National

ಯಶಸ್ಸಿಗೆ ರಾಜಮಾರ್ಗ!

ಯಶಸ್ಸು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ತಾವು ಮಾಡಿದ ಕೆಲಸ ಯಶಸ್ಸಿನಲ್ಲಿಯೇ ಕೊನೆಗೊಳ್ಳಬೇಕೆಂದು ಆಶಿಸುತ್ತಾರೆ. ಸಾಮಾನ್ಯ ಕೂಲಿ ಕಾಮರ್ಿಕನಿಂದ ಹಿಡಿದು ದೇಶವನ್ನಾಳುವ ಪ್ರಧಾನಮಂತ್ರಿಯವರೆಗೆ ಹಿಡಿದ ಕೆಲಸದಲ್ಲಿ ಗೆಲುವು ಕಾಣಬೇಕೆಂಬ ತವಕ ಇದ್ದದ್ದೇ. ಆದರೆ ನಮ್ಮಲ್ಲನೇಕರು ಗೆಲುವಿನ ಒಂದಿಷ್ಟೂ ರುಚಿ ನೋಡದೇ ಬದುಕನ್ನು ಕಳೆದುಬಿಡುತ್ತಾರೆ. ಅಷ್ಟೇ ಅಲ್ಲ, ತನಗೆ ಗೆಲುವು ದಕ್ಕಲಿಲ್ಲವಲ್ಲಾ ಎಂದು ಕೊರಗುತ್ತಲೇ ಇರುತ್ತಾರೆ. ಈ ಕೊರಗುವಿಕೆಯಿಂದಲೇ ಎದುರಿಗಿರುವ ಯಶಸ್ಸನ್ನು ಅನುಭವಿಸಲಾಗದೇ ಮತ್ತಿಷ್ಟು ನೊಂದುಕೊಳ್ಳುತ್ತಾರೆ. ಸಂತ ರಾಮತೀರ್ಥರು ಜಪಾನಿನ ಭಾಷಣವೊಂದರಲ್ಲಿ ಯಶಸ್ಸು ಪಡೆಯುವ ಮಾರ್ಗದ ಕುರಿತಂತೆ ಆಡಿರುವ ಮಾತುಗಳು ನಿಜಕ್ಕೂ ಮನೋಜ್ಞವಾಗಿದೆ. ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಬಲ್ಲಂಥದ್ದು. ದೀಪಾವಳಿಯಂದು ಅವರ ಜನ್ಮದಿನವನ್ನು ನೆನಪಿಸಿಕೊಳ್ಳಲೆಂದೇ ಇಲ್ಲಿ ಆ ಭಾಷಣದ ಸಾರಾಂಶ ಹಂಚಿಕೊಳ್ಳುತ್ತಿದ್ದೇನೆ.


ರಾಮತೀರ್ಥರ ಪ್ರಕಾರ ಅನೇಕ ಬಾರಿ ಯಶಸ್ಸು ನಮಗೆ ಸಿಗುತ್ತಿದೆ ಎಂದೆನಿಸಿದರೂ ಅದಕ್ಕೆ ಆಧಾರವಾದ ತಾತ್ವಿಕ ವಿಚಾರವನ್ನು ಅರಿಯದೇ ಹೋದರೆ ಆ ಯಶಸ್ಸು ಬಹಳ ಕಾಲ ಉಳಿಯಲಾರದು. ಉದಾಹರಣೆಗೆ ರೈಲ್ವೇ ಇಂಜಿನ್ನಿಗೆ ಕಲ್ಲಿದ್ದಲು ಹಾಕುವವನು ರೈಲನ್ನು ಗಮ್ಯಸ್ಥಾನಕ್ಕೆ ತಲುಪಿಸಿದ ಯಶಸ್ಸನ್ನು ಪಡೆದರೂ ಆತ ಇಂಜಿನಿಯರ್ ಆಗಲಾರ, ಏಕೆಂದರೆ ಅವನ ಕೆಲಸ ಯಾಂತ್ರಿಕವಷ್ಟೇ. ಅವನಿಗೆ ಇಂಜಿನ್ ಕೆಲಸ ಮಾಡುವ ಪರಿಯೇ ಗೊತ್ತಿಲ್ಲ. ಈ ವೈಜ್ಞಾನಿಕ ಸಂಗತಿಗಳನ್ನು ಆತ ಅರಿಯದೇ ಹೋದರೆ ಇಂಜಿನ್ ಸಮಸ್ಯೆಗೊಳಗಾದರೆ ಆತ ಕೈಕಟ್ಟಿ ಕೂರಬೇಕಾಗುತ್ತದಲ್ಲವೇ? ಹಾಗೆಯೇ ಯಶಸ್ಸೂ ಕೂಡ. ನಾವು ನಡೆಯುವ ಹಾದಿಯ ಹಿಂದಿರುವ ತಾತ್ವಿಕ ವಿಚಾರವನ್ನು ಅರಿಯಲೇಬೇಕು.

