National

ಬಲವಾಯ್ತು ಹಿಂದೂಸ್ತಾನ, ದಿವಾಳಿಯಾಯ್ತು ಪಾಕಿಸ್ತಾನ!

ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದವು. ಹಿಂದೂಸ್ತಾನ ಮತ್ತು ಪಾಕಿಸ್ತಾನವೆಂಬ ಎರಡು ರಾಷ್ಟ್ರಗಳು ಭೂಪಟದಲ್ಲಿ ಹೊಸ ಗಡಿಯೊಂದಿಗೆ ಅಸ್ತಿತ್ವಕ್ಕೆ ಬಂದಿದ್ದವು. ಸ್ವಾತಂತ್ರ್ಯ ಕೊಡುವಾಗಲೇ ಇಂಗ್ಲೆಂಡಿನ ಪ್ರಧಾನಿ ಕ್ಲೆಮೆಂಟ್ ಆಟ್ಲೀ ಕೆಲವು ವರ್ಷಗಳ ಕಾಲ ತಮ್ಮನ್ನು ತಾವು ಆಳಿಕೊಂಡು ನಾಶವಾಗಿಬಿಡುವ ರಾಷ್ಟ್ರಗಳಾಗುತ್ತೇವೆಂದು ಮೂದಲಿಸಿದ. ಆದರೆ ಅದೇ ಬ್ರಿಟೀಷರಿಗಿಂತಲೂ ಬಲವಾಗಿ ಬೆಳೆದು ನಿಲ್ಲುವ ರಾಷ್ಟ್ರವಾಗಿ ನಾವಿಂದು ಮಾರ್ಪಟ್ಟಿದ್ದೇವೆ. ಎಲ್ಲ ದಿಕ್ಕಿನಲ್ಲೂ ಭಾರತದ ಪ್ರಗತಿ ನಿಸ್ಸಂಶಯವಾಗಿ ಯುರೋಪಿಯನ್ನರನ್ನು ಹಿಂದಿಕ್ಕುವಂತಿದೆ. ಯುರೋಪಿಯನ್ ಯುನಿಯನ್ನಿಂದ ಹೊರಗೆ ಬಂದ ನಂತರವಂತೂ ಅಕ್ಷರಶಃ ಬ್ರಿಟನ್ನು ಒಂದು ದಶಕಗಳಷ್ಟು ಕಾಲ ಹೆಣಗಾಡಲಿದೆ. ಆದರೆ ನಾನು ಹೇಳಬೇಕೆಂದಿದ್ದುದು ಈ ವಿಚಾರವಲ್ಲ. ಈ ಏಳು ದಶಕಗಳಲ್ಲಿ ವಿಶೇಷವಾಗಿ ಕಳೆದ ಐದು ವರ್ಷಗಳಲ್ಲಿ ಭಾರತ ವಧರ್ಿಸಿರುವ ಪರಿ ಮತ್ತು ಪಾಕಿಸ್ತಾನ ಪತನ ಕಂಡಿರುವ ರೀತಿ ಇವೆರಡನ್ನೂ ಗಮನಿಸಿದರೆ ಅಚ್ಚರಿಗೊಳಗಾಗುವಂಥದ್ದೇ. ಒಂದೆಡೆ ಭಾರತ ಈ ಐದು ವರ್ಷಗಳಲ್ಲಿ ಮುರಿದುಬೀಳುವ ಆಥರ್ಿಕ ಶಕ್ತಿಯಿಂದ ಜಗತ್ತಿನ ಐದನೇ ದೊಡ್ಡ ಆಥರ್ಿಕ ಶಕ್ತಿಯಾಗಿ ಬೆಳೆದು ನಿಂತರೆ ಅತ್ತ ಪಾಕಿಸ್ತಾನ ಕಂಡ ಕಂಡವರ ಬಳಿ ಭಿಕ್ಷಾ ಪಾತ್ರೆಯನ್ನು ಹಿಡಿದು ಸಾಲಕ್ಕಾಗಿ ಬೇಡುತ್ತಿದೆ. 56 ಇಂಚಿನ ಎದೆ ಎಂದು ಮೋದಿ ಹೇಳುತ್ತಿದ್ದುದನ್ನು ಆಡಿಕೊಳ್ಳುತ್ತಿದ್ದ ಮಿತ್ರರು ಇಂದು ಅಕ್ಷರಶಃ ಉಬ್ಬಿದ ಎದೆಯಿಂದ ಜಗತ್ತಿನೆದುರು ನಿಲ್ಲಬಹುದಾದ ಸ್ಥಿತಿಯಲ್ಲಿದ್ದಾರೆ.

