National

ರಿಕ್ಷಾ ಓಡಿಸುವವನ ಮಗಳು ಚಿನ್ನ ಗೆದ್ದ ಮುತ್ತಿನ ಕಥೆ..

‘ಮೆಡಲ್ನ ಜೀತ್ಲೇ ಬರಿ ಫಿರ್ ಹೋ ನಾ’ ಪದಕ ಗೆಲ್ಲದಿದ್ದರೆ ಮನೆಗೆ ವಾಪಸ್ಸೇ ಬರೋದಿಲ್ಲ ಎಂದು ಹೇಳಿಯೇ ಹೋಗಿದ್ದವಳು. ಆದರೆ ಚಿನ್ನವನ್ನೇ ಗೆದ್ದು ಬರುತ್ತೇನೆಂಬುದು ಅವಳಿಗೂ ಗೊತ್ತಿತೋ ಇಲ್ಲವೋ! ಅಸ್ಸಾಮಿನ ಜಲ್ಪಾಯ್ಗುರಿಯ ಸ್ವಪ್ನ ಬರ್ಮನ್ ಅಥ್ಲೆಟಿಕ್ಸ್ನ ಅತ್ಯಂತ ಕಠಿಣ ಸ್ಪಧರ್ೆಯಾಗಿರುವ ಹೆಪ್ಟಾಥ್ಲಾನ್ನಲ್ಲಿ ಏಷಿಯಾದ ಬೆಸ್ಟ್ ಆಗಿ ಹೊರಹೊಮ್ಮಿರುವುದು ಭಾರತದ ಕೀತರ್ಿಯನ್ನು ಮುಗಿಲೆತ್ತರಕ್ಕೆ ಹಾರಿಸಿದಂತಾಗಿದೆ. ಕನರ್ಾಟಕದ ಜೆ.ಜೆ ಶೋಭಾ ಕಂಚು ಗೆದ್ದಿದ್ದು ಮತ್ತು ಸೋಮಾ ಬಿಸ್ವಾಸ್ ಬೆಳ್ಳಿಯನ್ನು ಗೆದ್ದಿದ್ದು ಬಿಟ್ಟರೆ ದೇಶಕ್ಕೆ ಈ ಸ್ಪಧರ್ೆಯಲ್ಲಿ ಮೊದಲ ಚಿನ್ನ ತಂದುಕೊಟ್ಟವಳು ಸ್ವಪ್ನ!
ಹೆಪ್ಟಾಥ್ಲಾನ್ ಅಂದರೆ ಏಳು ಸ್ಪಧರ್ೆಗಳ ಗುಚ್ಛ. 100 ಮೀಟರ್ ಹರ್ಡಲ್ಸ್, 200 ಮೀಟರ್, 800 ಮೀಟರ್ಗಳ ಓಟ, ಲಾಂಗ್ ಜಂಪ್, ಹೈ ಜಂಪ್, ಶಾಟ್ಪುಟ್, ಜಾವ್ಲೀನ್ ಇಷ್ಟನ್ನೂ ಒಳಗೊಂಡಂತಹ ಒಂದೇ ಸ್ಪಧರ್ೆ. ಸ್ಪಧರ್ಿಯಾದವ ಈ ಎಲ್ಲಾ ಸ್ಪಧರ್ೆಗಳಲ್ಲೂ ಗಳಿಸಿದ ಒಟ್ಟೂ ಅಂಕಗಳನ್ನು ಕ್ರೋಢೀಕರಿಸಿ ಕೊನೆಗೆ ಗೆಲುವನ್ನು ನಿಶ್ಚಯಿಸಲಾಗುತ್ತದೆ. 21 ರ ಹರೆಯದ ಸ್ವಪ್ನ ಈ ಆಟದಲ್ಲಿ ತೋರಿದ ದೃಢತೆ, ವಿಶ್ವಾಸ ಜಗತ್ತನ್ನೇ ಬೆರುಗು ಗೊಳಿಸುವಂಥದ್ದು. ನೆನಪಿಡಿ. ಚೀನಾ, ಜಪಾನ್, ಕೊರಿಯಾದಂತಹ ಘಟಾನುಘಟಿ ರಾಷ್ಟ್ರಗಳ ಸ್ಪಧರ್ಿಗಳನ್ನು ಹಿಂದಿಕ್ಕಿ ಗೆಲುವು