Vishwaguru

ವೀರಯೋಧ ಲಚಿತ್ ಪರಾಕ್ರಮಕ್ಕೆ ಮೊಗಲ್ ಸೈನ್ಯ ಚಿತ್!

ನರಿ ಬುದ್ಧಿಯ ಮೊಗಲ್ ಸರದಾರ ರಾಮಸಿಂಹ ಲಚಿತ ನಿಗೊಂದು ಪತ್ರ ಬರೆದು ಕಳಿಸಿದ. ಅದರ ಒಕ್ಕಣೆಯಲ್ಲಿ, “ಓ ಲಚಿತ್, ಯುದ್ಧ ಮಾಡುವುದಿಲ್ಲವೆಂದು ನನ್ನೊಂದಿಗೆ ಒಪ್ಪಂದ ಮಾಡಿಕೊಂಡ ನೀನು ಅದಕ್ಕೆ ಪ್ರತಿಯಾಗಿ.100000 ರೂ ಪಡೆದಿರುವೆಯಷ್ಟೇ, ಮತ್ತೇಕೆ ಯುದ್ಧ  ಮುಂದುವರಿಸುತ್ತಿರುವೆ” ಎಂದು ಬರೆದಿದ್ದ.  ಅದು ಲಚಿತ್ ನ ಪ್ರತಿಸ್ಪರ್ಧಿ ಫೇಲಾನ್ ಫುಕಾನ್ ನಿಗೆ ಸಿಕ್ಕುವಂತೆ ನೋಡಿಕೊಂಡ‌. ಸರಿ ಮುಂದಿನ ನಿರೀಕ್ಷಿತ ಘಟನೆ ನಡೆದೇ ಹೋಯಿತು.  ಈ ಫೇಲಾನ್ ಫುಕಾನ್ ತಂದಿತ್ತ ಪತ್ರ ಓದಿದ ರಾಜ ಚಕ್ರಧ್ವಜ ಸಿಂಹ , ಪತ್ರದಲ್ಲಿ ಇದ್ದ ವಿಷಯವನ್ನು ನಂಬಿ ಬಿಟ್ಟ. ತನ್ನ ಮಂತ್ರಿ , ಅಟಾನ್ ಬುಧ ಗೊಹಾನ್  ತಡೆಯದೆ ಇದಿದ್ದರೆ, ರಾಜನು ಲಚಿತನನ್ನು ಉಗ್ರವಾಗಿ ಶಿಕ್ಷಿಸಿಬಿಡುತ್ತಿದ್ದ . ರಾಮಸಿಂಹನ   ಭೇದ ನೀತಿ ಕೆಲಸ ಮಾಡಿತ್ತು. ಚಕ್ರಧ್ವಜರಾಜ ಲಚಿತನಿಗೆ  ಪತ್ರಿಸುತ್ತಾ “ಓ ಲಚಿತ್, ಇಷ್ಟು ದಿನವಾದರೂ ನೀನೇಕೆ ಮೊಗಲ ಸೈನ್ಯವನ್ನು ಹಿಮ್ಮೆಟ್ಟಿಸಲಿಲ್ಲ? ಅಂಜಿಕೆಯೇ? ಕೂಡಲೇ ನೀನು ಮೊಗಲರ ಸೈನ್ಯವನ್ನು ಮುಖಾಮುಖೀ ಎದುರಿಸಬೇಕು. ಇಲ್ಲವೇ ಹೆಂಗಸಿನ ವೇಷ ಧರಿಸಿ ಆತ್ಮಹತ್ಯೆ ಮಾಡಿಕೋ” ಎಂದು ಬರೆದುಬಿಟ್ಟ. ಸ್ವಾಮಿನಿಷ್ಠ ಲಚಿತ್ ನ ಆತ್ಮಾಭಿಮಾನಕ್ಕೆ ಮರ್ಮಾಘಾತ ನೀಡಿದ ಪತ್ರವದು! ಸರಿ, ತನ್ನ ಬಳಿಯಿದ್ದ ಕೇವಲ 20000 ಸೈನಿಕರನ್ನೇ ಎರಡಾಗಿ ವಿಂಗಡಿಸಿದ ಲಚಿತ್, 5000 ಸೈನಿಕರ ತುಕಡಿಗೆ ಮೊಗಲ್ ಸೈನಿಕರ ಮೇಲೇರಿ ಹೋಗುವಂತೆ ಆದೇಶಿಸಿದ.

