Politics

ಮಂತ್ರಿಗಳು ಪದೇಪದೇ ತಮ್ಮ ಸರ್ಕಾರಿ ಬಂಗಲೆಗಳನ್ನು ನವೀಕರಿಸಲು ಅದೇನು ತಗಡು ಶೀಟಿನ ಜೋಪಡಿಯಾ?

-ಶ್ರೀ ನಾಥ್ ಮಾನೆ

“ನೂತನ ಮಂತ್ರಿಗಳು ತಮ್ಮ ಬಂಗಲೆಯನ್ನು ಅವರ ಅನುಕೂಲಕ್ಕೆ ತಕ್ಕಂತೆ ನವೀಕರಿಸಿಕೊಂಡರು” ಅಂತ ಪ್ರತೀ ಸಲ ಹೊಸ ಸರ್ಕಾರಗಳು ಹಾಗೂ ಮಂತ್ರಿಗಳು ಬಂದಾಗ ಸುದ್ದಿಗಳನ್ನು ನೋಡುತ್ತೇವೆ, ಓದುತ್ತೇವೆ ನಂತರ ಮರೆತು ಬಿಡುತ್ತೇವೆ. ಈ ಬಾರಿ “ವಾಸ್ತು ಪ್ರಿಯ” ಸಚಿವ ಎಚ್.ಡಿ. ರೇವಣ್ಣನವರು ಸರ್ಕಾರಿ ಬಂಗಲೆ ನವೀಕರಣಕ್ಕೆ ಕೈ ಹಾಕಿದ್ದಾರೆ. ಅದೇ ವಿಷಯವಾಗಿ ಮಾಧ್ಯಮ ಪ್ರತಿನಿಧಿಯೊಬ್ಬರು “ತಮಗೆ ಕೊಟ್ಟಿರುವ ಸರ್ಕಾರಿ ಬಂಗಲೆಯ ನವೀಕರಣಕ್ಕೆ ಸಾರ್ವಜನಿಕ ಹಣ ಅಗತ್ಯವಿತ್ತಾ ಸಾರ್” ಎಂದು ಕೇಳಿದ್ದಕ್ಕೆ ಕೆರಳಿದ ರೇವಣ್ಣ ಸಾಹೇಬ್ರು ಅದೆಲ್ಲಾ ಕೇಳೋಕೆ ನೀವ್ಯಾರು? ಸಂಬಂಧಪಟ್ಟ ಇಲಾಖೆ ಇದೆ ಕೇಳ್ಕೋತಾರೆ ಬಿಡಿ. ನಿಮಗೆಲ್ಲಾ ಉತ್ತರ ಕೊಡಲ್ಲ” ಎಂದು ಆವಾಜ್ ಹಾಕಿ ಸುದ್ದಿಯಲ್ಲಿದ್ದಾರೆ.

ಈ ರಾಜಕಾರಣಿಗಳಿಗೆ ಸರ್ಕಾರಿ ಬೊಕ್ಕಸವೆಂದರೆ ಅಕ್ಷಯಪಾತ್ರೆ ಇದ್ದಂತೆ. ತಮ್ಮ ಸ್ವಾರ್ಥಕ್ಕಾಗಿ ಹಣ ಬಳಸಿಕೊಂಡಷ್ಟು ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಲೇ ಇರುತ್ತದೆ ಎಂಬ ನಂಬಿಕೆ ಆಳವಾಗಿ ಬೇರೂರಿ ಬಿಟ್ಟಿದೆ.

ಮಂತ್ರಿಗಳು ಸಾರ್ವಜನಿಕರ ತೆರಿಗೆ ದುಡ್ಡಿನಿಂದ ಸರ್ಕಾರಿ ಬಂಗಲೆಗಳನ್ನು ನವೀಕರಿಸುವುದು ಇದೇ ಮೊದಲೇನಲ್ಲ. ಇವತ್ತೂ ಮಾಡುತ್ತಿದ್ದಾರೆ, ಹಿಂದೆಯೂ ಮಾಡಿದ್ದಾರೆ, ಹಾಗಂತ ಮುಂದೆ ಬರುವವರು ಅದೇ ಮಾಡಿದರೆ? ಜನಸಾಮಾನ್ಯರು ತಾವು ಕಟ್ಟುತ್ತಿರುವ ತೆರಿಗೆ ದುಡ್ಡು ವ್ಯರ್ಥವಾಗುತ್ತಿರುವುದನ್ನು ನೋಡುತ್ತಾ ಕುಳಿತಿರಬೇಕಾ? ಸರ್ಕಾರಗಳು ಇದಕ್ಕೆಲ್ಲಾ ಕಡಿವಾಣ ಹಾಕೋದು ಯಾವಾಗ?