ಸಾಧಿಸುವುದು ಸುಲಭದ ಸಂಗತಿಯಲ್ಲ. ಅದರಲ್ಲೂ ಕನ್ನಡಿ ಮುಂದೆ ನಿಂತು ಮೇಕಪ್ ಮಾಡಿಕೊಳ್ಳಬೇಕಾದ ವಯಸ್ಸಿನಲ್ಲಿ ಎತ್ತರದ ಪೀಠದ ಮೇಲೆ ನಿಂತು ಚಿನ್ನದ ಪದಕವನ್ನು ಕೊರಳಿಗೆ ಹಾಕಿಕೊಳ್ಳುವ ಕನಸು ಕಂಡ ಸ್ವಪ್ನಾಳದ್ದು ಅದ್ಭುತ ಸಾಧನೆಯೇ. ಹಾಗಂತ ಆಕೆಗೆ ಸ್ಪಧರ್ೆಯಿದ್ದದ್ದು ಈ ಏಳು ವಿಭಿನ್ನ ಬಗೆಯ ಆಟೋಟಗಳಲ್ಲಿ ಮಾತ್ರವಲ್ಲ. ಆಕೆ ಬದುಕಿನಲ್ಲೂ ದೈಹಿಕವಾದ, ಮಾನಸಿಕವಾದ ಸಮಸ್ಯೆಯನ್ನು ಎದುರಿಸಲೇಬೇಕಿತ್ತು. ಸೈಕಲ್ ರಿಕ್ಷಾ ಓಡಿಸುತ್ತಿದ್ದ ತಂದೆ 2013ರಲ್ಲೇ ಹೃದಯ ಬೇನೆಗೆ ಒಳಗಾಗಿ ಅದೇ ಆಘಾತದಲ್ಲಿ ಪಾಶ್ರ್ವವಾಯುವಿಗೂ ತುತ್ತಾಗಿ ಹಾಸಿಗೆ ಹಿಡಿದವರು ಮೇಲೇಳಲೇ ಇಲ್ಲ. ಇಡಿಯ ಮನೆಯ ಹೊಣೆಯನ್ನು ಹೊತ್ತವಳು ತಾಯಿ. ಆಕೆ ಮನೆಗೆಲಸದವಳಾಗಿ ದುಡಿಯುತ್ತಾ ಟೀ ತೋಟಗಳಲ್ಲಿ ಎಲೆ ಕೀಳುವ ಕೆಲಸಕ್ಕೂ ಹೋಗಿ ಮಕ್ಕಳನ್ನು ಸಾಕಿದಳು. ಅಥ್ಲೆಟಿಕ್ಸ್ನಲ್ಲಿ ಅಪಾರವಾದ ಹುಚ್ಚು ಹೊಂದಿದ್ದ ಸ್ವಪ್ನ ಮೈದಾನದಲ್ಲಿ ಮೈ ಮುರಿಯುವಷ್ಟು ದುಡಿದು ಮನೆಗೆ ಬಂದರೆ ಅನೇಕ ಬಾರಿ ಹೊಟ್ಟೆ ತುಂಬುವಷ್ಟು ಊಟವೂ ಸಿಗುತ್ತಿರಲಿಲ್ಲ. ಆತ್ಮವಿಶ್ವಾಸದೆದುರು ಎಲ್ಲ ಸಮಸ್ಯೆಗಳೂ ತಲೆ ಬಾಗಿಬಿಡುತ್ತವೆ ಎಂಬುದಕ್ಕೆ ಆಕೆಗಿಂತ ಒಳ್ಳೆಯ ಉದಾಹರಣೆ ಸದ್ಯದ ಮಟ್ಟಿಗೆ ಸಿಗಲಾರದು. ಕಳೆದ ವರ್ಷ ಲಂಡನ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿದ ಸ್ವಪ್ನ 27ನೇಯವಳಾಗಿ ಸ್ಪಧರ್ೆ ಮುಗಿಸಿದ್ದಳು. ಅವಳ ವೈಯಕ್ತಿಕವಾದ ಸಾಮಥ್ರ್ಯಕ್ಕಿಂತಲೂ ಕಡಿಮೆ ಮಟ್ಟದ ಪ್ರದರ್ಶನ ಅಲ್ಲಿ ನೀಡಿದ್ದಳು. ಒಂದು ತಿಂಗಳ ಹಿಂದೆ ಭುವನೇಶ್ವರದಲ್ಲಿ ಏಷಿಯನ್ ಕ್ರೀಡಾಕೂಟಗಳಿಗೆ ಅರ್ಹತೆಯ ಪಂದ್ಯಗಳು ನಡೆದಾಗ ಅದರಲ್ಲಿ ಜಯ ಗಳಿಸಿದ ಸ್ವಪ್ನ ಈ ಬಾರಿ ಪದಕವಿಲ್ಲದೇ ಮರಳುವುದಿಲ್ಲ ಎಂಬ ನಿರ್ಣಯವನ್ನೇ ಮಾಡಿದ್ದಳು.

ಅವಳದ್ದೊಂದು ಥರ ಮುಗ್ಧ ಸ್ವಭಾವ. ದೂರದಿಂದ ನೋಡುವವರಿಗೆ ಹುಡುಗಾಟಿಕೆ ಎನ್ನಿಸಲೂಬಹುದು. ಸಣ್ಣ ನೋವು, ಹತಾಶೆಯೂ ಅವಳನ್ನು ಪಂದ್ಯ ಸೋಲುವಂತೆ ಮಾಡಬಹುದಾಗಿತ್ತು. ಬಲುಬೇಗ ಭಾವನೆಗಳ ಸೆಳೆತಕ್ಕೆ ಒಳಗಾಗುತ್ತಿದ್ದಳು ಅವಳು. ಹೀಗಾಗಿ ಆಕೆಯ ತರಬೇತುದಾರ ಸುಭಾಷ್ ಸಕರ್ಾರ್ಗೆ ಆಕೆಯನ್ನು ಸಂಭಾಳಿಸುವುದು ಸಲೀಸಾಗಿರಲಿಲ್ಲ. ಕ್ರೀಡಾಕೂಟಗಳಿಗೆ ಹೋಗುವ ಕೆಲವು ದಿನಗಳ ಮುಂಚಿನಿಂದಲೂ ಆಕೆಯ ಅತ್ಯಂತ ಇಷ್ಟದ ಪಂದ್ಯವಾಗಿದ್ದ ಹೈ ಜಂಪ್ನ ಅಭ್ಯಾಸವನ್ನು ನಿಲ್ಲಿಸುವಂತೆ ಹೇಳಲಾಗಿತ್ತು. ಜಾವ್ಲಿನ್ ಮತ್ತು ಗುಂಡೆಸೆತಗಳಲ್ಲಿ ಆಕೆ ಹೆಚ್ಚು ಪರಿಣಿತಳಾಗಲು ತಯಾರಿ ನಡೆಸುತ್ತಿದ್ದಳು. ನಿಸ್ಸಂಶಯವಾಗಿ ಆಕೆಗೊಂದು ಪದಕ ಖಾತ್ರಿ ಎಂದು ಎಲ್ಲರೂ ಭಾವಿಸಿದ್ದರು. ಆಕೆಯ ಪ್ರತಿಸ್ಪಧರ್ಿಯಾಗಬಲ್ಲ ಚೀನಾದ ಕಿಂಗ್ಲಿಂಗ್ಳನ್ನು ಯಾವ ಯಾವ ವಿಭಾಗದಲ್ಲಿ ಹಿಂದಿಕ್ಕಬಹುದು ಎಂಬುದಕ್ಕೂ ಈ ಬಾರಿ ವಿಶೇಷ ಆದ್ಯತೆ ನೀಡಲಾಗಿತ್ತು. ಏಷಿಯನ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಭಾರತೀಯ ತಂಡ ಒಂದೊಂದಾಗಿ ಪದಕಗಳನ್ನು ಬಾಚುತ್ತಿದ್ದಂತೆ ಸ್ವಪ್ನಾಳಿಗೆ ತವಕ-ತಳಮಳ ಹೆಚ್ಚುತ್ತಿತ್ತು.

