State

ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ ಯುವಾಬ್ರಿಗೇಡ್!

ನಿನ್ನ ಪೂಜೆಗೆ ಬಂದೆ ಮಾದೇಶ್ವರ, ನಮ್ಮ ಕರುಣದಿ ಕಾಯೋ ಮಾದೇಶ್ವರ.. ಎಂದು ತಮ್ಮ ಕಷ್ಟಕೋಟಲೆ ಕಳೆದುಕೊಳ್ಳಲು ಮೊರೆ ಹೋಗುವ ಮಲೆ ಮಾದೇಶ್ವರ ಬೆಟ್ಟದ ಮಗ್ಗಲಲ್ಲೇ ಒಂದು ಗ್ರಾಮವಿದೆ. ಆ ಗ್ರಾಮದ ನಿತ್ಯ ರೋದನೆಯ ಕೂಗು ಮಾತ್ರ ಶತಮಾನಗಳಿಂದಲೂ ಯಾರ ಕಿವಿಗೂ ಬಿದ್ದಿಲ್ಲ!

ರಾಜ್ಯದ ಗಡಿ ಜಿಲ್ಲೆಯಾದ ಚಾಮರಾಜನಗರದ ಹನೂರು ತಾಲೂಕಿನ ದೊಡ್ಡಾನೆ ಗ್ರಾಮ ಸಕಲ ಸವಲತ್ತುಗಳಿಂದ ವಂಚಿತವಾಗಿ ಸೊರಗಿ ನಿಂತಿದೆ. ದೊಡ್ಡಾನೆ ಗ್ರಾಮದಲ್ಲಿ 130ಕ್ಕೂ ಹೆಚ್ಚು ಮನೆಗಳಿದ್ದು 500ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಈ ಗ್ರಾಮಕ್ಕೆ ಮೂಲಭೂತವಾಗಿ ಯಾವುದೇ ಸೌಕರ್ಯಗಳಿಲ್ಲ. ಈ ಗ್ರಾಮಕ್ಕೆ ಯಾವೆಲ್ಲ ಸವಲತ್ತುಗಳು ಬೇಕು ಎಂದು ಪಟ್ಟಿ ಮಾಡಲು ನಿಂತರೆ ದಿನ ಕಳೆಯುತ್ತದೆಯೇ ಹೊರತು ಗ್ರಾಮದ ಸಮಸ್ಯೆ ಸಾಲುಗಳು ಮಾತ್ರ ಕೊನೆಗೊಳ್ಳುವುದಿಲ್ಲ!

ದೊಡ್ಡಾನೆ ಗ್ರಾಮದ ಅರಣ್ಯರೋದನ ಕೇಳುವವರೇ ಇಲ್ಲ. ಮೂಲಸೌಕರ್ಯದಿಂದ ವಂಚಿತರಾಗಿರುವ ಇವರ ಜೀವನ ಸಾಗುವುದು ಅರಣ್ಯದ ನಡುವೆ. ಇರುವ ಜಮೀನಿನಲ್ಲಿ ರಾಗಿ, ಅವರೆ ಬೆಳೆಯುತ್ತಾರೆ. ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಆನೆ ಹಾವಳಿಗೆ ತುತ್ತಾಗಿ ವರ್ಷದ ಕೂಳಿಗೆ ಕುತ್ತಾಗುತ್ತದೆ. ವ್ಯವಸಾಯದ ಜೊತೆಗೆ ಉಪಕಸುಬಾಗಿ ಆಡುಸಾಗಣೆ ಮಾಡುತ್ತಾರೆ. ಅದಕ್ಕೂ ಅರಣ್ಯ ಅಧಿಕಾರಿಗಳ ತಕರಾರು.ಈ ಗ್ರಾಮಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಇರಲಿ ನಡೆದು ಸಾಗಲು ಕಚ್ಚಾರಸ್ತೆಯೂ ಇಲ್ಲ. ದೊಡ್ಡಾನೆ ಗ್ರಾಮವನ್ನು ಕಾಣಬೇಕೆಂದರೆ ಮಾರ್ಟಳ್ಳಿಯಿಂದ ಅರಣ್ಯದೊಳಗೆ ದುರ್ಗಮ ರಸ್ತೆಯಲ್ಲಿ 12 ಕಿ.ಮೀ ದೂರ ಕಾಲು ಸವೆಸಿದರೆ ಮಾತ್ರ ನಿಮಗೆ ಈ ಕುಗ್ರಾಮ ಕಾಣಸಿಗುವುದು. ಶಾಲೆ, ಅಂಗನವಾಡಿಗೆ ಆಹಾರ, ಊರಿನವರಿಗೆ ಪಡಿತ ಸೀಮೆಎಣ್ಣೆ, ಸಿಮೆಂಟ್ ಇತ್ಯಾದಿ ಸರಕುಗಳನ್ನು ತರಲು ಕಾಡಿನಲ್ಲೇ ಹತ್ತು ಕಿಲೋಮೀಟರ್ ಸಾಗಿ ಮಹದೇಶ್ವರನ ಬೆಟ್ಟದ ಸಮೀಪದ ಕೊಂಬುಡಿಕ್ಕಿ ಗ್ರಾಮ ತಲುಪಿ ನ್ಯಾಯಬೆಲೆ ಅಂಗಡಿ ಸಾಮಗ್ರಿಗಳನ್ನು ಹೊತ್ತು ತರಬೇಕು.

