National

ಮನೆಯಲ್ಲಿ ಕೂರುವುದೂ ಕ್ರಾಂತಿಯ ಮಹಾಯಜ್ಞ!

ಜನತಾ ಕಫ್ಯರ್ು ನಿಸ್ಸಂಶಯವಾಗಿ ಹೊಸದೊಂದು ಚೈತನ್ಯವನ್ನು ಸಮಾಜದಲ್ಲಿ ಹುಟ್ಟುಹಾಕಿದೆ. 130 ಕೋಟಿ ಜನ ಒಂದಷ್ಟು ಅಪಸವ್ಯಗಳನ್ನು ಹೊರತು ಪಡಿಸಿದರೆ ಒಟ್ಟಾಗಿ ಒತ್ತಾಯವಿಲ್ಲದೇ ಮನೆಯಲ್ಲೇ ಕುಳಿತುಕೊಂಡು ದೇಶದ ಪರವಾಗಿ ಹೋರಾಟಕ್ಕೆ ಅಣಿಯಾಗುವುದಿದೆಯಲ್ಲಾ ಖಂಡಿತ ಸಾಮಾನ್ಯವಾದ ಸಂಗತಿಯಲ್ಲ. ಬಹುಶಃ ಸ್ವಾತಂತ್ರ್ಯದ ಕಾಲಘಟ್ಟದ ದಿನಗಳನ್ನು ನೆನಪಿಸುವಂಥದ್ದು ಇದು. 1857ರ ಸಂಗ್ರಾಮಕ್ಕೆ ಇಡಿಯ ದೇಶ ಒಟ್ಟಾಗಿ ಹೋರಾಟ ನಡೆಸಿದಾಗ, ಮಹಾತ್ಮಾ ಗಾಂಧೀಜಿಯವರ ಕರೆ ಕೇಳಿ ಉಪ್ಪಿನ ಸತ್ಯಾಗ್ರಹಕ್ಕೆ ದೇಶವೆಲ್ಲಾ ಸಜ್ಜಾದಾಗ, ಕೊನೆಗೆ ಧ್ವಜ ಸತ್ಯಾಗ್ರಹದ ಹೊತ್ತಲ್ಲಿ ಎಲ್ಲೆಡೆ ಭಾರತದ ಧ್ವಜ ಪಟಪಟಿಸುವಂತಾದಾಗ ಬಹುಶಃ ವಾತಾವರಣ ಹೀಗೇ ಇದ್ದಿರಬೇಕು. ಮನೆಯಲ್ಲಿ ಕುಳಿತುಕೊಳ್ಳುವುದೇ ಸಾಧನೆ ಏನೂ ಅಲ್ಲ ನಿಜ. ಆದರೆ 130 ಕೋಟಿ ಜನ ಒಂದೇ ವಿಚಾರವನ್ನು ಆಲೋಚನೆ ಮಾಡುತ್ತಾ ಮನೆಯಲ್ಲಿ ಕುಳಿತುಕೊಳ್ಳುತ್ತಾರಲ್ಲಾ, ಅದು ಬಲು ವಿಶೇಷ. ಹೆಚ್ಚು-ಕಡಿಮೆ ಜಗತ್ತಿನ ಆರನೇ ಒಂದು ಭಾಗದಷ್ಟು ಜನ ಯಾರ ಒತ್ತಾಯವೂ ಇಲ್ಲದೇ ಸ್ವಯಂ ಪ್ರೇರಿತರಾಗಿ ಹೀಗೆ ಚೌಕಟ್ಟು ಹಾಕಿಕೊಳ್ಳುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿಯೇ!


ಈ ರೀತಿ ಆಗುವುದಕ್ಕೆ ಸಾಕಷ್ಟು ಮಾನಸಿಕ ತಯಾರಿ ಬೇಕು. ಸವರ್ಾಧಿಕಾರಿಯ ಆಡಳಿತ ಚೀನಾದಲ್ಲಿದ್ದಾಗಲೂ ಜನರನ್ನು ಬಡಿಬಡಿದು ಒಳಕೂರಿಸಬೇಕಾಗಿತ್ತು. ಭಾರತದಲ್ಲಿ ಅರ್ಧಗಂಟೆಯ ಭಾಷಣ ಬದಲಾವಣೆಗೆ ಪ್ರೇರೇಪಣೆ ಕೊಟ್ಟಿತು. ಹೃದಯಗಳನ್ನು ತಟ್ಟುವುದು ಪೊಲೀಸರ ಲಾಠಿಗಿಂತಲೂ ಹೆಚ್ಚು ಕೆಲಸ ಮಾಡುತ್ತದೆ ಎನ್ನುವುದು ಮತ್ತೆ ಸಾಬೀತಾಯ್ತು. ಕೆಲವರು ಇದನ್ನು ವಿರೋಧಿಸಬೇಕೆಂದೇ ಈ ನಿಧರ್ಾರವನ್ನು ಆಡಿಕೊಂಡರು. ಇನ್ನೂ ಕೆಲವರು ಸಾರ್ವಜನಿಕವಾಗಿ ಪ್ರಾರ್ಥನೆ ಮಾಡುವ ನೆಪದಲ್ಲಿ ಈ ನಿರ್ಣಯವನ್ನು ಧಿಕ್ಕರಿಸಿದರು. ಭಾರತ ಸ್ವಾತಂತ್ರ್ಯದ ಕಾಲಘಟ್ಟದಿಂದಲೂ ಹೀಗೆಯೇ. ಬ್ರಿಟೀಷರ ವಿರುದ್ಧ ಹೋರಾಟ ಮಾಡುವಾಗಲೂ ನಮ್ಮ ಬಳಿ ಮೂರು ಬಗೆಯ ಮಾರ್ಗಗಳಿದ್ದವು. ಒಂದು ಬೇಡಿಕೆಗಳನ್ನು ಪತ್ರಗಳ ಮೂಲಕ ಬಿಳಿಯರ ಮುಂದಿಟ್ಟು ಅವರು ಕೊಡುವ ಅಲ್ಪ-ಸ್ವಲ್ಪವನ್ನು ಬೀಗಿ ಸ್ವೀಕರಿಸುವುದು. ದಾದಾಭಾಯ್ ನವರೋಜಿ, ಗೋಖಲೆಥರದವರು ಈ ಪಾಳಯದ ನೇತೃತ್ವ ವಹಿಸಿದ್ದರು. ಇನ್ನೂ ಈ ಮಾರ್ಗವನ್ನು ವಿರೋಧಿಸಿ ಸ್ವಲ್ಪ ಆಕ್ರಮಕ ಚಿಂತನೆಗಳನ್ನು ಮುಂದಿಡುತ್ತಿದ್ದ ಎರಡನೇ ತಂಡವಿತ್ತು. ಲಜಪತ್ರಾಯರು, ಬಿಪಿನ್ ಚಂದ್ರಪಾಲ್ರು, ತಿಲಕರಂಥವರು ಇದರ ಮುಂಚೂಣಿಯಲ್ಲಿದ್ದರು. ಇನ್ನೂ ಮೂರನೆಯ ಮಾರ್ಗ ಕ್ರಾಂತಿಕಾರಿಗಳದ್ದು. ಇವರು ಬ್ರಿಟೀಷರನ್ನು ಹೊಡೆದೋಡಿಸಲು ಉಗ್ರಮಾರ್ಗದ ಬಳಕೆಯ ಕಲ್ಪನೆಯನ್ನೇ ಜೀವಾಳವಾಗಿಸಿಕೊಂಡಿದ್ದರು. ಸಹಜವಾಗಿಯೇ ಸುಭಾಷ್ಚಂದ್ರ ಬೋಸ್, ಸಾವರ್ಕರ್ರಂಥವರು ಈ ತಂಡವನ್ನು ಕಾಲ-ಕಾಲದಲ್ಲಿ ಮುನ್ನಡೆಸಿದವರು. ಹಾಗಂತ ಕ್ರಾಂತಿಕಾರಿಗಳು ಮೈಮರೆತವರು ಎಂದು ಭಾವಿಸಿಬಿಡಬೇಡಿ. ಕೆಲವೊಮ್ಮೆ ಅವರು ಸತ್ಯಾಗ್ರಹಿಗಳಿಗಿಂತ ಹೆಚ್ಚು ಚೌಕಟ್ಟನ್ನು ತಮ್ಮ ಮೇಲೆ ಹೇರಿಕೊಂಡಿದ್ದವರು. ಒಬ್ಬ ಕ್ರಾಂತಿಕಾರಿಯನ್ನು ಗುಂಪಿನಲ್ಲಿ ಸೇರಿಸಿಕೊಳ್ಳಬೇಕೆಂದರೆ ಆತನಿಗೆ ಮೂರು ಮುಖ್ಯ ಸವಾಲುಗಳನ್ನು ಎದುರಿಸಬೇಕಾಗುತ್ತಿತ್ತು. ಮೊದಲನೆಯದ್ದು ಆತ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರಬೇಕು. ಆ ಮೂಲಕ ಕಠಿಣ ಹೃದಯದವನಾಗಿರದೇ ಜನರ ನೋವುಗಳನ್ನು ಅರಿಯಬಲ್ಲ ಸಾಮಥ್ರ್ಯ ಅವನಿಗಿರಬೇಕು ಎಂಬುದು ಮೂಲ ಉದ್ದೇಶವಾಗಿತ್ತು. ದಾಮೋದರ ನದಿಗೆ ಪ್ರವಾಹ ಬಂದಾಗ ಈ ಎಲ್ಲಾ ಕ್ರಾಂತಿಕಾರಿಗಳು ಜನಸೇವೆಗೆ ನಿಂತದ್ದು ಎಷ್ಟು ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತೆಂದರೆ ಅವರು ಬಂದೂಕು ಕೈಗೆತ್ತಿಕೊಂಡಿರುವುದು ವಿದೇಶಿಗರ ವಿರುದ್ಧ ಮಾತ್ರ ಎಂದು ಸ್ಪಷ್ಟವಾಗಿ ಜನರಿಗೆ ಅರಿವಾಗಿಬಿಟ್ಟಿತ್ತು. ಹಾಗಂತ ಹೃದಯ ಮೆತ್ತಾದರೆ ಸಾಲದು ಅದಕ್ಕೆ ವಿರುದ್ಧವಾಗಿ ದೇಹ ಬಲಾಢ್ಯವಾಗಿರಬೇಕು. ಹೀಗಾಗಿ ಓಡುವುದರಿಂದ ಹಿಡಿದು ಸೈಕಲ್ ತುಳಿಯುವುದರವರೆಗೆ, ಲಾಠಿ ಚಲಾಯಿಸುವುದರಿಂದ ಹಿಡಿದು ಗರಡಿಮನೆಯಲ್ಲಿ ಗಂಟೆಗಟ್ಟಲೆ ಸಾಧನೆ ಮಾಡುವವರೆಗೆ ಅವರು ಎಂತಹ ಪರಿಸ್ಥಿತಿಗೂ ಸಿದ್ಧರಾಗಿರಬೇಕಿತ್ತು. ಇಲ್ಲಿಗೇ ಮುಗಿಯಲಿಲ್ಲ. ನಿರಂತರವಾಗಿ ಬೌದ್ಧಿಕ ಚಟುವಟಿಕೆಗಳನ್ನು ನಡೆಸುತ್ತಾ ಅನೇಕ ಜಾಗತಿಕ ಮಟ್ಟದ ಕ್ರಾಂತಿಕಾರಿಗಳ ಬದುಕನ್ನು ಅವರಿಗೆ ತಿಳಿಸಲಾಗುತ್ತಿತ್ತು. ಪುಸ್ತಕದ ಅಧ್ಯಯನ ಕ್ರಾಂತಿಕಾರಿಗೆ ಕಡ್ಡಾಯವಾದ ಕಾರ್ಯವಾಗಿತ್ತು. ಬಹುತೇಕರಿಗೆ ಅಚ್ಚರಿ ಎನಿಸಬಹುದು ಅರವಿಂದರ ನೇತೃತ್ವದಲ್ಲಿ ಬಂಗಾಳದಲ್ಲಿ ಶುರುವಾದ ಅನುಶೀಲನ ಸಮಿತಿಯ ಗ್ರಂಥಾಲಯದಲ್ಲಿ 4000ಕ್ಕೂ ಹೆಚ್ಚು ಪುಸ್ತಕಗಳಿದ್ದವು. ಒಂದೇ ಮಾತಿನಲ್ಲಿ ಹೇಳುವುದಾದರೆ ಸತ್ಯಾಗ್ರಹಿಗಳ ಮಾರ್ಗ ಭಕ್ತಿಯ ಚಿಂತನೆಯುಳ್ಳದ್ದಾದರೆ ಜ್ಞಾನ, ಕರ್ಮ, ಭಕ್ತಿ ಇವುಗಳ ಸಮರ್ಪಕ ಮಿಶ್ರಣ ಕ್ರಾಂತಿಕಾರಿಗಳಾದ್ದಾಗಿತ್ತು. ಬಹುಶಃ ಈ ರೀತಿಯ ಪಥವನ್ನು ರೂಪಿಸಿಕೊಡುವುದರಲ್ಲಿ ವಿವೇಕಾನಂದರ, ಅರವಿಂದರ ಪಾತ್ರ ಬಲುದೊಡ್ಡದ್ದು. ಆ ಮುನ್ನವೂ ಕ್ರಾಂತಿಕಾರ್ಯದ ಕೊರತೆಯಿರಲಿಲ್ಲ ಎಂಬುದು ನಿಜವಾದರೂ ಬಂಗಾಳ ರೂಪಿಸಿಕೊಟ್ಟ ಈ ಕ್ರಾಂತಿಯ ಚೌಕಟ್ಟಿನ ಸುತ್ತಲೂ ಖಂಡಿತವಾಗಿಯೂ ಈ ಮಹಾಪುರುಷರುಗಳ ಛಾಯೆ ಕಾಣುತ್ತದೆ!

