National

ಹೆರಿಗೆ ಕೋಣೆಯ ವೇದನೆಯ ಅನುಭವ!

ಬಿಪಿ ಇದ್ದವರು ಟಿವಿಯಿಂದ ದೂರ ಇದ್ದರೆ ಒಳಿತು. ಹೃದಯ ಬೇನೆಯ ಸಮಸ್ಯೆ ಇದ್ದವರು ಆದಷ್ಟು ಮನೆಯಿಂದ ಹೊರಗಿರುವುದು ಒಳ್ಳೆಯದು. ಜೀವದ ಹೆದರಿಕೆ, ಸಾಯುವ ಭಯ ಇವೆಲ್ಲವೂ ಇದ್ದರಂತೂ ಮೊಬೈಲ್ ಬಳಸದಿರುವುದು ಸಾವಿರ ಪಾಲು ಉತ್ತಮ. ಯಾವುದೋ ಹೆಲ್ತ್ ಟಿಪ್ಸ್ ಕೊಡುತ್ತಿದ್ದೇನೆ ಎಂದು ಭಾವಿಸಬೇಡಿ. ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ಏನು ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುತ್ತಾಡುತ್ತಿರುವ ವಿಚಾರವಿದು! ಇಡಿಯ ದೇಶ ಹಿಂದೆಂದೂ ಈ ಪರಿ ತುದಿಗಾಲಿನಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕಾದಿರಲಿಲ್ಲ. ಈ ಬಾರಿ ಕಾತರ ಭಾರತಕ್ಕಷ್ಟೇ ಅಲ್ಲ, ಜಗತ್ತಿಗೂ ಇದೆ. ರಷ್ಯಾದಲ್ಲಿ ಪುತಿನ್, ಇಸ್ರೇಲಿನಲ್ಲಿ ನೆತನ್ಯಾಹು ಆಯ್ಕೆಯಾದಾಗಲೇ ಭಾರತದಲ್ಲಿಯೂ ಮೋದಿ ಆಯ್ಕೆಯಾಗುತ್ತಾರೆ ಎಂದು ದೃಢವಾಗಿ ಜಗತ್ತು ನಂಬಿತ್ತು. ಆದರೆ, ಭಾರತದ ಪರಿಸ್ಥಿತಿ ಪೂರ್ಣ ಭಿನ್ನವೇ ಆಗಿತ್ತು. ಇಲ್ಲಿ ಮಹಾಘಟಬಂಧನ್ ನಂತರ ಆಡಳಿತ ನಡೆಸಲು ಬೇಕಾದಷ್ಟು ಬಹುಮತವನ್ನು ನರೇಂದ್ರಮೋದಿ ಪಡೆಯುವರೇ ಎಂದು ಬಲು ದೊಡ್ಡ ಪ್ರಶ್ನೆಯಾಗಿತ್ತು. ಚುನಾವಣಾ ಪ್ರಕ್ರಿಯೆಗಳೂ ಕೂಡ ಅದೆಷ್ಟು ಸುದೀರ್ಘವಾಗಿತ್ತೆಂದರೆ ಕನರ್ಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಚುನಾವಣೆ ಮುಗಿದೇ ಒಂದು ತಿಂಗಳು ಕಳೆದುಹೋಗಿದೆ. ಫಲಿತಾಂಶಕ್ಕಾಗಿ ಕಾಯುವುದು ಕೂಸಿಗಾಗಿ ಹೆರಿಗೆ ಕೋಣೆಯಲ್ಲಿ ಕಾದ ತಾಯಿಗಿಂತ ಭಿನ್ನವಾದ ಪರಿಸ್ಥಿತಿಯಲ್ಲ. ಈ ಬಾರಿ ಸ್ಪಧರ್ಾಳುಗಳಷ್ಟೇ ಅಲ್ಲದೇ ಪ್ರತಿಯೊಬ್ಬ ಭಾರತೀಯನೂ ಆ ಮಾತೃತ್ವದ ಬೇನೆಯನ್ನು ಅನುಭವಿಸುತ್ತಿದ್ದಾನೆ. ಮನಸೋ ಇಚ್ಛೆ ಸಂಖ್ಯೆಗಳನ್ನು ತೋರಿಸುವ ಟೀವಿ ಚಾನೆಲ್ಲುಗಳನ್ನು ಅನೇಕರು ನೋಡುವುದೇ ಬಿಟ್ಟುಬಿಟ್ಟಿದ್ದಾರೆ. ಫಲಿತಾಂಶಕ್ಕೂ ಅನೇಕ ದಿನಗಳ ಮುಂಚಿನಿಂದಲೇ ದೇವರ ಕೋಣೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿರುವವರ ಸಂಖ್ಯೆ ಅದೆಷ್ಟಿದೆಯೋ ದೇವರೇ ಬಲ್ಲ. ಪ್ರತಿಯೊಬ್ಬರಿಗೂ ಯಾರನ್ನು ಕೇಳಿದರೆ ಸರಿಯಾದ ಸಂಖ್ಯೆ ಗೊತ್ತಾಗಬಹುದು ಎಂಬುದೇ ಕುತೂಹಲ. ಇವೆಲ್ಲದರ ನಡುವೆ ಕರ್ತವ್ಯ ದೃಷ್ಟಿಯಿಂದ ಎಲ್ಲ ಕೆಲಸವನ್ನು ಮಾಡಿ ಮುಗಿಸಿ ನಿರಾಳವಾಗಿ ಅಲೆದಾಡುತ್ತಿರುವುದು ಮೋದಿ ಮತ್ತು ಅಮಿತ್ಶಾ ಮಾತ್ರ! ಈ ಬಾರಿ ತಮ್ಮ ಗೆಲುವನ್ನು ಮೋದಿ ‘ತಮ್ಮದ್ದೇ ಗೆಲುವು’ ಆಗಿ ಮಾರ್ಪಡಿಸಿಕೊಳ್ಳುತ್ತಿದ್ದಾರೆ. ಕಳೆದ ಬಾರಿಯಾದರೂ ಅವರ ಗೆಲುವನ್ನು ಸಾಮೂಹಿಕ ಶಕ್ತಿಯಾಗಿ ಗುರುತಿಸಲಾಗುತ್ತಿತ್ತು. ಈ ಬಾರಿ ಅವರು ಗೆಲ್ಲುವ ಪ್ರತಿ ಸಂಸದನಿಗೂ ಮೋದಿಯವರಿಂದಾಗಿಯೇ ಗೆಲುವು ಎಂಬುದು ಸ್ಪಷ್ಟವಾಗಿ ಅರಿವಾಗುವಂತೆ ಮಾಡಿದ್ದಾರೆ. ಈ ಗೆಲುವಿನ ನಂತರ ಮೋದಿ ಕಳೆದೈದು ವರ್ಷಗಳಿಗಿಂತಲೂ ಹೆಚ್ಚು ಪ್ರಭಾವಿಯಾಗಿ, ಹೆಚ್ಚು ಕಠೋರವಾಗಿ ಮತ್ತು ಹೆಚ್ಚು ಅಧಿಕಾರಯುತವಾಗಿ ಕಂಡುಬಂದರೆ ಯಾರೂ ಅಚ್ಚರಿ ಪಡಬೇಕಿಲ್ಲ. ಅದಕ್ಕೆ ಕಾರಣವೂ ಇದೆ.


ಚುನಾವಣೆ ಘೋಷಣೆಯಾದಾಗಿನಿಂದಲೂ ಸುಮಾರು ಒಂದೂವರೆ ಲಕ್ಷ ಕಿಲೋಮೀಟರ್ನಷ್ಟು ಸಂಚರಿಸಿ 140 ರ್ಯಾಲಿಗಳ ಮುಖಾಂತರ ಒಂದೂವರೆ ಕೋಟಿ ಜನರನ್ನು ಅವರು ನೇರವಾಗಿ ಭೇಟಿ ಮಾಡಿದ್ದಾರೆ. ಉತ್ತರಪ್ರದೇಶ ಮತ್ತು ಪಶ್ಚಿಮಬಂಗಾಳಗಳಲ್ಲಿ ಅವರು ಹೆಚ್ಚಿನ ಶ್ರಮ ಹಾಕಿರುವುದು