ರಾಮತೀರ್ಥರ ಪ್ರಕಾರ ಯಶಸ್ಸಿನ ಮೊದಲ ಮೆಟ್ಟಿಲೇ ಕತರ್ೃತ್ವ ಅಥವಾ ನಿರಂತರ ಕೆಲಸ ಮಾಡುವಿಕೆ. ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುವೂ ನಿರಂತರ ಕೆಲಸವನ್ನೇ ನಮಗೆ ಬೋಧಿಸುತ್ತಿವೆ. ಹುಟ್ಟಿದಾಗಿನಿಂದ ಇಂದಿನವರೆಗೂ ಸದಾಕಾಲ ಹರಿಯುವ ನದಿ, ಸದಾ ಕಾಲ ಬೆಳಕು ಕೊಡುವ ಸೂರ್ಯ, ವಿಶ್ರಮಿಸದೇ ಬೀಸುವ ಗಾಳಿ ಇವೆಲ್ಲವೂ ನಮಗೆ ಕಲಿಸಿಕೊಡುವ ಪಾಠವನ್ನು ಸ್ವೀಕರಿಸಲೇಬೇಕು. ದೀಪಾವಳಿಯಂದು ಬೆಳಕು ಕೊಡುವ ದೀಪವನ್ನು ಗಮನಿಸಿದ್ದೀರಲ್ಲವೇ? ಆ ಉಜ್ವಲ ಪ್ರಕಾಶದ ರಹಸ್ಯವೇನು ಗೊತ್ತೇ? ಸ್ವತಃ ಆ ದೀಪ ತನ್ನ ಬತ್ತಿಯನ್ನು, ಎಣ್ಣೆಯನ್ನು ಉಳಿಯಗೊಡುವುದೇ ಇಲ್ಲ. ಒಂದೆಡೆ ಬತ್ತಿ ಉರಿಯುತ್ತಲೇ ಇದ್ದರೆ, ಮತ್ತೊಂದೆಡೆ ಎಣ್ಣೆ ತನ್ನ ತಾನು ಸಮಪರ್ಿಸಿಕೊಳ್ಳುತ್ತಲೇ ಇರುತ್ತದೆ. ನಿಮ್ಮನ್ನು ನೀವು ಮೋಹವಶರಾಗಿ ಉಳಿಸಿಕೊಂಡರೆ ನೀವು ಕೂಡಲೇ ಅಳಿಯುತ್ತೀರಿ. ಅದರ ಬದಲು ನಿಮ್ಮನ್ನೇ ನೀವು ಸಮಪರ್ಿಸಿಕೊಂಡರೆ ಉಜ್ವಲ ಪ್ರಭೆಯಾಗಿ ಬೆಳಗುತ್ತೀರಿ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ರಾಮತೀರ್ಥರ ಪ್ರಕಾರ ‘ನೀವು ನಿಮ್ಮ ದೇಹಗಳಿಗೆ ಆರಾಮವನ್ನು, ಸೌಖ್ಯವನ್ನು ಬಳಸಿ ವಿಷಯ ಸುಖಭೋಗಗಳಲ್ಲಿಯೇ ಕಾಲವನ್ನು ಕಳೆದರೆ ನಿಮಗೆ ಯಾವ ಏಳಿಗೆಯೂ ಇಲ್ಲವಾಗುತ್ತದೆ’. ಕ್ರಿಯಾಶೂನ್ಯತೆ ಮರಣ ಸಮಾನವೇ ಸರಿ. ಹೀಗಾಗಿ ಯಶಸ್ಸು ಬಯಸುವವನಿಗೆ ಮೊದಲ ಹೆಜ್ಜೆಯೇ ನಿರಂತರ ಕೆಲಸ ಮಾಡುವುದು. ಸಂಸ್ಕೃತದ ಸುಭಾಷಿತವೊಂದು ಇದನ್ನು ಬಲು ಸುಂದರವಾಗಿ ಕಟ್ಟಿಕೊಡುತ್ತದೆ. ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್| ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಮ್|| ಒಂದೊಂದು ಕ್ಷಣವನ್ನು ವ್ಯರ್ಥಮಾಡದೇ ವಿದ್ಯೆಯನ್ನು, ಕಣ-ಕಣವನ್ನು ವ್ಯರ್ಥಮಾಡದೇ ಧನವನ್ನು ಗಳಿಸಬೇಕಂತೆ. ಕೂತುಂಡರೆ ಗಡಿಗೆ ಹೊನ್ನೂ ಕಡಿಮೆಯೇ.


