Desi

ನಮ್ಮ ಹಳ್ಳಿಗಳ ಹಿತ್ತಲಿನಲ್ಲಿ ,ಬೇಲಿಗಳಲ್ಲಿ ಬೆಳೆಯುವ ಲಕ್ಕಿ ಸೊಪ್ಪು ಮನುಷ್ಯನ ಆರೋಗ್ಯದ ಸ್ಥಿರತೆಯನ್ನು ಕಾಯ್ದುಕೊಳ್ಳಲು ನಡೆಸುವ ಮ್ಯಾಜಿಕ್ ಗೊತ್ತೇನು?

ಎರಡು ಜಾತಿಯ ಲಕ್ಕಿ ಗಿಡಗಳಿರುತ್ತವೆ- ಕರಿ ಲಕ್ಕಿ & ಬಿಳಿ ಲಕ್ಕಿ. ಈ ಗಿಡಕ್ಕೊಂದು ದೈವಿಕ ಮಹತ್ವವೂ ಇದೆ, ಎಷ್ಟೋ ಕುಟುಂಬಗಳ ದೇವರ ಮರವೂ ಆಗಿರುತ್ತದೆ. 5 ಅಥವಾ 3 ಎಲೆಗಳನ್ನು ಹೊಂದಿರುವ ಈ ಲಕ್ಕಿ ಸೊಪ್ಪಿನ ಗಿಡಕ್ಕೆ ಸಂಸ್ಕೃತದಲ್ಲಿ “ನಿರ್ಗುಂಡಿ” ಎಂದು ಕರೆಯಲಾಗುತ್ತದೆ.ಶಿವಾರ್ಚನೆಗೆ ಬಿಲ್ವದ ನಂತರ ನಿರ್ಗುಂಡಿಯೇ ಪೂಜೆಗೆ ಶ್ರೇಷ್ಠವಂತೆ!!

“ತುಳಸಿ ಬಿಲ್ವ ನಿರ್ಗುಂಡಿ ಅಪಾಮಾರ್ಗ ಕಪಿಹ್ತಾಗು ಶಮಿ ಚ ಆಮ್ಲಕಮ್ ದೂರ್ವ ಅಷ್ಟ ಬಿಲ್ವ ಪ್ರಕೀರ್ತಿತಾಃ “- ಹೀಗೆ ಅಷ್ಟ ಬಿಲ್ವವೆಂದು ಪ್ರಸಿದ್ಧಿಗೊಂಡ ಪತ್ರೆಗಳಲ್ಲಿ ನಿರ್ಗುಂಡಿಯೂ ಒಂದು.

ಇಂತಹ ದೈವ ಸಂಸ್ಕಾರವನ್ನು ಹೊಂದಿರುವ ನಿರ್ಗುಂಡಿ ಅದೇನು ಚಮತ್ಕಾರ ಮಾಡಬಲ್ಲುದು ?- ಇದರಲ್ಲಿ ಅದಮ್ಯವಾದ ರೋಗ ನಿರೋಧಕ ಶಕ್ತಿ ಇದೆ, ಇದರ ಬಳಕೆಯು ದೇಹದೊಳಗಿನ ರೋಗಾಣುಗಳನ್ನು ಕೊಲ್ಲುವುದಿಲ್ಲ ಬದಲಾಗಿ ರೋಗಾಣುಗಳ ಪ್ರವೇಶಕ್ಕೆ ಆಸ್ಪದ ಕೊಡುವುದನ್ನು ತಡೆಯುತ್ತದೆ.

ಹಾಗಾದರೆ ಇದನ್ನು ಹೇಗೆಲ್ಲಾ ಬಳಸಬಹುದು ?
ನಿಮ್ಮ ಮನೆಯ ಆವರಣದಲ್ಲಿ ಒಂದಿಷ್ಟು ಮಣ್ಣಿನ ನೆಲವಿದ್ದರೆ ಸರಿ, ಇಲ್ಲವೇ ? ಮುರಿದ ಬಕೇಟಿನಲ್ಲೋ, ಒಂದು ಕುಂಡದಲ್ಲೋ ಮಣ್ಣು, ಗೊಬ್ಬರ ಮಿಶ್ರಣ ಮಾಡಿ ಒಂದು ಲಕ್ಕಿ ಸೊಪ್ಪಿನ ಕಡ್ಡಿಯನ್ನಾದರೂ ನೆಟ್ಟು ಬಿಡಿ ನೀವು ನೀರುಣಿಸುತ್ತಿದ್ದಂತೆ ಚಿಗುರೊಡೆದು ಆಳೆತ್ತರಕ್ಕೆ ಬೆಳೆದೇ ಬಿಡುತ್ತದೆ.

