National

ಮಹಾಭಾರತ ಕಾಲದ ನಗರ ಭೂಮಿಯಡಿ ಪತ್ತೆ!?

ಉತ್ತರಪ್ರದೇಶದ ಸನೌಲಿ ಹಳ್ಳಿ ಇದೀಗ ಇಡಿಯ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದೆ. ಇಲ್ಲಿ ಪುರಾತತ್ವ ಇಲಾಖೆ ನಡೆಸಿದ ಉತ್ಖನನದ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಬಾಘ್ ಪಟ್ ಜಿಲ್ಲೆಯಲ್ಲಿ ಪುರಾತತ್ವ ಇಲಾಖೆ ನಡೆಸಿದ ಉತ್ಖನನದ ಸಮಯದಲ್ಲಿ ಎರಡು ಶವಪೆಟ್ಟಿಗೆಗಳು ದೊರೆತಿವೆ. ಇಂತಹ ಅನ್ವೇಷಣೆ ದೇಶದಲ್ಲಿಯೇ ಮೊದಲನೇ ಬಾರಿಗೆ ಎಂದು ಇಲಾಖೆ ಹೇಳಿದೆ!

ಈ ಹಿಂದೆ ಸನೌಲಿಯಲ್ಲಿ 2018ರಲ್ಲಿ ಪುರಾತತ್ವ ಇಲಾಖೆ ಉತ್ಖನನವನ್ನು ನಡಸಿತ್ತು. ಇದು ಅದರ ಮುಂದುವರೆದ ಭಾಗ. ಆರ್ಕಿಯಾಲಾಜಿ ಸರ್ವೇ ಆಫ್ ಇಂಡಿಯಾದ ನಿರ್ದೇಶಕರಾದ ಎಸ್.ಕೆ ಮಂಜುಲ್ ಅವರ ಮಾರ್ಗದರ್ಶನದಲ್ಲಿ ಇದನ್ನು ನಡೆಸಲಾಗುತ್ತಿದೆ. ಈ ಜಾಗ ಹಸ್ತಿನಾಪುರವನ್ನು ಹೋಲುವುದರಿಂದ ಇದು ಮಹಾಭಾರತದ ಕಾಲಘಟ್ಟದ್ದಿರಬಹುದೆಂಬ ಸಂಶಯ ವ್ಯಕ್ತಪಡಿಸಲಾಗಿದೆ!

ಈ ಹಿಂದೆ ಪುರಾತತ್ವ ಇಲಾಖೆ ಕ್ರಿ.ಪೂ 2000 ದಲ್ಲಿ ಅಂದರೆ ಕಂಚಿನ ಯುಗದಲ್ಲಿ ಉಪಯೋಗಿಸಲ್ಪಟ್ಟಿರಬಹುದಾದ ರಥಗಳ ಕುರುಹನ್ನು ಅನ್ವೇಷಿಸಿತ್ತು. ಈಗ ಉತ್ಖನನ ನಡೆಸಿರುವ ಸ್ಮಶಾನದ ಜಾಗದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಆಭರಣಗಳು, ಮಡಕೆಗಳು ಮತ್ತು ಇನ್ನುಳಿದ ವಸ್ತುಗಳು ದೊರೆತಿರುವುದರಿಂದ ಅಲ್ಲಿ ಯಾವುದೋ ರಾಜ ಪರಿವಾರವೇ ವಾಸವಾಗಿತ್ತೆಂದು ಸೂಚಿಸುತ್ತದೆ ಎನ್ನುವುದು ನಿರ್ದೇಶಕರ ಮಾತು.

ಇದರ ಜೊತೆಗೆ ಪವಿತ್ರ ಕೋಣೆಗಳು ಈ ಬಾರಿ ಉತ್ಖನನದಲ್ಲಿ ಕಂಡುಬಂದಿವೆ. ಈ ಬಾರಿ ದೊರೆತ ಎಲ್ಲಾ ವಸ್ತುಗಳೂ ಸುಮಾರು 4000 ವರ್ಷ ಹಳೆಯದಿರಬಹುದೆಂದು ಶಂಕಿಸಲಾಗಿದೆ. ‘ಇದು ಹರಪ್ಪ ನಾಗರಿಕತೆಗಿಂತಲೂ ಭಿನ್ನವಾಗಿದೆ. ಇದು ಭಾರತದ ಪ್ರಾಚೀನ ಸಾಹಿತ್ಯ ಮತ್ತು ವೇದಕಾಲದ ಆಯಾಮಕ್ಕೆ ಹೊಸ ಆಲೋಚನೆಗಳನ್ನು ನೀಡಬಲ್ಲುದು’ ಎಂದಿದ್ದಾರೆ ಎಸ್.ಕೆ ಮಂಜುಲ್ ಅವರು.

