State

ವೃಷಭಾವತಿಗಾಗಿ ಜಾಗೃತಿಯ ಓಟ!

ದೇಶದೆಲ್ಲೆಡೆ ನೀರಿನ ಕುರಿತಂತೆ ವ್ಯಾಪಕವಾದ ಕಾಳಜಿ ಕಂಡು ಬರುತ್ತಿರುವುದು ಸಂತೋಷದ ಸಂಗತಿಯೇ. ನೀರನ್ನುಳಿಸಿರಿ ಎಂದು ಅದೆಷ್ಟು ಲಕ್ಷ ಜನ ಗೋಗರೆದರೋ, ಅದೆಷ್ಟು ನೂರು ಸಂಘಟನೆಗಳು ಇದಕ್ಕಾಗಿ ಹಗಲೂ-ರಾತ್ರಿ ದುಡಿದವೋ ದೇವರೇ ಬಲ್ಲ! ಅವರೆಲ್ಲರ ಶ್ರಮದ ಫಲವಾಗಿ ಅಂತೂ ಕಾಳಜಿ ಜನಮಾನಸದಿಂದ ಉಕ್ಕೇರುತ್ತಿದೆ. ಆದರೆ ಇದಿನ್ನೂ ಪಕ್ಷಗಳನ್ನು ಪ್ರತಿನಿಧಿಸುವ ರಾಜಕಾರಣಿಗಳ ಆಂತರ್ಯದ ಕೂಗಾಗಿ ಮಾರ್ಪಡದೇ ಇರುವುದು ದುರಂತಕಾರಿ ಸಂಗತಿ.


ಬೆಂಗಳೂರು ಉದ್ಯಾನನಗರಿ ಎಂದು ಪ್ರಸಿದ್ಧಿ ಪಡೆದಷ್ಟೇ ಕೆರೆಗಳ ನಗರಿ ಎಂದೂ ಕರೆಯಲ್ಪಡುತ್ತಿತ್ತು. ದೇಶದ ಬಹುತೇಕ ಪ್ರಮುಖ ನಗರಗಳೆಲ್ಲಾ ನದಿಯನ್ನು ಆತುಕೊಂಡೇ ಬೆಳೆದಿವೆ. ಇಷ್ಟಕ್ಕೂ ನಾಗರೀಕತೆಯ ಬೆಳವಣಿಗೆಗೆ ನದಿ ಬೇಕೇ ಬೇಕು. ಬೆಂಗಳೂರು ಹಾಗಲ್ಲ. ಇಲ್ಲಿ ವೃಷಭಾವತಿ ನದಿ ಹರಿದಿದ್ದು ನಿಜವಾದರೂ ಅದು ಕೆರೆಗಳ ಸಂಪಕರ್ಿಸುವ ನದಿಯಾಗಿ ಕಂಡುಬಂದಿದ್ದೇ ಹೆಚ್ಚು. ಒಂದೆಡೆ ದೊಡ್ಡ ಬಸವಣ್ಣನ ಕೆರೆಯಿಂದ ವೃಷಭಾವತಿ ಆರಂಭಗೊಂಡರೆ ಹೊಸಕೆರೆ ಹಳ್ಳಿಯನ್ನು ಮುಟ್ಟಿ ಕೊನೆಗೆ ಬೈರಮಂಗಲದ ಕೆರೆ ಸೇರುವವರೆಗೆ ಕೆಂಪಾಂಬುದಿ ಕೆರೆಯೂ ಸೇರಿದಂತೆ ಅನೇಕ ಕೆರೆಗಳ ಮೂಲಕ ವೃಷಭಾವತಿಯ ಕುರುಹುಗಳು ಹಾದುಹೋಗುತ್ತವೆ. ಬೆಂಗಳೂರು ರಾಜಧಾನಿಯಾಗಿ ಬೆಳೆಯಲಾರಂಭಿಸಿದಂತೆ ನಾವು ಕೆರೆಗಳನ್ನು ಆಪೋಶನ ತೆಗೆದುಕೊಳ್ಳಲಾರಂಭಿಸಿದೆವು. ಹೀಗೆ ನುಂಗಿ ಹಾಕುವಲ್ಲಿ ಮಾತ್ರ ನಮ್ಮ ರಾಜಕಾರಣಿಗಳದ್ದು ಪಕ್ಷಾತೀತ ನಿಲುವು. ಯಾವ ಪಕ್ಷದವರೇ ಆಗಿರಲಿ ಕೆರೆಗಳನ್ನೇ ನುಂಗಿ ಅಲ್ಲಿ ಕಟ್ಟಡಗಳನ್ನು ಕಟ್ಟುವುದು ಅವರಿಗೆ ಹೊಸತೇನೂ ಅಲ್ಲ. ನಾವು ಕೆರೆಗಳನ್ನು ಕಟ್ಟಿಸಿದ ಕದಂಬರ ಕುರಿತಂತೆ, ಗಂಗರ ಕುರಿತಂತೆ ಕೊನೆಗೆ ತಮ್ಮ ಜೀವಿತಾವಧಿಯ ಸಂಗ್ರಹವನ್ನೆಲ್ಲಾ ಧಾರೆಯೆರೆದು ಕೆರೆ ನಿಮರ್ಿಸಿದ ವೈಶ್ಯೆಯರ ಕುರಿತಂತೆ ಮಾತನಾಡುತ್ತೇವಲ್ಲ ಅದೇ ಸಾಲಿನಲ್ಲಿ ಕೆರೆಗಳನ್ನು ನುಂಗಿಹಾಕಿ ತಮ್ಮ ಸೌಧ ಕಟ್ಟಿಕೊಂಡು ಬೆಂಗಳೂರಿಗರ ಬದುಕನ್ನು ನಾಶಗೊಳಿಸಿದ ಇಂದಿನ ರಾಜಕಾರಣಿಗಳ ಹೆಸರನ್ನೂ ಕೆಲವು ವರ್ಷಗಳ ನಂತರ ಹೇಳುತ್ತೇವೇನೋ! ಈಗ ಉಳಿದಿರುವ ಕೆರೆಗಳೇ ಕೈಬೆರಳೆಣಿಕೆಯಷ್ಟು. ಅದರ ಮೇಲೂ ಆಗಲೇ ಅನೇಕ ಪುಢಾರಿಗಳು ಕಣ್ಣು ಹಾಕಿ ಕುಳಿತುಬಿಟ್ಟಿದ್ದಾರೆ. ಅರಕೆರೆಯ ಕೆರೆ ಗೊತ್ತಲ್ಲ. 35 ಎಕರೆಗೂ ಹೆಚ್ಚು ವಿಸ್ತಾರವಾದ್ದು. ರಾಜಕಾಲುವೆಯಿಂದ ನೀರು ಹರಿದು ಬರುವ ಜಾಗವೂ ಸೇರಿದಂತೆ 8 ಎಕರೆ ತನಗೆ ಸೇರಿದ್ದೆಂದು ನುಂಗಣ್ಣರೊಬ್ಬರು ಕೇಸು ಹಾಕಿ ಕುಳಿತಿದ್ದಾರೆ. ಲೋಕಾಯುಕ್ತದಲ್ಲಿ ಸ್ಥಳೀಯರು ಬಡಿದಾಡಲೆತ್ನಿಸಿದರೆ ಕೆರೆಯನ್ನು ಉಳಿಸಿಕೊಳ್ಳಬೇಕಾಗಿರುವ ತಹಶೀಲ್ದಾರರು ಕೋಟರ್ಿಗೇ ಹೋಗುತ್ತಿಲ್ಲ. ಸ್ಥಳೀಯರೂ ಕೂಡ ಎಷ್ಟು ದಿನ ಅಂತ ಬಡಿದಾಡಿಯಾರು ಹೇಳಿ? ಕೆರೆಗೆ ಸ್ವಚ್ಛತೆಗೆಂದು ಮೀಸಲಿಟ್ಟ ಹಣ ಈಗ ವ್ಯರ್ಥ. ಸುತ್ತಲಿನ ನೀರಿನ ಬವಣೆಯನ್ನು ನೀಗಿಸಬಲ್ಲ ಸಾಮಥ್ರ್ಯವಿದ್ದ ಕೆರೆಯೊಂದು ಅಕ್ಷರಶಃ ಕೊಳೆತು ನಾರುತ್ತಿದೆ. ಆದರೆ ಅದರ ಸಮಾಧಿಯ ಮೇಲೆ ತಮ್ಮ ವೈಭವದ ಬದುಕಿನ ಕನಸು ಕಟ್ಟಿರುವ ಪುಢಾರಿಗಳು ಮಾತ್ರ ಕೇಕೇ ಹಾಕುತ್ತಾ ನಗುತ್ತಿದ್ದಾರೆ.

