National

ಹನಿ-ಹನಿ ನೀರಿನ ನೋವಿನ ಕಹಾನಿ!

ಕಳೆದ ಜೂನ್ ತಿಂಗಳಲ್ಲಿ ನೀತಿ ಆಯೋಗ ಮಂಡಿಸಿದ ವರದಿ ಹೆದರಿಕೆ ಹುಟ್ಟಿಸುವಂಥದ್ದು. ಅದರ ಪ್ರಕಾರ 2020ರ ವೇಳೆಗೆ ದೆಹಲಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ದೇಶದ 21 ಪ್ರಮುಖ ನಗರಗಳು ಅಂತರ್ಜಲದ ಪ್ರಮಾಣದಲ್ಲಿ ಶೂನ್ಯವನ್ನು ಮುಟ್ಟಲಿವೆ. ಕನಿಷ್ಠಪಕ್ಷ 10 ಕೋಟಿ ಜನ ಇದರ ಸಮಸ್ಯೆಯನ್ನು ಅನುಭವಿಸಲಿದ್ದಾರೆ. ಈಗಾಗಲೇ 60 ಕೋಟಿ ಜನ ಅಪಾರ ಪ್ರಮಾಣದ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಒಂದೆಡೆ ನೀರಿನ ಕೊರತೆಯಾದರೆ ಮತ್ತೊಂದೆಡೆ ಇರುವ ನೀರು ಶುದ್ಧವಾಗಿಲ್ಲವೆಂಬ ಸುದ್ದಿ ತಲೆಕೆಡಿಸುವಂಥದ್ದು. ನೀತಿ ಆಯೋಗದ ವರದಿಯನ್ನೇ ಒಪ್ಪುವುದಾದರೆ ದೇಶದ 70 ಪ್ರತಿಶತ ನೀರಿನ ಸೆಲೆಗಳು ಕೊಳಕಾಗಿದ್ದು ಶುದ್ಧ ನೀರಿನ ಸೆಲೆಗಳ 122 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 120ನೇ ಸ್ಥಾನದಲ್ಲಿದೆ. ಇದು ಖಂಡಿತವಾಗಿಯೂ ನೆಮ್ಮದಿಯಿಂದ ದಿನದೂಡಬಹುದಾದ ಸಮಯವಲ್ಲ. ರಾಷ್ಟ್ರ, ರಾಜ್ಯಗಳೆಲ್ಲವೂ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ. ಕಾವೇರಿ ನದಿಯನ್ನು ಸ್ವಚ್ಛಮಾಡುವಾಗ ಅದರಲ್ಲಿದ್ದ ಕೊಳಕನ್ನು ಕಂಡಿದ್ದ ನಮಗೆ ಇದೇ ಕಾವೇರಿಗಾಗಿ ಬೆಂಗಳೂರಿನಲ್ಲಿ ಬಡಿದಾಡುತ್ತೇವಲ್ಲ ಎಂದೆನಿಸಿ ಅಸಹ್ಯವಾಗಿದ್ದು ಸುಳ್ಳಲ್ಲ. ಆದರೆ ಜನರ ಸ್ವಾರ್ಥಕ್ಕೆ ಪ್ರತೀಕಾರವೆಂಬಂತೆ ಮುನಿದ ಪ್ರಕೃತಿ ಕಾವೇರಿಯನ್ನು ತಾನಾಗಿಯೇ ಶುದ್ಧಗೊಳಿಸಿಕೊಂಡು ಪ್ರವಾಹದೋಪಾದಿಯಲ್ಲಿ ಹರಿದಳು. ಅಚ್ಚರಿಯೇನು ಗೊತ್ತೇ? ಕೆಲವು ತಿಂಗಳುಗಳ ಹಿಂದೆ ಮೈದುಂಬಿ ಹರಿದಿದ್ದ ಕಾವೇರಿ ಇಂದು ಮತ್ತೆ ಒಡಲು ಬರಿದಾಗಿಸಿಕೊಂಡು ಸೊರಗಿದ್ದಾಳೆ. ಕಾವೇರಿಯ ತಟದಲ್ಲಿಯೇ ನೀರಿಗಾಗಿ ಹಾಹಾಕಾರವೆದ್ದಿದೆ. ಈ ಬೇಸಿಗೆಯಂತೂ ಕಣ್ಣೀರು ಹರಿಸಿಯೇ ಕೋಟ್ಯಂತರ ಜನ ಕಾಲ ಕಳೆದಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಆಗದೇ ಹೋದರೆ ಪರಿಸ್ಥಿತಿ ಮತ್ತೂ ಗಂಭೀರ!