ಅಕ್ಷರಶಃ ನಿಷ್ಕಾಮ ಕರ್ಮದ ಮೇಲೆ ನಂಬಿಕೆಯಿರಿಸಿದ್ದವರು ಈ ಕ್ರಾಂತಿಕಾರಿಗಳು. ಈ ಪಥವನ್ನು ಆರಿಸಿಕೊಂಡಾಗಲೇ ಭಗವದ್ಗೀತೆಯ ಮೇಲೆ ಖಡ್ಗವನ್ನಿಟ್ಟುಕೊಂಡು ಪ್ರಮಾಣ ಸ್ವೀಕರಿಸುತ್ತಿದ್ದ ಅವರು ಸ್ವಂತಕ್ಕಾಗಿ ಏನನ್ನೂ ಬಯಸದೇ ಸ್ವಾತಂತ್ರ್ಯಾನಂತರವೂ ಅಧಿಕಾರದ ಹತ್ತಿರವೂ ಕಾಣದೇ ಮಾಯವಾಗಿಬಿಟ್ಟರು. ಸತ್ಯಾಗ್ರಹಿಗಳು ಹಾಗಲ್ಲ. ಗಾಂಧೀಜಿಯ ಸುತ್ತಮುತ್ತಲಿದ್ದರೆ ಅಧಿಕಾರ ಖಾತ್ರಿ ಎಂಬುದು ಕೆಲವರಿಗಂತೂ ಸ್ಪಷ್ಟವಾಗಿ ಗೊತ್ತಿತ್ತು. ಯರವಾಡ ಜೈಲಿನಲ್ಲಿ ಸಾವರ್ಕರ್ ಜೊತೆಗಿದ್ದ ಕೆಲವು ಸತ್ಯಾಗ್ರಹಿಗಳು ಜೈಲರ್ನ ಗೆಳೆತನ ಬೆಳೆಸಿಕೊಂಡು ನಿಯಮಕ್ಕಿಂತಲೂ ಹೆಚ್ಚಿನ ರೊಟ್ಟಿಗಳನ್ನು ಹೇಗಾದರೂ ಮಾಡಿ ತರಿಸಿಕೊಂಡು ತಿನ್ನುತ್ತಿದ್ದರಂತೆ. ಸತ್ಯದ ಆಧಾರದ ಮೇಲೆ ನಡೆಯುವಂಥವರು ಹೀಗೆ ಮಾಡಬಹುದೇ ಎಂದು ಕೇಳಿದರೆ ಹ್ಯಾಪು ನಗೆ ನಗುತ್ತಾ ಹೊಟ್ಟೆ ತುಂಬಿಸಿಕೊಂಡರೆ ಹೋರಾಟ ಸುಲಭವಲ್ಲವೇ ಎನ್ನುತ್ತಿದ್ದರಂತೆ ಅವರು. ಕ್ರಾಂತಿಕಾರಿಗಳು ಹೀಗೆ ಸ್ವಾತಂತ್ರ್ಯದ ಹೋರಾಟವನ್ನು ತಮ್ಮ ಬದುಕಿನೊಂದಿಗೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಯತ್ನ ಮಾಡಿದವರೇ ಅಲ್ಲ!


