National

ಮೋದಿ ಇಲ್ಲದಿದ್ದರೆ ಇನ್ನೊಂದು ಪಾಕಿಸ್ತಾನವಾಗಿರುತ್ತಿತ್ತು ಭಾರತ!!

ಸುಮ್ಮನೆ ಕುಳಿತಾಗ ಒಮ್ಮೊಮ್ಮೆ ಅನ್ನಿಸುವುದುಂಟು, ಈ ಹಿಂದಿನ ಐದು ವರ್ಷಕ್ಕೂ ನರೇಂದ್ರಮೋದಿಯ ಬದಲು ಮನಮೋಹನ ಸಿಂಗರೇ ಮುಂದುವರೆದಿದ್ದರೆ ಏನಾಗಿಬಿಟ್ಟಿರುತ್ತಿತ್ತು ಅಂತ. ಹಾಗೊಂದು ಕಲ್ಪನೆ ಸುಳಿದು ಹೋದರೂ ಬೆಚ್ಚಿಬೀಳುವಂತಾಗುತ್ತದೆ. ಮನಮೋಹನ ಸಿಂಗರ ಹತ್ತು ವರ್ಷದ ಆಡಳಿತವನ್ನು, ಆ ಹೊತ್ತಿನಲ್ಲಿ ನಡೆದ ಕಾಂಗ್ರೆಸ್ಸಿಗರ ಲೂಟಿಯ ಪರ್ವವನ್ನು ಕಂಡರೆ ಒಮ್ಮೆ ಬೆಚ್ಚಿ ಬೀಳುವಂತಾಗುತ್ತದೆ. ಈ ವೇಳೆಗಾಗಲೇ ಏಷ್ಯಾ ಖಂಡದಲ್ಲಿ ಭಾರತ ಇನ್ನೊಂದು ಪಾಕಿಸ್ತಾನವಾಗಿರುತ್ತಿತ್ತೋ ಏನೋ! ನಾನು ಹೀಗೆ ಹೇಳಲು ಕಾರಣವಿದೆ. ಇಂದು ಪಾಕಿಸ್ತಾನದ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಅದಕ್ಕೆ ದೂರದೃಷ್ಟಿ ಇಲ್ಲದ ಆಡಳಿತ, ಅನವಶ್ಯಕ ದ್ವೇಷ, ಕೆಲವರೊಂದಿಗೆ ಅನಗತ್ಯ ಗೆಳೆತನ, ವಿಶ್ವಾಸವಿಲ್ಲದ ನಾಯಕತ್ವ ಮತ್ತು ಜನಸಾಮಾನ್ಯರನ್ನು ಅವಕಾಶಕ್ಕೆ ತಕ್ಕಂತೆ ಬಳಸಿಕೊಳ್ಳುವ ಯೋಜನೆಗಳು, ಇವುಗಳೇ ಕಾರಣ. ಮನಮೋಹನ ಸಿಂಗರ ಆಡಳಿತಾವಧಿಯಲ್ಲಿ ಭಾರತವು ಹಾಗೆಯೇ ಇತ್ತಲ್ಲವೇ!?

ಆ ಹತ್ತು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮ ಗೌರವ ಕುಸಿದೇ ಹೋಗಿತ್ತು. ಯಾರೊಂದಿಗೆ ಹಗೆತನ ಸಾಧಿಸಬೇಕು, ಯಾರೊಂದಿಗೆ ಗೆಳೆತನ ಬೆಳೆಸಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನವೂ ನಮಗಿರಲಿಲ್ಲ. ಚೀನಾ ನಮ್ಮ ಅಕ್ಕಪಕ್ಕದ ರಾಷ್ಟ್ರಗಳನ್ನು ತನ್ನತ್ತ ಸೆಳೆದುಕೊಂಡು ನಮ್ಮ ಕೊರಳಿಗೆ ಉರುಳನ್ನು ಹಾಕುತ್ತಿದ್ದರೆ ಅದನ್ನು ಪ್ರತಿಭಟಿಸುವಷ್ಟೂ ತಾಕತ್ತು ನಾವು ತೋರುತ್ತಿರಲಿಲ್ಲ. ಭೂಪ್ರದೇಶದ ದೃಷ್ಟಿಯಿಂದ ಮತ್ತು ಸಾಂಸ್ಕೃತಿಕತೆಯ ದೃಷ್ಟಿಯಿಂದ ನಮಗೆ ಹತ್ತಿರವಿರಬೇಕಿದ್ದ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಭೂತಾನ್, ಮಯನ್ಮಾರ್ಗಳು ಚೀನಾವನ್ನೇ ನೆಚ್ಚಿಕೊಂಡು ಬದುಕಲಾರಂಭಿಸಿಬಿಟ್ಟಿದ್ದವು. ಅದೂ ಸರಿಯೇ. ಬಡ ರಾಷ್ಟ್ರಗಳಿಗೆ ಶಕ್ತ ರಾಷ್ಟ್ರಗಳೇ ಆಸರೆ. ಇದೇ ಪರಿಸ್ಥಿತಿ ಪಾಕಿಸ್ತಾನಕ್ಕೂ ಇದೆ. ಎಲ್ಲ ದೃಷ್ಟಿಯಿಂದಲೂ ಪಾಕಿಸ್ತಾನಕ್ಕೆ ಬಲವಾಗಿ ಆತುಕೊಳ್ಳಬೇಕಾದ ಆಫ್ಘಾನಿಸ್ತಾನ ಪಾಕಿಸ್ತಾನವನ್ನು ಕಂಡರೆ ಉರಿದುಬೀಳುವಂತಾಗಿದೆ. ಇರಾನ್ ಮೊದಲಿನಿಂದಲೂ ಬದ್ಧ ವೈರಿಯೇ. ಇನ್ನು ದೂರದೃಷ್ಟಿಯನ್ನು ಬಳಸಿ ಭಾರತದೊಂದಿಗೆ ತಂಟೆಯನ್ನು ಕಡಿಮೆ ಮಾಡಿಕೊಂಡರೆ ಪಾಕಿಸ್ತಾನ ಎಷ್ಟೋ ಪಟ್ಟು ಮುಂದೆ ಹೋಗಿರುತ್ತಿತ್ತು. ಅದು ಬಿಟ್ಟು ಎಂದಿಗೂ ನಂಬಲು ಯೋಗ್ಯವಲ್ಲದ ಚೀನಾದ ಹಿಂದೆ ಬಿದ್ದಿರುವ ಪಾಕಿಸ್ತಾನ ರಾಜತಾಂತ್ರಿಕ ಮಟ್ಟದಲ್ಲಿ ಅಮೇರಿಕಾ, ರಷ್ಯಾಗಳಿಂದ ಛೀಮಾರಿ ಹಾಕಿಸಿಕೊಳ್ಳಲು ಬಹಳವೇನು ಆಗಬೇಕಾಗಿರಲಿಲ್ಲ, ಭಾರತ ಬಲಾಢ್ಯವಾದರೆ ಸಾಕಿತ್ತು. ನರೇಂದ್ರಮೋದಿ ಬಂದೊಡನೆ ಮಾಡಿದ ಕೆಲಸವೇ ಅದು. ಅವರು ಕಾಂಗ್ರೆಸ್ಸಿನ ಸಕರ್ಾರಗಳಂತೆ ಚೀನಾದೆದುರು ಗೋಗರೆಯುತ್ತಾ ಉಳಿಯಲಿಲ್ಲ. ಬದಲಿಗೆ ಚೀನಾದ ತೆಕ್ಕೆಯಲ್ಲಿದ್ದ ಭಾರತದ ನೆರೆ ರಾಷ್ಟ್ರಗಳನ್ನು ತಮ್ಮತ್ತ ಸೆಳೆದುಕೊಂಡರು. ದ್ವೇಷಮಯ ವಾತಾವರಣವನ್ನು ತಿಳಿಗೊಳಿಸಿ ಅವರೊಳಗೆ ವಿಶ್ವಾಸದ ಬೀಜವನ್ನು ಬಿತ್ತಿದರು. ಇದು ಭಾರತದ ಗಡಿ ಸಮಸ್ಯೆಯನ್ನು ಎಷ್ಟು ಕಡಿಮೆ ಮಾಡಿತೆಂದರೆ ಇಂದು ಬಾಂಗ್ಲಾದೇಶ ಭಾರತದ ಪರವಾಗಿ ನಿಂತಿದೆ. ಅಲ್ಲಿ ಭಾರತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಅತ್ತ ಮಯನ್ಮಾರ್ ತನ್ನ ಭೂಮಿಯಲ್ಲಿ ಭಾರತೀಯರು ಸೈನಿಕ ಕಾಯರ್ಾಚರಣೆ ನಡೆಸಲು ಅನುವು ಮಾಡಿಕೊಟ್ಟಿದ್ದಾರಲ್ಲದೇ ಚೀನಾ ಬೆಂಬಲಿತ ಉಗ್ರಗಾಮಿಗಳನ್ನು ಮಟ್ಟಹಾಕಿ ಅವರು ವಶಪಡಿಸಿಕೊಂಡಿದ್ದ ಭೂಮಿಯನ್ನು ಮರಳಿ ಪಡೆದಿದ್ದಾರೆ. ಡೋಕ್ಲಾಂನಲ್ಲಿ ತಂಟೆಗೈದ ಚೀನಾದಿಂದ ಇಂದು ಭೂತಾನ್ ಸಾಕಷ್ಟು ದೂರದಲ್ಲಿದೆ. ನೇಪಾಳ ಚೀನಾಕ್ಕೆ ಹತ್ತಿರವೆನಿಸಿದರೂ ಅಲ್ಲಿನ ಜನತೆಯನ್ನು ಭಾರತದೊಂದಿಗೆ ಬೆಸೆಯುವಲ್ಲಿ ಮೋದಿ ಸಕ್ಷಮರಾಗಿಬಿಟ್ಟಿದ್ದಾರೆ. ಐದೇ ವರ್ಷಗಳಲ್ಲಿ ತಮ್ಮ ಬಗಲಿಗಿರುವವರನ್ನು ಗೆಳೆಯರನ್ನಾಗಿ ಪರಿವತರ್ಿಸಿಕೊಂಡು ಗಡಿ ತಂಟೆ ಇಲ್ಲದಂತೆ ನಾಡನ್ನು ಕಟ್ಟುವ ವ್ಯವಸ್ಥೆ ರೂಪಿಸಿಕೊಂಡಿದ್ದು ಮೋದಿ. ಸದ್ಯಕ್ಕೆ ನಮ್ಮ ಪಾಲಿಗೆ ಇಬ್ಬರೇ ದೊಡ್ಡ ಶತ್ರುಗಳು. ಒಂದು ಚೀನಾ ಮತ್ತೊಂದು ಪಾಕಿಸ್ತಾನ. ಮೋದಿ ಆರಂಭದಲ್ಲಿ ಪಾಕಿಸ್ತಾನದೊಂದಿಗೆ ಪ್ರೀತಿಯಿಂದಲೇ ನಡೆದುಕೊಂಡಿದ್ದು ನಿಜವಾದರೂ ಅದರ ಹಿಂದೆ ತಂಟೆ ಮುಗಿಸಿಕೊಂಡು ವಿಕಾಸ ಸಾಧಿಸುವ ದೂರದೃಷ್ಟಿಯಿತ್ತು. ಆದರೆ ಮಿಲಿಟರಿಯ ಸಕರ್ಾರವಾಗಿರುವ ಪಾಕಿಸ್ತಾನ ಇದಕ್ಕೆ ಬಗ್ಗದೆಂದು ಅರಿವಾದಾಗ ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕರ ಸದೆಬಡಿಯುವ ಛಾತಿ ತೋರಿದರಲ್ಲ, ಅಲ್ಲಿಗೆ ಪಾಕಿಸ್ತಾನ ತನ್ನ ಆತ್ಮಸ್ಥೈರ್ಯವನ್ನು ಕಳೆದುಕೊಂಡು ಭಾರತದೆದುರು ಬಾಲ ಮುದುರಿಕೊಂಡು ಬಿದ್ದಿರಬೇಕಾದ ಅನಿವಾರ್ಯತೆ ಎದುರಾಯ್ತು. ಭಾರತದ ವಿರುದ್ಧ ತನ್ನೆಲ್ಲ ಕದನಗಳಿಗೆ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದ್ದ ಚೀನಾಕ್ಕೆ ಇದು ಬಲವಾದ ಎಚ್ಚರಿಕೆ. ಹಾಗಂತ ಚೀನಾದೊಂದಿಗೂ ಮೋದಿ ಲಲ್ಲೆಗರೆಯುತ್ತಿದ್ದಾರೆಂದೇನಲ್ಲ, ಅವರು ಎದುರಿಗೆ ಮಾತನಾಡುವಂತೆ ಕಂಡರೂ ಚೀನಾದ ಬದ್ಧವೈರಿಗಳಾಗಿರುವ ಜಪಾನ್, ವಿಯೆಟ್ನಾಂಗಳಿಗೆ ಹತ್ತಿರವಾಗುವುದರ ಮೂಲಕ ಚೀನಾಕ್ಕೆ ಸಮರ್ಥ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಚೀನಾ ನಮ್ಮ ಬೆಳವಣಿಗೆಯಿಂದಾಗಿ ಸಾಕಷ್ಟು ಕಿರಿಕಿರಿ ಅನುಭವಿಸಿದೆ. ಜಾಗತಿಕ ಮಟ್ಟದಲ್ಲಿ ಚೀನಾದ ಪ್ರಭಾವ ಕಡಿಮೆಯಾಗಿದೆ. ಅಮೇರಿಕಾದಂತಹ ರಾಷ್ಟ್ರಗಳಿಗೆ ಚೀನಾಕ್ಕೆ ಮೂಗುದಾರ ಹಾಕಲು ಭಾರತ ಬಲಾಢ್ಯವಾಗುವುದು ಅಗತ್ಯವಿತ್ತು. ಈಗ ಅದು ಸಾಧ್ಯವಾಗಿದೆ. ಸಾಲಕೊಟ್ಟು ಮೋಸಮಾಡುವ ಚೀನಾದ ಕುರಿತಂತೆ ಈಗ ಜಗತ್ತಿಗೇ ಅರಿವಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಮೋದಿ ಈ ಛದ್ಮಯುದ್ಧದಲ್ಲಿ ಗೆಲುವನ್ನು ಸಾಧಿಸಿದ್ದಾರೆ!