ಬಹುಶಃ ಕಳೆದ ಚುನಾವಣೆಗೂ ಮುನ್ನವೇ ಭಾರತದ ಪ್ರಧಾನಿ ನರೇಂದ್ರಮೋದಿ ಇವೆಲ್ಲವನ್ನೂ ಆಲೋಚಿಸಿದ್ದರೆನಿಸುತ್ತದೆ. ಹಾಗೆಂದೇ ನೀರಿಗೆ ಸಂಬಂಧಪಟ್ಟ ಎಲ್ಲ ಖಾತೆಗಳನ್ನು ಒಟ್ಟಿಗೆ ಸೇರಿಸಿ ಜಲಶಕ್ತಿ ಎಂಬ ಖಾತೆಯೊಂದನ್ನು ಸೃಷ್ಟಿಸಿ ಅದಕ್ಕೆ ರಾಜಸ್ಥಾನದ ಗಜೇಂದ್ರಸಿಂಗ್ ಶೇಖಾವತ್ರನ್ನು ಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಜಲಶಕ್ತಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜಲ ವಿವಾದಗಳ ಕುರಿತಂತೆ ಗಮನ ಹರಿಸುತ್ತದೆ. ರಾಜ್ಯ-ರಾಜ್ಯಗಳ ನಡುವಿನ ನೀರಿನ ಕಿತ್ತಾಟಗಳ ಕುರಿತಂತೆಯೂ ಜಲಶಕ್ತಿ ವಿಶೇಷವಾದ ಮುತುವಜರ್ಿ ತೋರಿಸಲಿದೆ. ಪ್ರತಿ ನಲ್ಲಿಯಲ್ಲೂ ನೀರು ಎಂಬ ಬಿಜೆಪಿಯ ಭರವಸೆಯನ್ನು ಇಡೇರಿಸಲು ಈ ಖಾತೆ ವಿಶೇಷ ಪ್ರಯತ್ನ ಹಾಕಲಿದೆ. ಹಾಗೆ ನೋಡಿದರೆ ಹಣಕಾಸು, ರೈಲ್ವೇ, ಗೃಹ, ರಕ್ಷಣೆ, ವಿದೇಶಾಂಗಗಳಷ್ಟೇ ಮಹತ್ವವನ್ನು ಈ ಖಾತೆಗೆ ನೀಡಲಾಗುತ್ತಿದೆ. ಹೇಗೆ ರೈಲ್ವೇ ಮತ್ತು ರಸ್ತೆ ನಿಮರ್ಾಣ ಮೋದಿಯವರ ಕನಸಿನ ಕೂಸಾಗಿದ್ದವೋ ಇದೂ ಕೂಡ ಅದೇ ಹಾದಿಯಲ್ಲಿರಲಿದೆ. ಕಳೆದ ಐದು ವರ್ಷಗಳಲ್ಲಿ ಮೋದಿ ಅಡುಗೆಮನೆಯನ್ನೇ ಕೇಂದ್ರವಾಗಿಟ್ಟುಕೊಂಡು ಅಭಿವೃದ್ಧಿ ಕಾರ್ಯ ಮಾಡಿದ್ದರು. ಮನೆಯಲ್ಲಿರುವ ಹೆಣ್ಣುಮಗುವಿಗೆ ವಿದ್ಯುತ್ತು, ಗ್ಯಾಸು, ಇವುಗಳನ್ನು ಕೊಟ್ಟು ಅವರ ಆನಂದವನ್ನು ಮತವಾಗಿ ಪರಿವತರ್ಿಸಿಕೊಂಡಿದ್ದರು. ಅವರ ಈ ಬಾರಿಯ ನೀರಿನ ಕುರಿತಂತಹ ಆಸ್ಥೆ ನೋಡಿದರೆ ಮುಂದಿನ ಐದು ವರ್ಷಗಳಲ್ಲಿ ಇದನ್ನೇ ಕೇಂದ್ರವಾಗಿಟ್ಟುಕೊಂಡು ಹೆಣ್ಣುಮಕ್ಕಳ ಮನಸ್ಸನ್ನು ಮೋದಿ ಗೆಲ್ಲಲಿದ್ದಾರೆ ಎನಿಸುತ್ತದೆ. ಜಲಶಕ್ತಿ ನದಿ ಜೋಡಣೆಗಳ ಕುರಿತಂತೆಯೂ ಬಲವಾದ ಹೆಜ್ಜೆ ಇಡುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ದಕ್ಷಿಣದ ಕೃಷಿ ಭೂಮಿಗೆ ಸಾಕಷ್ಟು ನೀರು ತಲುಪಿಸುವ ಮೋದಿಯವರ ಕನಸೂ ಸಾಕಾರವಾಗಬಹುದು. ಹಾಗಾದರೆ ಅಡುಗೆಮನೆಯಲ್ಲಿರುವ ಹೆಣ್ಣುಮಗುವಷ್ಟೇ ಅಲ್ಲದೇ ಹೊಲದಲ್ಲಿ ದುಡಿಯುವ ರೈತನೂ ಮುಂದಿನ ಬಾರಿ ಮೋದಿಯವರಿಗೆ ಮತ ಹಾಕುವಾಗ ಹೆಮ್ಮೆ ಪಡಬಹುದು. ಇದು ದಕ್ಷಿಣದಲ್ಲಿ ಕೊರತೆಯಿರುವ ಬಿಜೆಪಿಯ ಸೀಟುಗಳನ್ನು ಮುಂದಿನ ಬಾರಿ ತುಂಬಿಸಿಯೂ ಕೊಡಬಲ್ಲುದು.


ನನಗೆ ಗೊತ್ತು. ಲೋಕಸಭಾ ಚುನಾವಣೆಗೆ ಇನ್ನೂ ಐದು ವರ್ಷ ಬಾಕಿ ಇದೆ. ಈಗಲೇ ಅದರ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಆದರೆ ನರೇಂದ್ರಮೋದಿ ಇತರ ಎಮ್ಪಿಗಳಂತಲ್ಲ. ಅವರು ಚುನಾವಣೆ ನಡೆಯುತ್ತಿರುವಾಗಲೇ ಅಧಿಕಾರಕ್ಕೆ ಬಂದ ಮೊದಲ ನೂರು ದಿನದಲ್ಲಿ ಮಾಡಬೇಕಾದ ಕೆಲಸಗಳ ರೂಪುರೇಶೆ ತಯಾರಿಸುವಂತೆ ನೀತಿ ಆಯೋಗಕ್ಕೆ ಹೇಳಿದ್ದರು. ನಮ್ಮೆಲ್ಲ ಸಂಸದರು ದೇವಸ್ಥಾನಗಳಿಗೆ ಹೋಗುತ್ತಾ, ಅಭಿನಂದನೆ ಸ್ವೀಕಾರ ಸಮಾರಂಭದಲ್ಲಿ ಮೈಮರೆತು ಕುಳಿತಿದ್ದರೆ ನರೇಂದ್ರಮೋದಿ ಅದಾಗಲೇ ಕೆಲಸವನ್ನು ಆರಂಭಿಸಿ ಪುರಸೊತ್ತಿಲ್ಲದಂತೆ ದುಡಿಯುತ್ತಿದ್ದಾರೆ. ಏಕೆಂದರೆ ಅವರಿಗೆ ಚೆನ್ನಾಗಿ ಗೊತ್ತಿದೆ. ರಸ್ತೆ, ವಿದ್ಯುತ್, ಗ್ಯಾಸ್ ಇವೆಲ್ಲವೂ ಉತ್ತರ ಭಾರತದಲ್ಲಿ ಮಾಡಿದ ಮ್ಯಾಜಿಕ್ ಅನ್ನು ದಕ್ಷಿಣ ಭಾರತದಲ್ಲಿ ಮಾಡಲಿಲ್ಲ. ಹಿಂದುತ್ವದ ಆಧಾರದ ಮೇಲೆಯೇ ಗೆಲ್ಲಬೇಕು ಎನ್ನುವುದಾದರೆ ಶಬರಿಮಲೆ ಪ್ರಕರಣ ಕೇರಳದಲ್ಲಿ ಲಾಭವನ್ನೇನೂ ತಂದುಕೊಡಲಿಲ್ಲ. ದಕ್ಷಿಣವನ್ನು ಗೆಲ್ಲಲು ಅವರಿಗೆ ವಿಕಾಸದ ಬಲವಾದ ಹೆದ್ದಾರಿಯೇ ಬೇಕು. 300ರ ಸಂಖ್ಯೆಯನ್ನು ವೃದ್ಧಿಸಿಕೊಳ್ಳಲು ಅವರು ಹೊಸ ಹಾದಿಯಲ್ಲೇ ಹೆಜ್ಜೆ ಇಡಬೇಕು. ನೀರು ಒಂದು ಸ್ಪಷ್ಟ ರಾಜಮಾರ್ಗ. ಅದರಲ್ಲೂ ದಕ್ಷಿಣ ಭಾರತ ಭಯಾನಕವಾದ ಕ್ಷಾಮವನ್ನು ಎದುರಿಸುವ ಭೀತಿಯಲ್ಲಿರುವಾಗ ಇಂಥದ್ದೊಂದು ಪ್ರಯತ್ನವನ್ನು ನರೇಂದ್ರಮೋದಿ ಮಾಡಿ ಯಶಸ್ವಿಯಾಗಿಬಿಟ್ಟರೆ ಅವರ ಅಶ್ವಮೇಧದ ಕುದುರೆಯನ್ನು ಇಲ್ಲಿ ಯಾರೂ ಕಟ್ಟಿಹಾಕಲಾರರು.

