National

ರಾಹುಲ್‌ ಟೀಕೆಗೆ ಖಡಕ್‌ ಉತ್ತರ ನೀಡಿದ ಪ್ರಧಾನಿ ನರೇಂದ್ರಮೋದಿ!

ಕೊನೆಯ ಹಂತದ ಲೋಕಸಭಾ ಚುನಾವಣೆಗೆ ಇನ್ನೊಂದು‌ ದಿನ ಬಾಕಿ ಉಳಿದಿದೆ. ಇನ್ನೈದು ದಿನಗಳಲ್ಲಿ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ. ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರ ಮಾಡುವುದೋ ಅಥವಾ ಮಹಾಘಟಬಂಧನದ ನಾಯಕರೆಲ್ಲಾ ಸೇರಿ ಗದ್ದುಗೆಗೆ ಗುದ್ದಾಟ ಮಾಡುವ ಪರಿಸ್ಥಿತಿ ಉಂಟಾಗುವುದೋ ಕಾದು ನೋಡಬೇಕಿದೆ. ನಿನ್ನೆ ಪ್ರಧಾನಮಂತ್ರಿ ನರೇಂದ್ರಮೋದಿಯವರು ನ್ಯೂಸ್ 24 ಗೆ ಸಂದರ್ಶನ ನೀಡಿದ್ದರು.
ಈ‌ ಸಂದರ್ಶನದಲ್ಲಿ ಮೋದಿಯವರು ಸಾಧ್ವಿ ಪ್ರಜ್ಞಾಸಿಂಗ್ ಅವರ ಗೋಡ್ಸೆ ದೇಶಭಕ್ತ ಎಂಬ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಷ್ಟೆ ಅಲ್ಲದೇ ಆಕೆಯನ್ನು ಈ ಕಾರಣಕ್ಕೆ ತಾನೆಂದೂ ಕ್ಷಮಿಸುವುದಿಲ್ಲವೆಂದೂ ಹೇಳಿದ್ದರು.
ನಂತರ ಸಂದರ್ಶಕ ಮೋದಿಯವರು ರಾಜೀವ್ ಗಾಂಧಿಯ ಕುರಿತಂತೆ ಭ್ರಷ್ಟಾಚಾರಿ ನಂಬರ್ ಒನ್ ಎಂದು ಹೇಳಿದ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ರಾಹುಲ್‌ರ ಪ್ರತಿಕ್ರಿಯೆಯನ್ನು ಹೇಳಿ ಮೋದಿಯವರ ಅಭಿಪ್ರಾಯವನ್ನು ಕೇಳಲಾಯಿತು. ನರೇಂದ್ರಮೋದಿಯವರು ರಾಹುಲ್‌ರನ್ನು  ಟೀಕಿಸಿದರು. ಅಷ್ಟೇ ಅಲ್ಲದೇ ಮೊದಲ ಬಾರಿಗೆ ರಾಹುಲ್‌ರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದರು.
ನರೇಂದ್ರಮೋದಿಯವರು, ‘ನಾನು ಸಾಮಾನ್ಯವಾಗಿ ಅವರ ಹೆಸರನ್ನು ಹೇಳಿ ಮಾತನಾಡುವುದಿಲ್ಲ. ಆದರೆ ಇಂದು ಮಾಡುತ್ತೇನೆ’ ಎಂದು ಹೇಳಿ ಮಾತನ್ನು ಮುಂದುವರೆಸಿ ‘ಶ್ರೀಮಾನ್ ರಾಹುಲ್ ಗಾಂಧಿಜೀ ನಿಮಗೆ ಸಾರ್ವಜನಿಕ ಜೀವನದಲ್ಲಿ ಐದು ಪೀಳಿಗೆಗಳ ಅನುಭವವಿದೆ, ನಿಮ್ಮ‌ ಕುಟುಂಬ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಪದವಿಗಳನ್ನೇ ಅಲಂಕರಿಸಿತ್ತು, ಹಾಗಾಗಿ ನಿಮ್ಮ ಬುದ್ಧಿವಂತಿಕೆಯನ್ನು ನಾನು ಅನುಮಾನಿಸುತ್ತಿಲ್ಲ. ನಾನಿಂದು ನಿಮಗೆ ನನ್ನ ತಂದೆ-ತಾಯಿಯರ ಮೇಲೆ‌ ಯಾವ ಕರುಣೆಯನ್ನೂ ತೋರಿಸಬೇಡಿ ಎಂದು ಹೇಳುತ್ತಿದ್ದೇನೆ. ನನ್ನ ತಂದೆ-ತಾಯಿಯರು ತಮ್ಮ ಸಾರ್ವಜನಿಕ ಅಥವಾ ಖಾಸಗಿ ಬದುಕಿನಲ್ಲಿ ಒಮ್ಮೆಯಾದರೂ ಒಂದಾದರೂ ತಪ್ಪನ್ನು ಮಾಡಿದ್ದರೆ,‌ ಮತ್ತು ನಿಮಗೆ ಅದರ ಬಗ್ಗೆ ಏನೇ ಮಾಹಿತಿ ಇದ್ದರೂ ಸಾರ್ವಜನಿಕವಾಗಿ ಆ ವಿಷಯವನ್ನು