ಕಣ್ಣಿಗೆ ರಾಚುತ್ತಿದೆ. ಇಂಡಿಯಾ ಟುಡೇಯ ತಂತ್ರಜ್ಞರ ಸಮೂಹವೊಂದು ಆಶ್ಚರ್ಯಕರ ಮಾಹಿತಿಯೊಂದಷ್ಟನ್ನು ಹೊರಹಾಕಿದೆ. ಮಾಚರ್್ 11ರಿಂದ ಮೇ 17ರ ನಡುವಿನ ಪ್ರಚಾರದ ಅವಧಿಯಲ್ಲಿ ಮೋದಿ ಉತ್ತರಪ್ರದೇಶದಲ್ಲಿ 14 ಭಾಷಣಗಳನ್ನು ಮಾಡಿದ್ದರೆ, ಪಶ್ಚಿಮಬಂಗಾಳದಲ್ಲಿ 11 ರ್ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಇನ್ನುಳಿದಂತೆ ಪ್ರಮುಖ ರಾಜ್ಯಗಳು ಸಮಪಾಲನ್ನು ಪಡೆದಿದೆ. ಆದರೆ ಶಾ ಮತ್ತು ಮೋದಿ ಜೋಡಿ ಈ ಎರಡು ರಾಜ್ಯಗಳ ಮೇಲೆ ವಿಶೇಷ ಕಣ್ಣಿಟ್ಟಿರುವುದು ಅವರ ತಂತ್ರಗಾರಿಕೆಯ ಮಾರ್ಗಸೂಚಿ. ಕಳೆದ ಬಾರಿ ಉತ್ತರಪ್ರದೇಶದಿಂದ ಅಂಥದ್ದೊಂದು ಗೆಲುವನ್ನು ಯಾರೂ ಊಹಿಸಿರಲಿಲ್ಲ. ಈ ಜೋಡಿ ಗುಜರಾತಿನೊಂದಿಗೆ ಕಾಶಿಯನ್ನೂ ಮೋದಿಯವರ ಚುನಾವಣಾ ಕಣವಾಗಿ ಮಾರ್ಪಡಿಸಿದ್ದರ ಫಲದಿಂದ ಉತ್ತರಪ್ರದೇಶದಲ್ಲಿ ಲೋಕಸಭಾ ಸೀಟುಗಳು ಸುನಾಮಿಯಂತೆ ಹರಿದುಬಂದವು. ದೆಹಲಿಯ ಗದ್ದುಗೆ ಉತ್ತರಪ್ರದೇಶದ ಮೂಲಕವೇ ಹರಿದುಬರುವುದೆಂಬುದು ಹೊಸ ಸಂಗತಿಯಲ್ಲ. ಹೀಗಾಗಿಯೇ ಇತರೆ ಪಕ್ಷಗಳು ಈ ಕುರಿತು ಆಲೋಚಿಸುವ ಮುನ್ನವೇ ಮೋದಿ-ಶಾ ಯಾರ ಅರಿವಿಗೂ ಬಾರದಂತೆ ಉತ್ತರಪ್ರದೇಶದಲ್ಲಿ ಅಂತರ್ಪ್ರವಾಹವೊಂದನ್ನು ಹುಟ್ಟಿಸಿಯಾಗಿತ್ತು. ಇದರ ಪ್ರಭಾವ ಪ್ರತಿಪಕ್ಷಗಳಿಗೆ ಅರಿವಾಗಿದ್ದು ವಿಧಾನಸಭಾ ಚುನಾವಣೆಯ ವೇಳೆಗೇ. ಅಲ್ಲಿ ಅಧಿಕಾರವನ್ನು ಕಳೆದುಕೊಂಡಾಗ ಚಡಪಡಿಸಿದ ಮಾಯಾವತಿ-ಅಖಿಲೇಶರು ಬಿಜೆಪಿಯನ್ನು ಸೋಲಿಸಲು ಒಂದಾಗುವ ಮಾತುಗಳನ್ನಾಡಿದರು. ಮಹಾಘಟಬಂಧನ್ನ ಬಯಕೆ ಟಿಸಿಲೊಡೆದಿದ್ದೇ ಈ ಜೋಡಿಯ ನಾಗಾಲೋಟವನ್ನು ತಡೆಯಲು. ಆದರೆ, ಲೆಕ್ಕಾಚಾರದಲ್ಲಿ ನಿಪುಣರಾದ ಮೋದಿ-ಶಾ ಜೋಡಿ ಉತ್ತರಪ್ರದೇಶದಲ್ಲಿ ಕಳೆದುಕೊಳ್ಳುವುದನ್ನು ಬೇರೆಲ್ಲಾದರೂ ತುಂಬಿಕೊಳ್ಳುವ ಪ್ರಯತ್ನವನ್ನು ಎರಡು ವರ್ಷಗಳ ಹಿಂದಿನಿಂದಲೇ ಶುರುಮಾಡಿಬಿಟ್ಟಿತ್ತು. ಅದಕ್ಕೆ ಸೂಕ್ತವಾದ ಭೂಮಿಯಾಗಿ ಕಂಡದ್ದು ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ. ಉಳಿದೆಲ್ಲಾ ರಾಜ್ಯಗಳಲ್ಲೂ ಬಿಜೆಪಿ ಪಡೆಯಬಹುದಾದ ಸ್ಥಾನಗಳ ತುದಿಯನ್ನು ಮುಟ್ಟಿಬಿಟ್ಟಿತ್ತು. ಹೊಸ ಅವಕಾಶಗಳಿದ್ದುದು ಈ ಎರಡು ರಾಜ್ಯಗಳಲ್ಲೇ. ನಿರಂತರ ಕಾರ್ಯಕ್ರಮಗಳ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಾ ನಡೆದ ಅಮಿತ್ಶಾ ಲೋಕಸಭಾ ಚುನಾವಣೆಗೂ ಮುನ್ನವೇ ಪಶ್ಚಿಮಬಂಗಾಳದಲ್ಲಿ ಬಲವಾಗಿ ನೆಲೆಯೂರಿಬಿಟ್ಟಿದ್ದರು. ಗೂಢಚಾರ ಇಲಾಖೆಯ ಮೂಲಕ ಭಾಜಪ ಬೇರುಬಿಡುತ್ತಿರುವ ಸುದ್ದಿಯನ್ನು ತಿಳಿಯುತ್ತಿದ್ದಂತೆ ವ್ಯಗ್ರಳಾದ ದೀದಿ ಒಂದಾದಮೇಲೊಂದು ತಪ್ಪುಗಳನ್ನು ಮಾಡುತ್ತಲೇ ಹೊರಟಳು. ತನ್ನ ಪಕ್ಷದ ಗೂಂಡಾಗಳನ್ನು ಬಳಸಿ ಭಾಜಪದ ಕಾರ್ಯಕರ್ತರ ಹತ್ಯೆ ಮಾಡಿಸಿದ್ದು, ಎಲ್ಲೆಂದರಲ್ಲಿ ಮುಸಲ್ಮಾನರ ಓಲೈಕೆಗೆ ನಿಂತು ಹಿಂದೂಗಳನ್ನು ಅವಗಣನೆ ಮಾಡಿದ್ದು, ಇವೆಲ್ಲವೂ ಬಿಜೆಪಿಗೆ ಅಸ್ತ್ರವಾಗುತ್ತಲೇ ಹೋಯ್ತು. ಚುನಾವಣೆಯ ಹೊತ್ತಲ್ಲಿ ಇದು ಎಷ್ಟು ಭಯಾನಕವಾಗಿ ಬೆಳೆದು ನಿಂತಿತೆಂದರೆ ಉತ್ತರಪ್ರದೇಶದ ನಷ್ಟವನ್ನು ಬಂಗಾಳ ತುಂಬಿಕೊಡುವ ವಿಶ್ವಾಸ ಇವರಿಬ್ಬರಿಗೂ ಬಂದೇಬಿಟ್ಟಿತ್ತು. ಈ ಜೋಡಿಯಲ್ಲದೇ ಭಾಜಪದ ಮತ್ತ್ಯಾವ ನಾಯಕರೂ ಮುಂದಿನ 50 ವರ್ಷಗಳ ಕಾಲ ಬಂಗಾಳದಲ್ಲಿ 5 ಸೀಟುಗಳನ್ನು ಗೆಲ್ಲುವ ಕನಸೂ ಕಾಣಲು ಸಾಧ್ಯವಿರಲಿಲ್ಲ. ಮೋದಿಯವರಂತೂ ಪಶ್ಚಿಮಬಂಗಾಳಕ್ಕೆ ಸಮಯ ಕೊಟ್ಟ ರೀತಿ ಎಂಥವರ ಹುಬ್ಬೂ ಮೇಲೇರಿಸುವಂತಿತ್ತು!