ನೀರು ಯುದ್ಧಕ್ಕೆ ಕಾರಣವಾಗುತ್ತದೆ ಎಂಬುದನ್ನು ಚಿಕ್ಕಂದಿನಲ್ಲಿರುವಾಗ ಪ್ರಬಂಧಗಳಲ್ಲಿ ಬರೆಯುತ್ತಿದ್ದೆವು. ಆದರೆ ಈಗ ಅದರ ಸಮಸ್ಯೆ ಅರಿವಾಗುತ್ತಿದೆ. ಪ್ರಧಾನಿ ಮಾಡುತ್ತಾರೋ ಬಿಡುತ್ತಾರೋ, ಸಂಸದರು ತಲೆಕೆಡಿಸಿಕೊಳ್ಳುತ್ತಾರೊ ಬಿಡುತ್ತಾರೊ; ನೀರಿನ ಅನಿವಾರ್ಯತೆಯಂತೂ ನಮಗಿದೆ. ಹನಿ-ಹನಿಯನ್ನು ಉಳಿಸೋಣ. ಮಳೆಯ ನೀರನ್ನು ಕಾಪಿಡೋಣ. ನಮ್ಮ ಮನೆಯ ಜಲಶಕ್ತಿ ಖಾತೆಯ ಮಂತ್ರಿ ನಾವೇ ಆಗಿ ಎಲ್ಲರ ಮೊಗದಲ್ಲೂ ಮಂದಹಾಸ ಮಿನುಗುವಂತೆ ನೋಡಿಕೊಳ್ಳೋಣ, ಏಕೆಂದರೆ ನೀರಿಲ್ಲದೇ ಬದುಕಿಲ್ಲ, ನೀರಿಲ್ಲದೇ ನೆಮ್ಮದಿಯಿಲ್ಲ. ನೀರಿಲ್ಲದೆ ನಾಗರಿಕತೆಯೂ ಇಲ್ಲ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    June 4, 2019 at 4:00 am

    ನಮ್ಮ ಜನಗಳಿಗೆ ನೀರಿನ ಬೆಲೆ ತಿಳಿದಿಲ್ಲ. ಬಳಕೆಗಿಂತಾ ಪೋಲು ಹೆಚ್ಚು. ಮೊದಲು ಬೆಳಗಾಗೆದ್ದು ಮನೆಮುಂದೆ ಬಕೆಟ್ ಗಟ್ಟಲೆ ನೀರು ಸುರಿಯುವುದನ್ನು ನಿಷೇಧಿಸಬೇಕು. ಅದು ರಸ್ತೆಯೆಲ್ಲಾ ಹರಿದು ರಸ್ತೆಟ್ಯಾಕ್ಸ ಕಟ್ಟಿ ಓಡಾಡುವವರಿಗೆ ತೊಂದರೆ ಉಂಟು ಮಾಡಿ ರಸ್ತೆ ಯ ಲೈಫ್ ಕಡಿಮೆ ಆಗತ್ತೆ.ಕುಡಿಯುವ ನೀರಿನ ಪೈಪ್ಹಾಕಿ ಟೂವೀಲರ್ ಫೊರ್ವೀಲರ್ ತೊಳೆಯುವವರ ಕಿರಿಕಿರಿ ಮತ್ತೊಂದು. ತೊಳೆಯಲು ಆರಂಭಿಸಿದರೆ ನೀರು ನಿಲ್ಲುವವರೆಗೂ ತೊಳೆಯುವುದು ಮುಗಿಯಲ್ಲ.
    ಈಗಾಗಲೆ ಚೆನೈನಲ್ಲಿ ನೀರಿಲ್ದೆ ಹಲವು ಏರಿಯಾಗಳಿಂದ ಜನ ಗುಳೆ ಹೋಗುತ್ತಿದ್ದಾರೆ.ಬೆಂಗಳೂರಿನಲ್ಲಿ ಯಾವಾಗ ಆರಂಭ ಆಗುತ್ತೋ ಗೊತ್ತಿಲ್ಲ. ಇಷ್ಟು ವರ್ಷ ಹಳ್ಳಿಜನ ಗುಳೆ ಹೋಗುತ್ತಿದ್ದಾಗ ಸಿಟಿಬಂದು ಸೇರ್ತಾರೆ ಅಂತ ವ್ಯಾಖ್ಯಾನ ಮಾಡುತ್ತಿದ್ದ ಬುಜೀಗಳು ಈಗ ಏನು ಹೇಳ್ತಾರೋ.

Leave a Reply

Your email address will not be published. Required fields are marked *

Most Popular

To Top