 

ಹೌದು. ನಾನು ಪಾಕಿಸ್ತಾನದ ಸದ್ಯದ ಪರಿಸ್ಥಿತಿಯ ಬಗ್ಗೆಯೇ ಮಾತನಾಡುತ್ತಿರುವುದು. ಇತ್ತೀಚೆಗೆ ಪಾಕಿಸ್ತಾನದ ಚುನಾವಣೆ ನಡೆಯುವಾಗಲೇ ಪತ್ರಕರ್ತರು ಪಾಕಿಸ್ತಾನದ ಸ್ಥಿತಿಗತಿಗಳ ಕುರಿತಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ನಿರಂತರವಾಗಿ ಪಾಕಿಸ್ತಾನದ ಉತ್ಪಾದನೆ ಕುಸಿತಯುತ್ತಿತ್ತು. ಒಂದು ಅಂದಾಜಿನ ಪ್ರಕಾರ 5.8 ರಷ್ಟಿದ್ದ ಪಾಕಿಸ್ತಾನದ ಜಿಡಿಪಿ ಶೇಕಡಾ 3 ಕ್ಕೆ ಇಳಿಯಲಿದೆ ಎಂಬ ಅನುಮಾನವನ್ನು ಆಥರ್ಿಕ ತಜ್ಞರು ವ್ಯಕ್ತಪಡಿಸಿದರು. ವಿತ್ತೀಯ ಕೊರತೆ ಎಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಂದರೆ ಚುನಾವಣೆಯ ಹೊತ್ತಿನಲ್ಲಿ ಡಾಲರ್ನ ಎದುರಿಗೆ 130ಕ್ಕೆ ಕುಸಿದ ರೂಪಾಯಿ ಚುನಾವಣೆಯ ನಂತರ 122 ಕ್ಕೆ ಬಂತು. ಚೀನಾದಿಂದ ಕಟ್ಟಡ ನಿಮರ್ಾಣ, ರಸ್ತೆ ನಿಮರ್ಾಣ ಇತ್ಯಾದಿಗಳಿಗಾಗಿ ಆಮದು ಮಾಡಿಕೊಂಡ ದೊಡ್ಡ-ದೊಡ್ಡ ಯಂತ್ರಗಳ ಕಾರಣದಿಂದಾಗಿ ನಿರಂತರವಾಗಿ ಏರಿದ ಆಮದು-ರಫ್ತುಗಳ ನಡುವಿನ ಕೊರತೆ ಪಾಕಿಸ್ತಾನವನ್ನು ಒಳಗಿಂದೊಳಗೇ ತಿಂದು ಹಾಕುತ್ತಿದೆ. ಇದರ ಪರಿಣಾಮವಾಗಿಯೇ ಹಣದುಬ್ಬರ ಕಳೆದ ನಾಲ್ಕು ವರ್ಷಗಳಲ್ಲೇ ಹೆಚ್ಚಿನದ್ದಾಗಿ ಶೇಕಡಾ 7.1 ಅನ್ನು ಮುಟ್ಟಿದೆ. ಅತ್ತ ಪಾಕಿಸ್ತಾನದ ಕೇಂದ್ರ ಬ್ಯಾಂಕು ಕರೆನ್ಸಿಯನ್ನು ಉಳಿಸಲೆಂದು ವಿದೇಶಿ ವಿನಿಮಯ ಉಳಿತಾಯವಷ್ಟನ್ನೂ ಮಾರಿಕೊಂಡಿದೆ. ಇದರ ಪರಿಣಾಮವಾಗಿ ಈಗ ಉಳಿದಿರುವ ಹಣದಲ್ಲಿ ಪಾಕಿಸ್ತಾನ ತನ್ನ ತಲೆಯ ಮೇಲಿರುವ ಸರಿಸುಮಾರು 75 ಬಿಲಿಯನ್ ಡಾಲರ್ಗಳಷ್ಟು ವಿದೇಶಿ ಸಾಲದಿಂದ ಮುಕ್ತವಾಗುವಂತೆ ಕಾಣುತ್ತಿಲ್ಲ.

