State

ಯಾವ ಸಂಸದರು, ಎಷ್ಟು ಸಾಧನೆ? ಅಂಕಗಳನ್ನು ನಾವೇ ಕೊಡೋಣ – ಆದರ್ಶಗ್ರಾಮದಿಂದಲೇ ಶುರುವಾಗಲಿ!!

ಗ್ರಾಮಗಳ ಅಭಿವೃದ್ಧಿಯಾದರೆ ರಾಷ್ಟ್ರಾಭಿವೃದ್ಧಿ ಎಂಬುದನ್ನರಿತು ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರು 2014ರಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಹುಟ್ಟಿದ ದಿನದಂದು ಸಂಸದ್ ಆದರ್ಶ್ ಗ್ರಾಮ ಎಂಬ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯಡಿಯಲ್ಲಿ ಪ್ರತಿ ಸಂದರೂ ತಮ್ಮ ಕ್ಷೇತ್ರದ ಗ್ರಾಮವೊಂದನ್ನು ದತ್ತು ತೆಗೆದುಕೊಳ್ಳಬೇಕು, ಆ ಗ್ರಾಮವನ್ನು ಮಾದರಿ ಹಳ್ಳಿಯಾಗಿಸುವ ಜವಾಬ್ದಾರಿ ಸಂಸದರು ಮತ್ತು ಶಾಸಕರ ಮೇಲಿರುತ್ತದೆ. ಗ್ರಾಮದ ಜನರ ಆರೋಗ್ಯ, ಸಾಮಾಜಿಕ ಬೆಳವಣಿಗೆ, ಆರ್ಥಿಕ ಪ್ರಗತಿ, ಪರಿಸರ ಅಭಿವೃದ್ಧಿ, ಸಾಮಾಜಿಕ ಭದ್ರತೆ, ಮೂಲಭೂತಸೌಕರ್ಯಗಳ ಅಭಿವೃದ್ಧಿ ಹೀಗೆ ವಿವಿಧ ಅಭಿವೃದ್ಧಿಕಾರ್ಯಗಳ ಕುರಿತು ಜನಪ್ರತಿನಿಧಿಗಳು ಗಮನಹರಿಸಬೇಕು.

ಈ ಯೋಜನೆಗಾಗಿ ಪ್ರತ್ಯೇಕ ಅನುದಾನವನ್ನು ಕೇಂದ್ರ ಸರ್ಕಾರ ನೀಡುವುದಿಲ್ಲ. ಬದಲಿಗೆ, ವಿವಿಧ ಯೋಜನೆಗಳಿಗೆ ಬರುವ ನೆರವು, ಸಂಸದರು ಮತ್ತು ಶಾಸಕರ ನಿಧಿ ಇವುಗಳನ್ನು ಬಳಸಿಕೊಂಡೇ ಗ್ರಾಮವನ್ನು ಅಭಿವೃದ್ಧಿಪಡಿಸಬೇಕು.

ಪ್ರತಿ ಸಂಸದರೂ ತಮ್ಮ ಸ್ವಂತ ಗ್ರಾಮವನ್ನು ಹೊರತುಪಡಿಸಿ ತಮ್ಮ ಕ್ಷೇತ್ರದ ಯಾವುದೇ ಗ್ರಾಮವನ್ನು ಆಯ್ಕೆಮಾಡಿಕೊಳ್ಳಬಹುದು. ಬಯಲುಸೀಮೆಯಲ್ಲಿ 3 ರಿಂದ 5 ಸಾವಿರ ಮತ್ತು ಗುಡ್ಡಗಾಡು ಪ್ರದೇಶದಲ್ಲಾದರೆ 1 ರಿಂದ 3 ಸಾವಿರ ಜನಸಂಖ್ಯೆಯುಳ್ಳ ಗ್ರಾಮವನ್ನು ತೆಗೆದುಕೊಳ್ಳಬೇಕು. ಈ ಯೋಜನೆಯಡಿ 2014-2019ರ ಮೊದಲ ಅವಧಿಯಲ್ಲಿ ಕರ್ನಾಟಕದ 28 ಲೋಕಸಭಾ ಸದಸ್ಯರ ಪೈಕಿ 24 ಸದಸ್ಯರು ತಮ್ಮ ಕ್ಷೇತ್ರದಲ್ಲಿ ಗ್ರಾಮಗಳನ್ನು ಆರಿಸಿಕೊಂಡಿದ್ದರು ಮತ್ತು 12 ರಾಜ್ಯಸಭಾ ಸದಸ್ಯರಲ್ಲಿ 6 ಸದಸ್ಯರು ಗ್ರಾಮವನ್ನು ದತ್ತುಪಡೆದಿದ್ದರು.

