National

ಮೋದಿಯವರ ವಿಜಯೋಪನ್ಯಾಸ!!

ನಿನ್ನೆ 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಐತಿಹಾಸಿಕ ಗೆಲುವನ್ನು ಸಾಧಿಸಿದೆ. ಎರಡನೆಯ ಅವಧಿಯಲ್ಲಿ ಮೋದಿಯವರು ಪ್ರಧಾನಮಂತ್ರಿಯಾಗಿ ಹೊರಹೊಮ್ಮಿದ್ದಾರೆ! ಬಿಜೆಪಿ 300ಕ್ಕೂ ಹೆಚ್ಚು ಲೋಕಸಭಾ ಸೀಟುಗಳನ್ನು ಗೆದ್ದ ಫಲಿತಾಂಶ ಹೊರ ಬೀಳುತ್ತಿದ್ದಂತೆ ದೇಶದ ಜನತೆ ಶ್ರೀ ನರೇಂದ್ರಮೋದಿಯವರ ಮಾತುಗಳಿಗಾಗಿ ಕಾಯುತ್ತಾ ಕುಳಿತಿದ್ದು ಕಂಡಾಗ ದೇಶಕ್ಕೆ ಸೇವೆ ಸಲ್ಲಿಸಿದ ನಾಯಕನಿಗೆ ಜನ ನೀಡಿದ ಗೌರವವೇ ಇದೆಂಬಂತೆ ಕಂಡುಬಂದಿತು. ಗೆಲುವಿನ ನಂತರ ನರೇಂದ್ರಮೋದಿಯವರು ದೆಹಲಿಯ ಬಿಜೆಪಿ ಕೇಂದ್ರಕಛೇರಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು.

‘ವರುಣ ದೇವತೆಯೂ ಕೂಡ ವಿಜಯದ ಆಚರಣೆಗಾಗಿ ನಮ್ಮನ್ನು ಕೂಡಿಕೊಂಡಿದ್ದಾರೆ’ ಎಂದು ತಮ್ಮ ಮಾತನ್ನಾರಂಭಿಸಿದ ಶ್ರೀ ನರೇಂದ್ರಮೋದಿಯವರು ಮುಂದುವರೆಸಿ ‘ಹೊಸ ಭಾರತದ ನಿರ್ಮಾಣಕ್ಕಾಗಿ ನಾವು ಜನಾದೇಶವನ್ನು ಪಾಲಿಸುತ್ತೇವೆ. ಇಂದು ಕೋಟ್ಯಂತರ ಭಾರತೀಯರು ಫಕೀರನ ಜೋಳಿಗೆಯನ್ನು ಪೂರ್ಣ ತುಂಬಿಸಿಬಿಟ್ಟಿದ್ದಾರೆ’ ಎಂದರು.

ನಂತರ ‘130 ಕೋಟಿ ಭಾರತೀಯರಿಗೆ ನಾನು ತಲೆ ಬಾಗಿ ನಮಿಸುತ್ತೇನೆ. ಪ್ರಜಾಪ್ರಭುತ್ವದ ಇತಿಹಾಸದಲ್ಲೇ 2019ರ ಲೋಕಸಭಾ ಚುನಾವಣೆ ಫಲಿತಾಂಶದ ಅಂಕಿ-ಅಂಶಗಳು ದೊಡ್ಡ ವಿಶೇಷತೆ ಎಂದು ಹೇಳಬಹುದು. ಭಾರತ ಸ್ವಾತಂತ್ರ್ಯಗೊಂಡ ನಂತರ ಹಲವು ಚುನಾವಣೆಗಳು ಆಗಿಹೋಗಿವೆ. ಆದರೆ, ಎಷ್ಟೋ ಚುನಾವಣೆಗಳ ನಂತರ, 40-45 ಡಿಗ್ರಿಯಷ್ಟು ತಾಪಮಾನ ಇದ್ದಾಗ್ಯೂ ಈ ಬಾರಿ ಅತ್ಯಂತ ಹೆಚ್ಚು ಮತದಾನವಾಗಿದೆ. ಇದು ಭಾರತೀಯರು ಜಾಗೃತವಾಗಿರುವುದನ್ನು, ಪ್ರಜಾಪ್ರಭುತ್ವದಲ್ಲಿ ಅವರಿಗಿರುವ ಬದ್ಧತೆಯನ್ನು ತೋರಿಸುತ್ತದೆ. ಇಡಿಯ ಜಗತ್ತು ಭಾರತ ಹೊಂದಿರುವ ಈ ಪ್ರಜಾಪ್ರಭುತ್ವದ ಪರಾಕ್ರಮವನ್ನು ನೋಡಬೇಕು’ ಎಂದರು.

