Vishwaguru

ಜಗದ ಕೊಳೆಯ ತೊಳೆವ ತುಳುವ ಕೃಷ್ಣದೇವರಾಯ!

ನಮ್ಮ ಪೌರಾಣಿಕ ಕತೆಗಳಲ್ಲಿ ಇಂದ್ರನ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಇಂದ್ರ ಪದವಿ ಅನ್ನೋದಿದೆಯಲ್ಲಾ ಅದು ಸದಾ ಎಚ್ಚರ ವಹಿಸಿ ಕಾಯ್ದುಕೊಳ್ಳಬೇಕಾದ ಸ್ಥಾನ. ಒಂಚೂರು ಯಾಮಾರಿದರೂ ರಾಕ್ಷಸರಿಂದಲೋ, ಋಷಿಗಳ ಪಾಪದಿಂದಲೋ, ತನ್ನದೇ ಪ್ರಮಾದದಿಂದಲೋ ಪದಚ್ಯುತನಾಗುವ ಭಯ ಸದಾ ಇಂದ್ರನಿಗಿದ್ದೇ ಇರುತ್ತದೆ, ಇರಲೇಬೇಕು.

ವಿಜಯನಗರದರಸರು, ಇಂದ್ರ ವೈಭವದೊಂದಿಗೇ ರಾಜ್ಯವಾಳಲು ಆರಂಭಿಸಿದವರು. ಸಂಗಮವಂಶದವರು ಇಂದ್ರನ ಅಮರಾವತಿಯಂಥ ವಿಜಯನಗರದ ನಿರ್ಮಾತೃಗಳಾದರೆ, ಸಾಳುವ ವಂಶದವರು ಆ ಇಂದ್ರ ವೈಭವವನ್ನು ವಿಸ್ತರಿಸಿದರು. ಆದರೆ ಈ ಸರಣಿಯಲ್ಲಿ ಪ್ರಮಾದವೆಸಗಿದ ದೊರೆ ತುಳುವ ವಂಶದ ವೀರ ನರಸಿಂಹರಾಯ.

ವೀರನರಸಿಂಹನು, ಮೊದಲನೇ ನರಸಿಂಹ ರಾಯನ ಮಂತ್ರಿ ನರಸನಾಯಕನ ಪುತ್ರ. ಈ ನಾಯಕ ವಂಶಸ್ಥರು ತಮ್ಮ ಉಸಿರಿರುವವರೆಗೂ ವಿಜಯನಗರದ ಸಿಂಹಾಸನಕ್ಕೆ ನಿಷ್ಠರಾಗಿದ್ದು, ಸಾಮ್ರಾಜ್ಯದ ಸಂರಕ್ಷಣೆಗೆ ಕಟಿಬದ್ಧರಾಗಿದ್ದವರೂ, ಅಗತ್ಯ ಬಿದ್ದಾಗ ಸಾಮ್ರಾಜ್ಯದ ಉಸ್ತುವಾರಿಯನ್ನು ತಮ್ಮ ತೆಕ್ಕೆಗೇ ತೆಗೆದುಕೊಳ್ಳುತ್ತಿದ್ದ ಮುತ್ಸದ್ದಿಗಳೂ ಆಗಿದ್ದವರು. ತುಳುವ ನರಸನಾಯಕ ಅಂತಹ ಮುತ್ಸದ್ದಿಗಳಲ್ಲೊಬ್ಬ. ಆತನಿಗೆ ವಿಜಯನಗರ ಸಾಮ್ರಾಜ್ಯದ  ಸಂರಕ್ಷಣೆಯು ಪ್ರಥಮ ಆದ್ಯತೆಯಾಗಿತ್ತು. ಅಂತೆಯೇ ವಿಲಾಸೀ ಜೀವನದಲ್ಲಿ ಮೈ ಮರೆತಿದ್ದ ತನ್ನ ಪ್ರಭು ಸಾಳುವ ನರಸಿಂಹನ ರಾಜಧಾನಿಯನ್ನೇ ಮುತ್ತಿಗೆ ಹಾಕಿ ವಶಪಡಿಸಿಕೊಂಡ ಈ ವಿದೇಶೀ ಮಂತ್ರಿಯು ಮರಳಿ ರಾಜ್ಯಾಧಿಕಾರವನ್ನು ಅವನಿಗೆ ನೀಡುವ ಮೊದಲು ಖಡಕ್ಕಾಗಿ ಕೆಲವು ಹಿತವಚನಗಳನ್ನು, ರಾಜನೈತಿಕ ಸೂಕ್ಷ್ಮಗಳನ್ನು ತಿಳಿಸುತ್ತಾನೆ. ಸಂತಸಗೊಂಡ ನರಸಿಂಹರಾಯನು ಇದರಿಂದ ತನ್ನ ಮಕ್ಕಳು ಪ್ರೌಢವಯಸ್ಕರಾಗುವವರೆಗೂ ಸಾಮ್ರಾಜ್ಯದ ಆಳ್ವಿಕೆಯ ಹೊಣೆಗಾರಿಕೆಯನ್ನು ಮಂತ್ರಿ ತುಳುವ ನರಸಿಂಹನಾಯಕನಿಗೇ ವಹಿಸಿ ನಿಶ್ಚಿಂತನಾಗುತ್ತಾನೆ.

ಆದರೆ ನಂತರದಲ್ಲಿ ಆ ರಾಜಮನೆತನದ ಘಟನೆಗಳು ತಿರುವು ಪಡೆದದ್ದೊಂದು ಸೋಜಿಗ. ನರಸ ನಾಯಕನಿಗೆ ಇದ್ದಿದ್ದು ನಿಸ್ಸೀಮ ರಾಜನಿಷ್ಠೆ. ನರಸಿಂಹರಾಯನ ಮಕ್ಕಳು ಪ್ರೌಢ ವಯಸ್ಕರಾಗುವವರೆಗೆ ಅವರನ್ನು ರಕ್ಷಿಸಬೇಕಿದ್ದು ಹೊಣೆಗಾರಿಕೆ. ಆದರೆ ಅವನ ಹಿರಿಯ ಮಗ ವೀರ ನರಸಿಂಹ ರಾಜ್ಯಾಕಾಂಕ್ಷಿಯಾಗಿದ್ದವ. ಧೂರ್ತ ನೀತಿಯವ. ಅವನು ತನ್ನ ತಂದೆಯು, ಪೆನುಗೊಂಡದಲ್ಲಿ ರಕ್ಷಿಸಿಟ್ಟಿದ್ದ ದೊರೆ ನರಸಿಂಹರಾಯನ ಮಗನನ್ನು ಕೊಂದು, ತನ್ನ ಸ್ಥಾನ ಭದ್ರಗೊಳಿಸಿಕೊಂಡಿದ್ದ ಧೂರ್ತ. ವಿಜಯನಗರ ಸಾಮ್ರಾಜ್ಯದ ಮಹಾನ್ ರಕ್ಷಕನೆಂದು ಪರಿಗಣಿಸಲ್ಪಟ್ಟಿದ್ದ ತುಳುವ ನರಸನಾಯಕನಿಗೆ ಈ ರೀತಿ ತನ್ನ ಮಗನಿಂದಲೇ ಅಪಮಾನವಾದಂತಾಯ್ತು. ಸಾಳುವ ವಂಶದ ಕುಡಿಯನ್ನು ಹೊಸಕಿ ಹಾಕಿದ ಈ ಕ್ರೂರಿ ವೀರ ನರಸಿಂಹನ ದೃಷ್ಟಿಯೀಗ ಇನ್ನೊಬ್ಬ ತರುಣನ ಮೇಲೆ ನೆಟ್ಟಿತ್ತು. ಆತ ಇಪ್ಪತ್ತರ ಹರೆಯದವ. ಕಟ್ಟುಮಸ್ತಾದ ಮೈಕಟ್ಟಿನವ. ಬೆಳಿಗ್ಗೆ ಮೂರೂವರೆಗೇ ಎದ್ದು ಅರ್ಧ ಸೇರು ಎಳ್ಳೆಣ್ಣೆ ಕುಡಿದು, ಐನೂರು ಬಸಿಗೆ ಹೊಡೆದು, 100 ದಂಡ ಹೊಡೆದು ಭಾರೀ ಭಾರೀ ಭಾರಗಳನ್ನೆತ್ತಿ ಕತ್ತಿ-ಸಾಮು ಮಾಡುತ್ತಿದ್ದವ. ಬೆವರಿನಿಂದ, ಮೈಗೆ ಹಚ್ಚಿದ್ದ ಎಳ್ಳೆಣ್ಣೆಯೆಲ್ಲಾ ಕೊಚ್ಚಿಕೊಂಡು ಹೋಗುವಂತೆ ವ್ಯಾಯಾಮ ಮಾಡುತ್ತಿದ್ದವ. ಆಸ್ಥಾನದ ಜಗಜಟ್ಟಿಗಳೊಡನೆ ಕುಸ್ತಿ ಮಾಡಿ, ನಂತರ ಕುದುರೆಯನ್ನೇರಿ ವಿಜಯನಗರದೆರಡೂ ದಿಕ್ಕುಗಳಲ್ಲಿ ವೇಗವಾಗಿ ಸಂಚರಿಸುತ್ತಿದ್ದವ. ಸಾಮ್ರಾಜ್ಯ ರಕ್ಷಣೆಗಾಗಿ ಮೇಯೆಲ್ಲಾ ಕಣ್ಣಾಗಿದ್ದವ. ಆತನೇ ಕೃಷ್ಣರಾಯ ಅಥವಾ ಕೃಷ್ಣದೇವರಾಯ.

ಮಂತ್ರಿ ನರಸನಾಯಕನಿಗಿದ್ದ ಪತ್ನಿಯರಲ್ಲಿ ನಾಗಲಾಂಬಿಕೆಯ ಮಗನಾಗಿ ಕೃಷ್ಣದೇವನು ಜನಿಸಿದ್ದು 1484 ರಲ್ಲಿ. ಹುಟ್ಟಿನಿಂದಲೇ ಶಾರೀರಿಕವಾಗಿ, ಮಾನಸಿಕವಾಗಿ, ಧಾರ್ಮಿಕವಾಗಿ ಪಟುತ್ವ ಹೊಂದಿದ್ದ ತರುಣ ಈ ಕೃಷ್ಣದೇವರಾಯ. ಶಂಕರಾಚಾರ್ಯರು ಒಂದೆಡೆ ಹೇಳಿರುವಂತೆ ಮಕ್ಕಳು ಕೆಟ್ಟವರಿರಬಹುದಾದರೂ, ತಾಯಿಯೆಂದಿಗೂ ಕೆಡುಕುಂಟುಮಾಡುವವಳಾಗಿರುವುದಿಲ್ಲ ಎನ್ನುವುದು ವಿಜಯನಗರ ಸಾಮ್ರಾಜ್ಯದ ವಿಷಯದಲ್ಲಿ ನಿಜವಾಗಿತ್ತು. ತಾಯಿಯ ಬದಲು ತಂದೆ ನರಸನಾಯಕ ಆ ಕಾರ್ಯಕ್ಕೆ ನಿದರ್ಶನವಾಗಿ ನಿಲ್ಲುತ್ತಾನೆ. ಆತ ರಾಜ್ಯನಿಷ್ಠ, ರಾಜನಿಷ್ಠ, ದೇಶಭಕ್ತ, ಸಾಮ್ರಾಜ್ಯ ರಕ್ಷಕ. ಆದರೆ ಅವನ ಹಿರಿಯ ಮಗ ವೀರ ನರಸಿಂಹರಾಯ ಕಪಟಿ, ಸಾಮ್ರಾಜ್ಯಶಾಹಿ, ಕುತಂತ್ರಿ. ತನ್ನ ತಂದೆಯ ಮರಣಾ ನಂತರ ಸಾಳುವ ರಾಜವಂಶದ ಕುಡಿಯನ್ನು ಹೊಸಕಿಹಾಕಿದ್ದು ಅವನ ದೃಷ್ಟಿಯೀಗ ಬಿದ್ದಿದ್ದು ತನ್ನ ಸಾಕ್ಷಾತ್ ಮಲತಮ್ಮನ ಮೇಲೆ. ಅದಕ್ಕವನಿಗೆ ಸಹಕಾರಿಗಳಾಗಿ ನಿಂತಿದ್ದು ಸೋದರರಾದ ಅಚ್ಯುತರಾಯ ಮತ್ತು ಸದಾಶಿವರಾಯ.

