National

ಮೋದಿಯನ್ನು ಟೀಕಿಸುವ ಧಾವಂತದಲ್ಲಿ ಪೇಚಿಗೆ ಸಿಲುಕಿತು ಕಾಂಗ್ರೆಸ್ಸು !

ದೆಹಲಿಯ ಔರಂಗ್‌ಜೇಬ್ ರಸ್ತೆಯನ್ನು ಅಬ್ದುಲ್ ಕಲಾಮ್ ರಸ್ತೆಯನ್ನಾಗಿ ಬದಲಾಯಿಸುವ ಚರ್ಚೆ ಸೆಪ್ಟೆಂಬರ್ 2015ರಲ್ಲಿ ನಡೆದಾಗ ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸಿತ್ತು. ಮೊಘಲರ ನೈಜ ಇತಿಹಾಸವನ್ನು ಹೇಳಿದ, ಬರೆದ ವ್ಯಕ್ತಿಗಳನ್ನು ಬಲಪಂಥದ ಹಣೆಪಟ್ಟಿ ಕಟ್ಟಿ ಮೂಲೆಗುಂಪು ಮಾಡಲಾಯಿತು. ನೈಜೇತಿಹಾಸ ವಾಸ್ತವಗಳನ್ನು ಹೇಳಲಿಕ್ಕೆ ಯಾವ ಪಂಥದವರಾದರೇನು? ಔರಂಗ್‌ಜೇಬನ ದುರಾಡಳಿತವನ್ನು ಜನರ ಮುಂದೆ ಹಿಡಿದು ಕೂಡಾ ಸದ್ಯದ ಭಾರತದಲ್ಲಿ ಸರ್ವಧರ್ಮ ಸಮನ್ವಯ ಸಾಧಿಸಬಹುದು ಎಂಬುದನ್ನು ಯಾರು ಅರಿಯಲೇ ಇಲ್ಲ. ಔರಂಗಜೇಬನ ಇತಿಹಾಸ ಕೆದಕಿದರೆ ಸದ್ಯದ ವಾತಾವರಣ ಹದಗೆಡುವುದು ಎಂಬ ನೆಪವನ್ನು ಹೇಳುತ್ತಲೇ ಬಂದರು. ಔರಂಗಜೇಬ ಸರ್ವಾಧಿಕಾರಿ ಧೋರಣೆಯ ವ್ಯಕ್ತಿ ಎಂದು ಸಾರಿ ಸಾರಿ ಹೇಳಿದರು. ಅದನ್ನೆಲ್ಲಾ ಪಕ್ಕಕ್ಕಿಟ್ಟಿತು. ಎಲ್ಲ ಪಠ್ಯಪುಸ್ತಕಗಳನ್ನು ಔರಂಗಜೇಬನಾದಿಯಾಗಿ ಮೊಘಲ್ ದೊರೆಗಳಿಗೆ ಬಹುಪರಾಕ್ ಎಂಬಂತೆಯೇ ರಚಿಸಲು ಕಾಂಗ್ರೆಸ್ಸು ಪ್ರೇರಣೆ ನೀಡಿತು. ಭೈರಪ್ಪನವರಂತೂ ತಮ್ಮ “ಆವರಣ” ಕಾದಂಬರಿಯಲ್ಲಿ ಮೊಘಲ್ ದೊರೆಗಳ ಸರ್ವಾಧಿಕಾರಿ ಧೋರಣೆಯನ್ನು ಮತ್ತು ತಮ್ಮ ಧರ್ಮವನ್ನು ಮತ್ತೊಬ್ಬರ ಮೇಲೆ ಹೇರಿದ್ದನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಅದಕ್ಕೆ ಸಾಕಷ್ಟು ದಾಖಲೆಗಳನ್ನು ಒದಗಿಸಿದ್ದಾರೆ. ಕಾಂಗ್ರೆಸ್ ಕೃಪಾಪೋಷಿತ ಎಡಪಂಥೀಯರು “ಇದೊಂದು ಕೃತಿಯಲ್ಲ ವಿಕೃತಿ” ಎಂದು ಒಂದು ಪುಸ್ತಕವನ್ನೇ ಬಿಡುಗಡೆ ಮಾಡಿತು. ಔರಂಗಜೇಬ ಭಗ್ನಗೊಳಿಸಿದ ಹಿಂದು ದೇವಾಲಯಗಳು ಕೊಲೆ ಸುಲಿಗೆ ಅತ್ಯಾಚಾರಗಳನ್ನು ಹೇಳಿದವರೆಲ್ಲರನ್ನು ಕೋಮುವಾದಿ ಎಂದೇ ಕರೆದರು. ಕಾಂಗ್ರೆಸ್ ಅಲ್ಲಿಂದ ಇಲ್ಲಿಯವರೆಗೆ ಮುಸ್ಲಿಂ ಓಟ್ ಬ್ಯಾಂಕಿಗಾಗಿ ಎಲ್ಲಿಯೂ ಮೊಘಲ್ ದೊರೆಗಳನ್ನು ಬಿಟ್ಟುಕೊಡಲಿಲ್ಲ. ತಿರುಚಿದ ಇತಿಹಾಸವನ್ನೇ ಪಠ್ಯದಾದಿಯಾಗಿ ತಮ್ಮ ಭಾಷಣಗಳಲ್ಲೂ ಹೇಳುತ್ತಿದ್ದರು.

