National

ಭಿಕ್ಷುಕರ ಯುವರಾಜನೊಬ್ಬ ‘ಮಹಾಮನ’ನಾದ ಪರಿ!

31 ಡಿಸೆಂಬರ್ 1905. ಮದನ್ ಮೋಹನ ಮಾಲವೀಯರು ಕಾಂಗ್ರೆಸ್ಸಿನ ಸಭೆಯೊಂದರಲ್ಲಿ ಭಾರತೀಯ ಸಂಸ್ಕೃತಿಯನ್ನು ಪಸರಿಸಲೋಸುಗ ಭವ್ಯವಾದ ವಿಶ್ವವಿದ್ಯಾಲಯವೊಂದನ್ನು ನಿಮರ್ಿಸುವ ಆಲೋಚನೆ ಮುಂದಿಟ್ಟರು. ಅವರ ಕಲ್ಪನೆಯ ಹರವನ್ನು ಗಮನಿಸಿದ ಬಾಲಗಂಗಾಧರ ತಿಲಕರು, ‘ಈ ಯೋಜನೆಗೆ ನೀವು ನಿಮ್ಮ ಜೀವನವನ್ನೇ ಕೊಡಬೇಕಾಗಬಹುದು, ಪೂರ್ಣ ಸಮಯವನ್ನು ಅದಕ್ಕಾಗಿ ಮೀಸಲಿಡಬೇಕಾಗಬಹುದು. ಆಗುವುದೇ?’ ಎಂದು ಕೇಳಿದರು. ಮರುಮಾತಾಡದೇ ಮನೆ ಸೇರಿಕೊಂಡ ಮಾಲವೀಯರು ಮರುದಿನವೇ ತನ್ನ ವಕೀಲಿ ವೃತ್ತಿಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನಿಮರ್ಾಣಕ್ಕಾಗಿ ಬಿಟ್ಟುಬಿಡುವೆನೆಂದು ಘೋಷಿಸಿಬಿಟ್ಟರು. ನೆನಪಿರಲಿ. ಆ ವೇಳೆಗೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮಾಲವೀಯರು ಬಲುದೊಡ್ಡ ವಕೀಲರೆಂದು ಹೆಸರು ವಾಸಿಯಾಗಿದ್ದರು. ಇಂದಿನ ಮೌಲ್ಯಕ್ಕೆ ಲೆಕ್ಕ ಹಾಕಿದರೆ ಅಂದು ತಮ್ಮ ಈ ಒಂದು ನಿಧರ್ಾರದಿಂದಾಗಿ ಅವರು ಕಳೆದುಕೊಂಡ ಹಣ ಹೆಚ್ಚು-ಕಡಿಮೆ 5 ಕೋಟಿ ರೂಪಾಯಿಯಷ್ಟು. ಆಗ ಅವರಿಗೆ 52 ವರ್ಷ ಮತ್ತು ಏಳು ಮಕ್ಕಳ ದೊಡ್ಡ ಸಂಸಾರ ಅವರದ್ದು. ದೊಡ್ಡ ಮಗನಿಗೆ 26 ತುಂಬಿದ್ದರೂ ಆತ ಇನ್ನೂ ತನ್ನ ಕಾಲ ಮೇಲೆ ನಿಲ್ಲಬಲ್ಲಷ್ಟು ಸಾಮಥ್ರ್ಯ ಪಡೆದಿರಲಿಲ್ಲ. ರಾಷ್ಟ್ರಹಿತದ ದೃಷ್ಟಿಯಿಂದ ಮಾಲವೀಯರು ತತ್ಕ್ಷಣಕ್ಕೆ ತೆಗೆದುಕೊಂಡ ಈ ನಿಧರ್ಾರದಿಂದ ಮನೆಯವರು ಬಿಡಿ ಮಿತ್ರರು, ಹಿತೈಷಿಗಳು, ಸಹೋದ್ಯೋಗಿಗಳು, ಕಾಂಗ್ರೆಸ್ಸಿನ ಸದಸ್ಯರೂ ಅಚ್ಚರಿ ಪಟ್ಟಿದ್ದರು. ಗೋಪಾಲಕೃಷ್ಣ ಗೋಖಲೆ ಈ ಕಾರಣಕ್ಕಾಗಿಯೇ ಉದ್ಗರಿಸಿದ್ದು, ‘ಮಾಲವೀಯರದ್ದು ನಿಜವಾದ ತ್ಯಾಗ. ಬಡ ಕುಟುಂಬದಿಂದ ಬಂದು, ಚೆನ್ನಾಗಿ ಗಳಿಸಿ, ಸಿರಿವಂತಿಕೆಯನ್ನು ಅನುಭವಿಸಿ ಈಗ ಎಲ್ಲವನ್ನೂ ರಾಷ್ಟ್ರಕ್ಕಾಗಿ ತ್ಯಾಗ ಮಾಡುತ್ತಿದ್ದಾರೆ’. ಗಾಂಧೀಜಿಯೂ ಅಚ್ಚರಿಯಿಂದ ಹೇಳಿದ್ದರು, ‘ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಗಳಿಸಬಲ್ಲ ವಕೀಲನೊಬ್ಬ ರಾಷ್ಟ್ರ ಕಾರ್ಯಕ್ಕಾಗಿ ಮಾಡಿರುವ ಈ ತ್ಯಾಗ ಅನನ್ಯ’ ಹಾಗಂತ ಅವರು ಪೂರ್ಣ ವಕೀಲಿ ವೃತ್ತಿ ತ್ಯಾಗ ಮಾಡಿರಲಿಲ್ಲ. ಎರಡು ಸಂದರ್ಭಗಳಲ್ಲಿ ಮತ್ತೆ ಕಪ್ಪು ಗೌನು ಧರಿಸಿ ಕೋಟರ್ಿಗೆ ಹಾಜರಾಗಿದ್ದರು. ಮೊದಲನೆಯದು ಅಸಹಕಾರ ಚಳುವಳಿಯ ಹೊತ್ತಲ್ಲಿ ಚೌರಿ-ಚೌರಾದಲ್ಲಿ ಕುಪಿತ ಆಂದೋಲನಕಾರಿಗಳು 22 ಪೊಲೀಸರನ್ನು ಠಾಣೆಯ ಒಳಗೆ ಕೂಡಿ ಹಾಕಿ ಜೀವಂತ ಸುಟ್ಟುಬಿಟ್ಟಿದ್ದರು. ಈ ಕಾರಣಕ್ಕೆ ಸ್ಥಳೀಯ ನ್ಯಾಯಾಲಯ 225 ಜನರಲ್ಲಿ 170 ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಮಾಲವೀಯರು ಗೂಟಕ್ಕೆ ನೇತು ಹಾಕಿದ್ದ ವಕೀಲಿ ಸಮವಸ್ತ್ರ ಧರಿಸಿ ನ್ಯಾಯಾಲಯದೆದುರು ನಿಂತರು. ನಾಲ್ಕು ದಿನಗಳ ಕಾಲ ಬಿಟ್ಟೂ ಬಿಡದೇ ವಾದಿಸಿದರು. ಆರಂಭದಲ್ಲಿ ಕಿರಿ-ಕಿರಿ ಅನುಭವಿಸಿದ ನ್ಯಾಯಾಧೀಶರು ಮಾಲವೀಯರ ವಾದದ ಸತ್ವವನ್ನು ಗಮನಿಸಿ ತೆಪ್ಪಗಾದದ್ದಲ್ಲದೇ ‘ನೀವು ವಾದಿಸಿದ ಶೈಲಿಯಿಂದಾಗಿ ಬಹಳ ಆನಂದವಾಗಿದೆ. ನೀವಲ್ಲದೇ ಮತ್ಯಾರೂ ಈ ಸಂಗತಿಗಳತ್ತ ಗಮನ ಸೆಳೆಯುವುದು ಸಾಧ್ಯವಿರಲಿಲ್ಲ’ ಎಂದರು. 151 ಜನರನ್ನು ಮರಣದಂಡನೆಯಿಂದ ಮುಕ್ತಗೊಳಿಸಿದ್ದರು. ಮರುವರ್ಷವೇ ಮಾಲವೀಯರು ಸಿಖ್ಖರ ವಿಚಾರವಾಗಿಯೂ ಇಂಥದ್ದೇ ಒಂದು ಹೋರಾಟಕ್ಕೆ ನಿಂತು ಅಲ್ಲಿಯೂ ನ್ಯಾಯ ಕೊಡಿಸಿದ್ದರು.