ಪ್ರಜಾಪ್ರಭುತ್ವದ ಸಂಭ್ರಮಾಚರಣೆಯ ಈ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡವರು, ಮತ್ತು ಹಿಂಸೆಗೊಳಗಾಗಿ ನೋವನುಭವಿಸಿದವರಿಗೆ ಮೋದಿಯವರು ಸಂತಾಪವನ್ನು ವ್ಯಕ್ತಪಡಿಸಿದರು. ‘ಅವರೆಲ್ಲಾ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬಲ್ಲ ನಿದರ್ಶನವಾಗಿದ್ದಾರೆ. ಈ ಚುನಾವಣೆ ಸುಗಮವಾಗಿ ನಡೆಯುವಲ್ಲಿ ಸಹಕರಿಸಿದ, ಚುನಾವಣಾ ಆಯೋಗ, ರಕ್ಷಣಾ ಇಲಾಖೆ ಮತ್ತು ಪ್ರಜಾಪ್ರಭುತ್ವದಲ್ಲಿ ದೇಶದ ಜನತೆಯ ನಂಬಿಕೆ ಹೆಚ್ಚಾಗುವಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಸಮರ್ಪಿಸುತ್ತೇನೆ’ ಎಂದರು ಮೋದಿಯವರು.

ಮಹಾಭಾರತ ಯುದ್ಧವನ್ನು ನೆನಪಿಸಿಕೊಂಡ ಮೋದಿಯವರು ಕೃಷ್ಣನಿಗೆ ‘ನೀನು ಯಾರ ಪರ?’ ಎಂದು ಕೇಳಲಾಗಿತ್ತು. ಮಹಾಭಾರತದಲ್ಲಿ ಕೃಷ್ಣ ಕೊಟ್ಟ ಉತ್ತರವನ್ನೇ 21ನೇ ಶತಮಾನದಲ್ಲಿ, ಈ ಬಾರಿ ಚುನಾವಣೆಯಲ್ಲಿ, ಭಾರತದ 130ಕೋಟಿ ಜನ ನೀಡಿದ್ದಾರೆ ಎಂದರು. ಕೃಷ್ಣ ‘ನಾನು ಯಾರ ಪರವಾಗಿಯೂ ಇಲ್ಲ. ನಾನು ಹಸ್ತಿನಾಪುರದ ಪರವಾಗಿದ್ದೇನೆ’ ಎಂದಿದ್ದ. ದೇಶದ ಜನತೆ ಭಾರತದ ಪರ ನಿಂತಿದ್ದಾರೆ, ಭಾರತಕ್ಕಾಗಿ ಮತ ಹಾಕಿದ್ದಾರೆ. ಹಾಗಾಗಿ ಇದು ಭಾರತದ ಹೊಳೆಯುತ್ತಿರುವ ಭವಿಷ್ಯದ ಮುನ್ಸೂಚನೆ ಎಂಬುದು ನರೇಂದ್ರಮೋದಿಯವರ ಮಾತುಗಳು.

‘ನಾನು ಚುನಾವಣೆಯ ಮೊದಲನೇ ದಿನದಿಂದಲೂ ಹೇಳುತ್ತಿದ್ದೇನೆ. ಈ ಚುನಾವಣೆಯನ್ನು ಯಾವ ಪಕ್ಷವೂ ಹೋರಾಡುತ್ತಿಲ್ಲ, ಯಾವ ಅಭ್ಯರ್ಥಿಯೂ ಹೋರಾಡುತ್ತಿಲ್ಲ, ಯಾವ ನಾಯಕನೂ ಹೋರಾಡುತ್ತಿಲ್ಲ. ಬದಲಿಗೆ, ಈ ಚುನಾವಣೆಯನ್ನು ದೇಶದ ಜನತೆಯೇ ಹೋರಾಡುತ್ತಿರುವುದು. ತಮ್ಮ ಕಣ್ಣು ಮತ್ತು ಕಿವಿಗಳನ್ನು ಮುಚ್ಚಿಕೊಂಡವರಿಗೆ ನನ್ನ ಮಾತುಗಳು ಅರ್ಥವಾಗಿರುವುದಿಲ್ಲವಷ್ಟೇ’ ಎಂದು ಮೋದಿ ದೇಶ ಗೆದ್ದಿರುವುದರ ಕುರಿತು ಸಂಭ್ರಮ ವ್ಯಕ್ತಪಡಿಸಿದರು.

