Vishwaguru

ಬಾಲ್ಯವಿವಾಹಕ್ಕೆ ತುತ್ತಾದ ಹೆಣ್ಣುಮಗಳು ಭಾರತದ ಮೊದಲ ಮಹಿಳಾ ಇಂಜಿನಿಯರ್ ಆದ ರೋಚಕಗಾಥೆ!!

15 ನೇ ವಯಸ್ಸಿಗೇ ಮದುವೆಯಾದ ಲಲಿತಾ ಅವರ ಬದುಕು ಸಾಮಾನ್ಯವಾದುದಾಗಿರಲಿಲ್ಲ. ಆಕೆಗೆ 18 ತುಂಬಿದಾಗ ಆಕೆಯ ಕೈಗೊಂದು ಮಗು! ಮಗುಗೆ ಜನ್ಮನೀಡಿದ ನಾಲ್ಕೇ ತಿಂಗಳಿಗೆ ಆಕೆಯ ಗಂಡ ತೀರಿಕೊಂಡ. ಇದು 1937ರ ಮಾತು. ಆಗಿನ ಕಾಲದಲ್ಲಿ ವಿಧವೆಯಾಗಿ ಸಮಾಜದಲ್ಲಿ ಬದುಕುವುದು ಕಷ್ಟಸಾಧ್ಯವೇ ಆಗಿತ್ತು. ಆ ಹೊತ್ತಿಗೆ ಸತಿ ಪದ್ಧತಿ ನಿಂತುಹೋಗಿದ್ದರೂ ವಿಧವೆಯಾದ ಮಹಿಳೆಯನ್ನು ಸಮಾಜ ಸಾಮಾನ್ಯ ಮಹಿಳೆಯಂತೆ ಸ್ವೀಕರಿಸಲು ಸಿದ್ಧವಾಗಿರಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮನೆಯಲ್ಲಿ ಕೂರದೇ ಇಂಜಿನಿಯರಿಂಗ್ ಮಾಡುವ ದಿಟ್ಟ ನಿರ್ಧಾರ ಕೈಗೊಂಡ ಧೀರಮಾತೆ ಲಲಿತಾ!

ಆಗಸ್ಟ್ 27, 1919ರಲ್ಲಿ ತೆಲುಗು ಕುಟುಂಬವೊಂದರಲ್ಲಿ ಲಲಿತಾ ಜನಿಸಿದ್ದು. ಈಕೆಯ ತಂದೆ-ತಾಯಿಗೆ ಏಳು ಮಕ್ಕಳು. ಲಲಿತಾ ಐದನೆಯ ಮಗುವಾಗಿ ಜನಿಸಿದರು. ಹೆಣ್ಣುಮಕ್ಕಳು ಅಡುಗೆಮನೆಗೆ ಸೀಮಿತವೆಂಬ ನಂಬಿಕೆ ಆಳವಾಗಿ ಬೇರೂರಿದ್ದ ಕಾಲವದು. ಈ ಕಾರಣದಿಂದ ಲಲಿತಾ ಅವರ ಸಹೋದರರು ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ತೆರಳಿದ್ದರು ಮತ್ತು ಮನೆಯ ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಿಕ್ಷಣವೇ ಸಾಕೆಂದು ತಡೆಹಿಡಿಯಲಾಗಿತ್ತು. ಲಲಿತಾ ಅವರ ತಂದೆ ಮದುವೆ ಎಂದಿಗೂ ಶಿಕ್ಷಣಕ್ಕೆ ಅಡ್ಡಿಯಾಗಬಾರದೆಂಬ ವಿಶಾಲ ಭಾವನೆ ಹೊಂದಿದ್ದ ಕಾರಣ ಲಲಿತಾ ಮದುವೆಯಾದರೂ ಹತ್ತನೇ ತರಗತಿವರೆಗೂ ಶಿಕ್ಷಣ ಪಡೆದುಕೊಳ್ಳುವಂತೆ ಮಾಡಿದರು.

ಮದುವೆಯಾಗಿ ಮಗುವಿಗೆ ನಾಲ್ಕೇ ತಿಂಗಳಿರುವಾಗ ಲಲಿತಾರ ಪತಿ ಅಕಾಲ ಮೃತ್ಯು ಹೊಂದಿದರು. ಸಮಾಜದ ಚುಚ್ಚು ಮಾತುಗಳನ್ನು, ಅತ್ತೆ ಮನೆಯವರ ಹೀಯಾಳಿಸುವಿಕೆಯನ್ನು ಅನುಭವಿಸಿದ ಲಲಿತಾ ಧೃತಿಗೆಡದೇ ಶಿಕ್ಷಣ ಪಡೆದು ಒಳ್ಳೆಯ ಕೆಲಸ ಗಳಿಸಿಕೊಳ್ಳುವ ಸಂಕಲ್ಪ ಮಾಡಿದರು. ಆಗಿನ ಕಾಲದಲ್ಲಿ ಮಹಿಳೆಯರು ಹೆಚ್ಚಾಗಿ ವೈದ್ಯಕೀಯ ಕ್ಷೇತ್ರವನ್ನು ಆರಿಸಿಕೊಳ್ಳುತ್ತಿದ್ದರು. ಆದರೆ ಲಲಿತಾಗೆ ತನ್ನ ಮಗುವನ್ನೂ ನೋಡಿಕೊಳ್ಳುವ ಜವಾಬ್ದಾರಿಯಿತ್ತು. ಆಕೆಗೆ 9 ರಿಂದ 5ರವರೆಗೆ ದುಡಿದು, ಮನೆಗೆ ಬಂದು ತನ್ನ ಜವಾಬ್ದಾರಿಯನ್ನು ನಿಭಾಯಿಸಲು ಪೂರಕವಾಗುವಂತಹ ಕೆಲಸದ ಅವಶ್ಯಕತೆಯಿತ್ತು. ಈಗ ಆಕೆಯ ಹೋರಾಟದ ಬದುಕು ಆರಂಭವಾಯ್ತು!

