National

ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದ ಪಕ್ಷ ಇಂದು ಅವಸಾನದ ಅಂಚಿನಲ್ಲಿದೆ!

ಆ ದಿನ ಚನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಪತ್ರಿಕಾಗೋಷ್ಠಿ ರಾಜೀವ್ ಗಾಂಧಿಯವರ ಕಟ್ಟಕಡೆಯ ಪತ್ರಿಕಾಗೋಷ್ಠಿಯಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಪತ್ರಕರ್ತನೊಬ್ಬ ಕೇಳಿದ ‘ರಾಮ ಮಂದಿರ ಎಲ್ಲಿ ನಿರ್ಮಾಣವಾಗಬೇಕು?’ ಯಾವುದೇ ಹಿಂಜರಿಕೆಯಿಲ್ಲದೇ, ‘ಎಲ್ಲರ ಸಹಮತಿಯೊಂದಿಗೆ ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕು, ಅಲ್ಲಿ ನಿರ್ಮಾಣವಾಗುವುದೇ ಸಮಂಜಸವಲ್ಲವೇ?’ ಎಂದು ಉತ್ತರಿಸಿದ್ದರು ಮಾಜಿ ಪ್ರಧಾನಿ.

‘ರಾಜೀವ್ ಗಾಂಧಿ 1989 ರ ಚುನಾವಣೆ ಗೆದ್ದು ಮತ್ತೊಮ್ಮೆ ಪ್ರಧಾನಿಯಾಗಿದ್ದರೆ ಖಂಡಿತವಾಗಿಯೂ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದರು’ ಎಂದು ಹೇಳಿದ್ದು ನೆಹರೂ-ಗಾಂಧಿ ಕುಟುಂಬದ ಕಟು ವಿರೋಧಿ ಸುಬ್ರಹ್ಮಣ್ಯಂ ಸ್ವಾಮಿ! ಉತ್ಪ್ರೇಕ್ಷೆಯೆನಿಸಿದರೂ ಸತ್ಯ. ರಾಜೀವ್ ಗಾಂಧಿಯವರ ಶ್ರೀರಾಮನ ಮೇಲಿನ ಶ್ರದ್ಧೆಯನ್ನು ಹತ್ತಿರದಿಂದ ಗಮನಿಸಿದ್ದ ಸುಬ್ರಹ್ಮಣ್ಯಂ ಸ್ವಾಮಿಯವರು ಆಡಿದ ಮಾತುಗಳಿವು.

1989 ರ ಚುನಾವಣಾ ಪ್ರಚಾರ ರಾಜೀವ್ ಗಾಂಧಿಯವರು ಪ್ರಾರಂಭಿಸಿದ್ದೇ ಅಯೋಧ್ಯೆಯಿಂದ, ಭಾರತವನ್ನು ರಾಮರಾಜ್ಯವನ್ನಾಗಿಸುತ್ತೇನೆ ಎಂಬ ಸಂಕಲ್ಪದಿಂದ. ರಾಮಾಯಣ ಹಾಗೂ ಮಹಾಭಾರತ ಕೇವಲ ಗ್ರಂಥಗಳಲ್ಲ, ಅದರಲ್ಲಿರುವ ಮೌಲ್ಯಗಳನ್ನು ಭಾರತೀಯರು ಅಳವಡಿಸಿಕೊಳ್ಳಬೇಕೆಂದು ರಮಾನಂದ್ ಸಾಗರರ ‘ರಾಮಾಯಣ’ ಹಾಗೂ ಬಿ.ಆರ್.ಚೋಪ್ರಾರ ‘ಮಹಾಭಾರತ’ ವನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವಂತೆ ಆದೇಶಿಸಿದ್ದು ಇದೇ ರಾಜೀವ್ ಗಾಂಧಿ! ಅಂದಿನ ಉತ್ತರಪ್ರದೇಶದ ಮುಖ್ಯಮಂತ್ರಿ ಬೀರ್ ಬಹದ್ದೂರ್ ಸಿಂಗರನ್ನು ರಾಮಜನ್ಮಭೂಮಿಯ ಬೀಗವನ್ನು ತೆಗೆದು ಹಿಂದೂಗಳಿಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶ ನೀಡಬೇಕೆಂದು ಹೇಳಿದವರು ರಾಜೀವ್ ಗಾಂಧಿ. ಇದೆಲ್ಲವನ್ನೂ ತಿಳಿದ ನಂತರ ಸ್ವಾಮಿಯವರ ಮಾತು ಆಶ್ಚರ್ಯವೆನಿಸುವುದಿಲ್ಲ.