ಆಕೆಗೆ ಚಾಕೊಲೆಟ್ ಎಂದರೆ ಪಂಚಪ್ರಾಣ. ಏಷಿಯನ್ ಗೇಮ್ನ ಹೊತ್ತಿನಲ್ಲೂ ಅದನ್ನು ತಿನ್ನುವುದನ್ನು ಬಿಟ್ಟಿರಲಿಲ್ಲ. ಪಾಪ 21 ರ ಹುಡುಗಿಗೆ ಚಾಕೊಲೆಟು ತಿನ್ನಬೇಡ ಎಂದರೆ ಹೇಗೆ. ಆದರೆ ಇದೇ ಚಾಕೊಲೇಟು ಅವಳಿಗೆ ಮುಳುವಾಯ್ತು. ಪಂದ್ಯಾಟಗಳು ಆರಂಭವಾಗುವ ಮೂರೇ ದಿನ ಮುಂಚೆ ಆಕೆಯ ಹಲ್ಲು ತೀವ್ರವಾಗಿ ನೋಯಲಾರಂಭಿಸಿತು. ಸಂಘಟಕರಲ್ಲೇ ಇದ್ದ ವೈದ್ಯರನ್ನು ಸಂಪಕರ್ಿಸಿದಾಗ ಹಲ್ಲನ್ನು ತೆಗೆಯುವುದೇ ಸೂಕ್ತ ಮದ್ದು ಎಂಬ ಉತ್ತರ ಬಂತು. ಆದರೆ ಈಗದು ಸಾಧ್ಯವಿರಲಿಲ್ಲ. ಇಂಜೆಕ್ಷನ್ನು, ಮಾತ್ರೆಗಳ ಮೊರೆ ಹೋಗಲೇಬೇಕಿತ್ತು ಆಕೆ. ಹೆಪ್ಟಾಥ್ಲಾನ್ ಪಂದ್ಯಗಳು ಶುರುವಾಗುವ ಮುಂಚಿನ ದಿನ ನೋವಿನಿಂದ ನರಳಾಡುತ್ತಿದ್ದ ಸ್ವಪ್ನ ಭಾಗವಹಿಸುವುದೇ ಅನುಮಾನವೆಂದು ಎಲ್ಲರೂ ಭಾವಿಸಿಬಿಟ್ಟಿದ್ದರು. ಹೇಳಿದೆನಲ್ಲ, ಆಕೆಯೊಳಗೆ ದೇಶದ ಕುರಿತಂತ ಹುಚ್ಚು ಅಭಿಮಾನವೊಂದಿದೆ. ಪದಕ ತರಲೇಬೇಕೆಂಬ ಧಾವಂತವಿದೆ. ಮೈದಾನಕ್ಕಿಳಿದೇಬಿಟ್ಟಳು. ಒಂದೆಡೆ ಹಾಸಿಗೆಗೆ ಅಂಟಿಕೊಂಡಿರುವ ತಂದೆ, ಕಡುಬಡತನದಲ್ಲಿ ಬೇಯುತ್ತಿರುವ ತಾಯಿ. ಮತ್ತೊಂದೆಡೆ ಪಂದ್ಯದಿಂದ ಹಿಂದೆ ಸರಿಯಲು ಕಾರಣ ಕೊಡಬಹುದಾದಷ್ಟು ಹಲ್ಲು ನೋವು. ತನ್ನೆದುರಿಗಿದ್ದ ಎಲ್ಲಾ ಅಡೆ-ತಡೆಗಳನ್ನು ಮೀರಿ ನಿಂತಳು ಸ್ವಪ್ನ! 100 