ಬಹುಶಃ ಅವರು ಸ್ವೀಕಾರ ಮಾಡುತ್ತಿದ್ದ ವ್ರತವನ್ನು ನೋಡಿದರೆ ಈ ವಿಚಾರ ಎಂಥವನಿಗೂ ಖಾತ್ರಿಯಾದೀತು. ಬ್ರಿಟೀಷ್ ಅಧಿಕಾರಿಗಳನ್ನು ಕೊಂದನಂತರ ಅವರಿಗೆ ಆರಿಸಿಕೊಳ್ಳಲು ಇರುತ್ತಿದ್ದುದು ಎರಡೇ ಮಾರ್ಗ. ಒಂದು ಕೊಂದು ಕಾಣೆಯಾಗುವುದು. ಮತ್ತೊಂದು ದೃಢವಾಗಿ ನಿಂತು ನೇಣಿಗೇರುವುದು. ಜತೀಂದ್ರನಾಥ್ ಮುಖಜರ್ಿಯಿಂದ ಹಿಡಿದು ಮದನ್ಲಾಲ್ ಧಿಂಗ್ರಾನವರೆಗೆ ಅನೇಕ ಕ್ರಾಂತಿಕಾರಿಗಳು ಯೋಜನೆ ಮುಗಿಸಿದ ನಂತರ ಓಡಿ ಹೋಗಲಿಲ್ಲ, ನೇಣಿಗೇರುವ ಉತ್ಸುಕತೆಯನ್ನು ತೋರಿದರು. ಆ ಮೂಲಕ ಇನ್ನೊಂದಷ್ಟು ತರುಣರೊಳಗೆ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸುವ ಅಪರೂಪದ ಪ್ರಯತ್ನ ಅದು. ಅನೇಕ ಬಾರಿ ಅದು ಕೆಲಸವೂ ಮಾಡಿತು. ಈ ಬಲಿದಾನದ ಕಥನಗಳನ್ನು ಕೇಳುತ್ತಲೇ ಹೊಸ ತರುಣರು ಸೆಟೆದು ನಿಲ್ಲುತ್ತಿದ್ದರು. ಅತ್ತ ಬ್ರಿಟೀಷರನ್ನು ಕೊಂದು ತಪ್ಪಿಸಿಕೊಂಡು ಓಡುತ್ತಿದ್ದವರೂ ಕೂಡ ಹೇಡಿಗಳಾಗುತ್ತಿರಲಿಲ್ಲ. ಬದಲಿಗೆ ಅನವಶ್ಯಕವಾಗಿ ಜೀವ ಕಳೆದುಕೊಳ್ಳುವುದಕ್ಕಿಂತಲೂ ಇನ್ನೊಂದಷ್ಟು ದುಷ್ಟರ ಜೀವ ತೆಗೆಯುವ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಸ್ಯಾಂಡಸರ್್ನ ಹತ್ಯೆ ಮಾಡಿದ ನಂತರ ಭಗತ್, ರಾಜ್ಗುರು, ಸುಖದೇವ್, ಆಜಾದ್ ಎಲ್ಲಾ ಕಾಣೆಯಾಗಿಬಿಟ್ಟರಲ್ಲಾ; ಕೆಲಸ ನಿಲ್ಲಲಿಲ್ಲ, ಸಂಘಟನೆ ವಿಸ್ತಾರವಾಯ್ತು ಅಷ್ಟೇ. ಈ ಬಗೆಯ ಅನೇಕ ಕ್ರಾಂತಿಕಾರಿಗಳು ತಾವು ನೇಣಿಗೇರುವ ಮುನ್ನ ಹೇಳುತ್ತಿದ್ದ ಗೀತೆಗಳು ತರುಣರ ಹೃದಯದಲ್ಲಿ ಇಂದಿಗೂ ಕಿಡಿ ಎಬ್ಬಿಸಬಲ್ಲಂಥವು. ರಾಮ್ಪ್ರಸಾದ್ ಬಿಸ್ಮಿಲ್ ರಚಿಸಿದ ಗೀತೆಗಳು ಅಂದಿನ ಕಾಲದಲ್ಲಿ ಹೀಗೆ ತರುಣರ ಮನಸ್ಸನ್ನು ಹಿಡಿದಿಟ್ಟಂಥವು. ಸ್ವತಃ ಬಿಸ್ಮಿಲ್ ನೇಣುಶಿಕ್ಷೆ ಘೋಷಣೆಯಾದಾಗ ಒಂದಿನಿತೂ ದುಃಖ ಪಡದೇ ನ್ಯಾಯಾಧೀಶರ ಅನುಮತಿ ಪಡೆದು ನ್ಯಾಯಾಲಯದ ಹೊರಗೆ ಹಾಡಿದ ಹಾಡಿನ ಕುರಿತಂತೆ ಪತ್ರಿಕೆಗಳು ವಿಸ್ತಾರವಾಗಿ ಬರೆದಿದ್ದವು. ಭಗತ್ಸಿಂಗ್ ನೇಣಿಗೇರುವ ಮುನ್ನ ಹಾಡಿದ ರಂಗ್ದೇ ಬಸಂತಿ ಚೋಲಾ ಇಂದಿಗೂ ರಕ್ತ ಬೆಚ್ಚಗೆ ಮಾಡಬಲ್ಲದು. 20ನೇ ಶತಮಾನದ ಆರಂಭದಲ್ಲಿ ಪಂಜಾಬಿನಲ್ಲಿ ನಡೆದ ರೈತ ಚಳುವಳಿಗೆ ವೇಗ ಕೊಟ್ಟಿದ್ದೂ ಇಂಥದ್ದೇ ಒಂದು ಗೀತೆ, ‘ಪಗಡೀ ಸಂಬ್ಹಾಲ್ ಜಟ್ಟಾ’!


