Vishwaguru

ಶ್ರೀ ಕೃಷ್ಣದೇವರಾಯರಿಗಿದ್ದ ಗುಣ ಅಹಂಕಾರವಲ್ಲ; ಸ್ವಾಭಿಮಾನ!

ಶ್ರೀ ಕೃಷ್ಣದೇವರಾಯರ ಯಾತ್ರೆಗಳಲ್ಲಿ ಕಿರೀಟಪ್ರಾಯವಾಗಿರುವುದು ಅವರು ರಾಯಚೂರನ್ನು ವಶಪಡಿಸಿಕೊಂಡು, ಆದಿಲ್ ಶಾನನ್ನು ಮಣಿಸಿದ ರೀತಿ. ಮುಂಚೆ ರಾಯಚೂರು ಕೋಟೆಯು ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದುದಾಗಿತ್ತು. ಅದನ್ನು ಬಹಮನಿ ಸುಲ್ತಾನರು ಗೆದ್ದು, ಅಲ್ಲಿನ ಮುದ್ಗಲ್ ಕೋಟೆಯನ್ನು ವಶಪಡಿಸಿಕೊಂಡುದು ವಿಜಯನಗರದರಸು ಸಾಳ್ವ ನರಸಿಂಹರಾಯನಿಗೆ ಆರಲಾರದ ಗಾಯವಾಗಿತ್ತು. ಅದೇ ಗುಂಗಲ್ಲೇ ಕೊನೆಯುಸಿರೆಳೆಯುತ್ತಿದ್ದ ನರಸಿಂಹರಾಯನು ಮರಳಿ ಆ ಕೋಟೆಯನ್ನು ವಶಪಡಿಸಿಕೊಳ್ಳತಕ್ಕದೆಂದು ತನ್ನ ಶಾಸನದಲ್ಲಿ ಬರೆಸಿಟ್ಟೇ ಪ್ರಾಣಬಿಟ್ಟಿದ್ದು. ಅದಕ್ಕೆ ತಕ್ಕ ಸಂದರ್ಭವೊಂದು ಕೃಷ್ಣದೇವರಾಯರ ಆಡಳಿತ ಕಾಲದಲ್ಲಿ ಒದಗಿಬಂತು.

 

