National

ನೀರಿನ ವಿಚಾರದಲ್ಲಿ ರಾಕ್ಷಸರು ನಾವೇ!

ಕಳೆದ ಮೋದಿ ಸಕರ್ಾರಕ್ಕೆ ಶೌಚಾಲಯ ಎಂಬುದು ಹೇಗೆ ಆದ್ಯತೆಯ ವಿಷಯವಾಗಿತ್ತೋ ನಿಸ್ಸಂಶಯವಾಗಿ ಈ ಬಾರಿ ನೀರು ಆಗಿರಲಿದೆ. ಅದಾಗಲೇ ಈ ಮುನ್ಸೂಚನೆ ಕೇಂದ್ರಸಕರ್ಾರ ತೋರಲಾರಂಭಿಸಿದೆ. ಈ ಜಾಗೃತಿ ಕನಿಷ್ಠ ಎರಡು ದಶಕಗಳ ಹಿಂದೆಯಾದರೂ ನಮಗೆ ದಕ್ಕಬೇಕಿತ್ತು. ನೀರಾವರಿಗಾಗಿ ದೊಡ್ಡ-ದೊಡ್ಡ ಯೋಜನೆಗಳನ್ನು ಮಾಡುತ್ತಾ ನೀರಿನ ಮೂಲಗಳನ್ನು, ಸೆಲೆಗಳನ್ನು ಉಳಿಸುವ ಪ್ರಯತ್ನ ನಾವೆಂದಿಗೂ ಮಾಡಲೇ ಇಲ್ಲ. ಈಗಲೂ ಅದೇ ಗುಂಗಿನಲ್ಲಿರುವುದು ದುರದೃಷ್ಟಕರ. ಕೊನೆಯಪಕ್ಷ ಹೊಸ ಸಕರ್ಾರದ ಪರಿಕಲ್ಪನೆಗಳಾದರೂ ಭಿನ್ನ ಮಾರ್ಗದಲ್ಲಿ ಹೆಜ್ಜೆಯಿಟ್ಟರೆ ಭವಿಷ್ಯ ಸಾರ್ಥಕವಾಗುತ್ತದೆ.

ಹಸಿರುಕ್ರಾಂತಿಯಾದಾಗಿನಿಂದಲೂ ದೇಶದ ನೀರಿನ ಪರಿಸ್ಥಿತಿ ಹದಗೆಡುತ್ತಲೇ ಹೋಯ್ತು. ಹೆಚ್ಚು-ಹೆಚ್ಚು ಉತ್ಪಾದಿಸಲು ಹೆಚ್ಚು ಗೊಬ್ಬರ ಹಾಕಬೇಕು, ಬೆಳೆಗಳಿಗೆ ಹೆಚ್ಚು ನೀರು ಕೊಡಬೇಕು ಎಂಬುದು ಸಾರ್ವತ್ರಿಕ ಮಂತ್ರವಾಯ್ತು. ಆನಂತರವೇ ದೊಡ್ಡ-ದೊಡ್ಡ ಅಣೆಕಟ್ಟುಗಳ ಕಲ್ಪನೆ ನಮ್ಮ ತಲೆ ಹೊಕ್ಕಿದ್ದು. ಬೋರ್ವೆಲ್ಗಳನ್ನು ಕೊರೆದು ಭೂಮಿಯ ಆಳದಲ್ಲಿರುವ ನೀರನ್ನು ಬಗೆದು ತೆಗೆದು ನೀರುಣಿಸುವ ಪ್ರಕ್ರಿಯೆ ವ್ಯಾಪಕಗೊಂಡಿದ್ದು ಆನಂತರವೇ. ಅಚ್ಚರಿಗೊಳ್ಳುವಿರಿ. ಭಾರತ ಅಮೇರಿಕಾ, ಚೀನಾವನ್ನು ಹಿಂದಿಕ್ಕಿ ಭೂಮಿಯ ಆಳದ ನೀರನ್ನು ಬಳಸುವ ರಾಷ್ಟ್ರವಾಗಿ ಮಾರ್ಪಟ್ಟುಬಿಟ್ಟಿದೆ. ಜಗತ್ತಿನಲ್ಲಿರುವ ಒಟ್ಟು ಭೂಮಿಯಡಿಯ ನೀರಿನ ಶೇಕಡಾ 25ರಷ್ಟನ್ನು ನಾವೇ ತೆಗೆದು ಖಾಲಿ ಮಾಡುತ್ತಿದ್ದೇವೆ. ಬರೋಬ್ಬರಿ ಕಾಲುಭಾಗ! 60ರ ದಶಕದಲ್ಲಿ ಕೃಷಿಗೆ ಶೇಕಡಾ 35ರಷ್ಟು ಅಂತರ್ಜಲ ಬಳಸುತ್ತಿದ್ದ ನಾವು ಈಗ ಶೇಕಡಾ 70ರ ಮಟ್ಟಕ್ಕೆ ಬಂದು ನಿಂತಿದ್ದೇವೆ. ಬೋರ್ವೆಲ್ ಕೊರೆಯದೇ ನೀವು ಕೃಷಿ ಮಾಡುವುದು ಅಸಾಧ್ಯವೇ ಸರಿ ಎಂಬ ಸ್ಥಿತಿ ಮುಟ್ಟಿದ್ದೇವೆ. ನಮ್ಮ ಪಾಲಿಗೆ ಕುಡಿಯುವ ನೀರಿನ ಸ್ರೋತವೂ ಈಗ ಅಂತರ್ಜಲವೇ! ಖ್ಯಾತ ಸಸ್ಯವಿಜ್ಞಾನಿ ಎಲ್ಲಪ್ಪ ರೆಡ್ಡಿಯವರು ಒಮ್ಮೆ ಹೇಳಿದ್ದು ಚೆನ್ನಾಗಿ ನೆನಪಿದೆ. ವಿಮಾನದಲ್ಲಿ ಅವರಿಗೆ ಕೊಟ್ಟ ನೀರಿನ ಬಾಟಲಿಯ ಮೇಲೆ ಕೋಲಾರದಿಂದ ಸಂಗ್ರಹಿಸಿದ್ದು ಎಂದು ಬರೆಯಲಾಗಿತ್ತಂತೆ. ಕೋಲಾರದಲ್ಲಿ ಅಂತರ್ಜಲ ಮಟ್ಟ ಅದೆಷ್ಟು ಕುಸಿದಿದೆಯೆಂದರೆ ಆ ನೀರು ಕುಡಿಯಲು ಯೋಗ್ಯವಲ್ಲವೆಂದು ಅಧಿಕೃತ ವರದಿಯೇ ಇದೆ. ಆದರೆ ಅದನ್ನೂ ಒಮ್ಮೆ ಶುದ್ಧೀಕರಣ ಘಟಕಕ್ಕೆ ಹಾಯಿಸಿ ಕುಡಿಸಿಯೇ ಬಿಡುತ್ತಾರೆ ಅಂತ. ಜಗತ್ತಿನ ಸುಮಾರು ಶೇಕಡಾ 20ರಷ್ಟು ಜನಸಂಖ್ಯೆ ಹೊಂದಿರುವ ಭಾರತಕ್ಕೆ ಬಳಕೆಗೆ ಯೋಗ್ಯವಾದ ನೀರು ಜಗತ್ತಿನ 4 ಪ್ರತಿಶತದಷ್ಟು ಮಾತ್ರ ಸಿಗುವುದಂತೆ. ಭಾರತ ದರ್ಶನ ಖ್ಯಾತಿಯ ವಿದ್ಯಾನಂದ ಶೆಣೈ ಅವರು ಭಾರತದಲ್ಲಿ ಹರಿಯುವ ನದಿಗಳ ಹೆಸರನ್ನು ಹೇಳುವಾಗ ಕೂದಲು ನಿಮಿರಿ ನಿಲ್ಲುತ್ತಿತ್ತು. ಅದೇ ನಾಡಿನಲ್ಲಿ ಶುದ್ಧನೀರಿನ ಪ್ರಮಾಣ ಇಷ್ಟು ಕಡಿಮೆ ಎಂಬ ಅಂಕಿ-ಅಂಶವನ್ನು ಕೇಳಿದರೆ ನಂಬುವುದಸಾಧ್ಯವೇ ಸರಿ. ಹೀಗೆ ಶುದ್ಧನೀರಿಲ್ಲದಿರುವುದರಿಂದಲೇ ದೇಶದ ಕಾಲುಭಾಗದಷ್ಟು ರೋಗಿಗಳು ನಿಮರ್ಾಣವಾಗುತ್ತಿದ್ದಾರೆಂಬುದು ಗಾಬರಿ ಹುಟ್ಟಿಸುವ ಅಂಶವೇ! ದಕ್ಷಿಣ ಆಫ್ರಿಕಾದ ಡರ್ಬನ್ಗೆ ಹೋಗಿದ್ದಾಗ ಆಶ್ರಮದ ಕೋಣೆಯಲ್ಲಿ ನೀರು ಕುಡಿಯುವ ಜಗ್ಗೊಂದು ಖಾಲಿಯಾಗಿತ್ತು. ಅಲ್ಲಿನ ಸ್ವಾಮೀಜಿಯವರನ್ನು ಕುಡಿಯುವ ನೀರಿಗಾಗಿ ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಕ್ಕೆ ನಗುತ್ತಾ ‘ಇಲ್ಲಿನ ಸ್ನಾನದ ಕೋಣೆಯಲ್ಲಿ ಬರುವ ನೀರೂ ಕುಡಿಯಬಹುದು’ ಎಂದಿದ್ದು ಈಗಲೂ ನೆನಪಾಗುತ್ತದೆ. ಇತ್ತೀಚೆಗೆ ಮುಂಬೈನಲ್ಲಿ ಹೀಗೊಂದು ಪ್ರಯತ್ನವಾಗಿದೆ ಎಂದು ಹೇಳುತ್ತಾರೆ. ಕಳೆದ 70 ವರ್ಷಗಳಲ್ಲಿ ನೀರನ್ನು ಭೂಮಿಯಿಂದ ತೆಗೆಯುವ, ಅದನ್ನು ಎಲ್ಲೆಡೆ ಸೂಕ್ತವಾಗಿ ತಲುಪಿಸುವ ಸಮರ್ಪಕವಾದ ವ್ಯವಸ್ಥೆಯನ್ನೇ ನಾವು ಮಾಡಲಾಗಲಿಲ್ಲ. ಸ್ವಚ್ಛತೆಯ ಅರಿವಿನ ಕೊರತೆ ಎಷ್ಟಿದೆಯೆಂದರೆ ನೀರನ್ನು ನಾವು ಹಾಳುಮಾಡಿದಷ್ಟು ಜಗತ್ತಿನಲ್ಲಿ ಮತ್ತ್ಯಾರೂ ಕಲುಷಿತಗೊಳಿಸಲಿಕ್ಕಿಲ್ಲ. ಹಾಗಂತ ಇದು ಓದು ಬರಹ ಗೊತ್ತಿರದ ಅನಕ್ಷರಸ್ಥರು ಮಾಡುವ ಕೆಲಸ ಎಂದುಕೊಳ್ಳಬೇಡಿ. ದೇಶದ ಖ್ಯಾತ ಕೈಗಾರಿಕೋದ್ಯಮಿಗಳೆಂದು ಹೆಸರು ಪಡೆದವರೂ ಕೂಡ ಇಂಥದ್ದೇ ಕೆಲಸ ಮಾಡುತ್ತಾರೆ. ಬೆಂಗಳೂರಿನ ಆನೇಕಲ್ ಭಾಗಕ್ಕೆ ಎಂದಾದರೂ ಭೇಟಿಕೊಡಿ. ಅಲ್ಲಿರುವ ದೊಡ್ಡ ದೊಡ್ಡ ಕಂಪೆನಿಗಳು ತಮ್ಮ ರಾಸಾಯನಿಕ ತ್ಯಾಜ್ಯವನ್ನು ಒಂದಿನಿತೂ ಸಂಸ್ಕರಿಸದೇ ಸ್ಥಳೀಯ ಕೆರೆಗಳಿಗೋ ಅಥವಾ ಮೊದಲ ಮಳೆಯೊಂದಿಗೆ ಮೋರಿಗೋ ಬಿಟ್ಟುಬಿಡುತ್ತಾರೆ. ಈ ನೀರು ಕ್ರಮೇಣ ಭೂಮ್ಯಾಳಕ್ಕೆ ಇಳಿದು ಅಂತರ್ಜಲವನ್ನೂ ಕೂಡ ಕಲುಷಿತಗೊಳಿಸುತ್ತಿವೆ. ನೂರಾರು ಕೋಟಿರೂಪಾಯಿ ದುಡ್ಡು ಮಾಡಬೇಕೆಂಬ ಭೂತದ ಸವಾರಿಯಾದರೆ ಉಳಿದಿದ್ದೇನೂ ಕಣ್ಣಿಗೆ ಕಾಣುವುದಿಲ್ಲವೆನ್ನುವುದು ಈ ಕಾರಣಕ್ಕೇ!