ಈ ಮಾತು ನಿಮಗೆ ಖಂಡಿತವಾಗಿ ಅಚ್ಚರಿ ಎನಿಸಬಹುದು. ಬ್ರಿಟೀಷರು ನೇಮಿಸಿದ್ದ ಸೆಡಿಶನ್ ಕಮಿಟಿ ಕ್ರಾಂತಿಕಾರಿಗಳ ಕುರಿತಂತೆ ಅಧ್ಯಯನವನ್ನು ನಡೆಸಿ ವರದಿಯೊಂದನ್ನು ಕೊಟ್ಟಿತ್ತು. ಅದರಲ್ಲಿ 186 ಕ್ರಾಂತಿಕಾರಿಗಳ ಕುರಿತಂತೆ ವಿಸ್ತಾರವಾಗಿ ವಿವರ ಸಂಗ್ರಹಿಸಿ ಸಮಾರು 70ರಷ್ಟು ಕ್ರಾಂತಿಕಾರಿಗಳು 19ರಿಂದ 25ರ ನಡುವಿನವರು ಎಂದು ಹೇಳಿತ್ತು. ಅದರರ್ಥ ತರುಣರಲ್ಲಿದ್ದ ನವೋತ್ಸಾಹವನ್ನು ಬ್ರಿಟೀಷರ ವಿರುದ್ಧದ ಕೆಚ್ಚಾಗಿ ಪರಿವತರ್ಿಸಲು ಈ ಮಾರ್ಗ ಯಶಸ್ವಿಯಾಗಿತ್ತು. ಇಷ್ಟಾದಾಗ್ಯೂ ಅದೇ ವರದಿ ಹೇಳುವಂತೆ ಇಷ್ಟೆಲ್ಲ ಚಟುವಟಿಕೆಗಳು ಮುಸಲ್ಮಾನರನ್ನು ಮುಟ್ಟುವಲ್ಲಿ ಸೋತಿದ್ದವು ಮತ್ತು ಬಹಳಷ್ಟು ಕ್ರಾಂತಿಕಾರಿಗಳು ಇಂಗ್ಲೀಷ್ ಶಿಕ್ಷಣದ ಪ್ರಭಾವದಿಂದಲೇ ನಿಮರ್ಾಣಗೊಂಡವರಾಗಿದ್ದರು. ಇಂಗ್ಲೀಷರ ಪ್ರಭಾವ ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಕಾಲೇಜಿಗೆ ಹೋಗಿ ಇಂಗ್ಲೀಷಿನಲ್ಲಿರುವ ಜಾಗತಿಕ ಮಟ್ಟದ ಪುಸ್ತಕಗಳಿಗೆ ತೆರೆದುಕೊಂಡ ತರುಣರು ಇಂಗ್ಲೀಷರ ಕೆಟ್ಟಬುದ್ಧಿಯನ್ನು ಅರಿತದ್ದಲ್ಲದೇ ಜಗತ್ತನ್ನೆಲ್ಲಾ ಆಪೋಷನ ತೆಗೆದುಕೊಳ್ಳುವ ಅವರ ಅಧಿಕಾರ ದಾಹವನ್ನು ಚೆನ್ನಾಗಿ ಮನಗಂಡರು. ಹೀಗಾಗಿಯೇ ಮುಂದೆ ಕಾಂಗ್ರೆಸ್ಸು ಸ್ವಾಯತ್ತತೆ ಕೊಟ್ಟರೂ ಸಾಕು ಎಂದು ಬ್ರಿಟೀಷರ ಬಳಿ ಅಂಗಲಾಚುತ್ತಿದ್ದರೂ ಭಗತ್ಸಿಂಗ್ ನೇತೃತ್ವದ ಕ್ರಾಂತಿಕಾರಿಗಳು ಮಾತ್ರ ಪೂರ್ಣಸ್ವರಾಜ್ಯದ ಕಲ್ಪನೆಯನ್ನೇ ಬಲವಾಗಿ ಪ್ರತಿಪಾದಿಸಿದ್ದರು. ಕ್ರಾಂತಿಕಾರಿಗಳಲ್ಲಿದ್ದ ಸ್ವಾಭಿಮಾನ ಎಷ್ಟು ತೀವ್ರವಾಗಿತ್ತೆಂದರೆ ಬ್ರಿಟೀಷರು ಒಳ್ಳೆಯ ಆಡಳಿತವನ್ನು ನಡೆಸಿದಾಗ್ಯೂ ಅದು ಅವರಿಗೆ ಬೇಡವಾಗಿತ್ತು. ಪರಿಪೂರ್ಣ ಸ್ವಾತಂತ್ರ್ಯವೊಂದೇ ಅವರ ಗುರಿಯಾಗಿತ್ತು. ಇದಕ್ಕೆ ವಿರುದ್ಧವಾಗಿ ಮುಸಲ್ಮಾನರು ಸ್ವಾತಂತ್ರ್ಯದ ಹೋರಾಟದಲ್ಲಿ ಈ ರೀತಿ ಬಲಿದಾನಕ್ಕೆ ಸಿದ್ಧರಾದಂತೆ ಕಂಡುಬರಲಿಲ್ಲ. ಬಂಗಾಳದ ವಿಭಜನೆಯ ಮೂಲಕ ಢಾಖಾದ ನವಾಬ ಸಲೀಮುಲ್ಲಾಖಾನ್ ಥರದ ಪ್ರತ್ಯೇಕತಾವಾದಿಗಳನ್ನು ಬ್ರಿಟೀಷರು ಸೃಷ್ಟಿಸಿಕೊಂಡು ತಮ್ಮ ಮನಸ್ಸಿಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದರು. ಧಾಮರ್ಿಕ ವಿಚಾರಗಳ ಮೂಲಕ ಅವರನ್ನು ಭಡಕಾಯಿಸಿ ದಾರಿ ತಪ್ಪಿಸುವ ಎಲ್ಲ ಕಲೆಯನ್ನು ಕಲಿತಿದ್ದ ಬ್ರಿಟೀಷರು ಸ್ವಾತಂತ್ರ್ಯದ ಹೊಸ್ತಿಲಲ್ಲೂ ಮುಸಲ್ಮಾನರು ಪಾಕಿಸ್ತಾನದ ಪರವಾಗಿ ಹೋರಾಡುವಂತೆ ಮಾಡಿದರಲ್ಲದೇ ಪೂರ್ಣಭಾರತದ ಪರಿಕಲ್ಪನೆಯನ್ನು ಅವರು ಕಟ್ಟಿಕೊಳ್ಳದಂತೆ ನೋಡಿಕೊಂಡರು. ಅಂದಿನಿಂದ ಶುರುವಾದ ಈ ಪರಂಪರೆ ಇಂದಿಗೂ ನಿಂತಿಲ್ಲ. ಇಡಿಯ ದೇಶ ಒಕ್ಕೊರಲಿಂದ ಕೊರೋನಾ ವಿರುದ್ಧ ಹೋರಾಟ ನಡೆಸಿದ್ದರೆ, ಸ್ವತಃ ಮುಸಲ್ಮಾನ ರಾಷ್ಟ್ರಗಳು ಸಾಮೂಹಿಕ ಪ್ರಾರ್ಥನೆಯನ್ನು ತಡೆದಿದ್ದರೆ, ಭಾರತದಲ್ಲಿ ಮಾತ್ರ ಇಂದಿಗೂ ಅದನ್ನು ಮುಂದುವರೆಸಿದ್ದಾರೆ. ಇದು ದುರದೃಷ್ಟಕರವಲ್ಲದೇ ಮತ್ತೇನು?!