ಇದುವರೆಗೂ ಆಳಿದ ನವಾಜ್ ಶರೀಫ್ ಚೀನಾಕ್ಕೆ ಆತುಕೊಂಡು ಅಲ್ಲಿಂದ ಸಿಗುತ್ತಿದ್ದ ಸಾಲಕ್ಕೆ ಪ್ರತಿಯಾಗಿ ಪಾಕಿಸ್ತಾನದ ಅನೇಕ ಪ್ರದೇಶಗಳನ್ನೇ ಮಾರಿಕೊಂಡುಬಿಟ್ಟಿದ್ದರು. ಜನ-ಮನ ಗೆಲ್ಲುವ ಯೋಜನೆಯನ್ನು ತರುವ ಭರದಲ್ಲಿ ಉತ್ಪಾದನೆಯನ್ನು ವೃದ್ಧಿಸಲಾಗದೇ ಹೆಣಗಾಡಿದ ಹಿಂದಿನ ನವಾಜ್ ಶರೀಫ್ ಸಕರ್ಾರದ ಕಾಲದಲ್ಲೇ ರಫ್ತು ಗಣನೀಯವಾಗಿ ಕುಸಿಯಲಾರಂಭಿಸಿತು. ಚೀನಾವನ್ನು ನಂಬಿಕೊಂಡ ಯಾವ ರಾಷ್ಟ್ರವೂ ಕಾಲಕ್ರಮದಲ್ಲಿ ಉದ್ಧಾರವಾದ್ದನ್ನು ಕಂಡವರಿಲ್ಲ. ಬಡರಾಷ್ಟ್ರಗಳಿಗೆ ಸಾಲಕೊಟ್ಟು ಸಾಲದ ಸುಳಿಯಲ್ಲೇ ಸಿಲುಕುವಂತೆ ಮಾಡಿ ಇಡಿಯ ರಾಷ್ಟ್ರವನ್ನು ತನ್ನಿಚ್ಛೆಗೆ ತಕ್ಕಂತೆ ಬಳಸಿಕೊಳ್ಳುವುದು ಅದರ ಸಹಜ ಪ್ರಕೃತಿ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಈ ಕುರಿತಂತೆ ಬಲವಾದ ಪ್ರತಿರೋಧ ವ್ಯಕ್ತವಾಗಿದೆ. ಆದರೆ ಇದನ್ನು ಅರಿಯುವ ವೇಳೆಗೆ ಪಾಕಿಸ್ತಾನಕ್ಕೆ ಸಾಕಷ್ಟು ತಡವಾಗಿ ಹೋಗಿದೆ. ಒನ್ ಬೆಲ್ಟ್ ಒನ್ ರೋಡ್ ಹೆಸರಿನಲ್ಲಿ ಚೀನಾದಿಂದ ಎಷ್ಟು ಸಾಲ ಪಡೆದಿದ್ದೇನೆಂಬುದನ್ನು ತನ್ನ ಜನರೆದುರಿಗೆ ಮುಕ್ತವಾಗಿಯೂ ಹೇಳಿಕೊಳ್ಳಲಾಗದ ದೈನೇಸಿ ಸ್ಥಿತಿಯಲ್ಲಿದೆ ಪಾಕಿಸ್ತಾನ. ಇವಿಷ್ಟೂ ಸಾಲದೆಂಬಂತೆ ನರೇಂದ್ರಮೋದಿ ಎರಡು ವರ್ಷದ ಹಿಂದೆ ನೋಟು ಅಮಾನ್ಯೀಕರಣ ಮಾಡಿ ಸಾಯುತ್ತಿರುವ ಪಾಕಿಸ್ತಾನದ ಬಾಯಿಗೆ ಗಂಗಾಜಲ ಸುರಿದುಬಿಟ್ಟರು. ಖೋಟಾ ನೋಟುಗಳನ್ನೇ ಮುದ್ರಿಸುತ್ತಾ ಭಾರತದ ಆಥರ್ಿಕತೆಯ ಮೇಲೆ ಬಲವಾದ ಹೊಡೆತ ಕೊಡುವ ಪ್ರಯತ್ನ ಮಾಡಿದ್ದಲ್ಲದೇ ತನ್ನ ಆಥರ್ಿಕತೆಯನ್ನು ಬೆಳೆಸಿಕೊಂಡಿತ್ತು ಪಾಕಿಸ್ತಾನ. ಇದೇ ಕಾರಣಕ್ಕೆ ಚೀನಾದ ಬೆಂಬಲವೂ ಅದಕ್ಕಿತ್ತು. ಆದರೆ ನೋಟು ಅಮಾನ್ಯೀಕರಣಗೊಂಡು ಮುದ್ರಣಗೊಂಡಿದ್ದ ನೋಟುಗಳಿಗೆ ನಯಾಪೈಸೆ ಕಿಮ್ಮತ್ತಿಲ್ಲ ಎಂದು ಗೊತ್ತಾದೊಡನೆ ಪಾಕಿಸ್ತಾನದ ಉದ್ದಿಮೆ ನಷ್ಟವಾಗಿದ್ದಲ್ಲದೇ ಅದನ್ನೇ ನಂಬಿಕೊಂಡಿದ್ದಂತ ದೇಶದ ಆಥರ್ಿಕತೆ ಬೀದಿಗೆ ಬಂತು. ಈ ಹೊತ್ತಿನಲ್ಲಿಯೇ ಅಧಿಕಾರ ಸ್ವೀಕರಿಸಿದ್ದು ತೆಹರೀಕ್-ಎ-ಇನ್ಸಾಫ್ ಪಕ್ಷದ ಇಮ್ರಾನ್ ಖಾನ್!


