National

ಮುರಿದು ಬೀಳಲಿದೆಯೇ ಮಹಾಘಟಬಂಧನ!

ಕಾಂಗ್ರೆಸ್ಸು ಮತ್ತು ಮಾಯಾವತಿಯ ಬಹುಜನ ಸಮಾಜ ಪಾರ್ಟಿ ಕೆಲವು ತಿಂಗಳಿನಿಂದ ಒಟ್ಟಿಗೇ ಸಾಗಲು ತಿಣುಕಾಡುತ್ತಿವೆ. 2018 ರ ಕೊನೆಗೆ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ ಘಡ ಚುನಾವಣೆಯನ್ನೆದುರಿಸಲಿದೆ. ಈ ಬಾರಿ ಚುನಾವಣೆಯಲ್ಲಿ ಮಹಾಘಟಬಂಧನ ಮುಖ್ಯಪಾತ್ರ ವಹಿಸುತ್ತದೆ, ಬಿಜೆಪಿಯನ್ನು ಧೂಳೀಪಟ ಮಾಡಲಿದೆ ಎಂದು ಕೆಲವು ಮಾಧ್ಯಮಗಳು ಹೇಳುತ್ತಿವೆಯಾದರೂ ವಾಸ್ತವ ಸ್ಥಿತಿ ಬೇರೆಯೇ ಇದೆ.

ಕಾಂಗ್ರೆಸ್ಸು ಈ ಎಲ್ಲ ರಾಜ್ಯಗಳಲ್ಲೂ 5-6 ಸೀಟುಗಳನ್ನು ಬಿಎಸ್ಪಿ ಗೆ ಕೊಡಲು ನಿಶ್ಚಯಿಸಿದೆ. ಆದರೆ ಮಾಯಾವತಿ ಇದರಿಂದ ತೃಪ್ತರಿಲ್ಲ. ತಮಗೆ ಹೆಚ್ಚು ಸೀಟುಗಳು ಬೇಕೆಂದು ಕೇಳಿಕೊಂಡಿದ್ದಾರೆ. ಕಾಂಗ್ರೆಸ್ಸು ಯಾರ ಸಹಾಯವೂ ಇಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸುವ ಶಕ್ತಿಯನ್ನಾಗಲಿ, ವರ್ಚಸ್ಸನ್ನಾಗಲೀ ಉಳಿಸಿಕೊಂಡಿಲ್ಲ. ಹೇಗಾದರೂ ಮಾಡಿ ಈ ಮೂರು ರಾಜ್ಯಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಶತಾಯ-ಗತಾಯ ಪ್ರಯತ್ನಿಸುತ್ತಿದೆ ಕಾಂಗ್ರೆಸ್ಸು. ಮತ್ತೊಂದೆಡೆ ಉತ್ತರಪ್ರದೇಶದಲ್ಲಿ 80 ರಲ್ಲಿ 73 ಸೀಟುಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಬಿಜೆಪಿಯ ವಿರುದ್ಧ ಗೆಲ್ಲಲೇಬೇಕೆಂದು ಆಲೋಚಿಸುತ್ತಿರುವ ಕಾಂಗ್ರೆಸ್ಸು ಎಸ್ಪಿ, ಬಿಎಸ್ಪಿಗಳನ್ನು ಓಲೈಸುವ ಪ್ರಯತ್ನದಲ್ಲಿದೆ.

ಈಗ ಬಿಎಸ್ಪಿ ಹೆಚ್ಚಿನ್ ಸೀಟಿನ ಬೇಡಿಕೆಯಿಟ್ಟಿದೆ. ಬೇಡಿಕೆಯನ್ನೊಪ್ಪಿ ಬಿಎಸ್ಪಿ ಹೇಳಿದಂತೆ ನಡೆದರೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಬೇಕೆನ್ನುವ ಕಾಂಗ್ರೆಸ್ಸಿನ ಆಸೆಗೆ ನೀರೆರೆದಂತೆ, ಬೇಡಿಕೆಗೆ ಒಪ್ಪದೇ ಹೋದರೆ ಚುನಾವಣೆ ಗೆಲ್ಲುವು ಆಶಯಕ್ಕೇ ನೀರೆರೆದಂತೆ! ಕಾಂಗ್ರೆಸ್ಸಿಗೆ ಇದು ಇಕ್ಕಟ್ಟಿನ ಪರಿಸ್ಥಿತಿಯಾಗಿದೆ. ಬಿಎಸ್ಪಿಗೆ ಕೊಡಬೇಕಾದಷ್ಟು ಸೀಟುಗಳು ಬಂದರೆ ಮಾತ್ರವೇ ಅದು ಕಾಂಗ್ರೆಸ್ಸಿನೊಡನೆ ಸಮ್ಮಿಶ್ರವಾಗಿ ಚುನಾವಣೆಯನ್ನು ಸ್ಪರ್ಧಿಸಲಿದೆ. ಕಾಂಗ್ರೆಸ್ಸು ಹೇಗೆ ನಿಯಮಗಳನ್ನು ಹಾಕುತ್ತಿದೆಯೋ ಅದೇ ನಿಯಮಗಳು ಅವರಿಗೂ ಅನ್ವಯಿಸುತ್ತವೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡಿದ ಕಾಂಗ್ರೆಸ್ಸು 126 ವೋಟುಗಳನ್ನು ಗಳಿಸಿ ಭಾರಿ ಮುಖಭಂಗ ಅನುಭವಿಸಿದೆ. ಮೊದಲು ಇದನ್ನು ಮಹಾಘಟಬಂಧನದ ಬಲ ಪ್ರದರ್ಶನವೆಂದೇ ಎಲ್ಲಾ ಮಾಧ್ಯಮಗಳನ್ನು ಬಿಂಬಿಸಿದ್ದವು. ಕಾಂಗ್ರೆಸ್, ಟಿಎಂಸಿ, ರಾಷ್ಟ್ರೀಯ ಲೋಕ ದಳದ ಕೆಲವು ನಾಯಕರು ಇದನ್ನು ಬೆಂಬಲಿಸಲೂ ಆಗದೇ ವಿರುದ್ಧವಾಗಿ ಮಾತನಾಡಲೂ ಆಗದೇ ಅವಿಶ್ವಾಸ ಗೊತ್ತುವಳಿಯಿಂದಲೇ ಹಿಂದುಳಿಯುವ ನಿರ್ಧಾರ ಮಾಡಿದರು. ಮಾಧ್ಯಮಗಳು ರಾಹುಲ್ ಪ್ರಧಾನಿಯನ್ನು ಅಪ್ಪಿಕೊಂಡದ್ದನ್ನು ಮುಖಪುಟ ಮಾಡಿ, ಭ್ರಾತೃತ್ವ ಪ್ರೇಮ ಮೆರೆದ ರಾಹುಲ್ ಎಂದು ಶೀರ್ಷಿಕೆ ನೀಡಿದವೇ ಹೊರತು ಮಹಾಘಟಬಂಧನದಲ್ಲಿ ತೂತು ಬಿದ್ದಿರುವುದನ್ನು ತೋರಿಸಲೇ ಇಲ್ಲ!

ಇದಾದ ಮರುದಿನವೇ ಕಾಂಗ್ರೆಸ್ಸು ಕಾರ್ಯಕಾರಿಣಿ ಸಮಿತಿಯ ಸಭೆಯಲ್ಲಿ ತಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ರಾಹುಲ್ ಎಂದು ಹೇಳಿಕೆ ನೀಡಿತು. ಕರ್ನಾಟಕದಲ್ಲಿ 38 ಸೀಟನ್ನು ಪಡೆದು ಕಾಂಗ್ರೆಸ್ಸಿನ ಬೆಂಬಲದಿಂದ ಸರ್ಕಾರ ನಡೆಸುತ್ತಿರುವ ಜನತಾ ದಳದ ನಾಯಕ ಎಚ್.ಡಿ ದೇವೇಗೌಡ ಬಿಟ್ಟರೆ ಉಳಿದವರಾರೂ ಇದರ ಕುರಿತು ಮಾಧ್ಯಮದ ಮುಂದೆ ಯಾವ ಹೇಳಿಕೆಯನ್ನೂ ನೀಡಿಲ್ಲ. ಲಾಲೂ ಪ್ರಸಾದ್ ಯಾದವ್ ರ ಮಗ, ಆರ್.ಜೆ.ಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರು  ಮಮತಾ ಬ್ಯಾನರ್ಜಿ, ಶರದ್ ಪವಾರ್, ಮಾಯಾವತಿಯವರು ಸಮರ್ಥ ಪ್ರಧಾನಿ ಅಭ್ಯರ್ಥಿಗಳೆಂದು ಹೇಳಿಕೆ ನೀಡಿದರು. ಟಿಎಂಸಿ ಯ ನಾಯಕಿ ಮಮತಾ ಬ್ಯಾನರ್ಜಿಯವರು ‘ಇದು ಕಾಂಗ್ರೆಸ್ ಪಾರ್ಟಿಯ ಒಳ ವಿಚಾರಗಳು’ ಎಂದಷ್ಟೇ ಹೇಳಿ ಸುಮ್ಮನಾದರು. ಸಮಾಜವಾದಿ ಪಾರ್ಟಿ ಚುನಾವಣೆಯ ನಂತರ ಪ್ರಧಾನಿ ಅಭ್ಯರ್ಥಿಯ ಆಯ್ಕೆಯಾಗಬೇಕು ಎಂದು ಕಾಂಗ್ರೆಸ್ಸಿನ ನಿರ್ಧಾರಕ್ಕೆ ವಿರುದ್ಧ ದನಿಯೆತ್ತಿದ್ದಾರೆ.

ಕಾಂಗ್ರೆಸ್ಸಿಗೆ ಸವಾಲುಗಳು ಇನ್ನು ಮುಂದೆ ಎದುರಾಗಲಿವೆ. ಮತ್ತದು ವಿರೋಧ ಪಕ್ಷದಿಂದಲ್ಲ; ಬದಲಿಗೆ ತಮ್ಮೊಡನೆ ಮೈತ್ರಿಗೆ ಒಪ್ಪಿಕೊಂಡಿರುವ ಪಕ್ಷಗಳಿಂದಲೇ. ಮಹಾಘಟಬಂಧನ ಮುರಿದು ಬೀಳುವ ಸಾಧ್ಯತೆಗಳು ಹೆಚ್ಚಿವೆ ಎಂದು ರಾಜಕೀಯ ಮುತ್ಸದ್ದಿಗಳು ಅಭಿಪ್ರಾಯಪಡುತ್ತಿದ್ದಾರೆ!

 

Click to comment

Leave a Reply

Your email address will not be published. Required fields are marked *

Most Popular

To Top