ಹೊರಗೆ ತನ್ನಿ’ ಎಂದಿದ್ದಾರೆ. ಮುಂದುವರೆಸಿ, ‘ನನ್ನ ಪೋಷಕರನ್ನು ಬೈಯ್ಯುವುದು, ನನ್ನ ವಿರೋಧ ಮಾತನಾಡುವುದು ಇವೆಲ್ಲವನ್ನೂ ಸಾಕ್ಷಿ ಇದ್ದರೆ ಮಾತ್ರ ಮಾಡಿ. ನನ್ನ ಪೋಷಕರು ತಪ್ಪು ಮಾಡಿ, ಬೇರೆಯವರು ಅವರ ಮೇಲೆ ಕರುಣೆ ತೋರುವುದು ನನಗೆ ಇಷ್ಟವಿಲ್ಲ. ಕರುಣೆ ಅನ್ನೋ ಪದವನ್ನು ಬಳಸಿ ನೀವು ನನ್ನ ಸಮಗ್ರತೆ ಮತ್ತು ಸಂಸ್ಕಾರಕ್ಕೆ ನೋವುಂಟು ಮಾಡಿದ್ದೀರಿ. ನನಗೆ ಜನ್ಮ ನೀಡಿದ್ದೇ ಅವರ ದೊಡ್ಡ ತಪ್ಪು ಎಂದು ನೀವು ಭಾವಿಸುವುದಾದರೆ ನನಗೆ ಏನು ಮಾಡಬೇಕೋ ನೀವದನ್ನು ಮಾಡಬಹುದು’ ಎಂದರು!
ರಾಜೀವ್ ಗಾಂಧಿಯವರು ಮಾಜಿ ಪ್ರಧಾನಮಂತ್ರಿಯಾದ್ದರಿಂದ ಅವರನ್ನು ಟೀಕಿಸುವ ಎಲ್ಲಾ ಹಕ್ಕು ತನಗಿದೆ ಎಂದು ಮೋದಿಯವರು ಹೇಳಿದರು. ‘ನಿಮ್ಮ ಪೋಷಕರನ್ನು ಟೀಕಿಸುವ ಹಕ್ಕು ನನಗಿಲ್ಲ, ಅಷ್ಟೇ ಅಲ್ಲ, ಯಾರಿಗೂ ಇಲ್ಲ. ಆದರೆ ಜನರಿಗೆ ಮಾಜಿ ಪ್ರಧಾನಮಂತ್ರಿಯನ್ನು, ರಾಜ ಪರಿವಾರವನ್ನು ಮತ್ತು ಸಾರ್ವಜನಿಕ ಜೀವನದಲ್ಲಿರುವವರೆಲ್ಲರನ್ನೂ ಟೀಕಿಸುವ ಎಲ್ಲಾ ಹಕ್ಕು ಇದೆ‌. ಇದು ನನಗೂ ಸಹ ಅನ್ವಯಿಸುತ್ತದೆ’ ಎಂದಿದ್ದಾರೆ.
ಮತ್ತೂ ಮುಂದುವರೆಸಿದ ಪ್ರಧಾನಿ ನರೇಂದ್ರಮೋದಿಯವರು, ‘ಈಗಿನ ಕಾಲದಲ್ಲಿ ರಾಮಭಕ್ತರೂ ಇದ್ದಾರೆ, ರಾಮನ ಅಸ್ತಿತ್ವವನ್ನು ಚರ್ಚಿಸುವವರೂ ಇದ್ದಾರೆ. ಕೃಷ್ಣನ ಅಸ್ತಿತ್ವವನ್ನು ಪ್ರಶ್ನಿಸುವವರಿದ್ದಾರೆ ಮತ್ತು ಸಮಾಜ ಅಂಥವರನ್ನು ಗೌರವಿಸುತ್ತದೆ ಕೂಡ. ರಾಹುಲ್‌ಜಿ ನಿಮಗೆ ಸಂಸ್ಕೃತ ಅರ್ಥವಾಗದೇ ಇರಬಹುದು, ಆದರೆ ನನ್ನ ದೇಶದಲ್ಲಿ ಮಾರ್ಕ್ಸ್ ಸಿದ್ಧಾಂತಕ್ಕೂ ಮುನ್ನವೇ ಅದೇ ಧಾಟಿಯಲ್ಲಿ ಮಾತನಾಡಿದವರಿದ್ದಾರೆ. ಆತ ಹೇಳುತ್ತಿದ್ದ, ಹಣ ಖರ್ಚು ಮಾಡಿ, ತುಪ್ಪ ತಿನ್ನಿ. ನಾವು ಸತ್ತ ನಂತರ ಏನಾಗುತ್ತದೆಂದು ಯಾರು ತಾನೆ ಯೋಚಿಸುತ್ತಾರೆ ಎಂದು. ಅಂಥವರನ್ನೂ ನಾವು ಋಷಿ ಎಂದು ಕರೆದಿದ್ದೇವೆ. ಇದು ನಮ್ಮ ದೇಶದ ಶ್ರೇಷ್ಠತೆ. ರಾಮನನ್ನು ಟೀಕಿಸಬಹುದೆಂದರೆ, ನನ್ನ ಅಧಿಕಾರಾವಧಿ ಮುಗಿದ ಹಲವು ವರ್ಷಗಳ ನಂತರವೂ ಮೋದಿಯನ್ನೂ ಟೀಕಿಸಬಹುದು’ ಎಂದು ಕುಹಕವಾಡಿದ್ದಾರೆ.
ಪ್ರಧಾನಿ ಮೋದಿಯವರು ರಾಹುಲ್‌ರ ಮಾತಿಗೆ ಸರಿಯಾದ ತಿರುಗೇಟನ್ನೇ ನೀಡಿದ್ದಾರೆ ಎಂದು ಟ್ವೀಟಿಗರು ಚರ್ಚೆ ನಡೆಸಿದ್ದಾರೆ!
Click to comment

Leave a Reply

Your email address will not be published. Required fields are marked *

Most Popular

To Top