ಪಶ್ಚಿಮಬಂಗಾಳದ ಚಟುವಟಿಕೆಗಳು ಬಿಜೆಪಿಗೆ ಇಬ್ಬಗೆಯ ಲಾಭಕ್ಕೆ ಕಾರಣವಾಯ್ತು. ಮೊದಲನೆಯದು ದೀದಿ ಪದೇ-ಪದೇ ತಪ್ಪುಗಳನ್ನು ಮಾಡುತ್ತಾ ಗೂಂಡಾರಾಜ್ನ ಮುಖ್ಯಸ್ಥೆಯಂತೆ ವತರ್ಿಸುತ್ತಿದ್ದುದರಿಂದ ‘ಮೋದಿ ಸಂವಿಧಾನ ವಿರೋಧಿ; ಪ್ರಜಾಪ್ರಭುತ್ವ ವಿರೋಧಿ’ ಎಂಬ ಪ್ರತಿಪಕ್ಷದ ಮಾತಿಗೆ ನಯಾಪೈಸೆ ಕಿಮ್ಮತ್ತಿಲ್ಲದಂತಾಯ್ತು. ಮೋದಿಯ ಮೇಲೆ ಆರೋಪ ಮಾಡುತ್ತಾ ಸಕರ್ಾರಿ ವ್ಯವಸ್ಥೆಯನ್ನು ಸ್ವಂತಕ್ಕೆ ಬಳಸುತ್ತಿದ್ದಾರೆ ಎಂದು ದೂರಲು ಪ್ರತಿಪಕ್ಷಗಳು ಮಾಡಿಕೊಂಡಿದ್ದ ತಯಾರಿಯೆಲ್ಲಾ ದೀದಿಯ ಹಿಟ್ಲರ್ಶಾಹಿಯ ಮುಂದೆ ಮಕಾಡೆ ಮಲಗಿತ್ತು. ಪಶ್ಚಿಮಬಂಗಾಳದಲ್ಲಿ ಸೀಟು ಎಷ್ಟು ಬರುವುದೋ ಆ ಪ್ರಶ್ನೆ ಬೇರೆ. ಆದರೆ ಬೌದ್ಧಿಕ ವಲಯವನ್ನು ಪ್ರಭಾವಿಸಬಲ್ಲಂತಹ ಅವಾಡರ್್ವಾಪ್ಸಿ ಬಗೆಯ ಗ್ಯಾಂಗುಗಳು ಮೋದಿಯ ವಿರುದ್ಧ ಏನೂ ಮಾತನಾಡಲಾಗದೇ ಬಾಯ್ಮುಚ್ಚಿ ಕೂರಬೇಕಾದ ಅನಿವಾರ್ಯತೆಗೆ ಸಿಲುಕಿದ್ದು ದೀದಿಯ ವಿಕೃತ ಸಾಹಸಗಳಿಂದಾಗಿಯೇ. ಆಕೆಯನ್ನು ಅದಕ್ಕೆ ಪ್ರೇರೇಪಿಸಲೋ ಎಂಬಂತೆ ಮೋದಿ ಪದೇ-ಪದೇ ಬಂಗಾಳಕ್ಕೆ ಭೇಟಿ ಕೊಟ್ಟರು, ಕೃಷ್ಣನೆದುರು ಶಿಶುಪಾಲ ತಪ್ಪು ಮಾಡಿದಂತೆ ದೀದಿ ತಪ್ಪುಗಳ ಸರಮಾಲೆಯನ್ನೇ ಮಾಡುತ್ತಾ ನಡೆದಳು. ಪ್ರತಿಪಕ್ಷಗಳಿಗೆ ಆಕೆ ನುಂಗಲಾಗದ, ಉಗಳಲೂ ಆಗದ ಬಿಸಿ ತುಪ್ಪವಾಗಿಬಿಟ್ಟಳು. ಮತ್ತು ಹದವಾಗಿದ್ದ ತುಪ್ಪವನ್ನು ಚೆನ್ನಾಗಿ ಕಾಯಿಸಿದ್ದು ಮೋದಿ-ಶಾ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.


