Vishwaguru

ಹಿಂದೂ ಅರಸರೆಡೆಗಿನ ಮಯೋಪಿಯ, ಇದಾವ ನ್ಯಾಯ?

ಮಯೋಪಿಯ ಅಥವಾ ಸಮೀಪ ದೃಷ್ಟಿದೋಷ. ದೂರದ ವಸ್ತುಗಳನ್ನು ಗ್ರಹಿಸುವ ಕಣ್ಣಿನ ಶಕ್ತಿ ಕುಂದಿದಾಗ ಉಂಟಾಗುವ ಸ್ಥಿತಿಯಿದು. ದುರ್ದೈವವಶಾತ್ ನಾವು ನಮ್ಮ ಭಾರತದ ಚರಿತ್ರೆಯನ್ನು ಅಭ್ಯಸಿಸುತ್ತಿರುವುದೆಲ್ಲಾ ಈ ದೃಷ್ಟಿದೋಷದೊಂದಿಗೇ. ಕಣ್ಣು ಮಂಜಾಗಿ, ದೃಷ್ಟಿ ಮಸುಕಾಗಿ, ಹಗ್ಗ ಹಾವಾಗುವ ಈ ಸ್ಥಿತಿಯಲ್ಲಿ ಶಿವಾಜಿ ಬೆಟ್ಟದ ಇಲಿಯಾಗಿ ಕಾಣಿಸುತ್ತಾನೆ. ನರಹಂತಕ ಟಿಪ್ಪು ನಾಡಿನ ಹುಲಿಯಾಗಿ ಕಂಗೊಳಿಸುತ್ತಾನೆ. ಸ್ತ್ರೀಯರನ್ನು ತನ್ನ ಕಾಮತೃಷೆ ತಣಿಸಿಕೊಳ್ಳಲು ಸಂತೆಯಲ್ಲಿ ಖರೀದಿಸುತ್ತಿದ್ದ ಅಕ್ಬರ್ ಗ್ರೇಟ್ ಆಗಿ ಕಂಡರೆ, ಆತನ ವಿರುದ್ಧ ಸಿಡಿದೆದ್ದ ಮಹಾರಾಣ ಪ್ರತಾಪ್ ಕಾಡಿನ ಅಲೆಮಾರಿಯಂತೆ ಕಾಣುತ್ತಾನೆ.

ನಮ್ಮ ಕೃಷ್ಣದೇವರಾಯರೂ ಈ ಮಯೋಪಿಯಾ ಪೀಡಿತರ ದೃಷ್ಟಿಯಿಂದ ತಪ್ಪಿಸಿಕೊಂಡಿಲ್ಲ. ಯುದ್ಧದ ಮೇಲೆ ಯುದ್ಧ ಮಾಡುತ್ತಾ, ಗೆದ್ದು ಅಜೇಯರಾಗುಳಿದಿದ್ದ ಕೃಷ್ಣದೇವರಾಯರನ್ನು ಬಹುತೇಕ ಚರಿತ್ರಕಾರರು ವಿಮರ್ಶೆಗೊಳಪಡಿಸುವುದು ಆತನು ಆಂಧ್ರದವನೋ ಅಥವಾ ಕರ್ನಾಟಕೀಯನೋ ಎಂಬ ವಿಚಾರದ ಬಗ್ಗೆ. ಆತನ ರಾಜಿಗೊಳಪಡದ ಪರಾಕ್ರಮ ಈ ಚರಿತ್ರಕಾರರಿಗೆ ಅಹಂಕಾರದಂತೆ ಕಾಣುತ್ತದೆ. ಆತನ ಚರಿತ್ರೆಯ ಮೇಲೆ ಸ್ವಲ್ಪ ಮಟ್ಟಿಗೆ ನೈಜ ಬೆಳಕು ಚೆಲ್ಲಿದ ರಾಬರ್ಟ್ ಸೀವೆಲ್ಲನಿಗೂ ಸಹ ಶ್ರೀ ಕೃಷ್ಣದೇವರಾಯರು ಸ್ವಲ್ಪಮಟ್ಟಿಗೆ ಅಹಂಕಾರಿಯಂತೆಯೇ ಕಂಡಿರುವುದೊಂದು ಸೋಜಿಗ. ಬಿಡಿ, ಸಾರ್ವಜನಿಕ ಸೇವಾಕ್ಷೇತ್ರವೆಂಬ ಅಗ್ನಿಕುಂಡದೊಳಗೆ ನಿಸ್ವಾರ್ಥವಾಗಿ ಜ್ವಲಿಸುವವರು ಎಂದೆಂದಿಗೂ ಎದುರಿಸಬೇಕಾಗಿರುವ ಒಂದು ಅಪರಿಹಾರ್ಯ ಘಟ್ಟವದು.

