Desi

ಸಮಾಜಕ್ಕಾಗಿಯೇ ಬದುಕಿದವರ ಸಾವು ಅದೆಷ್ಟು ರೋಚಕ!

ಮೊನ್ನೆ ತಾನೆ ಮಂಗಳೂರಿನಲ್ಲಿ ತಪಸ್ವಿಯೋರ್ವನ ಅಂತ್ಯವಾಯ್ತು. ತ್ಯಾಗ ಮತ್ತು ಸೇವೆಗಳನ್ನೇ ಉಸಿರಾಡುತ್ತಿದ್ದ ಅಪ್ರತಿಮವಾದ ವ್ಯಕ್ತಿ ಆತ. ತನ್ನದೆನ್ನುವುದೇನೂ ಇಲ್ಲ, ಎಲ್ಲವೂ ಸಮಾಜಕ್ಕೇ ಸೇರಿದ್ದು ಎಂಬ ಭಾವನೆಯಿಂದಲೇ ಬದುಕಿನ 8 ದಶಕಗಳನ್ನು ಕಳೆದ ವಾಸುದೇವ್ ಶಣೈ, ಎಲ್ಲರ ಪ್ರೀತಿಯ ವಾಸಣ್ಣ ಕೊನೆಯುಸಿರೆಳೆದರು. ತೀರಿಕೊಳ್ಳುವುದಕ್ಕೂ ಕೆಲವು ವರ್ಷಗಳ ಮುನ್ನ ಅಪಘಾತಕ್ಕೊಳಗಾಗಿ ಕೋಮಾಕ್ಕೆ ಹೋಗಿ ತನ್ನ ಪತ್ನಿಯನ್ನೂ ಗುರುತಿಸಲಾಗದ ಸ್ಥಿತಿಯಲ್ಲಿ ಒಂದು ವರ್ಷಗಳ ಕಾಲ ಇದ್ದರು. ಆನಂತರ ತನ್ನನ್ನು ತಾಯಿಯಂತೆ ನೋಡಿಕೊಂಡ ಪತ್ನಿ ಸುಮತಿ ಅಕ್ಕಳನ್ನು ಗುರುತಿಸಲಾರಂಭಿಸಿದರಲ್ಲದೇ ಆಕೆಯ ಆಜ್ಞೆಗೆ ಪ್ರತಿಸ್ಪಂದಿಸಲಾರಂಭಿಸಿದರು. ತಾನೇ ಬೆವರು ಹರಿಸಿ ಕಟ್ಟಿದ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ತಾನೇ ಹಿರಿಯ ವಿದ್ಯಾಥರ್ಿಯೂ ಆಗಿಬಿಟ್ಟರು. ಈ ಹೊತ್ತಿನಲ್ಲಿಯೇ ಅವರನ್ನೊಮ್ಮೆ ನೋಡಲು ನಾನು ಹೋಗಿದ್ದೆ. ಅವರು ಬದುಕಿದ ರೀತಿಯನ್ನು ಅರಿತಿದ್ದ ನಾನು ಅಲ್ಲಿಯೇ ಕುಚರ್ಿಯೊಂದರಲ್ಲಿ ಕುಳಿತಿದ್ದ ವಾಸಣ್ಣನ ಕಾಲಿಗೆ ನಮಸ್ಕಾರ ಮಾಡಿದೆ. ಅವರು ಕೆಂಡಾಮಂಡಲವಾಗಿ ಬಿಟ್ಟರು. ಕಾಲು ಹಿಡಿದಿದ್ದು ಅವರಿಗೆ ಕೋಪ ಬಂದಂತಿತ್ತು. ನನ್ನ ಮೇಲೆ ಕೂಗಾಡಿಬಿಟ್ಟರು. ನಾನು ಪ್ರತಿಕ್ರಿಯಿಸಲಿಲ್ಲ. ಅಷ್ಟರ ವೇಳೆಗೆ ಅಲ್ಲಿಗೆ ಬಂದ ಸುಮತಿ ಅಕ್ಕ ನನ್ನ ಕೈ ಹಿಡಿದು ಅವರ ಬಳಿ ಹೋಗಿ ‘ಇವರು ಸಂಘದ ಸ್ವಯಂ ಸೇವಕರು. ಸಮಾಜದ ಕೆಲಸ ಚೆನ್ನಾಗಿ ಮಾಡುತ್ತಾರೆ’ ಎಂದು