National

ತಬ್ಲೀಗಿ ಜಮಾತ್ ಈಗ ಕೊರೋನಾ ವೈರಸ್ ಹರಡುವ ಕೇಂದ್ರಸ್ಥಾನ!

‘ತಬ್ಲೀಗೀ ಜಮಾತ್’, ‘ನಿಜಾಮುದ್ದೀನ್ ದರ್ಗಾ’ ಈಗ ಕೊರೊನಾ ವೈರಸ್ ಹೊರತುಪಡಿಸಿ ಎಲ್ಲೆಡೆ ಕೇಳಿ ಬರುತ್ತಿರುವ ಹೆಸರು. ಕೊರೋನಾ ವೈರಸ್‌ನ SuperSpreader ಅಂತಲೇ ಕರೆಯಲಾಗುತ್ತಿದೆ!

ದೆಹಲಿಯ ನಿಜಾಮುದ್ದೀನ್ ದರ್ಗಾದ ಸುತ್ತ-ಮುತ್ತಲಿರುವ ಸುಮಾರು 200 ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಭಾನುವಾರ ಮತ್ತು ಸೋಮವಾರ ಕರೆದುಕೊಂಡು ಹೋಗಲಾಗಿದೆ. ಇದು ಅವರಲ್ಲಿ ಕರೋನಾ ಲಕ್ಷಣಗಳು ಕಂಡು ಬಂದ ನಂತರ ನಡೆದ ಘಟನೆ. ಈ ಘಟನೆಯ ನಂತರ ನಿಜಾಮುದ್ದೀನ್ ದರ್ಗಾ ಮತ್ತು ಅದರ ಹತ್ತಿರವೇ ಇರುವ ಮಸೀದಿಯೊಂದರ ಸುತ್ತ-ಮುತ್ತ ಪ್ರದೇಶವನ್ನು ಪೊಲೀಸರು ಸಂಪೂರ್ಣ ಬಂದ್ ಮಾಡಿದ್ದಾರೆ. ಸುಮಾರು 2000 ಜನರನ್ನು ಕ್ವಾರೆಂಟೈನ್ ಮಾಡಲಾಗಿದೆ.

ಇಡಿಯ ಭಾರತ ಕೊರೋನಾ ವೈರಸ್‌ ಹರಡುವ ಹೆದರಿಕೆಯಲ್ಲಿದ್ದಾಗ ಹಜರತ್ ನಿಜಾಮುದ್ದೀನ್ ದರ್ಗಾದ ಬಳಿಯಿರುವ ಮಸೀದಿಯಲ್ಲಿ ‘ತಬ್ಲೀಗೀ ಜಮಾತ್’ ಇಸ್ಲಾಮಿಕ್ ಧಾರ್ಮಿಕ ಸಮ್ಮೇಳನವೊಂದನ್ನು ಆಯೋಜಿಸಿತ್ತು. ದೇಶದ ವಿವಿಧ ಭಾಗಗಳಿಂದ ನೂರಾರು, ಸಾವಿರಾರು ಜನ ಇದರಲ್ಲಿ ಭಾಗವಹಿಸಿದ್ದರು. ಕೆಲವೊಂದು ಮಾಹಿತಿಯ ಪ್ರಕಾರ ಈ ಮಸೀದಿ ತಬ್ಲೀಗಿ ಜಮಾತ್ ಸಂಘಟನೆಯ ಮೂಲ ಪ್ರದೇಶ. ಈ ಸಮ್ಮೇಳನಕ್ಕೆ ಬಂದುಹೋದ ನಂತರ ಇಲ್ಲಿ ಬಂದಿದ್ದ ಕೆಲವರು ಕರೋನಾದಿಂದ ಸಾವು ಹೊಂದಿರುವುದು ಬೆಳಕಿಗೆ ಬಂದಿದೆ.