ಮುನ್ಷಿ ಈಶ್ವರ್ ಶರಣ್ ಮಾಲವೀಯರ ಬಗ್ಗೆ ಒಮ್ಮೆ ಹೇಳಿದ್ದರು, ‘ಮಾಲವೀಯರು ನಡೆದಾಡಿದರೆ ಭಾರತಕ್ಕೋಸ್ಕರ. ಮಲಗಿದಾಗ ಕನಸುಗಳೂ ಅವರಿಗೆ ಭಾರತದ್ದೇ ಬೀಳಬೇಕು. ಅವರ ಒಟ್ಟಾರೆ ವ್ಯಕ್ತಿತ್ವವನ್ನು ಭಾರತವೇ ಆವರಿಸಿಕೊಂಡಿದೆ. ಆಕೆಯ ಮೇಲಿನ ಪ್ರೀತಿಯೇ ಅವರಿಗೆ ಸ್ಫೂತರ್ಿ ಮತ್ತು ಆಕೆಯ ಸೇವೆಯೇ ಅವರ ಜೀವನದ ಏಕಮಾತ್ರ ಗುರಿ’ ಎಂದು. ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಪರಿಚಯಿಸುವುದಕ್ಕೆ ಇದಕ್ಕಿಂತಲೂ ಒಳ್ಳೆಯ ಪದಗಳು ಸಿಗಲಾರವೇನೋ!

ಮಾಲವೀಯರು ಹುಟ್ಟಿದ್ದು ಬಡ ಕುಟುಂಬದಲ್ಲಿ. ಅವರ ಕುಟುಂಬ ರಾಮಾಯಣ, ಭಾಗವತ ಕಥೆಗಳನ್ನು ಜನರ ಮುಂದೆ ಹೇಳಿ ತೋರಿಸುವುದರಲ್ಲಿ ನಿಸ್ಸೀಮವಾಗಿತ್ತು. ತಂದೆ ಬೃಜನಾಥ್ರಂತೆ ಮಗ ಮದನ ಮೋಹನನೂ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಮುಂದಿನ ದಿನಗಳಲ್ಲಿ ತಮ್ಮ ಪ್ರಭಾವಿ ಮಾತುಗಳಿಂದ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಮಾಳವೀಯರಿಗೆ ಮಾತು ಮನೆತನದ್ದೇ ಕೊಡುಗೆ. ಶಾಲಾ ಅವಧಿಯಲ್ಲೇ ಇದನ್ನು ಗುರುತಿಸಿದ ಅಧ್ಯಾಪಕರು ತ್ರಿವೇಣಿ ಸಂಗಮದಲ್ಲಿ ಮಾಘಮೇಳ ನಡೆದಾಗ ಈ ಪುಟ್ಟ ಬಾಲಕನನ್ನು ಧಾಮರ್ಿಕ ವಿಷಯಗಳ ಕುರಿತಂತೆ ಮಾತನಾಡಲು ವೇದಿಕೆಗೆ ಹತ್ತಿಸಿಬಿಟ್ಟಿದ್ದರು. ಜನರ ಮೆಚ್ಚುಗೆ ಅವರಿಗೆ ಆಗಿನಿಂದಲೇ ಸಿದ್ಧಿಸಿತ್ತು. ಅದು ತಾವಾಗಿಯೇ ಹಿಂದೆ ಬಿದ್ದು ಪಡಕೊಂಡದ್ದಲ್ಲ, ಸಹಜವಾಗಿಯೇ ಅವರ ಪಾದಸ್ಪರ್ಶ ಮಾಡಿತು. ಪ್ರತಿಭಾವಂತ ವಿದ್ಯಾಥರ್ಿಯಾಗಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಬಿಎ ಪಾಸು ಮಾಡಿಕೊಂಡರು. ಇಂತಹ ಪ್ರತಿಭಾವಂತನನ್ನು ಬಿಡಲೊಪ್ಪದ ಮಿಜರ್ಾಪುರದ ಪಂಡಿತ್ ನಂದಾರಾಮ್ ತನ್ನ ಮಗಳು ಕುಂದನ್ದೇವಿಯನ್ನು ಮದುವೆ ಮಾಡಿಸಿಕೊಟ್ಟರು. ಆಗ ಮಾಲವೀಯರಿಗೆ 16 ವರ್ಷ, ಕುಂದನ್ ದೇವಿಗೆ ಬರೀ ಒಂಭತ್ತು! ಕಾಲೇಜು