ಹೇಳಿದ್ದಷ್ಟೇ, ಕುಚರ್ಿಯ ಮೇಲೆ ಕುಳಿತಿದ್ದ ವ್ಯಕ್ತಿ ಎದ್ದು ನಿಂತುಬಿಟ್ಟರು. ಆ ಅವಸ್ಥೆಯಲ್ಲೂ ಅವರ ಕಂಗಳು ಒದ್ದೆಯಾಗಿದ್ದವು. ನನ್ನ ಮೇಲೆ ಕೂಗಾಡಿದ್ದಕ್ಕೆ ಅವರಿಗೀಗ ಪಶ್ಚಾತ್ತಾಪದ ಭಾವನೆಯಿತ್ತು! ಅದು ಅವರು ನನಗೆ ಕೊಟ್ಟ ಗೌರವವಲ್ಲ, ಬದಲಿಗೆ ಸಂಘದವನೆಂದು ಸುಮತಕ್ಕ ಕಿವಿಯಲ್ಲಿ ಪಿಸುಗುಟ್ಟಿದ ಮಾತಿನ ಪರಿಣಾಮ. ಸಂಘ ಅವರ ಹೃದಯದೊಳಕ್ಕೆ ಎಷ್ಟು ಆಳಕ್ಕಿಳಿದುಬಿಟ್ಟಿತ್ತೆಂದರೆ ತಲೆಗೆ ಪೆಟ್ಟಾಗಿ ಅಕ್ಕ-ಪಕ್ಕದ ಎಲ್ಲವನ್ನೂ ಮರೆತಿದ್ದಿರಬಹುದು ಹೃದಯದೊಳಗೆ ಬೇರೂರಿದ್ದ ಸಂಘ ಮಾತ್ರ ಅಚಲವಾಗಿ ಉಳಿದಿತ್ತು. ಜೀವಮಾನದಲ್ಲಿ ಎಂದಾದರೂ ವಾಸಣ್ಣ ಎಂಬ ಪದ ನನ್ನ ಕಿವಿಗೆ ಬಿದ್ದರೆ ಈ ನೆನಪು ಅದರೊಂದಿಗೆ ಖಂಡಿತ ಉಮ್ಮಳಿಸುತ್ತದೆ.


ಆರಂಭದ ಕಾಲಘಟ್ಟದಿಂದಲೂ ವಾಸಣ್ಣನದು ಶಿಸ್ತಿನ ಬದುಕೇ. ಮನೆತನದ ವ್ಯಾಪಾರದ ಶೈಲಿ ಹಿಡಿಸದೇ ಹೋದಾಗ ಅದನ್ನು ಮುಲಾಜಿಲ್ಲದೇ ಬಿಟ್ಟವರು. ತಾವೇ ಮುಂದೆ ನಿಂತು ಮನೆಯವರೊಡನೆ ಪಾಲುದಾರಿಕೆ ಮಾಡಿಕೊಂಡು ಕಟ್ಟಿದ ಪ್ರೆಸ್ ಶಿಸ್ತಿನಿಂದ ಜೊತೆಗಾರರು ನಡೆಸುತ್ತಿಲ್ಲವೆಂದು ಗೊತ್ತಾದೊಡನೆ ತಮ್ಮ ಪಾಲುದಾರಿಕೆಯ ಹಣವನ್ನೂ ತೆಗೆದುಕೊಳ್ಳದೇ ಹೊರಬಂದುಬಿಟ್ಟವರು. ತಿಂಗಳಿಗೆ 250 ರೂಪಾಯಿಯಂತೆ ಪಾಲುದಾರಿಕೆಯ ಹಣವನ್ನು 10 ವರ್ಷಗಳ ಕಾಲ ತೀರಿಸುತ್ತೇವೆಂದು ಜೊತೆಗಾರರು ಕೊಟ್ಟ ಭರವಸೆಯನ್ನು ಒಪ್ಪಿಕೊಂಡೇ ಬಂದ ವಾಸಣ್ಣ ಆರೇ ವರ್ಷಗಳಲ್ಲಿ ಪ್ರತಿ ತಿಂಗಳೂ ಬರುತ್ತಿದ್ದ ಹಣ ನಿಂತಾಗ ತನ್ನ ಪತ್ನಿಗೆ ಹೇಳಿದ್ದು ಒಂದೇ ಮಾತಂತೆ, ‘ಸುಮತಿ ನನಗೆ ಬರುತ್ತಿದ್ದ ಪೆನ್ಷನ್ ನಿಂತು ಹೋಯಿತು’ ಎಂದು. ವಾಸಣ್ಣನ ನಿಸ್ಪೃಹತೆ ಆ ಪರಿಯದ್ದು!
