State

ಹಿಂದೂ-ಕ್ರಿಶ್ಚಿಯನ್ನರ ಮಾರಣ ಹೋಮ ನಡೆಸಿದ ಟಿಪ್ಪು ಸುಲ್ತಾನನ ಕರಾಳ ಇತಿಹಾಸ!

ಅದು ದೀಪಾವಳಿಯ ನರಕಚತುರ್ದಶಿ, ಕೊಡಗಿನ ಮುಂಡಂ ಬ್ರಾಹ್ಮಣರು ಸಂತೋಷದಿಂದ ದೀಪಾವಳಿ ಆಚರಣೆಯಲ್ಲಿ ತೊಡಗಿದ್ದರು. ನೋಡನೋಡುತ್ತಲೇ ದೊಡ್ಡ ಸೈನ್ಯವೊಂದು ಅವರ ಮೇಲೆರಗಿತು. ಯಾಕೆ ಆಕ್ರಮಣ ಮಾಡುತ್ತಿದ್ದಾರೆಂದು ಕೂಡ ನರಕ ಚತುರ್ದಶಿಯ ಆಚರಣೆಯಲ್ಲಿದ್ದವರಿಗೆ ತಿಳಿದಿರಲಿಲ್ಲ. ತಾಯಂದಿರು, ವೃದ್ದರು, ಮಕ್ಕಳು ಎಂಬ ಭೇದವಿಲ್ಲದೆ ಆ ಸೈನಿಕರ ದಾಳಿಗೆ ಬಲಿಪಶುವಾಗಿ ಹೋದರು. ಈ ಆಕ್ರಮಣದಲ್ಲಿ 800 ಕ್ಕೂ ಹೆಚ್ಚು ಜನ ಅಸು ನೀಗಿದರು. ದಾಳಿ ಮಾಡಿದವರು ಯಾರು ಗೊತ್ತೇ?! ಓಲೈಕೆಯಿಂದಲೇ ಓಟುಗಳಿಸಿ ಆಳುತ್ತಿರುವವರ ವೀರ ಟಿಪ್ಪು ಸುಲ್ತಾನನ ಸೈನಿಕರು. ಈ ನರಮೇಧಕ್ಕೆ ಶತಮಾನಗಳು ಸಂದಿದ್ದರೂ ತಮ್ಮ ಪೂರ್ವಜರ ಮೇಲಾದ ಈ ಅಮಾನುಷ ದಾಳಿಗೆ ಇಂದಿಗೂ ಅಲ್ಲಿನ ಪ್ರಾಂತ್ಯದಲ್ಲಿ ಕರಾಳ ದೀಪಾವಳಿಯಾಗಿ ಆಚರಿಸುತ್ತಾರೆ. ಇಂತಹ ಅಮಾನವೀಯ ದಾಳಿಗೆ ಕಾರಣವಾದರೂ ಏನಿರಬಹುದು? ನಾಲ್ವಡಿ ಕೃಷ್ಣರಾಜ ಒಡೆಯರರ ನಿಧನಾನಂತರ ಮೈಸೂರು ರಾಜ್ಯ ಟಿಪ್ಪು ವಶವಾಯಿತು. ರಾಣಿ ಲಕ್ಷ್ಮಿದೇವಿ ಅಮ್ಮಣ್ಣಿ ರಾಜ್ಯ ಹಿಂಪಡೆಯುವ ನಿಟ್ಟಿನಲ್ಲಿ ಒಡೆಯರರ ಆಸ್ಥಾನದಲ್ಲಿ ದಿವಾನರಾಗಿ ಕಾರ್ಯನಿರ್ವಹಿಸುತ್ತಿದ್ದ ತಿರುಮಲ ಅಯ್ಯಂಗಾರರ ಸಹಾಯ ಬೇಡುತ್ತಾಳೆ. ದಿವಾನ ತಿರುಮಲ ಅಯ್ಯಂಗಾರರು ಕಾರ್ಯೋನ್ಮುಖರಾಗಿ ಇತರ ರಾಜರು, ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ಸಹಾಯಕ್ಕೆ ಕೈ ಚಾಚುತ್ತಾರೆ. ಈ ವಿಷಯ ತಿಳಿದ ಟಿಪ್ಪು ದಿವಾನರ ಈ ನಿಲುವನ್ನು ಸಹಿಸದೇ, ಅಯ್ಯಂಗಾರರಿಗೆ ಬುದ್ದಿ ಕಲಿಸಬೇಕೆಂಬ ಚಿಂತನೆಯಲ್ಲಿ ಅವರ ಇಡೀ ಜನಾಂಗದ ಮೇಲೆ ಬಿರುಗಾಳಿಯಂತೆ ನುಗ್ಗಿ ಒಂದು ಹತ್ಯಾಕಾಂಡವನ್ನೇ ನೆಡಸಿಬಿಡುತ್ತಾನೆ..!!

