National

11 ದೇಶದ್ರೋಹಿಗಳನ್ನು, 101 ಉಗ್ರರನ್ನು ಎಳೆದು ತಂದ ಮೋದಿ ಸರ್ಕಾರ!!

ನರೇಂದ್ರಮೋದಿಯವರ ಸರ್ಕಾರ ದೇಶಭ್ರಷ್ಟರನ್ನು, ತಲೆಮರೆಸಿಕೊಂಡವರನ್ನು ಹಿಡಿದು ತರುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ದೇಶದೊಳಗೆ ನುಸುಳುವ ಭಯೋತ್ಪಾದಕರನ್ನು ಹತ್ಯೆಗೈಯ್ಯುವಲ್ಲಿ, ನಕ್ಸಲರನ್ನು ಬೇಟೆಯಾಡುವಲ್ಲಿಯೂ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ದೇಶಕ್ಕೆ ಮೋಸ ಮಾಡಿ ತಲೆಮರೆಸಿಕೊಂಡ ಓಡಿಹೋದವರನ್ನು ಭಾರತಕ್ಕೆ ಎಳೆದು ತರುವಲ್ಲಿ ಕೇಂದ್ರಸರ್ಕಾರದ ಸಾಧನೆ ಮೆಚ್ಚುವಂಥದ್ದೇ. 2015 ರಲ್ಲಿ ಬಾಲಿಯಿಂದ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಭಂಟನಾದ ಚೋಟಾ ರಾಜನ್ ನನ್ನು ಭಾರತಕ್ಕೆ ಕರೆತರಲಾಯ್ತು. ಡ್ರಗ್ಸ್ ಮಾರಾಟ, ಕೊಲೆ ಮುಂತಾದ ಆರೋಪವನ್ನು ಎದುರಿಸುತ್ತಿರುವ ಇವನು ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಮೋದಿ ಸರ್ಕಾರ ಈತನನ್ನು ಹಿಡಿದೆಳೆದು ಭಾರತಕ್ಕೆ ತಂದಿತು.

ಅಗಸ್ತಾವೆಸ್ಟ್ ಲ್ಯಾಂಡ್ ಹಗರಣದಲ್ಲಿ ಭಾಗಿಯಾಗಿರುವ ಕ್ರಿಶ್ಚಿಯನ್ ಮಿಶೆಲ್ ಒಬ್ಬ ಬ್ರಿಟಿಷ್. 2018 ರ ನವೆಂಬರ್ ನಲ್ಲಿ ಮೋದಿ ಸರ್ಕಾರ ಈತನನ್ನು ಯಶಸ್ವಿಯಾಗಿ ಗಡೀಪಾರು ಮಾಡಿಸಿತು. ಕಾಂಗ್ರೆಸ್ ಪಕ್ಷದ ಪ್ರಮುಖರೊಂದಿಗೆ ಈತನ ನಿಕಟ ಸಂಬಂಧವಿದೆ ಎಂಬ ಮಾಹಿತಿ ಹೊರಬಿದ್ದಿದೆ.

ದೇಶಬಿಟ್ಟು ಓಡಿಹೋದ ಮತ್ತೊಬ್ಬ ಭ್ರಷ್ಟ ವಿಜಯಮಲ್ಯ. ತಾನು ಮಾಡಿರುವ ಸಾಲದ ಹಣ ತೀರಿಸಲಾಗದೇ ಈತ ಭಾರತಬಿಟ್ಟು ಪರಾರಿಯಾದಾಗ ಪ್ರತಿಯೊಬ್ಬರೂ ಮೋದಿಯ ವಿರುದ್ಧ ಮಾತನಾಡಿದ್ದರು. ಮೋದಿಯ ಸರ್ಕಾರ ಯುನೈಟೆಡ್ ಕಿಂಗ್ ಡಮ್ ನ ನ್ಯಾಯಾಲಯದಲ್ಲಿ ಆತನನ್ನು ಭಾರತಕ್ಕೆ ಕರೆತರಲು ಬೇಕಾದ, ಆತನ ವಿರುದ್ಧ ಇರುವ ಆರೋಪಗಳನ್ನೆಲ್ಲಾ ಸಾಕ್ಷಿ ಸಮೇತ ತೋರಿಸಿದ ನಂತರ, ಯುಕೆ ಆತನನ್ನು ಗಡೀಪಾರು ಮಾಡುವಂತೆ ನ್ಯಾಯಾಲಯ ತೀರ್ಪು ನೀಡಿತು. ಇದು ನಿಜಕ್ಕೂ ಮೋದಿ ಸರ್ಕಾರದ ಹೆಮ್ಮೆಯ ಸಾಧನೆಯೇ ಸರಿ.

ಇಷ್ಟೇ ಅಲ್ಲ. ಬಹ್ರೈನ್ ನಿಂದ ಮೊಹಮ್ಮದ್ ಯಾಹ್ಯಾ ಎಂಬ ಲೂಟಿಗಾರನನ್ನು ಅಕ್ಟೋಬರ್ 2018 ರಲ್ಲಿ ಭಾರತಕ್ಕೆ ಕರೆತರಲಾಯ್ತು. 2003 ರಲ್ಲಿ ಭಾರತದ ಬ್ಯಾಂಕುಗಳಿಗೆ 46 ಲಕ್ಷ ರೂಪಾಯಿಗಳಷ್ಟು ಮೋಸ ಮಾಡಿ ಓಡಿಹೋಗಿದ್ದ ಈತನನ್ನು ಭಾರತಕ್ಕೆ ಕರೆತರಲು 10 ವರ್ಷಕ್ಕೂ ಮಿಕ್ಕಿ ಹಿಡಿಯಿತು. ಭಾರತದ ಬ್ಯಾಂಕುಗಳಿಗೆ 40 ಕೋಟಿ ರೂಪಾಯಿಯಷ್ಟು ಮೋಸ ಮಾಡಿ, ಓಡಿ ಹೋಗಿ ಇಂಡೋನೇಷಿಯಾದಲ್ಲಿ ನೆಲೆಸಿದ್ದ ವಿನಯ್ ಮಿತ್ತಲ್ ಎನ್ನುವವನನ್ನು ಭಾರತಕ್ಕೆ ಎಳೆದು ತರಲಾಯ್ತು!!