ಈ ಯೋಜನೆಯಡಿ ಮತ್ತೊಂದು ನಿಯಮವಿದೆ. ಅದರ ಪ್ರಕಾರ ಪ್ರತಿ ಸಂಸದರೂ 2016ರೊಳಗೆ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು, 2017ಕ್ಕೆ ಒಂದು, 2018ಕ್ಕೆ ಮತ್ತೊಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಆದರೆ, ಕರ್ನಾಟಕದ ಸಂಸದರು ಮತ್ತು ಶಾಸಕರು ಒಂದೇ ಗ್ರಾಮವನ್ನು ಆಯ್ಕೆಮಾಡಿಕೊಂಡು ಅದನ್ನು ಅಭಿವೃದ್ಧಿಪಡಿಸುವುದರಲ್ಲೇ ಇದ್ದಾರೆ. ಎಲ್ಲೋ ಕೆಲವರು ಎರಡನೇ ಗ್ರಾಮಕ್ಕೆ ಕೈಹಾಕಿದ್ದಾರೆ. ಯೋಜನೆಯ ಮೊದಲ ಹಂತದಲ್ಲಿ ಎಲ್ಲರೂ ಹುರುಪಿನಿಂದಲೇ ಗ್ರಾಮವನ್ನು ಆಯ್ಕೆ ಮಾಡಿಕೊಂಡರೆ, ಎರಡನೇ ಹಂತದ ವೇಳೆಗೆ 28 ರಲ್ಲಿ 9 ಜನ ಮಾತ್ರ ಮತ್ತೊಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದರು. ಮೂರನೇ ಹಂತದ ವೇಳೆಗೆ ಯೋಜನೆ ಹಳ್ಳ ಹಿಡಿಯಿತು ಎಂದೇ ಹೇಳಬಹುದು. ಒಟ್ಟಾರೆ ಐದು ವರ್ಷದ ಅವಧಿಯಲ್ಲಿ 50 ಗ್ರಾಮಗಳು ಹೆಸರಿಗೆ ಮಾತ್ರವೇ ಆದರ್ಶಗ್ರಾಮ ಯೋಜನೆಯಡಿ ದಾಖಲಾಗಿವೆ. ಈ ಯೋಜನೆಯಡಿ ಆಯ್ಕೆ ಮಾಡಿಕೊಂಡ ಯಾವ ಗ್ರಾಮವೂ ಐದು ವರ್ಷಗಳಲ್ಲಿ ಆದರ್ಶ ಗ್ರಾಮ ಅಥವಾ ಮಾದರಿ ಗ್ರಾಮವಾಗಿ ಹೊರಹೊಮ್ಮಿಲ್ಲ ಎಂದು ವಿಜಯ ಕರ್ನಾಟಕ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಕಂಡು ಬಂದಿದ್ದು ವಿಪರ್ಯಾಸದ ಸಂಗತಿಯೇ ಆಗಿತ್ತು!

ಬಿಜೆಪಿ ಸಂಸದರೇ ಹೆಚ್ಚಿರುವಾಗಲೂ ರಾಜ್ಯದಲ್ಲಿ ಆದರ್ಶಗ್ರಾಮ ಯೋಜನೆಯನ್ನು ಸಂಸದರು ಸಮರ್ಥವಾಗಿ ಕೈಗೆತ್ತಿಕೊಳ್ಳಲಿಲ್ಲ. ಸಂಸದರಿಗೆ ಕೇಂದ್ರ ಸರ್ಕಾರ ತಮ್ಮ ಕ್ಷೇತ್ರಾಭಿವೃದ್ಧಿಗೆಂದು ವಾರ್ಷಿಕ 5.ಕೋಟಿ ರೂಪಾಯಿಯನ್ನು ಮೀಸಲಾಗಿರಿಸುತ್ತದೆ. ಅಂದರೆ ಐದು ವರ್ಷಕ್ಕೆ 25 ಕೋಟಿ ರೂಪಾಯಿಗಳಾದವು. ಹಲವು ಸಚಿವರು ಈ ಹಣವನ್ನು ಸಂಪೂರ್ಣವಾಗಿ ಬಳಸಿಯೇ ಇಲ್ಲದಿರುವುದು ಅಚ್ಚರಿಯ ವಿಷಯ.