ಸಾರ್ವಜನಿಕ ಸೊತ್ತು ಸರ್ಕಾರದ ಸೊತ್ತು ಅದನ್ನು ಹಾಳು ಮಾಡುವುದು ಅಪರಾಧ ಎಂಬ ನಿಯಮ ಸಾರ್ವಜನಿಕರಿಗೆ ಈಗಾಗಲೇ ಇದೆ. ಅದೇ ರೀತಿಯಲ್ಲಿ ರಾಜಕಾರಣಿಗಳಿಗೂ, ಸರ್ಕಾರದ ಸೊತ್ತು ಸಾರ್ವಜನಿಕರ ಸೊತ್ತು, ಅದನ್ನು ವೈಯುಕ್ತಿಕ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಅಪರಾಧ ಎಂಬ ನಿಯಮ ಜಾರಿಯಾಗಬೇಕು. ಆಗ ಇವರುಗಳಿಗೆ ಮೂಗುದಾರ ಬೀಳುತ್ತದೆ.

ಅಷ್ಟಕ್ಕೂ ಸಚಿವ ರೇವಣ್ಣ ಅವರು ಹೆಚ್ಚು ಕಮ್ಮಿ ಅರ್ಧ ಕೋಟಿ ಖರ್ಚು ಮಾಡಿ ನವೀಕರಿಸುತ್ತಿರುವ ಸರ್ಕಾರಿ ಬಂಗಲೆಯನ್ನು ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ಸಿ. ಮಹದೇವಪ್ಪನವರು ಸುಮಾರು 2 ಕೋಟಿ ಖರ್ಚು ಮಾಡಿ ನವೀಕರಿಸಿ ಆಗಿದೆ. ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಗಳೂ ವರದಿ ಮಾಡಿದ್ದವು. ಈಗ ಮತ್ತೆ ವಾಸ್ತು ಹೆಸರಿನಲ್ಲಿ ನವೀಕರಣವೇ? ಅದೂ ಕೂಡಾ ರೈತರ ಸಾಲಮನ್ನಾ ಯೋಜನೆಗಾಗಿ ಸರ್ಕಾರದ ಬಳಿ ಹಣ ಇಲ್ಲ ಎಂದು ಮುಖ್ಯಮಂತ್ರಿಗಳು ಕಣ್ಣೀರು ಹಾಕುತ್ತಿರುವ ಸಮಯದಲ್ಲಿ?!

“ಸಿ.ಎಂ. ಕುಮಾರಸ್ವಾಮಿ”ಯವರು ತಮ್ಮ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಲಿದೆ. ಅಗತ್ಯವಿದ್ದಲ್ಲಿ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುವುದು. ಎಂದು ಹೇಳಿಕೊಂಡು ತಿರುಗಾಡುತ್ತಿದ್ದರೆ
“ಸೂಪರ್ ಸಿ.ಎಂ ರೇವಣ್ಣ”ನವರು ನನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ “ವಾಸ್ತು ಪ್ರಕಾರ” ತಿರುಗಾಡುತ್ತಿದ್ದಾರೆ.

ಹಾಗೇ ಸುಮ್ಮನೆ ಲೆಕ್ಕ ಹಾಕಿ ನೋಡಿದರೆ, ಒಬ್ಬೊಬ್ಬ ಮಂತ್ರಿ ಮಹೋದಯರು ನವೀಕರಣ ಹೆಸರಿನಲ್ಲಿ ಬಳಸುವ ಸಾರ್ವಜನಿಕರ ದುಡ್ಡಿನಿಂದ, ತೀರಾ ಆತ್ಮಹತ್ಯೆಯಂತಹ ಸ್ಥಿತಿಗೆ ತಲುಪುವ ಅದೆಷ್ಟೋ ರೈತರನ್ನು ರಕ್ಷಿಸಬಹುದು ಅಥವಾ ಅದೆಷ್ಟೋ ವಸತಿ ರಹಿತ ಕಡು ಬಡ ಕುಟುಂಬಗಳಿಗೆ ವಸತಿ ಒದಗಿಸಿಕೊಡಬಹುದು!.