ಆದರೆ ಶ್ರೀಕೃಷ್ಣದೇವರಾಯರನ್ನು ಪ್ರತ್ಯಕ್ಷ ಭೇಟಿಯಾಗಿ, ಅವರೊಡನಿದ್ದು ಅವರ ಆಡಳಿತ ವೈಖರಿಯನ್ನು ಗಮನಿಸಿ ದಾಖಲಿಸಿರುವ ಕೆಲವು ವಿದೇಶೀ ಚರಿತ್ರಕಾರರ ಡೈರಿಗಳನ್ನು ಅಭ್ಯಸಿಸಿದರೆ, ನಮ್ಮ ಬಹುತೇಕ ಚರಿತ್ರ ರಚನಾಕಾರರ ಮಯೋಪಿಯಾ ವಾಸಿಯಾಗುತ್ತದೆ. (ಅವರಿಗೆ ಆ ಚಿಕಿತ್ಸೆಯ ಮೇಲೆ ಶ್ರದ್ಧೆಯಿದ್ದಲ್ಲಿ) ಮಯೋಪಿಯಾ ಸರಿಪಡಿಸಲು ಈಗ ಆಧುನಿಕವಾಗಿ ಬಂದಿರುವ ಲೇಸರ್ ಆಧಾರಿತ ಲಾಸಿಕ್ ಚಿಕಿತ್ಸೆಯಂತೆ, ಆ ನಿಷ್ಪಕ್ಷಪಾತೀ ವಿದೇಶೀ ಪ್ರವಾಸಿಗರ ಡೈರಿಯ ದಾಖಲೆಗಳು ನಮಗೊದಗುತ್ತವೆ.

ಪೋರ್ಚುಗಲ್ ನ ರಾಜೋದ್ಯೀಗಿ ಡೆಮಿಂಗೋ ಪಯಾಸ್, ಕೃಷ್ಣದೇವರಾಯನ ಬಾಹ್ಯರೂಪವನ್ನು, ವ್ಯಕ್ತಿತ್ವವನ್ನು ಸ್ಪಷ್ಟ ಮಾತುಗಳಲ್ಲಿ ವರ್ಣಿಸಿರುವ ರೀತಿ ನೋಡಿ. ಆತನೆನ್ನುತ್ತಾನೆ, ‘ಶ್ರೀ ಕೃಷ್ಣದೇವರಾಯನದು ಎತ್ತರವೂ ಅಲ್ಲದ ಕಳ್ಳಗಿನದೂ ಅಲ್ಲದ ಮಧ್ಯಮ ಮೈಕಟ್ಟು, ಉತ್ತಮ ಶರೀರ ಛಾಯೆ. ಆತನ ಮುಖದಲ್ಲಿ ಸಿಡುಬಿನ ಕಲೆಗಳಿದ್ದರೂ ಸುಂದರಾಂಗ. ಎಂದಿಗೂ ನ್ಯಾಯ ತಪ್ಪದಿರುವ, ಎಲ್ಲರನ್ನೂ ಆದರದಿಂದ ನೋಡುವ ಶ್ರೇಷ್ಠ ದೊರೆ. ರಾಜಾಧಿರಾಜ, ರಾಜಮಾರ್ತಾಂಡ ಕೃಷ್ಣರಾಯ ಸಾರ್ವಭೌಮರೆಂಬುದು ಆತನ ಬಿರುದು. ಆತನ ಹೆಸರು ಕೇಳಿದರೆ ಎಂಥವರಾದರೂ ಹೆದರುತ್ತಿದ್ದರು’.

ವಿಜಯನಗರ ವೈಭವವನ್ನು ಸಮಗ್ರವಾಗಿ ಆಧುನಿಕ ಪ್ರಪಂಚಕ್ಕೆ ಪರಿಚಯ ಮಾಡಿಸಿದ ರಾಬರ್ಟ್ ಸೀವೆಲ್ ತನ್ನ ಪ್ರಸಿದ್ಧ ಗ್ರಂಥ, ‘A forgotten Empire’ ನಲ್ಲಿ ಇದೇ ರೀತಿಯ ಮಾತುಗಳನ್ನು ಹೇಳಿದ್ದಾನೆ. ಆತನ ಪ್ರಕಾರ ಡೆಮಿಂಗೋ ಪಯಾಸ್ ಇಲ್ಲದೇ ಹೋಗಿರುತ್ತಿದ್ದರೆ, ನಮಗೆ ಶ್ರೀ ಕೃಷ್ಣದೇವರಾಯನ ನೈಜ ವ್ಯಕ್ತಿತ್ವದ ಪರಿಚಯವಾಗುತ್ತಿರಲಿಲ್ಲ. ಆತನ ಆಡಳಿತ ವೈಖರಿಯಾಗಲಿ, ಮಂತ್ರಿಜನರೊಂದಿಗೆ, ಅಧಿಕಾರಿಗಳ ಗಣದೊಂದಿಗೆ ಹಾಗೂ ಜನಸಾಮಾನ್ಯರೊಂದಿಗೆ ಶ್ರೀಕೃಷ್ಣದೇವರಾಯರಿಗಿದ್ದ ನಿಯಂತ್ರಣ ಮತ್ತು ಸಂಬಂಧಗಳೂ ಅರ್ಥವಾಗುತ್ತಿರಲಿಲ್ಲ. 1520ರಲ್ಲಿ ತಾನು ಕಂಡ ಕೃಷ್ಣದೇವರಾಯರ ವಿಜಯನಗರವನ್ನು ಡೆಮಿಂಗೋ ಪಯಾಸ್  ಹೀಗೆ ವರ್ಣಿಸಿದ್ದಾನೆ . “ರಾಜಧಾನಿ ವಿಜಯನಗರವು,  ಏಳು ಸುತ್ತಿನ ಗೋಡೆಗಳ ಮಧ್ಯೆ ಶತ್ರುಭೇದ್ಯವಾಗಿ  ನಿರ್ಮಿಸಲ್ಪಟ್ಟಿದೆ. ನಗರದಲ್ಲಿ ಅಸಂಖ್ಯಾತ ಜಲಾಶಯಗಳಿವೆ. ನೀರು ಹರಿಯಲು ಉತ್ತಮ ವ್ಯವಸ್ಥೆ ಇದೆ. ಹಚ್ಚ ಹಸಿರು ಹೊಲಗದ್ದೆಗಳು, ಸುಂದರವಾದ ತೋಟಗಳು, ದಾರಿಯ ಇಕ್ಕೆಲಗಳಲ್ಲಿನ ಸಾಲುಮರಗಳು, ಅಚ್ಚುಕಟ್ಟಾಗಿ ನಿರ್ಮಿಸಿರುವ ಹೆದ್ದಾರಿಗಳು, ಕ್ರಮಬದ್ಧವಾಗಿ ಕಟ್ಟಲಾಗಿರುವ ಮನೆಗಳು, ಕಲಾತ್ಮಕ ಭವನಗಳು, ಎಲ್ಲ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳು, ಈ ನಗರದ ಸೌಂದರ್ಯವನ್ನು ಅಪಾರವಾಗಿ ಹೆಚ್ಚಿಸಿವೆ. ಇಲ್ಲಿನ ಅಂಗಡಿ ಬೀದಿಗಳಲ್ಲಿ ಹಲಬಗೆಯ ಕೆಂಪು ಹರಳುಗಳು ಪಚ್ಚೆ ಮುತ್ತು ರತ್ನ ಮುತ್ತು, ವಜ್ರ ವೈಢೂರ್ಯಗಳನ್ನು ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಾರೆ. ಅನೇಕ ದೇಶಗಳಿಂದ ವ್ಯಾಪಾರಿಗಳು ಬಂದು ಇಲ್ಲಿಯೇ ನಿವಾಸ ಏರ್ಪಡಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಾರೆ. ಈ ನಗರದ ವಿಶಾಲತೆ ಎಷ್ಟೆಂದು ನಾನು ಹೇಳಲಾರೆ. ಏಕೆಂದರೆ ನಾನು ಒಂದು ಎತ್ತರವಾದ ಬೆಟ್ಟದ ಮೇಲೆ ಹತ್ತಿ ನೋಡಿದರೂ ಸಹ ನಗರದ ಸ್ವಲ್ಪ ಭಾಗ ಮಾತ್ರ ಕಾಣುತ್ತದೆ. ನನಗೆ ಕಾಣಿಸಿದ ವಿಜಯನಗರದ ಒಂದು ಚಿಕ್ಕ ಭಾಗವೇ ರೋಂ ನಗರದಷ್ಟು ದೊಡ್ಡದಾಗಿದ್ದು, ಮರಗಿಡಗಳ ತೋಪುಗಳೊಂದಿಗೆ, ಮನೆಗಳಿಗೆ ಸೇರಿದಂತಹ ತೋಟಗಳೊಂದಿಗೆ, ಎತ್ತ ನೋಡಿದರೂ ಕಣ್ಣಿಗೆ ಬೀಳುವ ಕೆರೆಗಳೊಂದಿಗೆ ರಮಣೀಯವಾಗಿ ಗೋಚರಿಸುತ್ತಿತ್ತು. ಇದು ಪ್ರಪಂಚದಲ್ಲೆಲ್ಲಾ ಸಮೃದ್ಧವಾದ ದೊಡ್ಡ ನಗರವೆಂದು ಮಾತ್ರ ನಾನು ಹೇಳಬಲ್ಲೆ. 990 ಮೈಲಿ   ಉದ್ದದ ಸಮುದ್ರ ತೀರದಲ್ಲಿ 300 ಬಂದರುಗಳಿವೆ. 240 ಕೋಟಿ ವಾರ್ಷಿಕ ಆದಾಯದೊಂದಿಗೆ ಈ ವಿಶಾಲ ಸಾಮ್ರಾಜ್ಯ ಸಮೃದ್ಧವಾಗಿದೆ. ಇದನ್ನು ರಕ್ಷಿಸಲು ರಾಜನ ಹತ್ತಿರ 10 ಲಕ್ಷ ಸೈನ್ಯ 35 ಸಾವಿರ ಪದಾತಿ ದಳವಿದೆ.”

ಕೃಷ್ಣದೇವರಾಯರ ಹಿರಿಮೆಗೆ ಇಂಥ ಅನೇಕ ವಿದೇಶೀ ಯಾತ್ರಿಕರ ನಿಷ್ಪಕ್ಷಪಾತ ಅಭಿಪ್ರಾಯವು ಕನ್ನಡಿ ಹಿಡಿಯುತ್ತವೆ.

-ಕಿರಣ್ ಹೆಗ್ಗದ್ದೆ

Click to comment

Leave a Reply

Your email address will not be published. Required fields are marked *

Most Popular

To Top