ಇದೊಂದೇ ಅಲ್ಲ, ಟಿಪ್ಪುವಿನ ಮತಾಂಧತೆಯ ಕತ್ತಿಗೆ ಕರ್ನಾಟಕದ 20 ಸಾವಿರಕ್ಕೂ ಹೆಚ್ಚು ಅಮಾಯಕ ಕೆನರಾ ಕ್ರಿಶ್ಚಿಯನ್ನರು ಬಲಿಯಾದದ್ದು ಮರೆಯಲು ಸಾಧ್ಯವೇ?! ಅಲ್ಲಿನ ಜನರನ್ನು ಶ್ರೀರಂಗಪಟ್ಟಣದವರೆಗೂ ಎಳೆದು ತಂದದ್ದು, ದಾರಿ ಮಧ್ಯೆ ಹಿಂದೂ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಗಂಡಸರಿಗೆ ಬಲವಂತದ ಸುನ್ನಿ ಪದ್ದತಿಯ ಮತಾಂತರ. ಹೀಗೆ ಟಿಪ್ಪು ಕ್ರೌರ್ಯಗಳು ಅದೆಷ್ಟೋ!!

ಕೆಲವು ಇತಿಹಾಸಕಾರರು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಅಮರಜೀವಿಯೆಂದು ಹೇಳುತ್ತಿದ್ದಾರೆ, ಆದರೆ ಟಿಪ್ಪುವಿನ ಆಂಗ್ಲರ ವಿರುದ್ಧದ ಹೋರಾಟ ಸ್ವಾರ್ಥದ ಹೋರಾಟವಾಗಿತ್ತೇ ಹೊರತು ಸ್ವಾತಂತ್ರ್ಯ ಹೋರಾಟವಾಗಿರಲಿಲ್ಲ ಎಂದು “ಹಿಸ್ಟರಿ ಆಫ್ ಟಿಪ್ಪುಸುಲ್ತಾನ್” ಲೇಖಕರಾದ ‘ಮೊಹಿಬುಲ್ ಹಸನ್’ ಉಲ್ಲೇಖಿಸಿದ್ದಾರೆ. ಇಂತಹ ಮತಾಂಧನ ಜಯಂತಿಗೆ ಅವಶ್ಯಕತೆಯಾದರೂ ಏನು ಎಂಬ ಪ್ರಶ್ನೆಗೆ ಸಿಗುವ ಉತ್ತರ, ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಮಾಡಿಕೊಂಡು ಬಂದ ಅದೇ “ಓಲೈಕೆ”.