ಜೂನ್ 26 ರಂದು ತುರ್ತು ಪರಿಸ್ಥಿತಿಯನ್ನು ಹೇರಿ 43 ವರ್ಷವಾದ ಕಾರಣ ಬಿಜೆಪಿ ಕರಾಳ ದಿನಾಚರಣೆಯನ್ನು ಆಚರಿಸಿತು. ಇಂದಿರಾಗಾಂಧಿ ಸರ್ಕಾರದ ಅಷ್ಟೂ ಆಡಳಿತವನ್ನು ತನ್ನ ಕಪಿಮುಷ್ಟಿಯಲ್ಲೆ ಹಿಡಿದುಕೊಂಡ ಕಾರಣ ಇಂದಿರೆಯದು ಸರ್ವಾಧಿಕಾರಿ ಧೋರಣೆ ಎಂದು ಮತ್ತೆ ಮತ್ತೆ ಬಿಜೆಪಿ ಹೇಳಿತು. ಇದಕ್ಕೆ ಪ್ರತಿದಾಳಿ ಮಾಡಲು ಹೋದ ಕಾಂಗ್ರೆಸ್ಸಿನ ಮಾಧ್ಯಮ ಪ್ರತಿನಿಧಿ ರಣದೀಪ್ ಸುರ್ಜೇವಾಲಾ “ನಾವು ನಲವತ್ತೊಂಬತ್ತು ತಿಂಗಳಿನಿಂದ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದ್ದೇವೆ. ಇಂದಿರೆಯನ್ನು ನಿಂದಿಸುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗದು. ಇವತ್ತು ತುರ್ತುಪರಿಸ್ಥಿತಿಯ ಪಾಠ ಮಾಡುತ್ತಾ ಮೋದಿ ತಾನು ಕೊಟ್ಟ ಭರವಸೆಗಳನ್ನು ಇಡೇರಿಸಲಾಗದ್ದನ್ನು ಮರೆಮಾಚುತ್ತಿದ್ದಾರೆ. ಮೋದಿಯವರು ತಮ್ಮ ಇಂಥ ನೀತಿಗಳಿಂದ ಔರಂಗಜೇಬನಿಗಿಂತ ಕ್ರೂರಿಯಾಗಿ ನಡೆದುಕೊಂಡಿದ್ದಾರೆ. ಔರಂಗ್‌ಜೇಬ್ ಮತ್ತೊಬ್ಬರಿಂದ ಸಲಹೆಗಳನ್ನು ಅಭಿಪ್ರಾಯಗಳನ್ನು ಅನುಮತಿಯನ್ನು ಪಡೆಯದ ಸರ್ವಾಧಿಕಾರಿ. ಸರ್ವಾಧಿಕಾರಿಗಳಿಗೆ ಇತಿಹಾಸವೇ ಪಾಠ ಕಲಿಸುತ್ತದೆ.‌ ಔರಂಗಜೇಬನಿಗಿಂತ ಜಾಸ್ತಿ ಕ್ರೂರಿ ಮತ್ತು ಸರ್ವಾಧಿಕಾರಿಯಾದ ಮೋದಿಗೂ ಇತಿಹಾಸ ಪಾಠ ಕಲಿಸುವುದು ನಿಶ್ಚಿತ.” ಎಂದು ಹೇಳಿದರು.

