National

ನೋಟು ನಿಷೇಧಕ್ಕೂ ನಕ್ಸಲರ ಸದ್ದು ಅಡಗಿದ್ದಕ್ಕೂ ಸಂಬಂಧವಿದೆಯಾ!?

ನವೆಂಬರ್ 8, 2016 ರಂದು ಪ್ರಧಾನಮಂತ್ರಿ ನರೇಂದ್ರಮೋದಿಯವರು ನೋಟು ಅಮಾನ್ಯೀಕರಣವನ್ನು ಜಾರಿಗೆ ತಂದರು. ಅಂದರೆ 500 ಮತ್ತು 1000 ರೂಪಾಯಿಯ ನೋಟುಗಳು ಚಾಲ್ತಿಯಲ್ಲಿರುವುದಿಲ್ಲವೆಂದು ಘೋಷಿಸಿದ್ದರು. ಭಾರತದ ಇತಿಹಾಸದಲ್ಲೇ ಆರ್ಥಿಕತೆಗೆ ಸಂಬಂಧಿಸಿದ ದಿಟ್ಟ ಹೆಜ್ಜೆ ಇದು. ದೇಶದ ಬಹುಪಾಲು ಜನ ಈ ನಡೆಯನ್ನು ಸ್ವಾಗತಿಸಿದರು. ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳ ಧಂಧೆಯಷ್ಟೇ ಅಲ್ಲದೇ ಈ ನಡೆ ಭಯೋತ್ಪಾದನೆ ಮತ್ತು ನಕ್ಸಲ ಚಳುವಳಿಗಳನ್ನು ಕಡಿತಗೊಳಿಸುವ ಗುರಿಯನ್ನೂ ಹೊಂದಿತ್ತು.

ಪಬ್ಲಿಕ್ ಪಾಲಿಸಿ ರಿಸರ್ಚ್ ಸೆಂಟರ್ ನೋಟು ಅಮಾನ್ಯೀಕರಣ ಮತ್ತು ನಕ್ಸಲ್ ದಾಳಿಗಳನ್ನು ತಡೆಗಟ್ಟುವಲ್ಲಿ ಅದರ ಪ್ರಭಾವಗಳ ಕುರಿತು ಸಂಶೋಧನೆ ನಡೆಸಿದೆ. ಸುಕ್ಮಾ, ಬಿಜಾಪುರ್, ನಾರಾಯಣ್ ಪುರ್ ಮತ್ತು ರಾಜ್ ನಂದ್ಗಾವ್ ಗಳ 33 ನಕ್ಸಲ್ ದಾಳಿಗೆ ತುತ್ತಾದ ಹಳ್ಳಿಗಳಲ್ಲಿ ಸಂಶೋಧನೆ ನಡೆಸಿ ವರದಿಯೊಂದನ್ನು ತಯಾರಿಸಿದ್ದಾರೆ.

1996 ರಿಂದ ಇಲ್ಲಿಯವರೆಗೆ ಸುಮಾರು 15,000 ಜನ ನಕ್ಸಲರ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಆದರೆ ನೋಟು ಅಮಾನ್ಯೀಕರಣದ ನಂತರ ನಕ್ಸಲರ ದಾಳಿಗಳು ಕಡಿಮೆಯಾಗಿವೆ. 2015 ಕ್ಕೆ ಹೋಲಿಸಿದರೆ 2017 ರಲ್ಲಿ ನಕ್ಸಲರ ದಾಳಿ ಶೇಕಡಾ 20 ಪ್ರತಿಶತದಷ್ಟು ಕಡಿಮೆಯಾಗಿದೆ. ಅದೇ ವೇಳೆಗೆ ನಕ್ಸಲರನ್ನು ಬಂಧಿಸುವ ಪ್ರಕ್ರಿಯೆಯು 55 ಪ್ರತಿಶತದಷ್ಟು ಹೆಚ್ಚಾಗಿದೆ!