5 ವರ್ಷ ಕೆಲಸ ಮಾಡದೇ, ಒಂದು ಕಡೆ ಜಾತಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುತ್ತಾ, ಮತ್ತೊಂದೆಡೆ ಓಲೈಕೆಯನ್ನೇ ಬಂಡವಾಳವಾಗಿಸಿಕೊಂಡು ಚುನಾವಣೆಗೆ ಬಂದ ಸಿದ್ರಾಮಯ್ಯನವರು ಟಿಪ್ಪು ಜಯಂತಿ ಪರವಾಗಿ ಹೇಳಿಕೆ ಕೊಟ್ಟಿದ್ದರೆ ಆಶ್ಚರ್ಯಪಡಬೇಕಿರಲಿಲ್ಲ. ಅವರಿಗಿಂತಲೂ ಹೆಚ್ಚಿನ ಆಸಕ್ತಿ ಈ ಬಾರಿ ತೋರಿಸಿದ್ದು ಪ್ರಸ್ತುತ ಸರ್ಕಾರದ ಸಚಿವೆ ಜಯಮಾಲಾ ರವರು. ಸಾಮಾನ್ಯವಾಗಿ ಹಣವಿಲ್ಲದವನು ಸಿರಿವಂತನ ಬಳಿ ಭಿಕ್ಷೆ ಕೇಳುತ್ತಾನೆ. ಆದರೆ ನಮ್ಮ ರಾಜ್ಯದ ಪರಿಸ್ಥಿತಿನೇ ಬೇರೆ, ಜನ ಹೀನಾಯವಾಗಿ ಸೋಲಿಸಿ ನೀವು ನಮಗೆ ಬೇಡವೆಂದಿದ್ದರೂ, ನಾಚಿಕೆಯಿಲ್ಲದೆ ಯಾರನ್ನ ಚುನಾವಣೆಗೆ ಮುಂಚೆ ವಿರೋಧಿಸಿದ್ದರೋ, ಅವರಿಗಿಂತ ಹೆಚ್ಚಿನ ಸ್ಥಾನದಲ್ಲಿದ್ದರೂ, ಕಡಿಮೆ ಸ್ಥಾನ ಬಂದವರ ಬಾಗಿಲಿಗೆ ಹೋಗಿ ಭಿಕ್ಷೆ ಬೇಡಿ ಅಂತೂ ಸರ್ಕಾರ ರಚಿಸಿಯೇ ಬಿಟ್ಟರು. ಇಂತಹ ತಿರುಪೆ ಸರ್ಕಾರದ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಮಂತ್ರಿ ಜಯಮಾಲಾರವರು ಇತ್ತೀಚೆಗೆ “ಟಿಪ್ಪು ಜಯಂತಿ ಮಾಡಿಯೇ ತೀರುತ್ತೇವೆ, ಅದು ಅನಾಹುತಕ್ಕೆ ದಾರಿಯಾದರೆ ಜನರೇ ನಿರ್ಧರಿಸಬೇಕು” ಎಂದು ಹೇಳಿಕೆ ಕೊಟ್ಟಿದ್ದಾರೆ. ಅನಾಹುತವಾಗಲಿದೆ ಎಂಬ ಮುನ್ಸೂಚನೆಯಿದ್ದರೂ ಕಾರ್ಯಕ್ರಮ ಮಾಡುತ್ತಿರುವುದು ಸಮಾಜದ ಸ್ವಾಸ್ಥ್ಯಕ್ಕಾಗಿ ಸರ್ಕಾರಕ್ಕಿರುವ ಆಸಕ್ತಿಗೆ ಕೈಗನ್ನಡಿ..!!
ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕೂ ಟಿಪ್ಪು ಜಯಂತಿಗೂ ಯಾವ ಸಂಬಂಧವೋ ಅವರಿಗೇ ತಿಳಿಯಬೇಕು.

ಕರ್ನಾಟಕದ 100 ರಲ್ಲಿ 42 ಮಂದಿ ಮಹಿಳಯರಿಗೆ ಐರನ್ ಕೊರತೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿ ಅನಿಮಿಯಾ ತೊಂದರೆಗೊಳಗಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೇ ಪೌಷ್ಟಿಕಾಹಾರ ಸೇವಿಸಲು ವಿಫಲರಾಗುತ್ತಿರುವುದು. ಶುದ್ಧ, ಸ್ವಚ್ಚ ಪರಿಸರದ ಕೊರತೆ, ಅಕಾಲಿಕ ಜನನ ಹಾಗೂ ರೋಗಗಳ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಇಂದಿಗೂ ಕರ್ನಾಟಕದ ಸಾವಿರ ಮಕ್ಕಳಲ್ಲಿ 32 ಜನ ಹುಟ್ಟಿದ ಒಂದು ವರ್ಷ ತುಂಬುವುದರೊಳಗಾಗಿಯೇ ಸಾವಿಗೀಡಾಗುತ್ತಿದ್ದಾರೆ.