ಅಚ್ಚರಿಯೆಂದರೆ ಲಚಿತ್ ನ ಈ 5000 ಪದಾತಿ ದಳವು ಎದುರಿಸಬೇಕಿದ್ದುದು 3 ಲಕ್ಷದಷ್ಟಿದ್ದ ಮೊಗಲ್ ಸೈನಿಕರನ್ನು. ಲಚಿತ್  ನ  ಧೀರ ಸೈನಿಕರೀ ಮೊಗಲ್ ಸೇನೆಗೆ ಬಲವಾದ ಆಘಾತವನ್ನೇ ನೀಡಿದರಾದರೂ, ರಾಮಸಿಂಹನ ನೇತೃತ್ವದಲ್ಲಿದ್ದ ವಿಶೇಷ ಅಶ್ವದಳದ ಮುಂದೆ ಆ ಸೈನಿಕರಿಗೆ ನಿಲ್ಲಲಾಗಲಿಲ್ಲ. ಆ ಪದಾತಿದಳಕ್ಕೆ ಹೊರಗಿನಿಂದ ರಕ್ಷಣೆ ನೀಡಿದವರನ್ನೂ ಸೇರಿದಂತೆ ಲಚಿತ್ನ 10000 ಸೈನಿಕರು ಮೊಗಲ್ ಸೇನೆಯನ್ನೆದುರಿಸಿ ಹೋರಾಡುತ್ತಾ ವೀರಮರಣವನ್ನಪ್ಪಿದರು. ಅಲಬಾಯ್ ಭೂಪ್ರದೇಶವು ರಾಮಸಿಂಹನ ಕೈವಶವಾಯ್ತು. ಆದರೂ ಅಸ್ಸಾಂನ ರಾಜಧಾನಿ ಗೌಹಾಟಿಯು ತಮಗೆಂದೂ ಸುಲಭದ ತುತ್ತಲ್ಲವೆನ್ನುವುದು ಮೊಗಲ್ ಸರದಾರ ರಾಮಸಿಂಹನಿಗೆ ನಿಚ್ಚಳವಾಗಿ ತಿಳಿದಿತ್ತು ಸರಿ. ಮತ್ತೆ ಮೊಗಲ್ ಸೇನೆ ಅಲ್ಲೇ ಬೀಡುಬಿಟ್ಟು ಮುಂದೆ ಗೌಹಾಟಿಯೆಡೆಗಿನ ತನ್ನ ದಾಳಿಯ ತಂತ್ರವನ್ನು   ಹೆಣೆಯಲಾರಂಭಿಸಿತು. ಕಷ್ಟದ ಪರಂಪರೆಯೆನ್ನುವುದು ಹಿಮದುಂಡೆ ಉರುಳಿದಂತೆ. ಅದು ಕೆಳಗುರುಳಿದಂತೆಲ್ಲ ದೊಡ್ಡದಾಗುತ್ತಲೇ ಹೋಗುತ್ತದೆ.