ದೋಷಾರೋಪಗಳು ಏನೇ ಇರಲಿ. ಮೋದಿಯವರದಂತೂ ವಧಿಸಲಾಗದ ತೇಜಸ್ಸು. ಇದಕ್ಕಿಂತ ಅಸಹನೀಯ ನಿಂದನೆಗಳನ್ನು ಜೀರ್ಣಿಸಿಕೊಂಡ ಮೋದಿಯವರಿಗೆ ಈ ನಿಂದನೆ ಹತ್ತರಲ್ಲಿ ಹನ್ನೊಂದನೇಯದ್ದು. ಆದರೆ ಯಾವ ಕಾಂಗ್ರೆಸ್ಸು ಇಷ್ಟು ದಿನ ಮೊಘಲ ದೊರೆಗಳು ಮತ್ತು ಔರಂಗಜೇಬನನ್ನು ತಲೆ ಮೇಲೆ ಹೊತ್ತು ತಿರುಗಾಡಿತ್ತೋ ಅದೇ ಔರಂಗ್‌ಜೇಬನನ್ನು ಸರ್ವಾಧಿಕಾರಿ ಎಂದು ಕರೆಯಿತು. ಇತಿಹಾಸವನ್ನು ಇಷ್ಟು ವರ್ಷ ತಾವೇ ಮರೆಮಾಚಿದ್ದು ಎಂಬುದನ್ನು ಒಪ್ಪಿಕೊಂಡಿತು. ಯಾವ ಕಾಂಗ್ರೆಸ್ಸು ಔರಂಗಜೇಬ ರಸ್ತೆಯನ್ನು ಅಬ್ದುಲ್ ಕಲಾಂರ ಹೆಸರಿಗೆ ಮರುನಾಮಕರಣ ಮಾಡಲು ವಿರೋಧಿಸಿತ್ತೋ ಅದೇ ಕಾಂಗ್ರೆಸ್ಸು ಮೋದಿಯನ್ನು ಹಣಿಯುವ ತರಾತುರಿಯಲ್ಲಿ “ಔರಂಗಜೇಬ್ ಯಾರ ಮಾತನ್ನು ಕೇಳಲಿಲ್ಲ‌. ಇತಿಹಾಸ ಅವನಿಗೆ ಪಾಠ ಕಲಿಸಿತು ಎಂದು ಒಪ್ಪಿಕೊಂಡಿತು.”

