International

ಭಾರತಕ್ಕೆ ಮಗ್ಗುಲು ಮುಳ್ಳಾಗಿ ಕಾಡುತ್ತಿರುವ ಚೀನಾ!

ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲೇ ಪಾಕಿಸ್ತಾನದ ಜೊತೆ ಭಾರತ ಹಗ್ಗ ಜಗ್ಗಾಟ ನಡಿಸಿತ್ತು. ಭಾರತದ ರಾಜತಾಂತ್ರಿಕ ನಡೆ ಹಾದಿ ತಪ್ಪಿದ್ದ ಕಾರಣ ಕಾಶ್ಮೀರ ನಮಗೆ ಸಮಸ್ಯೆಯಾಗಿ ಪರಿಣಮಿಸಿತು. ಆ ತೊಂದರೆಯನ್ನು ಸಹಿಸಿಕೊಂಡು ನೆಹರುರವರ ಅಲಿಪ್ತ ನೀತಿಯೊಂದಿಗೆ ಭಾರತ ತನ್ನ ಪಾಡಿಗೆ ಇತ್ತು. ಹಿಂದಿ-ಚೀನಿ ಭಾಯಿ ಭಾಯಿ ಅನ್ನುತ್ತಾ ಮೂರ್ಖತನದಿಂದ, ಚೀನಾ ನಮ್ಮ ಮೇಲೆ ಆಕ್ರಮಣ ಮಾಡುವುದಿಲ್ಲ ಅಂದುಕೊಂಡು ಸುಮ್ಮನಿತ್ತು. ಆದರೆ, 1962 ರಲ್ಲಿ ಚೀನಾ ಭಾರತಕ್ಕೆ ಮೋಸ ಮಾಡಿತು. ನಮ್ಮ ಆ ನಂಬಿಕೆಯ ಪರಿಣಾಮ 10-20 ಸಾವಿರ ಭಾರತ ಸೈನಿಕರು 80 ಸಾವಿರ ಚೀನಿ ಸೈನ್ಯವನ್ನು ಎದುರಿಸಬೇಕಾಯಿತು!

1949ರಲ್ಲಿ People’s Republic of China ಎಂದು ಸ್ಥಾಪಿತವಾದ ನಂತರ ಚೀನಾದೊಂದಿಗೆ ಒಂದು ಸೌಹಾರ್ದಯುತವಾದ ಸಂಬಂಧ ಹೊಂದುವುದು ಭಾರತ ಸರ್ಕಾರದ ನಿಲುವಾಗಿತ್ತು. ಟಿಬೆಟ್ ದೇಶವನ್ನು ತಾನು ಆಕ್ರಮಿಸಿಕೊಳ್ಳುವುದಾಗಿ ಚೀನಾ ಘೋಷಿಸಿದಾಗ ಭಾರತ ಇದನ್ನು ವಿರೋಧಿಸಿ ಪತ್ರವೊಂದನ್ನು ಬರೆದಿತ್ತು. ಆದರೆ, ಚೀನಾ ಆಕ್ಸೈಚಿನ್ ಗಡಿಯಲ್ಲಿ ತನ್ನ ಸೈನ್ಯವನ್ನು ಭಾರತಕ್ಕಿಂತಲೂ ಹೆಚ್ಚು ಒಟ್ಟುಮಾಡಲು ಶುರುಮಾಡಿತು. ಇಷ್ಟಾದರೂ, ಭಾರತ ಸರ್ಕಾರಕ್ಕೆ ಚೀನಾದೊಂದಿಗಿನ ಸಂಬಂಧದ ಕುರಿತು ಕಾಳಜಿ ಇತ್ತು. ಚೀನಾ ಬರಲಿಲ್ಲ ಎಂಬ ಕಾರಣದಿಂದಾಗಿ ಜಪಾನ್ ನೊಂದಿಗಿನ ಶಾಂತಿ ಮಾತುಕತೆಯ ಚರ್ಚೆಗೂ ಭಾರತ ಸರ್ಕಾರ ಹೋಗಲಿಲ್ಲ. 1954 ರಲ್ಲಿ ಭಾರತದ ಗಡಿಯನ್ನು ಸ್ಪಷ್ಟಪಡಿಸಿಸುತ್ತಾ ನೆಹರು ಜಗತ್ತಿಗೆ ಒಂದು ಸಂದೇಶ ಹೊರಡಿಸುತ್ತಾರೆ. ಆದರೆ, ಚೀನಾ, ಭಾರತದ 1,20,000 ಚದರ ಕಿ.ಮೀ. ರಷ್ಟು ಜಾಗವನ್ನು ತಮ್ಮದೆಂದು ಹೇಳಿಕೊಂಡು ತನ್ನ ನಕ್ಷೆಯನ್ನು ಘೋಷಿಸಿತ್ತು. ಇದರ ಕುರಿತು ಪ್ರಶ್ನಿಸಿದಾಗ ಚೀನಾ ತನ್ನ ನಕ್ಷೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಖಡಾಖಂಡಿತವಾಗಿ ಹೇಳಿತ್ತು. 