ಈ ರಾಜಕಾರಣಿಗಳ “ನವೀಕರಣ”ದ ಜಾತ್ರೆ ಇಷ್ಟಕ್ಕೆ ನಿಲ್ಲದೇ ವಿಧಾನಸೌಧವನ್ನು ತಲುಪುತ್ತದೆ. ಅವರವರ ಧರ್ಮ ಜಾತಿ ಕುಲ ನಕ್ಷತ್ರಕ್ಕೆಲ್ಲಾ ಹೊಂದಾಣಿಕೆಯಾಗುವಂತೆ ಕೊಠಡಿಯನ್ನು ನವೀಕರಿಸಿಕೊಂಡು ನಾಡಿನ “ಶಕ್ತಿಸೌಧ”ದ ಶಕ್ತಿಯನ್ನೇ ಕುಸಿಯುವಂತೆ ಮಾಡುತ್ತಿರುವುದು ಅಧಿಕಾರದ ಮದವಲ್ಲದೇ ಮತ್ತೇನಲ್ಲ.

ಈ ರಾಜಕಾರಣಿಗಳಿಗೆ ಇರುವುದೇ 5 ವರ್ಷದ ಅಧಿಕಾರ. ಮುಂದಿನ ಬಾರಿ ಟಿಕೆಟ್ ಸಿಗುತ್ತೋ ಇಲ್ಲವೋ ಖಚಿತವಾಗಿ ಗೊತ್ತಿರುವುದಿಲ್ಲ. ಸಿಕ್ಕರೂ ಗೆಲ್ಲುತ್ತಾರೋ? ಅದೂ ಗೊತ್ತಿಲ್ಲ. ಆದರೂ ಕೋಟ್ಯಾಂತರ ರೂಪಾಯಿ ಹಾಳು ಮಾಡುವ ಫ್ಯಾಷನ್ ಏಕೆ?

ಹೀಗಾದರೆ ಇವರುಗಳು ಕ್ಷೇತ್ರ ಸುತ್ತುವುದು ಯಾವಾಗ? ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದು ಯಾವಾಗ? ಕ್ಷೇತ್ರದ ಅಭಿವೃದ್ಧಿ ಹೇಗೆ? ಎಂದು ನಾವು ಯೋಚಿಸಿದರೆ, ಲಕ್ಷ- ಕೋಟಿಗಟ್ಟಲೆ ಖರ್ಚು ಮಾಡಿ ನವೀಕರಿಸಿರುವ ಸರ್ಕಾರಿ ಬಂಗಲೆಗಳಲ್ಲಿ ಎಸಿ ಹಾಕಿಕೊಂಡು ಕೂರುವುದು ಯಾವಾಗ? ರೆಸ್ಟ್ ಮಾಡುವುದು ಯಾವಾಗ? ಹಾಯಾಗಿ ಮಲಗುವುದು ಯಾವಾಗ? ಎಂದು ನವೀಕರಣ ಶೂರರು ಯೋಚಿಸುತ್ತಿರುತ್ತಾರೇನೋ…

ಅಂತಹ ಸಾಲಿಗೆ ಸೇರುವ ಮಂತ್ರಿಗಳು “ರೆಸ್ಟ್ ಮೋಡ್ ನಲ್ಲಿ ಇದ್ದಾರೆ, ರಾಜ್ಯದ ಜನತೆ ದಯವಿಟ್ಟು 5 ವರ್ಷ ಸಹಕರಿಸಿ” ಎಂದು ಹೊರಗೆ ಬೋರ್ಡ್ ಬೀಳುವುದೊಂದೇ ಬಾಕಿ…

Click to comment

Leave a Reply

Your email address will not be published. Required fields are marked *

Most Popular

To Top