ಗ್ರಾಮದ ಜನತೆಯ ಸ್ನಾನಕ್ಕೆ ಪಾನಕ್ಕೆ ಅಂತ ಇರುವ ಏಕೈಕ ನೀರಿನ ಮೂಲ ಎಂದರೆ ಊರ ಹೊರಗೆ ಇರುವ ಸಿಹಿನೀರಿನ ಕೊಳ. ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಇರುವ 40-50 ಮಕ್ಕಳ ವಿದ್ಯಾಭ್ಯಾಸಕ್ಕೆ ಇರುವುದು ಎರಡು ಕೊಠಡಿಯ ಒಂದು ಶಾಲೆ, ಒಬ್ಬರೇ ಮೇಷ್ಟ್ರು. ಅವರು ವಾರಕ್ಕೆ ನಾಲ್ಕು ದಿನ ಬರುತ್ತಾರೆ. ಓದುವ ಛಲದಿಂದ 7ನೇ ತರಗತಿ ಪಾಸ್ ಆಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎಂದರೆ ಅದೊಂದು ಸವಾಲೇ ಸರಿ. ಕಾಡಿನ ಕಾಲು ದಾರಿಯಲ್ಲೇ ಆನೆ, ಕರಡಿಯ ದಾಳಿಯ ಭಯದಲ್ಲಿ ಜೀವ ಕೈಯಲ್ಲಿ ಹಿಡಿದು ಅಕ್ಷರ ಕಲಿಯಲು 12 ಕಿ.ಮೀ ನಡೆದು ಮಾರ್ಟಳ್ಳಿಗೆ ಬರಬೇಕು. ಕೆಲವರು ಈ ಕಷ್ಟ ತಪ್ಪಿಸಲು ಸುಳ್ವಾಡಿಯ ಹಾಸ್ಟೆಲ್ ಸೇರಿ ಅಕ್ಷರ ಕಲಿಯುತ್ತಿದ್ದಾರೆ!

ಆರೋಗ್ಯಭಾಗ್ಯದ ಸರ್ಕಾರದ ಮಂತ್ರ ಇನ್ನೂ ಈ ಬೆಟ್ಟಗಳನ್ನು ಏರಿಲ್ಲ. ಗ್ರಾಮದಲ್ಲಿ ಕನಿಷ್ಠ ಪ್ರಥಮ ಆರೋಗ್ಯ ಕೇಂದ್ರ ತೆರೆಯುವುದು ಇರಲಿ ವಾರಕ್ಕೆ ಒಮ್ಮೆಯಾದರೂ ಈ ಊರಿಗೆ ಆರೋಗ್ಯ ಅಧಿಕಾರಿಯು ಭೇಟಿ ನೀಡುವುದಿಲ್ಲ. ಅನಾರೋಗ್ಯ ಪೀಡಿತರು, ವೃದ್ಧರು, ತುಂಬು ಗರ್ಭಿಣಿಯರು ನೇಣೆ ಕಟ್ಟಿ ಹೊತ್ತುಕೊಂಡೇ ಕಾಡಿನ ದುರ್ಗಮ ದಾರಿಯಲ್ಲೇ ಸಾಗಿ ಸುಳ್ವಾಡಿ ಆಸ್ಪತ್ರೆಗೆ ಸೇರಿಸಬೇಕು. ಹೀಗೆ ಹೊತ್ತು ಸಾಗುವಾಗ ಕಾಡಿನ ಮಧ್ಯೆ ದಾರಿಯಲ್ಲಿ ಅದೆಷ್ಟೋ ಮಹಿಳೆಯರಿಗೆ ಹೆರಿಗೆಯಾಗಿದೆ, ಅನೇಕ ಅನಾರೋಗ್ಯ ಪೀಡಿತರು ಅರ್ಧ ದಾರಿಯಲ್ಲೇ ಅಸುನೀಗಿದ್ದಾರೆ ಎಂದು ತುಂಬಿದ ಕಂಗಳಲ್ಲಿ ತಮ್ಮ ನೋವನ್ನು ವಿವರಿಸುವ ಗ್ರಾಮಸ್ಥರ ಮಾತು ಕೇಳಿದರೆ ಕರಳು ಕಿತ್ತು ಬರುತ್ತದೆ.

ಊರಿನ ವಿದ್ಯುತ್ ಸಂಪರ್ಕದ ವಿಷಯಕ್ಕೆ ಬಂದರೆ ಅದು ಅವರ ಕೈಗೆ ಸಿಗದ ಮರೀಚಿಕೆಯಾಗಿಯೇ ಉಳಿದಿದೆ. ಆದರೂ ನಮ್ಮ ಬದುಕಿನಲ್ಲೂ ಬೆಳಕು ಬರಬಹುದೆಂಬ ಮಹದಾಸೆಯಿಂದಲೇ ಕಾನನದ ಕತ್ತಲೆಯಲ್ಲೇ ಬದುಕು ಸವೆಸುತ್ತಿದ್ದಾರೆ. ಅಕ್ಷರ, ಆರೋಗ್ಯ, ಸಾರಿಗೆ, ನೀರು, ವಿದ್ಯುತ್ ಸಂಪರ್ಕ ಹೀಗೆ ಹತ್ತು ಹಲವು ಮೂಲಭೂತಸೌಕರ್ಯಗಳು ಬೆಟ್ಟ ಏರಿ ಬರುತ್ತಿಲ್ಲ ಎಂಬ ಸಮಸ್ಯೆ ಒಂದೆಡೆಯಾದರೆ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನರ ವೇತನದಂತಹ ಸೌಲಭ್ಯಗಳ ಹಣ ಪಡೆಯಲು ತಾವೇ ಬೆಟ್ಟ ಇಳಿದು ಬಂದರೂ ಕಮಿಷನ್ ಇಲ್ಲದೇ ಕೈಗೆ ಹಣ ಸಿಗುವುದಿಲ್ಲ. ಹೀಗೆ ಅಲ್ಲಿನ ಸಮಸ್ಯೆಗಳು ಏಳುಮಲೆಗಿಂತಲೂ ಎತ್ತರವಾಗಿ ಬೆಳೆದು ನಿಂತಿದೆ! ಗ್ರಾಮದ ಸಂಕಟಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದನ್ನು ಕಂಡು ರೋಟರಿ ಸಂಸ್ಥೆ ಸಿಂಟೆಕ್ಸ್ ನೀರಿನ ಟ್ಯಾಂಕ್, ಒಂದು ಸೋಲಾರ್ ಪಂಪ್ ಕೊಡಿಸಿದ್ದಾರೆ. ಗ್ರಾಮಸ್ಥರೇ ಸ್ವಂತ ಪ್ರಯತ್ನದಿಂದ ಊರ ಅಭಿವೃದ್ಧಿಗೆ ನಿಂತರೆ ಅರಣ್ಯ ಇಲಾಖೆಯ ಅಡ್ಡಗಾಲು!