1959ರಲ್ಲಿ ಟಿಬಿಟ್ನಿಂದ ಓಡಿಬಂದ ದಲೈ ಲಾಮಗೆ ಭಾರತ ಆಶ್ರಯ ನೀಡಿತ್ತು. ಈ ನಡೆ ಭಾರತ ತನಗೆ ಮಾಡಿದ ಅವಮಾನ ಎಂದು ಚೀನಾ ಭಾವಿಸಿತು. ಲಾಹ್ಸಾದಲ್ಲಿ ನಡೆದ ದಂಗೆಗೆ ಭಾರತವೇ ಕಾರಣ ಎಂದು ಚೀನಾದ ನಾಯಕ ಮಾವೊ ಜ಼ೆಡಾಂಗ್ ಹೇಳಿಕೆಯನ್ನು ನೀಡುತ್ತಾನೆ. ಟಿಬೆಟ್ಟನ್ನು ಆಕ್ರಮಿಸಿಕೊಂಡ ತನ್ನ ನಿಲುವಿಗೆ ಭಾರತವೇ ತನ್ನ ಪ್ರಮುಖ ವಿರೋಧಿ ಎಂದುಕೊಂಡ ಚೀನಾ, ಭಾರತದ ಮೇಲೆ ಯುದ್ಧ ಮಾಡಲು ಪ್ರಮುಖ ಕಾರಣ. ಇನ್ನಿತರ ಸೈನ್ಯದ ಚಟುವಟಿಕೆ ಮತ್ತು ಭಿನ್ನಾಭಿಪ್ರಾಯದ ಕಾರಣದಿಂದಾಗಿ 1962 ರಲ್ಲಿ ಯುದ್ಧ ಶುರುವಾಯಿತು. ಜುಲೈ ನಲ್ಲಿ, 350 ಚೀನಾ ಸೈನಿಕರು ಚುಶೂಲ್ ಎಂಬ ಹಳ್ಳಿಯಲ್ಲಿ ಲೌಡ್ ಸ್ಪೀಕರ್ಗಳನ್ನು ಹಾಕಿ ಗೂರ್ಖ ಸೈನಿಕರು ಭಾರತಕ್ಕಾಗಿ ಹೋರಾಡಬಾರದೆಂದು ಘೋಷಿಸುತ್ತಿದ್ದರು. 1962 ರ ಅಕ್ಟೋಬರ್ ಹೊತ್ತಿಗೆ ಚೀನಾದ ಸೈನ್ಯ ಭಾರತದ ಲದಾಕ್ ಪ್ರಾಂತ್ಯ ಮತ್ತು ಪೂರ್ವ ಭಾಗದ ಮೆಖ್ಮಹೋನ್ ಗಡಿ ಪ್ರದೇಶದಲ್ಲಿ ಆಕ್ರಮಣ ಮಾಡಿತು. ಭಾರತದ ರಾಜತಾಂತ್ರಿಕತೆಯ ಮೂರ್ಖತನದಿಂದಾಗಿ ಭಾರತದ ಸೈನ್ಯ ಚೀನಾದೆದುರು  ಮಂಡಿಯೂರಿ ಸೋಲಬೇಕಾಯಿತು. ಸುಮಾರು 3,250 ಸೈನಿಕರನ್ನು ಭಾರತ ಯುದ್ಧದ ಹೋರಾಟದಲ್ಲಿ ಕಳೆದುಕೊಂಡಿತು. ಇಂದಿಗೂ ಕಾಶ್ಮೀರದ ಮೂರನೇ ಒಂದು ಭಾಗವನ್ನು ‘ಚೀನಾ ಆಕ್ರಮಿತ ಕಾಶ್ಮೀರ’ (China Occupied Kashmir – COK) ಎಂದೇ ಕರೆಯುತ್ತಾರೆ.