ಇದನ್ನೇ ಬಿಜೆಪಿ ಮತ್ತು ಇತಿಹಾಸಕಾರರು ಸಾರಿ ಸಾರಿ ಹೇಳಿದ್ದರು ಸಾಲದ್ದಕ್ಕೆ ಐತಿಹಾಸಿಕ ಕುರುಹುಗಳನ್ನೂ ಒದಗಿಸಿದ್ದರು. ಒಂದು ಲೆಕ್ಕಾಚಾರದ ಪ್ರಕಾರ 40000 ಹಿಂದು ದೇವಾಲಯಗಳು ಮೋಘಲರ ಆಳ್ವಿಕೆಯಲ್ಲಿ ಧ್ವಂಸವಾಗಿದ್ದವು. ಕಾಶಿ ವಿಶ್ವನಾಥ್ ದೇವಾಲಯ, ಯಾವುದು ಹಿಂದುಗಳ ಶ್ರದ್ಧಾ ಕೇಂದ್ರವಾಗಿತ್ತೋ ಅದನ್ನೇ ಔರಂಗಜೇಬ ಪರ್ಮಾನು ಹೊರಡಿಸಿ ನಾಶಗೈದಿದ್ದರ ಉಲ್ಲೇಖಗಳು ಸಿಗುತ್ತವೆ. ಅಸಹಿಷ್ಣುತೆ, ಜಾತೀಯತೆ, ಕೋಮುವಾದಗಳೆಂಬ ಪದಗಳನ್ನು ಪುಂಖಾನುಪುಂಖವಾಗಿ ಕ್ಲೀಷೆಯಾಗುವಷ್ಟರ ಮಟ್ಟಿಗೆ ಬಳಸುವ ಕಾಂಗ್ರೆಸ್ಸಿಗೆ ಔರಂಗಜೇಬನ ಕಾಲದ ಹಿಂದುಗಳ ಮೇಲೆ ಆದ ಹಲ್ಲೆಗಳು ಕೋಮುವಾದವಾಗಿ ಅಸಹಿಷ್ಣುತೆಯಾಗಿ ಜಾತೀಯತೆಯಾಗಿ ಕಾಣಲೇ ಇಲ್ಲ. ಅಷ್ಟಕ್ಕೂ ಬಿಜೆಪಿಯೇನು ಯಾವುದಾದರೂ ಹಿಂದು ದೊರೆಯ ಹೆಸರನ್ನು ಇಡಲು ಹೇಳಿತ್ತೆ? ಅಬ್ದುಲ್ ಕಲಾಂರಂತಹ ಧರ್ಮಾದಾಚೆಗೆ ಬೆಳೆದ ಸಾಧಕನ ಅಪ್ರತಿಮ ದೇಶಭಕ್ತನ ಹೆಸರನ್ನು ಇಡುವುದಾಗಿ ಹೇಳಿತ್ತು. ಮೃಗತ್ವವನ್ನೇ ಮೈಯಲ್ಲಿ ತುಂಬಿಕೊಂಡಿದ್ದ ಔರಂಗ್‌ಜೇಬ್ ಮೃದುತ್ವವನ್ನೇ ಉಸಿರಾಡುತ್ತಿದ್ದ ಕಲಾಂರಿಗಿಂತ ಶ್ರೇಷ್ಟನಾದನೇ?

ಹಲವಾರು ಕ್ಷಿಪಣಿಗಳನ್ನು ಉಡಾಯಿಸಿದ್ದ ಕಲಾಂ ಭಾರತೀಯರಿಗೆ ಭದ್ರತಾ ಭಾವ ತಂದೊದಗಿಸಿದರೆ ತನ್ನದೇ ಪ್ರಜೆಗಳ ಮೇಲೆ ಹಲ್ಲೆ ನಡೆಸಿದ ಔರಂಗಜೇಬ್ ಅಭದ್ರತೆಯನ್ನು ಸೃಷ್ಟಿಸಿದವನು. ಯಾರು ಶ್ರೇಷ್ಟರು ಎಂದು ತೌಲನಿಕವಾಗಿ ನೋಡಲೇ ಬೇಕಿಲ್ಲ. ಮೇಲ್ನೋಟಕ್ಕೆ ಸ್ವ-ವಿವರಣಾತ್ಮಕ (self-explanatory) ಅಂಶಗಳಿವು.