ಗಂಡನನ್ನು ಕಳೆದುಕೊಂಡ ದುಃಖದ ನಡುವೆಯೂ ಸುಮತಿ ಅಕ್ಕ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗ ಕಂಗಳಲ್ಲಿ ಕಾಂತಿ ತುಂಬಿಕೊಳ್ಳುತ್ತದೆ. ಅದು ಶ್ರೇಷ್ಠ ಬದುಕೊಂದನ್ನು ನೋಡಿದ ಆನಂದ. ಮದುವೆಯ ಮೊದಲ ದೀಪಾವಳಿಗೆ ಸುಮತಿ ಅಕ್ಕ ತವರು ಮನೆಗೆ ಹೋಗುವಾಗ ‘ಕನ್ನಡದಲ್ಲಿ ನನಗೊಂದು ಪತ್ರವನ್ನು ನೀವು ಬರೆಯಬೇಕು’ ಎಂದು ಯಜಮಾನರನ್ನು ಕೇಳಿಕೊಂಡಿದ್ದರಂತೆ. ಸಹಜವಾಗಿಯೇ ಹೊಸತರಲ್ಲಿ ಪ್ರೇಮಭರಿತ ಪತ್ರದ ತವಕದಲ್ಲಿದ್ದ ಸುಮತಕ್ಕ ಆಸ್ಥೆಯಿಂದ ಪತ್ರವನ್ನೊಡೆದು ಓದಿದರೆ ಅದರಲ್ಲಿದ್ದದ್ದು ಕೆಲವೇ ಕೆಲವು ಸಾಲು, ‘ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ. ಇದು ನನ್ನ ಬಾಳ ನೀತಿ-ರೀತಿ. ಈ ನಿಟ್ಟಿನಲ್ಲಿ ನಿನ್ನ ಸಹಕಾರ ಸದಾ ಇರಲಿ. ನಿನಗೆ ನನ್ನ ಆಶೀವರ್ಾದಗಳು’ ಇಷ್ಟೇ. ಸದಾ ಸಮಾಜದ ಸೇವೆಗೆ ತುಡಿಯುತ್ತಿದ್ದ ಮನುಷ್ಯನೊಬ್ಬ ಹೃದಯವನ್ನು ಮನೆಯವರಿಗೆ ಪ್ರೇಮದ ಬಟ್ಟಲಾಗಿಸುವುದು ಕಷ್ಟವೇ ಏನೋ!


ಅದೊಮ್ಮೆ ಮಂಗಳೂರಿಗೆ ನೆರೆ ಬಂದಾಗ ಸೇವಾ ಕಾರ್ಯವನ್ನು ಮೈಮೇಲೆಳೆದುಕೊಂಡು ಧಾವಿಸಿದ ವಾಸಣ್ಣನ ಜೊತೆಗೆ ತಾನೂ ಬರುತ್ತೇನೆಂದು ಸುಮತಕ್ಕ ಹಠ ಹಿಡಿದರಂತೆ. ಪತಿರಾಯ ಎಷ್ಟು ಬೇಡವೆಂದರೂ ಕೇಳದೇ ಸಿನಿಮಾದಲ್ಲಿ ಕಂಡ ನೆರೆಯನ್ನು ನಿಜ ಜೀವನದಲ್ಲಿ ನೋಡುವ ಅವಕಾಶ ತನಗೆ ಬೇಕೇ ಬೇಕೆಂದು ಹಠ ಹಿಡಿದು ಅವರೊಡನೆ ಹೋಗಿದ್ದು ಸುಮತಕ್ಕ. ಗಂಡನ ಹಿಂದೆ ಪ್ರವಾಹ ಬಂದೆಡೆ ನಡೆಯುತ್ತಾ ಹೋದಾಗ ಸೊಂಟದವರೆಗಿನ ನೀರಿನವರೆಗೂ ಹೋಗುವ ವೇಳೆಗಾಗಲೇ ಎದುರಿನಿಂದ ದನವೊಂದು ತೇಲಿಕೊಂಡು