ಈಗಾಗಲೇ ಮಾರ್ಟಳ್ಳಿಯನ್ನು ಕ್ರೈಸ್ತೀಕರಣ ಮಾಡಿರುವ ಪಾದ್ರಿಗಳು, ಸಮಸ್ಯೆಗಳ ಸರಮಾಲೆ ಹೊತ್ತು ಜೀವನ ಸವೆಸುತ್ತಿರುವ ದೊಡ್ಡಾನೆಯ ಜನತೆಗೆ ಹಣದ ಆಮಿಷದ ಸವಿ ತೋರಿಸಿ ಮತಾಂತರಿಸಲು ಬೆಟ್ಟ ಏರಿಳಿದು ಸುಸ್ತಾಗಿ, ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾಗಿದ್ದಾರೆ. ದೊಡ್ಡಾನೆ ಗ್ರಾಮಕ್ಕೆ ಹೋಗುವ ದಾರಿಯುದ್ದಕ್ಕೂ ಬೆಟ್ಟದ ಮೇಲಿನವರೆಗೆ ಕಾಡಿನಲ್ಲಿ ಬೃಹತ್ ಗಾತ್ರದ ಶಿಲುಬೆ ನೆಟ್ಟಿದ್ದಾರೆ ಪಾದ್ರಿಗಳು. ಶಿಲುಬೆ ಬದಲು ವಿದ್ಯುತ್ ಕಂಬಗಳನ್ನಾದರೂ ನೆಟ್ಟಿದ್ದರೆ ಗ್ರಾಮಕ್ಕೆ ವಿದ್ಯುತ್ ಆದರೂ ತಲುಪುತ್ತಿತ್ತು!! ಅಲ್ಲಿನ ಗ್ರಾಮಸ್ಥರು ಮತಾಂತರವಾಗದೇ ಉಳಿದಿರಲು ಪ್ರಮುಖ ಕಾರಣ ‘ನಾವು ಮಹದೇಶ್ವರನ ಒಕ್ಕಲು’ ಎಂಬುದು ಅವರ ಹೃದಯಾಂತರಾಳದಲ್ಲಿ ಆಳವಾಗಿ ಬೇರೂರಿರುವುದು. ದೊಡ್ಡಾನೆಯಲ್ಲಿ ಹುಡುಕಿದರೂ ಕುಡುಕರು, ಕೆಟ್ಟ ಚಟಗಳ ದಾಸರಿಲ್ಲ. ಊರ ಒಳಗಿನ ತಂಟೆ-ತಕರಾರಿಗೆ ಕಟ್ಟೆ ಪಂಚಾಯತಿಯಲ್ಲೇ ನ್ಯಾಯ ಸಿಗುತ್ತದೆ. ಆದರೆ ಸರ್ಕಾರದಿಂದ ಸಲ್ಲಬೇಕಾದ ನ್ಯಾಯ ಮಾತ್ರ ಊರಿಗೆ ದಕ್ಕಿಲ್ಲ.

21ನೇ ಶತಮಾನದಲ್ಲೂ ಇಂತಹ ಕುಗ್ರಾಮ ನಮ್ಮ ನಡುವಲ್ಲೇ ಇರುವುದು ಕಂಡು ಅಚ್ಚರಿ ಆಯಿತು. ಹಳ್ಳಿಗಳ ಉದ್ಧಾರವಾಗದ ಹೊರತು, ದೇಶ ಉದ್ಧಾರವಾಗಲಾರದು ಎಂದು ಗಾಂಧೀಜಿ ಹೇಳಿ ಏಳು ದಶಕಗಳು ಕಳೆದಿವೆ. ಆದರೂ ಮಂತ್ರಿ ಮಹೋದಯರು ಕುಗ್ರಾಮಗಳ ಅಭಿವೃದ್ಧಿಗೆ ಮುಂದಾಗಿಲ್ಲ. 2014ರ ಅಕ್ಟೋಬರ್ 11 ರಂದು ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಲೋಕಾರ್ಪಣೆ ಮಾಡಿ ಕುಗ್ರಾಮಗಳನ್ನು ಅಭಿವೃದ್ಧಿ ಮಾಡಿ ಎಂದು ಪ್ರಧಾನಿ ನರೇಂದ್ರಮೋದಿ ಕರೆಕೊಟ್ಟರು. ಆದರೆ ಕರ್ನಾಟಕದ ಸಂಸದರಲ್ಲೇ ಅಗ್ರ ಕ್ರಮಾಂಕದಲ್ಲಿ ಇರುವೆ ಎಂದು ಬೀಗುವ ಸಂಸದ ಧ್ರುವ ನಾರಾಯಣ್ ಸಂಸದರ ಆದರ್ಶ ಗ್ರಾಮ ನಿರ್ಮಾಣ ಮಾಡುವುದಿರಲಿ 10 ವರ್ಷದ ಅಧಿಕಾರಾವಧಿಯಲ್ಲಿ ಒಮ್ಮೆಯೂ ದೊಡ್ಡಾನೆ ಕಡೆ ಕಣ್ಣು ಹಾಯಿಸಲಿಲ್ಲ. ಗ್ರಾಮದ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಲಿಲ್ಲ. ಊರಿನ ಸಮಸ್ಯೆ ಕೇಳಲು ಬಾರದೇ ಮತ ಕೇಳಲು ಮಾತ್ರ ತಪ್ಪದೇ ಬರುತ್ತಿದ್ದ ರಾಜಕಾರಣಿಗಳಿಗೆ ಛೀಮಾರಿ ಹಾಕಲು ಈ ಬಾರಿಯ ಮತದಾನವನ್ನೇ ಬಹಿಷ್ಕರಿಸಿ ಊರಿನ ಸಮಸ್ಯೆ ದೆಹಲಿ ಮುಟ್ಟುವಂತೆ ಮಾಡಿದ ನಂತರ ಈಗ ಕೇಂದ್ರದಿಂದ ಬೃಹತ್ ಗಾತ್ರದ ಸೋಲಾರ್ ವಿದ್ಯುತ್ ಪ್ಯಾನೆಲ್ ಗಳು ಮನೆ-ಮನೆ ತಲುಪಿದೆ!

