National

ಜಿಂಕೆಮರಿಗೆ ಎದೆಹಾಲುಣಿಸಿದ ಬಿಷ್ಣೊಯ್ ತಾಯಿ!

ಮಕ್ಕಳಿಗೆ ಎದೆ ಹಾಲುಣಿಸುವುದರಲ್ಲಿ ತಾಯಿಯ ಪ್ರೀತಿ ಎಂದಿಗೂ ತಾರತಮ್ಯ ತೋರುವುದಿಲ್ಲ. ತಾಯಿ ಎಂಬ ಪಟ್ಟವೇ ಅತ್ಯಂತ ಶ್ರೇಷ್ಠವಾದ್ದು. ಕೆಟ್ಟಮಕ್ಕಳು ಜನಿಸಬಹುದೇ ಹೊರತು ಕೆಟ್ಟತಾಯಿ ಇರಲು ಸಾಧ್ಯವಿಲ್ಲವೆಂಬುದು ಅತ್ಯಂತ ಪ್ರಾಚೀನವಾದ ಮಾತು! ಜೋಧ್ ಪುರದ ಬಿಷ್ಣೊಯ್ ಸಮುದಾಯದ ಮಹಿಳೆಯೊಬ್ಬರು ಜಿಂಕೆ ಮರಿಯೊಂದಕ್ಕೆ ಎದೆ ಹಾಲುಣಿಸಿದ ಘಟನೆ ಇದಕ್ಕೆ ಉದಾಹರಣೆ ಎಂಬಂತೆ ತೋರುತ್ತದೆ.

ಪ್ರವೀಣ್ ಕಸ್ವಾನ್ ಎನ್ನುವ ಐಎಫ್ಎಸ್ ಅಧಿಕಾರಿಯೊಬ್ಬರು ಟ್ವಿಟರ್ ನಲ್ಲಿ ಮಹಿಳೆಯೊಬ್ಬರು ಜಿಂಕೆಮರಿಗೆ ಎದೆಹಾಲುಣಿಸುತ್ತಿರುವ ಫೊಟೊವನ್ನು ಹಂಚಿಕೊಂಡಿದ್ದರು. ಇದೀಗ ಸಾಮಾಜಿಕ ಈ ಫೊಟೊ ಜಾಲತಾಣದಲ್ಲಿ ವೈರಲ್ ಆಗಿದೆ. ‘ಜೋಧಪುರದ ಬಿಷ್ಣೊಯ್ ಸಮುದಾಯ ಪ್ರಾಣಿಗಳ ಆರೈಕೆ ಮಾಡುವ ಪರಿಯಿದು. ಈ ಮುದ್ದಾದ ಪ್ರಾಣಿಗಳು ಅವರ ಮಕ್ಕಳಿಗಿಂತ ಕಡಿಮೆಯಲ್ಲ. ಮಹಿಳೆಯೊಬ್ಬರು ಅದಕ್ಕೆ ಸ್ತನಪಾನ ಮಾಡಿಸುತ್ತಿರುವುದು ಇದು. ಇದೇ ಜನ 1730ರಲ್ಲಿ ರಾಜನೊಂದಿಗೆ ಕಾದಾಡಿ ಕೇಜ್ರಿ ಮರಗಳ ರಕ್ಷಣೆಗೆ 363 ಜನ ತಮ್ಮ ಪ್ರಾಣವನ್ನು ತ್ಯಾಗಮಾಡಿದ್ದರು’ ಎಂದು ಪ್ರವೀಣ್ ಕಾಸ್ವಾನ್ ಅವರು ಬರೆದುಕೊಂಡಿದ್ದರು.

ಈ ಅದ್ಭುತ ಚಿತ್ರವನ್ನು ಕಂಡ ಸಾಮಾಜಿಕ ಜಾಲತಾಣ ಸುಮ್ಮನಿರಲು ಸಾಧ್ಯವಾಗದೇ ತಮ್ಮ ಹೊಗಳಿಕೆಯ ಮಹಾಪೂರವನ್ನೇ ಹರಿಸಿದೆ. ತಾಯಿಯ ಪ್ರೀತಿಯನ್ನು, ಬಿಷ್ಣೊಯ್ ಜನರಿಗೆ ಪ್ರಾಣಿಗಳ ಮೇಲಿರುವ ಕಾಳಜಿಯನ್ನು ಜನ ಹಾಡಿಹೊಗಳುತ್ತಿದ್ದಾರೆ. ಇದುವರೆಗೂ ಸಾವಿರಾರು ಜನ ಈ ಪಟವನ್ನು ಹಂಚಿಕೊಂಡಿದ್ದಾರೆ.

ಬಿಷ್ಣೊಯ್ ಸಮುದಾಯದ ಗುರು ಶ್ರೀ ಜಂಬೇಶ್ವರ್ ಭಗವಾನ್ ಅವರು. ಇವರಿಗೆ ಪ್ರಾಣಿವರ್ಗ ಮತ್ತು ಸಸ್ಯವರ್ಗದ ಮೇಲೆ ಅಪಾರ ಪ್ರೀತಿ. ಈ ಸಮುದಾಯದ ಜನ ತಮ್ಮ ಗುರುಗಳು ಹಾಕಿಕೊಟ್ಟ 29 ನಿಯಮಗಳನ್ನು ತಪ್ಪದೇ ಪಾಲಿಸುತ್ತಾರೆ. ಅವುಗಳಲ್ಲಿ ಒಂದು ಪ್ರಕೃತಿಯನ್ನು ಮತ್ತು ಪ್ರಾಣಿಗಳನ್ನು ಕಾಪಾಡುವುದು. 1730 ರಲ್ಲಿ ಕೇಜ್ರಿಲಿಯಲ್ಲಿ ರಾಜನೊಬ್ಬ ಕೇಜ್ರಿ ಎಂಬ ಮರಗಳನ್ನು ಕಡಿಯಲು ಮುಂದಾದಾಗ ಇದೇ ಜನ ಮುಂದೆ ಬಂದು ಪ್ರತಿಭಟಿಸಿದ್ದಷ್ಟೇ ಅಲ್ಲದೇ, ಅವುಗಳ ರಕ್ಷಣೆಗಾಗಿ 363 ಜನ ಪ್ರಾಣವನ್ನು ತ್ಯಾಗ ಮಾಡಿದ್ದರು!

1998ರಲ್ಲಿ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಸೇರಿದಂತೆ ಕೆಲವು ಮಿತ್ರರು ಕೃಷ್ಣಮೃಗದ ಬೇಟೆಯಾಡಿದ್ದರು. ಇವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದು ಇದೇ ಬಿಷ್ಣೊಯ್ ಸಮುದಾಯ!

ಮನುಷ್ಯ-ಮನುಷ್ಯರನ್ನೇ ಕೊಲ್ಲುವ ಸಮಾಜದಲ್ಲಿ ತಮ್ಮೊಡನೆ ಜೀವಿಸುವ ಪ್ರಕೃತಿಮಾತೆಯನ್ನು ರಕ್ಷಿಸುತ್ತಾ, ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸುವ ಈ ಬಿಷ್ಣೊಯ್ ಸಮುದಾಯ ಮಾನವ ಜನಾಂಗದಲ್ಲಿಯೇ ವಿಶಿಷ್ಟವಾಗಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು!

Click to comment

Leave a Reply

Your email address will not be published. Required fields are marked *

Most Popular

To Top