National

ಸೈನಿಕ ಲಚಿತ್, ಲಚಿತ್ ಬರ್ಫುಕಾನ್ ಆದ ಕಥೆ!

ಪೂರ್ವ ಭಾರತದ ಬಲಹಸ್ತದಂತಿರುವ ಬೃಹತ್ ರಾಜ್ಯ ಅಸ್ಸಾಂ. ವಿಸ್ತಾರ ಅರಣ್ಯ ಪ್ರದೇಶ, ಅಷ್ಟೇ ವಿಸ್ತಾರವಾದ ಬಯಲುಭೂಮಿ, ಗಗನಚುಂಬಿ ಪರ್ವತಗಳ ಮಧ್ಯೆಯೇ ಮೈಲುಗಟ್ಟಲೆ ಹರಡಿಕೊಂಡು ಮೈದುಂಬಿ ಹರಿವ ಭೀಮ, ಗಂಭೀರನಾದ ನದರಾಜ, ಬ್ರಹ್ಮಪುತ್ರನ ವೈಭವ ಇವುಗಳು ಅಸ್ಸಾಮಿಗೆ ಶತ್ರುಗಳಿಂದ ಸಹಜ ರಕ್ಷಣೆಯನ್ನು ಒದಗಿಸಿರುವ ಅಂಶಗಳು. ಬ್ರಹ್ಮಪುತ್ರ ನದಿಯ ಮೈಕಟ್ಟು ಕೆಲವೆಡೆ 9 ಮೈಲಿಗಳಷ್ಟು ಅಗಲವಾಗಿದೆ. ಗೌಹಾತಿಯ ಬಳಿ ಮಾತ್ರ ಅದು ಒಂದು ಮೈಲಿಯಷ್ಟು ಅಗಲವಿದೆ. ಅಂತೆಯೇ ಶತ್ರುಗಳಿಗೆ ಅಸ್ಸಾಂ ಪ್ರವೇಶಿಸಲು ಇರುವ ಆಯಕಟ್ಟಿನ ಜಾಗವೆಂದರೆ ಅದು ಗೌಹಾಟಿ ಪ್ರದೇಶವೇ. ಈ ಭೌಗೋಳಿಕ ಕಾರಣದಿಂದಲೇ ಅಹೋಂ ಗಣರಾಜ್ಯದ ಸೇನಾಬಲವು ಸಂಕೀರ್ಣವೂ ಶಕ್ತಿಶಾಲಿಯೂ ಆಗಿತ್ತು. ಬಯಲಲ್ಲಿ ನಿಂತು ಕಾದುವ ಕಾಲ್ದಳದಷ್ಟೇ ಸಮರ್ಥವಾದ ನೌಕಾ ಸೈನ್ಯವನ್ನು ಅಹೋಂ ಅರಸರು ಹೊಂದಿದ್ದರು.

‘ಬೋರ್ ಬರುವ’ – ಇದು ಅಸ್ಸಾಂ ಸೇನಾ ದಂಡನಾಯಕನಿಗಿಂತ ಒಂದು ಹುದ್ದೆ ಮೇಲಿನದು. ಲಚಿತ್ ನ ತಂದೆ ಮೊಮೈ ತಾಮೂಲಿ, ಆಗಿನ ಅಹೋಂ ಗಣರಾಜ್ಯದ ಮಹಾದಂಡನಾಯಕನಾಗಿದ್ದವ (ಬೋರ್ಬರುವ). ಆಗಿನ ಅಹೋಂ ಸಾಮ್ರಾಟ್ ಚಕ್ರಧ್ವಜ ರಾಜನ ಬಲಗೈ ಬಂಟನಂತಿದ್ದವ ಈ ಮೊಮೈತಾಮೂಲಿ. ಈತ ದಶಕಗಳ ಕಾಲ ಮೊಘಲ್ ದಾಳಿಯನ್ನು ಸಮರ್ಥವಾಗಿ ಹತ್ತಿಕ್ಕಿದ್ದ.