ವ್ಯಕ್ತಿತ್ವದ ವಿಚಾರವಾಗಿ ಅಷ್ಟೇ ಅಲ್ಲ.ಕಲಾಂರ ಶೃಂಗಸಾಧನೆಯನ್ನಾದರೂ ಪರಿಗಣಿಸಬೇಕಿತ್ತಲ್ಲವೇ? Missile Man ಎಂದೇ ಖ್ಯಾತಿ ಪಡೆದ ಕಲಾಂ ಅಜ್ಜ ತಿರಂಗವನ್ನು ಭೂಮಿಯಿಂದ ವ್ಯೋಮದವರೆಗೆ ಹಾರಿಸಿದ ಅಪ್ರತಿಮ ಸಾಧಕ. ರಾಷ್ಟ್ರಪತಿ ಹುದ್ದೆಗೆ ಒಂದು ಘನತೆಯನ್ನು ತಂದುಕೊಟ್ಟ ಕೆಲವೇ ಕೆಲವು ರಾಷ್ಟ್ರಪತಿಗಳಲ್ಲಿ ಒಬ್ಬರು. ಸರಳತೆ ಸದ್ಗುಣಗಳನ್ನು ತೋರಿಕೆಗೆ ಹೊದ್ದುಕೊಳ್ಳದೇ ಅದನ್ನೇ ಚರ್ಮವಾಗಿಸಿಕೊಂಡವರು. ಇಂತಿಪ್ಪ ಕಲಾಮರನ್ನು ದೇಶ ಕಳೆದುಕೊಂಡಾಗಿನಿಂದ ನರೇಂದ್ರ ಮೋದಿಯವರಂತೂ ಸಾಧ್ಯವಾದಷ್ಟು ಅವರ ಹೆಸರನ್ನು ಪ್ರಚಲಿತಗೊಳಿಸುತ್ತಲೇ ಇದ್ದಾರೆ. 2017 ಜುಲೈ 13ರಂದು ತಿರುವನಂತಪುರಂನಲ್ಲಿ ‘ಡಾ.ಕಲಾಂ ಸ್ಮತಿ ಅಂತಾರಾಷ್ಟ್ರೀಯ ವಿಜ್ಞಾನ ಮತ್ತು ಬಾಹ್ಯಾಕಾಶ ಮ್ಯೂಸಿಯಂ’ ತೆರೆಯಲಾಯಿತು. ಚೆನ್ನೈನ DRDOದಲ್ಲಿ ಕಲಾಂ ಸ್ಮಾರಕವನ್ನು ಜೂನ್ 2018ರಲ್ಲಿ ಉದ್ಘಾಟಿಸಲಾಯಿತು. ಭಾರತವೂ 2020ರ ವೇಳೆಗೆ ಹೇಗಿರಬೇಕು ಎಂದು ಕನಸು ಕಾಣುತ್ತಿದ್ದ ಕಲಾಂರನ್ನು ವೋಟ್‌ಬ್ಯಾಂಕ್‌ಗಾಗಿ ಮರೆತರೆ ಹೇಗೆ ಹೇಳಿ. ಇಂಥ ಹೆಸರು ನಾವು ಇಡುವ ಪ್ರತಿಹೆಜ್ಜೆಯಲ್ಲೂ ನೆನೆಯುವಂತಾಗಬೇಕೆ ವಿನಃ ಪಾತಕಿ ಔರಂಗಜೇಬನದ್ದಲ್ಲಾ ಅಲ್ಲವೇ?

ಓಟ್‌ಬ್ಯಾಂಕ್ ರಾಜಕಾರಣದ ಬೆನ್ನು ಹತ್ತಿದ್ದ ಕಾಂಗ್ರೆಸ್ಸಿಗೆ ಇದ್ಯಾವುದೂ ಗೊತ್ತಿಲ್ಲ ಎಂದು ತಿಳಿದುಕೊಳ್ಳಬೇಡಿ ಇವೆಲ್ಲವನ್ನೂ ಮರೆಮಾಚಿ ಮುಗ್ಧ ಮುಸ್ಲಿಂರ ಮತ್ತು ಮುಸ್ಲಿಂ ಯುವಕರ ಮಿದುಳುತೊಳೆತ(Mind wash)ವನ್ನು ಮಾಡಿತ್ತಷ್ಟೆ.

ಈಗ ಸತ್ಯ ಹೊರಬಂದಿತು. ಮೋದಿಯನ್ನು ಹಣಿಯುವ ನೆಪದಲ್ಲಿ ಔರಂಗ್‌ಜೇಬ ಒಬ್ಬ ದುರುಳ, ಸರ್ವಾಧಿಕಾರಿ ರಾಜನಾಗಿದ್ದ ಎಂಬುದನ್ನು ಒಪ್ಪಿಕೊಂಡಿದೆ. ಬಹುಷಃ ಈಗ ಕಲಾಂರ ಹೆಸರಿಡಲು ಬಿಜೆಪಿ‌ ಮುಂದಾದರೆ ಯಾವ ಅಡತಡೆಯನ್ನು ಮಾಡಲಾಗದ ಸಂದಿಗ್ಧತೆಗೆ ಕಾಂಗ್ರೆಸ್ ಒಳಗಾಗಿದೆ.

ರಾಹುಲ್ ಅಶೋಕ್ ಹಜಾರೆ.‌

Click to comment

Leave a Reply

Your email address will not be published. Required fields are marked *

Most Popular

To Top