ಬೀದರ್ ನ ಸಂಸದ ಭಗವಂತ ಖೂಬಾ ಅವರು ಮೊದಲ ಹಂತದಲ್ಲಿ ಗೊರಟಾ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದರು. ಸಂಸದರ ನಿಧಿಯಿಂದ 35 ಲಕ್ಷ ರೂಪಾಯಿ ಬಳಸಿ ಕೆಲವು ಶೌಚಾಲಯಗಳ ನಿರ್ಮಾಣವಾಗಿದೆ, ಸಿ.ಸಿ ರಸ್ತೆಗಳ ನಿರ್ಮಾಣವಾಗಿದೆ ಬಿಟ್ಟರೆ ಮತ್ತೇನೂ ಇಲ್ಲ. ಐದು ವರ್ಷಗಳಲ್ಲಿ ಸಂಸದರಿಗೆ ಈ ಗ್ರಾಮವನ್ನು ಶೌಚಾಲಯ ಮುಕ್ತವನ್ನಾಗಿಸಲು ಸಾಧ್ಯವಾಗಲಿಲ್ಲ!

ರಾಯಚೂರಿನ ಹಿಂದಿನ ಅವಧಿಯಲ್ಲಿದ್ದ ಬಿ.ವಿ ನಾಯಕ್ ಅವರು ಜಾಗೀರ ವೆಂಕಟಾಪುರವನ್ನು ಆದರ್ಶಗ್ರಾಮಕ್ಕೆ ಆಯ್ಕೆ ಮಾಡಿದ್ದರು. ಆರೋಗ್ಯ ಕೇಂದ್ರಕ್ಕೆ ವೈದ್ಯರಿಲ್ಲ, ಕುಡಿಯುವ ನೀರಿನ ಸಮಸ್ಯೆ, ರಸ್ತೆಯಿಲ್ಲ ಹೀಗೆ ಹಲವು ಸಮಸ್ಯೆಗಳಿದ್ದರೂ ಐದು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲವೆಂಬುದು ಕಂಡುಬಂದಿದೆ.

ಇದು ಒಂದೋ ಎರಡೋ ಕ್ಷೇತ್ರಗಳ ಪರಿಸ್ಥಿತಿಯಲ್ಲ. ಎಲ್ಲಾ ಸಂಸದರ ಆದರ್ಶಗ್ರಾಮವೂ ಈ ರೀತಿಯ ಸಮಸ್ಯೆಗಳಲ್ಲಿಯೇ ಮುಳುಗಿರುವುದನ್ನು ಕೆಲವು ಪತ್ರಿಕೆಗಳು ಈ ಹಿಂದೆ ರಿಯಾಲಿಟಿ ಚೆಕ್ ನಡೆಸಿ ಹೊರಹಾಕಿವೆ. ಎರಡನೇ ಅವಧಿಯ ವೇಳೆಗೆ ಜನಕ್ಕೂ ಹೀಗೊಂದು ಯೋಜನೆಯಿತ್ತು ಎಂದು ಮರೆತು ಹೋಗಿದ್ದರೆ ಅಚ್ಚರಿಪಡಬೇಕಿಲ್ಲ.