ಹೊಸ ಪ್ರಧಾನಿಯ ಮುಂದೆ ಬಹಳ ಮಾರ್ಗಗಳೇನೂ ಇರಲಿಲ್ಲ. ಮೊದಲನೆಯದು, ರೂಪಾಯಿಯ ಮೇಲಿನ ಹಿಡಿತವನ್ನು ಕೈಬಿಡುವುದು. ಇರುವ ವಿದೇಶಿ ವಿನಿಮಯ ಉಳಿತಾಯವನ್ನು ರೂಪಾಯಿಯನ್ನು ಸಂಭಾಳಿಸಲು ಬಳಸದೇ ಮಾರುಕಟ್ಟೆಗೆ ತಕ್ಕಂತೆ ರೂಪಾಯಿ ಬದಲಾಗುವಂತೆ ಬಿಟ್ಟುಬಿಟ್ಟರೆ ಪರಿಸ್ಥಿತಿ ತಿಳಿಯಾಗಬಹುದಿತ್ತು. ಆದರೆ ಇದರಲ್ಲಿ ಒಂದು ದೊಡ್ಡ ಸಮಸ್ಯೆ ಅಡಗಿದೆ. ಹಾಗೆ ಮಾಡಿದೊಡನೆ ಪಾಕಿಸ್ತಾನಿ ರೂಪಾಯಿ ಕೆಟ್ಟದಾಗಿ ಕುಸಿಯುವುದಲ್ಲದೇ ಹಣದುಬ್ಬರ ವಿಪರೀತವಾಗಿ ಏರಿ ಜನಸಾಮಾನ್ಯರ ಬದುಕು ದುಸ್ತರವಾಗಿಬಿಡುತ್ತದೆ. ಇನ್ನು ಎರಡನೆಯದು, ಅತ್ಯಂತ ಕಠಿಣವಾದ ಆಥರ್ಿಕ ನಿಯಮಗಳನ್ನು ಹೇರಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶ್ವಾಸ ಮೂಡಿಸಿ ಜಾಗತಿಕವಾಗಿ ಹೂಡಿಕೆಗೆ ಆಹ್ವಾನ ಮಾಡುವುದು. ಆದರೆ ಇದು ಶಾಜರ್ಾದಲ್ಲಿ ಕ್ರಿಕೆಟ್ ಆಡಿದಷ್ಟು ಸುಲಭವಲ್ಲ. ಇನ್ನು ಕೊನೆಯ ಮತ್ತು ಇದುವರೆಗಿನ ಎಲ್ಲರೂ ಮಾಡಿರುವ ಉಪಾಯಕ್ಕೆ ಮೊರೆ ಹೋಗುವುದು. ಅದು ಭಿಕ್ಷಾ ಪಾತ್ರೆಯನ್ನು ಹಿಡಿದು ಜಗತ್ತಿನ ರಾಷ್ಟ್ರಗಳ ಮುಂದೆ ನಿರ್ಲಜ್ಜೆಯಿಂದ ನಿಂತುಕೊಳ್ಳುವುದು. ಇಮ್ರಾನ್ ಖಾನ್ ನಿರ್ಲಜ್ಜರಾಗುವುದಕ್ಕೇ ಮಹತ್ವ ಕೊಟ್ಟರು. ಈ ಹಿಂದೆ ಮಾಡಿದಂತೆ ಐಎಮ್ಎಫ್ ಬಳಿ ಹೋಗಿ ತಮ್ಮ ಸಾಲವನ್ನು ಮಾಫಿ ಮಾಡಬೇಕಲ್ಲದೇ ಇನ್ನೊಂದಷ್ಟು ಸಾಲಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು. ಈ ಬಾರಿ ಹಿಂದಿನಷ್ಟು ಸುಲಭವಿಲ್ಲ. ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯನ್ನು ಬದ್ಧವಾಗಿ ವಿರೋಧಿಸುತ್ತಾ ಬಂದಿರುವ ಅಮೇರಿಕಾ ಐಎಮ್ಎಫ್ ಮೇಲೆ ಸಾಕಷ್ಟು ಒತ್ತಡವನ್ನು ಹಾಕಿದೆ. ಅಷ್ಟೇ ಅಲ್ಲ. ಐಎಮ್ಎಫ್ ಕೂಡ ಚೀನಾದಿಂದ ಪಡೆದಿರುವ ಸಾಲದ ಒಟ್ಟು ವಿವರವನ್ನು ಸ್ಪಷ್ಟವಾಗಿ ಹೇಳಬೇಕೆಂದು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಅದರರ್ಥ ಈ ಬಾರಿ ಸಾಲ ಪಡೆಯವುದು ಸುಲಭವಿಲ್ಲ ಅಂತ. ಆರಂಭದಲ್ಲಿ ಐಎಮ್ಎಫ್ನೊಂದಿಗಿನ ಮಾತುಕತೆಯನ್ನು ನಿರಾಕರಿಸಿದ ಪಾಕಿಸ್ತಾನ ಈಗ ತಾನು ಮಾತನಾಡಿರುವುದು ಸತ್ಯವೆಂದು ಒಪ್ಪಿಕೊಂಡಿದೆ. ಐಎಮ್ಎಫ್ ಸಾಲ ಕೊಡುವುದೋ ಇಲ್ಲವೋ ಪಾಕಿಸ್ತಾನದ ದಿವಾಳಿತನ ಹಿಂದೆಂದಿಗಿಂತಲೂ ಹೆಚ್ಚು ಬೆಳಕಿಗೆ ಬರುವುದೊಂತೂ ಸತ್ಯ. ಈ ಎಲ್ಲಾ ಕಿರಿಕಿರಿಗಳ ನಡುವೆ ಇಮ್ರಾನ್ ಖಾನ್ಗೆ ಎರಡು ದಿನಗಳ ಹಿಂದೆ ಸಿಕ್ಕಿರುವ ನೆಮ್ಮದಿಯ ಸುದ್ದಿಯೆಂದರೆ ಸೌದಿ ಅರೇಬಿಯಾ ಆರು ಬಿಲಿಯನ್ ಡಾಲರ್ಗಳಷ್ಟು ಹಣವನ್ನು ಸಾಲದ ರೂಪದಲ್ಲಿ ಕೊಡಲು ಒಪ್ಪಿಕೊಂಡಿರುವುದು. ಹಾಗಂತ ಅದೂ ಸಲೀಸಲ್ಲ, ಮೊದಲ 3 ಬಿಲಿಯನ್ ಡಾಲರ್ ಹಣ ನಿಯಮಗಳ ಸಹಿತ ಬರುತ್ತದೆ. ಆನಂತರ ತೈಲದೊಂದಿಗೆ ಉಳಿದ ಹಣ ಸಾಲದ ರೂಪದಲ್ಲಿ ಸೇರುತ್ತದೆ. ಐಎಮ್ಎಫ್ ನಿಂದ ಕನಿಷ್ಠ ಪಕ್ಷ 12 ಬಿಲಿಯನ್ ಡಾಲರ್ಗಳಾದರೂ ಪಾಕಿಸ್ತಾನಕ್ಕೆ ಬೇಕಿದೆ. ಆದರೆ ಅಷ್ಟು ಸಿಗುವ ಲಕ್ಷಣ ಸದ್ಯಕ್ಕಂತೂ ಗೋಚರವಾಗುತ್ತಿಲ್ಲ! ಮತ್ತದೇ ಸ್ಥಿತಿ. ಸಾಲ ಪಡೆದು ಇಮ್ರಾನ್ ಸಕರ್ಾರವನ್ನು ನಡೆಸಿಬಿಡಬಹುದು. ಮುಂದೆ ಅಧಿಕಾರಕ್ಕೆ ಬರುವವರು ಮತ್ತೆ ಹೆಣಗಾಡಬೇಕು. ಕ್ಲೆಮೆಂಟ್ ಆಟ್ಲೀ ಹೇಳಿದ್ದು ಹಿಂದೂಸ್ತಾನದ ಕುರಿತಂತೆ ಸತ್ಯವಾಗಲಿಲ್ಲ. ಆದರೆ ಪಾಕಿಸ್ತಾನದ ಕುರಿತಂತೆ ನಿಜವಾಗಿ ಹೋಯ್ತು.