ಬರುತ್ತಿರುವುದು ಕಂಡಿತಂತೆ. ಆಗ ಆ ದನವನ್ನು ದಡದತ್ತ ಸಾಗಿಸುವ ಸಾಹಸದ ಕಾರ್ಯಕ್ಕೆ ಮುನ್ನುಗ್ಗಿದ ವಾಸಣ್ಣ ತನ್ನ ಹಿಂದೆ ಕೈ ಹಿಡಿದ ಹೆಂಡತಿ ಬರುತ್ತಿದ್ದಾಳೆ ಎನ್ನುವುದನ್ನು ಮರೆತೇ ಬಿಟ್ಟಿದ್ದರು. ಯಾರೋ ಒಂದಿಬ್ಬರು ಸಹಕರಿಸಿ ಆಕೆಯನ್ನು ಮನೆಯವರೆಗೂ ಮರಳಿ ತಂದುಬಿಟ್ಟರಂತೆ. ಮುಂದಿನ ಎರಡು-ಎರಡೂವರೆ ದಿನಗಳ ಕಾಲ ವಾಸಣ್ಣ ಪತ್ತೆಯೇ ಇಲ್ಲ! ಬದುಕಿದ್ದಾರೋ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೋ ಎಂಬ ಸುದ್ದಿಯೂ ಇಲ್ಲ. ದುಗುಡ ಭರಿತ ಆಕ್ರೋಶ ಸುಮತಕ್ಕನ ಎದೆಯೊಳಗೆ. ಕೊನೆಗೊಮ್ಮೆ ಗಂಡ ಮನೆಗೆ ಬಂದಾಗ ಕೋಪಾವಿಷ್ಟಳಾಗಿ ಕಣ್ಣೀರಿಡುತ್ತಾ ‘ಸಮಾಜದ ಒಂದಂಶ ನಾನೂ ಇದ್ದೇನೆ. ನನ್ನ ಬಗ್ಗೆಯೂ ಕಾಳಜಿ ವಹಿಸಬೇಕೆಂದು ನಿಮಗೆ ಅನ್ನಿಸಲೇ ಇಲ್ಲವಲ್ಲಾ?’ ಎಂದು ಸುಮತಕ್ಕ ಗಂಡನಿಗೆ ಮಾತನಾಡಲೂ ಬಿಡದೇ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರೆ ಸ್ವಲ್ಪಹೊತ್ತು ಸುಮ್ಮನಿದ್ದು ವಾಸಣ್ಣ ಹೇಳಿದರಂತೆ, ‘ನೆರೆಯಲ್ಲಿ ಸಿಲುಕಿಕೊಂಡವರು ಮನೆ ಕಳೆದುಕೊಂಡಿದ್ದಾರೆ. ದನ-ಕರುಗಳು ಕಾಣೆಯಾಗಿವೆ. ಅವರನ್ನು, ಅವರ ಮೌಲ್ಯಯುತ ವಸ್ತುವನ್ನು ಸಾಗಿಸಿ ತಂದು ಅವರಿಗೆ ಉಳಿಯಲು ವ್ಯವಸ್ಥೆ ಮಾಡಿ, ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟು ಸ್ವಲ್ಪ ಗಂಜಿಯಾದರೂ ಸಿಗುತ್ತದೆ ಎಂದು ಖಾತ್ರಿಯಾಗುವವರೆಗೂ ನಾನೆಲ್ಲಿಯೂ ಅಲುಗಾಡಲೇ ಇಲ್ಲ. ಅಷ್ಟರೊಳಗೆ ಎರಡು ದಿನ ಕಳೆದು ಹೋದದ್ದು ನನಗೆ ಗೊತ್ತೇ ಆಗಲಿಲ್ಲ’ ಎಂದಿದ್ದರಂತೆ. ಹೆಂಡತಿಯ ಮಾತು ನಿಂತೇ ಹೋಯ್ತು.