ಇದನ್ನು ಚೆನ್ನಾಗಿಯೇ ಅರಿತಿದ್ದ ಕ್ರಾಂತಿಕಾರಿಗಳು ಜಾತಿ-ಮತ-ಪಂಥಗಳ ತಾಕಲಾಟ ಕ್ರಾಂತಿಕಾರ್ಯದಲ್ಲಿ ನುಸುಳದಂತೆ ನೋಡಿಕೊಂಡಿದ್ದರು. ನರೇಂದ್ರನಾಥ ದತ್ತನಂಥವರು ಕ್ರಾಂತಿಕಾರ್ಯದ ಸಂಕಲ್ಪ ಸ್ವೀಕರಿಸುವಾಗ ಒಂದು ಧರ್ಮಕ್ಕೆ ಬದ್ಧವಾಗುವುದಿಲ್ಲವೆಂದು ವಿಸ್ತಾರವಾದ ಲಕ್ಷಣವನ್ನು ತೋರಿದ್ದರು. ಆದರೇನು? ಬಲಿದಾನಿಗಳ ಪಟ್ಟಿಯಲ್ಲಿ ಅಶ್ಫಾಖುಲ್ಲಾ ಖಾನ್ನಂತಹ ಬೆರಳೆಣಿಕೆಯ ಮುಸಲ್ಮಾನರು ಮಾತ್ರ ಕಂಡು ಬರುತ್ತಾರೆ.


