National

16 ನೇ ಲೋಕಸಭೆಯ ಕೊನೆಯ ದಿನದಂದು ಪ್ರಧಾನಿ ಮೋದಿಯವರ ಮನದಾಳದ ಮಾತುಗಳು!

ನಿನ್ನೆ ಬಜೆಟ್ ಅವಧಿಯ ಕೊನೆಯ ದಿನ ಮತ್ತು 16 ನೇ ಲೋಕಸಭೆಯ ಪಾರ್ಲಿಮೆಂಟಿನ ಕೊನೆಯ ದಿನ. ಈ 13 ದಿನದ ಬಜೆಟ್ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಪ್ರತಿಪಕ್ಷ ರಫೇಲ್ ನಿಂದ ಹಿಡಿದು ನಾಗರಿಕತ್ವ ಬಿಲ್ ನವರೆಗೂ ಆರೋಪವನ್ನು ಮಾಡಿತು. ಲೋಕಸಭೆ ಯಾವುದೇ ಅಡೆತಡೆ ಇಲ್ಲದೇ ನಡೆದಿದ್ದು ಗಮನಾರ್ಹ!

ಪ್ರಧಾನಮಂತ್ರಿ ನರೇಂದ್ರಮೋದಿಯವರು 2014 ರಲ್ಲಿ ತಾವೂ ಒಬ್ಬ ಸಾಂಸದರಾಗಿ ಕುಳಿತಿದ್ದನ್ನು ನೆನಪಿಸಿಕೊಂಡರು. 2014 ರಲ್ಲಿ ಬಿಜೆಪಿ ಅಧಿಕಾರ ಸ್ವೀಕರಿಸಿದಾಗ, ಮೂರು ದಶಕಗಳ ನಂತರ ಪಕ್ಷವೊಂದು ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ಸ್ಥಾಪಿಸಿದ್ದನ್ನು ನೆನೆದು ತಮ್ಮ ಮಾತನ್ನು ಪ್ರಾರಂಭಿಸಿದರು. ಎಲ್ಲದಕ್ಕೂ ಮುನ್ನ ಮೋದಿಯವರು ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಸುಮಾರು 8 ಲೋಕಸಭೆ ಅವಧಿಗಳನ್ನು 100 ಪ್ರತಿಶತ ಪಾಲ್ಗೊಳ್ಳುವಿಕೆಯೊಂದಿಗೆ ನಡೆಸಿದ್ದಕ್ಕೆ ಪ್ರಶಂಸಿಸಿದರು.

16 ನೇ ಲೋಕಸಭೆಯನ್ನು ಜನ ನೆನಪಿಸಿಕೊಳ್ಳುತ್ತಾರೆ ಏಕೆಂದರೆ ಅತಿ ಹೆಚ್ಚು ಮಹಿಳಾ ಮಂತ್ರಿಗಳನ್ನು ಹೊಂದಿರುವ ಮೊದಲ ಕ್ಯಾಬಿನೆಟ್ ಇದು ಎಂದು ಮೋದಿಯವರು ನುಡಿದರು. ತಮ್ಮ ಕ್ಯಾಬಿನೆಟ್ ನಲ್ಲಿ 44 ಮಹಿಳಾ ಮಂತ್ರಿಗಳಿದ್ದು, ಅವರೆಲ್ಲರ ಕೆಲಸ, ಭಾಗವಹಿಸುವಿಕೆ ಮತ್ತು ಅವರಲ್ಲಿರುವ ಆತ್ಮವಿಶ್ವಾಸವನ್ನು ಹೊಗಳಿದರು. ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಕ್ಷಣಾ ಇಲಾಖೆ ಮತ್ತು ವಿದೇಶಾಂಗ ಸಚಿವಾಲಯವನ್ನು ಮಹಿಳಾ ಮಂತ್ರಿಗಳು ಮುನ್ನಡೆಸುತ್ತಿರುವುದು ಮತ್ತು ಇದೇ ಮೊದಲ ಬಾರಿಗೆ ಭಾರತ ಲೋಕಸಭೆಯ ಸ್ಪೀಕರ್ ಸ್ಥಾನದಲ್ಲಿ ಮಹಿಳೆಯೊಬ್ಬರನ್ನು ಕಂಡಿರುವುದು ಹೆಮ್ಮೆ ಪಡುವಂತಹ ವಿಚಾರವೆಂದು ಮೋದಿಯವರು ನುಡಿದರು.