ರಾಯರು ಅರೇಬಿಯಾದೊಂದಿಗೆ ಕುದುರೆ ವ್ಯಾಪಾರದ ದೃಷ್ಟಿಯಿಂದ ಉತ್ತಮ ಸಂಬಂಧವಿರಿಸಿಕೊಂಡಿದ್ದರು. ಸೈಯದ್ ಮರ್ಕಾರ್ ಅಂತಹ ಕುದುರೆ ವ್ಯಾಪಾರಿಗಳಲ್ಲೊಬ್ಬ. ಆತ ಕೃಷ್ಣದೇವರಾಯರಿಂದ ಕುದುರೆಗಳಿಗಾಗಿ 40,000 ವರಹಗಳನ್ನು ಪಡೆದವನು ಗೋವಾಕ್ಕೆ ಹೋಗಿ ವ್ಯಾಪಾರ ಶುರುಮಾಡಬೇಕಿತ್ತು. ಆದರೆ ಆತ ದಾರಿ ಬದಲಿಸಿ ಬಿಜಾಪುರಕ್ಕೆ ಹೋಗಿ ಆದಿಲ್ ಶಾ ಆಶ್ರಯದಲ್ಲಿ ತಲೆಮರೆಸಿಕೊಂಡುಬಿಟ್ಟ. ರಾಯರಿಗಿದು ತೀವ್ರ ಕೋಪ ತರಿಸಿತು. ಆದರೆ ಅವರು ದುಡುಕದೇ, ವಿಜಾಪುರದ ಸುಲ್ತಾನನಿಗೆ ಪತ್ರ ಬರೆದು, ಸೈಯ್ಯದ್ ಮರ್ಕಾರ್ ನನ್ನು ತಮ್ಮ ವಶಕೊಪ್ಪಿಸುವಂತೆ ತಿಳಿಸಿದರು. ಆದರೆ ಆದಿಲ್ ಶಾ ಇದಕ್ಕೊಪ್ಪಲಿಲ್ಲ. ಅರೇಬಿಯಾ ಮೂಲದ ಸೈಯದ್ ಮರ್ಕಾರ್ ನನ್ನು ರಕ್ಷಿಸುವುದೇ ಆದಿಲ್ ಶಾಗೆ ದೇವಕಾರ್ಯವಾಗಿ ಕಂಡಿತ್ತು. ಆಗ ರಾಯರು ಬಿಜಾಪುರದ ಸುಲ್ತಾನನಿಗೆ ನೇರವಾಗಿ ಪ್ರತಿಕ್ರಿಯಿಸದೇ ಆತನ ಆಶ್ರಯದಲ್ಲಿದ್ದ ರಾಯಚೂರನ್ನು ವಶಪಡಿಸಿಕೊಳ್ಳಲು ಮುಂದಾದರು. ಇಲ್ಲವರ ಮೊದಲ ನಡೆಯು ದಕ್ಷಿಣಾಪಥದಲ್ಲಿದ್ದ ಇತರ ಮುಸ್ಲೀಂ ದೊರೆಗಳು ಬಿಜಾಪುರದ ಸುಲ್ತಾನನಿಗೆ ಸಹಾಯಹಸ್ತ ಚಾಚದಂತೆ ತಡೆಯುವುದಾಗಿತ್ತು. ಈ ಹಿನ್ನೆಲೆಯಲ್ಲವರು, ಬಿಹಾರಿನ ಸುಲ್ತಾನ ಸುಲ್ತಾನ್ ಇಲ್ ಮುಲ್ಕ್ ಗೆ, ಗೋಲ್ಕೊಂಡದ ಕುತುಬ್ ಷಾಗೆ, ಬೀದರ್ ಸುಲ್ತಾನ ಬರೀದ್ ಷಾಗೆ ಹಾಗೂ ಅಹಮದ್ ನಗರದ ಸುಲ್ತಾನ ನಿಜಾಂಶಾಗೆ ಪತ್ರ ಬರೆದು ತಾನು ಆದಿಲ್ ಶಾ ಮೇಲೆ ದಂಡೆತ್ತಿ ಹೋಗಲು ಇದ್ದ ಕಾರಣಗಳನ್ನು ವಿವರವಾಗಿ ತಿಳಿಸುತ್ತಾರೆ. ರಾಯರ ಈ ಜಾಣ ನಡೆಯು ಫಲನೀಡಿತು. ಆ ದೊರೆಗಳೂ ಸಹ ಕೃಷ್ಣದೇವರಾಯರಿಗೇ ಪರೋಕ್ಷವಾಗಿ ಬೆಂಬಲ ನೀಡುವ ವಾತಾವರಣವೇರ್ಪಟ್ಟಿತು.

