National

ಹೊಸ ಶಿಕ್ಷಣ ನೀತಿಯಲ್ಲಿ ನಿಜಕ್ಕೂ ಹೊಸತೇನು?

ನಿನ್ನೆ ಕ್ಯಾಬಿನೆಟ್ ನೂತನ ಶಿಕ್ಷಣ ನೀತಿಗೆ ಒಪ್ಪಿಗೆ ಸೂಚಿಸಿದೆ. ಅದರ ಜೊತೆ-ಜೊತೆಗೇ ಮಾನವ ಸಂಪನ್ಮೂಲ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಬದಲಿಸಲೂ ಒಪ್ಪಿಗೆ ನೀಡಲಾಗಿದೆ. ಕಳೆದ 34 ವರ್ಷಗಳಿಂದ ಶಿಕ್ಷಣ ನೀತಿಯಲ್ಲಿ ಯಾವುದೇ ಬದಲಾವಣೆಯನ್ನೇ ತಂದಿರಲಿಲ್ಲವೆಂಬುದು ಆಶ್ಚರ್ಯ ಮತ್ತು ದುಃಖದಾಯಕ ಸಂಗತಿಯೂ ಹೌದು. 1986ರಲ್ಲಿ ತಂದ ಶಿಕ್ಷಣ ನೀತಿಯನ್ನೇ 1992ರಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ಜಾರಿಗೆ ತರಲಾಗಿತ್ತು. ಈ ಹೊಸ ನೀತಿ 1986ರ ನೀತಿಯ ಬದಲಾಗಿ ಜಾರಿಗೆ ತರಲಾಗಿದೆ.

ಈ ಹೊಸ ಶಿಕ್ಷಣ ನೀತಿಯಲ್ಲಿ ಏನಿದೆ ಎಂಬುದನ್ನು ಕೇಂದ್ರ ಸಚಿವರುಗಳಾದ ಪ್ರಕಾಶ್ ಜಾವ್ಡೇಕರ್ ಮತ್ತು ರಮೇಶ್ ಪೋಕ್ರಿಯಾಲ್ ಅವರು ಮಾಧ್ಯಮಗಳೊಂದಿಗೆ ಗೋಷ್ಠಿ ನಡೆಸಿ ತಿಳಿಸಿದ್ದಾರೆ. ಅದರ ಪ್ರಕಾರ, ಇನ್ನು ಮುಂದೆ ಪಠ್ಯದಲ್ಲಿ 21ನೇ ಶತಮಾನಕ್ಕೆ ಅಗತ್ಯವಾಗಿ‌ ಬೇಕಾದ ಕೌಶಲ್ಯಗಳು, ಗಣಿತದ ಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಕುರಿತು ಹೆಚ್ಚು ಗಮನ ಹರಿಸಲಾಗುತ್ತದೆ.

ಈ ಹೊಸ ನೀತಿಯ ಪ್ರಕಾರ, ಶಿಕ್ಷಣದ ಹಕ್ಕು ಕಾಯ್ದೆಯಡಿ 3 ವರ್ಷದಿಂದ 18 ವರ್ಷದ ಮಕ್ಕಳು ಒಳಪಡುತ್ತಾರೆ. ಶಾಲಾ ವ್ಯವಸ್ಥೆಯಲ್ಲಿ ಈಗಿರುವ 10+2 ರ ವ್ಯವಸ್ಥೆಯ ಬದಲು 5+3+3+4 ರ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಅಂದರೆ ಮೊದಲೈದು ವರ್ಷ 1 ಮತ್ತು 2 ನೇ ತರಗತಿಯನ್ನೂ ಸೇರಿಸಿದಂತೆ ಅಡಿಪಾಯ ಹಂತವಾಗಿರುತ್ತದೆ. ನಂತರ ಐದನೇ ತರಗತಿಯವರೆಗೆ ಪೂರ್ವಸಿದ್ಧತಾ ಹಂತ, ಎಂಟನೇ ತರಗತಿಯವರೆಗೆ ಮಧ್ಯಮ ಹಂತ ಮತ್ತು 9 ರಿಂದ 12 ರವರೆಗೆ ಎರಡನೇ ಹಂತ ಅಥವಾ ಪ್ರೌಢಶಾಲಾ ಹಂತ ಎಂದು ಪರಿಗಣಿಸಲಾಗುತ್ತದೆ. ಪ್ರತಿ ಹಂತದಲ್ಲೂ ಮಕ್ಕಳಿಗೆ ಹೊರೆಯಾಗದಂತೆ ಪಠ್ಯಕ್ರಮವನ್ನು ರಚಿಸಲಾಗುತ್ತದೆ.