ಕಳೆದೈದು ವರ್ಷದಲ್ಲಿ ಭಾರತ ಜಗತ್ತಿನ ಆರನೇ ಅತ್ಯಂತ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆದಿರುವುದು ಹೆಮ್ಮೆಯ ವಿಚಾರ ಮತ್ತು ಸದ್ಯದಲ್ಲೇ ಭಾರತ 5 ಟ್ರಿಲಿಯನ್ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಹಂಚಿಕೊಂಡರು. ಇದನ್ನು ಸಾಧಿಸಲು ಕಳೆದೈದು ವರ್ಷಗಳಿಂದ ಹಗಲು-ರಾತ್ರಿ ಕೆಲಸ ಮಾಡುತ್ತಿರುವ ತಮ್ಮ ಮಂತ್ರಿಗಳಿಗೆ ಇದರ ಯಶಸ್ಸನ್ನು ಪ್ರಧಾನಿ ನರೇಂದ್ರಮೋದಿಯವರು ನೀಡಿದರು.

ಕಳೆದ ಐದು ವರ್ಷಗಳಲ್ಲಿ ಭಾರತ ಸಾಧಿಸಿದ್ದನ್ನು ಮೋದಿಯವರು ತಿಳಿಸಿದರು. ಅದರ ಮುಖ್ಯಾಂಶಗಳು ಹೀಗಿವೆ:
• ಡಿಜಿಟಲ್ ಯುಗದಲ್ಲಿ ಭಾರತ ಮುನ್ನುಗ್ಗುತ್ತಿದೆ.
• ಜಾಗತಿಕ ತಾಪಮಾನದ ಏರಿಕೆಯ ಕುರಿತು ಇಡಿಯ ಜಗತ್ತು ಮಾತನಾಡುತ್ತಿದೆ ಮತ್ತು ಭಾರತ ಈ ಭಯವನ್ನು ಕಡಿಮೆಗೊಳಿಸಲು ಅಂತರರಾಷ್ಟ್ರೀಯ ಸೌರ ಮೈತ್ರಿಯನ್ನು ಮಾಡಿಕೊಂಡಿದೆ.
• ಈ ಐದು ವರ್ಷಗಳಲ್ಲೇ ಅತಿ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿರುವುದು.
• ಭಾರತ ಸ್ವಾಭಿಮಾನಿ ರಾಷ್ಟ್ರವಾಗುವಲ್ಲಿ ದಾಪುಗಾಲಿಡುತ್ತಿದೆ. ಮೇಕ್ ಇನ್ ಇಂಡಿಯಾ ಇದಕ್ಕೆ ಒಂದು ಉದಾಹರಣೆ.
• ವಿದೇಶೀಯರೊಂದಿಗೆ ವ್ಯವಹಾರ ನಡೆಸುವ ರೀತಿ ಈಗ ಬದಲಾಗಿದೆ. ಜಗತ್ತು ಪಕ್ಷವೊಂದು ಬಹುಮತದೊಂದಿಗೆ ಆಯ್ಕೆಗೊಂಡಿದ್ದನ್ನು ನೋಡುತ್ತಿದೆ ಮತ್ತು ಅಂತಹ ನಾಯಕರನ್ನು ಇಡಿಯ ಜಗತ್ತು ಗುರುತಿಸುತ್ತಿದೆ. ಇದರ ಯಶಸ್ಸನ್ನು ಮೋದಿಯವರು 2014 ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಜನರಿಗೆ ನೀಡಿದರು.
• ಬಾಂಗ್ಲಾದೇಶದ ಭೂ ವಿವಾದವನ್ನು ಈ ಲೋಕಸಭೆ ಪರಿಹರಿಸಿದ್ದನ್ನು ಮೋದಿಯವರು ನೆನಪಿಸಿಕೊಂಡರು ಮತ್ತು ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
• ನೇಪಾಳದಲ್ಲಿ ಭೂಕಂಪ, ಮಾಲ್ಡೀವ್ಸ್ ನಲ್ಲಿ ನೀರಿನ ಸಮಸ್ಯೆ ಹೀಗೆ ನಮ್ಮ ಅಕ್ಕ-ಪಕ್ಕದ ರಾಷ್ಟ್ರಗಳು ತೊಂದರೆಗೆ ಸಿಲುಕಿದಾಗ ಭಾರತ ಈ ರಾಷ್ಟ್ರಗಳಿಗೆ ಸಹಾಯ ಹಸ್ತ ಚಾಚಿದೆ. ಈ ಗುಣವನ್ನು ಇಡಿಯ ಜಗತ್ತು ಕೊಂಡಾಡಿದೆ ಎಂದರು ನರೇಂದ್ರಮೋದಿಯವರು.

ಮುಂದುವರೆದು ಮೋದಿಯವರು,‌ ಭಾರತ ಜಗತ್ತಿನಲ್ಲಿ ಗಣನೀಯ ಸ್ಥಾನವನ್ನು ಪಡೆದುಕೊಂಡಿದೆ ಎಂದರು. ಮೊದಲ ಬಾರಿಗೆ ಯುನೈಟೆಡ್ ನೇಷನ್ಸ್ ನಲ್ಲಿ ಯೋಗದ ಪ್ರಾಮುಖ್ಯತೆಯ ಕುರಿತು ಬಹುಮತದೊಂದಿಗೆ ರೆಸಲ್ಯೂಷನ್ ಅನ್ನು ಪಾಸು ಮಾಡಲಾಯಿತು ಮತ್ತಿದು ಭಾರತದ ಪಾಲಿಗೆ ಅತ್ಯಂತ ದೊಡ್ಡ ಸಾಧನೆಯೇ ಸರಿ ಎಂದು ನೆನಪಿಸಿಕೊಟ್ಟರು. ಕೇವಲ ಯುಎನ್ ನಲ್ಲಿ ಅಷ್ಟೇ ಅಲ್ಲದೇ ಜಗತ್ತಿನ ಹಲವು ರಾಷ್ಟ್ರಗಳು ಬಾಬಾಸಾಹೇಬ್ ಅಂಬೇಡ್ಕರರ 125 ನೇ ಜಯಂತಿಯನ್ನು ಮತ್ತು ಮಹಾತ್ಮಾ ಗಾಂಧೀಜಿಯವರ 150 ನೇ ಜಯಂತಿಯನ್ನು ಆಚರಿಸಿದ್ದು ಭಾರತದ ಪಾಲಿಗೆ ಮೈಲಿಗಲ್ಲು ಎಂದು ತಿಳಿಸಿದರು.

