Vishwaguru

ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದನ್ನೇ ಬದುಕಿ ತೋರಿಸಿದವ ಬುದ್ಧ!

ಭಗವಾನ್ ಬುದ್ಧನನ್ನು ಹಿಂದೂ‌ ಧರ್ಮದ ವಿರೋಧಿ ಎನ್ನುವ ರೀತಿಯಲ್ಲಿ ಬಿಂಬಿಸುತ್ತ ಭಗವದ್ಗೀತೆಯನ್ನು ಆಗಾಗ ಹರಿಯುತ್ತೆನೆ, ಸುಡುತ್ತೆನೆ ಎನ್ನುವ ನಕಲಿ ಬುದ್ಧನ ಅನುಯಾಯಿಗಳನ್ನು ಕಂಡು ನಿಜವಾಗಿಯೂ ಬುದ್ಧನ ನಡೆ, ಆದರ್ಶ ಗೀತೆಗೆ ವಿರೋಧಿಯಾ ಎಂದು ಯೋಚಿಸುತ್ತ ಭಗವದ್ಗೀತೆಯ ಶ್ಲೋಕಗಳನ್ನು ಮುಂದಿಟ್ಟುಕೊಂಡು ಭಗವಾನ್ ಬುದ್ಧನ ಜೀವನವನ್ನು ನೋಡಿದರೆ ಅರ್ಥವಾಗುತ್ತೆ ಗೀತೆಯಲ್ಲಿ ಶ್ರೀಕೃಷ್ಣ ಏನು ಹೇಳಿದ್ದನೊ ಅದನ್ನು ಅನುಭವಿಸಿ ತೋರಿಸಿದ್ದಾನೆ ಬುದ್ಧ ಎಂದು. ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ, ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋರ್ಜುನ | ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ || ಅಂದರೆ ಯಾರು ಇತರ ಎಲ್ಲರ ಸುಖದುಃಖಗಳನ್ನು ತನ್ನದೇ ಎಂಬಂತೆ ಸಮಾನವಾಗಿ ಕಾಣುತ್ತಾನೋ ಅವನು ಯೋಗಿಗಳಲ್ಲಿ ಉತ್ತಮನು ಎಂದು. ಸಿದ್ಧಾರ್ಥನು ತಾನು ಕಂಡ ಸಾವು, ನೋವುಗಳನ್ನು ತನ್ನದೇ ಎಂದು ಭಾವಿಸಿದಕ್ಕೆ ಅಲ್ಲವೇ ಉತ್ತಮ‌ ಯೋಗಿಯಾಗಿ ಭಗವಾನ್ ಬುದ್ಧನಾದದ್ದು. ಮತ್ತೊಂದು ಶ್ಲೋಕದಲ್ಲಿ ಕೃಷ್ಣ ಹೇಳುತ್ತಾನೆ ಭೌತಿಕ ಕಾಮನೆಗಳನ್ನು, ಪ್ರಾಪಂಚಿಕತೆಯನ್ನು ತೊರೆದು ಭಗವಂತನ ಕಡೆಗೆ ಮನಸ್ಸು ಇರಿಸಿ ಧ್ಯಾನಿಸುವವರಿಗೆ ನಾನು ಪ್ರಕಟವಾಗುತ್ತೆನೆ ಎಂದು. ಶ್ರೀಕೃಷ್ಣ ಗೀತೆಯಲ್ಲಿ ಹೇಳಿದನ್ನೇ ಪಡೆಯಲು ಅಲ್ಲವೇ ಬುದ್ಧನು ನಡು ರಾತ್ರಿಯಲ್ಲಿ ಅರಮನೆಯ ಸುಖ-ಸಂಪತ್ತನ್ನು ಬಿಟ್ಟು ಕಾಷಾಯ ವಸ್ತ್ರಧರಸಿ ಬ್ರಹ್ಮಜ್ಞಾನ ಅರಸುತ್ತ ಹೊರಟದ್ದು.