ಹುಡುಕಿದರೆ ಬೆಂಗಳೂರಿನ ಉದ್ದಕ್ಕೂ ಈ ಬಗೆಯ ಹತ್ತಾರು ಕೆರೆಗಳು ಸಿಕ್ಕಾವು. ದುರದೃಷ್ಟವೆಂದರೆ ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಕೊನೆಗೆ ಆಯಾ ಪಕ್ಷಗಳ ಪ್ರಮುಖರಾಗಲಿ ಸಮಾಜವನ್ನು ತಿದ್ದಿ ತೀಡಬಲ್ಲ ಸಂಘಟನೆಗಳೂ ಕೂಡ ಮೌನಕ್ಕೆ ಶರಣಾಗಿಬಿಡುತ್ತವೆ. ಏಕೆಂದರೆ ಒತ್ತುವರಿ ಮಾಡಿಕೊಂಡಿರುವವರು ಪ್ರಭಾವಿ ಜನರೂ ಅಂತ. ಅದೂ ಸರಿಯೇ. ಅವರನ್ನು ಎದುರು ಹಾಕಿಕೊಂಡು ಬದುಕುವುದಕ್ಕಿಂತ ತಿಂದು ಹಾಳಾಗಿ ಹೋಗಲಿ ಎಂದು ಶಾಪ ಹಾಕಿ ಸುಮ್ಮನಿರುವುದೇ ಲೇಸು. ಆದರೆ ತಿಂದವರೆಲ್ಲಾ ನೆನಪಿಟ್ಟುಕೊಳ್ಳಬೇಕಾದ ಸಂಗತಿಯೊಂದಿದೆ. ಜನರ ಕೈಯಿಂದ ಜೀವಜಲವನ್ನು ಕಸಿದ ಪಾಪಕ್ಕೆ ಪ್ರಾಯಶ್ಚಿತ್ತವಿಲ್ಲ. ಹೀಗೆ ನೀರಿಲ್ಲದೇ ಸಾಯುವಂತೆ ಮಾಡಿದವರ ಭವಿಷ್ಯ ಕರಾಳವಾಗುವುದರಲ್ಲಿ ಅನುಮಾನವೂ ಇಲ್ಲ. ಕರ್ಮಸಿದ್ಧಾಂತವೆನ್ನುವುದು ಸುಮ್ಮನೇ ಅಲ್ಲ. ಬಿಟ್ಟ ಬಾಣ ಹಿಂದಿನಿಂದ ಬಂದು ತನ್ನನ್ನೇ ಇರಿದು ಮುಗಿಸಲಿದೆ ಎಂಬುದನ್ನು ಅರಿಯುವ ವೇಳೆಗೆ ತುಂಬ ತಡವಾಗಿ ಹೋಗಿರುತ್ತದೆ.


