State

ಮೈತ್ರಿ ಸರ್ಕಾರದಲ್ಲಿ ಯಾರಿಗೆ ಹಂಗಾಮ? ಯಾರಿಗೆ ಪಂಗನಾಮ!!

-ಶ್ರೀ ನಾಥ್ ಮಾನೆ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಬಂದಿದ್ದೇ ತಡ, ಕಾಂಗ್ರೆಸ್ ಪಕ್ಷವು ಜೆಡಿಎಸ್’ಗೆ “ಬೇಷರತ್ ಬೆಂಬಲ” ಘೋಷಿಸುವ ಮಾತುಗಳನ್ನಾಡಿತ್ತು. ಆಮೇಲೆ ಶುರುವಾಗಿದ್ದೇ “ಬೇಕಾದಷ್ಟು ಷರತ್ತುಗಳ” ಸರಮಾಲೆ. ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಸ್ಥಾನ, ಸಚಿವ ಸ್ಥಾನ, ಪ್ರಮುಖ ಖಾತೆಗಳ ಹಂಚಿಕೆ, ನಿಗಮ ಮಂಡಳಿ, ಮುಂದಿನ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ, ಹೀಗೆ ಒಂದೆರಡಲ್ಲ..

ಈಗ ತಮ್ಮ ಪಕ್ಷದ ರಾಷ್ಟ್ರ ನಾಯಕನನ್ನೇ ತಾನು ಹೇಳಿದಂತೆ ನಡೆಸುತ್ತಿರುವ ಕುಮಾರಸ್ವಾಮಿ ವಿರುದ್ಧ ಸಿದ್ಧರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಒಳಗೊಳಗೆ ಕುದಿಯುತ್ತಿದ್ದರೆ, ಇದೇ ಸಮಯ ಬಳಸಿಕೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪಕ್ಷದ ಚಾರ್ಮ್ ಹೆಚ್ಚಿಸುವತ್ತ ಗಮನಹರಿಸಿದ್ದಾರೆ ಜೆಡಿಎಸ್ ವರಿಷ್ಠರು.

ರಾಜಕೀಯದಲ್ಲಿ ಅನುಭವ ಇಲ್ಲದ ರಾಹುಲ್ ಗಾಂಧಿ, 5 ವರ್ಷ ನೀವೇ ಮುಖ್ಯಮಂತ್ರಿ ಆಗಿ ಇರ್ತೀರಿ ಡೋಂಟ್ ವರಿ ಅಂತ ಕುಮಾರಸ್ವಾಮಿಗೆ ಅಭಯ ಹಸ್ತ ನೀಡುತ್ತಿದ್ದರೆ, ರಾಜಕೀಯದಲ್ಲಿ ಪಂಟರ್ ಆಗಿರುವ ಸಿದ್ಧರಾಮಯ್ಯನವರು “ಕುಮಾರಸ್ವಾಮಿ ಐದು ವರ್ಷ ಆಡಳಿತ ನಡೆಸ್ತಾರೇನ್ರೀ? ಹೋಗಿ ಸುಮ್ನೆ ಅತ್ಲಾಗೆ” ಅಂತ ಆಪ್ತರೊಡನೆ ವ್ಯಂಗ್ಯವಾಗಿ ಮಾತಾಡುತ್ತಿರುವ ವೀಡಿಯೋಗಳು ಹೊರ ಬರುತ್ತಿವೆ.
ಕೂಡಲೇ ಸಿದ್ಧರಾಮಯ್ಯನವರಿಂದ ರಾಜಕೀಯವಾಗಿ ಅವಕೃಪೆಗೆ ಒಳಗಾಗಿದ್ದ ಈಗಿನ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಯಾರು ಏನು ಬೇಕಾದರೂ ಹೇಳಲಿ, ಯಾವುದೇ ಕಾರಣಕ್ಕೂ ಸರ್ಕಾರ ಉರುಳುವುದಿಲ್ಲ, 5 ವರ್ಷ ಇದ್ದೇ ಇರುತ್ತದೆ ಎಂದು ಸಿದ್ಧರಾಮಯ್ಯವರಿಗೆ ಪರೋಕ್ಷ ಟಾಂಗ್ ನೀಡಲು ಹಿಂದೆ ಬಿದ್ದಿಲ್ಲ.

ಇತ್ತೀಚೆಗೆ ಕುಮಾರಸ್ವಾಮಿ ಮಂಡಿಸಿದ ಬಜೆಟ್’ಗೆ ತೀವ್ರ ಅಪಸ್ವರ ಎತ್ತಿದ್ದ ಸಿದ್ಧರಾಮಯ್ಯನವರು ಬೇಕಾದರೆ ಕುಮಾರಸ್ವಾಮಿಯವರು ಸಪ್ಲಿಮೆಂಟರಿ ಬಜೆಟ್ ಮಂಡಿಸಲಿ ಅದು ಬಿಟ್ಟು ನಾನು ಮುಖ್ಯಮಂತ್ರಿ ಆದಾಗ ಮಂಡಿಸಿದ್ದ ಸಂಪೂರ್ಣ ಬಜೆಟನ್ನು ಟಚ್ ಮಾಡುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದರು.
ಕೂಡಲೇ ರಾಜಕೀಯ ಚದುರಂಗದಾಟ ಪ್ಲೇ ಮಾಡಿದ್ದ ಕುಮಾರಸ್ವಾಮಿಯವರು ನೇರವಾಗಿ ರಾಹುಲ್ ಗಾಂಧಿ ಮುಂದೆ ಹೋಗಿ ಕೂತು ಬಿಟ್ಟರು. ಪಂಜಾಬ್ ಹೊರತುಪಡಿಸಿ ಕಾಂಗ್ರೆಸ್ ಪಾಲಿಗೆ ಉಳಿದಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕವೇ. ಇಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಬೇಡವೆಂದು ರಾಹುಲ್ ಗಾಂಧಿಯವರು ಸದ್ಯಕ್ಕೆ ಮೂಲೆಗುಂಪಾಗಿರುವ ಸಿದ್ಧರಾಮಯ್ಯನವರನ್ನು ಕಡೆಗಣಿಸಿ ಕುಮಾರಸ್ವಾಮಿಗೆ ಜೈ ಅಂದು ಬಿಟ್ಟರು. ಅಲ್ಲಿಗೆ ಸಿದ್ಧರಾಮಯ್ಯನವರು ಹತಾಶರಾಗಿ ತಮ್ಮ ಆಪ್ತರಲ್ಲಷ್ಟೇ ನೋವನ್ನು ತೋರ್ಪಡಿಸಿ ನೆಮ್ಮದಿಗಾಗಿ ಉಜಿರೆಯ ಶಾಂತಿವನಕ್ಕೆ ಸೇರಿ ಬಿಟ್ಟರು.