ಗರ್ಭವತಿಯರಾದಾಗ ಸರಿಯಾದ ಪೌಷ್ಟಿಕಾಹಾರ ತೆಗೆದುಕೊಳ್ಳಲು ವಿಫಲರಾಗಿ ಶೇಕಡ 39 ಜನ ನಿಶ್ಯಕ್ತಿ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕಡಿಮೆ ತೂಕದ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ, ಇದರಲ್ಲಿ ಹೆಚ್ಚಾಗಿರುವುದು ಪರಿಶಿಷ್ಟ ಜಾತಿ ಮತ್ತು ಪಂಗಡದ ಗ್ರಾಮೀಣ, ಅನಕ್ಷರಸ್ಥ, ಉದ್ಯೋಗ ಮಾಡಲಾಗದೇ ಇತರರ ಆದಾಯದ ಮೇಲೆ ಅವಲಂಬಿತರಾಗಿರುವ ಮಹಿಳೆಯರು. ನಮ್ಮ ಹೆಮ್ಮೆಯ ಘನ ಕರ್ನಾಟಕ ಸರ್ಕಾರದ ವರದಿಯ ಪ್ರಕಾರವೇ 10 ಲಕ್ಷಕ್ಕೂ ಅಧಿಕ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನಮ್ಮ ರಾಜ್ಯದಲ್ಲಿ ಕಾಡುತ್ತಿರುವ ಅತಿ ದೊಡ್ಡ ರೋಗ ಡೈಯೇರಿಯಾ, ಈ ಕಾಯಿಲೆಯಿರುವ ಪ್ರತಿ 5 ರಲ್ಲಿ ಒಂದು ಮಗು ಇಂದಿಗೂ ಸಾವಿಗೀಡಾಗುತ್ತಿದೆ.

ರಾಜ್ಯದಲ್ಲಿ ಇಷ್ಟೆಲ್ಲಾ ತೊಂದರೆ ಇದ್ದರೂ, ಐದು ವರ್ಷದ ಪ್ರತಿ ನಿಮಿಷವೂ ಕೆಲಸ ಮಾಡಿದರೂ ಮುಗಿಯದಷ್ಟು ಕೆಲಸವಿದ್ದರೂ ಮಾನ್ಯ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಚಿವೆಗೆ ಟಿಪ್ಪು ಜಯಂತಿಯ ಬಗ್ಗೆ ಇರುವ ಆಸಕ್ತಿ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಇಲ್ಲದಿರುವುದು ದೌರ್ಭಾಗ್ಯವೇ ಸರಿ. ಪಾಪ, ಅವರಾದರೂ ಏನು ಮಾಡ್ತಾರೆ ಹೇಳಿ, ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಕುಳಿತುಕೊಂಡು ಸಿನಿಮಾ ಪ್ರಶಸ್ತಿಗಳಿಗೆ ಕಿತ್ತಾಡುವವರನ್ನ ಏಕಾ ಏಕಿ ಸಿದ್ರಾಮಯ್ಯನವರು ಸಚಿವರನ್ನಾಗಿಸಿದರು. ಕೆಲವೇ ವರ್ಷದ ಹಿಂದೆ ಜನರ ದುಡ್ಡನ್ನು ಟಿಪ್ಪು ಜಯಂತಿಗಾಗಿ ಬಳಸುವುದನ್ನು ಕಟುವಾಗಿ ಟೀಕಿಸಿದ್ದ ಕುಮಾರಸ್ವಾಮಿಯವರು ಈಗ ಅದೇ ಜಯಂತಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಉಪ್ಪಿನ ಋಣ ತೀರಿಸಬೇಕಲ್ಲವೇ? ಏನೇ ಆದರೂ ಈ ತಿರುಪೆ ಸರ್ಕಾರದ ಟಿಪ್ಪು ಜಯಂತಿಗೊಂದು ಧಿಕ್ಕಾರವಿರಲಿ..!!

– ಅಭಿಲಾಷ್ ಸೋಮೇನಹಳ್ಳಿ

Click to comment

Leave a Reply

Your email address will not be published. Required fields are marked *

Most Popular

To Top