ಒಳ್ಳೆಯ ಕುಟುಂಬದಿಂದಲೇ ಬಂದ ವಾಸಣ್ಣ ಮನೆಯನ್ನು ಬಿಟ್ಟು ಹೊರಬರಬೇಕಾಗಿ ಬಂದಾಗಿ ಒಂದಿನಿತೂ ಬೇಸರಿಸಿಕೊಂಡಿರಲಿಲ್ಲ. ಯಾರೋ ಕೊಟ್ಟ ಲಾರಿಯನ್ನು ತನ್ನದಾಗಿಸಿಕೊಂಡು ಅದರಲ್ಲಿಯೇ ಡ್ರೈವರ್ ಆಗಿ ದುಡಿದು ಒಂದೊಂದೂ ರೂಪಾಯಿಯನ್ನು ಸಂಗ್ರಹಿಸಿ ಮನೆಗೆ ಮತ್ತು ಸೇವಾ ಕಾರ್ಯಕ್ಕೆ ಬಳಸಿದವರು ಅವರು. ಗೌರವಾನ್ವಿತ ವ್ಯಕ್ತಿಯ ಮಗನಾಗಿ ಲಾರಿಯ ಚಾಲಕನಾಗಿ ದುಡಿಯುವುದು ತಂದೆಗೆ ಅವಮಾನ ಮಾಡಿದಂತಲ್ಲವೆ ಎಂದು ಮಿತ್ರರೊಬ್ಬರು ಹೇಳಿದ್ದಕ್ಕೆ ತಕ್ಷಣ ಉತ್ತರಿಸಿದ ವಾಸಣ್ಣ, ‘ತಂದೆಗೆ ಮೋಸ ಮಾಡಿ, ಆಸ್ತಿಯನ್ನು ವಿಭಜಿಸಿ ಲಪಟಾಯಿಸಿಕೊಂಡು ಬಂದಿದ್ದರೆ ಅದು ಅವಮಾನ ಮಾಡಿದಂತೆ. ನಾನು ಕಷ್ಟಪಟ್ಟು ಸ್ವಾಭಿಮಾನದಿಂದ ದುಡಿದು ಉಣ್ಣುತ್ತಿದ್ದೇನೆ. ಇದು ನನ್ನ ಕುಟುಂಬದ ಘನತೆಯನ್ನು ಹೆಚ್ಚಿಸುವ ಪರಿ’ ಎಂದಿದ್ದರು. ಕಷ್ಟಪಟ್ಟು ದುಡಿದವನಿಗೆ ಭಗವಂತ ಎಲ್ಲವನ್ನೂ ಕೊಡುತ್ತಾನೆಂಬುದಕ್ಕೆ ವಾಸಣ್ಣನೇ ಸಾಕ್ಷಿ. ಒಂದಾದಮೇಲೊಂದು ಲಾರಿಯ ಮೂಲಕ ತಮ್ಮ ದುಡಿಮೆಯನ್ನು ವಿಸ್ತರಿಸಿಕೊಂಡವರು ಅವರು. ಇದರೊಟ್ಟಿಗೆ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಸಮಾಜದ ಕೆಲಸಗಳಲ್ಲಿ ಪೂರ್ಣ ತೊಡಗಿಸಿಕೊಳ್ಳುತ್ತಲೂ ಇದ್ದವರು. ತಮ್ಮ ಪತ್ನಿಯನ್ನು ರಾಷ್ಟ್ರ ಸೇವಿಕಾ ಸಮಿತಿಯ ಚಟುವಟಿಕೆಗೆಂದು ರಾಜ್ಯ ಪ್ರವಾಸಕ್ಕೂ ಕಳಿಸುತ್ತಿದ್ದರು.

ಎಮರ್ಜನ್ಸಿಯ ಹೊತ್ತಿನಲ್ಲಿ ಸಕರ್ಾರ ಜೈಲಿಗೆ ಕಳಿಸಿದಾಗ ಮಾಡಿಕೊಂಡ ಸಾಲವನ್ನು ತೀರಿಸಬೇಕಿತ್ತಲ್ಲ, ಮರಳಿ ಬಂದೊಡನೆ ನಿಶ್ಚಯಿಸಿ ಮೂರು ವರ್ಷಗಳ ಕಾಲ ಮಿತಿಯನ್ನು ಹಾಕಿಕೊಂಡು ಸಾಲ ತೀರಿಸಲು ಹಗಲು-ರಾತ್ರಿಯೆನ್ನದೇ ದುಡಿಯಲಾರಂಭಿಸಿದರು. ಭಾನುವಾರವೂ ಅವರ ಕೆಲಸ ನಡೆದೇ ಇತ್ತು. ತಾವೇ ಕಟ್ಟಿದ ಮನೆಯ ಸಾಲ ತೀರಿದೊಡನೆ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಅಜಿತ್ಜೀಯವರ ಬಳಿಗೆ ಹೋಗಿ ‘ನನ್ನೆಲ್ಲಾ ಸಾಲ ತೀರಿತು. ಇನ್ನು ನನ್ನ ಮನೆ ಸಂಘಕ್ಕೆ ಸೇರಿದ್ದು. ನನ್ನ ನಂತರ ಸಂಘವೇ ಇದನ್ನು ಬಳಸಿಕೊಳ್ಳಬೇಕು’ ಎಂದು ಹೇಳಿಬಿಟ್ಟರಂತೆ. ಅವರು ಹೀಗೆ ಹೇಳಿದ್ದು ಸ್ವತಃ ಅವರ ಪತ್ನಿಗೂ ಗೊತ್ತಿರಲಿಲ್ಲ. ಮುಂದೊಮ್ಮೆ ಪ್ರಚಾರಕರೊಬ್ಬರು ಮನೆಗೆ ಬಂದಾಗ ಈ ವಿಷಯವನ್ನು ಹೇಳಿದಾಗಲೇ ಆಕೆಗೆ ಗೊತ್ತಾಗಿದ್ದು. ಸಹಜವಾಗಿ ಮಾತನಾಡುತ್ತಾ ಸುಮತಕ್ಕ ‘ನೀವೇಕೆ ಪ್ರಚಾರಕರಾಗಲಿಲ್ಲ?’ ಎಂದು ಆಸ್ಥೆಯಿಂದಲೇ ಕೇಳಿದಾಗ ‘ಮನಸ್ಸಿತ್ತು ಮನೆಯವರೊಪ್ಪಲಿಲ್ಲ’ ಎಂದಿದ್ದರು. ಹೀಗೆ ಮಾತಿಗೆ ಮಾತು ಬೆಳೆದು ಈ ವಿಚಾರದ ಚಚರ್ೆ ತೀವ್ರವಾದಾಗ ಆರು ತಿಂಗಳ ಕಾಲ ಪತ್ನಿಯ ದೇಹವನ್ನು ಮುಟ್ಟದೇ ತನ್ನ ಸಂಯಮದ ಪ್ರದರ್ಶನ ಮಾಡಿದ್ದರು. ಸಂನ್ಯಾಸಿಯಾಗಬೇಕಿದ್ದ ಜೀವ ಹೀಗಾಗಿರಬೇಕು ಎನ್ನುತ್ತಾರೆ ಸುಮತಕ್ಕ. ಮನೆಗೆ ಬಂದ ಅನೇಕ ಶ್ರೇಷ್ಠ ಸಾಧುಗಳು ಅಪಘಾತದ ನಂತರ ಮಗುವಿನಂತಾಗಿದ್ದ ವಾಸಣ್ಣನನ್ನು ಕಂಡು ಇದೇ ಮಾತನ್ನು ಹೇಳಿ ಹೋಗಿದ್ದರಂತೆ.


ಮುಂದೆ ವಾಸಣ್ಣ ವೈದ್ಯರೊಬ್ಬರ ಸಲಹೆಯ ಮೇರೆಗೆ ಬುದ್ಧಿಮಾಂದ್ಯ ಮಕ್ಕಳಿಗಾಗಿ ಶಾಲೆಯನ್ನು ತೆರೆಯಬೇಕೆಂದು ನಿಶ್ಚಯಿಸಿದಾಗ ತಾವೇ ಮುಂದೆ ನಿಂತರು. ಎಲ್ಲ ಬಗೆಯ ಸಂಕಷ್ಟಗಳನ್ನು ಹೆಗಲ ಮೇಲೆ ಹೊತ್ತರು. ಗಂಡ-ಹೆಂಡತಿ ಇಬ್ಬರೂ ಸೇರಿ ಮಂಗಳೂರಿನ ನಟ್ಟನಡುವೆ ಬೆಳೆದು ನಿಂತ ಚೇತನಾ ಶಾಲೆಯ ಪ್ರತಿ ಇಟ್ಟಿಗೆಯನ್ನೂ ಜೋಡಿಸಿದರು. ಅನಾಥ ಹೆಣಗಳಿಗೆ ಹೆಗಲು ಕೊಡಲು ಸದಾ ಮುಂದಿರುತ್ತಿದ್ದ ವಾಸಣ್ಣನಿಗೆ ಹೆಗಲು ಬಾತುಕೊಂಡು ಬಿಟ್ಟಿತ್ತು. ಹೆಣ ಸಾಗಿಸಲೆಂದೇ ಅವರಿಗೊಂದು ಗಾಡಿಯನ್ನು ಕೊಡುಗೆಯಾಗಿ ಕೊಡಲಾಗಿತ್ತು. ವಾಸಣ್ಣ ಈ ಶಾಲೆಗೂ ಅಂಥದ್ದೇ ಗಾಡಿಗಳ ಬಳಕೆ ಮಾಡಲಾರಂಭಿಸಿದರು. ಶಾಲೆ ಅನೇಕ ಇಂತಹ ಮಕ್ಕಳಿಗೆ ಆಶ್ರಯವಾಗಿದ್ದನ್ನು ಕಂಡು