‘ಇಂದು ಯಾರಾದರೂ ಗೆಲುವು ಸಾಧಿಸಿದ್ದರೆ ಅದು ದೇಶದ ಗೆಲುವು, ಪ್ರಜಾಪ್ರಭುತ್ವದ ಗೆಲುವು ಮತ್ತು ಜನತೆಯ ಗೆಲುವು. ಹಾಗಾಗಿ ಬಿಜೆಪಿಯ ಎಲ್ಲಾ ಕಾರ್ಯಕರ್ತರೂ, ಎನ್.ಡಿ.ಎ ಯ ಎಲ್ಲಾ ಮಿತ್ರರೂ ಈ ಜಯವನ್ನು ಜನರ ಪಾದಗಳಿಗೆ ಸಮರ್ಪಿಸುತ್ತಿದ್ದೇವೆ’ ಎಂಬ ಭಾವನಾತ್ಮಕ ಮಾತುಗಳನ್ನು ಶ್ರೀ ನರೇಂದ್ರಮೊದಿಯವರು ಆಡಿದರು.

ನಂತರ ಮೋದಿಯವರು ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಮರ್ಪಿಸುತ್ತಾ, ‘ಯಾವ ಪಕ್ಷದವರೇ, ಯಾವ ಹಿನ್ನೆಲೆಯವರೇ ಆಗಿದ್ದರು, ಚುನಾವಣೆಯಲ್ಲಿ ಗೆದ್ದ ಪ್ರತಿ ಅಭ್ಯರ್ಥಿಗೂ ನನ್ನ ಶುಭಾಶಯಗಳು. ಭಾರತದ ಭವ್ಯ ಭವಿಷ್ಯಕ್ಕಾಗಿ ನೀವೆಲ್ಲಾ ಬದ್ಧತೆಯಿಂದ ಭುಜಕ್ಕೆ ಭುಜ ಕೊಟ್ಟು ನಮ್ಮೊಡನೆ ಹೆಜ್ಜೆ ಹಾಕುವಿರೆಂಬ ವಿಶ್ವಾಸವಿದೆ’ ಎಂಬ ಮಾತುಗಳನ್ನಾಡಿದರು.

ಲೋಕಸಭಾ ಚುನಾವಣೆಯೊಂದಿಗೇ ಒಡಿಸ್ಸಾ, ಸಿಕ್ಕಿಂ, ಅರುಣಾಚಲಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಗಳಲ್ಲಿ ಗೆದ್ದ ಪಕ್ಷಗಳಿಗೆ ನರೇಂದ್ರಮೋದಿಯವರು ಅಭಿನಂದನೆಗಳನ್ನು ಸಲ್ಲಿಸಿದರು. ಈ ಎಲ್ಲಾ ರಾಜ್ಯಗಳೊಡನೆ ಕೇಂದ್ರ ಸರ್ಕಾರ ಭುಜಕ್ಕೆ ಭುಜ ನೀಡಿ ಅಭಿವೃದ್ಧಿಯ ಹೆಜ್ಜೆ ಇಡಲಿದೆ ಎಂಬುದನ್ನು ತಿಳಿಸಿದರು.

ಕೋಟಿಗಟ್ಟಲೆ ಜನರ ಮನಸ್ಸಿನಲ್ಲಿರುವುದು ಒಂದೇ ಭಾವನೆ ಅದೆಂದರೆ ‘ಭಾರತ ಮಾತೆಗೆ ಜೈ’. ಎಂದು ಹೇಳುತ್ತಾ ಮೋದಿಯವರು ‘ನಮ್ಮಲ್ಲೇ ಎಷ್ಟೋ ಭಿನ್ನಾಭಿಪ್ರಾಯಗಳಿದ್ದರೂ ನಾವು ಎಂದೂ ದಾರಿ ತಪ್ಪಲಿಲ್ಲ. ಇದೇ ಭಾರತೀಯ ಜನತಾ ಪಕ್ಷದ ವಿಶೇಷತೆ’ ಎಂದು ತಮ್ಮ ಭಾವನೆಗಳನ್ನು ಜನತೆಯ ಮುಂದೆ ಬಿಚ್ಚಿಟ್ಟರು!

Click to comment

Leave a Reply

Your email address will not be published. Required fields are marked *

Most Popular

To Top