ಹಾಗೆ ಸುಮ್ಮನೆ ಮೋದಿಯ ಜಾಗದಲ್ಲಿ ಮನಮೋಹನ್ ಸಿಂಗರನ್ನು ಊಹಿಸಿಕೊಂಡು ನೋಡಿ. ಚೀನಾದೆದುರಿಗೆ ಬಾಗುತ್ತಿದ್ದ ಪಾಕಿಸ್ತಾನದೆದುರಿಗೆ ಬೀಗಲು ಹೆದರುತ್ತಿದ್ದ ಮನಮೋಹನರು ಇಷ್ಟು ಹೊತ್ತಿಗೆ ಭಾರತವನ್ನು ಜಗತ್ತಿನೆದುರು ದೈನೇಸಿ ರಾಷ್ಟ್ರವಾಗಿ ರೂಪಿಸಿಬಿಡುತ್ತಿದ್ದರು. ನಾವು ಪಾಕಿಸ್ತಾನಕ್ಕಿಂತಲೂ ಕಡೆಯಾಗಿಬಿಟ್ಟಿರುತ್ತಿದ್ದೆವು. ಹೇಗೆ ಇಂದು ಪಾಕಿಸ್ತಾನ ಭಾರತದ ವಿರುದ್ಧ ಜಾಗತಿಕ ಅಸಮಾಧಾನ ರೂಪಿಸಲು ತಿಪ್ಪರಲಾಗ ಹೊಡೆಯುತ್ತಿದೆಯೋ ಹಾಗೆ ಚೀನಾ ಬಿಡಿ, ಪಾಕಿಸ್ತಾನದ ವಿರುದ್ಧ ಜಗತ್ತಿಗೆ ತಿಳಿಹೇಳುವಲ್ಲಿ ನಾವೂ ಹೆಣಗಾಡುತ್ತಾ ಉಳಿದಿರುತ್ತಿದ್ದೆವು. ಮುಂಬೈ ದಾಳಿ ನೆನಪಿದೆಯಲ್ಲಾ. 180 ಜನ ಭಾರತೀಯರನ್ನು ಕಳೆದುಕೊಂಡ ನಂತರವೂ ಪಾಕಿಸ್ತಾನದ ವಿರುದ್ಧ ಜಾಗತಿಕ ಅಭಿಪ್ರಾಯ ರೂಪಿಸುವಲ್ಲಿ ನಾವು ಸೋತು ಹೋಗಿದ್ದೆವು!

ಪಾಕಿಸ್ತಾನ ಇಂದು ಸಾಲಗಾರ ರಾಷ್ಟ್ರ. ಅದರ ಬಳಿಯಿರುವ ವಿದೇಶೀ ವಿನಿಮಯ ಅತ್ಯಂತ ಕಡಿಮೆಯಾಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಪಾಕಿಸ್ತಾನಕ್ಕೆ ಸಾಲ ಕೊಡಲು ನಿರಾಕರಿಸಿಬಿಟ್ಟಿವೆ. ಭಾರತವೂ ತನ್ನೆಲ್ಲ ಶ್ರಮವನ್ನು ಹಾಕಿ ಪಾಕಿಸ್ತಾನವನ್ನು ಸಾಲ ನೀಡುವ ರಾಷ್ಟ್ರಗಳ ನಡುವೆ ಕಪ್ಪುಪಟ್ಟಿಗೆ ಸೇರಿಸಬೇಕೆಂದು ಪ್ರಯತ್ನ ಹಾಕುತ್ತಿದೆ. ಐಎಮ್ಎಫ್ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದೆ, ಅಮೇರಿಕಾ ಕೊಟ್ಟ ಹಣವನ್ನು ಮರಳಿ ಕೇಳುತ್ತಿದೆ. ಪಾಕಿಸ್ತಾನಕ್ಕೆ ಮಿತ್ರರೆಂಬಂತೆ ಕಾಣುತ್ತಿರುವುದು ಚೀನಾ ಮತ್ತು ಸೌದಿ ಅರೇಬಿಯಾ ಮಾತ್ರ. ಅತ್ತ ಸೌದಿ ಅರೇಬಿಯಾ ಪಾಕಿಸ್ತಾನಕ್ಕಿಂತಲೂ ಭಾರತದೊಂದಿಗೆ ಬಲವಾದ ಬಾಂಧವ್ಯ ಹೊಂದಿರುವುದರಿಂದ ಪಾಕಿಸ್ತಾನದ ಸರ್ವಋತು ಮಿತ್ರ ಚೀನಾವೊಂದೇ. ಬಹುಶಃ ಮನಮೋಹನ ಸಿಂಗರೇ ಮುಂದುವರೆದಿದ್ದರೆ ನಮ್ಮ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರುತ್ತಿರಲಿಲ್ಲ. ಕಾಂಗ್ರೆಸ್ಸಿನ ಸಕರ್ಾರ ಸಿರಿವಂತರಿಗೆ ಸಾಲಕೊಟ್ಟು ಅದನ್ನು ಮರಳಿ ಪಡೆಯಲಾಗದೇ ಬ್ಯಾಂಕುಗಳನ್ನು ದಿವಾಳಿಯ ಅಂಚಿಗೆ ನಿಲ್ಲಿಸಿತ್ತು. ಯಾವುದೇ ಲೆಕ್ಕಾಚಾರದಲ್ಲೂ ಕಾಣದಿರುವಂತೆ ಆಯಿಲ್ಬಾಂಡ್ಗಳನ್ನು ನಮಗೆ ತೈಲ ಪೂರೈಸುವ ರಾಷ್ಟ್ರಗಳಿಗೆ ಕೊಟ್ಟು 2 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿಬಿಟ್ಟಿದ್ದರು. ಬಲಾಢ್ಯ ರಾಷ್ಟ್ರಗಳು ಬಿಡಿ, ತೈಲ ರಾಷ್ಟ್ರಗಳೆದರೂ ತಲೆತಗ್ಗಿಸಿ ನಿಂತಿತ್ತು ಭಾರತ. ಇರಾನ್ ನಮಗೆ ಮಿತ್ರನಾಗಿರಬೇಕೆಂದು ಬಯಕೆ ವ್ಯಕ್ತಪಡಿಸಿದರೂ ಅವರೆದುರೂ ಸಾಲಗಾರರಾಗಿ ನಿಂತು ಅವಮಾನಿತವಾಗಿತ್ತು ಭಾರತ. ಮೋದಿ ಹಂತ-ಹಂತವಾಗಿ ಈ ಸಾಲವನ್ನು ತೀರಿಸಿದರು. ಪೂತರ್ಿ ಸಾಲ ತೀರಿದ ನಂತರ ಇಂಧನ ಮಾರುಕಟ್ಟೆಯಲ್ಲಿ ಚೌಕಶಿ ನಡೆಸುವ ತಾಕತ್ತನ್ನು ಪಡೆದು ಕಡಿಮೆ ಬೆಲೆಯಲ್ಲಿ ತೈಲ ಖರೀದಿಸುವ ಒಪ್ಪಂದಗಳನ್ನು ಮಾಡಿಕೊಂಡರು. ಬಡರಾಷ್ಟ್ರಗಳಿಗೆ ಸಾಲ ಕೊಡುವ ವಿಶ್ವಸಂಸ್ಥೆಯ ಯೋಜನೆಯಿಂದ ತನ್ನನ್ನು