National

ದೇವಸ್ಥಾನಕ್ಕೆ ಹೆಣ್ಣುಮಕ್ಕಳಿಗೂ ಪ್ರವೇಶ. ಸುಪ್ರೀಂಕೋರ್ಟು ಮೂಗು ತೂರಿಸೋದು ಯಾಕೆ!?

ಕಳೆದ ಕೆಲವಾರು ವರ್ಷಗಳಿಂದ ಮಹಿಳಾವಾದಿ ಹೋರಟಗಾರರು ‘ಪ್ರಾರ್ಥನೆಯ ಹಕ್ಕು’ ಎಂಬ ವಿಷಯದಡಿಯಲ್ಲಿ ಭಾರತದ ಕೆಲವು ಸನಾತನ ಪದ್ಧತಿಗಳಾದ ಶಬರಿಮಲೈ ದೇವಸ್ಥಾನಕ್ಕೆ, ಶಿಗ್ನಾಪುರದ ಶನಿ ದೇವಸ್ಥಾನಕ್ಕೆ ಹೆಣ್ಣುಮಕ್ಕಳಿಗೆ ಪ್ರವೇಶ ನಿಷೇಧಿಸಿರುವುದರ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಲಿಂಗ ಸಮಾನತೆಯ ಹೆಸರಲ್ಲಿ ಶುರುವಾಗಿದ್ದು ಈ ಚರ್ಚೆ. ಆದರೆ ಇದನ್ನು ಸರಿಯಾಗಿ ಗಮನಿಸಿದರೆ ತಿಳಿಯುತ್ತದೆ ಹೇಗೆ ಈ ಹೋರಾಟಗಾರರು ‘ಲಿಂಗ ಸಮಾನತೆ’ಯನ್ನು ಸನಾತನ ಧರ್ಮವನ್ನು ಜರಿಯಲೆಂದೇ ಬಳಸುತ್ತಿರುವ ಅಸ್ತ್ರ ಎಂಬುದು. ಅದರ ಜೊತೆಗೆ ಇದರ ಮತ್ತೊಂದು ಮೂಲ ಉದ್ದೇಶ ಸೆಮೆಟಿಕ್ ಮತಗಳ ಪ್ರಚಾರ!

ಶಬರಿಮಲೈಯಲ್ಲಿರುವ ದೇವಸ್ಥಾನ ಹಿಂದುಗಳಿಗೆ ಅತ್ಯಂತ ಪವಿತ್ರವಾದ ದೇವಸ್ಥಾನ. ಪ್ರತಿ ವರ್ಷ ಸಾವಿರಾರು ಭಕ್ತರು 41 ದಿನಗಳ ಕಾಲ ಮಾಲೆಯನ್ನು ಧರಿಸಿ, ಕಠಿಣ ವ್ರತವನ್ನಾಚರಿಸಿ ಬರಿಗಾಲಲ್ಲಿ ನಡೆದೇ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದುಕೊಳ್ಳುತ್ತಾರೆ. ಶಬರಿಮಲೈನಲ್ಲಿರುವ ಅಯ್ಯಪ್ಪ ನೈಷ್ಠಿಕ ಬ್ರಹ್ಮಚರ್ಯದ ಸಂಕೇತ. ಹಿಂದೂಗಳಲ್ಲಿ ಪ್ರತಿ ದೇವಾಲಯವೂ ತನ್ನದೇ ಆದ ಒಂದಷ್ಟು ಸಂಪ್ರದಾಯ, ಪದ್ಧತಿಗಳನ್ನು ಆಚರಿಸಿಕೊಂಡು ಬಂದಿದೆ. ಶಬರಿಮಲೈನಲ್ಲಿ ಹೆಣ್ಣುಮಕ್ಕಳಿಗೆ ನಿಷೇಧವೆಂದಿಲ್ಲ, ಬದಲಿಗೆ ಸಂತಾನೋತ್ಪತ್ತಿ ಮಾಡುವ ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಪ್ರವೇಶವನ್ನು ನಿಷೇಧಿಸಲಾಗಿದೆ. ಮತ್ತಿದು ಕೇವಲ ಶಬರಿಮಲೈ ಅಯ್ಯಪ್ಪ ದೇವಸ್ಥಾನದಲ್ಲಿ ಮಾತ್ರ. ಉಳಿದೆಡೆ ಅಯ್ಯಪ್ಪ ದೇವಾಲಯಗಳಿಗೆ ಹೆಣ್ಣುಮಕ್ಕಳಿಗೂ ಪ್ರವೇಶವಿದೆ! ಹೀಗೆ 41 ದಿನಗಳ ಕಾಲ ವ್ರತವನ್ನಾಚರಿಸಿದವರು ದೇವಾಲಯಕ್ಕೆ ಹೋಗುವುದರಿಂದ ಅಲ್ಲೊಂದು ಸಕಾರಾತ್ಮಕ ಶಕ್ತಿಯ ವಾತಾವರಣವುಂಟಾಗುವುದು ಎನ್ನುವುದು ಹಿಂದೂಗಳ ನಂಬಿಕೆ. ಹೆಣ್ಣುಮಕ್ಕಳ ಪ್ರಕೃತಿಗನ್ವಯ 41 ದಿನಗಳ ಕಾಲ ಈ ಕಠಿಣ ವ್ರತವನ್ನಾಚರಿಸುವುದೂ ಕಷ್ಟವೆನ್ನುವುದೂ ಅಷ್ಟೇ ಸತ್ಯ!