ಈ ಯುದ್ಧದ ನಂತರ ಜಾಗತಿಕವಾಗಿ ಚೀನಾ ತನ್ನ ಹೆಸರನ್ನು ಉಳಿಸಿಕೊಳ್ಳಲು ನೇರವಾದ ಆಕ್ರಮಣ ಮಾಡುವುದನ್ನು ನಿಲ್ಲಿಸಿತು. ಇದರ ಬದಲಾಗಿ ಮಯನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ದೇಶಗಳ ಮೂಲಕ ಭಾರತವನ್ನು ಕಾಡಲು ಶುರುಮಾಡಿತು. ಮಯನ್ಮಾರಿನ ಕ್ಯಾಕ್ಪ್ಯು ಪೋರ್ಟಿನಲ್ಲಿ ಚೀನಾ ತನ್ನ ನೆಲೆಯುರಿತು. ಬೇ ಆಫ಼್ ಬೆಂಗಾಲಿನಲ್ಲಿರುವ ಈ ಪೋರ್ಟಿನಲ್ಲಿ ನೌಕಾಬಂದರಿನ ಸೌಲಭ್ಯವಿದೆ. ಇಲ್ಲಿ ಸುಮಾರು 2400 ಕಿ.ಮೀ ರಷ್ಟು ಗ್ಯಾಸ್ ಪೈಪನ್ನು ಚೀನಾ ಎಳೆದು ಕ್ಯಾಕ್ಪ್ಯು ಮತ್ತು ಕುನ್ಮಿಂಗ್ ಪ್ರದೇಶವನ್ನು ಜೋಡಿಸಿಕೊಂಡಿತು. ಇದಲ್ಲದೇ ಭಾರತಕ್ಕೆ ಹತ್ತಿರವಿರುವ ಅಂಡಮಾನ್ ನಿಕೋಬಾರ್ ಉತ್ತರದಲ್ಲಿರುವ ಕೋಕೋ ದ್ವೀಪದಲ್ಲೂ ಸಹ ಚೀನಾ ತನ್ನ ಸೇನಾ ನೆಲೆಯನ್ನು ಸ್ಥಾಪಿಸಿತು. ಬಂಗ್ಲಾದೇಶದ ಚಿತ್ತಗಾಂಗಿನಲ್ಲೋಂದು ಪೋರ್ಟನ್ನು ಚೀನಾ ಸ್ಥಾಪಿಸಿತು. ಬಾಂಗ್ಲಾದೇಶದಲ್ಲಿ ಹೆಚ್ಚು ಹಣವನ್ನು ಚೀನಾ Bangladesh-China-India-Mayanmar (BCIM) ಯೋಜನೆ ಮೂಲಕ ಹೂಡಿತು. ಇನ್ನು ಶ್ರೀಲಂಕಾದ ಹಂಬಂಟೋಟಾದಲ್ಲೂ ಚೀನಾ ಒಂದು ಪೂರ್ಟನ್ನು ಸ್ಥಾಪಿಸಿತು. ಲಂಕಾದ ಸರ್ಕಾರ ಕೂಡ ಸಾಲದ ಹೊರೆ ತಾಳಲಾರದೆ ಚೀನಾ ಕಂಪನಿಯೊಂದಕ್ಕೆ ಆ ಜಾಗವನ್ನು ಬಿಟ್ಟುಕೊಡಲು ಮುಂದಾಯಿತು. ಇದೇ ಜಾಗದಲ್ಲಿ ಚೀನಾ ನೌಕಾನೆಲೆಯನ್ನು ಸಹ ಸ್ಥಾಪಿಸಲು ಮುಂದಾಗಿತ್ತು. ಆದರೇ, ಭಾರತದ ರಾಜತಾಂತ್ರಿಕತೆಯ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ. ಇನ್ನೂ ಚೀನಾ-ಪಾಕಿಸ್ತಾನದ ಸಂಬಂಧದ ಕುರಿತು ಹೇಳಲೇಬೇಕಾಗಿಲ್ಲ. ಪಾಕಿಸ್ತಾನದ ಗದ್ವಾರಲ್ಲಿ ಒಂದು ಪೋರ್ಟನ್ನು ಸ್ಥಾಪಿಸಿತು. ಇದರ ಮೂಲಕ ಪಾಕಿಸ್ತಾನಕ್ಕೆ ನೌಕಾ ಸೈನ್ಯಕ್ಕೆ ಸಹಾಯ ಮಾಡಿ ಭಾರತದ ವಿರುದ್ಧ ಬಳಸಲು ತಯಾರಿ ನಡೆಸಿದೆ ಚೀನಾ. ಇಷ್ಟೇ ಅಲ್ಲದೆ ಚೀನಾ ಆಫ಼್ರಿಕಾ ಖಂಡದ ತೀರದಲ್ಲೂ ತನ್ನ ಸೈನ್ಯದ ನೆಲೆಯನ್ನು ಕಟ್ಟಿತು. ಸುಡಾನ್ ಮತ್ತು ಕೀನ್ಯಾ ದೇಶಕ್ಕೂ ತನ್ನ ಪ್ರಭಾವವನ್ನು ವಿಸ್ತರಿಸಿತು ಚೀನಾ. ಈ ರೀತಿ ಭಾರತದ ಸೂತ್ತಲ್ಲೂ ‘String of Pearls’ ಎಂಬ ಮೃತ್ಯು ಬಲೆಯನ್ನು ಹೆಣೆದಿತ್ತು ಚೀನಾ! ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತ ತನ್ನ ವಿದೇಶಾಂಗ ನೀತಿಯಿಂದ ತನ್ನನ್ನು ಈ ಬಲೆಯಿಂದ ರಕ್ಷಿಸಿಕೊಳ್ಳುತ್ತಿದೆ ಎಂಬುದು ಸಮಾಧಾನಕರ ವಿಚಾರ.