ಅನ್ಯ ರಾಷ್ಟ್ರಗಳಿಂದ ದೇಶದ್ರೋಹಿಗಳನ್ನು ಎಳೆದು ತರುವುದು ಸುಲಭದ ಸಂಗತಿಯಲ್ಲ. ಹೀಗೆ ದೇಶಭ್ರಷ್ಟರನ್ನು ಬೇರೆ ದೇಶದಿಂದ ಎಳೆದು ತರಲು ಭಾರತ ಆ ದೇಶಗಳೊಡನೆ ಒಪ್ಪಂದ ಮಾಡಿಕೊಳ್ಳಬೇಕು. ಭಾರತ ಇಂತಹ ಒಪ್ಪಂದವನ್ನು 50 ರಾಷ್ಟ್ರಗಳೊಂದಿಗೆ ಮಾಡಿಕೊಂಡಿದೆ. ಅದಾಗಲೇ 10 ರಾಷ್ಟ್ರಗಳಿಂದ ಇಂತಹ 11 ದೇಶಭ್ರಷ್ಟರನ್ನು ಭಾರತಕ್ಕೆ ಎಳೆದು ತಂದಿದೆ. ಇತ್ತಿಚೆಗಷ್ಟೇ ಅಂತರರಾಷ್ಟ್ರೀಯ ನ್ಯೂಸ್ ಏಜೆನ್ಸಿಯೊಂದು ವರದಿಯೊಂದನ್ನು ಪ್ರಕಟಿಸಿದೆ. ಅದರ ಪ್ರಕಾರ 2014-18 ರ ನಡುವೆ ಭಾರತ ಸರ್ಕಾರ 101 ಭಯೋತ್ಪಾದಕರನ್ನು ವಿದೇಶಗಳಿಂದ ಭಾರತಕ್ಕೆ ಎಳೆದು ತಂದಿದೆ! ಇವುಗಳಲ್ಲಿ 32 ಉಗ್ರರನ್ನು ಯುಎಇ ಒಂದೇ ಮರಳಿಸಿದೆ. ಇನ್ನೂ ಅಚ್ಚರಿಯ ಸಂಗತಿಯೊಂದಿದೆ. 101 ಉಗ್ರರಲ್ಲಿ 47 ಉಗ್ರರು ಐಸಿಸ್ ಗೆ ಸೇರಿದವರೆಂದು ವರದಿ ಬಂದಿದೆ. ಭಾರತದಲ್ಲಿ ಐಸಿಸ್ ನ ಝಂಡಾ ಹೂಡುವವರಿಗೆ ಇದು ಗಾಬರಿ ಹುಟ್ಟಿಸುವ ಸಂಗತಿಯೇ ಸರಿ. ಭಾರತೀಯರಿಗೊಂತು ಇದು ಹೆಮ್ಮೆಯ ವಿಚಾರ!

ಅನ್ಯ ರಾಷ್ಟ್ರದಿಂದ ಕಳ್ಳರನ್ನು, ಉಗ್ರರನ್ನು, ದೇಶದ್ರೋಹಿಗಳನ್ನು ಎಳೆದು ತರುವಲ್ಲಿ ಒಪ್ಪಂದವೇರ್ಪಡಬೇಕು ನಿಜ. ಎಲ್ಲಕ್ಕಿಂತಲೂ ಮಿಗಿಲಾಗಿ ಭಾರತ ಅನ್ಯ ರಾಷ್ಟ್ರಗಳೊಡನೆ ಒಳ್ಳೆಯ ಸಂಬಂಧವಿರಿಸಿಕೊಂಡಿರಬೇಕು. ಮೋದಿಯವರು ವಿದೇಶ ಪ್ರವಾಸಕ್ಕೆ ತೆರಳಿದಾಗೆಲ್ಲಾ ಬುದ್ಧಿಜೀವಿಗಳು ಜರಿಯುವುದುಂಟು. ಇವೆಲ್ಲಾ ಆ ವಿದೇಶ ಪ್ರವಾಸಗಳ ಫಲ ಎನ್ನುವುದು ಹಲವರಿಗೆ ಅರ್ಥವಾಗದ ಸಂಗತಿ!!

ಮೋದಿ ಯುಗದಲ್ಲಿ ಭ್ರಷ್ಟರಿಗೆ, ದೇಶದ್ರೋಹಿಗಳಿಗೆ, ಉಗ್ರರಿಗೆ, ನಕ್ಸಲರಿಗೆ ಜಾಗವಿಲ್ಲವೆಂಬುದು ನಿಧಾನವಾಗಿ ಎಲ್ಲರಿಗೂ ಅರ್ಥವಾಗುತ್ತಲಿದೆ.

Click to comment

Leave a Reply

Your email address will not be published. Required fields are marked *

Most Popular

To Top