ಆದರೆ ಕೃಷ್ಣದೇವರಾಯನ ಮೇಲೆ ಗುರುಕರುಣೆಯಿತ್ತು; ಸಾಮ್ರಾಜ್ಯದ ಮಂತ್ರಿ ತಿಮ್ಮರಸರ ಆಶೀರ್ವಾದವೂ ಇತ್ತು. ಯುವ ಕೃಷ್ಣದೇವರಾಯನನ್ನು ಸಮೀಪದ ಚಂದ್ರಗಿರಿಗೆ ಕಳಿಸಿದ ತಿಮ್ಮರಸರು ಆತನಿಗೆ ಆಸ್ಥಾನಗುರು ವ್ಯಾಸ ತೀರ್ಥರ ಸತ್ಸಂಗವೂ ಲಭಿಸುವಂತೆ ಮಾಡುತ್ತಾನೆ; ಕ್ರೂರಿ ವೀರನರಸಿಂಹನ ದೃಷ್ಟಿಯಿಂದಲೂ ತಪ್ಪಿಸಿಕೊಳ್ಳುವಂತೆ ಮಾಡುತ್ತಾನೆ. ಅಂಗವಿಕಲರಿಗೆ ರಾಜ್ಯಾಧಿಕಾರವಿರದಿದ್ದ ಕಾಲವದು. ಹಾಗಾಗಿ ತನ್ನ ಪ್ರತಿಸ್ಪರ್ಧೀ ಮಲತಮ್ಮನನ್ನು ರಾಜ್ಯಾಧಿಕಾರದಿಂದ ತೊಲಗಿಸಬೇಕಾದರೆ ಅವನು ಅಂಗವಿಕಲನಾಗಬೇಕೆಂದು ಮನಗಂಡ ವೀರನರಸಿಂಹರಾಯನು ತನ್ನ ಮಂತ್ರಿ ತಿಮ್ಮರಸರ ಮೂಲಕ ಕೃಷ್ಣದೇವರಾಯನ ಕಣ್ಣುಗಳನ್ನೇ ಕೀಳಿಸಲು ಮುಂದಾಗುತ್ತಾನೆ. ಆಗಲೇ ಅರಗಿನ ಮನೆಯಿಂದ ಪಾಂಡವರನ್ನು ವಿದುರನು ರಕ್ಷಿಸಿದ್ದಂತೆ, ತಿಮ್ಮರಸನು ಕೃಷ್ಣದೇವರಾಯನನ್ನು ಚಂದ್ರಗಿರಿಗೆ ಕಳಿಸಿ ರಕ್ಷಿಸಿದ್ದು; ಮೇಕೆಯ ಎರಡು ಕಣ್ಣುಗಳನ್ನು ತಂದು ವೀರನರಸಿಂಹರಾಯನೆದುರು ಅವನ್ನಿಟ್ಟು, ಅವು ಕೃಷ್ಣದೇವರಾಯನ ಕಣ್ಣುಗಳೆಂದು ನಂಬಿಸಿದ್ದು. ಕೊನೆಗೊಮ್ಮೆ ವಿಜಯನಗರದ ವಜ್ರಸಿಂಹಾಸನವನ್ನೇರಲು ಮುಂದಾಗಿದ್ದು. ಅಚ್ಯುತ ರಾಯನೆದುರು, ಅತ್ಯಂತ ಸಮರ್ಥ ಯುವಕ ಕೃಷ್ಣದೇವರಾಯನನ್ನು ಕರೆತಂದು ನಿಲ್ಲಿಸಿದ ತಿಮ್ಮರಸು ಮಂತ್ರಿಯು, ನಿಜವಾದ ಸಾಮ್ರಾಜ್ಯಾಧಿಪರಾರೆಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಾನೆ.

25 ವರ್ಷಗಳ ತರುಣ ಕೃಷ್ಣದೇವರಾಯ ತುಳುವ ವಂಶದ ಮಹಾನೇತಾರನಾಗಿ 1509 ರಲ್ಲಿ ವಿಜಯನಗರದ ವಜ್ರಸಿಂಹಾಸನವನ್ನಲಂಕರಿಸುತ್ತಾನೆ.

-ಕಿರಣ್ ಹೆಗ್ಗದ್ದೆ

Click to comment

Leave a Reply

Your email address will not be published. Required fields are marked *

Most Popular

To Top