National

ಮೊಘಲರಿಗೆ ಪಾಠ ಕಲಿಸಿದ ರಕ್ತದಲ್ಲಿ ತೋಯ್ದ ದಂಡನಾಯಕ!!

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯಲ್ಲಿ ಅತ್ಯುಚ್ಚ ಶ್ರೇಣಿಯೊಂದಿಗೆ ತೇರ್ಗಡೆಯಾಗುವ ಮಿಲಿಟರಿ ಕೆಡೆಟ್ ಗಳಿಗೆ ಪ್ರತೀ ವರ್ಷ ಒಂದು ಚಿನ್ನದ ಪದಕ ನೀಡಲಾಗುತ್ತದೆ. ಅದರ ಹೆಸರು ಲಚಿತ್ ಬರ್ಫುಖಾನ್ ಗೋಲ್ಡ್ ಮೆಡಲ್. ನಮ್ಮ ಸೈನಿಕರು ಲಚಿತ್ ನಂತೆಯೇ ಸೈನಿಕ ಕಾರ್ಯಾಚರಣೆಯ ಸಂದರ್ಭದಲ್ಲಿ ದೂರದೃಷ್ಟಿ ಹೊಂದಿರಬೇಕೆಂಬುದು ಇದರ ಉದ್ದೇಶ!

ಯಾರೀ ಲಚಿತ್ ಬರ್ಫುಕಾನ್? ಈತ ನಮ್ಮ ದೇಶವು ಕಂಡು ಕೇಳರಿಯದ ಅಪ್ರತಿಮ ವೀರಗಣಿಗಳಲ್ಲೊಬ್ಬ. ವಿಸ್ತರಣಾವಾದದ ನೀತಿಯನ್ನು ಭಾರತದಾದ್ಯಂತ ಹಬ್ಬಿಸುತ್ತಾ, ತಮ್ಮ ಸಾಮ್ರಾಜ್ಯವನ್ನು ವಿಶಾಲವಾಗಿಸಿಕೊಳ್ಳುತ್ತಿದ್ದ ಮೊಗಲರ ವಿರುದ್ಧ ಕೊನೆಯುಸಿರಿರುವವರೆಗೂ ಹೋರಾಡಿದ್ದ ಅಪ್ರತಿಮ ದಂಡನಾಯಕ ಈ ಲಚಿತ್ ಬರ್ಫುಕಾನ್. ಭಾರತದಾದ್ಯಂತ ತಮ್ಮ ಸಾಮ್ರಾಜ್ಯವನ್ನು ವಿಸ್ತಾರ ಮಾಡಿಕೊಳ್ಳುತ್ತಿದ್ದರೂ ಅಹೋಂ ಗಣರಾಜ್ಯದ ಒಂದಿಂಚು ಜಾಗವನ್ನೂ ಮುಟ್ಟಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಮೊಗಲ್ ದಂಡನಾಯಕರನ್ನು ತಳ್ಳಿದ ಪರಾಕ್ರಮಿ ಈ ಲಚಿತ್ ಬರ್ಫುಕಾನ್!

ಈಗಿನ ಅಸ್ಸಾಂನ ಮೂಲ ಹೆಸರು ಕಾಮರೂಪ. ಇದು ಅಹೋಂ ಗಣರಾಜ್ಯವೆನಿಸಿದ್ದು 1628ರಲ್ಲಿ. ಅದರ ಸಂಸ್ಥಾಪಕ ಬರ್ಮಾದಿಂದ ಪಟ್ಕಾಯ್ ಪರ್ವತವನ್ನು ದಾಟಿಕೊಂಡು ಬ್ರಹ್ಮಪುತ್ರ ನದಿಯ ಮೂಲಕ ಕಾಮರೂಪಕ್ಕೆ ಬಂದಿಳಿದಿದ್ದ ರಾಜಕುಮಾರ ಸುಕ್ಫಾ. ಸುಕ್ಫಾನ ಪೂರ್ವಜರು ಪ್ರಕೃತಿಯ ಆರಾಧಕರು. ಅವರು ತಮ್ಮನ್ನು ಇಂದ್ರನ ವಂಶದವರೆಂದು ಗುರುತಿಸಿಕೊಂಡಿದ್ದರು. ಕ್ರಮೇಣ ಇಲ್ಲಿನವರೇ ಆಗಿಹೋದರು. ಕಾಮರೂಪದ ಜನಗಳೂ ಸಹ ತಮ್ಮನ್ನು ಇಂದ್ರನ ವಂಶದವರೆಂದು ಕರೆದುಕೊಳ್ಳುವ ಅಹೋಂಗಳ ಅನುಯಾಯಿಗಳೆಂದು ಹೆಮ್ಮೆಯಿಂದ ಕರೆದುಕೊಳ್ಳತೊಡಗಿದರು. ಹೀಗೆ ಕಾಮರೂಪವು ಅಹೋಂ ಗಣರಾಜ್ಯವಾಗಿ ಪರಿವರ್ತಿತವಾಯ್ತು.