ಈ ಮಸೀದಿ ಈ ರೀತಿಯ ಹಲವು ಸಮ್ಮೇಳನಗಳನ್ನು ನಡೆಸುತ್ತಿರುತ್ತದೆ. ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದಲೂ ಬೋಧಕರನ್ನು ಮತ್ತು ಅನುಯಾಯಿಗಳನ್ನು ಕರೆತರುತ್ತದೆ. ಈ ಬಾರಿ ಸಮ್ಮೇಳನಕ್ಕೆ ಇಂಡೋನೇಷ್ಯಾ, ಮಲೇಷಿಯಾ, ಸೌದಿ ಅರೇಬಿಯಾ ಮತ್ತು ಕಿರ್ಗಿಸ್ತಾನ್‌ಗಳಿಂದಲೂ ಆಗಮಿಸಿದ್ದರು. ಇಲ್ಲಿಂದ ಸಾವಿರಾರು ಜನ ದೇಶದ ವಿವಿಧ ರಾಜ್ಯಗಳಿಗೆ ರೈಲು ಮತ್ತು ಬಸ್ಸುಗಳ ಮೂಲಕ ಪ್ರಯಾಣ ಮಾಡಿರುವುದು ಹಲವರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತಮಿಳುನಾಡಿನಿಂದ ಸುಮಾರು 1000 ಸಂಖ್ಯೆಯಲ್ಲಿ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವರು ಹಿಂದಿರುಗಿ ರಾಜ್ಯಕ್ಕೆ ಬಂದಿದ್ದಾರೆ ಎಂದು ಸರ್ಕಾರ ಹೇಳಿದೆ. ಅವರಲ್ಲಿ ಅದಾಗಲೇ 50 ಜನಕ್ಕೆ ಸೋಂಕು ದೃಢಪಟ್ಟಿದೆ. ಅಂಡಮಾನ್ ನಿಕೋಬಾರ್‌ನಿಂದ ಇಲ್ಲಿಗೆ ಬಂದಿದ್ದ 6 ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಮವಾರ ತೆಲಂಗಾಣದಿಂದ ಈ ಸಮ್ಮೇಳನಕ್ಕೆ ಬಂದು ವಾಪಸ್ಸಾಗಿದ್ದ 6 ಜನ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಒಂದೇ ದಿನದಲ್ಲಿ ಈ ಸಭೆಗೆ ಬಂದಿದ್ದ 24 ಜನರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಉತ್ತರಪ್ರದೇಶ ಸರ್ಕಾರ ತಮ್ಮ ರಾಜ್ಯದಿಂದ ಈ ಸಭೆಗೆ ಭಾಗವಹಿಸಿದ್ದ 157 ಜನರ ಹುಡುಕಾಟದಲ್ಲಿ ನಿರತವಾಗಿದೆ. ಮಧ್ಯಪ್ರದೇಶದಿಂದ 107 ಜನ ತಬ್ಲೀಗಿ ಜಮಾತ್‌ನ ಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಮಂಗಳವಾರ ಒಂದೇ ದಿನದಲ್ಲಿ 17 ಜನರಿಗೆ ಸೋಂಕಿರುವುದು ದೃಢಪಟ್ಟಿದೆ. ಅಸ್ಸಾಮಿನಲ್ಲಿ ಮೊದಲ ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದು, ಈ ಸಭೆಯಲ್ಲಿ ಭಾಗವಹಿಸಿದ್ದ 456 ಜನರ ಹುಡುಕಾಟದಲ್ಲಿ ಸರ್ಕಾರವಿದೆ. ಕರ್ನಾಟಕದಲ್ಲಿ ಇದಕ್ಕೆ ಭಾಗವಹಿಸಿದ್ದ 54 ಜನರನ್ನು ಸರ್ಕಾರ ಕ್ವಾರೆಂಟೈನ್‌ಲ್ಲಿ ಇರಿಸಿದೆ.

ಇವೆಲ್ಲದರ ನಡುವೆ ದೆಹಲಿಯ ಪೊಲೀಸರು ತಬ್ಲೀಗಿ ಜಮಾತ್‌ನ ಈ ಬೃಹತ್ ಸಭೆಗೆ ಅನುಮತಿ ನೀಡಿರಲಿಲ್ಲವೆಂದು ತಿಳಿಸಿದ್ದಾರೆ. ತಬ್ಲೀಗಿ ಜಮಾತ್‌ನ ಮೌಲಾನಾ ಸಾದ ಮತ್ತು ಇನ್ನಿತರರ ಮೇಲೆ ದೆಹಲಿ ಪೊಲೀಸರು ಕೇಸನ್ನು ದಾಖಲಿಸಿದ್ದಾರೆ!

ಭಾರತದಲ್ಲಿ ಮಂಗಳವಾರ ಒಂದೇ ದಿನ ಕೊರೋನಾ ಕೇಸುಗಳು ಹೆಚ್ಚಾಗಿದ್ದು ಇದರಲ್ಲಿ ಹಲವರು ತಬ್ಲೀಗಿ ಜಮಾತ್ ನ ಸಭೆಗೆ ಭಾಗವಹಿಸಿದ್ದವರೇ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಇದರ ನಡುವೆಯೂ ಹಲವು ಇಸ್ಲಾಂ ತೀವ್ರಗಾಮಿಗಳು ತಬ್ಲೀಗಿ ಜಮಾತ್ ಮಾಡಿದ್ದರಲ್ಲಿ ತಪ್ಪಿಲ್ಲ ಎಂಬ ನಿಲುವನ್ನು ವ್ಯಕ್ತಪಡಿಸಿರುವುದು ಆತಂಕಕಾರಿಯೇ ಸರಿ. ದೇಶದಲ್ಲೆಲ್ಲಾ ಮಾರಕ ಕೊರೊನಾ ವೈರಸ್‌ನ ಭೀತಿ ತೀವ್ರವಾಗಿರುವಾಗ ಅವೈಜ್ಞಾನಿಕವಾಗಿ ಸಾವಿರಾರು ಜನ ಒಂದೆಡೆ ಸೇರಿ ದೇಶದಲ್ಲಿ ಸೋಂಕು ಹೆಚ್ಚಾಗುವಂತೆ ಮಾಡಿದ್ದಾರೆ!

-ಪ್ರಿಯಾ ಶಿವಮೊಗ್ಗ

1 Comment

1 Comment

  1. Adarsh

    April 2, 2020 at 8:41 am

    HEll with them

Leave a Reply

Your email address will not be published. Required fields are marked *

Most Popular

To Top