ಹಾಗಂತ ಬರೀ ಕೆಲಸ ಮಾಡುತ್ತಿದ್ದರೆ ಆಗಿಬಿಡಲಿಲ್ಲವಲ್ಲಾ, ಗಾಣದೆತ್ತಿನಂತೆ ದುಡಿದರೆ ಏನು ಪ್ರಯೋಜನ? ಎನ್ನುವ ಮಾತೂ ಕೇಳಿದ್ದೇವಲ್ಲ. ಅದಕ್ಕೆ ರಾಮತೀರ್ಥರು ಯಶಸ್ಸಿನ ಎರಡನೇ ಮೆಟ್ಟಿಲಾಗಿ ಸ್ವಾರ್ಥತ್ಯಾಗವನ್ನೇ ಗುರುತಿಸುತ್ತಾರೆ. ನಾವು ಪಡೆದುದನ್ನೆಲ್ಲಾ ಇತರರಿಗೆ ಹಿಂದಿರುಗಿ ನೀಡುವುದನ್ನು ಕಲಿತರೆ ಪರಿಶುದ್ಧವಾಗುತ್ತೇವೆ ಮತ್ತು ಎಲ್ಲರೂ ಬಯಸುವಂಥವರಾಗುತ್ತೇವೆ. ಇದನ್ನು ರಾಮತೀರ್ಥರು ಬಲು ಸುಂದರವಾದ ಉದಾಹರಣೆಯ ಮೂಲಕ ಕಟ್ಟಿಕೊಡುತ್ತಾರೆ. ಸೂರ್ಯ ಕಿರಣದಲ್ಲಿ ಏಳು ಬಣ್ಣಗಳಿದ್ದರೂ ಎಲೆ ಮಾತ್ರ ಹಸಿರಾಗಿ ಕಾಣುತ್ತದೆ ಏಕೆ? ಉಳಿದೆಲ್ಲ ಬಣ್ಣಗಳನ್ನು ಸೂರ್ಯನ ಕಿರಣಗಳಿಂದ ಹೀರಿಕೊಂಡ ಎಲೆ ಹಸಿರನ್ನು ಮಾತ್ರ ಹೊರ ಚೆಲ್ಲುತ್ತದೆ. ಹೀಗಾಗಿ ಅದು ಹಸಿರು. ಸೂರ್ಯನ ಎಲ್ಲ ಬಣ್ಣಗಳನ್ನು ಹೀರಿಕೊಂಡುಬಿಡುವ ವಸ್ತು ಕಪ್ಪಾಗಿ ಕಂಡರೆ, ಒಂದಿನಿತೂ ತನ್ನ ಬಳಿ ಉಳಿಸಿಕೊಳ್ಳದೇ ಎಲ್ಲವನ್ನೂ ಹೊರ ಚೆಲ್ಲಿದರೆ ಅದು ಬಿಳುಪಾಗುತ್ತದೆ. ಹೀಗಾಗಿಯೇ ಕಪ್ಪನ್ನು ಅನೇಕರು ಅಶುಭವೆಂದೂ, ಬಿಳುಪನ್ನೂ ಶುಭ್ರ ಮತ್ತು ಶುಭವೆಂದು ಕರಿಯುತ್ತಾರೆ. ಹಾಗೆಯೇ ನಾವು ಕೂಡ. ನಿರಂತರ ಕಾರ್ಯಶೀಲತೆಯಿಂದ ಗಳಿಸಿದ್ದೆಲ್ಲವನ್ನೂ ಮರಳಿ ಕೊಟ್ಟಷ್ಟೂ ದೊಡ್ಡವರಾಗುತ್ತೇವೆ. ಒಮ್ಮೆ ನೀವು ಹೀಗೆ ಸ್ವಾರ್ಥಮುಕ್ತರಾಗುತ್ತಿದ್ದಂತೆ ವಿಸ್ತಾರವಾಗಲಾರಂಭಿಸುತ್ತೀರಿ. ಇದು ಯಶಸ್ಸಿನ ಮೂರನೇ ಹೆಜ್ಜೆ. ವಿಸ್ತಾರವಾಗುವುದು ಎಂದರೆ ತನ್ನನ್ನು ತಾನು ಪೂರ್ಣ ಮರೆಯೋದು ಎಂದರ್ಥ. ಕಾರ್ಯಭರದಲ್ಲಿ ಸಣ್ಣ ಜೀವಾತ್ಮನನ್ನು ಮರೆತು ಸಂಪೂರ್ಣ ಕಾರ್ಯದಲ್ಲೇ ಮುಳುಗಿಬಿಟ್ಟರೆ ಕಾರ್ಯಸಿದ್ಧಿ ನಿಶ್ಚಿತ. ರಾಮತೀರ್ಥರು ಜಪಾನಿನ ಈ ಉಪನ್ಯಾಸದ ಆರಂಭದಲ್ಲಿ ವಿದ್ಯಾಥರ್ಿಗಳ ಮತ್ತು