು. ನಾವು ನಮ್ಮ ಜೊತೆಯಲ್ಲಿ ತಂದಿದ್ದ ದೊಡ್ಡ ಸುತ್ತಿಗೆ ಮತ್ತು ಉಕ್ಕಿನ ಉಳಿಯಿಂದ ಕೆಲಸ ಪ್ರಾರಂಭಿಸಲಾಯಿತು. ರೈಲಿನ ಎರಡೂ ಬದಿಯಲ್ಲೂ ನಮ್ಮ ಇಬ್ಬರು ಸಂಗಾತಿಗಳು ಮೌಸರ್ ಪಿಸ್ತೂಲು ಹಿಡಿದು ಕಾಯುತ್ತಿದ್ದರು’!

ಅಂದುಕೊಂಡಂತೆ ಎಲ್ಲವೂ ನಡೆಯಿತು. ಅಶ್ಫಾಕ್ ಸಂದೂಕಿನಲ್ಲಿ ದೊಡ್ಡ ರಂಧ್ರವೊಂದನ್ನು ಮಾಡಿದ. ಸಂದೂಕಿನ ಬಳಿಯಿದ್ದ ಇತರ ಕ್ರಾಂತಿಕಾರಿಗಳು ಆ ರಂಧ್ರದೊಳಕ್ಕೆ ಕೈ ಹಾಕಿ ಹಣದ ಚೀಲವನ್ನು ತೆಗೆದುಕೊಂಡು ತಾವು ತಂದಿದ್ದ ಬೆಡ್ ಶೀಟ್ ನಲ್ಲಿ ತುಂಬಿಸಿಕೊಂಡು ಕತ್ತಲಿನಲ್ಲಿ ಕರಗಿಹೋದರು. ಅಂತೂ ಕ್ರಾಂತಿಕಾರಿಗಳು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿತ್ತು!!

ಆಗಸ್ಟ್ 10 ರ ಬೆಳಗಿನ ಜಾವದಲ್ಲಾಗಲೇ ಕಾಕೋರಿ ಇಡಿಯ ದೇಶದಲ್ಲಿ ಸುದ್ದಿಯಾಗಿತ್ತು. ಎಲ್ಲಾ ಪತ್ರಿಕೆಗಳು ಕಾಕೋರಿ ಕಾಂಡದ ಕುರಿತು ಮುಖಪುಟದಲ್ಲಿ ಮುದ್ರಿಸಿದ್ದವು. ಈ ತರುಣರು ಬ್ರಿಟೀಷರಿಗೆ ಸೆಡ್ಡು ಹೊಡೆದು ಸವಾಲೆಸೆದಿದ್ದರು! ಆಂಗ್ಲ ಸರ್ಕಾರ ಈ ಕಾಂಡದ ನಂತರ ಬೆಚ್ಚಿಬಿತ್ತು! ತಮ್ಮ ಸರ್ಪಗಾವಲನ್ನು ಹೆಚ್ಚಿಸಿತು. ಆಜಾದ್ ಇನ್ನಿತರ ಕ್ರಾಂತಿಕಾರಿಗಳು ಇವರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿಹೋಗಿದ್ದರು!

Click to comment

Leave a Reply

Your email address will not be published. Required fields are marked *

Most Popular

To Top