National

ಮಧ್ಯಪ್ರದೇಶದಲ್ಲಿ ಬಿಜೆಪಿ ಸೋತಿದ್ದು ಬರೀ 4000 ವೋಟುಗಳಿಂದ ಎಂಬುದು ನಿಮಗೆ ಗೊತ್ತೇ?!

ನಾಲ್ಕು ಸಾವಿರದ ಮುನ್ನೂರ ಮೂವತ್ತೇಳು!

ಈ ಸಂಖ್ಯೆ ಭಾರತೀಯ ಜನತಾ ಪಕ್ಷಕ್ಕೆ ಗಾಬರಿ ಹುಟ್ಟಿಸಿದೆ. ಪ್ರತಿ ಕ್ಷೇತ್ರದಲ್ಲಿಯೂ ಅಭ್ಯರ್ಥಿಯ ಜಯಕ್ಕಾಗಿ ಗಳಿಸಿರುವ ವೋಟುಗಳನ್ನು ವಿಶ್ಲೇಷಿಸಿ ನೋಡಿದಾಗ ಕೇವಲ 4337 ವೋಟು ಬಿಜೆಪಿಗೆ ಸಿಕ್ಕಿದ್ದರೆ ಶಿವರಾಜ್ ಸಿಂಗ್ ಚೌಹಾಣ್ ಅವರು ನಾಲ್ಕನೆಯ ಬಾರಿಗೆ ಮಧ್ಯಪ್ರದೇಶದಲ್ಲಿ ಸರ್ಕಾರ ಮಾಡುತ್ತಿದ್ದರು ಎಂಬ ವರದಿ ಹೊರಬಿದ್ದಿದೆ.

ಚುನಾವಣಾ ಆಯೋಗದ ಕಡೆಯ ವರದಿ ಹೊರಬಂದಿದೆ. ಇದರ ಪ್ರಕಾರ ಮಧ್ಯಪ್ರದೇಶದಲ್ಲಿ 10 ಕ್ಷೇತ್ರಗಳಲ್ಲಿ ಜಯ ಗಳಿಸಿದ ಅಭ್ಯರ್ಥಿ ಮತ್ತು ಅವನ ನಂತರದ ಅಭ್ಯರ್ಥಿಗಳ ನಡುವೆ 1000 ಕ್ಕೂ ಕಡಿಮೆ ವೋಟುಗಳ ಅಂತರವಿರುವುದು ಕಂಡುಬಂದಿದೆ.

ಈ ಹತ್ತು ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಮೂರರಲ್ಲಿ ಮಾತ್ರ ಬಿಜೆಪಿ ಜಯ ಗಳಿಸಿದೆ. ಒಂದು ಲೆಕ್ಕಾಚಾರದ ಪ್ರಕಾರ, 4337 ವೋಟುಗಳು ಬಿಜೆಪಿಯ ಪಾಲಿಗೆ ಬಂದಿದ್ದರೆ ಅದು ಉಳಿದ ಏಳು ಕ್ಷೇತ್ರಗಳಲ್ಲಿಯೂ ಗೆಲುವು ಕಂಡಿರುತ್ತಿತ್ತು. ಆಗ ಬಿಜೆಪಿಯ ಒಟ್ಟು ಕ್ಷೇತ್ರಗಳು 108 ರಿಂದ 115ಕ್ಕೇರಿರುತ್ತಿತ್ತು. ಕಾಂಗ್ರೆಸ್ಸು, 114 ರಿಂದ 107 ಕ್ಕೆ ಇಳಿದಿರುತ್ತಿತ್ತು. ಈ ಲೆಕ್ಕಾಚಾರ ರಾಹುಲ್ ಬಾಬಾರ ಮೇಲೆ ಅದೃಷ್ಟಲಕ್ಷ್ಮಿ ಒಲಿದಿದ್ದಳು ಎಂಬುದನ್ನು ತೋರಿಸುತ್ತದೆ.

1000 ಕ್ಕೂ ಕಡಿಮೆ ವೋಟಿನ ಅಂತರದಲ್ಲಿ ಜಯ ಗಳಿಸಿದ ಕ್ಷೇತ್ರಗಳ ಪೈಕಿ, ದಕ್ಷಿಣ ಗ್ವಾಲಿಯರ್ ನಲ್ಲಿ ಅತ್ಯಂತ ಕಡಿಮೆ ಜಯದ ಅಂತರ ಕಂಡುಬಂದಿದೆ. ಇಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಪ್ರವೀಣ್ ಪಾಠಕ್ ಬಿಜೆಪಿಯ ನಾರಾಯಣ್ ಸಿಂಗ್ ರನ್ನು ಕೇವಲ 121 ವೋಟುಗಳಿಂದ ಸೋಲಿಸಿದ್ದಾರೆ. ಮಂದಸೂರ್ ಜಿಲ್ಲೆಯ ಸುವಸ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವಿನ ಅಂತರ 350 ವೋಟುಗಳು ಮಾತ್ರ. ಉತ್ತರ ಜಬಲ್ ಪುರ್, ಬಯೋರಾ, ದಾಮೋಹ್, ರಾಜ್ ನಗರ್, ರಾಜ್ಪುರ್ ಗಳಲ್ಲಿ ಕಾಂಗ್ರೆಸ್ಸು ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವಿನ ಅಂತರ 500 ರಿಂದ 1000 ವೋಟುಗಳ ನಡುವೆಯೇ ಇತ್ತು. ಇಷ್ಟು ಕಡಿಮೆ ಅಂತರವಿದ್ದ ಸಂದರ್ಭದಲ್ಲಿ ಅದೃಷ್ಟವೇ ಅಭ್ಯರ್ಥಿಗಳ ಕೈ ಹಿಡಿಯಬೇಕು.