ಕಳೆದ 5 ವರ್ಷಗಳಿಂದ ಚೀನಾ ಭಾರತದ ವಾಣಿಜ್ಯ ಮಾರುಕಟ್ಟೆಯನ್ನು ವ್ಯಾಪಿಸಿಕೊಂಡಿದೆ. ಮೊಬೈಲ್ ಫ಼ೋನ್ ಮತ್ತು ಅದರ ಅಪ್ಲಿಕೇಷನ್ಗಳ ಮೂಲಕ ಭಾರತವನ್ನು ಹೊಕ್ಕಿದೆ. ಭಾರತದ ಸ್ಟಾರ್ಟಪ್ಗಳಲ್ಲಿ ಸುಮಾರು 4 ಬಿಲಿಯನ್ ಡಾಲರ್ ಅಷ್ಟು ಹೂಡಿಕೆ ಮಾಡಿದೆ. ಐದೇ ವರ್ಷಗಳಲ್ಲಿ ಟಿಕ್ ಟಾಕ್ ಎಂಬ ಆಪ್ ಸುಮಾರು 200 ಮಿಲಿಯನ್ ಬಳಕೆದಾರದನ್ನು ಹೊಂದಿದೆ. ಈ ಸಂಖ್ಯೆ ಭಾರತದಲ್ಲಿ Youtube ಬಳಕೆದಾರರ ಸಂಖ್ಯೆಗಿಂತಲೂ ಹೆಚ್ಚು! ಚೀನಾದ ಒಪ್ಪೊ (Oppo) ಮತ್ತು ಕ್ಸಿಯೊಮೀ (Xiaomi) ಮೊಬೈಲ್ ಫ಼ೋನ್ಗಳು ಭಾರತದ  ಸುಮಾರು 72% ರಷ್ಟು ಪಾಲು ಹೊಂದಿದೆ ಎಂದು ಅಂದಾಜಿಸಲಾಗಿದೆ. ಸುಮಾರು 2 ಡಜ಼ನ್ರಷ್ಟು ಚೀನಿ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿದೆ. Paytm, Byju’s, Oyo, Ola, MX Player, Flipkart, Hike, MakemyTrip, Bigbasket, Policy Bazzar, Swiggy, Snapdeal, Zomato, Quikr ಹೀಗೆ ಹಲವು ವಾಣಿಜ್ಯ ಕ್ಷೇತ್ರದಲ್ಲಿ ಚೀನಾದ ಹೂಡಿಕೆ ಇದೆ.  2015 ರಲ್ಲೇ ಹುವಾಯಿ ಬೆಂಗಳೂರಿನಲ್ಲಿ 1051 ಕೋಟಿಯಷ್ಟು ಮೊತ್ತವನ್ನು ಹೂಡಿ ತನ್ನ ಸಂಶೋಧನ ಕೇಂದ್ರವನ್ನು (Research and Development Centre) ಸ್ಥಾಪಿಸಲು ಮುಂದಾಯಿತು. 2012 ರಲ್ಲಿ ಪವರ್ ಗ್ರಿಡ್ ವೈಫ಼ಲ್ಯ ಎಂದು 2-3 ದಿನಗಳ ಕಾಲ ವಿದ್ಯುತ್ ಸರಬರಾಜು ಇಲ್ಲದೆ ಉತ್ತರ ಭಾರತ ಸಂಪೂರ್ಣ ಕತ್ತಲಲ್ಲಿ ಮುಳುಗಿತ್ತು. ಪವರ್ ಗ್ರಿಡ್ಗೆ ಬಳಸುತ್ತಿದ್ದ ಹಾರ್ಡ್ವೇರ್ ಚೀನೀ ಕಂಪನಿಯೊಂದು ತಯಾರಿಸಿತ್ತು. ಚೀನಾ ‘ಸೆಟ್ನೆಟ್’ ಎಂಬ ವೈರಸ್ ಒಂದನ್ನು ಹಾರ್ಡ್ವೇರ್ ಮೂಲಕ ಬಿಟ್ಟು, ಭಾರತವನ್ನು ಕತ್ತಲಲ್ಲಿ ಇರಿಸಿತು ಎಂದು ಇಂದಿಗೂ ಹಲವರು ಅನುಮಾನ ವ್ಯಕ್ತಪಡಿಸುತ್ತಾರೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಸುಮಾರು 10,000 ವಿಂಟಿಲೇಟರ್ಗಳನ್ನು ಮತ್ತು Personal Protection Equipment (PPE) ಅನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಆದರೆ, ಅದರಲ್ಲಿ ಶೇಖಡ 30ರಷ್ಟು ಕಿಟ್ಗಳು ಕಳಪೆ ಗುಣಮಟ್ಟದ್ದು ಎಂದು ಸಾಬೀತಾಯಿತು.

ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ 1950ರ ನಂತರ ಚೀನಾ ಭಾರತವನ್ನು ಮತ್ತು ಜಗತ್ತನ್ನು ನಾನಾ ರೀತಿಯಲ್ಲಿ ಕಾಡುತ್ತಲೇ ಬಂದಿದೆ.  ಮೊದಲು ಯುದ್ಧದ ಮೂಲಕ, ನಂತರ ನಮ್ಮ ಸುತ್ತ ಇರುವ ದೇಶಗಳನ್ನು ಸಾಲದ ಸುಳಿಯಲ್ಲಿ ಸಿಕ್ಕಿಸಿ ತನ್ಮೂಲಕ ಭಾರತದ ಕುತ್ತಿಗೆಯನ್ನು ಹಿಸುಕಲು ಪ್ರಯತ್ನ ಪಡುತ್ತಲೇ ಇದೆ. ಭಾರತದ ವಿದೇಶಾಂಗ ಮತ್ತು ರಾಜತಾಂತ್ರಿಕ ನಡೆ ಬದಲಾದ ನಂತರ ಎಚ್ಚೆತ್ತುಕೊಂಡ ಚೀನಾ ತನ್ನ ವರೆಸೆಯನ್ನು ಬದಲಾಯಿಸಿತು. ಭಾರತದ ವಾಣಿಜ್ಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಸದ್ದಿಲ್ಲದೆ ನಮ್ಮನ್ನು ಆವರಿಸಿಕೊಂಡಿತು. ಕೊರೋನಾ ಸಮಯದಲ್ಲೂ ಚೀನಾ ಕಳಪೆ ವಸ್ತುಗಳ ಕೊಟ್ಟು ಭಾರತಕ್ಕೆ ಮತ್ತೊಮ್ಮೆ ಮೊಸವನ್ನೇ ಮಾಡಿತು. ನಾವು ಬಳಸುವ ಅನೇಕ ದಿನ ಬಳಕೆ ವಸ್ತುಗಳು ಚೀನಾದ್ದೆ ಆಗಿವೆ. ಹೌದು, ಚೀನಾ ನಮಗೆ ಮೋಸವೇ ಮಾಡುತ್ತಿದ್ದರೂ ಆ ದೇಶ ತಯಾರಿಸುವ ಪದಾರ್ಥಗಳನ್ನು ಬಿಟ್ಟು ಬದಕಲು ಸಾಧ್ಯವಿಲ್ಲ ಎಂಬ ಸ್ಥಿತಿ ಇಂದಿಗೂ ಇದೆ. ಚೀನಾದ ಪ್ರಭಾವದಿಂದ ಭಾರತ ಹೊರಬರಬೇಕಾಗಿದೆ. ಅದಕ್ಕಾಗಿ ನಾವು ಹೆಚ್ಚು ದುಡಿಯಬೇಕಾಗಿದೆ. ಪ್ರಧಾನ ಮಂತ್ರಿ ಮೋದಿಜೀ ಹೇಳಿದಂತೆ ನಾವೆಲ್ಲರೂ ಸ್ವಾವಲಂಭಿ, ಆತ್ಮ ನಿರ್ಭರ ಭಾರತವನ್ನು ಕಟ್ಟಬೇಕಾಗಿದೆ. ನೆನಪಿಡಿ, ಚೀನಾ ಬೆಳೆದರೆ ಜಗತ್ತಿಗೆ ಮಾರಕ. ಭಾರತ ಬೆಳೆದರೆ ಜಗತ್ತಿಗೆ ಶಾಂತಿ, ನೆಮ್ಮದಿ ಮತ್ತು ಒಳಿತು.

-ಕಾರ್ತಿಕ್ ಕಶ್ಯಪ್

Click to comment

Leave a Reply

Your email address will not be published. Required fields are marked *

Most Popular

To Top