National

ಬ್ರಿಟೀಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಮೂವರು ಬಂಗಾಳದ ತರುಣರು!

ಅದು 1930ರ ಆಸುಪಾಸು. ಬಂಗಾಳದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ತೀವ್ರವಾಗಿದ್ದ ಕಾಲ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟೀಷರು ಸ್ವಲ್ಪ ಹೆಚ್ಚಾಗಿಯೇ ಎಚ್ಚೆತ್ತುಕೊಂಡಿದ್ದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡೊಡನೆ ವಿಚಾರಣೆಯೂ ನಡೆಸದೆ ಬಂಧಿಸಿ ಜೈಲಿಗಟ್ಟುತ್ತಿದ್ದರು ಪಾಪಿ ಬ್ರಿಟೀಷರು.

ಈ ಹೊತ್ತಿಗೆ ನೇತಾಜಿ ಸುಭಾಷ್ ಚಂದ್ರ ಬೋಸರು ಪ್ರಾರಂಭಿಸಿದ್ದ ‘ಬೆಂಗಾಲ್ ವಾಲಂಟಿಯರ್ಸ್’ ಎಂಬ ಕ್ರಾಂತಿಕಾರಿ ಸಂಘಟನೆ ಬ್ರಿಟೀಷರ ನಿದ್ದೆ ಕೆಡಿಸುವ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರುವ ಯೋಚನೆ ನಡೆಸುತ್ತಿತ್ತು. ವಾಸ್ತವವಾಗಿ, ನೇತಾಜಿಯವರು ಬೆಂಗಾಲ್ ವಾಲಂಟಿಯರ್ಸ್ ಅನ್ನು ಹುಟ್ಟುಹಾಕಿದ್ದು 1928ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ. ಅಧಿವೇಶನದ ನಂತರವೂ ಈ ಸಂಘಟನೆ ಮೇಜರ್ ಸತ್ಯಗುಪ್ತ ಅವರ ನಾಯಕತ್ವದಲ್ಲಿ ಮುನ್ನಡೆಯಿತು.

ಈ ಸಂಘಟನೆಗೆ ಬ್ರಿಟೀಷರ ದುರಾಡಳಿತವನ್ನು ಕಿತ್ತೊಗೆಯುವ ಉದ್ದೇಶ ಹೊಂದಿದ್ದ ಬಿಸಿರಕ್ತದ ತರುಣರು ಬಂದು ಸೇರಿಕೊಳ್ಳುತ್ತಿದ್ದರು. ಹೊರ ಜಗತ್ತಿಗೆ ಸಾಮಾನ್ಯರಂತೆ ತೋರುತ್ತಾ, ಗುಪ್ತವಾಗಿ ಬ್ರಿಟೀಷರ ವಿರುದ್ಧ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿದ್ದರು ಈ ತರುಣರು. ಹೀಗೆ ತಾಯಿ ಭಾರತಿಯ ಸೇವೆಗೆಂದು ಬಂದು ಸೇರಿದವರು  ಬಿನಯ್ ಕೃಷ್ಣ ಬಸು, ದಿನೇಶ್ ಗುಪ್ತ ಮತ್ತು ಬಾದಲ್ ಗುಪ್ತ. ಮೂವರೂ ಢಾಕಾದವರೇ. ಓದಿದ್ದು ಬೇರೆ-ಬೇರೆ ಕಾಲೇಜುಗಳಲ್ಲಾದರೂ ಅವರ ಉದ್ದೇಶ ಒಂದೇ ಆಗಿತ್ತು. ಮಾತೃಭೂಮಿಗೆ ಬ್ರಿಟೀಷರು ತೊಡಿಸಿದ್ದ ದಾಸ್ಯದ ಸಂಕೋಲೆಯನ್ನು ಕಳಚೋದು. ಬೆಂಗಾಲ್ ವಾಲೆಂಟಿಯರ್ಸ್ ಕ್ರೂರಿ ಆಂಗ್ಲ ಅಧಿಕಾರಿಗಳನ್ನು ಕೊಲ್ಲುವ ಯೋಜನೆಯನ್ನು ಸಂಘಟನೆಯ ಕಾರ್ಯಕರ್ತರ ಮುಂದಿಟ್ಟಿತು. ಮರು ಮಾತಿಲ್ಲದೇ ಇಡಿಯ ಸಂಘಟನೆ ಈ ಯೋಜನೆಗೆ ಸಮ್ಮಿತಿಸಿದ್ದು, ಬ್ರಿಟೀಷರ ಕುರಿತು ಅವರಿಗಿದ್ದ ಕೋಪವನ್ನು ತೋರುತ್ತದೆ. ಈ ಯೋಜನೆಗೆ ‘ಆಪರೇಶನ್ ಫ್ರೀಡಂ’ ಎಂದು ಕರೆದರು. ಬಂಗಾಳದ ಜೈಲುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು, ರಾಜಕೀಯ ಖೈದಿಗಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಅವರಿಗೆ ಬರೆಯಲು, ಓದಲು ಯಾವುದನ್ನೂ ನೀಡದೇ, ಕೆಲವೊಮ್ಮೆ ಬೇರೆ ಖೈದಿಗಳೊಡನೆ ಸಂಪರ್ಕವಿರಿಸಿಕೊಳ್ಳದಂತೆಯೂ ನಿಯಮಗಳನ್ನು ಹೇರುತ್ತಿದ್ದರು ಆಂಗ್ಲರು. ಈ ಕ್ರೂರಿ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುವ ಆಲೋಚನೆ ನಡೆಸಿತು ಬೆಂಗಾಲ್ ವಾಲೆಂಟಿಯರ್ಸ್ ತಂಡ.