ಸದಾ ಆನಂದಿಸುತ್ತಿದ್ದ ವಾಸಣ್ಣ ಅವತ್ತಿನ ಆ ದುದರ್ಿನದಂದು ಬೆಳಿಗ್ಗೆ ಯಾರದ್ದೋ ಕರೆಗೆ ಓಗೊಟ್ಟು ಹೆಣವೊಂದರೆ ಸಂಸ್ಕಾರಕ್ಕೆ ಹೆಗಲು ಕೊಡಲು ಹೋಗಿದ್ದರಂತೆ. ಮನೆಗೆ ತಡವಾಗಿ ಮರಳಿ ಸುಮತಕ್ಕನ ಗಲಾಟೆಗೆ ಮಣಿದು ತಿಂಡಿ ಬಾಯಿಗಿಡುವಷ್ಟರಲ್ಲಿ ಇನ್ನೊಂದು ಕರೆ ಬಂತು. ವಾಸಣ್ಣ ಮತ್ತೊಂದು ಹೆಣಕ್ಕೆ ಹೆಗಲಾಗ ಹೊರಟಿದ್ದರು. ಮರಳಿ ಮನೆಗೆ ಬರುವ ಮುನ್ನವೇ ಇನ್ನೊಂದು ಹೆಣವೂ ಅವರ ಹೆಗಲಿಗಾಗಿ ಕಾಯುತ್ತಿತ್ತು. ಎಲ್ಲವನ್ನೂ ಮುಗಿಸಿ ಶಾಲೆಗೆ ಹೋಗಿ ತಾವೇ ಶುರುಮಾಡಿದ್ದ ರಕ್ತನಿಧಿಯಿಂದ ಅಗತ್ಯವಾಗಿ ರಕ್ತ ಬೇಕೆಂದು ಬಂದವರಿಗೆ ರಕ್ತ ಕೊಟ್ಟು ಲೆಕ್ಕ ಬರೆದಿಟ್ಟು ತಮ್ಮ ಸ್ಕೂಟರಿನಲ್ಲಿ ಮನೆಯತ್ತ ಮರಳುತ್ತಿರುವಾಗ ತಪ್ಪು ದಾರಿಯಲ್ಲಿ ಎದುರಿನಿಂದ ಬಂದ ಗಾಡಿಯೊಂದು ಡಿಕ್ಕಿ ಹೊಡೆದು ವಾಸಣ್ಣ ಕೆಳಬಿದ್ದರು. ಮೈ-ಕೈಯಿಯ ಬೇರೆ ಯಾವ ಮೂಳೆಗೂ ಏಟಾಗಲಿಲ್ಲ. ಏಟು ತಿಂದದ್ದು ತಲೆ ಮಾತ್ರ. ಮುಂದಿನ ಎರಡೂವರೆ ತಿಂಗಳುಗಳ ಕಾಲ ವಾಸಣ್ಣ ಪ್ರಜ್ಞಾ ಹೀನರಾದರು. ಅಲ್ಲಿಂದಾಚೆಗೆ ಎಂಟು ತಿಂಗಳುಗಳ ಕಾಲ ಪತ್ನಿಯನ್ನೂ ಗುರುತಿಸುವ ಸ್ಥಿತಿಯಲ್ಲಿರಲಿಲ್ಲ ಅವರು. ಅದೊಂದು ದಿನ ಸ್ನಾನದ ಕೋಣೆಯಿಂದ ಸುಮತಕ್ಕನನ್ನು ‘ಅಮ್ಮು’ ಎಂದು ಕರೆದಾಗ ಆಕೆಗೆ ಸ್ವರ್ಗಕ್ಕೆ ಮೂರೇ ಗೇಣು. ಅವರೀಗ ತಮ್ಮದ್ದೇ ಚೇತನಾ ಶಾಲೆಯ ಹಿರಿಯ ಮಗುವಿನಂತೆ ಅವರ ಆರೈಕೆ ಆರಂಭಿಸಿದರು. ಅಲ್ಲಿ ಮಕ್ಕಳಿಗೆ ಕೊಡುವಂತೆಯೇ ಹಂತ-ಹಂತವಾಗಿ ಇವರನ್ನು ತರಬೇತುಗೊಳಿಸಿದರು. ವಾಸಣ್ಣ ಪೂರ್ಣ ಬದಲಾಗಲಿಲ್ಲ. ಆದರೆ ಅವರ ಬೌದ್ಧಿಕ ಶಕ್ತಿ ಒಂದಿನಿತೂ ಕುಂದಲಿಲ್ಲ. ಸುಮತಕ್ಕ ಇಂಗ್ಲೀಷಿನಲ್ಲಿ ಬರೆದ ಪತ್ರವನ್ನು ಅವರು ತಿದ್ದುತ್ತಿದ್ದರು. ಬರು-ಬರುತ್ತಾ ಆರೋಗ್ಯವೂ ಸುಧಾರಿಸಿದಂತೆ ಕಾಣುತ್ತಿತ್ತು. ಸುಮತಕ್ಕನ ಮಾತಿಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿದ್ದರು. ತೀರಾ ಬದುಕಿನ ಕೊನೆಯ ದಿನಗಳಲ್ಲಿ ಆರೋಗ್ಯ ಹದಗೆಟ್ಟಿದೆ ಎನಿಸಿದಾಗ ಆಸ್ಪತ್ರೆಗೆ ಕರೆದೊಯ್ದರೆ ಊಟ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟರು. ಕೃತಕ ಉಸಿರಾಟದ ಮೇಲೆ ಅವರನ್ನಿಡಲಾಯ್ತು. ಹೊರಗಿನ ಯಂತ್ರಗಳ ಸಹಾಯದಿಂದ ಉಸಿರಾಡಿಸುವುದಾದರೆ ಯಜಮಾನರನ್ನು ಮನೆಗೊಯ್ಯುತ್ತೇನೆ ಎಂದು ಹಠ ಹಿಡಿದ ಸುಮತಕ್ಕ ಎಲ್ಲರನ್ನೂ ಒಪ್ಪಿಸಿ ಮನೆಗೆ ಕರೆತಂದು ಗಂಡನ ಕೈಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡು, ‘ರೀ ನಾವೀಗ ನಮ್ಮದ್ದೇ ಮನೆಯ ಮಲಗುವ ಕೊಠಡಿಯಲ್ಲಿದ್ದೇವೆ. ನಾವಿಬ್ಬರೂ ಮನೆದೇವರ ಹೆಸರನ್ನು ಉಚ್ಚರಿಸೋಣವೇ’ ಎನ್ನುತ್ತಾ ಬಾಣೇಶ್ವರ ಕಾತ್ಯಾಯಿನ್ಯೈ ನಮಃ ಎಂದು ಉಚ್ಚರಿಸಲೂ ಆರಂಭಿಸಿದರಂತೆ. ಅದಕ್ಕೆ ಪ್ರತಿಕ್ರಿಯಿಸಿದ ವಾಸಣ್ಣ ಆರಂಭದಲ್ಲಿ ನಿಧಾನವಾಗಿ ಶುರುಮಾಡಿದವರು ಬರುಬರುತ್ತಾ ಉಚ್ಚ ಕಂಠದಲ್ಲಿ ಹೇಳಲಾರಂಭಿಸಿದರು. ಇಡಿ ಮನೆ ಮಂತ್ರದಿಂದ ಅನುರಣಿತಗೊಂಡಿತು. ಸುಮತಕ್ಕ ‘ಈಗ ಕರೆದೊಯ್ಯಲು ಯಮ ಬರುತ್ತಾನೆ’ ಎಂದರೆ ಅದಕ್ಕೂ ಪ್ರತಿಕ್ರಿಯಿಸಿದ ವಾಸಣ್ಣ ಬಾಗಿಲ ಬಳಿ ತಿರುಗಿ ‘ಬಾ’ ಎಂದು ಮೂರು ಬಾರಿ ಕರೆದು ಮನೆ ದೇವರ ಹೆಸರನ್ನು ಅಷ್ಟೇ ಜೋರಾಗಿ ಉಚ್ಚರಿಸಿದ್ದೇ ಕೊನೆಯಾಗಿಬಿಟ್ಟಿತಂತೆ!


ತ್ಯಾಗ ಮತ್ತು ಸೇವೆಯನ್ನೇ ಜೀವನದ ಉಸಿರಾಗಿಸಿಕೊಂಡ ವ್ಯಕ್ತಿಯೊಬ್ಬ ಇದಕ್ಕಿಂತಲೂ ಶ್ರೇಷ್ಠವಾಗಿ ಬದುಕುವುದು ಸಾಧ್ಯವಿರಲಿಲ್ಲ ಮತ್ತು ಇದಕ್ಕಿಂತಲೂ ಸುಂದರವಾದ ಸಾವನ್ನು ಕಾಣುವುದೂ ಸಾಧ್ಯವಿರಲಿಲ್ಲ. ವಾಸಣ್ಣ ಈಗಲೂ ಕಾಡುತ್ತಿದ್ದಾರೆ. ಸುಮತಕ್ಕನ ಮುಖದ ತುಂಬೆಲ್ಲಾ ಹರಡಿಕೊಂಡಿರುವ ಪ್ರಶಾಂತತೆ ಈಗಲೂ ಹೃದಯವನ್ನು ಆವರಿಸಿಕೊಂಡುಬಿಟ್ಟಿದೆ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top