ಊರಿಗೆ ರಸ್ತೆ ಮಾಡುವುದಾಗಲೀ ವಿದ್ಯುತ್ ತಂತಿ ಎಳೆಯುವುದಾಗಲೀ ಕಷ್ಟ ಸಾಧ್ಯವಲ್ಲ. ಈ ಹಿಂದೆ ಇದೇ ಗ್ರಾಮದ ಪಕ್ಕದಲ್ಲಿ ಕಲ್ಲಿನ ಗಣಿಗಾರಿಕೆ ಮಾಡುವಾಗ ಗಣಿಮಾಲೀಕರ ಹಾಗೂ ಕಾಡಿನ ಮರಗಳನ್ನು ಸಾಗಿಸಲು ಗುತ್ತಿಗೆದಾರರ ದೊಡ್ಡ ಲಾರಿಗಳು ಇದೇ ದಾರಿಯಲ್ಲಿ ಸಾಗಲು ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಜನರ ಸಾರಿಗೆಗೇಕೆ ಇನ್ನೂ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲ? ಇಲ್ಲಿಗೆ ಬೇಕಾಗಿರುವುದು ಕೇವಲ ಇಚ್ಛಾಶಕ್ತಿ ಒಂದೇ. ಅದಿದ್ದರೆ ಇಡಿಯ ಗ್ರಾಮವನ್ನೇ ಆದರ್ಶ ಗ್ರಾಮವಾಗಿ ಮಾಡಬಹುದು.

ಇಷ್ಟೆಲ್ಲಾ ಕಷ್ಟದ ಬದುಕಿನಲ್ಲಿ ಬದುಕುತ್ತಿರುವ ಗ್ರಾಮಸ್ಥರು ಈ ಕಷ್ಟ ನಮ್ಮ ಬದುಕಿಗೇ ಸಾಕು. ನಮ್ಮ ಮಕ್ಕಳು-ಮೊಮ್ಮಕ್ಕಳ ಬದುಕಾದರೂ ಹಸನಾಗಲಿ ಎಂದು ಕಡೆಯ ತೀರ್ಮಾನಕ್ಕೆ ಬಂದಿದ್ದು, ಸೌಲಭ್ಯಗಳು ಬೆಟ್ಟ ಏರಿ ಬರಲಿ ಅಥವಾ ನಾವೇ ಬೆಟ್ಟ ಇಳಿದು ಬರಲು ಸಿದ್ಧ ಎನ್ನುತ್ತಾ ಒಕ್ಕಲೇಳಲು ಸಿದ್ಧರಿದ್ದಾರೆ. ಅವರ ಬೇಡಿಕೆ ಒಂದೇ. ದೊಡ್ಡಾನೆ ಗ್ರಾಮಸ್ಥರಲ್ಲಿ ಕೆಲವರಿಗೆ ಭೂಮಿಯ ಹಕ್ಕು ಪತ್ರವಿದೆ, ಕೆಲವರಿಗೆ ಇಲ್ಲ. ಆದ್ದರಿಂದ ಒಕ್ಕಲೇಳುವ ಎಲ್ಲಾ ನಿವಾಸಿಗಳ ಜೀವನೋಪಾಯಕ್ಕಾಗಿ ಜಮೀನು ನೀಡಿ ಎಂದು ಕೇಳುತ್ತಾ ನಮ್ಮನ್ನು ತ್ರಿಶಂಕು ಪರಿಸ್ಥಿತಿಯಿಂದ ಮುಕ್ತಮಾಡಿ ಎಂದು ಅಂಗಲಾಚುತ್ತಿದ್ದಾರೆ.