ಮೀಟರ್ ಹರ್ಡಲ್ಸ್ನಲ್ಲಿ 981 ಅಂಕಗಳನ್ನು ಪಡೆದು 5 ನೇ ಸ್ಥಾನಕ್ಕೆ ತೃಪ್ತಿ ಪಟ್ಟ ಸ್ವಪ್ನ, 200 ಮೀಟರ್ ಓಟದಲ್ಲಿ 790 ಅಂಕಗಳೊಂದಿಗೆ 7 ನೇ ಸ್ಥಾನಕ್ಕೆ ಕುಸಿದಿದ್ದಳು. ಆದರೆ ಆಕೆಯ ಫೇವರಿಟ್ ಆಟವಾದ ಹೈಜಂಪ್ನಲ್ಲಿ ಚಿಗರೆಯಂತೆ ಜಿಗಿದು 1003 ಅಂಕಗಳನ್ನು ಪಡೆಯುವ ಮೂಲಕ ಆಕೆ ಎಲ್ಲರಿಗಿಂತಲೂ ಎತ್ತರದಲ್ಲಿದ್ದಳು. ಜಾವ್ಲೀನ್ ಥ್ರೋ ಮತ್ತು ಶಾಟ್ಪುಟ್ನಲ್ಲಿ ಆಕೆ ತನ್ನ ಜೀವಮಾನದ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮುನ್ನಡೆಯನ್ನು ಕಾಯ್ದುಕೊಂಡಳು. ಲಾಂಗ್ಜಂಪ್ ಕೂಡ ಆಕೆಗೆ 865 ಅಂಕಗಳನ್ನು ಕೊಡಿಸಿ ತನ್ನ ಚೀನೀ ಪ್ರತಿಸ್ಪಧರ್ಿಯೊಂದಿಗೆ ಮುಖಾ-ಮುಖಿ ನಿಲ್ಲುವಂತೆ ಮಾಡಿತು. 800 ಮೀಟರ್ ಓಟ ಹೆಪ್ಟಾಥ್ಲಾನ್ನ ಕೊನೆಯ ಪಂದ್ಯಾಟವಾಗಿತ್ತು. 2 ನಿಮಿಷ 16 ಸೆಕೆಂಡ್ನಲ್ಲಿ ಇದನ್ನು ಪೂರೈಸಿದ ಅವಳು ಪದಕ ಪಟ್ಟಿಯಲ್ಲಿ ತನ್ನೊಂದಿಗೆ ಸಮಬಲದಲ್ಲಿದ್ದ ಚೀನಾದವಳಿಗಿಂತ ಸಾಕಷ್ಟು ಅಂಕ ಮುಂದಿದ್ದು ಚಿನ್ನವನ್ನು ತನ್ನ ಕೊರಳಿಗೆ ಹಾಕಿಸಿಕೊಂಡಳು. ತನ್ನ ಗೆಲುವು ನಿಶ್ಚಿತವಾಗುತ್ತಿದ್ದಂತೆ ಆಕೆಯ ಮುಖದಲ್ಲಿ ಆನಂದದ ಬುಗ್ಗೆ ಚಿಮ್ಮಲಾರಂಭಿಸಿತು. ಟ್ರಾಕ್ನಲ್ಲೇ ಆಗಸದೆಡೆಗೆ ಮೈಚಾಚಿ ಅಡ್ಡಬಿದ್ದ ಸ್ವಪ್ನ ಕಣ್ಮುಚ್ಚಿ ನಮಸ್ಕಾರ ಮಾಡುತ್ತಿದ್ದಳು. ಅದು ಅವಳ ಮತ್ತೊಂದು ವೈಶಿಷ್ಟ್ಯ. ಆಕೆ ಪರಮ ಕಾಳಿಭಕ್ತೆ. ತನ್ನ ಮನೆಯ ಹೊರಗೆ ಕಾಳಿ ಮಂದಿರವೊಂದನ್ನು ನಿಮರ್ಾಣ ಮಾಡಲು ತನಗೆ ಬಂದ ಅಷ್ಟೂ ಬಹುಮಾನದ ಹಣವನ್ನು ಆಕೆ ವ್ಯಯಿಸಿದ್ದಳಂತೆ. ಈಗ ಆಗಸದಲ್ಲಿ ತನ್ನೊಳಗೆ ಶಕ್ತಿಯನ್ನು ತುಂಬಿದ ಅದೇ ಕಾಳಿಯನ್ನು ಕಂಡು ಕೈಮುಗಿಯುತ್ತಿದ್ದಳು.

ಅತ್ತ ಜಲ್ಪಾಯ್ಗುರಿಯಲ್ಲಿ ಪುಟ್ಟದೊಂದು ತಗಡಿನ ಮನೆಯಲ್ಲಿ ಮಗಳ ಹೆಪ್ಟಾಥ್ಲಾನ್ ಆಟವನ್ನು ಕಣ್ತುಂಬಿಸಿಕೊಳ್ಳುತ್ತಿದ್ದ ತಾಯಿ ಬಸಣಾದೇವಿ ಉಕ್ಕುತ್ತಿದ್ದ ಆನಂದವನ್ನು ತಡೆಯಲಾಗದೇ ಧನ್ಯವಾದದ ಕಣ್ಣೀರನ್ನು ಸುರಿಸುತ್ತಾ ಅದೇ ಕಾಳಿಮಂದಿರದೆದುರಿಗೆ ಧೊಪ್ಪನೆ ಸಾಷ್ಠಾಂಗವೆರಗುವ ದೃಶ್ಯ ಆನಂತರ ವೈರಲ್ ಆಯ್ತು. ಒಂದು ದಿನದ ಮುಂಚಿನವರೆಗೂ ಸ್ವಪ್ನ ಬರ್ಮನ್ ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಇಂದು ಆಕೆಯ ಬಗ್ಗೆ ಜಗತ್ತು ಮಾತನಾಡುತ್ತಿದೆ. ಆಕೆಯ ಮನೆ, ಆಕೆ ಬೆಳೆದು ಬಂದಿರುವ ಪರಿಸರ, ಆಕೆಯ ತಂದೆ-ತಾಯಿ ಇವೆಲ್ಲವನ್ನೂ ಗಮನಿಸುವಾಗ ಆಕೆಗೆ ಸಿಕ್ಕ ಈ ಗೌರವ ನಿಜಕ್ಕೂ ಅಭೂತಪೂರ್ವ ಎನಿಸುತ್ತಿದೆ. ಅಸ್ಸಾಂನ ಮಂತ್ರಿಗಳು ಆಕೆಯ ತಾಯಿಯನ್ನು ಭೇಟಿ ಮಾಡಿ ಅಭಿನಂದಿಸುವ ದೃಶ್ಯ ಈಗಲೂ ಕಣ್ಮುಂದೆ ಕಟ್ಟಿರುವಂತಿದೆ.