ನವೆಂಬರ್ 28 ರಂದು 3.77 ಕೋಟಿ ಜನ ಮಧ್ಯಪ್ರದೇಶದಲ್ಲಿ ವೋಟು ಮಾಡಿದರು. ಬಿಜೆಪಿಗೆ 41 ಪ್ರತಿಶತ ವೋಟು ಸಿಕ್ಕಿದ್ದರೆ, ಕಾಂಗ್ರೆಸ್ಸು 40.9 ಪ್ರತಿಶತ ವೋಟುಗಳನ್ನು ಗಳಿಸಿಕೊಂಡಿದೆ. ಬಿಜೆಪಿಗೆ ಕಾಂಗ್ರೆಸ್ಸಿಗಿಂತ 47,824 ಹೆಚ್ಚು ವೋಟು ಸಿಕ್ಕಿರುವುದು ಆಶ್ಚರ್ಯವೇ ಸರಿ. ಈ ಹತ್ತು ಕ್ಷೇತ್ರಗಳಲ್ಲಿ 1000 ಕ್ಕೂ ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, 18 ಕ್ಷೇತ್ರಗಳಲ್ಲಿ 2000 ಕ್ಕೂ ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಜಯ ಗಳಿಸಿರುವುದೂ ಸಹ ಕಂಡು ಬಂದಿದೆ. 30 ಕ್ಷೇತ್ರಗಳಲ್ಲಿ ಅಂತರ 3000 ಮತ್ತು 45 ಕ್ಷೇತ್ರಗಳಲ್ಲಿ 5000 ಕ್ಕೂ ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಈ ತರಹದ ಕಡಿಮೆ ಅಂತರಗಳು ಮುನ್ಸಿಪಾಲ್ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಕಂಡು ಬರುತ್ತವೆ. ರಾಜ್ಯಸ ಅಸೆಂಬ್ಲಿ ಚುನಾವಣೆಗಳಲ್ಲಿ ಇದು ತೀರಾ ಅಪರೂಪ. 20 ಪ್ರತಿಶತ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ತೀವ್ರ ಜಿದ್ದಾ-ಜಿದ್ದಿ ಇತ್ತು ಎಂಬುದನ್ನು ಇದು ತೋರಿಸುತ್ತದೆ.

ಪಕ್ಷದಲ್ಲಿ ನಾಯಕತ್ವ ಬಲವಾಗಿದ್ದರೆ ಮತ್ತು ಸಂಘಟನೆ ಶಕ್ತಿಯುತವಾಗಿದ್ದರೆ ಇಂತಹ ಸಂದರ್ಭಗಳಲ್ಲಿ ಗೆಲುವನ್ನು ತಮ್ಮದಾಗಿಸಿಕೊಳ್ಳಬಹುದೆಂಬ ನಂಬಿಕೆಯಿದೆ. ಗುಜರಾತಿನ ಚುನಾವಣೆಯಲ್ಲಿ ಅತ್ಯಂತ ಕಷ್ಟದ ಹೋರಾಟವಿರುವ ಕಡೆ ಬಿಜೆಪಿ ಗೆಲುವು ತನ್ನ ಕಡೆಯೇ ಆಗುವಂತೆ ಕೆಲಸ ಮಾಡಿತ್ತು.

ಇದು ಮಧ್ಯಪ್ರದೇಶದಲ್ಲಿ ಸಾಧ್ಯವಾಗಲಿಲ್ಲ. 100 ಕ್ಕೂ ಕಡಿಮೆ ಅಂತರದಲ್ಲಿ ಗೆಲುವನ್ನು ನಿರ್ಧರಿಸುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸು ಜಯ ಗಳಿಸಿತ್ತು. ಬಿಜೆಪಿಯಂತಹ ದೊಡ್ಡ ಪಕ್ಷ ಕೇವಲ 4337 ವೋಟುಗಳಿಂದ ಸರ್ಕಾರ ಮಾಡುವ ಅಧಿಕಾರವನ್ನು ಕಳೆದುಕೊಂಡಿದ್ದು ದುರದೃಷ್ಟವೇ ಸರಿ.

ಕೃಪೆ: ಇಂಡಿಯಾ ಟುಡೇ

Click to comment

Leave a Reply

Your email address will not be published. Required fields are marked *

Most Popular

To Top