ಭಾರತದಾದ್ಯಂತ ವಿಸ್ತರಿಸಿಕೊಳ್ಳುವುದನ್ನೇ ತಮ್ಮ ಆಡಳಿತದ ಪ್ರಮುಖ ನೀತಿಯಾಗಿಸಿಕೊಂಡಿದ್ದ ಮೊಘಲರು 16ನೇ ಶತಮಾನದ ಆರಂಭದಲ್ಲಿ ಬಂಗಾಳದ ಮೇಲೆ (ಈಗಿನ ಬಾಂಗ್ಲಾ ಮತ್ತು ಪಶ್ಚಿಮಬಂಗಾಳ) ಪೂರ್ಣ ಹಿಡಿತ ಸಾಧಿಸಿಯಾಗಿತ್ತು. ಅದರ ಅಂಚಿನಲ್ಲಿದ್ದ ಫಲವತ್ತಾದ ಕೂಚ್ ಬಿಹಾರ್ ಪ್ರದೇಶದ ಮೇಲೆಯೂ ಅವರ ಹದ್ದಿನಕಣ್ಣು ನೆಟ್ಟಿತ್ತು. ಕೂಚ್ ಬಿಹಾರದ ರಾಜನ ಇಬ್ಬರು ಮಕ್ಕಳ ನಡುವೆ ಅಧಿಕಾರಕ್ಕಾಗಿ ವೈಮನಸ್ಸು ಉಂಟಾಗಿ ಅದು ಬಹಿರಂಗ ಯುದ್ಧಕ್ಕೆ ತಿರುಗಿದಾಗ ಮೊಘಲರು ಆ ಜಗಳದ ಬೆಂಕಿಗೆ ತುಪ್ಪ ಸುರಿದರು!

ಕೂಚ್ ಬಿಹಾರ್ ಪ್ರದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿದ ಮೊಘಲ್ ನಾಯಕರು ಆ ಇಬ್ಬರು ರಾಜಕುಮಾರರಲ್ಲಿ ಒಬ್ಬನನ್ನು ಬೆಂಬಲಿಸಿದರು. ಇನ್ನೊಬ್ಬ ರಾಜಕುಮಾರನ ಪಕ್ಷವನ್ನು ಅಹೋಂ ಅರಸರು ವಹಿಸಿದರು. ಈ ಸಂಘರ್ಷಮಯ ವಾತಾವರಣವು 1615ರಿಂದ 1682ರವರೆಗೆ ಮುಂದುವರಿದು, 18 ಭಯಂಕರ ಯುದ್ಧಗಳಿಗೆ ಕಾರಣವಾಯಿತು. ಅದೇ ಅಹೋಂ ಮತ್ತು ಮೊಘಲರ ನಡುವೆ ನಡೆದ ಕೂಚ್ ಬಿಹಾರ್ ಯುದ್ಧ.

ಈ ಯುದ್ಧವನ್ನೊಂದು ನಿರ್ಣಾಯಕ ಹಂತಕ್ಕೆ ಕೊಂಡೊಯ್ದು, ಮೊಘಲರು ಮುಂದೆಂದೂ ಅಸ್ಸಾಂಗೆ ಕಾಲಿಡದಂತೆ ನೋಡಿಕೊಂಡ ಧೀರ ಈ ಲಚಿತ್. 67 ವರ್ಷಗಳ ಕಾಲ ನಡೆದ ಈ ಹೋರಾಟವೊಂದು ತಂತ್ರ-ಪ್ರತಿತಂತ್ರಗಳ ಸರಣಿ. ಸೈನಿಕರಿಗೊಂದು ಪಠ್ಯವಸ್ತುವಿನಂತಿರುವ ಘಟನಾವಳಿ. ಅಸ್ಸಾಮಿಯರ ಮೇರೆಯರಿಯದ ಪರಾಕ್ರಮಕ್ಕೊಂದು ಪ್ರತ್ಯಕ್ಷ ದರ್ಶನ. ಶತ್ರುವಿನೆದುರು ತಲೆಬಾಗದ, ಅಸ್ಸಾಮೀ ಕದನಕಲಿಗಳ ಕಥನ. ರಕ್ತಕ್ಕೆ ಅಸ್ಸಾಮಿಯಲ್ಲಿ ಲ ಎನ್ನುತ್ತಾರೆ. ಚಿತ್ ಎಂದರೆ ತೋಯ್ದವ. ಸೇನೆಯ ದಂಡನಾಯಕನಿಗಲ್ಲಿ ಬರ್ಫೂಕಾನ್ ಎನ್ನುತ್ತಾರೆ. ಹೀಗೆ ‘ರಕ್ತದಲ್ಲಿ ತೋಯ್ದ ದಂಡನಾಯಕ’ ಎಂಬ ಹೆಸರಿಗೆ ಅನ್ವರ್ಥವಾಗಿ ಬದುಕಿದವನು ಲಚಿತ್ ಬರ್ಫುಕಾನ್!

-ಕಿರಣ್ ಹೆಗ್ಗದ್ದೆ

 

Click to comment

Leave a Reply

Your email address will not be published. Required fields are marked *

Most Popular

To Top