ಸರ್ಕಾರಗಳು ಇವರ ಕಷ್ಟಕ್ಕೆ ಸ್ಪಂದಿಸಲಿ, ಬಿಡಲಿ, ಇಷ್ಟೆಲ್ಲಾ ಕಷ್ಟ ಜೀವನದ ಕಥೆ ಕಂಡು ಕೇಳಿದ ಮೇಲೂ ನಾವು ಸುಮ್ಮನೆ ಕೂರಲು ಹೇಗೆ ಸಾಧ್ಯ?! ದೇಶದ ಎಲ್ಲಾ ಸಮಸ್ಯೆಗಳೂ ನನ್ನ ಹೆಗಲ ಮೇಲೇ ಇದೆ ಎಂದು ಭಾವಿಸಬೇಕು ಎಂದು ಹೇಳಿದ ಸ್ವಾಮಿ ವಿವೇಕಾನಂದರ ಆದರ್ಶ ಹೊತ್ತ ನಾವು (ಯುವಾಬ್ರಿಗೇಡ್) ಆ ಗ್ರಾಮವನ್ನು ಆದರ್ಶ ಗ್ರಾಮ ಮಾಡುವ ಪ್ರಯತ್ನವಂತೂ ಮಾಡೇ ಮಾಡುತ್ತೇವೆ. ಇಚ್ಛೆ ಉಳ್ಳವರು ಬನ್ನಿ, ಒಟ್ಟಾಗಿ ದೊಡ್ಡಾನೆಯ ಕಷ್ಟದ ಬೆಟ್ಟವನ್ನು ಕರಗಿಸೋಣ!

-ಚಂದ್ರಶೇಖರ್, ನಂಜನಗೂಡು

ಮೈಸೂರು ವಿಭಾಗ ಸಂಚಾಲಕರು, ಯುವಾಬ್ರಿಗೇಡ್

1 Comment

1 Comment

  1. ಶಶಿಕಲಾ. ಎಸ್.

    May 13, 2019 at 1:39 pm

    ಖಂಡಿತವಾಗಿ ಸಹಾಯ ಬರಲೇ ಬೇಕು. ಹೆಚ್ಚು ಎನ್ಎಸ್ಎಸ್ ವಿಧ್ಯಾರ್ಥಿಗಳು ಭಾಗವಹಿಸಿದರೆ ಉತ್ತಮ. ಆರೋಗ್ಯ ಕೇಂದ್ರ ತೆರೆಯ ಬೇಕಿದೆ. ಸೂಲಗಿತ್ತಿ ತರಬೇತಿಯನ್ನು ಅಲ್ಲಿನವರಿಗೇ ನೀಡುವುದು ಒಳ್ಳೆಯದು. ಇಂಗ್ಲೀಷ್ ಮೆಡಿಸನ್ ಜೊತೆಗೆ ಹೋಮಿಯೋಪತಿ ಉತ್ತಮ ಫಲಿತಾಂಶ ನೀಡುತ್ತದೆ. ಹಣ ಸಹಾಯ ಮಾಡುವವರಿಗೆ ನಿಮ್ಮ ವಿಳಾಸ ತಿಳಿಸಿ. ರಜೆಯಲ್ಲಿ ಮಕ್ಕಳಿಗೆ ಉತ್ತಮ ತರಬೇತಿಯನ್ನು ನೀಡಬಹುದಾಗಿದೆ.

Leave a Reply

Your email address will not be published. Required fields are marked *

Most Popular

To Top