ಕೃಷ್ಣ ಅರ್ಜುನನಿಗೆ ಯೋಗಸಿದ್ಧಿಯನ್ನು ಪಡೆಯುವ ಬಗ್ಗೆ ಹೇಗೆ ಎಂದು ವಿವರಿಸುವಾಗ “ನಾತ್ಯಶ್ನತಸ್ತು ಯೋಗೋsಸ್ತಿ ನ ಚೈ ಕಾಂತವಮನಶ್ನತಃ| ನ ಚಾತಿಸ್ವಪ್ನಶೀಲಸ್ಯ ಜಾಗ್ರತೋಬನೈವ ಚಾರ್ಜುನ||. ಯುಕ್ತಾ ಹಾರವಿಹರಸ್ಯ ಯುಕ್ತಚೇಷ್ಟ ಕರ್ಮಸು| ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ||” ಎನ್ನುತ್ತಾನೆ.‌ ಶ್ಲೋಕದ ಅರ್ಥ ಇಷ್ಟೇ, ಅತಿಯಾಗಿ ತಿನ್ನುವುದರಿಂದ ಅಥವಾ ಅತಿಕಡಿಮೆ ತಿನ್ನುವುದರಿಂದ ಅತಿಯಾಗಿ ನಿದ್ರಿಸುವುದರಿಂದ ಅಥವಾ ಕಡಿಮೆ ನಿದ್ರೆ ಮಾಡುವುದರಿಂದ ಯೋಗವನ್ನು ಅಭ್ಯಸಿಸಲಾರ ಇವೆಲ್ಲವನ್ನೂ ಹೆಚ್ಚು ಇಲ್ಲದೆ ಕಡಿಮೆಯು ಇಲ್ಲದೆ ಮಿತವಾಗಿ ಮಾಡುವುದರಿಂದ ಮಾತ್ರ ಯೋಗ ಅಭ್ಯಸಿಸಲು ಸಾಧ್ಯ. ಅದರಿಂದ ದುಃಖ ನಾಶ ಎಂದು. ಜ್ಞಾನ ಪ್ರಾಪ್ತಿಗಾಗಿ ಅರಮನೆ ತೊರೆದಿದ್ದ ಬುದ್ಧ ಆರು ವರ್ಷಗಳ ಕಾಲ ಕಠಿಣ ವ್ರತಗಳನ್ನು ಕೈಗೊಂಡು ಅತಿ ಕಡಿಮೆ ಆಹಾರ, ಅತಿ ಕಡಿಮೆ ನಿದ್ರೆ ಮಾಡುತ್ತ ತನ್ನ ದೇಹವನ್ನು ದಂಡಿಸಿಕೊಂಡ ಅದು ಎಷ್ಟರ ಮಟ್ಟಿಗೆಂದರೆ ದೇಹದಲ್ಲಿ ಅಲ್ಪವು ತ್ರಾಣ ಇಲ್ಲದ ಮಟ್ಟಿಗೆ. ಆದರೂ ಜ್ಞಾನ ಪ್ರಾಪ್ತಿಯಾಗಲಿಲ್ಲ. ನಂತರ ಮಿತ ಆಹಾರ ಮಿತ ನಿದ್ರೆ ಮಿತ ವಿಶ್ರಾಂತಿಯ ಮಧ್ಯಮ ಮಾರ್ಗವನ್ನು ಕಂಡುಕೊಂಡು ಹಾಗೆ ಧ್ಯಾನಿಸಿದ, ಬುದ್ಧತ್ವವನ್ನು ಪಡೆದುಕೊಂಡ. ಕೃಷ್ಣ ಗೀತೆಯಲ್ಲಿ ಹೇಳಿದನ್ನು ಬುದ್ಧ ಅನುಭವಿಸಿ ತೋರಿಸಿದ.‌ ಹಾಗೆ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಅರ್ಜುನನಿಗೆ ಕೃಷ್ಣ, “ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ| ತಸ್ಮಾದಪರಿಹಾರ್ಯೇsರ್ಥೇ ನ ತ್ವಂ ಶೋಚಿತುಮರ್ಹಸಿ“|| ಎನ್ನುತ್ತಾನೆ ಹುಟ್ಟಿದವನಿಗೆ ಸಾವು ನಿಶ್ಚಿತ. ಯಾರು ಸಾಯುತ್ತಾನೋ ಅವನ ಹುಟ್ಟು ನಿಶ್ಚಿತ. ಹಾಗಾಗಿ ಅನಿವಾರ್ಯವಾಗಿರುವ ವಿಷಯದ ಬಗ್ಗೆ ನೀನು ಶೋಕಿಸತಕ್ಕದ್ದಲ್ಲ ಎಂಬುದು ಅರ್ಥೈಸುತ್ತಾನೆ. ಕೃಷ್ಣ ಅರ್ಜುನನಿಗೆ ಶ್ಲೋಕದಲ್ಲಿ ಹೇಳಿದ್ದನ್ನು ಬುದ್ಧ ಸಾವಿಲ್ಲದ ಮನೆಯಲ್ಲಿ ಸಾಸಿವೆ ತಾ ಎಂದು ಮಗನನ್ನು ಕಳೆದುಕೊಂಡ ತಾಯಿಗೆ ಪ್ರಾಯೋಗಿಕವಾಗಿ ಮಾಡಿ ಅರ್ಥೈಸಿ ತೋರಿಸಿ ಸಂತೈಸಿದ್ದು. ಕೃಷ್ಣ ಗೀತೆಯಲ್ಲಿ “ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ| ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ||” ಪಂಡಿತನಾದವನು ಒಬ್ಬ ವಿದ್ಯಾವಂತ ಮತ್ತು ವಿನಯಶೀಲ ಬ್ರಾಹ್ಮಣನನ್ನು, ಗೋವನ್ನು, ಆನೆಯನ್ನು, ನಾಯಿಯನ್ನು ಚಾಂಡಲನನ್ನು ಮತ್ತು ಎಲ್ಲ ಇತರ ಜೀವಾತ್ಮರನ್ನು ಸಮನಾಗಿ ಕಾಣುತ್ತಾನೆ ಎಂದಿದ್ದಾನೆ. ಬುದ್ಧ ಹಾಗೆ ತಾನೆ ಪಂಡಿತರನ್ನು, ಪಾಮರರನ್ನು ಎಲ್ಲ ಚರಾಚರಗಳನ್ನು ಸಮಾನವಾಗಿ ಕಾಣುತ್ತ ಪಂಡಿತೋತ್ತಮನಾಗಿ ಬದುಕಿದ್ದು. ಭಗವದ್ಗೀತೆಯಲ್ಲಿ ಶತ್ರುವನ್ನು ಮಿತ್ರರನ್ನು ಸಮದೃಷ್ಟಿಯಿಂದ ಕಾಣಬೇಕೆಂದು ಕೃಷ್ಣ ಹೇಳಿದ್ದಾನೆ. ಬುದ್ಧ ತನ್ನನ್ನು ಕೊಲ್ಲಲು ಬಂದ ದುಷ್ಟ ಅಂಗುಲಿ ಮಾಲನನ್ನು ಮಿತ್ರನಂತೆ ಕಂಡು ತನ್ನ ಸಮತೋಲನವಾದ ಮನಸ್ಥಿತಿಯನ್ನು ಪ್ರಕಟಿಸಿದ್ದಾನೆ. ಖ್ಯಾತಿ-ಅಪಖ್ಯಾತಿಗಳನ್ನು ಹೊಗಳಿಕೆ ಮತ್ತು ನಿಂದನೆಗಳನ್ನು ಸಮನಾಗಿ ಸ್ವೀಕರಿಸಿ ಸ್ಥಿತಪ್ರಜ್ಞನಾಗಿ ಬದುಕಿ ತೋರಿಸಿದಕ್ಕೆ ಅಲ್ಲವೇ ಬುದ್ಧ ಭಗವಾನ್ ಆದದ್ದು.

ಬುದ್ದನ ಜೀವನದ ಪ್ರಮುಖ ಘಟನೆಗಳು ಹಾಗೂ ಭಗವದ್ಗೀತೆಯ ಶ್ಲೋಕಗಳು ಬಹಳ ಕಡೆಗಳಲ್ಲಿ ಸಂವಾದಿಯಾಗುವಂತೆ ಇದೆ. ಗೀತೆಯಲ್ಲಿ ಹೇಳಿದ್ದನು ಬದುಕಿ ತೋರಿಸಿದವನು ಬುದ್ಧ ಅದಕ್ಕೆ ಅವನು ಭಗವಂತ ಆದದ್ದು.

-ಚಂದ್ರಶೇಖರ್, ನಂಜನಗೂಡು

Click to comment

Leave a Reply

Your email address will not be published. Required fields are marked *

Most Popular

To Top