ಕುಮಾರಸ್ವಾಮಿಯವರು ಕಾಂಗ್ರೆಸ್ಸನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ನಿರಾತಂಕವಾಗಿ ಬಜೆಟ್ ಮಂಡಿಸಿದರು. ಈಗ ವಿರೋಧ ಪಕ್ಷ ಬಿಡಿ, ಮೈತ್ರಿ ಸರ್ಕಾರದ ಪಕ್ಷಗಳ ನಾಯಕರೇ ತದ್ವಿರುದ್ಧ ಹೇಳಿಕೆಗಳನ್ನು ಹೊರಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ಧರಾಮಯ್ಯ ವಿರೋಧಿ ಹಾಗೂ ಸಿದ್ಧರಾಮಯ್ಯ ಪರ ಇರುವ ನಾಯಕರ ಮಧ್ಯೆ ನಡೆಯುತ್ತಿರುವ ಮಾತಿನ ಸಮರವೇ ಈಗ ಸುದ್ದಿಯಾಗುತ್ತಿರುವುದು

ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೇರೆ ತಮ್ಮ ಭಾಷಣದಲ್ಲಿ ಥೇಟ್ ವಿರೋಧ ಪಕ್ಷದ ಶೈಲಿಯಲ್ಲಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೈಲಬೆಲೆ ಏರಿಕೆ ಹಾಗೂ ಅನ್ನಭಾಗ್ಯದ ಅಕ್ಕಿಯ ಕಡಿತ ವಿರುದ್ಧ ಹರಿಹಾಯ್ದಿದ್ದಾರೆ.

ಹಾಗಂತ ಎಲ್ಲ ಕಾಂಗ್ರೆಸ್ ನಾಯಕರು ಬಜೆಟನ್ನು ವಿರೋಧಿಸುತ್ತಿಲ್ಲ. ಸಚಿವ ಸ್ಥಾನ ಹೊಂದಿರುವ ಹಾಗೂ ಸಿದ್ಧರಾಮಯ್ಯ ವಿರೋಧಿ ಬಣದ ಕಾಂಗ್ರೆಸ್ ನಾಯಕರು ಬಜೆಟನ್ನು ಹಾಡಿ ಹೊಗಳಿದರೆ, ಸಚಿವ ಸ್ಥಾನ ವಂಚಿತ ಹಾಗೂ ಸಿದ್ಧರಾಮಯ್ಯ ಪರ ನಾಯಕರು ಬಜೆಟನ್ನು ವಿರೋಧಿಸುತ್ತಿದ್ದಾರೆ.

ಒಟ್ಟಾರೆಯಾಗಿ ನೋಡಿದರೆ ಮೈತ್ರಿ ಸರ್ಕಾರದಿಂದ ಹಾಗೂ ಕಾಂಗ್ರೆಸ್ ನಾಯಕರ ಒಳಜಗಳದಿಂದ ಭರಪೂರ ಲಾಭ ಪಡೆಯುತ್ತಿರುವುದು ಜೆಡಿಎಸ್.
ತನ್ನ ಭವಿಷ್ಯಕ್ಕೆ ಭರ್ಜರಿ ಪ್ಲ್ಯಾಟ್ ಫಾರಂ ಹಾಕಿಕೊಳ್ಳುತ್ತಾ ಇತ್ತ ಕಾಂಗ್ರೆಸ್ಸಿನ ಬುಡ ಅಲುಗಾಡಿಸಿ ತಾನು ಬೀಸಿದ ಗಾಳಿಯ ದಿಕ್ಕಿಗೇ ಅದು ಅನಿವಾರ್ಯವಾಗಿ ಹೊಯ್ದಾಡುವಂತೆ ಮಾಡುತ್ತಿದೆ.

ಕೊನೆಪಕ್ಷ ವಿರೋಧ ಪಕ್ಷವಾಗಿಯಾದರೂ ತಮ್ಮ ಇರುವಿಕೆಯನ್ನು ತೋರ್ಪಡಿಸಬಹುದಾಗಿದ್ದ ಕಾಂಗ್ರೆಸ್ ಅಧಿಕಾರ ಹಿಡಿಯುವ ಆತುರದಲ್ಲಿ ತನ್ನ ನೆಲೆಯನ್ನೇ ಕಳೆದುಕೊಳ್ಳುತ್ತಿದೆ.

Click to comment

Leave a Reply

Your email address will not be published. Required fields are marked *

Most Popular

To Top