ಕೃಷ್ಣದೇವರಾಯರ ಸೇನಾ ಮಹಾಸಾಗರವು ರಾಯಚೂರಿನೆಡೆಗೆ ಗಂಭೀರವಾಗಿ ಚಲಿಸತೊಡಗಿತು. ಅದರಲ್ಲಿ ತರಬೇತಿ ಪಡೆದ ಐದೂವರೆ ಲಕ್ಷ ಪದಾತಿಗಳೂ, ಮೂವತ್ತು ಸಾವಿರ ಕುದುರೆಗಳೂ, ಐದುನೂರಕ್ಕೂ ಹೆಚ್ಚು ಆನೆಗಳೂ ಇದ್ದವು. ಈ ಮಹಾಸೇನಾ ಸಾಗರಕ್ಕೆ ಅಗತ್ಯವಾಗಿದ್ದ ಸರಕು-ಸರಂಜಾಮು, ಆಹಾರ, ನೀರು, ವಸ್ತ್ರ, ವಸತಿ-ಮೇವುಗಳನ್ನೊದಗಿಸಲು ಮತ್ತೊಂದು ಪುಟ್ಟ ಪಟ್ಟಣವೇ ಸೇನೆಯ ಮುಂದೆ ಚಲಿಸುತ್ತಿತ್ತು. ಸೇನೆಯು ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವೆಯಿದ್ದ ರಾಯಚೂರು ಕೋಟೆಯ ಬಯಲು ಪ್ರದೇಶಕ್ಕೆ ಬಂದು ಬೀಡುಬಿಟ್ಟಿತು. ಸಾಳ್ವ ನರಸಿಂಹರಾಯರ ಮರಣಶಾಸನದ ಆಜ್ಞೆಯನ್ನು ಕೃಷ್ಣದೇವರಾಯರು ಬಹುಷಃ ಮತ್ತೊಮ್ಮೆ ಜ್ಞಾಪಿಸಿಕೊಂಡರು.