ಅವಧಿಯಿಂದಲೇ ಪಂಡಿತ್ ಆದಿತ್ಯರಾಮ್ ಭಟ್ಟಾಚಾರ್ಯರ ಪ್ರಭಾವದಿಂದಾಗಿ ಮಾಲವೀಯರು ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದೆ ನಿಂತಿರುತ್ತಿದ್ದರು. ಹಿಂದಿ ಉದ್ಧರಿಣೀ ಸಭಾ ಈ ಹೊತ್ತಲ್ಲಿಯೇ ಅವರು ಶುರುಮಾಡಿದ್ದು. ಸಾಮಾಜಿಕ ಚಟುವಟಿಕೆಗಳಿಗಾಗಿ ಹಿಂದೂ ಸಮಾಜ್ ಆರಂಭಿಸಿ ಸ್ವದೇಶೀ ವಿಚಾರಧಾರೆಗೆ ತಮ್ಮನ್ನು ತೆರೆದುಕೊಂಡಿದ್ದಷ್ಟೇ ಅಲ್ಲದೇ ಕಾಂಗ್ರೆಸ್ ಹುಟ್ಟುವ ಮುನ್ನವೇ ತಮ್ಮ ಗೆಳೆಯರಿಗೆ ಸ್ಫೂತರ್ಿ ತುಂಬಿ ದೇಸೀ ಟ್ರೇಡಿಂಗ್ ಕಂಪೆನಿ ಆರಂಭಿಸಿದ್ದರು. 19ನೇ ವಯಸ್ಸಿನ ವೇಳೆಗಾಗಲೇ ಮಾಲವೀಯರು ಪತ್ರಿಕೆಗಳಿಗೆ ಲೇಖನ ಬರೆದು ಸಾಕಷ್ಟು ಸದ್ದು ಮಾಡಿದ್ದರು. ಇಂಡಿಯನ್ ಯುನಿಯನ್ ಪತ್ರಿಕೆಯ ಸಂಪಾದಕೀಯವನ್ನು ಬರೆಯಲು ತಮ್ಮ ಶಿಕ್ಷಕರಿಗೆ ಸಹಕಾರಿಯಾಗಿ ನಿಲ್ಲುತ್ತಿದ್ದುದು ಮಾಲವೀಯರೇ!


ಮಾಲವೀಯರ ನಿಜವಾದ ಶಕ್ತಿ ಅಡಗಿದ್ದು ದೊಡ್ಡ ಯೋಜನೆಗಳನ್ನು ಹೆಗಲ ಮೇಲೆ ಹೊತ್ತುಕೊಳ್ಳುವುದರಲ್ಲಿ ಮತ್ತು ನಿಧರ್ಾರಗಳನ್ನು ತಕ್ಷಣ ಕೈಗೊಳ್ಳುವುದರಲ್ಲಿ. ಅಷ್ಟೇ ಅಲ್ಲ, ತೆಗೆದುಕೊಂಡ ನಿರ್ಣಯದಂತೆ ಕೆಲಸ ಮಾಡಿ ಮುಗಿಸುವುದರಲ್ಲಿ ಅವರದ್ದು ಎತ್ತಿದ ಕೈ. ಹೇಳಿದೆನಲ್ಲ ಮಾಲವೀಯರು ತಾವು ಬೇರೂರುವ ವೇಳೆಗೆ ಇನ್ನೂ ಕಾಂಗ್ರೆಸ್ ಹುಟ್ಟಿರಲೇ ಇಲ್ಲ. 1886ರಲ್ಲಿ 25 ವರ್ಷದ ಮಾಲವೀಯರು ಕಾಂಗ್ರೆಸ್ಸಿನ ಎರಡನೇ ಅಧಿವೇಶನದಲ್ಲಿ ಪ್ರಖರವಾದ ಭಾಷಣ ಮಾಡಿ ನೆರೆದಿದ್ದವರು ಹುಬ್ಬೇರಿಸುವಂತೆ ಮಾಡಿಬಿಟ್ಟಿದ್ದರು. ಇಂಗ್ಲೀಷರ ಶಕ್ತಿ ಎಲ್ಲಡಗಿದೆ ಎಂಬುದನ್ನು ಎಳೆ-ಎಳೆಯಾಗಿ ಬಿಡಿಸಿ ವಿಶ್ಲೇಷಿಸಿದ ಮಾಲವೀಯರು ಸ್ವಾತಂತ್ರ್ಯದ ದಿಕ್ಕಿನತ್ತ ಸಾಗಲು ಮಾಡಬೇಕಾದ ಪ್ರಯತ್ನಗಳೇನು ಎಂಬ ಕುರಿತಂತೆ ತಮ್ಮ ದೂರದೃಷ್ಟಿಯನ್ನೂ ಬಿಚ್ಚಿಟ್ಟಿದ್ದರು. ಅವರ ಈ ಭಾಷಣದಿಂದಲೇ ಪ್ರಭಾವಿತರಾದ ಕಾಲ್ಕಂಕರ್ನ ರಾಜ ರಾಮ್ಪಾಲ್ ಸಿಂಗ್ ಅವರು ತಮ್ಮ ಪತ್ರಿಕೆ ಹಿಂದೂಸ್ತಾನ್ನ ಸಂಪಾದಕರಾಗುವಂತೆ ಮಾಲವೀಯರನ್ನು ಕೇಳಿಕೊಂಡರು. ತಿಂಗಳಿಗೆ 200 ರೂಪಾಯಿ ಸಂಬಳ. ಇವರ ಆಗಮನದಿಂದ ಪತ್ರಿಕೆ ವೇಗವಾಗಿ ಬೆಳೆಯಿತೆಂದು ಪ್ರತ್ಯೇಕವಾಗೇನೂ ಹೇಳಬೇಕಿಲ್ಲ. ಆದರೆ ರಾಜಾ ರಾಮ್ಪಾಲ್ ಕುಡಿದ ಮತ್ತಿನಲ್ಲೊಮ್ಮೆ ತಾವು ಗೌರವಿಸುತ್ತಿದ್ದ ಹಿರಿಯ ವಕೀಲರೊಬ್ಬರನ್ನು ಬೈದದ್ದಕ್ಕೆ ಕೆಲಸವನ್ನೇ ಬಿಟ್ಟು ಹೊರನಡೆದರು. ನಶೆ ಇಳಿದಾಗ ರಾಜ ಕ್ಷಮೆ ಕೇಳಿದ್ದು ನಿಜ. ಆದರೆ ಮಾಲವೀಯರ ನಿರ್ಣಯ ಪಕ್ಕಾ ಆಗಿತ್ತು. ಹೊರಬಂದ ಅವರು ಈಗ ತಮ್ಮದ್ದೇ ಪತ್ರಿಕೆಯನ್ನು ಆರಂಭಿಸಿದರು. ಅಭ್ಯುದಯ ಎಂಬ ಹಿಂದಿ ಪತ್ರಿಕೆ ಬಲುಬೇಗ ತನ್ನ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತು. ಇಂಗ್ಲೀಷ್ನ ದ ಲೀಡರ್ ಸಕರ್ಾರದ ನಿರ್ಣಯಗಳನ್ನು ಬಲು ಜೋರಾಗಿಯೇ ಟೀಕಿಸುತ್ತಿತ್ತು. ಈ ಎರಡೂ ಪತ್ರಿಕೆಗಳು ನಾಲ್ಕು ದಶಕಗಳ ಕಾಲ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಕ್ತಿ ತುಂಬಿದವು.

ತಮ್ಮ ಕಾಂಗ್ರೆಸ್ ಅಧಿವೇಶನದ ಭಾಷಣದಿಂದ ಎಲ್ಲರ ಮನಸೂರೆಗೊಂಡಿದ್ದ ಮಾಲವೀಯರು ಅನೇಕ ನಾಯಕರಿಂದ ಶಭಾಷ್ ಗಿರಿ ಪಡೆದಿದ್ದಲ್ಲದೇ ಅವರೆಲ್ಲರೂ ಇವರನ್ನು ಕಾಂಗ್ರೆಸ್ಸಿನ ಬಲುದೊಡ್ಡ ಆಸ್ತಿಯಾಗಬಲ್ಲ ವ್ಯಕ್ತಿ ಎಂದು ಕನಸು ಕಾಣುವಂತೆ ಮಾಡಿಬಿಟ್ಟಿದ್ದರು. ಅವರೆಲ್ಲರ ಇಂಗಿತದಿಂದಾಗಿಯೇ ಮಾಲವೀಯರು ಕಾನೂನು ಅಭ್ಯಾಸ ಮಾಡಿ ಪದವಿ ಗಳಿಸಿಕೊಂಡಿದ್ದು. ಒಮ್ಮೆ ಅವರು ನ್ಯಾಯಾಲಯದಲ್ಲಿ ವಾದಕ್ಕೆ ಶುರುಮಾಡಿದ ನಂತರ ಹಿಂದೆ ನೋಡುವ ಪ್ರಮೇಯವೇ ಬರಲಿಲ್ಲ. ಅವರು ಅದೆಷ್ಟು ವ್ಯಸ್ತರಾಗಿರುತ್ತಿದ್ದರೆಂದರೆ ಕೆಲವೊಮ್ಮೆ ತಾವು ಸಾಗುತ್ತಿದ್ದ ಕಾರಿನಲ್ಲೇ ಬಟ್ಟೆ ಬದಲಾಯಿಸಿಕೊಂಡು ಮತ್ತೊಂದು ಕೋಟರ್ಿಗೆ ಹೋಗುತ್ತಿದ್ದರಂತೆ. ಅವರ ಈ ಸಾಮಥ್ರ್ಯವನ್ನು ಅರಿತಿದ್ದರಿಂದಲೇ ಅನೇಕರು ಮಾಲವೀಯರು ವಕೀಲಿವೃತ್ತಿ ಬಿಡುತ್ತೇನೆಂದೊಡನೆ ತಮಗರಿವಿಲ್ಲದೇ ಉದ್ಗಾರವೆತ್ತಿದ್ದು.