ಹೊರತಂದುಕೊಂಡು ತಾನು ಆ ರಾಷ್ಟ್ರಗಳಿಗೆ ಸಹಾಯ ಮಾಡುವ ಸಿರಿವಂತ ರಾಷ್ಟ್ರವಾಗಿ ಭಾರತ ನಿಂತುಕೊಳ್ಳುವಂತೆ ಮಾಡಿದ್ದೇ ನರೇಂದ್ರಮೋದಿ. ಸಿದ್ದರಾಮಯ್ಯನ ಸಕರ್ಾರ ಇಲ್ಲಿ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ಕೊಡುವಾಗ, ಇಂದಿರಾ ಕ್ಯಾಂಟೀನ್ನ ಮೂಲಕ ಬಡವರ ಹೊಟ್ಟೆ ತುಂಬಿಸುವ ನೆಪದಲ್ಲಿ ಬೊಕ್ಕಸ ಬರಿದು ಮಾಡುತ್ತಿರುವಾಗ ಮೋದಿ ತರುಣರ ಕೈಗೆ ಉದ್ಯೋಗ ಕೊಟ್ಟು ಸ್ವಂತ ಕಾಲಮೇಲೆ ನಿಂತು ಸ್ವಾವಲಂಬಿಯಾಗಿ ಬದುಕುವ ಯೋಜನೆ ರೂಪಿಸುತ್ತಿದ್ದರು. ಹೀಗಾಗಿಯೇ ಮೋದಿಯವರ ಆಳ್ವಿಕೆಯಲ್ಲಿ ತಲಾ ಆದಾಯ ದುಪ್ಪಟ್ಟಾಯ್ತು. ಕಾಂಗ್ರೆಸ್ಸು ಈ ಐದು ವರ್ಷಗಳಲ್ಲಿ ಏನು ಮಾಡಿರಬಹುದಿತ್ತು ಎಂಬುದಕ್ಕೆ ರಾಹುಲ್ ಹೇಳುತ್ತಿರುವ ಮಾತುಗಳೇ ಸಾಕ್ಷಿ. ತಿಂಗಳಿಗೆ 12,000 ರೂಪಾಯಿ ದುಡಿಯಲಾರದ ಪರಿವಾರಕ್ಕೆ ಆತ ವರ್ಷಕ್ಕೆ 72,000 ರೂಪಾಯಿ ಕೊಡುತ್ತಾನಂತೆ. ಅದರರ್ಥ ಐದು ಕೋಟಿ ಪರಿವಾರಗಳಿಗೆ ಇಷ್ಟು ಹಣವನ್ನು ಕೊಡಲು ಬೇಕಾಗುವ ಒಟ್ಟು ಹಣ 3,60,000 ಕೋಟಿ ರೂಪಾಯಿ! ಈಗಾಗಲೇ ಕೊರತೆ ಬಜೆಟ್ನಲ್ಲಿರುವ ಭಾರತ ಇದನ್ನು ಸರಿದೂಗಿಸಲು ವಿದೇಶದಿಂದ ಸಾಲ ತರುತ್ತಿದೆ. ಇನ್ನು ಈ ಹಣಕ್ಕೆ ಒಂದೋ ಸಾಲ ತರಬೇಕು, ಇಲ್ಲವೇ ಹೆಚ್ಚು ತೆರಿಗೆ ಹಾಕಿ ಜನರಿಂದ ವಸೂಲಿ ಮಾಡಬೇಕು. ಇವೆರಡೂ ಬಿಟ್ಟರೆ ಮೂರನೆಯ ಭಯಾನಕ ಮಾರ್ಗ ನೋಟು ಪ್ರಿಂಟು ಮಾಡುವುದೊಂದೇ. ಒಂದೊಂದಾಗಿ ಇವೆಲ್ಲವನ್ನೂ ಗಮನಿಸಿ. ಈಗಾಗಲೇ ಕಾಂಗ್ರೆಸ್ಸು ಸಕರ್ಾರ ಮಾಡಿಟ್ಟಿರುವ ಸಾಲವನ್ನು ತೀರಿಸಲು ಇನ್ನೆಷ್ಟು ದಶಕಗಳು ಬೇಕಾಗಬಹುದೋ. ಅಂತಹದರಲ್ಲಿ ಐದು ವರ್ಷಗಳಲ್ಲಿ ಸುಮಾರು 15 ಲಕ್ಷ ಕೋಟಿ ರೂಪಾಯಿಯನ್ನು ಸಾಲವಾಗಿ ತಂದರೆ ತೀರಿಸಬೇಕಾದವರು ಯಾರು? ಇನ್ನು ಹೆಚ್ಚು-ಹೆಚ್ಚು ತೆರಿಗೆ ಹಾಕಬೇಕೆಂದರೆ ಕಟ್ಟಬೇಕಾದವರು ನಾವೇ ಅಲ್ಲವೇನು? ಇಷ್ಟೊಂದು ತಿಪ್ಪರಲಾಗ ಹೊಡೆದ ನಂತರ ಈಗ ಸಮಾಧಾನವೆನಿಸುವಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಇನ್ನು ಏಕಾಕಿ ವರ್ಷಕ್ಕೆ ಮೂರುವರೆ ಲಕ್ಷ ಕೋಟಿ ಸಂಗ್ರಹಿಸಬೇಕೆಂದರೆ ಬ್ರಿಟೀಷರ ಕಾಲದಲ್ಲಿದ್ದಂತೆ ತೆರಿಗೆಯನ್ನು ವಸೂಲು ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಇವೆರಡೂ ಯೋಜನೆಯನ್ನು ಪಕ್ಕಕ್ಕಿಟ್ಟು ನೋಟು ಪ್ರಿಂಟ್ ಮಾಡುವುದಕ್ಕೆ ನಿಂತರೆ ಹಣಕ್ಕೆ ಮೌಲ್ಯವಿಲ್ಲದಂತಾಗಿ ನಾವು ದಿವಾಳಿ ಎದ್ದ ರಾಷ್ಟ್ರವಾಗಿಬಿಡುತ್ತೇವೆ. ಮೋದಿ ಬರದೇ ಹೋಗಿದ್ದರೆ ಕಾಂಗ್ರೆಸ್ಸು ನಿಸ್ಸಂಶಯವಾಗಿ ಇವೆಲ್ಲವನ್ನೂ ಮಾಡಿಬಿಟ್ಟಿರುತ್ತಿತ್ತು. ಈ ನಡುವೆ ಈ ಯೋಜನೆಯನ್ನು ಸಮಥರ್ಿಸಿಕೊಳ್ಳುವ ಭರದಲ್ಲಿ ಚಿದಂಬರಂ ನರೇಂದ್ರಮೋದಿಯವರ ಸಾಧನೆಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟುಬಿಟ್ಟಿದ್ದಾರೆ. ಯೋಜನೆಗೆ ಹಣ ಎಲ್ಲಿಂದ ಬರುತ್ತದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಳೆದೈದು ವರ್ಷಗಳಲ್ಲಿ ದೇಶದ ಒಟ್ಟು ಉತ್ಪನ್ನ ಸಾಕಷ್ಟು ಏರಿದೆ ಎಂದೂ, ಜಿಎಸ್ಟಿ ಮೂಲಕ ತೆರಿಗೆ ಸಂಗ್ರಹವೂ ಹೆಚ್ಚಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನೋಟು ಅಮಾನ್ಯೀಕರಣದ ನಂತರ ದೇಶ ಆಥರ್ಿಕತೆಯ ಪಾತಾಳಕ್ಕೆ ಕುಸಿದಿದೆ ಎಂದು ಆರೋಪಿಸುತ್ತಿದ್ದ ಚಿದಂಬರಂ ಕೊಟ್ಟಿರುವ ಈ ಹೇಳಿಕೆ ಮೋದಿಯವರಿಗೆ ಚಿನ್ನದ ಮೆಡಲ್ಲು ಕೊಟ್ಟಂತೆಯೇ. ಮೋದಿ ಭಾರತವನ್ನು ಮತ್ತೊಂದು ಪಾಕಿಸ್ತಾನವಾಗದಂತೆ ತಡೆದಿದ್ದು ಹೀಗೆ.


ಪಾಕಿಸ್ತಾನ ಇಂದು ಹಳ್ಳ ಹಿಡಿದಿರೋದು ಅಲ್ಲಿರುವ ಭ್ರಷ್ಟಾಚಾರಿ ನಾಯಕರು ಮತ್ತು ಸೈನ್ಯದ ವ್ಯವಸ್ಥೆಯಿಂದಾಗಿ. ಸ್ನೈವೈರ್ ಎನ್ನುವ ಪತ್ರಿಕೆಯ ವಿವರಗಳನ್ನು ಒಪ್ಪುವುದಾದರೆ ಪಾಕಿಸ್ತಾನದ ಒಟ್ಟಾರೆ ವಿದೇಶಿ ವಿನಿಮಯ ಹಣ ಎಷ್ಟು ಉಳಿದಿದೆಯೋ ಅದಕ್ಕಿಂತ ಹೆಚ್ಚು ಮೌಲ್ಯದ ಭೂಮಿಯನ್ನು ಅಲ್ಲಿನ ಸೇನೆ ಕಬಳಿಸಿದೆ. ಸೇನೆಯೂ ಕೂಡ ಇದನ್ನು ತನಗಾಗಿ ಬಳಸಿಕೊಳ್ಳದೇ ಸೇನಾ ನಾಯಕರುಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಗುತ್ತಿಗೆಗೆ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಸಿಂಧ್-ಬಲೂಚಿಸ್ತಾನಗಳಲ್ಲಿ ಮನಸೋ ಇಚ್ಛೆ ಭೂಕಬಳಿಕೆ ನಡೆಸುತ್ತಿರುವ ಸೈನ್ಯ ಯಾರೂ ಪ್ರಶ್ನಿಸದಂತೆ ಕಾನೂನುಗಳನ್ನು ಮಾಡಿಕೊಂಡುಬಿಟ್ಟಿದೆ. ಜನ ಕಂಗಾಲಾಗಿಬಿಟ್ಟಿದ್ದಾರೆ. ನಮ್ಮಲ್ಲಿ ಸೇನೆ ಅತ್ಯಂತ ನಿಷ್ಠಾವಂತವೆನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈ ರಾಷ್ಟ್ರನಿಷ್ಠೆ ರಾಜಕಾರಣಿಗಳಿಗಿದೆ ಎಂಬ ವಿಶ್ವಾಸ ನನಗಿಲ್ಲ. ಮನಮೋಹನ ಸಿಂಗರ ಹತ್ತು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ಸು ಭಾರತದ ಸಂಪತ್ತನ್ನು ಹೇಗೆ ನುಂಗಿತ್ತೆಂದರೆ ಇನ್ನೈದು ವರ್ಷ ಅಧಿಕಾರ ಅವರಿಗಿತ್ತಿದ್ದರೆ ಭಾರತ ಅಸಹ್ಯಕರವಾದ ಸ್ಥಿತಿ ತಲುಪಿಬಿಟ್ಟಿರುತ್ತಿತ್ತು. ಮೋದಿ ಐದೇ ವರ್ಷಗಳಲ್ಲಿ ಭ್ರಷ್ಟಾಚಾರವನ್ನು ಪೂರ್ಣ ನಿಯಂತ್ರಣಕ್ಕೆ ತಂದರು. ಬ್ಯಾಂಕಿನಲ್ಲಿ ಸಾಲಮಾಡಿ ಕೈಕೊಟ್ಟು ಓಡಿಹೋಗಬೇಕೆಂದಿದ್ದವರನ್ನು ಕಟಕಟೆಗೆ ನಿಲ್ಲಿಸಿ ಅವರಿಂದ ಸಾಲ ತೀರಿಸಿಕೊಂಡರು. ಅನೇಕ ಹಗರಣಗಳ ಸರದಾರರಾಗಿದ್ದ ಸೋನಿಯಾ ಮತ್ತು ಚಿದಂಬರಂರನ್ನು ಕೋಟರ್ು ಅಲೆಯುವಂತೆ ಮಾಡಿ ಜಾಮೀನು ಪಡೆದು ಓಡಾಡುವ ಸ್ಥಿತಿ ತಂದಿಟ್ಟರು. ಇವೆಲ್ಲವೂ ಉಳಿದ ನುಂಗಣ್ಣಗಳಿಗೆ ತೀವ್ರವಾದ ಎಚ್ಚರಿಕೆಯೇ ಸರಿ!

ಹೀಗಾಗಿಯೇ ಒಮ್ಮೊಮ್ಮೆ ನರೇಂದ್ರಮೋದಿ ಪ್ರಧಾನಿಯಾಗಿರದಿದ್ದರೆ ಏನಾಗಿರುತ್ತಿತ್ತೆಂಬ ಊಹೆಯೇ ಭಯ ತರಿಸುತ್ತದೆ, ಹಾಗೆಯೇ ಅವರು ಮತ್ತೊಮ್ಮೆ ಪ್ರಧಾನಿಯಾಗದಿದ್ದರೆ ಏನಾಗಬಹುದೆಂಬ ಕಲ್ಪನೆ ಕೂಡ!

– ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    April 1, 2019 at 5:01 am

    ಚಕ್ರವರ್ತಿ ಅವರೆ ಆ ಭಯ ನಮಗೂ ಇದೆ. ಹತಾಶೆಯಿಂದ ಕಾಂಗ್ರೆಸ್ ಅಧಿಕಾರ ಪಡೆಯಲು ಎನು ಮಾಡಲೂ ಸೈ. ಆದರೆ ಒಂದು ವಿಷಯ.ಜನ ಎಚ್ಚೆತ್ತಿದ್ದಾರೆ. ಇಷ್ಟು ವರ್ಷ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿತ್ತು. ಈಗ ಭಾರತೀಯರು ವರ್ಸ್ಸ್ ವಂಚಕರು. ಸೋಲ್ಡ್ ಮೀಡಿಯಾ ವರ್ಸ್ಸ್ ಸೋಷಿಯಲ್‌ ಮೀಡಿಯಾ. ಜಯ ನಮ್ಮದೆ.

Leave a Reply

Your email address will not be published. Required fields are marked *

Most Popular

To Top