ಷಹಜಹಾನನ ಸರದಾರನಾಗಿದ್ದ ಅಲ್ಲಾಯಾರ್ ಖಾನನು 1639ರಲ್ಲಿ ಈ  ಗೌಹಾಟಿಯ ಆಯಕಟ್ಟಿನ ಜಾಗದ ಮೂಲಕವೇ ಅಸ್ಸಾಂಗೆ ಕಾಲಿಟ್ಟಿದ್ದ. ರಾಜಾ ಜಯಧ್ವಜಸಿಂಹ ಅವನನ್ನು ಹೊಡೆದೋಡಿಸಿದ್ದ. ನಂತರದ ಸರದಿ ಔರಂಗಜೇಬನ ಸರದಾರನಾಗಿದ್ದ ಮೀರ್ ಜುಮ್ಲಾನದ್ದು. ಈತ ಅಸ್ಸಾಂಗೆ ಕಾಲಿಟ್ಟೊಡನೆಯೇ ಗೌಹಾಟಿ ದಂಡನಾಯಕನಿಗೆ ಲಂಚಕೊಟ್ಟು, ಆಗಿನ ರಾಜಧಾನಿ ಗಾರ್ ಗಾಂವ್ ಕಡೆ ಹೊರಟ. ಗಾರ್ಗಾವಿನ ರಾಜ ಪಲಾಯನ ಮಾಡಿದ್ದರಿಂದಾಗಿ ಆ ಸ್ಥಳ ಸುಲಭವಾಗಿ ಜುಮ್ಲಾನ ಕೈವಶವಾಯ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಮೊಗಲ್ ಸೈನಿಕರಿಗೆ ಬಹುಕಾಲ ಅಲ್ಲಿ ತಳವೂರಲು ಆಗಲಿಲ್ಲ. ಮುಂದಿನ ದಾರಿ? ಅಂದಿನ ಮೊಘಲ್ ಪದ್ಧತಿಯಂತೆ ಕಪ್ಪಕಾಣಿಕೆ ಮತ್ತು ಸಂಧಿ. ಸಂಧಿಯ ರೂಪವಾಗಿ ಅಹೋಂ ಗಣರಾಜ್ಯದ ರಾಜಕುಮಾರಿಯನ್ನು ತನ್ನ ಜೊತೆ ಕರೆದೊಯ್ದ ಜುಮ್ಲಾ, ಪ್ರತಿ ವರ್ಷ ಅಹೋಂ ಅರಸರು ಕಪ್ಪದ ರೂಪದಲ್ಲಿ 60 ಆನೆಗಳನ್ನು ಕೊಡಬೇಕೆಂಬ ಶರತ್ತಿಗೂ ತಲೆಬಾಗುವಂತೆ ಮಾಡಿದ್ದ.