ರಾಯಚೂರು ಮತ್ತು ಮುದ್ಗಲ್ ಕೋಟೆಗೆ ರಾಯರ ಸೈನ್ಯ ಮುತ್ತಿಗೆ ಹಾಕಿತು. ಆದರೆ ರಾಯಚೂರಿನ ಕೋಟೆಯು ಅತ್ಯಂತ ಸುಭದ್ರವಾಗಿತ್ತು. ಅದರೊಳಗಿದ್ದ ಸೀಮಿತ ಸಂಖ್ಯೆಯ ಸೇನೆಯು ರಾಯರ ಆಕ್ರಮಣವನ್ನು ಮೂರು ತಿಂಗಳ ಕಾಲ ಸಮರ್ಥವಾಗಿ ತಡೆದು ವಿಜಯನಗರ ಸೈನ್ಯಕ್ಕೆ ಅಪಾರ ನಷ್ಟವನ್ನು ಉಂಟುಮಾಡಿತು. ಅಷ್ಟರಲ್ಲಿಯೇ ಬಿಜಾಪುರದ ಕಡೆಯಿಂದ ಇಸ್ಮಾಯಿಲ್ ಆದಿಲ್ ಶಾ ನೂ ಸಹ ತನ್ನ ಸುಪರ್ದಿಯಲ್ಲಿದ್ದ ರಾಯಚೂರು ಕೋಟೆಯನ್ನುಳಿಸಿಕೊಳ್ಳಲು ಒಂದೂಕಾಲು ಲಕ್ಷ ಕಾಲ್ದಳವಿದ್ದ ಸೈನ್ಯದೊಂದಿಗೆ ಬಂದು ನದಿಯ ಉತ್ತರ ದಡದಲ್ಲಿ ಬೀಡುಬಿಟ್ಟ. ರಾಯರ ಸೇನೆಯೀಗ ತನ್ನ ಸೇನೆಯನ್ನೆದುರಿಸಲು ನದಿ ದಾಟಿ ಬರುತ್ತದೆಂಬ ಅಂಜಿಕೆ ಅವನಿಗಿತ್ತು. ಆದರೆ ರಾಯರ ಸೈನ್ಯ ರಾಯಚೂರು ಕೋಟೆ ಮುತ್ತಿಗೆಯನ್ನು ಸ್ವಲ್ಪವೂ ಸಡಿಲಿಸದೇ ಕುಳಿತುಬಿಟ್ಟಿತು. ಈ ನಡೆಯನ್ನು ನಿರೀಕ್ಷಿಸದಿದ್ದ ಆದಿಲ್ ಶಾ ಈಗ ತಾನೇ ನದಿಯನ್ನು ತನ್ನ ಸೈನ್ಯದೊಂದಿಗೆ ದಾಟಿ ಬಂದು ರಾಯರ ಸೇನೆಗೆ ಮುಖಾಮುಖಿಯಾಗಬೇಕಾಯ್ತು. ಒಂದೆಡೆ ರಾಯಚೂರಿನ ಕೋಟೆ ಕೊತ್ತಲಗಳ ಮೇಲಿಂದ ರಾಯರ ಸೈನ್ಯದ ಮೇಲೆ ಫಿರಂಗಿ ದಾಳಿ, ಮತ್ತೊಂದೆಡೆಯಿಂದ ಆದಿಲ್ ಶಾ ನ ಲಕ್ಷ ಪದಾತಿ ದಳದ ಸೇನೆ. ಇವುಗಳ ಮಧ್ಯೆ ಮತ್ತೊಮ್ಮೆ ವಿಜಯನಗರದ ಸೈನ್ಯ ಮಂಕಾಗುವಂತಾಯ್ತು. ಅಪಾರ ಪ್ರಾಣಹಾನಿಯಾಯ್ತು. ರಾಯರ ಸೈನಿಕರು ಜೀವವುಳಿಸಿಕೊಳ್ಳಲು ಪಲಾಯನ ಮಾಡಲಾರಂಭಿಸಿದರು. ಕೃಷ್ಣದೇವರಾಯರೀಗ ಕಠಿಣ ನಿಲುವು ತಾಳಿದರು. ಮೊದಲು ಅವರು ತಮ್ಮ ಸೇನೆಯನ್ನು ಏಳು ವಿಭಾಗಗಳಾಗಿ ಮಾಡಿದರು. ಶತ್ರುಗಳಿಗೆ ಬೆನ್ನು ತೋರಿಸಿ ಓಡಿ ಬರುತ್ತಿದ್ದ ತಮ್ಮ ಸೈನಿಕರನ್ನು ಕೊಚ್ಚಿ ಹಾಕುವಂತೆ ತಮ್ಮದೇ ಸೇನಾಧಿಕಾರಿಗಳಿಗೆ ಆದೇಶ ನೀಡಿಬಿಟ್ಟರು. ಈ ನಿಲುವು ಪರಿಸ್ಥಿತಿಯನ್ನು ಬದಲಾಯಿಸಿಬಿಟ್ಟಿತು. ಎತ್ತ ತಿರುಗಿದರೂ ಸಾವು ನಿಶ್ಚಿತವೆಂದರಿತ ವಿಜಯನಗರದ ಧೀರ ಸೈನಿಕರು ಶತ್ರು ಸೈನ್ಯದ ಮೃತ್ಯುದವಡೆಗೆ ಅಂಜದೇ ಅಳುಕದೇ ನುಗ್ಗಿದರು. ಸಾವಿನೊಡೆಯನಿಗೆ ಸೆಡ್ಡು ಹೊಡೆದರು. ಫಿರಂಗಿಯ ಕೆನ್ನಾಲಿಗೆಗಳಿಂದ ತಪ್ಪಿಸಿಕೊಳ್ಳುತ್ತಾ ರಣಹೂಂಕಾರ ಮಾಡುತ್ತಾ ಹುಚ್ಚು ಆವೇಶದಿಂದ ಆದಿಲ್ ಶಾ ನ ಬಿಜಾಪುರದ ಸೇನಾ ತುಕಡಿಗಳ ಮೇಲೆಯೂ, ರಾಯಚೂರಿನ ದಳಗಳ ಮೇಲೆಯೂ ಮುರಿದುಕೊಂಡು ಬಿದ್ದುಬಿಟ್ಟರು. ಜಯವು ಒಲಿಯುವುದು ಶಕ್ತಿವಂತರಿಗೆ, ನಿರ್ಭೀತರಿಗೆ. ಅದು ರಾಯರ ವಿಷಯದಲ್ಲಿ ನಿಜವಾಯ್ತು. ಪೋರ್ಚುಗೀಸಿನ ಸೇನಾಧಿಕಾರಿಯಾಗಿದ್ದ ಕ್ರಿಸ್ಟೋಫರ್ ಡಿ ಷಿಗೆರಿಡೋ ತನ್ನ ತುಪಾಕಿ ದಳದೊಂದಿಗೆ ರಾಯರಿಗೆ ಬೆಂಬಲ ನೀಡಲು ಮುಂದೆ ಬಂದ. ಅತ್ತ ಪರಿಸ್ಥಿತಿಯ ವಿಕೋಪವನ್ನರಿತ ಬಿಜಾಪುರದ ಸುಲ್ತಾನ ತನ್ನ ಪ್ರಾಣವುಳಿದರೆ ಸಾಕೆಂದು ಸರ್ದಾರ ಅಸದ್ ಖಾನನೊಡನೆ ರಾಯಚೂರಿನಿಂದಲೇ ತಪ್ಪಿಸಿಕೊಂಡು ಓಡಿಬಿಟ್ಟ.
ರಾಯಚೂರಿನ ಕೋಟೆಯೀಗ ಸಂಪೂರ್ಣವಾಗಿ ರಾಯರ ಕೈವಶವಾಯ್ತು. ರಾಯರ ಈ ಗೆಲುವು ದೇಶಾದ್ಯಂತ ವ್ಯಾಪಿಸಿತು. ರಾಯರ ಈ ವಿಜಯದಿಂದ ಬೀದರ್, ಬಿರಾರ್, ಗೋಲ್ಕೊಂಡ ಮತ್ತು ಅಹಮದ್ ನಗರಗಳ ಸುಲ್ತಾನರುಗಳು ದಿಗ್ಭ್ರಮೆಗೊಂಡರು. ಬಿಜಾಪುರದ ಇಸ್ಮಾಯಿಲ್ ಆದಿಲ್ ಶಾ ಗೆ ಅವನ ಭೂಮಿಯನ್ನು ವಾಪಸ್ ಕೊಡುವಂತೆಯೂ ಇಲ್ಲದಿದ್ದರೆ ತಾವು ವಿಜಯನಗರದ ಮೇಲೆ ಆಕ್ರಮಣ ಮಾಡುವುದಾಗಿಯೂ ಎಚ್ಚರಿಕೆಯ ಸಂದೇಶ ಕಳಿಸಿದರು. ಚಕ್ರವರ್ತಿ ಕೃಷ್ಣದೇವರಾಯರು ಈ ಸಂದೇಶಕ್ಕೆ ಸೊಪ್ಪೇ ಹಾಕದೇ ಮಾರೋಲೆ ಕಳಿಸುತ್ತಾ ನುಡಿದಿದ್ದು ಹೀಗೆ, ‘ಆದಿಲ್ ಶಾ ಗೆ ಆಗಬೇಕಾಗಿದ್ದೇ ಆಗಿದೆ. ನೀವು ಪ್ರಾರ್ಥಿಸಿದಂತೆ ಅವನಿಂದ ಗೆದ್ದುಕೊಂಡ ಪ್ರದೇಶವನ್ನವನಿಗೆ ಮರಳಿ ಒಪ್ಪಿಸುವುದು ನನಗೇನೊ ಸಮಂಜಸವೆಂದು ಕಾಣುತ್ತಿಲ್ಲ; ಇನ್ನು ಅವನ ಸಹಾಯಕ್ಕೆಂದು ಕಷ್ಟ ಪಟ್ಟುಕೊಂಡು, ನೀವುಗಳು ಈ ರಾಯಚೂರಿನವರೆಗೆ ದಂಡೆತ್ತಿ ಬರುವ ಅವಶ್ಯಕತೆಯಿಲ್ಲ, ನೀವೇನಾದರೂ ಬಯಸಿದರೆ, ನಾನೇ ನಿಮ್ಮ ರಾಜ್ಯಕ್ಕೆ ಬಂದು ನಿಮ್ಮನ್ನೆದುರುಗೊಳ್ಳಬಲ್ಲೆ’. ಈ ವರಸೆಗಳೇ ಸಮರಧುರಂಧರ ಶ್ರೀ ಕೃಷ್ಣದೇವರಾಯರ ರಾಜತಾಂತ್ರಿಕ ನೈಪುಣ್ಯಗಳಾಗಿದ್ದವು.