ಮಾಲವೀಯರು ಯಾವುದನ್ನೂ ಒಂದಾದ ಮೇಲೊಂದು ಮಾಡಿದವರೇ ಅಲ್ಲ. ಎಲ್ಲವೂ ಜೊತೆ ಜೊತೆಯಲ್ಲೇ ಸಾಗುತ್ತಿತ್ತು. ಪತ್ರಿಕೆಯ ಸಂಪಾದಕೀಯದ ಜವಾಬ್ದಾರಿಯನ್ನು ಹೊತ್ತಿರುವಾಗಲೇ ಅವರು ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಅತ್ತ ಬಿಡುವಿಲ್ಲದ ಕೋಟರ್ಿನ ಜಂಜಾಟದ ನಡುವೆಯೇ 230 ವಿದ್ಯಾಥರ್ಿಗಳನ್ನು ಹೊಂದಿದ್ದ ಹಿಂದೂ ಛಾತ್ರಾವಾಸವನ್ನು ಆರಂಭಿಸಿದ್ದರು. ಬೇರೆ ಬೇರೆ ಊರುಗಳಿಂದ ಅಧ್ಯಯನಕ್ಕೆಂದು ಬರುವ ವಿದ್ಯಾಥರ್ಿಗಳನ್ನು ಒಂದೆಡೆ ಕಲೆ ಹಾಕಿ ಅವರಿಗೆ ಮೌಲ್ಯಯುತ ಶಿಕ್ಷಣ ಕೊಡಬೇಕೆಂಬ ಕಲ್ಪನೆ ಅವರದ್ದು. ಇದಕ್ಕೆಂದು ಅಂದಿನ ದಿನಮಾನಗಳಲ್ಲಿ ಒಂದೂವರೆ ಲಕ್ಷ ರೂಪಾಯಿ ಸಂಗ್ರಹಿಸಿದವರು. ಈಗಿನ ಲೆಕ್ಕಾಚಾರದ ಪ್ರಕಾರ ಇದು ಏಳೆಂಟು ಕೋಟಿಯಾದರೂ ಆದೀತು. ಮಿಂಟೋ ಸ್ಮಾರಕ ನಿಮರ್ಾಣವನ್ನು ಅವರು ಹೀಗೆಯೇ ಭಂಡ ಧೈರ್ಯದಿಂದ ಕೈಗೆತ್ತಿಕೊಂಡಿದ್ದು. ಜೇಬಿನಲ್ಲಿ ಒಂದೇ ಒಂದು ಪೈಸೆ ಇಲ್ಲದಿದ್ದಾಗಲೂ ಅವರು ಮಿಂಟೋ ಹೆಸರಿನ ಉದ್ಯಾನವನಕ್ಕೆ ನಿಶ್ಚಯ ಮಾಡಿದರು. ಹಣ ಹೇಗೆ ಸಂಗ್ರಹಿಸುತ್ತೀರಿ ಎಂಬ ಗೋಪಾಲಕೃಷ್ಣ ಗೋಖಲೆಯವರ ಆತಂಕಕ್ಕೆ ನಗುವಿನಿಂದಲೇ ಉತ್ತರಿಸಿ ನೋಡ ನೋಡುತ್ತಲೇ 1.31 ಲಕ್ಷ ಸಂಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಮಾಲವೀಯರು ವಕೀಲಿ ವೃತ್ತಿಯನ್ನು ತ್ಯಜಿಸಿ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಅಡಿಗಲ್ಲು ಹಾಕಿಸಲು ಧುಮುಕಿದ್ದರು. ಶಿಕ್ಷಣದ ಕುರಿತಂತ ತಮ್ಮ ಕಲ್ಪನೆಯನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಅವರು ದೊಡ್ಡ ಯೋಜನೆಯನ್ನೇನೋ ಕೈಗೆತ್ತಿಕೊಂಡಿದ್ದರು. ಆದರೆ ಅಚ್ಚರಿಯೇನು ಗೊತ್ತೇ? 