ಭಾರತೀಯ ವಾಯುಸೇನೆ ಸರ್ಕಾರಕ್ಕೆ ತಾವು ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಾಕೋಟ್ ನಲ್ಲಿ ನಡೆಸಿದ ಏರ್ ಸ್ಟ್ರೈಕ್ ನ ಸಾಕ್ಷಿಗಳನ್ನು ನೀಡಿದೆ. ವಾಯುಸೇನೆ ತಾವು ನಡೆಸಿದ ದಾಳಿಯಲ್ಲಿ 80 ಪ್ರತಿಶತ ಬಾಂಬುಗಳು ಗುರಿಯನ್ನು ತಲುಪಿವೆ ಎಂದು ಸರ್ಕಾರಕ್ಕೆ ತಿಳಿಸಿದೆ.
ಬಾಂಬುಗಳು ತಮ್ಮ ಗುರಿಯನ್ನು ಮುಟ್ಟಲಿಲ್ಲ ಎಂಬ ವಾದವನ್ನು ನಿರಾಕರಿಸುತ್ತಿದೆ ವಾಯುಸೇನೆ. ಅದಕ್ಕಾಗಿ ಹಲವು ರೀತಿಯ ಕಡತಗಳನ್ನು ಸಾಕ್ಷಿ ಸಮೇತ ತಯಾರಿಸಿದೆ. ಪಾಕಿಸ್ತಾನ ಬಾಂಬುಗಳಿಂದ ಕಾಡು ಮತ್ತು ಮರಗಳು ಮಾತ್ರವೇ ನಾಶಗೊಂಡಿರುವುದು ಎಂದು ಹೇಳಿತ್ತು.
ಹಲವು ಅಂತರರಾಷ್ಟ್ರೀಯ ಮಾಧ್ಯಮಗಳೂ ಕೂಡ ಬಾಲಾಕೋಟ್ ಏರ್ ಸ್ಟ್ರೈಕ್ ನಿಂದ ಪಾಕಿಸ್ತಾನಕ್ಕೆ ನಷ್ಟವುಂಟಾಗಿರುವುದರ ಕುರಿತು ಶಂಕೆ ವ್ಯಕ್ತಪಡಿಸಿತ್ತು. ಮಾಧ್ಯಗಳಿಗೆ ಅಲ್ಲಿದ್ದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಯಾವುದೇ ಸುಳಿವು ಸಿಕ್ಕಿಲ್ಲ.
ಈಗ ಭಾರತೀಯ ವಾಯುಸೇನೆ ಹೈ ರೆಸಲ್ಯೂಷನ್ ಚಿತ್ರಗಳನ್ನೊಳಗೊಂಡ ಮತ್ತು ಗುಪ್ತಚರ ಏರ್ ಕ್ರಾಫ್ಟ್ ಒಂದು ಸೆರೆಹಿಡಿದಿರುವ ಸಿಂಥೆಟಿಕ್ ಚಿತ್ರಗಳನ್ನೊಳಗೊಂಡ 12 ಪುಟಗಳ ಒಂದು ಕಡತವನ್ನು ತಯಾರಿಸಿದೆ. ಇದನ್ನು ನರೇಂದ್ರಮೋದಿಯವರ ಸರ್ಕಾರಕ್ಕೆ ಬಾಲಾಕೋಟ್ ನ ದಾಳಿಯ ಸಾಕ್ಷಿಯೆಂದು ನೀಡಿ ಏರ್ ಸ್ಟ್ರೈಕ್ ಯಶಸ್ವಿಯಾದುದನ್ನು ಮತ್ತೊಮ್ಮೆ ಸ್ಪಷ್ಟ ದನಿಯಲ್ಲಿ ಹೇಳಿದೆ!
ಬಾಲಾಕೋಟ್ ಏರ್ ಸ್ಟ್ರೈಕ್ ಅನ್ನು ನಡೆಸಿದ ಮಿರಾಜ್ 2000 ಯುದ್ಧವಿಮಾನಗಳು ಪೆನೆಟ್ರೇಶನ್ ವಾರ್ ಹೆಡ್ ಗಳನ್ನು ಹೊಂದಿರುವ ಇಸ್ರೇಲಿನ ಸ್ಪೈಸ್ 2000 ಪ್ರಿಸಿಷನ್ ಬಾಂಬುಗಳನ್ನು ಎಸೆದಿದ್ದವು. ಈ ಬಾಂಬುಗಳು ಛಾವಣಿಯನ್ನು ಛೇದಿಸಿ ಒಳಹೊಕ್ಕು ಸಿಡಿಯುತ್ತವೆ. ಆದ್ದರಿಂದ ನಷ್ಟವಾಗಿರುವುದು ಒಳಗೆಯೇ ಹೊರತು ಕಾಡಿನ ಸುತ್ತಮುತ್ತವಾಗಿಲ್ಲ ಎಂದು ಭಾರತೀಯ ವಾಯುಸೇನೆ ಹೇಳಿದೆ.
ವಾಯುಸೇನೆ 80 ಪ್ರತಿಶತ ಗುರಿಯನ್ನು ನಾಶಗೊಳಿಸಿರುವುದಾಗಿ ಮತ್ತು ಉಳಿದ 20 ಪ್ರತಿಶತ ನಾಶವಾಗಿದ್ದರೂ ಆಗಿರಬಹುದು, ಸ್ವಲ್ಪವೇ ಆಗಿರಬಹುದು ಅಥವಾ ಆಗದೆಯೇ ಇರಬಹುದು. ಈ ದಾಳಿ ಜೈಶ್-ಎ-ಮೊಹಮ್ಮದ್ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಪ್ರತೀಕಾರಕ್ಕೆಂದು ಭಾರತೀಯ ವಾಯುಸೇನೆ ನಡೆಸಿತ್ತು.