ಓಲೈಕೆಯನ್ನೇ ಮಂತ್ರವಾಗಿಸಿಕೊಂಡು ಅಧಿಕಾರ ಪಡೆಯುತ್ತಿರುವ ಈಗಿನ ಕಾಂಗ್ರೆಸ್ ನಾಯಕರು ರಾಜೀವ್ ಗಾಂಧಿಯವರ ಈ ಮಾತನ್ನು ಎಲ್ಲಿಯೂ ಉಲ್ಲೇಖಿಸುವುದಿಲ್ಲ. 1528 ರಲ್ಲಿ ದೇವಾಲಯವನ್ನು ಧ್ವಂಸಮಾಡಿ ಮಸೀದಿ ಕಟ್ಟಿದ ಬಾಬರ್. ರಾಮಮಂದಿರಕ್ಕಾಗಿ ನಡೆದ ಶತಮಾನಗಳ ಸುದೀರ್ಘ ಹೋರಾಟದಲ್ಲಿ ಕಾಂಗ್ರೆಸ್ ಹಿಂದೂಗಳ ಅಸ್ಮಿತೆಯ ಪರವಾಗಿ ನಿಲ್ಲುವುದಕ್ಕಿಂತಲೂ ಹೆಚ್ಚಾಗಿ ಮುಸಲ್ಮಾನರ ಓಲೈಕೆಗೇ ಹೆಚ್ಚಿನ ಮಹತ್ವ ನೀಡಿದ್ದು ಇಂದಿನ ಅದರ ಪರಿಸ್ಥಿತಿಗೆ ಕಾರಣ‌.

ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ ಕಾಂಗ್ರೆಸ್!

ಸೇತುಸಮುದ್ರಂ ವಿವಾದದಲ್ಲಿ ಅಂದಿನ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಪ್ರಾಚಾರ ಸಭೆಯೊಂದರಲ್ಲಿ ಮಾತನಾಡುತ್ತಾ ‘ಆಗಿನ ಕಾಲದಲ್ಲಿ ಸೇತುವೆ ನಿರ್ಮಿಸಲಿಕ್ಕೆ ರಾಮ ಯಾವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದ? ರಾಮ ಕೇವಲ ಕಾಲ್ಪನಿಕ ಪಾತ್ರವಷ್ಟೇ’ ಎಂದು ನಾಲಿಗೆ ಹರಿಬಿಟ್ಟಿದ್ದರು. ಹಿಂದೂಗಳಿಗಷ್ಟೇ ಅಲ್ಲದೇ ಇತರ ಧರ್ಮೀಯ ಎಲ್ಲಾ ಶ್ರೀರಾಮಭಕ್ತರ ಭಾವನೆಗಳಿಗೆ ಧಕ್ಕೆಯಾಗಿತ್ತು. 1990 ರಲ್ಲಿ ಗುಜರಾತಿನಿಂದ ಅಯೋಧ್ಯೆಯವರೆಗೂ ‘ರಥಯಾತ್ರೆ’ ಪ್ರಾರಂಭಿಸಿ ರಾಮಜನ್ಮಭೂಮಿಯ ಕುರಿತು ಭಾರತೀಯರಲ್ಲಿ ಜಾಗೃತಿ ಮೂಡಿಸಿದ ಅಡ್ವಾಣಿಯವರು ಕಟುವಾಗಿ ವಿರೋಧಿಸಿದರು. ಕಾಂಗ್ರೆಸ್ ನ‌ ಕೆಲವು ನಾಯಕರು ವಿರೋಧಿಸಿದರಾದರೂ ಆ ಸಮಯದಲ್ಲಿ ಆಡಳಿತದಲ್ಲಿದ್ದ ಮನ್ಮೋಹನ್ ಸಿಂಗ್ ರ ಸರ್ಕಾರದ ನಿಲುವು ಬೇರೆಯದ್ದೇ ಆಗಿತ್ತು!

ಇದೇ ರಾಮಸೇತು ವಿಚಾರದಲ್ಲಿ ‘ವಾಲ್ಮೀಕಿ ರಾಮಾಯಣ ಮತ್ತು ರಾಮಚರಿತಮಾನಸ ಭಾರತ ಇತಿಹಾಸದ ಪ್ರಮುಖ ಗ್ರಂಥಗಳು, ಆದರೆ ಅದರಲ್ಲಿ ಬರುವ ಪಾತ್ರಗಳು ಹಾಗೂ ಘಟನೆಗಳು ಪ್ರಶ್ನಾತೀತವೇನಲ್ಲ’ ಎಂದು ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಉಲ್ಕೇಖಿಸುವುದರ ಮೂಲಕ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿತು ಕಾಂಗ್ರೆಸ್! ಕರುಣಾನಿಧಿಯ ಡಿ.ಎಂ.ಕೆ ಪಕ್ಷ ತಮಗೆ ನೀಡಿದ್ದ ಬೆಂಬಲ ಎಲ್ಲಿ ವಾಪಸ್ ಪಡೆಯುತ್ತದೋ ಎಂಬ ಭಯದಲ್ಲಿ ಕೋಟ್ಯಾಂತರ ಶ್ರೀರಾಮಭಕ್ತರ ಭಾವನೆಗಳಿಗೆ ಬೆಲೆಕೊಡಲೇ ಇಲ್ಲ.

