State

ಮಂಡ್ಯದ ಸ್ವಾಭಿಮಾನ ಪರೀಕ್ಷೆ!

ಲೋಕಸಭಾ ಚುನಾವಣೆಯ ಕಾವು‌ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದಾಗಲೇ ದೇಶದ 91 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಕರ್ನಾಟಕದಲ್ಲಿ ನಾಡಿದ್ದು ಅಂದರೆ ಏಪ್ರಿಲ್ 18 ರಂದು ಮೊದಲ‌ ಹಂತದ ಮತದಾನ ನಡೆಯಲಿದೆ. ಈ ಬಾರಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರವೆಂದರೆ ಮಂಡ್ಯ ಲೋಕಸಭಾ ಕ್ಷೇತ್ರ.
ಕಾಂಗ್ರೆಸ್-ಜೆಡಿಎಸ್‌ನ ಮೈತ್ರಿ ಸರ್ಕಾರ ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ನಾಯಕ ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ತಾನು ಚುನಾವಣೆಗೆ ನಿಂತರೆ‌ ಕಾಂಗ್ರೆಸ್ಸಿನಿಂದ, ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ‌ ನಿಲ್ಲುವುದಾಗಿ ಸುಮಲತಾ ಅವರು ಮೊದಲಿನಿಂದಲೂ ಹೇಳುತ್ತಾ ಬಂದಿದ್ದರು.‌ ಅದರಂತೆ ಜನರ ಬೆಂಬಲ, ಅಂಬರೀಶ್ ಅಭಿಮಾನಿಗಳ ಸಹಕಾರದಿಂದ ಆಕೆ ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಕೋರಿದೆ.
ಮಂಡ್ಯ ಇದುವರೆಗೂ ಜೆಡಿಎಸ್‌ನ ಭದ್ರಕೋಟೆಯಾಗಿಯೇ ಗುರುತಿಸಿಕೊಂಡಿರುವಂತಹ ಕ್ಷೇತ್ರ. ದೇವೇಗೌಡರ ಕುಟುಂಬ ಮೊಮ್ಮಗ ನಿಖಿಲ್‌ನನ್ನು ಶತಾಯ-ಗತಾಯ ಗೆಲ್ಲಿಸಬೇಕೆಂಬ ಪಣತೊಟ್ಟಿದೆ. ಇಡಿಯ ಮೈತ್ರಿ ಸರ್ಕಾರ ನಿಖಿಲ್‌ನನ್ನು ಗೆಲ್ಲಿಸಲು ಮಂಡ್ಯದಲ್ಲಿ ಬಂದು ಕುಳಿತಿರುವುದು ಗಮನಿಸಲೇಬೇಕಾದ ಸಂಗತಿ. ಇತ್ತ ಸುಮಲತಾ ಅವರ ಪರ ಸಿನಿಮಾ ನಟರಾದ ದರ್ಶನ್ ಮತ್ತು ಯಶ್ ಅವರು ಪ್ರಚಾರಕ್ಕಿಳಿದಿದ್ದಾರೆ.  ಈ ಬಾರಿ ಗೌಡರ ಕುಟುಂಬಕ್ಕೆ ಗೆಲುವು ಸುಲಭವಿಲ್ಲವೆಂಬುದು ಅರಿವಿಗೆ ಬಂದಿದೆ.
ಸುಮಲತಾ ಅವರು ನಿಖಿಲ್ ವಿರುದ್ಧ ಕಣಕ್ಕಿಳಿದ ದಿನದಿಂದಲೂ ಆಕೆಯ ಮೇಲೆ ಕಾಂಗ್ರೆಸ್-ಜೆಡಿಎಸ್‌ನ ಮೈತ್ರಿ ಸರ್ಕಾರದ ಕೆಲವರು ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಜೆಡಿಎಸ್ ಆಕೆಯನ್ನು ಮೋಸ ಮಾಡಿಯಾದರೂ ಸೋಲಿಸಲೇಬೇಕೆಂದು ಪಣತೊಟ್ಟಂತಿದೆ. ಸುಮಲತಾ ಅವರು ನಾಮಪತ್ರ ಸಲ್ಲಿಸುತ್ತಿದ್ದಂತೆ ಆಕೆಯ ಹೆಸರಿನಲ್ಲೇ ಮತ್ತಿಬ್ಬರನ್ನು ಕಣಕ್ಕಿಳಿಸಿ ಮೋಸ‌ಮಾಡಿತು. ನಂತರ ಆಕೆಯ ಕ್ರಮಸಂಖ್ಯೆಯನ್ನು ಬೇಕೆಂದೇ ಹಿಂದಕ್ಕೆ ತಳ್ಳುವ ಹುನ್ನಾರ ನಡೆಯಿತು. ಆಕೆಯ ಪರ ಪ್ರಚಾರ ಮಾಡುವ ಸಿನಿಮಾ ನಟರಿಗೆ ಎಚ್ಚರಿಕೆ ನೀಡಲಾಯ್ತು. ಚುನಾವಣೆಗೆ ಮೂರು ದಿನವಿರುವಾಗ ಆಕೆಯ ಫೇಸ್‌ಬುಕ್ ಪೇಜನ್ನು ಬ್ಲಾಕ್ ಮಾಡಿಸಲಾಯ್ತು. ಕೆಲವು ಗುಲಾಮಗಿರಿ ಮಾಡಿಕೊಂಡಿರುವ ಮಾಧ್ಯಮಗಳು ಸುಮಲತಾ ಅವರ ಕ್ರಮಸಂಖ್ಯೆ 20‌ ಅಲ್ಲ, 19 ಎಂಬ ಸುಳ್ಳುಸುದ್ದಿಯನ್ನು ಹಬ್ಬಿಸಿದವು!! ಹೀಗೆ ಆಕೆಯ ವಿರುದ್ಧ ನಡೆಯುತ್ತಿರುವ ಪಿತೂರಿಗಳ ಒಂದೆರಡಲ್ಲ.
ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಹಗಲು-ರಾತ್ರಿ ಕೆಲಸ ಮಾಡುತ್ತಿರುವ ಸಂಘಟನೆ ಟೀಮ್‌ಮೋದಿ ಮಂಡ್ಯದಲ್ಲಿ ಸುಮಲತಾ ಅವರ ಬೆಂಬಲಕ್ಕೆ ನಿಂತಿದೆ. ಕಳೆದೈದು ದಿನಗಳಿಂದ ಮಂಡ್ಯದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಹಳ್ಳಿಗಳಲ್ಲಿ ಮನೆ-ಮನೆಗೆ ತೆರಳಿ ಸುಮಲತಾ ಅವರಿಗೆ ಮತ ಹಾಕಬೇಕೆಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದೆ. ವಿಶೇಷವೆಂದರೆ ಶಿವಮೊಗ್ಗ, ಬೆಂಗಳೂರು, ಮೈಸೂರುಗಳಿಂದ ಹೆಣ್ಣುಮಕ್ಕಳ  20 ಜನರ ತಂಡವೊಂದು ಆಗಮಿಸಿ ಪ್ರಚಾರ ನಡೆಸಿದೆ!
ಇಡಿಯ ಸರ್ಕಾರ, ಘಟಾನುಘಟಿಗಳೆಲ್ಲಾ ಸೇರಿ ಸುಮಲತಾ ಅವರಿಗೆ ನೀಡುತ್ತಿರುವ ಸಮಸ್ಯೆಯನ್ನು ಕಂಡಿರುವ ಮಹಿಳೆಯರು ಈ ಬಾರಿ ಸುಮಲತಾರನ್ನೇ ಬೆಂಬಲಿಸುವ ಮಾತುಗಳನ್ನಾಡಿದ್ದಾರೆ. ಬಿಜೆಪಿ, ರೈತಸಂಘ, ಕಾಂಗ್ರೆಸ್-ಜೆಡಿಎಸ್‌ನ ಕಾರ್ಯಕರ್ತರೂ ಸಹ ದೊಡ್ಡಮಟ್ಟದಲ್ಲಿ ಸುಮಲತಾ ಅವರ ಬೆನ್ನಿಗೆ ನಿಂತಿದ್ದಾರೆ. ಮೈತ್ರಿ ಸರ್ಕಾರ ಕೊನೆ ಎರಡು ದಿನಗಳಲ್ಲಿ ದುಡ್ಡಿನ ಹೊಳೆಯನ್ನೇ ಹೊರಿಸಲು ಸಿದ್ಧವಾಗಿ ನಿಂತಿದೆ. ಆದರೆ ಈ ಬಾರಿ‌ ಜನ ಬುದ್ಧಿವಂತರಾಗಿದ್ದಾರೆ. ಹಣವನ್ನು ಪಡೆದರೂ ತಮ್ಮ ಮತವನ್ನು ಯಾರಿಗೆ ನೀಡಬೇಕೋ ಅವರಿಗೇ ನೀಡುತ್ತೇವೆಂಬ ಮಾತುಗಳು ಕೇಳಿಬಂದಿವೆ.‌
ಒಟ್ಟಿನಲ್ಲಿ ಇಡಿಯ ರಾಜ್ಯ ಮಂಡ್ಯದತ್ತ ಮುಖಮಾಡಿ ನಿಂತಿದೆ. ಏಪ್ರಿಲ್ 18ಕ್ಕೆ ಮಂಡ್ಯ ಜನರ ಭವಿಷ್ಯ ನಿರ್ಧಾರವಾಗಲಿದೆ.
Click to comment

Leave a Reply

Your email address will not be published. Required fields are marked *

Most Popular

To Top