ಒಂದೆಡೆ  ಲಕ್ಷಗಟ್ಟಲೆ ಪದಾತಿದಳ ಅಶ್ವದಳದೊಂದಿಗೆ ಹೊಂಚುಹಾಕಿ ಕುಳಿತ ಮೊಗಲ್ ಸುಬೇದಾರ ರಾಮಸಿಂಹ. ಇನ್ನೊಂದೆಡೆ ರಾಜಾ ಚಕ್ರಧ್ವಜ ಸಿಂಹನ ಸಾವು. ಪಟ್ಟಕ್ಕೆ ಬಂದ ರಾಜಕುಮಾರ ಉದಯಾದಿತ್ಯನ ಆಡಳಿತಾತ್ಮಕ ಅನನುಭವವನ್ನು ಬಳಸಿಕೊಂಡು ರಾಜ್ಯದ ಆಡಳಿತದ ವಿಷಯದಲ್ಲಿ ಅನಗತ್ಯವಾಗಿ ಮೂಗುತೂರಿಸುತ್ತಾ, ಜೊತೆಗೆ ರಾಜನಿಷ್ಠ ಕುಟುಂಬದವರ ಬಗೆಗೆಲ್ಲಾ ಹೊಸರಾಜನ ಬಳಿ ಇಲ್ಲಸಲ್ಲದ ದೂರುನೀಡುತ್ತಾ ನಯವಂಚಕಬುದ್ಧಿ ತೋರಿಸಲಾರಂಭಿಸಿದ ಧೇಬೇರನಂಥ ವ್ಯಕ್ತಿಗಳ ಕಿರುಕುಳ. ಇವೆಲ್ಲವನ್ನೂ ರಾಷ್ಟ್ರನಿಷ್ಠ ಹಾಗೂ ಸ್ವಾಮಿ ನಿಷ್ಠ ಲಚಿತ್ ಅವುಡುಗಚ್ಚಿ ಸಹಿಸಿಕೊಂಡ. ಆದರೆ ವಾಪಸ್ ತನ್ನ ರಾಜಧಾನಿಯಡೆಗೆ ಮಾತ್ರ ಮುಖಮಾಡಲಿಲ್ಲ. ಚಕ್ರಧ್ವಜನ ಆದೇಶ ಪಾಲನೆಯೇ ಅವನಿಗೆ ಸರ್ವಮಾನ್ಯವಾಗಿತ್ತು. ಇದರ ನಡುವೆಯೇ “ಅಖೋ ಈ ಪುಟ್ಟಾ ಜ್ವರ” ಲಚಿತ್ ಗೆ ಬಂದುಬಿಟ್ಟಿತು. ಅಸ್ಸಾಮಿ ಭಾಷೆಯಲ್ಲಿದಕ್ಕೆ ಅಕ್ಕಿಕಾಳು ಮೇಲೆ ಬಿದ್ದರೂ ಅದು ಬೆಂದು ಹೋಗುವಷ್ಟು ಉಷ್ಣತೆಯಿಂದ ಶರೀರವನ್ನು ಬಾಧಿಸುವ ಜ್ವರವೆನ್ನುತ್ತಾರೆ. ಹೊಂಚಿಕುಳಿತಿದ್ದ ರಾಮಸಿಂಹ ಕಾಯುತ್ತಿದ್ದುದು ಇಂಥ ಸಮಯಕ್ಕೇ. ಒಂದೆಡೆ ಹೊಸರಾಜ, ಇನ್ನೊಂದೆಡಿ ನಿಸ್ಸೀಮ ಪರಾಕ್ರಮಿ ಲಚಿತ್ ಗೆ ಜ್ವರದಿಂದ ಮಲಗಬೇಕಾಗಿರುವ ಸ್ಥಿತಿ. ಆತನಿಗಿದು ಗೌಹಾಟಿಯೆಡೆಗೆ ದಾಳಿಯಿಡಲು ಸುಸಮಯವೆನಿಸಿತು!