ಮೋದಿ-ಶಾ ಇಬ್ಬರಿಗೂ ಗೆಲ್ಲುವ ಕಲೆ ಗೊತ್ತಿದೆ. ಹಾಗಂತ ಅದು ಶ್ರಮಪಡದೇ ಗೆಲ್ಲುವ ಊಳಿಗಮಾನ್ಯ ಪದ್ಧತಿಯಂಥದ್ದಲ್ಲ. ಬದಲಿಗೆ, ಪರಿಪೂರ್ಣ ಕರ್ಮಯೋಗದ್ದು. ಅದಕ್ಕೆ ತಂತ್ರ ಪ್ರತಿತಂತ್ರಗಳ ಜ್ಞಾನಯೋಗವೂ ಸೇರಿಕೊಂಡಿದೆ. ನರೇಂದ್ರಮೋದಿಯವರ ಭಾಷಣಗಳನ್ನು ಅಧ್ಯಯನ ನಡೆಸಿದ್ದ ಸಂಸ್ಥೆಯೊಂದು ಅವರ ಪ್ರತೀ ಭಾಷಣಗಳಲ್ಲೂ ಸ್ಥಳೀಯ ಮಹಾಪುರುಷರ ಉಲ್ಲೇಖ ಮಾಡುವುದನ್ನು ವಿಶೇಷವಾಗಿ ಗಮನಿಸಿದೆ. ಉದಾಹರಣೆಗೆ, ಬಿಹಾರ ಮತ್ತು ಉತ್ತರಪ್ರದೇಶಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ರ ವಿಚಾರಧಾರೆಯನ್ನು ಸಮರ್ಥವಾಗಿ ಬಳಸಿದ ಮೋದಿ ಇಲ್ಲಿನ ರ್ಯಾಲಿಗಳಲ್ಲಿ ಐವತ್ತಕ್ಕೂ ಹೆಚ್ಚು ಬಾರಿ ಅಂಬೇಡ್ಕರರ ಹೆಸರನ್ನು ಉಲ್ಲೇಖಿಸಿದ್ದು ಗಮನಿಸಿದೆ. ಮಹಾರಾಷ್ಟ್ರದ ರ್ಯಾಲಿಗಳಲ್ಲಿ ಮೋದಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು 15ಕ್ಕೂ ಹೆಚ್ಚು ಬಾರಿ ಬಳಸಿದ್ದಾರೆ. ಪಶ್ಚಿಮಬಂಗಾಳದಲ್ಲಾದರೋ ರವೀಂದ್ರನಾಥ್ ಠಾಗೋರ್ ಹೆಚ್ಚು-ಕಡಿಮೆ ಪ್ರತೀ ಭಾಷಣದಲ್ಲೂ ನುಸುಳಿದ್ದಾರೆ. ಇನ್ನು ಮೋದಿಯವರ ಭಾಷಣಗಳಲ್ಲಿ ಬಿಟ್ಟೂ-ಬಿಡದೇ ಬಂದಿರುವ ಪದಗಳಲ್ಲಿ ಪಾಕಿಸ್ತಾನ ಮತ್ತು ಕಾಂಗ್ರೆಸ್ಸು ಬಲುಮುಖ್ಯವಾದುದು. ಕಾಂಗ್ರೆಸ್ಸಿನೊಡನೆ ಭ್ರಷ್ಟಾಚಾರದ ಪದವೂ ವ್ಯಾಪಕವಾಗಿ ಬಳಕೆಯಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದನ್ನು ಬಿಟ್ಟರೆ ಅವರು ಅತ್ಯಂತ ಹೆಚ್ಚು ಬಳಸಿರುವುದು ಬಡತನ ಎಂಬ ಪದವನ್ನೇ. ಬಡವರಿಗೆ ಗ್ಯಾಸು, ಕರೆಂಟು, ಶೌಚಾಲಯ, ಮನೆ ಇತ್ಯಾದಿಗಳನ್ನು ಕೊಟ್ಟಿರುವುದರ ಕುರಿತಂತೆ ಎಲ್ಲೆಡೆ ಹೇಳಿಕೊಂಡಿದ್ದಾರಾದರೂ ಗ್ಯಾಸು ಕೊಟ್ಟಿರುವ ಸಾಧನೆಯನ್ನು ಮಾತ್ರ ಮೋದಿ ವಿಶೇಷವಾಗಿ ಉಲ್ಲೇಖ ಮಾಡಿದ್ದಾರೆ. ಒಟ್ಟಾರೆ ಭಾಷಣದ ಈ ಅಂಕಿ-ಅಂಶಗಳನ್ನು ನೋಡಿದರೆ ಮೋದಿ ಪ್ರತೀ ಭಾಷಣವನ್ನು