1911 ರ ಜುಲೈ 15ಕ್ಕೆ ಅವರು ಪ್ರಕಟಿಸಿದ ಮನವಿಯಲ್ಲಿ ಈ ವಿಶ್ವವಿದ್ಯಾಲಯಕ್ಕೆಂದು ಅವರು ಕೋರಿಕೊಂಡಿದ್ದ ಹಣ ಒಂದು ಕೋಟಿ ರೂಪಾಯಿ! ಇಂದಿನ ದಿನಗಳಲ್ಲಿ ಲೆಕ್ಕ ಹಾಕಿದರೆ 500 ಕೋಟಿಗೂ ಹೆಚ್ಚು. ಮಾಲವೀಯರ ಹೆಸರು ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಆ್ಯನಿಬೆಸೆಂಟ್ ತಾನು ನಡೆಸುತ್ತಿದ್ದ ಸೆಂಟ್ರಲ್ ಹಿಂದೂ ಕಾಲೇಜನ್ನು ಈ ವಿಶ್ವವಿದ್ಯಾಲಯದೊಂದಿಗೆ ಒಂದಾಗಿಸಲು ಕ್ಷಣಾರ್ಧದಲ್ಲಿ ಒಪ್ಪಿಕೊಂಡರಲ್ಲದೇ ಹಣ ಸಂಗ್ರಹಣೆಗೆ ತಾವೂ ಮುಂದೆ ನಿಲ್ಲುವುದಾಗಿ ಭರವಸೆ ತುಂಬಿದರು. ದರ್ಭಂಗಾ, ಬಿಕಾನೇರ್ಗಳ ಮಹಾರಾಜರುಗಳು ತಾವಂತೂ ಹಣ ಕೊಟ್ಟರು ಜೊತೆಗೆ ಹಣ ಸಂಗ್ರಹಕ್ಕೂ ಮುಂದೆ ನಿಂತರು. ಹಾಗಂತ ಬರಿ ದೊಡ್ಡವರಿಂದಲೇ ಸಂಗ್ರಹಿಸಿದ್ದಲ್ಲ. ಮಾಲವೀಯರ ಕಾರ್ಯವನ್ನು ಮೆಚ್ಚಿ ಸಾಧುವೊಬ್ಬ ತಾನು ಹೊದೆಯುತ್ತಿದ್ದ ಚದ್ದರ್ ಕೊಟ್ಟ. ಭಿಕ್ಷುಕನೊಬ್ಬ ಒಂದು ರೂಪಾಯಿ, 8 ವರ್ಷದ ಬಡ ವಿಧವೆಯೊಬ್ಬಳು ಒಂದು ರೂಪಾಯಿ ಕೊಟ್ಟರೆ, ದನಗಾಹಿಯೊಬ್ಬ 8 ಆಣೆಗಳನ್ನು ಇವರ ಕೈಗಿತ್ತ. ಚಪ್ರಾಸಿಗಳಂತಹ ಅತ್ಯಂತ ಸಾಮಾನ್ಯ ಕೂಲಿ ಕಾಮರ್ಿಕರು ಮಾಲವೀಯರ ಕೋರಿಕೆಗೆ ಇಲ್ಲ ಎನ್ನಲಿಲ್ಲ. ಹೀಗಾಗಿಯೇ ಮಾಲವೀಯರನ್ನು ಭಿಕ್ಷುಕರ ಭಿಕ್ಷುಕರು ಎನ್ನಲಾಗುತ್ತದೆ. ಮಹಾತ್ಮಾ ಗಾಂಧೀಜಿಯಂತೂ ಇವರನ್ನು ‘ಭಿಕ್ಷುಕರ ಯುವರಾಜ’ ಎಂದೇ ಕರೆದಿದ್ದರು. ಹೈದರಾಬಾದಿನ ನವಾಬ ಇವರ ಈ ಪ್ರಯತ್ನವನ್ನು ಆಡಿಕೊಂಡು ಇವರು ಬೇಡಲು ಹೋದಾಗ ಚಪ್ಪಲಿ ಎಸೆದ ಕಥೆ ಗೊತ್ತಿರಬೇಕಲ್ಲ. ಅದನ್ನೇ ಮಹಾಪ್ರಸಾದವೆಂದ ಮಾಲವೀಯರು ರಾಜನ ಚಪ್ಪಲಿಯೆಂದು ಮಾರುಕಟ್ಟೆಯಲ್ಲಿ ಹರಾಜಿಗಿಟ್ಟಿದ್ದರಂತೆ. ಯಾರಾದರೂ ಕಡಿಮೆ ಬೆಲೆಗೆ ಕೊಂಡುಕೊಂಡರೆ ತನಗೆ ಅವಮಾನವಾದೀತೆಂದು ಹೆದರಿ ನವಾಬನೇ ಕರೆಸಿ ಇವರು ಕೇಳಿದ್ದಷ್ಟು ಹಣ ಕೊಟ್ಟು ಚಪ್ಪಲಿ ಬಿಡಿಸಿಕೊಳ್ಳಬೇಕಾಯ್ತಂತೆ. ಅಂತಿಮವಾಗಿ ಮಾಲವೀಯರು ಒಟ್ಟಾರೆಯಾಗಿ ಸಂಗ್ರಹಿಸಿದ ಹಣವೆಷ್ಟು ಗೊತ್ತೇ?! ಸುಮಾರು ಒಂದು ಕೋಟಿ ಎಂಭತ್ತು ಲಕ್ಷ ರೂಪಾಯಿ! ವಿಸ್ತಾರವಾದ ಭೂಪ್ರದೇಶವನ್ನು ಆಯ್ಕೆ ಮಾಡಿ ತಮ್ಮ ಕಲ್ಪನೆಯ ವಿಶ್ವವಿದ್ಯಾಲಯವನ್ನು ಕಟ್ಟಿ ಸಮಾಜಕ್ಕಪರ್ಿಸಿದ ಕೀತರ್ಿ ಮಾಲವೀಯರದ್ದು. ವಿದ್ಯಾಲಯಕ್ಕೆ ಹಣದ ತೊಂದರೆ ಬರಬಾರದೆಂದು ದೊಡ್ಡ ಮೊತ್ತವೊಂದನ್ನು ಠೇವಣಿಯಾಗಿತ್ತು ಅದರ ಬಡ್ಡಿ ಬರುವಂತೆ ವ್ಯವಸ್ಥೆ ಮಾಡಿದ್ದು ಮಾಲವೀಯರೇ.


ಮಾಲವೀಯರು ಉನ್ನತ ಕುಲದವರಾಗಿದ್ದೂ ದಲಿತರ ಹಕ್ಕುಗಳಿಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ಹಿಂದೂ ಮಹಾಸಭಾದಲ್ಲಿ ದಲಿತರ ಮಂದಿರ ಪ್ರವೇಶದ ಕುರಿತಂತೆ ಮತ್ತು ಸಮಾನತೆಯ ಕುರಿತಂತೆ ಆಗ್ರಹಪೂರ್ವಕ ವಾದ ಮಂಡಿಸಿದ್ದಲ್ಲದೇ ಅವರ ಪ್ರಯತ್ನದಿಂದಾಗಿಯೇ ಅನೇಕ ಮಂದಿರಗಳು ದಲಿತರಿಗೆ ತೆರೆದುಕೊಂಡವೂ ಕೂಡ. ಅತ್ಯಂತ ಮಹತ್ವದ ಪೂಣಾ ಒಪ್ಪಂದಕ್ಕೆ ಅಂಬೇಡ್ಕರ್, ಗಾಂಧಿ ಇವರೆಲ್ಲರೂ ಸಹಿ ಹಾಕುವಲ್ಲಿ ಮಾಲವೀಯರ ಪಾತ್ರ ಕಡಿಮೆಯಾದುದೇನಲ್ಲ. ಮೊಹಮ್ಮದ್ ಛಾಗ್ಲಾ ಸ್ಪಷ್ಟವಾಗಿ ಹೇಳಿದರು, ‘ಈ ಸಭೆ ಯಶಸ್ವಿಯಾಗಲು ಮಾಲವೀಯರ ನಾಯಕತ್ವವೇ ಕಾರಣ’ ಅಂತ. ಹಾಗೆ ನೋಡಿದರೆ ಗಾಂಧೀಜಿಯವರ ಹರಿಜನ ಚಳುವಳಿಗೂ ಮುನ್ನವೇ ಮಾಲವೀಯರು ಅಹಮದಾಬಾದ್, ಬಂಗಾಳಗಳಲ್ಲೆಲ್ಲಾ ದಲಿತರ ಮಂದಿರ ಪ್ರವೇಶ ಮಾಡಿಸಿ ಮನ ಗೆದ್ದುಬಿಟ್ಟಿದ್ದರು. ಹೀಗಾಗಿಯೇ ದೇಶದಲ್ಲಿ ‘ಮಹಾಮನಾ’ ಎಂದು ಬಿರುದು ಪಡೆದವರು ಅವರೊಬ್ಬರೇ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top