ರಾಮಸಿಂಹನ ಮೊಗಲ್ ಸೇನೆ ತನ್ನ ನೂರಾರು ದೋಣಿಗಳಲ್ಲಿ ಬ್ರಹ್ಮಪುತ್ರಾ ನದಿಯ ಮೂಲಕ ಸಾಗುತ್ತಿರುವ ದಿಕ್ಕು ರಾಜಧಾನಿ ಗೌಹಾಟಿಯೆಡೆಗೆಂಬುದನ್ನು ಜ್ವರಬಂದು ತನ್ನನ್ನು ಸುಟ್ಟುಹಾಕುತ್ತಿದ್ದರೂ ಲಚಿತ್ ಗ್ರಹಿಸಿದ. ಅತ್ಯಂತ ತುರ್ತಾಗಿ ತನ್ನ ನೌಕಾಪಡೆಯನ್ನು ಸಜ್ಜುಗೊಳಿಸಿ ಮೊಗಲ್ ಸೇನೆಯನ್ನೆದುರಿಸಲು ಮುಂದಾದ. ಆದರೆ ಅತ್ಯಧಿಕ ಸಂಖ್ಯೆಯಲ್ಲಿದ್ದ ಮೊಗಲರ ನೌಕಾದಳದಿಂದ ತಮ್ಮೊಡೆಯ ಲಚಿತ್ ನನ್ನು ಮೊದಲು ರಕ್ಷಿಸಬೇಕೆಂದು ಯೋಜನೆ ಮಾಡಿದ ಅಸ್ಸಾಂನ ನೌಕಾದಳ ಯೋಧರು ತಮ್ಮ ದೋಣಿಯನ್ನು ಪ್ರವಾಹದ ವಿರುದ್ಧ ತಿರುಗಿಸಿ ಮೊಗಲ್ ನೌಕಾದಳಕ್ಕೆ ಬೆನ್ನುಹಾಕಿ ಸಾಗತೊಡಗಿದರು. ಕೆಂಡಾಮಂಡಲನಾದ ಲಚಿತ್ ಹೀಗೆ ಪಲಾಯನ ಸೂತ್ರ ಹಿಡಿದು ಹುಟ್ಟುಹಾಕುತ್ತಿದ್ದ ತನ್ನ ಸೈನಿಕರನ್ನೇ ನೌಕೆಯಿಂದಾಚೆ ಎತ್ತೆತ್ತಿ ಬ್ರಹ್ಮಪುತ್ರಾ ನದಿಗೇ ಎಸೆಯತೊಡಗಿದೆ. ಆಗೊಂದು ವಿಚಿತ್ರ ನಡೆಯಿತು. ಹುಟ್ಟುಹಾಕುವವರೇ ಇಲ್ಲದ ಆತನ ದೋಣಿ ತಾನಾಗಿಯೇ ಪ್ರವಾಹದಲ್ಲಿ ಮೊಗಲ್ ನೌಕಾದಳದೆಡೆಗೆ ನುಗ್ಗತೊಡಗಿತು. ಅಲ್ಲಿಂದಲೇ ಉಚ್ಚಕಂಠದಲ್ಲಿ ಗರ್ಜಿಸುತ್ತಾ ಲಚಿತ್ ತನ್ನ ಸೈನಿಕರಿಗೆ, “ಹೋಗಿ ಆರಾಮವಾಗಿ ನೀವು ಮನೆಗೆ ಹೋಗಿ. ನಿಮ್ಮ ನಿಮ್ಮ ಹೆಂಡತಿ ಮಕ್ಕಳೊಂದಿಗೆ ಸುಖವಾಗಿ ಸಂಸಾರ ಮಾಡಿ. ಓ ನನ್ನ ಸೈನಿಕರೇ, ಆದರೆ ನನ್ನ ರಾಜನಿಗೆ ತಿಳಿಸಿ, ಲಚಿತ್ ಆ ಮೊಗಲರ ನೌಕಾದಳಕ್ಕೆ ಬೆನ್ನುಹಾಕಿ ಓಡದೇ ಸಮರ್ಥವಾಗವರನ್ನೆದುರಿಸಿದನೆಂದು …” ಲಚಿತ್ ನ ಮಾತುಗಳಿಂದ ತೀರ ಅವಮಾನಿತರಾಗುವ ಜೊತೆಜೊತೆಗೇ ಅಸ್ಸಾಂ ಸೈನಿಕರ ಶೌರ್ಯವೂ ಜಾಗೃತವಾಯ್ತು. ಅವರಿಗೀಗ ತಮ್ಮ ದಳಪತಿಯನ್ನೂ ರಾಜಧಾನಿ ಗೌಹಾತಿಯನ್ನೂ ಅಲ್ಲದೇ ತಮ್ಮ ಮರ್ಯಾದೆಯನ್ನೂ ರಕ್ಷಿಸಿಕೊಳ್ಳಬೇಕಾದ ನಿರ್ಣಾಯಕ ಹಂತ ಬಂದಿತ್ತು. ಒಮ್ಮೆಲೇ ತನ್ನ ಪಲಾಯನವಾದಿ ಸೂತ್ರದಿಂದ ಪರಾಕ್ರಮವಾದಿ ನೀತಿಗೇರಿದ ಲಚಿತ್ ನ ನೌಕಾ ಪಡೆಯು ನೋಡನೋಡುತ್ತಿದ್ದಂತೆಯೇ ಮೊಗಲರ  ನೌಕಾಪಡೆಗೆ ಮುಟ್ಟಿ ನೋಡಿಕೊಳ್ಳುವಂಥ ಪೆಟ್ಟುಕೊಟ್ಟಿತು. ಬ್ರಹ್ಮಪುತ್ರದ ಹರಿವಿನ ಇಂಚಿಂಚನ್ನೂ ಬಲ್ಲ ಅಸ್ಸಾಂ ಸೈನಿಕರ ರಣನೀತಿಯಿಂದಾಗಿ ಮೊಗಲ್ ಸೈನಿಕರಿಗೆ ತಮ್ಮ ನೌಕೆಗಳನ್ನು ನಡೆಸಲಿಕ್ಕೇ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯ್ತು.  