ಮಹಿಳಾವಾದಿಗಳಿಗೆ, ಬುದ್ಧಿಜೀವಿಗಳಿಗೆ ಹಿಂದೂಗಳ ಆಚರಣೆಗಳೆಲ್ಲವೂ ಮೂಢನಂಬಿಕೆಯೇ. ಆದರೆ, ಈ ಮಹಿಳಾವಾದಿಗಳಾಗಲಿ, ಬುದ್ಧಿಜೀವಿಗಳಾಗಲಿ ಮುಸ್ಲೀಂ ಹೆಣ್ಣುಮಕ್ಕಳ ವಿಚಾರಕ್ಕೆ ಬಂದಾಗ ಲಿಂಗ ಸಮಾನತೆಯ ಚಕಾರವೆತ್ತುವುದಿಲ್ಲ. ಮುಸಲ್ಮಾನರಲ್ಲಿ ಹೆಣ್ಣುಮಕ್ಕಳನ್ನು ಮಸೀದಿಯೊಳಗೆ ಪ್ರಾರ್ಥನೆ ಮಾಡಲು ಬಿಡುವುದಿಲ್ಲ. ಇದು ಲಿಂಗ ಸಮಾನತೆಯ ಚೌಕಟ್ಟಿಗೆ ಬಾರದ ವಿಷಯ. ಹೆಣ್ಣುಮಕ್ಕಳ ಜೀವನವನ್ನೇ ಭಯಾನಕವಾಗಿಸುವ ತ್ರಿವಳಿ ತಲಾಖ್, ಬಹುಪತ್ನಿತ್ವ, ನಿಕಾಹ್ ಹಲಾಲಾದಂತಹ ಆಚರಣೆಗಳೂ ಲಿಂಗ ಸಮಾನತೆಯ ಚೌಕಟ್ಟಿಗೆ ಬರುವುದಿಲ್ಲ! ಕ್ರಿಶ್ಚಿಯನ್ನರು ಚರ್ಚಿನಲ್ಲಿ ಫಾದರ್ ಗೆ ಕೊಡುವ ಸ್ಥಾನವನ್ನು ಒಬ್ಬ ನನ್ ಳಿಗೆ ಕೊಡುವುದಿಲ್ಲ. ಚರ್ಚುಗಳಲ್ಲಿ ಫಾದರ್ ಎನಿಸಿಕೊಂಡ ಗಂಡಸು ಮಾತ್ರವೇ ಪ್ರಾರ್ಥನೆ ಮಾಡಿಸಲು ಅರ್ಹ! ಇದೂ ಕೂಡ ಲಿಂಗ ಸಮಾನತೆಯ ಚರ್ಚೆಗೆ ಬರುವ ವಿಷಯವಲ್ಲ! ಇಷ್ಟಕ್ಕೂ ಶಬರಿಮಲೈ ದೇವಾಲಯಕ್ಕೆ ಪ್ರವೇಶಿಸುವ, ಅಲ್ಲಿ ಪ್ರಾರ್ಥನೆ ಮಾಡುವ ಹಕ್ಕು ನಮಗೂ ಇದೆ ಎನ್ನುವ ಮಹಿಳಾವಾದಿಗಳು, ಬುದ್ಧಿಜೀವಿಗಳು ಸರ್ವರಿಗೂ ಪ್ರವೇಶವಿರುವ ದೇವಾಲಯಗಳಿಗೆ ಹೋಗುವುದೇ ಅನುಮಾನ! ಪ್ರಚಾರ ಪ್ರಿಯ ಮಹಿಳಾವಾದಿಗಳೊಂದಷ್ಟು ಮಂದಿ ‘ನಾವು ದೇವಾಲಯ ಪ್ರವೇಶಿಸುತ್ತೇವೆ, ತಡೆಯುವವರು ತಡೆಯಲಿ ನೋಡೋಣ’ ಎಂದು ಹೇಳಿಕೆ ನೀಡಿ, ಮಾಧ್ಯಮದವರು ಬಂದ ಮೇಲೆಯೇ ತಮ್ಮ ಹೈಡ್ರಾಮಾವನ್ನು ಶುರುಮಾಡೋದು.