2016ರಲ್ಲಿ ಮಹಾರಾಷ್ಟ್ರದ ಲಾತೂರು ನೀರಿನ ಕೊರತೆಯಿಂದ ಬಳಲಿ ಬೆಂಡಾದದ್ದು ನೆನಪಿರಬೇಕು. ಕೃಷಿ ಕಾರ್ಯವಿರಲಿ ಜನ ಕುಡಿಯಲೂ ನೀರಿಲ್ಲದೇ ಪರಿತಪಿಸಿದಾಗ ರೈಲ್ವೇ ಟ್ಯಾಂಕರುಗಳಲ್ಲಿ ನೀರು ತಲುಪಿಸಬೇಕಾದ ಸ್ಥಿತಿ ಒದಗಿತ್ತು. ಈ ಬಾರಿ ಚೆನ್ನೈಗೂ ಅದೇ ಸ್ಥಿತಿ ಬಂದಿದೆ. ಇನ್ನೊಂದೇ ವರ್ಷದಲ್ಲಿ ಬೆಂಗಳೂರು ಕುಡಿಯುವ ನೀರಿಲ್ಲದೇ ಹಾಹಾಕಾರಗೈಯ್ಯಲಿದೆ ಎಂಬುದು ವಿಜ್ಞಾನಿಗಳ ಅಂಬೋಣ. ದೆಹಲಿ ಅದಾಗಲೇ ಭಯಾನಕವಾದ ನೀರಿನ ಸಮಸ್ಯೆ ಎದುರಿಸುತ್ತಿದೆ. ಪ್ರತಿನಿತ್ಯ ಸಾವಿರದನೂರು ದಶಲಕ್ಷ ಗ್ಯಾಲನ್ಗಳಷ್ಟು ನೀರು ಬೇಕಿದ್ದು, ಪೂರೈಸಲು ಸಾಧ್ಯವಾಗುತ್ತಿರೋದು 900 ದಶಲಕ್ಷ ಗ್ಯಾಲನ್ಗಳು ಮಾತ್ರ. ಇದನ್ನು ಸುಮಾರು 200 ಕಿಲೋಮೀಟರ್ ದೂರದಿಂದ ತಂದು ಒದಗಿಸಲಾಗುತ್ತಿದೆ ಎಂಬುದು ಪ್ರತಿಯೊಬ್ಬ ಪ್ರಜ್ಞಾವಂತನೂ ನಾಚಬೇಕಾದ ವಿಚಾರವೇ! ಬೆಂಗಳೂರಿನ ಪರಿಸ್ಥಿತಿಯೇನೂ ಕಡಿಮೆಯಿಲ್ಲ. ನಮಗೂ ಕಾವೇರಿಯ ನೀರೇ ಪೈಪುಗಳ ಮೂಲಕ ಬರಬೇಕು. ಹೆಚ್ಚು-ಕಡಿಮೆ ನೂರು ಕಿಲೋಮೀಟರ್ ದೂರ ಕಾವೇರಿ ಪೈಪುಗಳಲ್ಲಿ ಕ್ರಮಿಸಿ ಅಪಾಟರ್್ಮೆಂಟುಗಳ ನಲ್ಲಿಗಳಲ್ಲಿ ಹರಿಯುತ್ತಾಳೆ. ಹಾಗೆ ನೋಡಿದರೆ ಪ್ರತಿ ದೊಡ್ಡ ನಗರವೂ ರಾಕ್ಷಸರಂತೆಯೇ. ತಾನು ತನ್ನ ನೀರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡದೇ ಬೇರೆಯವರ ಪಾಲಿನ ನೀರಿಗೆ ಬಾಯ್ತೆರೆದು ಕುಳಿತುಕೊಂಡಿರುತ್ತದೆ. ಕಾವೇರಿಯ ನೀರು ಸಾಲದೆಂದಾದಾಗ ಬೆಂಗಳೂರು ಶರಾವತಿಯತ್ತ ಮುಖಮಾಡಿ ಕುಳಿತಿದೆ. ಅಘನಾಶಿನಿ ನೀರನ್ನು ತಂದುಬಿಡೋಣವೆಂದು ಯೋಚಿಸುತ್ತಿದೆ. ನೇತ್ರಾವತಿಯ ನೀರನ್ನು