ರಾಯರು ರಾಯಚೂರು ಕೋಟೆಯನ್ನು ಸುಭದ್ರಗೊಳಿಸಿ ಅಲ್ಲಿ ತಮ್ಮ ಸೈನಿಕದಳಗಳನ್ನಿಟ್ಟರು. ವಿಜಯನಗರಕ್ಕೆ ಸಕಲ ವಿಜಯ ವೈಭವಗಳೊಂದಿಗೆ ಮರಳಿದರು. ಮತ್ತೊಮ್ಮೆ ತಮ್ಮ ಬಳಿ ಸಂಧಾನಕ್ಕೆಂದು ವಿಜಾಪುರದ ಆದಿಲ್ ಶಾ ಕಳಿಸಿದ ರಾಯಭಾರಿಯನ್ನು ಬೇಕೆಂದೇ ಬರೋಬರಿ ಆರು ತಿಂಗಳು ಕಾಯಿಸಿದರು. (ನೆನಪಿದೆಯಾ, ನಮ್ಮ ದೇಶದ ವಿಷಯದಲ್ಲಿ ಒಳಗೊಳಗೇ ವಿಷ ಕಾರುವ ಕೆನಡಾ ಪ್ರಧಾನಿ ಭಾರತಕ್ಕೆ ಬಂದಾಗ ಆತ ನಮ್ಮ ಪ್ರಧಾನಿಗಳನ್ನು ಭೇಟಿಯಾಗಲು ದಿನಗಟ್ಟಲೇ ಕಾಯಬೇಕಾಯ್ತು. ಅದೊಂಥರಾ ರಾಜತಾಂತ್ರಿಕ ದಂಡನೆ) ವಿಜಾಪುರದ ಸುಲ್ತಾನನು ಕ್ಷಮೆಕೋರಿ ತನ್ನ ಕಾಲಿಗೆ ಬಿದ್ದು ನಮಸ್ಕರಿಸಿದರೆ ಮಾತ್ರ ತಾನವನನ್ನು ಕ್ಷಮಿಸುವುದಾಗಿ ಶ್ರೀಕೃಷ್ಣದೇವರಾಯರು ಅದೇ ರಾಯಭಾರಿಯ ಕೈಲಿ ಸುಲ್ತಾನನಿಗೆ ಮಾರುತ್ತರ ಕಳಿಸಿದರು. ರಾಯಚೂರು ಮತ್ತು ಮುದ್ಗಲ್ ಭೂ ಪ್ರದೇಶಗಳ ಮೇಲೆ ರಾಯರು ತಮ್ಮ ಸ್ವಾಯತ್ತತೆ ಸಾಧಿಸಿ ಪ್ರಭುತ್ವ ವಿಸ್ತರಿಸಿದ ಧೀರ ಮಾದರಿಯಿದು. ಆ ಮಾದರಿಯು ನಮ್ಮ ಇಂದಿನ ಧೀರ ಮಾರ್ಗದರ್ಶಕರು ಹೇಳುವಂತೆ, ಅಹಂಕಾರವಲ್ಲ; ಸ್ವಾಭಿಮಾನ. ಶತ್ರುಗಳ ಕಣ್ಕುಕ್ಕುವ ಅಂಥ ಸ್ವಾಭಿಮಾನದ ಖನಿಯಾಗಿದ್ದರು ಕೃಷ್ಣದೇವರಾಯರು.

-ಕಿರಣ್ ಹೆಗ್ಗದ್ದೆ

Click to comment

Leave a Reply

Your email address will not be published. Required fields are marked *

Most Popular

To Top