ಧಾರಾಳವಾಗಿ ನೀರನ್ನು ಮಾತ್ರ ಬಯಸುವ ನಿರ್ಗುಂಡಿ ಅಮೃತವನ್ನೇ ನೀಡುತ್ತದೆ ! ಬಿಲ್ವವಾಗಲಿ, ನೀರಗುಂಡಿಯಾಗಲಿ ಒಂದು ಎಲೆಯನ್ನು ಪತ್ರೆ ಎನ್ನುವುದಿಲ್ಲ, ಕೀಳಬೇಕಾದರೆ 3-5 ಎಲೆಗಳ ಗುಚ್ಛವನ್ನು ಕಿತ್ತರೆ ಅದನ್ನು ಒಂದು ಪತ್ರೆ ಎನ್ನುತ್ತೇವೆ.

– ಹೀಗೆ ಕಿತ್ತ 5-6 ಪತ್ರೆಯನ್ನು ದೇವರಿಗೆ ಸಮರ್ಪಿಸಿ, ಮಾರನೇ ದಿನ ತೆಗೆಯುವ ನಿರ್ಮಾಲ್ಯವನ್ನು ( ಪೂಜೆ ಮಾಡಿ ವಿಸರ್ಜನೆಗೊಂಡದ್ದು ) ಬಿಸಾಡಬೇಡಿ ಸ್ನಾನ ಮಾಡುವ ಬಕೆಟ್ ನ ನೀರಿಗೆ ಹಾಕಿಡಿ , ಆಯಾಸ ಶಮನವಾಗುತ್ತದೆ !

– ಒಂದು ಪಾತ್ರೆಯಲ್ಲಿ ಒಂದಿಷ್ಟು ನೀರನ್ನು ಕುಡಿಯಲು ಇತ್ತು 5-6 ಪತ್ರೆಯನ್ನು ಹಾಕಿ, ಆರಿದ ಮೇಲೆ ಸೋಸಿದ ನೀರನ್ನು ಕುಡಿವ ನೀರಿನ ತಂಬಿಗೆಗೆ ಬೆರೆಸಿಡಿ- ರಕ್ತ ಶುದ್ಧಿಯಾಗುತ್ತದೆ!

-ಕೊಬ್ಬರಿ ಎಣ್ಣೆಯೊಂದಿಗೆ ಈ ಲಕ್ಕಿ ಸೊಪ್ಪನ್ನು ಹಾಕಿ ಕುದಿಸಿ, ಆರಿಸಿ, ಶೋಧಿಸಿ ಇಟ್ಟುಕೊಳ್ಳಿ – ನಿಮ್ಮಲ್ಲಿ ಬಾಲನೆರೆ ( ಸಣ್ಣವಸ್ಸಿನಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು) , ತಲೆ ಕೂದಲು ಉದುರುವಿಕೆ , ಹೊಟ್ಟು ಮುಂತಾದ ಸಮಸ್ಯೆ ಇದ್ದರೆ ಪರಿಹಾರವಾಗುತ್ತದೆ. ( ಬಳಸುವಾಗ ಸ್ವಲ್ಪ ಎಣ್ಣೆಯನ್ನು ಉಗುರು ಬೆಚ್ಚಗೆ ಕಾಸಿಕೊಂಡು ಕೂದಲು ಬುಡಕ್ಕೆ ಹಚ್ಚಬೇಕು.

-ತುಳಸಿ, ವೀಳ್ಯ, ಲವಂಗ ಶುಂಠಿ ಯ ಜೊತೆಗೆ ನಿರ್ಗುಂಡಿ ಪತ್ರೆಯನ್ನು ಸ್ವಲ್ಪವೇ ಬೆಲ್ಲದ ಜೊತೆಗೆ ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ದಿನಕ್ಕೆರೆಡು ಬಾರಿ 50 ml ಪ್ರಮಾಣದಷ್ಟು ಸೇವಿಸಿ ಖಫ, ಪಿತ್ತ, ವಾತದ ಏರು ಪೆರು ತಹಬದಿಗೆ ಬರುತ್ತದಲ್ಲದೆ ಎಂಥಹುದೇ ಕೆಮ್ಮಾದರು ನಿಯಂತ್ರಣಕ್ಕೆ ಬರುತ್ತದೆ.