ಎಲ್ಲಿ ಅಡಗಿದ್ದರು ಇವರೆಲ್ಲ ಇಷ್ಟು ದಿನ? ಕ್ರೀಡೆ ಎಂದರೆ ತೆಂಡೂಲ್ಕರ್ನ, ಸಾನಿಯಾ ಮಿಜರ್ಾಳನ್ನ, ಪಂಕಜ್ ಅಡ್ವಾಣಿಯವರುಗಳನ್ನೇ ಸ್ಮರಿಸಿಕೊಳ್ಳುವ ಕಾಲವಿತ್ತು. ಜಾಗತಿಕ ಮಟ್ಟದ ಗೌರವದ ಮೂಲಕ ಸಾಕಷ್ಟು ಹಣ ಸಂಪಾದಿಸಿದ ಇವರೆಲ್ಲರೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದರು. ಆದರೆ ಇತ್ತೀಚೆಗೆ ನಮ್ಮೆದುರು ಮಿಂಚುತ್ತಿರುವ ಆಟಗಾರರ್ಯಾರೂ ಸಿರಿವಂತ ಪರಿವಾರದಿಂದ ಬಂದವರಲ್ಲ. ಹೋಗಲಿ ಸ್ಥಿತಿವಂತರೂ ಅಲ್ಲ. ಸ್ವಪ್ನಾಳಿಗಂತೂ ಒಂದೊಂದು ಕಾಲುಗಳಲ್ಲೂ ಆರಾರು ಬೆರಳುಗಳಿದ್ದದ್ದರಿಂದ ಎಲ್ಲರೂ ಧರಿಸುವಂತ ಶೂ ಆಕೆಗೆ ಹೊಂದುತ್ತಲೂ ಇರಲಿಲ್ಲ. ತನಗಾಗಿಯೇ ಪ್ರತ್ಯೇಕ ಶೂ ವಿನ್ಯಾಸ ಮಾಡಿಸಿಕೊಳ್ಳೋಣವೆಂದರೆ ಅದಕ್ಕೆ ಬೆಂಬಲವೂ ಇಲ್ಲ, ಈಕೆಯ ಬಳಿ ಹಣವೂ ಇಲ್ಲ. ಚಿನ್ನ ಗೆದ್ದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಆಕೆ ಕೇಳಿಕೊಂಡದ್ದೇನು ಗೊತ್ತೇ? ‘ಇತರರು ಹಾಕುವ ಶೂ ಹಾಕಿಕೊಂಡು ಓಡಲು ಮತ್ತು ಅಭ್ಯಾಸ ಮಾಡಲು ನನಗೆ ತುಂಬ ಕಷ್ಟವಾಗುತ್ತೆ, ನನ್ನ ಕಾಲಿಗೆ ಹೊಂದುವಂಥ ಶೂ ತಯಾರಿಸಿಕೊಡಬಲ್ಲಿರಾ?’ ಅಂತ. ಬಡತನದಲ್ಲಿ ಮಿಂದೆದ್ದ ಇಂಥ ಆಟಗಾರರು ಪತ್ರಿಕೆಯಲ್ಲಿ ಮುಖಪುಟವಾಗುತ್ತಿರುವುದು, ಪ್ರಧಾನಮಂತ್ರಿಯಿಂದಲೂ ಅಭಿನಂದಿಸಲ್ಪಡುತ್ತಿರುವುದು ಹೊಸ ಭಾರತದ ನಿಮರ್ಾಣದ ಮುನ್ಸೂಚನೆ ಎಂದೆನಿಸುತ್ತಿದೆ. ಹಿಂದೆಯೂ ನಾವು ಅನೇಕ ಪದಕಗಳನ್ನು ಗೆದ್ದಿದ್ದೇವೆ ನಿಜ. ಸ್ವಪ್ನಾಳಿಗಿಂತಲೂ ಸಾಹಸಮಯ ರೀತಿಯಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಟ್ಟ ನಮ್ಮದ್ದೇ ನಾಡಿನ ಜೆ ಜೆ ಶೋಭಾ ಸುದ್ದಿಯೇ ಆಗಿರಲಿಲ್ಲ. ಈಗ ಇವೆಲ್ಲಕ್ಕೂ ಬೆಲೆ ಬರುತ್ತಿದೆ. ಪ್ರಧಾನಮಂತ್ರಿ ಖೇಲೋ ಇಂಡಿಯಾ ಎಂಬ ಪ್ರಖ್ಯಾತ ಘೋಷಣೆಯ ಮೂಲಕ ಪ್ರತಿಯೊಬ್ಬರಲ್ಲೂ ಸ್ಫೂತರ್ಿ ತುಂಬಿದ್ದಾರೆ. ಅತ್ತ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಅಭ್ಯಾಸದಲ್ಲಿ ನಿರತರಾದ ಕ್ರೀಡಾಪಟುಗಳಿಗೆ ಬೇಕಾದ ವ್ಯವಸ್ಥೆಯನ್ನು ತಾವೇ ಒದಗಿಸಿಕೊಡುವ ಮೂಲಕ ಕ್ರೀಡಾಪಟುಗಳ ಬೆಲೆ ಉಳಿದದ್ದೆಲ್ಲಕಿಂತಲೂ ಹೆಚ್ಚೆಂಬುದನ್ನು ನಾಡಿನ ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಬರಲಿರುವ ದಿನಗಳಲ್ಲಿ ಕ್ರೀಡಾ ವಿಶ್ವವಿದ್ಯಾಲಯಗಳ ಸ್ಥಾಪನೆಯ ಮೂಲಕ ಜಾಗತಿಕ ಮಟ್ಟದಲ್ಲಿ ಚಿನ್ನದ ಬೇಟೆಯಾಡಬಲ್ಲ ಸಮರ್ಥರನ್ನು ಹುಡುಕಿ, ಅವರಿಗೆ ತರಬೇತಿ ನೀಡುತ್ತೇವೆ ಎಂಬ ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ. ಎಲ್ಲಕ್ಕೂ ಹೆಚ್ಚು ಶಾಲೆಗಳಲ್ಲಿ ಪಠ್ಯದ ಚಟುವಟಿಕೆಯ ಸಮಯವನ್ನು ಅರ್ಧದಷ್ಟು ಕಡಿಮೆಗೊಳಿಸಿ ಮಕ್ಕಳನ್ನು ಮೈದಾನದಲ್ಲಿ ಆಡುವಂತೆ ಹೆಚ್ಚು ಪ್ರೋತ್ಸಾಹಿಸುವ ಶಿಕ್ಷಣ ಕ್ರಮ ರೂಪಿಸುವುದಾಗಿ ಘೋಷಣೆ ಮಾಡಿದ್ದಾರೆ. ಬದಲಾವಣೆ ಅನ್ನೋದು ಇದನ್ನೇ. ಆಲೋಚನಾ ಕ್ರಮದ ಬದಲಾವಣೆ. ಈಗಿನ ಕೇಂದ್ರ ಸಕರ್ಾರಕ್ಕೆ ಈ ಮಾತು ಬಲು ಚೆನ್ನಾಗಿ ಗೊತ್ತಿದೆ. ಹೀಗಾಗಿಯೇ ಹಿಮಾ ದಾಸ್ ಮತ್ತು ಸ್ವಪ್ನ ಬರ್ಮನ್ಳಂತಹ ಸಾಮಾನ್ಯರೆನಿಸಿಕೊಂಡವರೂ ಕೂಡ ಇಂದು ಹೀರೋಗಳಾಗಿ ಮೆರೆಯುತ್ತಿದ್ದಾರೆ. ನನಗಂತೂ ಅಚ್ಛೇದಿನ್ಗಳು ನಿಚ್ಚಳವಾಗಿ ಕಾಣುತ್ತಿವೆ.

ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top