ತರುಣ ಲಚಿತ್ ಇವನ್ನೆಲ್ಲಾ ಗಮನಿಸಿಕೊಂಡಿದ್ದ. ಆತ ಈಗಾಗಲೇ ತನ್ನ ತಂದೆಯೊಂದಿಗೆ ಅನೇಕ ಹೋರಾಟಗಳಲ್ಲಿ ಭಾಗಿಯಾಗಿ ತನ್ನ ಪರಾಕ್ರಮ ಮೆರೆದಿದ್ದ. ಆತನಿಗೆ ಸಮರ್ಥ ಗುರುಗಳಿಂದ ಧಾರ್ಮಿಕ ಶಿಕ್ಷಣ ಹಾಗೂ ಯುದ್ಧವಿದ್ಯೆಯು ಲಭಿಸಿತ್ತು. ಸೈನಿಕರ ಮಧ್ಯೆ ಆತ ತನ್ನ ಅಪ್ರತಿಮ ತರ್ಕಶಕ್ತಿ, ನಿರ್ಣಯ ಸಾಮರ್ಥ್ಯ ಹಾಗೂ ಶೌರ್ಯಕ್ಕೆ ಹೆಸರಾಗಿದ್ದ. ಮೀರ್ ಜುಮ್ಲಾನ ವರ್ತನೆಯಿಂದ ಕುದ್ದುಹೋಗಿದ್ದ ಲಚಿತ್, ಅವನನ್ನು ಅಟ್ಟಿಸಿಕೊಂಡು ಹೋಗಿ ಅಹೋಂ ರಾಜಕುಮಾರಿಯನ್ನು ಮರಳಿ ತರುವ ಪ್ರಯತ್ನವನ್ನೂ ಮಾಡಿದ್ದ. ಮೀರ್ ಜುಮ್ಲಾನೊಂದಿಗೆ ತನ್ನ ಸಾಮಂತ, ಗುರ್ ಗಾವ್ ರಾಜನು ಮಾಡಿಕೊಂಡ ಅವಮಾನಕರ ಸಂಧಿಯು, ಅಹೋಂ ಸಾಮ್ರಾಟ ಜಯಧ್ವಜನಿಗೂ ಬೇಸರ ಮೂಡಿಸಿತ್ತು.

ಸರಿ, ಯುದ್ಧ ಸಿದ್ಧತೆಗಳು ಶುರುವಾದವು. ಅಸ್ಸಾಂನಲ್ಲಿ ನದಿಗಳು ಬಹಳವಿದ್ದುದರಿಂದ ನೌಕಾಪಡೆಯನ್ನು ಬಲಿಷ್ಠಗೊಳಿಸಲಾಯ್ತು. ಪಕ್ಕದ ಖಾಸಿ, ಜಯಂತಿಯಾ ಮತ್ತು ಕಚಾರಿಯಾದ ದೊರೆಗಳ ಸಹಾಯಹಸ್ತವನ್ನು ಪಡೆಯಲಾಯಿತು. ಈ ಸಿದ್ಧತೆಗಳು ನಡೆಯುತ್ತಿರುವಾಗಲೇ ಜಯಧ್ವಜಸಿಂಹ ಖಾಯಿಲೆ ಬಿದ್ದ. ಮೊಘಲರಿಂದ ಪಶ್ಚಿಮದ ತಮ್ಮ ಸ್ವಂತ ನೆಲವನ್ನು ವಶಪಡಿಸಿಕೊಳ್ಳಲೇಬೇಕೆನ್ನುವ ಯುವರಾಜ ಚಕ್ರಧ್ವಜಸಿಂಹನಿಂದ ಪಡೆದ. ಪ್ರಾಣಬಿಟ್ಟ. ಈಗ ಚಕ್ರಧ್ವಜಸಿಂಹನ ಎದುರಿಗಿದ್ದ ಸವಾಲು ಸಾಗರ ಸದೃಶವಾಗಿತ್ತು. ಏಕೆಂದರೆ ಆತನೀಗ ಎದುರಿಸಬೇಕಾಗಿದ್ದುದು ಔರಂಗಜೇಬನ ಸರದಾರನಾಗಿದ್ದ ರಾಮಸಿಂಹನನ್ನು. ರಾಮಸಿಂಹನು ಸಿಕ್ಕರ ಸೈನ್ಯವನ್ನೂ ತೆಗೆದುಕೊಂಡು ಮೂರು ಲಕ್ಷಜನ ಸೈನಿಕರೊಂದಿಗೆ ಪ್ರವಾಹದೋಪಾದಿಯಲ್ಲಿ ಅಸ್ಸಾಮಿನೆಡೆಗೆ ದಂಡು ತೆಗೆದು ಬರುತ್ತಿದ್ದ. ಹಿಂದೂಗಳ ಮೇಲೆ ಹಿಂದೂ ಅರಸರನ್ನೇ ಎತ್ತಿಕಟ್ಟುವ ಅಸಲೀ ಅರಬ್ಬೀ ರಣನೀತಿಯದು. ಯುದ್ಧದಲ್ಲಿ ಯಾರು ಸತ್ತರೂ ಯಶಸ್ಸು ಮೊಘಲರಿಗೇ. ಛತ್ರಪತಿ ಶಿವಾಜಿಯನ್ನು ತನ್ನಿಂದ ರಕ್ಷಿಸಿದ್ದ ರಾಮಸಿಂಹನಿಗೆ ಔರಂಗಜೇಬ ಹೀಗೆ ಪರೋಕ್ಷವಾಗಿ ಶಿಕ್ಷಿಸಿದ್ದ.