ಕ್ರಾಂತಿಕಾರಿಗಳ ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಅವರು ಮಾಡುತ್ತಿದ್ದ ಲೂಟಿಯದ್ದು. ತಾವು ಕೊಂಡುಕೊಳ್ಳಬೇಕಿದ್ದ ಶಸ್ತ್ರಾಸ್ತ್ರಗಳಿಗಾಗಿ ಸಕರ್ಾರದ ಖಜಾನೆಯನ್ನು ಲೂಟಿ ಮಾಡುತ್ತಿದ್ದರು. ಕಾಕೋರಿಕಾಂಡ ಅಂಥದ್ದೇ ಒಂದು ಪ್ರಕರಣ. ಅದರೊಟ್ಟಿಗೆ ಅನೇಕ ಬಾರಿ ಭಾರತೀಯ ಸಿರಿವಂತರ ಮನೆಗಳನ್ನೂ ಲೂಟಿಮಾಡಲಾಗುತ್ತಿತ್ತು. ಹೀಗೆ ಭಾರತೀಯರ ಲೂಟಿಗೈದ ಮರದಿನವೇ ಅಷ್ಟೂ ಹಣವನ್ನು ಲೆಕ್ಕಹಾಕಿ ಆ ಮನೆಗೆ ಪತ್ರವೊಂದನ್ನು ಕಳಿಸಲಾಗುತ್ತಿತ್ತು. ಕಲ್ಕತ್ತಾದ ಬಾಬಾ ಉಪೇಂದ್ರ ಮೋಹನ್ ಚೌಧರಿ ಅವರ ಮನೆಗೆ ಕಳಿಸಿದ ಪತ್ರವೊಂದರಲ್ಲಿ ‘ರಾಷ್ಟ್ರದ ಕಾರ್ಯಕ್ಕೆ ನಿಮ್ಮ 9891 ರೂಪಾಯಿಯನ್ನು ವಿನಯಪೂರ್ವಕವಾಗಿ ಸ್ವೀಕರಿಸಲಾಗಿದೆ. ಸ್ವಾತಂತ್ರ್ಯ ಬಂದೊಡನೆ ವಾಷರ್ಿಕ 5 ರೂಪಾಯಿಯಂತೆ ಬಡ್ಡಿ ಸೇರಿಸಿ ಇದನ್ನು ಮರಳಿಸುತ್ತೇವೆ’ ಎಂದು ಬರೆದಿತ್ತು. ಕ್ರಾಂತಿಕಾರಿಗಳ ಈ ಪರಂಪರೆಯ ಅತ್ಯಂತ ಹತ್ತಿರದ ಕೊಂಡಿಯೇ ಭಗತ್ಸಿಂಗ್ ಮತ್ತು ಆಜಾದರು. ಪಂಜಾಬಿನ ಅತ್ಯಂತ ಸಣ್ಣ ಹಳ್ಳಿಯ ಭಗತ್ ಪ್ರೇರಣೆ ಪಡೆಯಲು ಸಾಕಷ್ಟು ಸಂಗತಿಗಳಿದ್ದವು. ಬ್ರಿಟೀಷರ ವಿರುದ್ಧ ಕಾದಾಡಿ ಗಡಿಪಾರಿಗೆ ಒಳಗಾಗಿದ್ದ ಚಿಕ್ಕಪ್ಪ ಅಜಿತ್ಸಿಂಗ್, ವಿದೇಶದಲ್ಲಿ ಬ್ರಿಟೀಷರ ವಿರುದ್ಧ ತೊಡೆತಟ್ಟಿದ್ದ ಗದರ್ನ ಕ್ರಾಂತಿಕಾರಿಗಳು, ಜಲಿಯನ್ವಾಲಾಬಾಗ್ ಹತ್ಯಾಕಾಂಡ, ಕೊನೆಗೆ ಸೋತಂತೆನಿಸಿದ ಮಹಾತ್ಮಾಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿಗಳು. ಇವೆಲ್ಲವುಗಳಿಂದಲೂ ಪ್ರೇರಣೆ ಪಡೆದ ಆತ ಹಿರಿಯರು ಹಾಕಿಕೊಟ್ಟ ಇದೇ ಕ್ರಾಂತಿಕಾರ್ಯದ ಜಾಡಿನಲ್ಲಿ ಹೆಜ್ಜೆ ಹಾಕುತ್ತಾ ಇಂದಿನ ದಿನವೇ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆಗೈದ! ಆತನನ್ನು ನೆನಪಿಸಿಕೊಳ್ಳುತ್ತಾ ಅಂದಿನ ದಿನಗಳ ಇಡೀ ಚಿತ್ರಣವನ್ನು ಕಟ್ಟಿಕೊಡಬೇಕೆನಿಸಿತು ಅಷ್ಟೇ.