ಆಪರೇಶನ್ ಫ್ರೀಡಂ ಅಡಿಯಲ್ಲಿ ಮೊದಲ ಹತ್ಯೆಯಾದದ್ದು ಲೊಮ್ಯಾನ್‌ನದ್ದು. ಆತ ಬಂಗಾಳದ ಪೊಲಿಸ್ ಇನ್ಸ್ಪೆಕ್ಟರ್ ಜನರಲ್ ಆಗಿದ್ದ‌. ಬಿನಯ್ ಕೃಷ್ಣ ಬಸು 1930ರ ಆಗಸ್ಟ್‌ನಲ್ಲಿ ಢಾಕಾದ ಮೆಡಿಕಲ್ ಸ್ಕೂಲ್ ಆಸ್ಪತ್ರೆಯಲ್ಲಿ ಲೊಮ್ಯಾನ್‌ನನ್ನು ಗುಂಡಿಟ್ಟು ಕೊಂದನು. ಅಷ್ಟೇ ಅಲ್ಲದೇ, ಬ್ರಿಟೀಷರಿಗೆ ಚಳ್ಳೆಹಣ್ಣು ತಿನ್ನಿಸಿ ಅವರ ಕೈಗೆ ಸಿಗದಂತೆ ಕಲ್ಕತ್ತಾಗೆ ಪರಾರಿಯೂ ಆದನು. ಆಪರೇಶನ್ ಫ್ರೀಡಂ ಅಡಿಯಲ್ಲಿ ನೀಡಿದ ಮೊದಲ ಬಲಿ ಯಶಸ್ವಿಯಾಯಿತು.

ಈಗ ಕ್ರಾಂತಿಕಾರಿಗಳು ಆಪರೇಶನ್ ಫ್ರೀಡಂ ಹೆಸರಲ್ಲಿ ಮತ್ತೊಂದು ದೊಡ್ಡ ಕೆಲಸಕ್ಕೆ ಕೈ ಹಾಕಿದರು. ಕಲ್ಕತ್ತಾದ ಜೈಲಿನ ಮುಖ್ಯಾಧಿಕಾರಿಯಾಗಿದ್ದ ಕರ್ನಲ್ ಎನ್. ಎಸ್ ಸಿಂಪ್ಸನ್‌ನನ್ನು ಹತ್ಯೆ ಮಾಡುವುದಲ್ಲದೇ ಬ್ರಿಟೀಷರ ಹೃದಯದಲ್ಲಿ ಈ ಹೆದರಿಕೆ ಚಿರವಾಗಿ ಉಳಿಸಲು ಕಲ್ಕತ್ತಾದ ಮಧ್ಯಭಾಗದಲ್ಲಿದ್ದ ಆಂಗ್ಲರ ಭವನ, ಈಗಿನ ರೈಟರ್ಸ್ ಬಿಲ್ಡಿಂಗ್ ಮೇಲೆ ಆಕ್ರಮಣ ಮಾಡುವ ಸಾಹಸ ತೋರಿದರು. ಈ ಯೋಜನೆಯನ್ನು ಡಿಸೆಂಬರ್‌ನಲ್ಲಿ ಜಾರಿಗೆ ತರುವುದೆಂಬ ನಿಶ್ಚಯವಾಯ್ತು‌. ಈ ಕಾರ್ಯಕ್ಕೆ ಆಯ್ಕೆಯಾದವರು ಬಿನಯ್, ಬಾದಲ್ ಮತ್ತು ದಿನೇಶ್ ಗುಪ್ತ. ಯೋಜನೆ ಗುರಿ ತಪ್ಪದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡರು.