ಈ ಐದು ವರ್ಷಗಳಲ್ಲಿ 219 ಬಿಲ್ಲುಗಳನ್ನು ಲೋಕಸಭೆಯಲ್ಲಿ ಚರ್ಚೆಗೆ ತರಲಾಯಿತು ಮತ್ತು ಅದರಲ್ಲಿ 209 ಬಿಲ್ಲುಗಳು ಪಾಸುಗೊಂಡಿವೆ ಎಂದು ಮೋದಿಯವರು ತಿಳಿಸಿದರು. ಈ ಲೋಕಸಭೆಯಲ್ಲಿಯೇ ಜಿ.ಎಸ್.ಟಿ ಪಾಸುಗೊಂಡಿತು. ಕಪ್ಪುಹಣದ ಕಾಯ್ದೆ ತಂದಿದ್ದರಿಂದ ವಿದೇಶದಲ್ಲಿದ್ದ ಕಪ್ಪುಹಣ ಭಾರತಕ್ಕೆ ಬರುವಲ್ಲಿ ಸಹಾಯವಾಯ್ತು, ಬೇನಾಮಿ ಆಸ್ತಿಯ ವಿರುದ್ಧ ಕಾನೂನು, ಫ್ಯುಜಿಟಿವ್ ಅಫೆಂಡರ್ಸ್ ಕಾಯ್ದೆ ಹೀಗೆ ಹತ್ತು ಹಲವು ಭ್ರಷ್ಟಾಚಾರ ವಿರೋಧಿ ಕಾಯ್ದೆಗಳನ್ನು ತರಲಾಯ್ತು ಎಂದವರು ನೆನಪಿಸಿಕೊಂಡರು. ಬೇರೆ ಪಕ್ಷಗಳು ಜಾರಿಗೆ ತರಲು ಹಿಂದು-ಮುಂದು ನೋಡುವ ಇಂತಹ ಭ್ರಷ್ಟಾಚಾರ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದದ್ದು ಬಿಜೆಪಿ ಸರ್ಕಾರ ಮತ್ತು ಇದನ್ನು ಸಾಧ್ಯವಾಗುವಂತೆ ಮಾಡಿದ ಲೋಕಸಭೆಯನ್ನು ಮತ್ತು ಸುಮಿತ್ರಾ ಮಹಾಜನ್ ಅವರನ್ನು ಪ್ರಶಂಸಿಸಿದರು.

ಈ ಲೋಕಸಭೆ ಆಧಾರ್ ಬಿಲ್ಲನ್ನು ಪಾಸು ಮಾಡಿದ್ದು ಅತ್ಯಂತ ದೊಡ್ಡ ಸಾಧನೆ ಎಂದರಲ್ಲದೇ ಇಡಿಯ ಜಗತ್ತು ಈ ನಡೆಯನ್ನು ಪ್ರಶಂಸಿಸಿದೆ ಎಂದು ತಿಳಿಸಿದರು. ಲೋಕಸಭೆಯಲ್ಲಿ ಪಾಸಾದ ಬಡವರಿಗೆ ಶೇಕಡಾ 10 ಮೀಸಲಾತಿ ನೀಡುವ ಬಿಲ್ಲು ಅಭಿವೃದ್ಧಿಯೆಡೆಗಿನ ಪ್ರಮುಖ ಮೆಟ್ಟಿಲು. ಒಬಿಸಿ, ಎಸ್ಸಿ-ಎಸ್ಟಿ ಕಾಯ್ದೆಗಳೂ ಕೂಡ ಪ್ರಶಂಸನೀಯ ಎಂದರು ಪ್ರಧಾನಿ.

ಗರ್ಭಿಣಿ ಸ್ತ್ರೀಯರಿಗೆ ನೀಡುವ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಏರಿಸಲಾಯ್ತು ಮತ್ತಿದು ಅತ್ಯಂತ ದೊಡ್ಡ ಸಾಧನೆ. ಇದು ಭಾರತ ಪ್ರಗತಿಪರ ಚಿಂತನೆಯನ್ನು ಹೊಂದಿರುವ ರಾಷ್ಟ್ರವೆಂದು ತೋರಿಸುತ್ತದೆ ಎಂದರು. 1400 ಕ್ಕೂ ಅಧಿಕ ಉಪಯೋಗವಿಲ್ಲದ ಕಾನೂನುಗಳನ್ನು ಕಿತ್ತೊಗೆಯಲಾಯ್ತು.

ಕೆಲವೊಮ್ಮೆ ಲೋಕಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯ ವೇಳೆ ಪ್ರತಿಪಕ್ಷಗಳೊಂದಿಗೆ ನಡೆಯುತ್ತಿದ್ದ ವಾದ-ವಿವಾದಗಳು, ರೇಗುವಿಕೆಯ ಕುರಿತು ಮಾತನಾಡುತ್ತಾ, ಆಡಳಿತ ಪಕ್ಷದ ಸದಸ್ಯರಾಗಿ ಸಭೆಗೆ ಕ್ಷಮೆಯನ್ನೂ ಯಾಚಿಸಿದರು.

ಜೈನ ಪರಂಪರೆಯಲ್ಲಿ ಮಿಚ್ಚಮಿ ದುಕ್ಕದಮ್ ಎಂಬ ಆಚರಣೆಯನ್ನು ಕೈಗೊಳ್ಳಲಾಗುತ್ತದೆ. ಅದರರ್ಥ ಇಷ್ಟು ದಿನ ಮಾಡಿದ ಕೆಟ್ಟ ಕೆಲಸಗಳೆಲ್ಲಾ ಫಲಕೊಡದೇ ಇರಲಿ ಎಂದು. ಇದನ್ನು ಸಂವತ್ಸರದ ಕೊನೆಯ ದಿನದಂದು ಆಚರಣೆ ಮಾಡಲಾಗುತ್ತದೆ. ಕಳೆದೈದು ವರ್ಷಗಳಲ್ಲಿ ತಾನು ಅಥವಾ ತನ್ನ ಪಕ್ಷದ ಸದಸ್ಯರು ಮಾಡಿದ ತಪ್ಪಿಗೆ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ನಡೆಯುವ ಚರ್ಚೆಯ ವೇಗದಲ್ಲಿ ಆಡಿದ ಕೆಟ್ಟ ಮಾತಿಗೆ ಎಲ್ಲರ ಪರವಾಗಿ ಕ್ಷಮೆಯನ್ನು ಯಾಚಿಸಿದರು.

ಹಲವು ಬಾರಿ ಮಲ್ಲಿಕಾರ್ಜುನ ಖರ್ಗೆಯವರೊಡನೆ ಮುಖಾಮುಖಿಯುಂಟಾಗಿದೆ. ಅವರೊಡನೆ ನಡೆಸಿದ ಮಾತುಕತೆ ನನ್ನ ಚಿಂತನಾ ಲಹರಿಯನ್ನು ಕಲಕಿದೆ. ನಾನದಕ್ಕೆ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ಮೋದಿಯವರು. ನರೇಂದ್ರಮೋದಿಯವರು ಎರಡನೇ ಅವಧಿಗೂ ಪ್ರಧಾನಮಂತ್ರಿಯಾಗಲೆಂದು ಆಶಿಸಿದ ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ರಿಗೆ ಮೋದಿಯವರು ಕೈಮುಗಿದು ನಮಸ್ಕರಿಸಿದರು.

ತಮ್ಮ ಮಾತುಗಳನ್ನು ಮುಗಿಸುವ ಸಂದರ್ಭದಲ್ಲಿ ನರೇಂದ್ರಮೋದಿಯವರು ರಾಹುಲ್ ಗೆ ಅಪಹಾಸ್ಯ ಮಾಡುತ್ತಾ ‘ಇದೇ ಮೊದಲ ಬಾರಿಗೆ ನಾನು ತಬ್ಬಿಕೊಳ್ಳುವುದಕ್ಕೂ ಮತ್ತು ಬೇಕೆಂದೇ ಮೈಮೇಲೆ ಬಂದು ಬೀಳುವುದಕ್ಕೂ ಇರುವ ವ್ಯತ್ಯಾಸವನ್ನು ಅರಿತೆ. ಕಣ್ಣು ಹೊಡೆದದ್ದಂತೂ ವಿದೇಶೀ ಮಾಧ್ಯಮಗಳನ್ನೂ ಆಶ್ಚರ್ಯಕ್ಕೆ ತಳ್ಳಿತ್ತು’ ಎಂದರು!

ಕಡೆಯದಾಗಿ ಪ್ರಧಾನಮಂತ್ರಿ ಮೋದಿಯವರು ಇಷ್ಟು ವರ್ಷಗಳ ಕಾಲ ಹಗಲು-ರಾತ್ರಿ ದುಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, 2019 ರ ಲೋಕಸಭಾ ಚುನಾವಣೆಗೆ ಎಲ್ಲ ಪಕ್ಷಗಳಿಗೂ ಶುಭವನ್ನು ಕೋರಿದರು!

Click to comment

Leave a Reply

Your email address will not be published. Required fields are marked *

Most Popular

To Top