ಈ ಪ್ರೌಢಶಾಲಾ ಹಂತದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಕಲೆ, ವಾಣಿಜ್ಯ ಎನ್ನುವ ಭೇದವಿಲ್ಲದೇ ತಮಗಿಷ್ಟವಾದ ವಿಷಯವನ್ನು ಆರಿಸಿಕೊಳ್ಳಬಹುದು. ಅಂದರೆ, ವಿದ್ಯಾರ್ಥಿಗೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಜೊತೆಗೆ ಭೌತ ವಿಜ್ಞಾನ ಓದುವ ಇಚ್ಛೆಯಿದ್ದರೆ ಅಥವಾ ಅಡುಗೆ ತರಬೇತಿಯೊಂದಿಗೆ ರಸಾಯನಶಾಸ್ತ್ರ ಓದುಗ ಇಚ್ಛೆಯಿದ್ದರೆ, ಆತ ಅದನ್ನೇ ಆರಿಸಿಕೊಳ್ಳಬಹುದು! ವಿಜ್ಞಾನ ತೆಗೆದುಕೊಂಡರೆ ವಿಜ್ಞಾನದ ಎಲ್ಲಾ ವಿಷಯಗಳನ್ನೇ, ವಾಣಿಜ್ಯ ಅಥವಾ ಕಲೆ ಆಯ್ದುಕೊಂಡರೆ ಅದಕ್ಕೆ ಸಂಬಂಧಿಸಿದ ವಿಷಯಗಳನ್ನೇ ಓದಬೇಕೆನ್ನುವುದಿಲ್ಲ. ಚಿಕ್ಕ ವಯಸ್ಸಿನಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶವನ್ನು ಈ ಪಠ್ಯಕ್ರಮಗಳು ಹೊಂದಿವೆ.

ಮೊದಲ ಐದು ವರ್ಷ ಮಾತೃ ಭಾಷೆಗೆ ಅಥವಾ ಪ್ರಾದೇಶಿಕ ಭಾಷೆಗೇ ಶಾಲೆಯಲ್ಲಿ ಒತ್ತು ನೀಡಬೇಕೆಂದು, ಅದನ್ನೇ ಕಲಿಕಾ ಮಾಧ್ಯಮವಾಗಿ ಬಳಸಬೇಕೆಂಬುದನ್ನು ಈ ನೀತಿಯಲ್ಲಿ ತಿಳಿಸಲಾಗಿದೆ. ತಂತ್ರಜ್ಞಾನ ಬಳಕೆಗೂ ಹೆಚ್ಚಿನ ಒತ್ತು ನೀಡಲಾಗುತ್ತದೆ. ಅಷ್ಟೇ ಅಲ್ಲದೇ, ಪಠ್ಯಪುಸ್ತಕಗಳು e-format ಅಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಇನ್ನು ಮುಂದೆ ದೊರೆಯಲಿವೆ. ಇದನ್ನು ಮೊದಲ ಹಂತವಾಗಿ 8 ಪ್ರಮುಖ ಭಾಷೆಗಳಲ್ಲಿ ಹೊರತರಲಾಗುತ್ತದೆ. ಈ ಎಂಟರಲ್ಲಿ ಕನ್ನಡ ಭಾಷೆಯೂ ಕೂಡ ಒಂದು!

ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ NTA ಕಡೆಯಿಂದ ಏಕರೂಪದ ಪರೀಕ್ಷೆಯನ್ನು ನಡೆಸುವುದಕ್ಕೆ ಈ ಹೊಸ ನೀತಿಯಲ್ಲಿ ಒತ್ತು ನೀಡಲಾಗಿದೆ. ಉನ್ನತ ಶಿಕ್ಷಣದ ಜೊತೆ ಜೊತೆಯಲ್ಲೇ ಸಂಶೋಧನೆಗೆ ಒತ್ತು ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. MPhil ಕೋರ್ಸ್‌ಗಳನ್ನು ಸ್ಥಗಿತಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. IIT, IIM ಗಳಂತೆ ಬಹುಶಾಖಾ ಶೈಕ್ಷಣಿಕ ಮತ್ತು ಸಂಶೋಧನಾ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸುವುದಕ್ಕೆ ಪ್ರೋತ್ಸಾಹ ನೀಡಲಾಗುವುದು. ಭಾರತದಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ವಿಶ್ವವಿದ್ಯಾಲಯಗಳಿಗೆ ವಿದೇಶಗಳಲ್ಲಿ ತಮ್ಮ ಶಾಖೆಯನ್ನು ತೆರೆಯಲೂ ಕೂಡ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

2019ರಲ್ಲಿ ಇಸ್ರೊ ಮಾಜಿ ಮುಖ್ಯಸ್ಥರಾಗಿದ್ದ ಕೆ. ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಹೊಸ ಶಿಕ್ಷಣ ನೀತಿಯ ಕರಡನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಒಟ್ಟಾರೆ, ಹೊಸ ಶಿಕ್ಷಣ ನೀತಿ ಹಲವಾರು ಬದಲಾವಣೆಯನ್ನು ತರಲಿದೆ. ಪುಸ್ತಕದ ಹುಳುಗಳಾಗಿರುವ ವಿದ್ಯಾರ್ಥಿಗಳನ್ನು ಈ ಪಠ್ಯಕ್ರಮದಿಂದ ಹೊರತಂದು ಆತ್ಮನಿರ್ಭರರಾಗುವತ್ತ ಹೊಸ ಶಿಕ್ಷಣ ನೀತಿ ಸಹಾಯ ಮಾಡಲಿದೆ.

-ಪ್ರಿಯಾ ಶಿವಮೊಗ್ಗ

Click to comment

Leave a Reply

Your email address will not be published. Required fields are marked *

Most Popular

To Top