ಇದಕ್ಕೆದುರಾಗಿ ಭಾರತ ಹೇಗೆ ರೂಪಿಸಲ್ಪಟ್ಟಿತು ಗೊತ್ತೇನು? ಐದೇ ವರ್ಷಗಳ ಹಿಂದೆ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿದ್ದ ಸಕರ್ಾರಗಳು, ಮಿತಿಮೀರಿ ಏರುತ್ತಿದ್ದ ಬೆಲೆ, ವಿದೇಶೀ ಬ್ಯಾಂಕುಗಳಲ್ಲಿ ಕೊಳೆಯುತ್ತಿದ್ದ ಕಪ್ಪು ಹಣ, ಬದ್ಧತೆಯಿಲ್ಲದ ಸಕರ್ಾರಿ ನೌಕರರು, ಆತ್ಮವಿಶ್ವಾಸ ಶೂನ್ಯರಾಗಿದ್ದ ಸಾರ್ವಜನಿಕರು, ಹೀಗೆಯೇ ಮುಂದುವರೆದಿದ್ದರೆ ಪಾಕಿಸ್ತಾನವನ್ನೇ ಹಿಂದಿಕ್ಕಿ ಭಾರತ ಪತನವಾಗಿ ಹೋಗಿರುತ್ತಿತ್ತು. ಜಾಗತಿಕ ಮಟ್ಟದಲ್ಲಿ ನರೇಂದ್ರಮೋದಿ ಮೂಡಿಸಿದ ವಿಶ್ವಾಸ, ನೋಟು ಅಮಾನ್ಯೀಕರಣ, ಜಿಎಸ್ಟಿಯಂತಹ ಕಠಿಣ ನಿಧರ್ಾರಗಳನ್ನು ಕೈಗೊಂಡ ಪರಿಣಾಮ ಭಾರತೀಯರನ್ನು ಉದ್ಯಮಶೀಲರನ್ನಾಗಿಸಲು ಯತ್ನಿಸಿದ್ದಲ್ಲದೇ ತಮ್ಮ ವೈಯಕ್ತಿಕ ವರ್ಚಸ್ಸಿನಿಂದಾಗಿ ಅಗಾಧ ಪ್ರಮಾಣದಲ್ಲಿ ವಿದೇಶೀ ಹೂಡಿಕೆಯನ್ನು ಏರಿಸಿದ್ದು, ಇವೆಲ್ಲವೂ ನಿಜಕ್ಕೂ ಬಲುದೊಡ್ಡ ಪರಿಣಾಮವನ್ನುಂಟು ಮಾಡಿತು. ಜಾಗತಿಕ ಹೂಡಿಕೆದಾರರಲ್ಲಂತೂ ನರೇಂದ್ರಮೋದಿ ಮೂಡಿಸುವಂತಹ ವಿಶ್ವಾಸ ದಂಗುಬಡಿಸುವಂಥದ್ದು! ಒಂದೆಡೆ ಗೆಲುವಿನ ಓಟದತ್ತ ಧಾವಿಸುತ್ತಿರುವ ಹಿಂದೂಸ್ತಾನ, ಮತ್ತೊಂದೆಡೆ ನಾಶದ ಹೊಸ್ತಿಲನ್ನು ಎಡವಿ ಬಿದ್ದಿರುವ ಪಾಕಿಸ್ತಾನ. ತುಲನೆ ಮಾಡಿ ನೋಡಿ. ಆಗ ಇಂದಿನ ಸಕರ್ಾರದ ಸಾಧನೆ ಏನೆಂಬುದು ಕಣ್ಣೆದುರು ನಿಚ್ಚಳವಾಗಿ ಕಾಣುತ್ತದೆ.

-ಚಕ್ರವರ್ತಿ ಸೂಲಿಬೆಲೆ

2 Comments

2 Comments

Leave a Reply

Your email address will not be published. Required fields are marked *

Most Popular

To Top