ಇಂತಹ ವಿಷಯಗಳನ್ನು ಯಶಸ್ವಿಯಾಗಿ ಎದುರಿಸಬಲ್ಲ ಸಾಮರ್ಥ್ಯ ಲಚಿತನಿಗಿದೆ ಎಂಬುದನ್ನು ಚಕ್ರಧ್ವಜ ಗುರುತಿಸಿದ್ದ. ಅವನನ್ನು ಅರಮನೆಗೆ ಕರೆಸಿದ. ಆಗ ಆ ರಾಜ ದರ್ಬಾರಿನಲ್ಲಿ ಒಂದು ವಿಚಿತ್ರ ಘಟನೆ ನಡೆಯಿತು. ಪದವಿ ಸ್ವೀಕರಿಸಲು ಅರಸನಿಗೆ ತಲೆಬಾಗಿದ್ದ ಲಚಿತ್ ನ ಪೇಟವನ್ನು ರಾಜನ ಅಂಗರಕ್ಷಕ ಕಿತ್ತುಕೊಂಡು ಓಡಿಬಿಡುತ್ತಾನೆ. ಅವನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದ ಲಚಿತ್, ಅವನ ಮೇಲೆ ಕತ್ತಿ ಎತ್ತುತ್ತಾನೆ. ಚಕ್ರಧ್ವಜ ಏರುಧ್ವನಿಯಲ್ಲಿ ‘ನನ್ನೆದುರಲ್ಲೇ ಕತ್ತಿ ಎತ್ತುತ್ತಿರುವೆಯಾ?’ ಎಂದು ಪ್ರಶ್ನಿಸಿದಾಗ, ಲಚಿತ್, ‘ಮಹಾಪ್ರಭು ಇವನು ನನ್ನ ಪೇಟವನ್ನು ಹಾರಿಸಿದ್ದಾನೆ. ಇಂತಹ ಅವಮಾನವನ್ನು ಯಾವ ಯೋಧನೂ ಸಹಿಸಲಾರ. ಇದು ನನ್ನ ಗೌರವದ ಪ್ರಶ್ನೆ’ ಎಂದು ಧೈರ್ಯದಿಂದ ಉತ್ತರಿಸುತ್ತಾನೆ. ರಾಜನೊಡ್ಡಿದ್ದ ಪರೀಕ್ಷೆಯಲ್ಲಿ ಲಚಿತ್ ಉತ್ತೀರ್ಣನಾಗುತ್ತಾನೆ.

ಹೀಗೆ ಗೌರವವನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಕಾಣುವ ಲಚಿತ್ ನಿಗೆ ಚಕ್ರಧ್ವಜ ರಾಜ ತನ್ನ ಕೈಯಿಂದಲೇ ಪೇಟ ತೊಡಿಸಿ ದಂಡನಾಯಕ ಪದವಿಯಿತ್ತು ಗೌರವಿಸುತ್ತಾನೆ. ಸೈನಿಕ ಲಿಚಿತ್, ಲಚಿತ್ ಬರ್ಫುಖನ್ ಆಗಿ ಬೆಳೆದ ರೀತಿಯಿದು!

– ಕಿರಣ್ ಹೆಗ್ಗದ್ದೆ

Click to comment

Leave a Reply

Your email address will not be published. Required fields are marked *

Most Popular

To Top