Desi

ಸಸ್ಯಶಾಸ್ತ್ರದಲ್ಲಿ ಪದ್ಮಶ್ರೀಯನ್ನು ಸ್ವೀಕರಿಸಿದ ಮೊದಲ ಮಹಿಳೆ!

ಈಕೆ ಜಾನಕಿ ಅಮ್ಮಲ್.  ಇವರು ಜನಿಸಿದ್ದು 1897 ರಲ್ಲಿ ಕೇರಳದಲ್ಲಿ. ಈಕೆಯ ತಂದೆ ಮದ್ರಾಸ್ ಸಂಸ್ಥಾನದಲ್ಲಿ ದಿವಾನರಾಗಿದ್ದರು. ತಂದೆಗೆ ಪ್ರಾಕೃತಿಕ ವಿಜ್ಞಾನದಲ್ಲಿ ಅಪಾರ ಆಸಕ್ತಿ. ಇದೇ ಮಗಳಿಗೆ ಬಳುವಳಿಯಾಗಿ ಬಂತು. ಓದಿನಲ್ಲಿ ಬಹಳ ಚುರುಕಿದ್ದ ಜಾನಕಿ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದುಕೊಂಡರು‌. ಮನೆಯಲ್ಲಿ ಅವರ ಮದುವೆಯ ಮಾತುಕತೆ ನಡೆಯುತ್ತಿತ್ತು. ಇದೇ ಸಮಯಕ್ಕೆ ಸರಿಯಾಗಿ ಅಮೇರಿಕಾದ ಮಿಶಿಗನ್ ವಿಶ್ವವಿದ್ಯಾಲಯದಿಂದ ಆಕೆಗೆ ಮುಂದೆ ಓದಲು ವಿದ್ಯಾರ್ಥಿ ವೇತನ ದೊರೆಯಿತು‌. ಮದುವೆ ಮತ್ತು ಶಿಕ್ಷಣದಲ್ಲಿ ಶಿಕ್ಷಣವನ್ನೇ ಆಯ್ಕೆ ಮಾಡಿಕೊಂಡರು ಜಾನಕಿ. ಅಮೇರಿಕಾಗೆ ತೆರಳಿ ಪದವಿ ಗಳಿಸಿ, ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದುಕೊಂಡರು!

ಭಾರತಕ್ಕೆ ಮರಳಿದ ನಂತರ ಕಬ್ಬಿನ ತಳಿಗಳ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜಾನಕಿ ಅವರು ಕಬ್ಬಿನ ಕುರಿತು ಹಲವು ಸಂಶೋಧನೆಗಳನ್ನು ಮಾಡಿ ಯಶಸ್ವಿಯಾದರು. Indian Institute of Science ನ ಮೊದಲ ನಿರ್ದೇಶಕರಾಗಿದ್ದ ಸಿ.ವಿ.ರಾಮನ್ ಅವರು ಮೊದಲ ವರ್ಷದಲ್ಲೇ ಇವರನ್ನು ಸಂಶೋಧಕರಾಗಿ ಆಯ್ಕೆ ಮಾಡಿಕೊಂಡರು. ಆದರೆ ಜಾತಿ ಪದ್ಧತಿ ಹೆಚ್ಚು ಪ್ರಚಲಿತವಿದ್ದದ್ದರಿಂದ ಜಾನಕಿ ಅವರು ತೀವ್ರ ತೊಂದರೆಗಳನ್ನು ಎದುರಿಸಬೇಕಾಗಿ ಬಂತು. ಅದೂ ಅಲ್ಲದೇ ಆಕೆ ಮದುವೆಯಾಗದೇ ಉಳಿದ ಹೆಂಗಸು. ಈ ಎಲ್ಲವನ್ನೂ ಎದುರಿಸಿ ನಿಂತರು ಜಾನಕಿ ಅಮ್ಮಲ್! ಹಲವು ವಿರೋಧಗಳ ನಡುವೆಯೂ ಕೆಲಸ ಮಾಡಿದರು. ಇನ್ನು ಅಧ್ಯಯನದ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿಲ್ಲವೆಂದಾಗ ಲಂಡನ್ ಕಡೆ ಮುಖ ಮಾಡಿದರು.

ಜಾನಕಿ ಅವರು ಲಂಡನ್ ಗೆ ತೆರಳಿ ಸಸ್ಯಶಾಸ್ತ್ರದ ಸಂಶೋಧನೆಗಳಲ್ಲಿ ತೊಡಗಿಕೊಂಡರು. ಮಗ್ನೋಲಿಯಾ ಎಂಬ ಸಸ್ಯದ ಮೇಲಿನ ಅವರ ಸಂಶೋಧನೆಯನ್ನು ಕಂಡು ಆ ಸಸ್ಯದ ಬಿಳಿ ಬಗೆಯ ಹೂವಿಗೆ ‘ಮಗ್ನೋಲಿಯಾ ಕೊಬುಸ್ ಜಾನಕಿ ಅಮ್ಮಲ್’ ಎಂಬ ಹೆಸರಿಡಲಾಗಿದೆ. 1951 ರಲ್ಲಿ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾದ ವಿಶೇಷ ಅಧಿಕಾರಿಯಾಗಿ ಆಯ್ಕೆಗೊಂಡರು. ಇದೇ ವೇಳೆಯಲ್ಲಿ ಭಾರತದ ಉದ್ದಗಲಕ್ಕೂ ತಿರುಗಾಡಿ ಪರಿಸರಕ್ಕಾಗುತ್ತಿರುವ, ಅತ್ಯಾಚಾರದ ವಿರುದ್ಧ ಕೇರಳದಲ್ಲಿ ಜಲವಿದ್ಯುತ್ ಡ್ಯಾಂನಿಂದ ಆಗುವ ಭೀಕರ ತೊಂದರೆಗಳ ವಿರುದ್ಧ ಪ್ರತಿಭಟನೆ ನಡೆಸಿದರು.

1977 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯಿತು. 1984 ರಲ್ಲಿ ತಮ್ಮ ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗಲೇ ತೀರಿಕೊಂಡರು! 87 ವರ್ಷ ಜೀವನ ನಡೆಸಿದ ಅವರು, ಕೊನೆಯ ಉಸಿರಿನವರೆಗೂ ಶಿಕ್ಷಣ ಹಾಗೂ ಸಂಶೋಧನೆಗಾಗಿಯೇ ಬದುಕಿದ್ದರು!

ಜಾನಕಿ ಅಮ್ಮಲ್ ಸಸ್ಯಶಾಸ್ತ್ರದಲ್ಲಿ ಪದ್ಮಶ್ರೀಯನ್ನು ಸ್ವೀಕರಿಸಿದ ಮೊದಲ ಮಹಿಳೆ!

Click to comment

Leave a Reply

Your email address will not be published. Required fields are marked *

Most Popular

To Top