ಅಧ್ಯಾಪಕರ ರೂಪದಲ್ಲಿರುವ ನನ್ನ ಆತ್ಮವೇ ಎಂದು ಸಂಬೋಧಿಸುತ್ತಾರೆ. ಪ್ರತಿಯೊಬ್ಬರಲ್ಲೂ ತನ್ನನ್ನೇ ಕಾಣುವ ಈ ಭಾವನೆಯೇ ಅತ್ಯುತ್ಕೃಷ್ಟವಾದ್ದು. ಅಂಥವರ ಮಾತು ಪ್ರತಿ ಹೃದಯವನ್ನೂ ಮೀಟುತ್ತದೆ. ಅಂಥವರ ಕೆಲಸಗಳು ಖಂಡಿತವಾಗಿಯೂ ಜಯಶಾಲಿಯಾಗುತ್ತದೆ. ಹೀಗೆ ಆತ್ಮವಿಸ್ತರಣೆಯಾಗುತ್ತಿದ್ದಂತೆ ರಾಮತೀರ್ಥರು ಹೇಳುವ ಯಶಸ್ಸಿನ ನಾಲ್ಕನೇ ಹಂತ ನಾವು ತಲುಪುತ್ತೇವೆ. ಅದೇ ವಿಶ್ವಪ್ರೇಮ. ಇತರರನ್ನು ಪ್ರೀತಿಸದೇ ಬದುಕುವುದು ಸಾಧ್ಯವೇ ಇಲ್ಲ. ಹಾಗಿರುವಾಗ ಎಷ್ಟು ಪ್ರೇಮ ನಮ್ಮ ಮೂಲಕ ಪ್ರವಹಿಸುವುದೋ ಅಷ್ಟು ಯಶಸ್ಸು ನಮ್ಮದಾಗುತ್ತದೆ. ಕೈ ತಾನು ಬದುಕಬೇಕಾದರೆ ದೇಹದ ಮಿಕ್ಕ ಅವಯವಗಳನ್ನೆಲ್ಲಾ ಪ್ರೀತಿಸಲೇಬೇಕು. ತಾನು ದುಡಿದು ದೇಹಕ್ಕೇಕೆ ಲಾಭ ಮಾಡಿಕೊಡಬೇಕು ಎಂದು ಆಲೋಚಿಸಿದರೆ ಕೈ ಸಾಯುವುದು ನಿಶ್ಚಿತ. ಹಾಗೆಯೇ ವ್ಯಕ್ತಿಯೊಬ್ಬ ಪ್ರೇಮದ ಮೂಲಕ ಎಷ್ಟು ವಿಸ್ತಾರಗೊಳ್ಳುತ್ತಾನೋ ಅಷ್ಟು ಯಶಸ್ಸು ಅವನದ್ದಾಗುತ್ತದೆ. ಮನೆಯವರನ್ನು ಪ್ರೀತಿಸಿದರೆ ಮನೆಯಲ್ಲಿ ಗೌರವ, ಊರಿನವರೆಲ್ಲರನ್ನೂ ಪ್ರೀತಿಸಿದರೆ ಊರಿನ ಮುಖ್ಯಸ್ಥ, ನಾಡಿನವರನ್ನು ಪ್ರೀತಿಸಿದರೆ ಜನನಾಯಕ, ಜಗತ್ತೆಲ್ಲವನ್ನೂ ಅಪ್ಪಿಕೊಳ್ಳಲು ಸಾಧ್ಯವಾದರೆ ಆಗ ವಿಶ್ವದೊಡೆಯ, ಅಷ್ಟೇ!


ಯಶಸ್ಸು ಅಂದರೆ ವಿಸ್ತಾರವಾಗೋದು ಅಂತಲೇ ಅರ್ಥ. ರಾಮತೀರ್ಥರು ಅಂಥದ್ದೇ ಮಾರ್ಗವನ್ನು ನಮ್ಮೆದುರಿಗೆ ಹರವಿಟ್ಟಿದ್ದಾರೆ.

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. Adarsh

    October 29, 2019 at 8:54 am

    Awesome sir

Leave a Reply

Your email address will not be published. Required fields are marked *

Most Popular

To Top