ಇಂಜಿನಿಯಂರಿಗ್ ಪದವಿ ಪಡೆಯಲು ನಿರ್ಧರಿಸಿದ ಲಲಿತಾ ಅವರಿಗೆ ಎಲ್ಲೆಡೆಯಿಂದ ಬೆಂಬಲ ದೊರೆಯಿತು. ಮದ್ರಾಸಿನ ಗ್ಯುಂಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸೀಟು ದೊರೆಯಿತು. ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಇಂಜಿನಿಯರಿಂಗ್ ಪದವಿಗೆಂದು ಸೇರಿಕೊಂಡಿದ್ದರು! ಇಡಿಯ ಕಾಲೇಜಿನಲ್ಲಿ ಲಲಿತಾ ಒಬ್ಬರೇ ಮಹಿಳೆ! ಆಕೆಗೊಬ್ಬಳಿಗೆ ಕಾಲೇಜು ವಸತಿ ವ್ಯವಸ್ಥೆಯನ್ನೂ ಮಾಡಿಕೊಟ್ಟಿತು. ತನ್ನ ಮಗುವನ್ನು ಸಂಬಂಧಿಕರ ಬಳಿ ಬಿಟ್ಟು, ಪ್ರತೀ ವಾರ ನೋಡಲು ಬರುತ್ತಿದ್ದರು ಲಲಿತಾ!

ಲಲಿತಾ ಕಾಲೇಜಿಗೆ ಸೇರುತ್ತಿದ್ದಂತೆ ಇದನ್ನು ಅವಕಾಶವಾಗಿ ಬಳಸಿಕೊಂಡ ಕಾಲೇಜು ಮಹಿಳೆಯರಿಗೆ ಉಚಿತ ಶಿಕ್ಷಣ ಏರ್ಪಡಿಸಿ ಹೆಚ್ಚು-ಹೆಚ್ಚು ಮಹಿಳೆಯರು ಇಂಜಿನಿಯರಿಂಗ್ ಪದವಿ ಸೇರುವಂತೆ ನೋಡಿಕೊಂಡಿತು. ಲಲಿತಾ ಅವರು ಶಿಮ್ಲಾದಲ್ಲಿ ಸೆಂಟ್ರಲ್ ಸ್ಟಾಂಡರ್ಡ್ ಆರ್ಗನೈಸೇಷನ್ ನಲ್ಲಿ ಕಾರ್ಯ ನಿರ್ವಹಿಸಿದರು. ನಂತರ ತನ್ನ ತಂದೆಯೊಡನೆ ಕೆಲವು ಕಾಲ ಕೆಲಸ ಮಾಡಿ ಅವರ ಅನ್ವೇಷಣೆಗಳಲ್ಲಿ ಜೊತೆನೀಡಿದರು ಲಲಿತಾ.

1964ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಮೊದಲ ಮಹಿಳಾ ಇಂಜಿನಿಯರ್ ಗಳ ಮತ್ತು ವಿಜ್ಞಾನಿಗಳ ಅಂತರರಾಷ್ಟ್ರೀಯ ಕಾನ್ಫರೆನ್ಸ್ ಗೆ ಲಲಿತಾ ಅವರನ್ನು ಆಹ್ವಾನಿಸಲಾಯಿತು. ಭಾರತದ ಮೊದಲ ಮಹಿಳಾ ಇಂಜಿನಿಯರ್ ಆಗಿ ಹೊರಹೊಮ್ಮಿದ ಲಲಿತಾ ಅವರು ಸಾವಿರಾರು ಹೆಣ್ಣುಮಕ್ಕಳಿಗೆ ಇಂಜಿನಿಯರ್ ಪದವಿ ಪಡೆಯಲು ಸ್ಫೂರ್ತಿಯಾಗಿ ನಿಂತರು ಎಂದರೆ ತಪ್ಪಾಗಲಾರದು. 60ನೇ ವಯಸ್ಸಿನಲ್ಲಿ ಲಲಿತಾ ಅವರು ಮೆದುಳು ಸಂಬಂಧಿ ಕಾಯಿಲೆಯಿಂದ ಮೃತಪಟ್ಟರು. ಆಕೆ ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಬಿಟ್ಟು ಹೋದ ಸಾಧನೆ ಈಗಲೂ ನೆನಪಿಸಿಕೊಳ್ಳುವಂಥದ್ದು!

Click to comment

Leave a Reply

Your email address will not be published. Required fields are marked *

Most Popular

To Top