 

ಜನವರಿಯಲ್ಲಿ ಶುರುವಾದ ಈ ಉತ್ಖನನವನ್ನು ಎರಡು ಜಾಗಗಳಲ್ಲಿ ನಡೆಸಲಾಗಿದೆ. ಮೊದಲ ಸ್ಥಳದಲ್ಲಿ ಶವಗಳನ್ನು ಸುಡುವ ಜಾಗ ಮತ್ತು ಕೋಣೆಗಳು ಹಾಗೂ ಸುಡಲು ಉಪಯೋಗಿಸುವ ಕೆಲವು ವಸ್ತುಗಳನ್ನು ಹೊರತೆಗೆಯಲಾಗಿದೆ. ಮಹಿಳೆಯ ದೇಹದ ಅಸ್ಥಿಪಂಜರವನ್ನು ಹೊಂದಿರುವ ಒಂದು ಶವಪೆಟ್ಟಿಗೆ ದೊರೆತಿದೆ. ಸುಡುವ ಜಾಗದಿಂದ ಕೊಳೆತ ಧನಸ್ಸು, ಮೂಳೆಗಳು, ಬಂಗಾರದ ಮಣಿಗಳು, ಸುಂದರವಾದ ಮಡಕೆಗಳು ಕೂಡ ದೊರೆತಿವೆ. ಇನ್ನೊಂದು ಶವವನ್ನು ಸುಡುವ ಜಾಗದಿಂದ ಕನ್ನಡಿ, ಹೈರ್ ಪಿನ್, ಮಣಿಗಳು, ಮಡಕೆಗಳು ಮತ್ತು ಮಹಿಳೆಯ ಅಸ್ಥಿಪಂಜರ ದೊರೆತಿದೆ.

 

ಎರಡನೇ ಸ್ಥಳದಿಂದ ಪಾಟ್ ಗಳು, ಮೂಳೆ, ಕಲ್ಲುಗಳು ಮುಂತಾದ ವಸ್ತುಗಳು ದೊರೆತಿವೆ. ಇವು ಹರಪ್ಪ ನಾಗರಿಕತೆಗೂ ಹಳೆಯದೆಂದು ತೋರುತ್ತದೆ ಎನ್ನಲಾಗಿದೆ. ಉತ್ಖನನ ಇನ್ನೂ ಜಾರಿಯಲ್ಲಿದೆ. ಇಲ್ಲಿಯವರೆಗೂ ದೊರೆತ ವಸ್ತುಗಳು ಇಲ್ಲಿ ವಾಸಿಸುತ್ತಿದ್ದ ನಾಗರಿಕತೆ ಸಾಂಸ್ಕೃತಿಕವಾಗಿ ಅತ್ಯಂತ ಮುಂದುವರೆದ ನಾಗರಿಕತೆಯಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿವೆ ಎಂದಿದ್ದಾರೆ ತಜ್ಞರು! ಈ ಉತ್ಖನನದ ನಿಖರ ಮಾಹಿತಿಗಳು, ಸಾಕ್ಷಿಗಳ ಸಮೇತ ಹೊರಬಂದರೆ ಭಾರತದ ಪ್ರಾಚೀನ ನಾಗರಿಕತೆಯ ಮಾಹಿತಿ ದೊರೆಯುತ್ತದೆ. ಜಗತ್ತಿನ ಎಲ್ಲಾ ನಾಗರಿಕತೆಗಿಂತಲೂ ಭಾರತದ ನಾಗರಿಕತೆ ಅತ್ಯಂತ ಪ್ರಾಚೀನವೆಂಬುದು ಇಡಿಯ ಜಗತ್ತಿನೆದುರು ಅನಾವರಣಗೊಳ್ಳಲಿದೆ!

Click to comment

Leave a Reply

Your email address will not be published. Required fields are marked *

Most Popular

To Top