ಸುನ್ನಿ ವಕ್ಫ್ ಬೋರ್ಡಿಗೆ ಸಹಕಾರ!

ಕಾಂಗ್ರೆಸ್ ನ ಪ್ರಬಲನಾಯಕ ಸುಪ್ರೀಂಕೋರ್ಟ್ ವಕೀಲ ‘ಕಪಿಲ್ ಸಿಬಲ್’ ರಾಮಜನ್ಮಭೂಮಿ ಹೋರಾಟದಲ್ಲಿ ಸುನ್ನಿ ವಕ್ಫ್ ಬೋರ್ಡಿನ ಪರವಾಗಿ ವಾದಿಸಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ವಾದಿಸಿದ್ದಲ್ಲದೇ, 2019 ರ ಚುನಾವಣೆ ಮುಗಿಯುವವರೆಗೂ ರಾಮಜನ್ಮಭೂಮಿ ತೀರ್ಪನ್ನು ತಡೆಹಿಡಿಯಬೇಕೆಂದು ಅಪೆಕ್ಸ್ ಕೋರ್ಟಿಗೆ ಮೊರೆಹೋದರು. ಕಾಂಗ್ರೆಸ್ ನ ವಿರೋಧವಾಗಿ ಜನಾಕ್ರೋಶ ಭುಗಿಲೇಳುತ್ತಿದ್ದಂತೆ ವಕ್ಫ್ ಬೋರ್ಡಿನ ಪರವಾಗಿ ಮಾಡುತ್ತಿರುವ ವಾದ ನನ್ನ ವೈಯಕ್ತಿಕವೇ ಹೊರತು ಕಾಂಗ್ರೆಸ್ ನಿಲುವಲ್ಲ ಎಂದು ತೇಪೆ ಹಚ್ಚುವ ಕೆಲಸಕ್ಕೆ ಮುಂದಾದರಾದರೂ, ಜನ ನಂಬಲು ಸಿದ್ಧರಿರಲಿಲ್ಲ! ಕಾರಣ, ರಾಮಮಂದಿರ ನಿರ್ಮಾಣದ ಪರವಾಗಿ ಯಾವೊಬ್ಬ ಕಾಂಗ್ರೆಸ್ ನಾಯಕನೂ‌ ಗಟ್ಟಿಯಾಗಿ ಮಾತನಾಡಲಿಲ್ಲ.

ಅದಲ್ಲದೇ, ‘Why I am Hindu’ ಪುಸ್ತಕ ಬರೆದ ಖ್ಯಾತ ಕಾಂಗ್ರೆಸ್ ನಾಯಕ ಹಾಗೂ ಸಂಸದ ‘ಶಶಿ ತರೂರ್’ ರ, ‘ಯಾವೊಬ್ಬ ಒಳ್ಳೆಯ ಹಿಂದುವೂ ಬಾಬ್ರಿ ಮಸೀದಿಯ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಕೊಳ್ಳುವುದಿಲ್ಲ, ರಾಮಮಂದಿರ ಪ್ರತಿಯೊಬ್ಬ ಹಿಂದುವಿನ ಹೃದಯದಲ್ಲಿರಬೇಕೆ ಹೊರತು ಬಾಬ್ರಿ ಮಸೀದಿಯ ಜಾಗದಲ್ಲಲ್ಲ’ ಎಂಬ ಹೇಳಿಕೆ ಮತ್ತದೇ ಓಲೈಕೆಯ ರಾಜಕಾರಣಕ್ಕೆ ಹಿಡಿದಗನ್ನಡಿಯಾಯ್ತು! ಎಲ್ಲವನ್ನೂ ಗಮನಿಸುತ್ತಿದ್ದ ಬಹುತೇಕ ಹಿಂದೂಗಳು BJP ಗೆ ಸೇರಿಕೊಂಡರೆ, ಕಾಂಗ್ರೆಸ್ ಸರ್ಕಾರವಿದ್ದಾಗ ಬಾಬ್ರಿ ಮಸೀದಿಯ ಧ್ವಂಸಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ಅನೇಕ ಮುಸಲ್ಮಾನ ನಾಯಕರು ಪ್ರಾದೇಶಿಕ ಪಕ್ಷಗಳಿಗೆ ಮೊರೆಹೋದರು!

ಹಾಸ್ಯಾಸ್ಪದವೆಂದರೆ, ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವ ಕಾಂಗ್ರೆಸ್ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿತ್ತೋ, ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸುತ್ತಾ ಬಂದಿತ್ತೋ ಅದೇ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ನಾಯಕ ಸಿ.ಪಿ.ಜೋಷಿ, ರಾಮಮಂದಿರ ನಿರ್ಮಾಣವಾಗಬೇಕಾದರೆ ಕಾಂಗ್ರೆಸ್ ಪ್ರಧಾನಮಂತ್ರಿಯೇ ಭಾರತದ ಗದ್ದುಗೆ ಹಿಡಿಯಬೇಕು ಎಂದು ಪ್ರಚಾರ ಮಾಡಿದ್ದಲ್ಲದೇ, ಚುನಾವಣಾ ಪ್ರಚಾರದ ಪೋಸ್ಟರ್, ಬ್ಯಾನರ್ ಗಳಲ್ಲಿ ರಾಹುಲ್ ಗಾಂಧಿಗೆ ಶ್ರೀರಾಮನ ವೇಷ ತೊಡಿಸಿ ಪ್ರಚಾರ ಮಾಡಿದರು! ಕಾಂಗ್ರೆಸ್ಸಿಗೆ ಹಿಂದೂಗಳ ಭಾವನೆಗಳಿಗೆ ಧಕ್ಕೆತಂದರೆ ಉಳಿಗಾಲವಿಲ್ಲ ಎಂದು ಜ್ಞಾನೋದಯವಾಗಿತ್ತಾದರೂ, ಸಮಯ ಮೀರಿತ್ತು!

ಇಂದು ಜನ ಅಭಿವೃದ್ಧಿಯ ಪರ‌ ನಿಲ್ಲುತ್ತಾರೆಯೇ ಹೊರತು ಓಲೈಕೆಗೆ ಮಾರುಹೋಗುವ ಕಾಲ ಮುಗಿದಿದೆ. ಎಲ್ಲಾ ಕಡೆಯೂ ಹೀನಾಯ ಸೋಲು ಅನುಭವಿಸುತ್ತಾ ಅವಸಾನದ ಅಂಚಿನಲ್ಲಿದೆ ಒಂದು ರಾಷ್ಟ್ರೀಯ ಪಕ್ಷ!

ಭಾರತದಲ್ಲಿ ದೇವಾಲಯವೊಂದನ್ನು ಕಟ್ಟಲು ಇಷ್ಟು ವರ್ಷಗಳ ಸುದೀರ್ಘ ಹೋರಾಟದ ಅವಶ್ಯಕತೆಯಿತ್ತೇ? ಕ್ರಿ.ಪೂ. 1528 ರಿಂದ ನಡೆದು ಬಂದ ಹೋರಾಟಕ್ಕೆ 2019ರ ನವೆಂಬರ್ 9 ರಂದು ಜಯ ದೊರೆತಿದೆ. ಯಾವ ವ್ಯಕ್ತಿ ಕೋಟ್ಯಾಂತರ ಭಾರತೀಯರ ಹೃದಯದಲ್ಲಿ ಮರ್ಯಾದಾ ಪುರುಷೋತ್ತಮನಾಗಿ ನೆಲೆ ನಿಂತಿದ್ದಾನೋ ಆ ಮಹಾತ್ಮನಿಗೆ ‘ಹಿಂದೂ’ಸ್ಥಾನದಲ್ಲೊಂದು ನೆಲೆ ಕೊಡಲು 491 ವರ್ಷಗಳ ಸಂಘರ್ಷ ನಡೆಸಬೇಕಾಯಿತು. ಈ ಸುದೀರ್ಘ ಹೋರಾಟಕ್ಕೆ ತಿಲಾಂಜಲಿಯಿಟ್ಟು ಭಾರತದ ಅಸ್ಮಿತೆಯನ್ನು ಎತ್ತಿಹಿಡಿಯಲು ನರೇಂದ್ರ ಮೋದಿಯೇ ಬರಬೇಕಾಯಿತು!

ಯಾವ ಪಕ್ಷ ಪ್ರಭು ಶ್ರೀರಾಮಚಂದ್ರನ ಅಸ್ತಿತ್ವವನ್ನು ಪ್ರಶ್ನಿಸಿತೋ, ಆ ಪಕ್ಷಕ್ಕೆ ಭಾರತದಲ್ಲಿ ಅಸ್ತಿತ್ವವೇ ಇಲ್ಲದಂತಾಗುವ ಪರಿಸ್ಥಿತಿ ಎದುರಾಗಿದೆ!

-ಅಭಿಲಾಷ್ ಸೋಮೇನಹಳ್ಳಿ

 

 

Click to comment

Leave a Reply

Your email address will not be published. Required fields are marked *

Most Popular

To Top