-ಅರರೆ!! ತಲೆ ನೋವು, ಮೈಗ್ರೇನ್, ಶೀತ, ತಲೆಬಾರವೇ ? ಲಕ್ಕಿಸೊಪ್ಪನ್ನು ಅರೆದು ಹಣೆಗೆ, ಕುತ್ತಿಗೆ ಭಾಗೇಕ್ಕೆ, ಕಿವಿಯ ಹಿಂಬಾಗ ಲೇಪಿಸಿಕೊಳ್ಳಿ( ಗ್ರಾಮೀಣ ಭಾಷೆಯ ಪಟ್ಟು ಹಾಕುವುದು), ಮೂರನೇ ಬಾರಿ ಹಚ್ಚಿಕೊಳ್ಳುವ ಹೊತ್ತಿಗೆ ಗುಣಕಂಡಿರುವ ಅನುಭವಕ್ಕೆ ಬರುತ್ತೀರ!!

– 4-5 ನಿರ್ಗುಂಡಿ ಪತ್ರೆಯನ್ನುಎರಡು ಲೋಟ ನೀರಿನಲ್ಲಿ ಕುದಿಯಲು ಬಿಟ್ಟು ತಡೆಯುವ ಹದಕ್ಕೆ ಆ ನೀರನ್ನು ಬಾಯಿಗೆ ಹಾಕಿಕೊಂಡು ಗಂಟಲಿನಲ್ಲಿ ಇಟ್ಟುಕೊಂಡು ಗಳ ಗಳ( gargle ) ಮಾಡಿ, ಗಂಟಲು ಕೆರೆತ, ಅಲರ್ಜಿಗಳು ಮಾಯವಾಗಿಬಿಡುತ್ತದೆ.

-ಪತ್ರೆಗಳನ್ನು ಕಿತ್ತು ಒಣಗಿಸಿ ಪುಡಿ ಮಾಡಿಟ್ಟುಕೊಂಡು ದಿನಕ್ಕೆ 10grm ನಷ್ಟು ಸೇವಿಸಿದರೂ ಸಾಕು ದೇಹದ immunity ಹೆಚ್ಚಾಗುತ್ತದೆ.

– ಮಾರುಕಟ್ಟೆಯಲ್ಲೋ, ದೊಡ್ಡ ದೊಡ್ಡ ದಿನಸಿ ಅಂಗಡಿಯಲ್ಲೋ ದೊರೆಯುವ 100 grm ದಾಲ್ಚಿನ್ನಿ ಎಣ್ಣೆಯನ್ನು ತಂದು ಒಂದು ಬಾಣಲೆಯೊಳಗೆ ಒಂದಷ್ಟು ಲಕ್ಕಿ ಸೊಪ್ಪನ್ನೂ ಹಾಕಿ ಚೆನ್ನಾಗಿ ಕುದಿಸಿ ( ಪ್ರಮಾಣವನ್ನು ಹೆಚ್ಚಿಸುವ ಸಹಾಯಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಬಹುದು ) ಅರ್ಧದಷ್ಟು ಇಂಗಿದ ಮೇಲೆ ಕೆಳಗಿಳಿಸಿ ,ಆರಿದ ನಂತರ ಶೋಧಿಸಿ ತೆಗೆದಿಟ್ಟುಕೊಳ್ಳಿ -ಲಕ್ವದಂತಹ ನರಹೀನತೆಯನ್ನೇ ನಿವಾರಿಸಿಬಿಡುವ ಶಕ್ತಿ ಈ ತೈಲಕ್ಕೆ ಇರುತ್ತದೆ ಎಂದಾದ ಮೇಲೆ ಯಕಶ್ಚಿತ್ ನಮ್ಮನ್ನು ಕಾಡುವ ಉಳುಕು, ಸೊಂಟ ನೋವು, ಮೈಕೈ ನೋವು, ಮಂಡಿ ನೋವು ಇದಕ್ಕೆ ಯಾವ ಲೆಕ್ಕ !!!

ನಿಜಕ್ಕೂ ಸದ್ದಿರದ ಸೃಷ್ಟಿಯ ಸೊಬಗಿದು- “ಸರ್ವರುಜೋಪಹಾರಿ” ‘ನಿರ್ಗುಂಡಿ’.

– ಕೌಸ್ತುಭ ಭಾರತೀಪುರ

Click to comment

Leave a Reply

Your email address will not be published. Required fields are marked *

Most Popular

To Top