ಕೋಲಾರಕ್ಕೆ ಕೊಡುತ್ತೇವೆಂದು ಸಾವಿರಾರು ಕೋಟಿರೂಪಾಯಿ ವ್ಯಯಿಸಿದರಲ್ಲಾ ಅದರಂತೆ ಈ ಆಲೋಚನೆ ಕೂಡ. ಈ ಬಾರಿ ಮಳೆಯಿಲ್ಲದೇ ನೇತ್ರಾವತಿಯೇ ಸೊರಗಿ ಹೋಗಿತ್ತಲ್ಲಾ ಆಗೇನು?! ಮುಂದೊಮ್ಮೆ ಶರಾವತಿಯೋ ಅಘನಾಶಿನಿಯೋ ಸೊರಗಿಬಿಟ್ಟರೆ ನೀರು ತರುವುದೆಲ್ಲಿಂದ? ಈ ಪ್ರಶ್ನೆಗೆ ಉತ್ತರ ಈಗಲೇ ಹುಡುಕಿಕೊಳ್ಳಬೇಕಿದೆ. ಇಲ್ಲವಾದರೆ ನಮ್ಮ ಮಕ್ಕಳು-ಮೊಮ್ಮಕ್ಕಳಿಗಲ್ಲ, ನಮ್ಮ ವೃದ್ಧಾಪ್ಯದ ಕಾಲವೇ ಭೀಕರವಾಗಿರಲಿದೆ!


ಕುಕ್ಕೆ ಸುಬ್ರಹ್ಮಣ್ಯ ನಮ್ಮಲ್ಲಿ ಗೊತ್ತಿರದವ್ಯಾರೂ ಇಲ್ಲ. ನಾಗಾರಾಧನೆಯ ದೃಷ್ಟಿಯಿಂದ ಅತ್ಯಂತ ಪವಿತ್ರವಾದ ಕ್ಷೇತ್ರವದು. ಅಲ್ಲೊಂದು ದರ್ಪಣತೀರ್ಥವೆಂಬ ನದಿ ಹರಿದು ಕುಮಾರಧಾರವೆಂಬ ನದಿಯನ್ನು ಸೇರಿಕೊಳ್ಳುತ್ತದೆ. ದರ್ಪಣತೀರ್ಥವಂತೂ ಕುಡಿಯುವುದಿರಲಿ ಮುಟ್ಟಲಿಕ್ಕೂ ಆಗದ ಸ್ಥಿತಿ ತಲುಪಿಬಿಟ್ಟಿದೆ. ಕುಮಾರಧಾರಾ ಕಣ್ಣಿಗೆ ಕಾಣುವಷ್ಟು ಮಾತ್ರ ಸ್ವಚ್ಛವೆನಿಸುತ್ತದೆ. ನೀವೇನಾದರೂ ನದಿಯ ಜಾಡು ಅರಸಿ ಹೊರಟಿರೋ ನಿಮ್ಮನ್ನು ದೇವರೇ ಕಾಪಾಡಬೇಕು. ಅಭಿವೃದ್ಧಿಯ ಹೆಸರಲ್ಲಿ ನಾವು ಹೊಟೆಲ್ಲುಗಳನ್ನು ಲಾಡ್ಜುಗಳನ್ನು ನಿಮರ್ಿಸಿದ್ದೇವೆ ನಿಜ. ಬೃಹತ್ ವಸತಿ ಸಂಕೀರ್ಣಗಳು ಅಲ್ಲಿ ತಲೆಯೆತ್ತಿವೆ. ನಾನು ಅದನ್ನು ಖಂಡಿತ ವಿರೋಧಿಸಲಾರೆ. ಹೊರಗಿನ ಜನ ಬರಬೇಕು, ಉಳಿಯಬೇಕು, ಪ್ರವಾಸಿ ಸಂಬಂಧಿ ಉದ್ದಿಮೆ ಬೆಳೆಯಬೇಕು ಎಂಬ ಆಶಯ ನಮಗೆಲ್ಲರಿಗೂ ಇದ್ದದ್ದೇ. ಅದು ಸಾವಿರಾರು ಜನರಿಗೆ ಉದ್ಯೋಗ ಕೊಡುತ್ತದೆ. ಆದರೆ ಅದಕ್ಕೆ ತಕ್ಕೆಂತೆ ನಾವು ಸನ್ನದ್ಧರಾಗದೇ ಹೋದರೆ ಭವಿಷ್ಯದ ಜನಾಂಗದಿಂದ ತೀರ್ಥವನ್ನೂ ಕ್ಷೇತ್ರವನ್ನೂ ಕಸಿದುಕೊಂಡಂತಾಗಿಬಿಡುತ್ತದೆ. ಕುಕ್ಕೆಯ ಕಥೆ ಅದೇ ಆಗಿದೆ. ಅಲ್ಲಿನ ಜಲಶುದ್ಧೀಕರಣ ಘಟಕ ಕಟ್ಟಡವಷ್ಟೇ ಇದೆ. ಅನೇಕ ತಿಂಗಳುಗಳಿಂದ ಕೆಲಸ ಮಾಡುತ್ತಿಲ್ಲ. ಏಕೆ ಕೆಲಸ ಮಾಡುತ್ತಿಲ್ಲವೆಂಬುದಕ್ಕೆ ಅದನ್ನು ನೋಡಿಕೊಳ್ಳುವ ತಂಡದ ಬಳಿ ಸಮಸ್ಯೆಗಳು ಬೇಕಾದಷ್ಟಿವೆ. ಪರಿಹಾರ ಮಾತ್ರ ಯಾರ ಬಳಿಯೂ ಇಲ್ಲ! ಶುದ್ಧವಾದ ನದಿಗೆ ನಾವು ಇಡಿಯ ಊರಿನ ಕೊಳಕನ್ನು ಹಾಗು ಹಾಗೆಯೇ ತಳ್ಳಿ ಕೊಳಕು ಚರಂಡಿಯಾಗಿ ಮಾರ್ಪಡಿಸಿಬಿಟ್ಟಿದ್ದೇವೆ. ನಮ್ಮ ತೆರಿಗೆ ಹಣವನ್ನು ಬಳಸಿದ್ದಾರೆ ನಿಜ. ಆದರೆ ಅದರ ಲಾಭ ಮಾತ್ರ ಮರಳಿ ನಮಗೆ ಸಿಗುತ್ತಿಲ್ಲ. ಇದನ್ನು ಗಮನಿಸಬೇಕಾದ ಜನಪ್ರತಿನಿಧಿಗಳಿಗೆಲ್ಲಾ ಇದೊಂದು ಸಮಸ್ಯೆ ಎನಿಸುವುದೇ ಇಲ್ಲವೆಂದರೆ ಏನು ಹೇಳಬೇಕು! ಈಗ ಮೋದಿ ಜಲಜೀವನವೆನ್ನುತ್ತಿದ್ದಾರೆ, ಜಲಶಕ್ತಿ ಎನ್ನುತ್ತಿದ್ದಾರೆ.


ನಮ್ಮ ಜನಪ್ರತಿನಿಧಿಗಳು ಆಲಸ್ಯದ ಮುದ್ದೆಯಾಗಿ ವ್ಯವಸ್ಥೆಗಿಂತ ಹೆಚ್ಚು ತಾವೇ ಜಡ್ಡುಗಟ್ಟಿಹೋಗಿಬಿಟ್ಟರೆ ತಿದ್ದಬೇಕಾದ್ದು ಯಾರು? ಯಾವಾಗಲಾದರೂ ತುಂಗೆ ಹರಿಯುವ ಶಿವಮೊಗ್ಗಕ್ಕೆ ಹೋಗಿಬನ್ನಿ. ಊರಿನ ಅಷ್ಟೂ ಕೊಳಕನ್ನು ಶುದ್ಧಗೊಳಿಸಲೆಂದು ಶುದ್ಧೀಕರಣ ಘಟಕವನ್ನೇನೋ ನಿಮರ್ಿಸಿಬಿಟ್ಟಿದ್ದಾರೆ. ನಮ್ಮೆಲ್ಲಾ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕಟ್ಟಡ ನಿಮರ್ಿಸುವುದರಲ್ಲಿ ಅಪಾರವಾದ ಆಸಕ್ತಿ. ಅದಕ್ಕೆ ಕಾರಣ ಹುಡುಕುವುದು ಬಲುಕಷ್ಟವೇನಲ್ಲ. ಆದರೆ ಕಟ್ಟಿದ ಕಟ್ಟಡ ಕೆಲಸ ಮಾಡುವಂತೆ ಮಾಡುವಲ್ಲಿ ಮಾತ್ರ ಅವರ ಆಸಕ್ತಿಯೇ ಇಲ್ಲ. ಶಿವಮೊಗ್ಗದಲ್ಲಿ ನಿಮರ್ಾಣಗೊಂಡಿರುವ ಘಟಕ ಇದುವರೆಗೂ ಒಂದು ಹನಿ ಚರಂಡಿ ನೀರನ್ನೂ ಶುದ್ಧೀಕರಣಗೊಳಿಸಿದ್ದು ಸುಳ್ಳು. ಇನ್ನೊಂದೆರಡು ವರ್ಷ ಕಳೆದರೆ ಅದರ ರಿಪೇರಿಗೆಂದೇ ಮತ್ತಷ್ಟು ಲಕ್ಷ ಖಚರ್ು ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಮಂಗಳೂರಿಗರು ಕುಡಿಯುವ ನೀರಿನ ಕಥೆಯೂ ಹೀಗೇ ಇದೆ. ತುಂಬೆ ಜಲಾಶಯದ ಬಳಿ ಕೊಳಚೆಯ ನೀರು ನಿಂತಿರುವ ಪರಿಸ್ಥಿತಿ ಕಂಡರೆ ಎಂಥವನೂ ಒಮ್ಮೆ ಬೆಚ್ಚಿಬಿದ್ದಾನು. ಈ ಪರಿಯ ಬೇಜವಾಬ್ದಾರಿ ಅಸಹನೀಯ. ಇದರಲ್ಲಿ ನಮ್ಮ ಕೊಡುಗೆಯೂ ಇದೆ. ಸ್ವಚ್ಛತೆಯ ದೃಷ್ಟಿಕೋನವೇ ನಮ್ಮಲ್ಲಿಲ್ಲ. ನದಿ ಪವಿತ್ರಗೊಳಿಸುವ ದೇವತೆ ಎಂದು ನಾವು ಭಾವಿಸಿರೋದೇ ಎಲ್ಲಾ ಸಮಸ್ಯೆಗಳಿಗೂ ಮೂಲ. ಹೀಗಾಗಿಯೇ ನಮ್ಮ ಮನೆಯಲ್ಲಿ ಬೇಕಾಗಿದ್ದು ಬೇಡವಾಗಿದ್ದೆಲ್ಲವನ್ನೂ ತಂದು ನದಿಗೆ ಸುರಿದುಬಿಡುತ್ತೇವೆ. ಇತ್ತೀಚೆಗೆ ಭೀಮಾನದಿಯನ್ನು ಸ್ವಚ್ಛಗೊಳಿಸುವಾಗ ಔಷಧಿ ಅಂಗಡಿಗಳಲ್ಲಿ ಉಳಿದಿರುವ ದಿನಾಂಕ ಮೀರಿದ ಔಷಧಿ ಎಲ್ಲವನ್ನೂ ಸೇತುವೆಯಿಂದ ಚೆಲ್ಲಿಹೋಗಿದ್ದು ಕಂಡುಬಂತು. ತೀರಿಕೊಂಡವರ ಬಟ್ಟೆ-ಬರೆ ಸಾಮಾನು ಸರಂಜಾಮುಗಳು ನದಿಯಲ್ಲಿ ನಿಮಗೆ ಸಿಗುವುದು ಸವರ್ೇಸಾಮಾನ್ಯ. ಯಾತ್ರಿಕರು ತಮ್ಮ ಗಾಡಿಗಳನ್ನು ನದಿ ನೀರಿನಲ್ಲಿ ತೊಳೆಯುವಾಗ ನದಿಯೊಳಗೆ ಸೇರಿಕೊಳ್ಳುವ ತೈಲದ ಅಂಶವಂತೂ ಜಲಚರಗಳಿಗೂ ಮಾರಕ. ದೇವರದರ್ಶನಕ್ಕೆಂದು ಹೊರಡುವ ಯಾತ್ರಿಕರ ಕಥೆ ಬೇರೆಯೇ. ತಾವುಟ್ಟ ಬಟ್ಟೆಗಳನ್ನೆಲ್ಲಾ ನದಿಗೆ ದಾನವಾಗಿ ಕೊಟ್ಟೇ ಅವರು ಹೋಗೋದು. ಒಟ್ಟಾರೆ ಭೂಮೇಲ್ಮೈ ಸ್ರೋತವನ್ನು ಹೀಗೆ ಹಾಳುಮಾಡಿಕೊಂಡು ಅಂತರ್ಜಲವನ್ನು ಬರಿದುಗೊಳಿಸುತ್ತಾ ಹೋದರೆ ಮುಂದಿನ ದಿನಗಳು ಬಲುಕಷ್ಟವೇ. ಇಷ್ಟು ವಿಸ್ತಾರವಾದ ನದಿಗೆ ಸ್ವಲ್ಪ ಕೊಳಕನು ಜೀಣರ್ಿಸಿಕೊಳ್ಳುವ ತಾಕತ್ತಿಲ್ಲವೇ ಎಂದು ಕೇಳಿಕೊಳ್ಳಬೇಡಿ. ಗಂಗೆ-ಯಮುನೆಯರು ಕೊಳಕು ಸೇರ್ಪಡೆಯಿಂದಗಿಯೇ ಅಪಾಯದ ಹಂತವನ್ನು ಮುಟ್ಟಿದ್ದು. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ವೃಷಭಾವತಿ ಎಂಬ ನದಿ ಹರಿಯುತ್ತಿತ್ತು. ಇಂದು ಆ ನದಿಯ ಕುರಿತಂತೆ ಕೇಳಿದವರೇ ಇಲ್ಲ. ಅದನ್ನು ಬಹುತೇಕರು ಕೆಂಗೇರಿ ಮೋರಿ ಎಂದೇ ಕರೆಯುತ್ತಾರೆ. ಈ ನದಿ ಹುಟ್ಟಿ, ಇನ್ನಿತರ ಜಲಸ್ರೋತಗಳೊಂದಿಗೆ ಬೆರೆತು ಸುತ್ತಮುತ್ತಲಿನ ಜನರನ್ನು ತಣಿಸುತ್ತಿದ್ದಳಲ್ಲಾ; ನಿಧಾನವಾಗಿ ಆಕೆಗೆ ಚರಂಡಿಯ ನೀರನ್ನು ಬೆರೆಸುತ್ತಾ ಹೋದೆವು. ಬೆಂಗಳೂರು ಬೆಳೆದಂತೆಲ್ಲಾ ಹೀಗೆ ಸೇರುವ ಚರಂಡಿಯ ಪ್ರಮಾಣ ಹೆಚ್ಚುತ್ತಲೇ ಹೋಯ್ತು. ಅತ್ತ ಕೆರೆಗಳನ್ನು ಆಪೋಶನ ತೆಗೆದುಕೊಂಡು ಲೇಔಟ್ ಮಾಡುತ್ತಾ ಹೋದಂತೆ ಅಂತರ್ಜಲದ ಮಟ್ಟ ಕುಸಿದೂಬಿಟ್ಟಿತು. ನದಿ ಪೂರ್ಣ ಲುಪ್ತವೇ ಆಗಿಹೋಯ್ತು. ನರೇಂದ್ರಮೋದಿ ಈಗ ಹೊಸ ಕನಸನ್ನು ಬಿತ್ತಿದ್ದಾರೆ. ಮತ್ತೆ ಜಲಮೂಲಗಳನ್ನು ಉಳಿಸುವ ಸವಾಲು ಸ್ವೀಕಾರ ಮಾಡಿದ್ದಾರೆ. ಇದು ಸಕರ್ಾರದಿಂದ ಮಾತ್ರ ಆಗುವ ಕೆಲಸವಲ್ಲ. ನಾವೆಲ್ಲರೂ ಕೈಜೋಡಿಸಬೇಕಿದೆ. ನೀರಿನ ಬಳಕೆಯಿಂದ ಹಿಡಿದು ಹಾಳುಮಾಡಿರುವ ಜಲಮೂಲಗಳನ್ನು ಉಳಿಸುವವರೆಗೂ ಪ್ರಜ್ಞಾವಂತಿಕೆಯನ್ನು ತೋರ್ಪಡಿಸಬೇಕಿದೆ. ಮುಂದಿನ ಐದು ವರ್ಷ ರೈತರಿಗೆ ಸೇರಿದ್ದು. ಅವರಿಗೆ ನೀರು ಸಿಕ್ಕರೆ ಭಾರತ ಸಮೃದ್ಧಗೊಂಡಂತೆ. ಸವಾಲು ಸ್ವೀಕರಿಸಿಯೇ ಬಿಡೋಣ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top