ನೋಟು ಅಮಾನ್ಯೀಕರಣ ನಕ್ಸಲರಿಗೆ ಬರುತ್ತಿದ್ದ ಹಣವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ನಕ್ಸಲರು ತಮಗೆ ಬೇಕಾದ ಹಣವನ್ನು ಪ್ರತಿ ವರ್ಷ ಸಂಗ್ರಹಿಸುತ್ತಾರೆ. ಅಧ್ಯಯನದ ನಂತರ ತಿಳಿದು ಬಂದ ವಿಷಯವೆಂದರೆ ವರ್ಷದಲ್ಲಿ ಮೂರು ಬಾರಿ ಹಣವನ್ನು ಸಂಗ್ರಹಿಸುತ್ತಾರೆ. ಛತ್ತೀಸ್ ಘಡ ಒಂದರಲ್ಲೇ ನಕ್ಸಲರಿಗೆ ವರ್ಷವೊಂದಕ್ಕೆ ಸಂಗ್ರಹವಾಗುವ ಹಣ ಸುಮಾರು 350 ರಿಂದ 400 ಕೋಟಿ ರೂಪಾಯಿ! ನೋಟು ಅಮಾನ್ಯೀಕರಣದಿಂದ ದೊಡ್ಡ ಮುಖಬೆಲೆಯ ನೋಟುಗಳ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದ್ದಷ್ಟೇ ಅಲ್ಲದೇ ಅವರು ಅದಾಗಲೇ ಕೂಡಿಟ್ಟಿದ್ದ ಹಣವನ್ನು ಉಪಯೋಗಕ್ಕೆ ಬಾರದಂತೆ ಮಾಡಿದ್ದು ಸತ್ಯ! ಹಣ ಸಂಗ್ರಹವಾಗದ ಕಾರಣ ಅವರಿಗೆ ದಾಳಿ ನಡೆಸಲು ಬೇಕಾದ ವಸ್ತುಗಳು, ಆಯುಧಗಳು ಸರಿಯಾಗಿ ಸಿಗದೇ ಹೋಯಿತು. ಈ ಕಾರಣಕ್ಕಾಗಿ ಅವರು ಸೇನೆಯ ವಿರುದ್ಧ ರಚಿಸಿದ್ದ ದಾಳಿಗಳು 20 ಪ್ರತಿಶತದಷ್ಟು ಕಡಿಮೆಯಾಗಿವೆ.

ಮಾಹಿತಿಯ ಕೊರತೆ ಮತ್ತು ಸ್ಥಳೀಯರ ಬೆಂಬಲ ಇವು ಛತ್ತೀಸ್ ಘಡದಲ್ಲಿ ಸೇನೆಯ ಎದುರಿಗಿದ್ದ ಅತ್ಯಂತ ದೊಡ್ಡ ಸವಾಲಾಗಿತ್ತು. ನಕ್ಸಲರ ಬಳಿ ಸಂಪನ್ಮೂಲಗಳಿದ್ದದ್ದರಿಂದ ಅವರಿಗೆ ಸ್ಥಳೀಯರ ಬೆಂಬಲ ಸಹಜವಾಗಿಯೇ ದೊರೆಯುತ್ತಿತ್ತು. ನೋಟು ಅಮಾನ್ಯೀಕರಣದಿಂದ ನಕ್ಸಲರಲ್ಲಿ ಉಂಟಾದ ಸಮಸ್ಯೆಗಳು ಅವರನ್ನು ಸ್ಥಳೀಯರಿಂದ ಸ್ವಲ್ಪ ಮಟ್ಟಿಗೆ ದೂರವಿರಿಸಿತ್ತು. ಸೇನೆ ಇದನ್ನು ಲಾಭವಾಗಿಸಿಕೊಂಡು ಸ್ಥಳೀಯರಿಗೆ ಜಾಗೃತಿ ಕಾರ್ಯಕ್ರಮ, ನೈತಿಕ ಪ್ರಜ್ಞೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಔಷಧಿಗಳು ಇನ್ನಿತರ ಮುಖ್ಯ ಗೃಹೋಪಯೋಗಿ ವಸ್ತುಗಳನ್ನು ಅಧಿಕಾರಿಗಳು ಜನರಿಗೆ ಹಂಚಲು ಪ್ರಾರಂಭಿಸಿದರು. ನಕ್ಸಲರೊಂದಿಗಿದ್ದ ಜನ ಬೆಂಬಲ ಸಹಜವಾಗಿ ಈಗ ಸೇನೆಗೆ, ಸರ್ಕಾರಕ್ಕೆ ಒದಗಿತು. ಜನರು ನಕ್ಸಲರ ಕುರಿತ ಹಲವು ಮಾಹಿತಿಗಳನ್ನು ಸೇನೆಯಲ್ಲಿ, ಪೊಲೀಸರಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದರು.