ನಾವಿಂದು ಅವನಂತೆ ನೇಣಿಗೇರಬೇಕಿಲ್ಲ. ಬದುಕನ್ನು ಧಾರೆ ಎರೆಯಬೇಕಿಲ್ಲ. ನಮ್ಮ ಮತ-ಪಂಥಗಳ ಎಲ್ಲ ತಾಕಲಾಟವನ್ನು ಬಿಟ್ಟು ಕೆಲವು ದಿನ ರಾಷ್ಟ್ರಕ್ಕಾಗಿ ಮನೆಯಲ್ಲಿ ಕುಳಿತುಕೊಳ್ಳಬೇಕು ಅಷ್ಟೇ. ನಾವು ಎದುರಿಸಬೇಕಿರುವ ಈ ಮಹಾಯುದ್ಧದಲ್ಲಿ ಗೆಲುವು ಪಡೆಯಲು ಬೇಕಾದಷ್ಟು ಪ್ರೇರಣೆಯನ್ನು ಭಗತ್ಸಿಂಗ್ ಕೊಡಲೆಂದು ಆಶಿಸುತ್ತೇನೆ!

-ಚಕ್ರವರ್ತಿ ಸೂಲಿಬೆಲೆ

 

1 Comment

1 Comment

Leave a Reply

Your email address will not be published. Required fields are marked *

Most Popular

To Top