ಚಾಲಾಕುತನದಿಂದ ರೂಪಿಸಿಕೊಂಡಿದ್ದಾರೆ ಅಂತಾಯ್ತು. ಸ್ಥಳೀಯರೊಂದಿಗೆ ಸಂಪರ್ಕ ಸಾಧಿಸಲು ಅಲ್ಲಿನ ಮಹಾಪುರುಷರ ಉಲ್ಲೇಖ ಮಾಡಿದ್ದಾರೆ, ಅತ್ಯಂತ ದೊಡ್ಡ ಮತದಾರ ಗುಂಪನ್ನು ಹೊಂದಿರುವ ಬಡವರೊಂದಿಗೆ ಹೃದಯದ ಸಂಪರ್ಕ ಸಾಧಿಸಿದ್ದಾರೆ, ಮತ್ತು ಕೊನೆಯದಾಗಿ ಪಾಕಿಸ್ತಾನದ ಮೇಲೆ ಸಾಧಿಸಿರುವ ವಿಕ್ರಮವನ್ನೂ, ಭ್ರಷ್ಟಾಚಾರವನ್ನು ಮಟ್ಟಹಾಕಿ ಕಾಂಗ್ರೆಸ್ಸಿಗರನ್ನು ತುಳಿದಿಟ್ಟಿರುವ ಸಮರ್ಥ ನಾಯಕ ತಾನೇ ಎಂಬುದನ್ನು ವಿವಾದಕ್ಕೆಡೆಯಿಲ್ಲದಂತೆ ಸಾಬೀತುಪಡಿಸಿದ್ದಾರೆ. ಹೀಗಾಗಿಯೇ ಯಾವ ಊರಿಗೆ ಹೋದರೂ ಸಮರ್ಥ ನಾಯಕ ಎಂಬ ಪ್ರಶ್ನೆ ಬಂದಾಗ ಮೋದಿಯಲ್ಲದೇ ಬೇರೆ ಹೆಸರೇ ಇರಲಿಲ್ಲ. ಹೀಗಾಗಿಯೇ ಮೋದಿಯ ರ್ಯಾಲಿಗಳಿಗೆ ಅಯಾಚಿತವಾಗಿ ಜನ ಬರುತ್ತಿದ್ದುದಲ್ಲದೇ ಮಾಧ್ಯಮಗಳಲ್ಲೂ ರಾಹುಲ್ ರ್ಯಾಲಿಗಿಂತ ಮೂರು ಪಟ್ಟು ಹೆಚ್ಚು ಸಮಯ ಮೋದಿಗೆ ದಕ್ಕಿದ್ದು!

ಮೋದಿಗೆದುರಾಗಿ ರಾಹುಲ್ನ ಬಗ್ಗೆ ಮಾತನಾಡದಿರುವುದೇ ಒಳಿತು. ಪ್ರತೀ ಭಾಷಣದಲ್ಲೂ ಹೇಳಿದ್ದನ್ನೇ ಮತ್ತೆ-ಮತ್ತೆ ಹೇಳುತ್ತಾ ಯಾವ ಹಂತದಲ್ಲೂ ಸಮರ್ಥ ನಾಯಕತ್ವದ ಲಕ್ಷಣಗಳನ್ನು ತೋರದ ರಾಹುಲ್ ಹಾಸ್ಯೋತ್ಸವದ ಕೇಂದ್ರವಾದನಲ್ಲದೇ ನರೇಂದ್ರಮೋದಿಯನ್ನು ಎದುರಿಸುವ ಗುಣಲಕ್ಷಣಗಳುಳ್ಳವನು ಎಂದು ಯಾರಿಗೂ ಅನಿಸಲೇ ಇಲ್ಲ.


ಫಲಿತಾಂಶಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಅನೇಕರು ಅತಂತ್ರ ಲೋಕಸಭೆಯಾಗುತ್ತದೆ ಎಂಬ ಭವಿಷ್ಯ ನುಡಿಯುತ್ತಿದ್ದಾರೆ. ಆದರೆ, ಮೋದಿ-ಶಾ ಮುಖದಲ್ಲಿರುವ ಗೆಲುವಿನ ವಿಶ್ವಾಸವನ್ನು ಕಾಂಗ್ರೆಸ್ಸಿಗರ ಕಂಗಳಲ್ಲಿ ಕಾಣುತ್ತಿರುವ ಸೋಲಿನ ಭಯವನ್ನು ಎಂಥವರೂ ಊಹಿಸಬಹುದು. ಉತ್ತರಪ್ರದೇಶವೇನಾದರೂ ಮಹಾಘಟಬಂಧನ್ಗೆ ವಿರುದ್ಧವಾಗಿ ಮತಚಲಾಯಿಸಿದರೆ ಭಾಜಪ ಸದ್ಯದ ಇತಿಹಾಸದ ಎಲ್ಲ ದಾಖಲೆಗಳನ್ನು ಮುರಿದು ಹಾಕಿ ಅಧಿಕಾರಕ್ಕೆ ಬರಲಿದೆ. ಜ್ಯೋತಿರಾದಿತ್ಯ ಸಿಂಧ್ಯ ಅದಾಗಲೇ ಚುನಾವಣೆಯ ನಡುವೆಯೇ ವಿಶ್ರಾಂತಿಗೆಂದು ವಿದೇಶಕ್ಕೆ ಹೋಗಿರುವುದು ಭವಿಷ್ಯದ ಸ್ಪಷ್ಟ ಮುನ್ಸೂಚನೆ. ಈ ಐದು ವರ್ಷಗಳ ನಂತರ ಕಾಂಗ್ರೆಸ್ ಈ ಸ್ಥಿತಿಯಲ್ಲಿ ಖಂಡಿತ ಇರಲಾರದು. ಮುಂದಿನ ಐದು ವರ್ಷಗಳಲ್ಲಿ ಮೋದಿ ಏನಾದರೂ ಗಾಂಧೀಜಿಯವರನ್ನು ಕಾಂಗ್ರೆಸ್ಸಿನ ಪಾಳಯದಿಂದ ಕಸಿದುಕೊಂಡುಬಿಟ್ಟರೆ ಕಾಂಗ್ರೆಸ್ಸು ಶಾಶ್ವತವಾಗಿ ಸಾಯುತ್ತದೆ. ಸಾಧ್ವಿ ಪ್ರಜ್ಞಾಸಿಂಗರಿಗೆ ಮೋದಿ ಕೊಟ್ಟಿರುವ ಖಡಕ್ಕು ಎಚ್ಚರಿಕೆ ಇಂಥದ್ದೇ ನಡೆಯನ್ನು ಊಹಿಸುವಂತೆ ಮಾಡಿದೆ. ಗಾಂಧೀಜಿಯವರ 150ನೇ ಜಯಂತಿಯ ಹಿನ್ನೆಲೆಯಲ್ಲಿ ಮೋದಿ ಕೈಗೆತ್ತಿಕೊಳ್ಳಲಿರುವ ಕಾರ್ಯಕ್ರಮಗಳು ಹೊಸರೂಪದಲ್ಲಿ ಗಾಂಧಿಯನ್ನು ನಮ್ಮ ಮುಂದಿಡುವುದಲ್ಲದೇ ನಕಲಿ ಗಾಂಧಿಗಳ ಭವಿಷ್ಯವನ್ನು ಶಾಶ್ವತವಾಗಿ ಮುಚ್ಚಲಿದೆ.

ಯಾವುದಕ್ಕೂ ತಾಳ್ಮೆಯಿಂದ ಕಾಯೋಣ. ಮತ್ತೊಮ್ಮೆ ದೇಶ ಗೆಲ್ಲಲಿ ಅಷ್ಟೇ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    May 20, 2019 at 4:54 am

    ಎಲ್ಲರೂ ತುದಿಗಾಲಲ್ಲಿ ನಿಂತಿದ್ದೇವೆ. ಮೋದಿಯೇ ಗೆಲ್ಲುವುದಾದರೂ ಅಂತರ ಎಷ್ಟಿರಬಹುದು ಲೆಕ್ಕಾಚಾರ ನಡೆದಿದೆ. ಯಾರೇ ಭೇಟಿಯಾದರೂ ಮೊದಲ ಸಂಭಾಷಣೆ ಮೋದಿ ಗೆಲ್ತಾರಲ್ವ? ಟಿವಿಯಲ್ಲಿ ಎನೇನೋ ತೋರಿಸ್ತಾರೆ ಅನ್ನೋ ಭಯ ಹುಟ್ಟಿದೆ.
    ಕಳೆದ ವಾರ ವಾರಣಾಸಿಗೆ ಹೋಗಿದ್ದೆ. ವಿಶ್ವನಾಥನನ್ನು ಕಂಡು ಅನ್ನಿಸಿದ್ದು ನನಗೆ ಮುಕ್ತಿ ಕೇಳಲು ಬಂದೆ. ಆದರೆ ನಿನಗೆ ಮುಕ್ತಿ ಸಿಗಲು ಮೋದಿ ಬೇಕೇ ಬೇಕು. ನನಗಿಂತ ವಿಶ್ವನಾಥ ನಿಗೆ ಮೋದಿ ಅಗತ್ಯ ಹೆಚ್ಚಿದೆ. ಹೇಳಿ ಬಂದಿದ್ದೇನೆ. ಮೋದಿ ಗೆದ್ದ ನಂತರ ಮತ್ತೆ ಬರ್ತೀನಿ ಅಂತ. ಹೋಗುವ ವಿಶ್ವಾಸ ಕೂಡ ಇದೆ.

Leave a Reply

Your email address will not be published. Required fields are marked *

Most Popular

To Top