ಅಷ್ಟಕ್ಕೂ ಸುಪ್ರೀಂಕೋರ್ಟು ದೇವಾಲಯಗಳ ವಿಷಯದಲ್ಲಿ ಮೂಗು ತೂರಿಸೋದು ಸರಿಯೇ?! ಇಂತಹ ವಿಚಾರಗಳಲ್ಲಿ ಕಾನೂನಿಗಿಂತ ಜನರ ನಂಬಿಕೆ ಮುಖ್ಯ ಪಾತ್ರ ವಹಿಸುತ್ತದೆ. ಹಿಂದೂ ಪದ್ಧತಿಗಳನ್ನು ಆಡಿಕೊಳ್ಳುವ, ಅದರ ಮೇಲೆ ನಂಬಿಕೆಯೇ ಇರದ ಬುದ್ಧಿಜೀವಿ, ಮಹಿಳಾವಾದಿಗಳಿಗೆ ‘ಇದು ತಪ್ಪು’ ಎನ್ನುವ ಧಿಮಾಕಾದರೂ ಏಕೆ?

ಕೇರಳದ ಮಹಿಳೆಯರು, ಅದರಲ್ಲು ಸ್ವಾಮಿ ಅಯ್ಯಪ್ಪನ ಭಕ್ತರು ಸೇರಿ ಈ ಮಹಿಳಾವಾದಿಗಳು ನಡೆಸುತ್ತಿರುವ ಅಪಪ್ರಚಾರದ ವಿರುದ್ಧ ದನಿಯೆತ್ತಿದ್ದಾರೆ. ಪ್ರಾರ್ಥನೆಯ ಹಕ್ಕು ಎಂಬ ಅಭಿಯಾನಕ್ಕೆ ಪ್ರತಿಯಾಗಿ ಅವರು ‘ಕಾಯಲು ಸಿದ್ಧ’ ಎಂಬ ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ. ದೇವಾಲಯದ ಆಚರಣೆಗಳ ವಿರುದ್ಧ ಹೋಗುವುದು ತಮಗಿಷ್ಟವಿಲ್ಲವೆಂದು ತಿಳಿಸುವ ಇವರು, ತಮ್ಮ ಸಂತಾನೋತ್ಪತ್ತಿಯ ವಯಸ್ಸು ಮುಗಿಯುವವರೆಗೆ ಕಾದು, ನಂತರ ದರ್ಶನ ಪಡೆಯುವುದಾಗಿ ತಿಳಿಸಿದ್ದಾರೆ. ತಮ್ಮ ಆಚರಣೆ-ಸಂಪ್ರದಾಯಗಳ ಕುರಿತು ತಿಳಿಯದ ಬುದ್ಧಿಜೀವಿ ಮಹಿಳಾವಾದಿಗಳು ತಮ್ಮ ಕೆಲಸ ನೋಡಿಕೊಳ್ಳಲಿ, ನಮ್ಮ ವಿಚಾರದಲ್ಲಿ ಮೂಗು ತೂರಿಸುವುದು ಬೇಡವೆಂದು, ಈ ಅಭಿಯಾನದಲ್ಲಿ ಮುಖ್ಯ ಪಾತ್ರ ವಹಿಸಿರುವ ಅಂಜಲಿ ಜಾರ್ಜ್ ಎನ್ನುವ ಕೇರಳ ಮೂಲದ ಮಹಿಳೆ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top