DheeraMata

ಭಾರತದ ಮೊದಲ ಮಹಿಳಾ ವೈದ್ಯೆ!

ಈಕೆ ಮಹಾರಾಷ್ಟ್ರದ ಥಾಣೆಯಲ್ಲಿ ಜನಿಸಿದ್ದು‌ 1865, ಮಾರ್ಚ್ 31 ರಂದು. ಬಾಲ್ಯದ ಹೆಸರು ಯಮುನಾ. ಆಗೆಲ್ಲಾ ಬಾಲ್ಯವಿವಾಹ ಅತ್ಯಂತ ಹೆಚ್ಚು ಜಾರಿಯಲ್ಲಿದ್ದ ಕಾರಣ ಯಮುನಾಳಿಗೆ ಒಂಭತ್ತನೇ ವಯಸ್ಸಿನಲ್ಲಿಯೇ ತನಗಿಂತ 20 ವರ್ಷ ಹಿರಿಯರಾದ ಗೋಪಾಲ್ ರಾವ್ ಜೋಷಿಯೊಡನೆ ವಿವಾಹ ಮಾಡಲಾಯಿತು! ಮದುವೆಯಾದ ನಂತರ ಯಮುನಾ ಆನಂದಿ ಗೋಪಾಲ್ ಜೋಷಿಯಾದದ್ದು.

ಮದುವೆಯ ನಂತರ ಗೋಪಾಲ್ ರಾವ್ ಗೆ ಕಲ್ಕತ್ತಾಗೆ ವರ್ಗಾವಣೆಯಾಯಿತು. ಇಬ್ಬರೂ ಕಲ್ಕತ್ತಾಗೆ ಬಂದು ನೆಲೆಸಿದರು‌. ಗೋಪಾಲ್ ರಾವ್ ಹೆಣ್ಣುಮಕ್ಕಳ ಶಿಕ್ಷಣವನ್ನು ಬೆಂಬಲಿಸುತ್ತಿದ್ದಂತಹ ವ್ಯಕ್ತಿ. ಆನಂದಿಗೆ ಕಲಿಕೆಯಲ್ಲಿದ್ದ ಆಸಕ್ತಿಯನ್ನು ಕಂಡು,‌ ಆಕೆ ಆಂಗ್ಲಭಾಷೆ ಕಲಿಯುವಲ್ಲಿ ಸಹಾಯ ಮಾಡಿದರು. ಆನಂದಿ 14 ನೇ ವಯಸ್ಸಿನಲ್ಲಿ ಮಗುವೊಂದಕ್ಕೆ ಜನ್ಮ ನೀಡಿದರು. ಕೇವಲ ಹತ್ತೇ ದಿನದಲ್ಲಿ ಮಗು ತೀರಿಕೊಂಡಿತು. ಈ ಘಟನೆ ಆಕೆಯ ಜೀವನಕ್ಕೆ ಹೊಸ ತಿರುವು ನೀಡಿತು. ಆನಂದಿ ತಾನು ವೈದ್ಯೆಯಾಗಬೇಕೆಂದು ನಿಶ್ಚಯಿಸಿದಳು!

ಗೋಪಾಲ್ ರಾವ್ ತನಗೆ ಪರಿಚಿತರಿದ್ದ ಆಂಗ್ಲರಲ್ಲಿ ಆನಂದಿಯ ಶಿಕ್ಷಣಕ್ಕೆ ಧನಸಹಾಯ ಮಾಡಬೇಕೆಂದು ಕೇಳಿದರು. ಅವರೂ ಕೂಡ ಸಹಾಯ ಮಾಡಲು ಒಪ್ಪಿದರು; ಆದರೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಮಾತ್ರವೇ ಸಹಾಯ ಮಾಡಲು ಸಿದ್ಧ ಎಂಬ ಶರತ್ತನ್ನೂ ವಿಧಿಸಿದರು! ಆನಂದಿ ಮತ್ತು ಗೋಪಾಲ್ ಸುತರಾಂ‌ ಒಪ್ಪಲಿಲ್ಲ.

ಇದಾದ ನಂತರ ಆನಂದಿ‌ ಅವರು ಮಹಿಳಾ ವೈದ್ಯರ ಅವಶ್ಯಕತೆ ಎಷ್ಟಿದೆ ಎಂದು ಭಾಷಣವೊಂದನ್ನು ಮಾಡಿದರು.‌ ಇದು ಬಹಳ ಮೆಚ್ಚುಗೆಗೆ ಪಾತ್ರವಾಗಿ ದೇಶದೆಲ್ಲೆಡೆಯಿಂದ ಧನಸಹಾಯ ಒದಗಿ ಬಂತು. ನಂತರ 19 ನೇ ವಯಸ್ಸಿನಲ್ಲಿ ಅಮೇರಿಕಾದಲ್ಲಿ ವೈದ್ಯ ಶಿಕ್ಷಣ ಪ್ರಾರಂಭಿಸಿದರು. ಅಲ್ಲಿನ ವಾತಾವರಣ ಸರಿಹೊಂದದೆ ಇವರಿಗೆ ಟಿಬಿ ರೋಗ ಆವರಿಸಿಕೊಂಡಿತು. ಛಲ ಬಿಡದೇ 1886 ರಲ್ಲಿ MD ಪದವಿ ಪಡೆದುಕೊಂಡರು!!

1886 ರಲ್ಲಿ ಭಾರತಕ್ಕೆ ಮರಳಿ ಬಂದು ಕೊಲ್ಹಾಪುರದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯಲ್ಲಿ ಮಹಿಳಾ ವಾರ್ಡ್ ನ ಮೇಲ್ವಿಚಾರಕ ವೈದ್ಯೆಯಾಗಿ ಕಾರ್ಯನಿರ್ವಹಿಸಿದರು. ದುರದೃಷ್ಟವಶಾತ್ 1887 ರಲ್ಲಿಯೇ ಅಕಾಲ ಮೃತ್ಯು ಹೊಂದಿದರು.

ಇವರು –
* ಆ ಸಮಯದ ಕೆಲವೇ ಕೆಲವು ಮಹಿಳಾ ವೈದ್ಯರಲ್ಲಿ ಒಬ್ಬರು.

* ಅಮೇರಿಕಾದಲ್ಲಿ ವೈದ್ಯ ಶಿಕ್ಷಣ ಪಡೆದ ಭಾರತದ ಮೊದಲ ಮಹಿಳೆ!

-ಪ್ರಿಯಾ ಶಿವಮೊಗ್ಗ

 

Click to comment

Leave a Reply

Your email address will not be published. Required fields are marked *

Most Popular

To Top