ಬೆಳಗಾವಿಯ ಸುರೇಶ್ ಅಂಗಡಿಯವರು ಮುತ್ನಾಳ್ ಗ್ರಾಮ, ಉತ್ತರಕನ್ನಡದ ಅನಂತ್ ಕುಮಾರ್ ಹೆಗ್ಡೆಯವರು ಕಾನ್ ಗೋಡ್ ಗ್ರಾಮ, ಹಾಸನದ ದೇವೇಗೌಡರು ಚನ್ನಂಗಿಹಳ್ಳಿ, ಚಾಮರಾಜನಗರದ ಧ್ರುವ ನಾರಾಯಣ್ ಅವರು ಡಿ.ಬಿ ಕುಪ್ಪೆ, ಬಾಗಲಕೋಟೆಯ ಗದ್ದಿಗೌಡರು ಚೋಳಚಗುಡ್ಡ, ಚಿಕ್ಕೋಡಿಯ ಪ್ರಕಾಶ್ ಹುಕ್ಕೇರಿಯವರು ಶಿರದ್ವಾಡ್, ಬಿಜಾಪುರದ ರಮೇಶ್ ಜಿಗಜಿಣಗಿಯವರು ಮಖ್ನಾಪುರ್, ಧಾರವಾಡದ ಪ್ರಹ್ಲಾದ್ ಜೋಷಿಯವರು ಹಾರೋಬೆಳವಾಡಿ, ಕೊಪ್ಪಳದ ಸಂಗಣ್ಣ ಕರಡಿಯವರು ಆರ್.ಎಚ್.ಕಾಲೋನಿ, ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆಯವರು ದಾರದಹಳ್ಳಿ, ದಕ್ಷಿಣ ಕನ್ನಡದ ನಳಿನ್ ಕುಮಾರ್ ಕಟೀಲ್ ಅವರು ಬಳಪ, ಕಲ್ಬುರ್ಗಿಯ ಮಲ್ಲಿಕಾರ್ಜುನ ಖರ್ಗೆಯವರು ಕೊಂಕಲ್, ಬೀದರ್ ನ ಭಗವಂತ್ ಖೂಬಾ ಅವರು ಗೋರಟಾ, ಬೆಂಗಳೂರು ದಕ್ಷಿಣದ ಅನಂತ್ ಕುಮಾರ್ ಅವರು ರಾಗೀಹಳ್ಳಿ, ಚಿಕ್ಕಬಳ್ಳಾಪುರದ ವೀರಪ್ಪ ಮೊಯ್ಲಿಯವರು ಅಗಲಕುಪ್ಪೆ, ಕೋಲಾರದ ಮುನಿಯಪ್ಪನವರು ಗಟ್ಟಕಮದೆನ ಹಳ್ಳಿ, ರಾಯಚೂರಿನ ಬಿ.ವಿ ನಾಯಕ್  ಅವರು ಜಾಗೀರ್ ವೆಂಕಟಾಪುರ, ದಾವಣಗೆರೆಯ ಗೌಡರ ಮಲ್ಲಿಕಾರ್ಜುನಪ್ಪ ಅವರು ಮಸ್ತೂರ್, ಮೈಸೂರಿನ ಪ್ರತಾಪಸಿಂಹ ಅವರು ಕರಿಮುದ್ದನಹಳ್ಳಿ, ಬಳ್ಳಾರಿಯ ಶ್ರೀರಾಮುಲು ಅವರು ತಂಬ್ರಳ್ಳಿ, ಬೆಂಗಳೂರು ಗ್ರಾಮಾಂತರದ ಡಿ.ಕೆ ಸುರೇಶ್ ಅವರು ಮಡಿಕೆಹಳ್ಳಿ, ಹಾವೇರಿಯ ಎಸ್.ಸಿ ಉದಾಸಿಯವರು ಯಲವಟ್ಟಿ ಮತ್ತು ಶಿವಮೊಗ್ಗದ ಯಡ್ಯೂರಪ್ಪನವರು ಕಿರಾಡಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಆದರೆ, ಈ ಬಾರಿ ಜನ ಎಚ್ಚೆತ್ತುಕೊಂಡಿದ್ದಾರೆ. ನಾನೀಗ ಚೌಕಿದಾರ್ ತಂಡ ಸಂಸದರು ಆಯ್ಕೆ ಮಾಡಿಕೊಂಡ ಆದರ್ಶಗ್ರಾಮಕ್ಕೆ ಭೇಟಿ ನೀಡಲಿದೆ. ಅಲ್ಲಿ ಸಂಸದರು ಇದುವರೆಗೂ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಹೇಳಿಯೂ ಮಾಡದೇ ಉಳಿಸಿರುವ ಕಾರ್ಯಗಳು, ಅಲ್ಲಿನ ಜನಾಭಿಫ್ರಾಯಗಳ ಒಂದು ಸಂಪೂರ್ಣ ವರದಿಯನ್ನು ನಿಮ್ಮ ಮುಂದಿಡಲಿದೆ. ಈ ಬಾರಿ ಜನಪ್ರತಿನಿಧಿಗಳು ಸುಮ್ಮನಿದ್ದರೂ ನಾವು ಸುಮ್ಮನೆ ಕೂರುವವರಲ್ಲ. ನಾವೆಲ್ಲಾ ಚೌಕಿದಾರ್ ಗಳಾಗಿ ನಮ್ಮ ಸಂಸದರು, ಶಾಸಕರ ಬಳಿ ಕೆಲಸ ಮಾಡಿಸಿಕೊಳ್ಳಬೇಕಿದೆ.

Click to comment

Leave a Reply

Your email address will not be published. Required fields are marked *

Most Popular

To Top