ಈಗ ವೃಷಭಾವತಿ ಉಳಿಸುವ ನಿಟ್ಟಿನಲ್ಲಿ ವ್ಯಾಪಕವಾದ ಹೋರಾಟವೊಂದು ಶುರುವಾಗಿದೆ. ಇದು ಸಾಮಾನ್ಯವಾದ ಹೋರಾಟವಲ್ಲ. ಇಡಿಯ ಬೆಂಗಳೂರು ಜಾಗೃತವಾಗಿ ನೀರನ್ನು ಉಳಿಸಿಕೊಳ್ಳುವ ಹಂಬಲದಿಂದ ಮಾಡುತ್ತಿರುವ ಪ್ರಯತ್ನ. ತನಗೆ ಜೀವಸೆಲೆಯಾಗಿದ್ದ ಕೆರೆಗಳನ್ನೆಲ್ಲಾ ಕಳೆದುಕೊಂಡು ಕಣ್ಣೀರ್ಗರೆಯುತ್ತಿರುವ ವೃಷಭಾವತಿಯ ಹೃದಯದ ಕೊನೆಯ ಬಡಿತಗಳನ್ನು ಕೇಳುವ ಸಂದರ್ಭ. ಸಪ್ಟೆಂಬರ್ 22ಕ್ಕೆ ವೃಷಭಾವತಿ ಕೆಂಗೇರಿ ಮೋರಿ ಎನಿಸಿಕೊಳ್ಳುವ ಸ್ಥಳದಿಂದಲೇ ಓಡುತ್ತಾ ಜ್ಞಾನಭಾರತಿ ವಿಶ್ವವಿದ್ಯಾಲಯವನ್ನು ತಲುಪಿ ವೃಷಭಾವತಿಯನ್ನು ಉಳಿಸುವ ಸಂಕಲ್ಪ ಮಾಡುವ ದಿನ. ಬಹುಶಃ ಬೆಂಗಳೂರಿನ ನದಿಯನ್ನುಳಿಸಲು ಇಷ್ಟು ದೊಡ್ಡ ಪ್ರಯತ್ನ ಹಿಂದೆಂದೂ ಆಗಿರಲಿಲ್ಲ. ಈಗ ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಸಂತರಿಂದ ಹಿಡಿದು ವಿಜ್ಞಾನಿಗಳವರೆಗೆ ಅಧಿಕಾರಿಗಳಿಂದ ಆಳುವವರವರೆಗೆ ಕೊನೆಗೆ ಜನಸಾಮಾನ್ಯರಿಂದ ಹಿಡಿದು ಪ್ರಭಾವಿ ವ್ಯಕ್ತಿಗಳವರೆಗೆ ಜಾತಿ-ಮತ-ಪಂಥ-ಪಕ್ಷಗಳನ್ನು ಮರೆತು ಒಂದಾಗಬೇಕಿದೆ. ಹಾಗೆ ಒಟ್ಟಾಗಿ ಓಡುವ ಮೂಲಕ ಜಾಗೃತಿಯ ಸಂದೇಶವನ್ನು ಮನೆ-ಮನೆಗೆ ಮುಟ್ಟಿಸಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಬೇಕಿದೆ. ಹಾಗಂತ ಓಟದೊಂದಿಗೆ ಎಲ್ಲವೂ ಮುಗಿಯುವುದಿಲ್ಲ, ಆರಂಭವಾಗಲಿದೆ ಅಷ್ಟೇ. ಇದಾದ ನಂತರ ಮನೆ-ಮನೆಗಳನ್ನು ಸ್ವಚ್ಛಗೊಳಿಸುವ, ವೃಷಭಾವತಿಗೆ ಸೇರುವ ತ್ಯಾಜ್ಯವನ್ನು ಶೂನ್ಯವಾಗಿಸುವ ಪ್ರಯತ್ನ ನಾವು ಮಾಡುತ್ತಾ ಕಾಖರ್ಾನೆಗಳಿಂದ ಹರಿಯುವ ವಿಷಯುಕ್ತ ನೀರನ್ನು ಸೂಕ್ತವಾಗಿ ಶುದ್ಧೀಕರಣಗೊಳಿಸಿ ವೃಷಭಾವತಿ ನಳನಳಿಸುವಂತೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಅದಾಗಲೇ 25ಕ್ಕೂ ಹೆಚ್ಚು ಸಂಘಟನೆಗಳು ಈ ಕೆಲಸಕ್ಕಾಗಿ ಮುಂದೆ ಬಂದಿರುವುದು ಸಂತೋಷ ಪಡಬೇಕಾದಂಥದ್ದೇ. ಅವಕಾಶ ಸಿಕ್ಕರೆ ನೀವೂ ಈ ಮಹಾಯಜ್ಞದಲ್ಲಿ ಪಾಲ್ಗೊಳ್ಳಿ. ಏಕೆಂದರೆ ಇದು ಇತಿಹಾಸ ನಿಮರ್ಾಣದ ಕ್ಷಣ. ನಾವೆಲ್ಲಾ ನದಿ ಪುನರುಜ್ಜೀವನದ ವಿಚಾರ ಬಂದಾಗ ಥೇಮ್ಸ್ನ ಕುರಿತಂತೆ ಮಾತನಾಡುತ್ತಾ ಕಾಲ ಕಳೆದುಬಿಡುತ್ತೇವೆ. ಇನ್ನು ಮುಂದೆ ಅದು ಬದಲಾಗಿ ವೃಷಭಾವತಿಯ ಉಲ್ಲೇಖವಾಗುವಂತಹ ಇತಿಹಾಸ ನಿಮರ್ಾಣದ ಕ್ಷಣ ಅದು. ಬನ್ನಿ ಎಲ್ಲರೂ ಜೊತೆಗೂಡಿ ನೀರನಾಶಗೊಳಿಸುವ ರಾಕ್ಷಸರ ಕೊನೆಗಾಣಿಸಿ ನೀರನುಳಿಸುವ ಭಗೀರಥರ ನಿಮರ್ಾಣಕ್ಕೆ ಮುಂದಡಿ ಇಡೋಣ. ವೃಷಭಾವತಿಯನ್ನು ಹರಿಸಿ ಬೆಂಗಳೂರಿನ ಸಾತ್ವಿಕ ಬೆಳವಣಿಗೆ ಕಾರಣರಾಗೋಣ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    September 21, 2019 at 1:51 am

    ಖಂಡಿತವಾಗಿ. ನಾವು ನಿಮ್ಮೊಂದಿಗಿದ್ದೇವೆ. ಇದು ನನ್ನ ಬಹುದಿನಗಳ ಆಶಯವೂ ಹೌದು.

Leave a Reply

Your email address will not be published. Required fields are marked *

Most Popular

To Top