ಬ್ರಹ್ಮಪುತ್ರಾ ನದಿಯಲ್ಲವರ ನೌಕೆಗಳು ಚಲಿಸಲಿಕ್ಕೇ ಸಾಧ್ಯವಾಗದೇ ನದೀಪಾತ್ರದ ಅಡ್ಡಡ್ಡ ನಿಂತುಬಿಡುವಂತಾಯ್ತು.  ಬೃಹತ್ತಾದ ಬ್ರಹ್ಮಪುತ್ರಾ ನದಿಯ ಮಧ್ಯೆ ಮೊಗಲರ ನೌಕೆಯ ಒಂದು ಸೇತುವೆಯೇ ನಿರ್ಮಾಣವಾಗಿಹೋಯ್ತು. ಕೈ ಬಿಟ್ಟು ಹೋಗಿದ್ದ ಅನೇಕ ಆಯಕಟ್ಟಿನ ಪ್ರದೇಶಗಳು ನೋಡನೋಡುತ್ತಿದ್ದಂತೆಯೇ ಮತ್ತೆ ಲಚಿತ್ ನ ಸೈನಿಕರ ಕೈವಶವಾಯ್ತು.
ಅಂತೂ ಅಸ್ಸಾಂ ಕೊನೆಗೂ ಮೊಗಲರ ಆಕ್ರಮಣದಿಂದ ಅಭೇದ್ಯವಾಗುಳಿಯಿತು. ಅನಾರೋಗ್ಯದ ಮಧ್ಯದಲ್ಲೂ ರಾಮಸಿಂಹನ ರಾವಣಸದೃಶ ಸೈನ್ಯವನ್ನು ನಾಲ್ಕು ವರ್ಷ ಕಾಲ ಲಚಿತ್ ತಡೆದಿದ್ದು ಹೇಗೆ? ಅಕ್ಕಿಕಾಳು ಹಾಕಿದರೆ ಬೆಂದುಹೋಗುವ ಉಷ್ಣತೆಯ ಜ್ವರಪೀಡಿತ ಶರೀರದೊಂದಿಗೆ ನಾಲ್ಕು ವರ್ಷಗಳ ಕಾಲ ಹೋರಾಡಿ ಮೊಗಲರು ತನ್ನ ರಾಜಧಾನಿ ಗೌಹಾತಿಗೆ ಕಾಲಿಡದಂತೆ ತಡೆಯುವಂಥ ಅದ್ಯಾವ ಶಕ್ತಿ ಲಚಿತ್ ಗೆ ಸಿದ್ಧಿಸಿತ್ತು? ತನ್ನ ಸ್ವಕುಟುಂಬದವರೇ ರಾಜಧಾನಿಯಲ್ಲಿ ಅವಮಾನಿತರಾಗುತ್ತಿದ್ದರೂ, ತನ್ನ ಶೌರ್ಯದ ಮೇಲೆ ಸ್ವತಃ ತನ್ನ ರಾಜನೇ ಅನುಮಾನಪಟ್ಟು ಅವಮಾನಿಸಿದರೂ, ಜ್ವರದಿಂದ ಶರೀರ ಬೆಂದುಹೋಗುತ್ತಿದ್ದರೂ ಲಚಿತ್ ಭರ್ಫುಖಾನ್ ನಿರಂತರ ಕ್ರಿಯಾಶೀಲನೂ ಚೈತನ್ಯವಂತನೂ ಆಗಿದ್ದುಕೊಂಡು ಕಾರ್ಯಸಾಧನೆಗೈಯಲು ಇಂಧನವೊದಗಿಸಿದ ಆ ಶಕ್ತಿಯಾವುದದು?

ಈ ಪ್ರಶ್ನೆಗೆಲ್ಲ ಉತ್ತರ ಒಂದೇ. ನಿಸ್ಸೀಮವಾದ ಧ್ಯೇಯನಿಷ್ಠೆ ಮತ್ತು ರಾಷ್ಟ್ರನಿಷ್ಠೆ. ಇಂಥವರೇ ಜಗದಗಲ ಭಾರತದ ಪ್ರಭೆಯು ಅನಂತಕಾಲದವರೆಗೆ ಹರಡಿಕೊಂಡಿರಲು ಸಮಿಧೆಯಂತೆ ತಮ್ಮ ಜೀವನಕುಸುಮವನ್ನರ್ಪಿಸುವ ಧನ್ಯಾತ್ಮರು. ಲಚಿತ್ ಭರ್ಫುಕಾನ್ ಅಂತಹ ಧನ್ಯಾತ್ಮ ಗಣದಲ್ಲೊಬ್ಬ ಅಗ್ರೇಸರ.

-ಕಿರಣ್ ಹೆಗ್ಗದ್ದೆ

Click to comment

Leave a Reply

Your email address will not be published. Required fields are marked *

Most Popular

To Top