ಡಿಸೆಂಬರ್ 8, 1930. ಎಂದಿನಂತೆ ರೈಟರ್ಸ್ ಬಿಲ್ಡಿಂಗ್ ಚಟುವಟಿಕೆಯಿಂದ ಕೂಡಿತ್ತು. ಆಂಗ್ಲ ಅಧಿಕಾರಿಗಳು, ಬಂಗಾಳದ ಆಂಗ್ಲ ಗುಲಾಮರು, ಗುಮಾಸ್ತರೆಲ್ಲಾ ತಮ್ಮ ದಿನನಿತ್ಯದ ಕೆಲಸವನ್ನು ಮಾಡುತ್ತಿದ್ದರು. ಯುರೋಪಿಯನ್ನರೇ ತುಂಬಿದ್ದ ಈ ಪ್ರಭುತ್ವ ಭವನದಲ್ಲಿ ಪರಿಚಯವಿಲ್ಲದ ಭಾರತೀಯರನ್ನು ಬಿಡುವುದು ಕಷ್ಟಸಾಧ್ಯವೇ ಆಗಿತ್ತು. ಈ ಕಟ್ಟಡಕ್ಕೆ ಮೂವರು ನವ ತರುಣರು, ಯುರೋಪಿಯನ್ನರ ಪೋಷಾಕು ಧರಿಸಿ, ಠೀವಿಯಿಂದ ನಡೆದು ಬಂದರು. ಅದು ಮತ್ಯಾರೂ ಅಲ್ಲ ಬಿನಯ್ ಬಸು, ದಿನೇಶ್ ಗುಪ್ತ ಮತ್ತು ಬಾದಲ್ ಗುಪ್ತ! ಅವರನ್ನು ನೋಡಿದ ಯಾರಿಗೂ ಆ ಮೂವರು ಕ್ರಾಂತಿಕಾರಿಗಳೆಂಬ ಸಣ್ಣ ಅನುಮಾನವೂ ಕಾಡಲಿಲ್ಲ. ಅತ್ಯಂತ ಸಹಜವೆಂಬಂತೆ ಅಲ್ಲಿದ್ದ ಗುಮಾಸ್ತನೊಬ್ಬನನ್ನು ಸಿಂಪ್ಸನ್ ಕುರಿತು ವಿಚಾರಿಸಿದರು. ಆತ ಸಿಂಪ್ಸನ್ ಇದ್ದ ಜಾಗವನ್ನು ತೋರಿಸಿದ. ಮೂವರೂ ಅಲ್ಲಿಗೆ ನಡೆದು ಸಿಂಪ್ಸನ್‌ನಿಗೆ ಅಭಿನಂದಿಸಿದರು. ಇದ್ದಕ್ಕಿದ್ದಂತೆ ಅವರಲ್ಲೊಬ್ಬ 1920 ಲುಗರ್ ಪಿಸ್ತೂಲನ್ನು ಹೊರತೆಗೆದು ಸಿಂಪ್ಸನ್‌ನಿಗೆ ಗುರಿಯಿಟ್ಟು ಹೊಡೆದೇಬಿಟ್ಟ. ಸಿಂಪ್ಸನ್ ಧರಾಶಾಯಿಯಾದ. ಒಮ್ಮೆ ಇಡಿಯ ಕಟ್ಟಡ ಮೌನಕ್ಕೆ ಶರಣಾಯಿತು. ನಂತರ ಎಲ್ಲೆಲ್ಲೂ ಗೌಜು-ಗದ್ದಲ. ನಡೆದದ್ದೇನು ಎಂದು ಎಲ್ಲರೂ ಅರ್ಥೈಸಿಕೊಳ್ಳುವಲ್ಲಿ ಕೆಲವು ನಿಮಿಷವೇ ಹಿಡಿಯಿತು. ತಕ್ಷಣವೇ ಎಚ್ಚೆತ್ತ ಆಂಗ್ಲರು ಗುಂಡನ್ನು ಸಿಡಿಸಿ, ಕ್ರಾಂತಿಕಾರಿಗಳೊಡನೆ ನೇರಯುದ್ಧಕ್ಕೇ ಇಳಿದರು. ಇತ್ತಲಿಂದ ಈ ಮೂವರು ಬಿಡದೇ ದಾಳಿ ನಡೆಸಿದರು. ಇಬ್ಬರ ನಡುವೆ ಗುಂಡಿನ ಚಕಮಕಿ ಸುಮಾರು ಎರಡು ಗಂಟೆಗಳವರೆಗೆ ಸಾಗಿದ್ದಿರಬಹುದು. ತ್ವ್ಯಾನಮ್, ನೆಲ್ಸನ್ ಸೇರಿದಂತೆ ಒಂದಷ್ಟು ಆಂಗ್ಲರಿಗೆ ಗಾಯಗಳಾದವು.

ಕೆಲವೇ ಕ್ಷಣಗಳಲ್ಲಿ ಬಿಳಿಯರ ಸಂಖ್ಯೆ ಮೇಲಾಯಿತು. ಇನ್ನು ಪರಿಸ್ಥಿತಿ ಕೈ ಮೀರುತ್ತಿದೆ ಎಂಬ ಅರಿವಾದಾಗ ಮೂವರೂ ಆಂಗ್ಲರ ಕೈಗೆ ಸಿಕ್ಕು ಬೀಳುವುದಕ್ಕಿಂತ ಪ್ರಾಣಾರ್ಪಣೆಗೈಯ್ಯುವುದು ಒಳಿತೆಂಬ ನಿರ್ಧಾರಕ್ಕೆ ಬಂದರು. ಬಾದಲ್ ಗುಪ್ತ ಪೊಟ್ಯಾಷಿಯಮ್ ಸೈನೈಡ್ ಸೇವಿಸಿ ಅಲ್ಲೇ ಪ್ರಾಣಬಿಟ್ಟ. ಬಿನಯ್ ಮತ್ತು ದಿನೇಶ್ ಇಬ್ಬರೂ ತಮ್ಮದೇ ರಿವಾಲ್ವರ್‌ನಿಂದ ಗುಂಡು ಹೊಡೆದುಕೊಂಡರು. ಸ್ಥಳದಲ್ಲೇ ಇಬ್ಬರೂ ಜ್ಞಾನತಪ್ಪಿದರು, ಪ್ರಾಣವುಳಿಯಿತು.

ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತು. ಬಿನಯ್ ಡಿಸೆಂಬರ್ 13ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ದಿನೇಶ್ ಬದುಕಿಬಿಟ್ಟ. ಆತನನ್ನು ಅಲಿಪುರದ ಜೈಲಿಗಟ್ಟಲಾಯಿತು. ಮೊಕದ್ದಮೆ ಹೂಡಿ, ವಿಚಾರಣೆ ನಡೆಸುವ ನಾಟಕವಾಡಿತು ಆಂಗ್ಲ ಸರ್ಕಾರ. ಅಪರಾಧ ಸಾಬೀತಾದ ಕೂಡಲೇ ಜುಲೈ 7, 1931 ರಂದು ದಿನೇಶ್‌ನನ್ನು ನೇಣಿಗೇರಿಸಲಾಯ್ತು.

ಬಾದಲ್ ಮತ್ತು ಬಿನಯ್‌ರು ಪ್ರಾಣವನ್ನರ್ಪಿಸಿದಾಗ ಇಬ್ಬರಿಗೂ ಸುಮಾರು 22 ವರ್ಷ. ಆಂಗ್ಲ ಸರ್ಕಾರ ದಿನೇಶ್‌ನನ್ನು ನೇಣಿಗೇರಿಸಿದಾಗ ಆತನಿಗಿನ್ನೂ 19 ವರ್ಷ!!

ಈ ಮೂವರೂ ಬ್ರಿಟೀಷರ ಹೃದಯದಲ್ಲಿ ಹೆದರಿಕೆ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂರು ಕ್ರಾಂತಿರತ್ನಗಳ ನೆನಪಿನಲ್ಲಿ ಡಾಲ್‌ಹೌಸಿ ಸ್ಕ್ವೇರ್ ಅನ್ನು ಬಿಬಿಡಿ (ಬಿನಯ್, ಬಾದಲ್, ದಿನೇಶ್) ಬಾಗ್ ಎಂದು ಹೆಸರಿಸಲಾಗಿದೆ.

-ಪ್ರಿಯಾ ಶಿವಮೊಗ್ಗ

 

 

 

Click to comment

Leave a Reply

Your email address will not be published. Required fields are marked *

Most Popular

To Top