ಅಷ್ಟೇ ಅಲ್ಲ, ನೋಟು ಅಮಾನ್ಯೀಕರಣದ ನಂತರ ಹಲವು ನಕ್ಸಲರು ಬಂದು ಶರಣಾಗಿದ್ದಾರೆ. ದಾಳಿ ನಡೆಸಲು ಸಂಪನ್ಮೂಲಗಳ ಕೊರತೆಯೇ ಇದಕ್ಕೆ ಮುಖ್ಯಕಾರಣವೆನ್ನಬಹುದು. ಎಲ್ಲದಕ್ಕಿಂತ ಬಹುದೊಡ್ಡ ಸಾಧನೆಯೆಂದರೆ ಅರ್ಬನ್ ನಕ್ಸಲರನ್ನು ಬಂಧಿಸಿದ್ದು. ವಿಶ್ವವಿದ್ಯಾಲಯಗಳಲ್ಲಿ, ಪತ್ರಕರ್ತರ ಸೋಗಿನಲ್ಲಿ, ಇನ್ನೂ ಹತ್ತು ಹಲವು ಜಾಗಗಳಲ್ಲಿ ಇರುವ ಇವರು ತಮ್ಮ ಅಜೆಂಡಾವನ್ನು ಹೋದೆಡೆಯೆಲ್ಲಾ ಬಿತ್ತುತ್ತಾರೆ. ಅವರ ಮುಖವಾಡ ಕಳಚಿದಾಗ ಮಾಧ್ಯಮಗಳ ಮುಂದೆ ಬಂದು ಅರಚಾಡುತ್ತಾರೆ. ಇತ್ತೀಚೆಗಷ್ಟೇ ಕಬೀರ್ ಕಲಾ ಮಂಚ್ ಎನ್ನುವ ಸಂಸ್ಥೆಯ ಕೆಲವು ಸದಸ್ಯರನ್ನು ಅರ್ಬನ್ ನಕ್ಸಲರೆಂದು ಬಂಧಿಸಲಾಯ್ತು. ಇಂತಹ ಹಲವು ಸಂಸ್ಥೆಗಳನ್ನು ಅದಾಗಲೇ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿದೆ.

ಕೇಂದ್ರ ಸರ್ಕಾರ ನಕ್ಸಲರನ್ನು ಮಟ್ಟ ಹಾಕಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಅದರಲ್ಲಿ ನೋಟು ಅಮಾನ್ಯೀಕರಣವೂ ಒಂದು. ಇತ್ತ ನಗರದ ನಕ್ಸಲರ ಜುಟ್ಟು ಹಿಡಿಯುತ್ತಿದ್ದಂತೆ ಅತ್ತ ಕಾಡುಗಳಲ್ಲಿರುವ ನಕ್ಸಲರು ಬಂದು ಶರಣಾಗುತ್ತಿದ್ದಾರೆ. ಸದ್ಯದಲ್ಲೇ ಭಾರತವನ್ನು ನಕ್ಸಲ್ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಸರ್ಕಾರ ಕೈಗೆತ್ತುಕೊಂಡಿದೆ.

Click to comment

Leave a Reply

Your email address will not be published. Required fields are marked *

Most Popular

To Top