International

ಜಗತ್ತಿನ ಪತ್ರಿಕಾ ಮಾಧ್ಯಮದ ಮೇಲೆ ಸವಾರಿ ಮಾಡುತ್ತಿದೆ ಚೀನಾ!

ಜಗತ್ತು ಕೊರೋನಾ ಎಂಬ ಮಹಾಮಾರಿಯಿಂದಾಗಿ 10 ಲಕ್ಷಕ್ಕೂ ಹೆಚ್ಚು ಸಾವನ್ನು ಕಂಡಿದೆ. ಜಗತ್ತಿಗೆ ಇದೊಂದು ಶಾಪವಾಗಿ ಪರಿಣಮಿಸಿದೆ. ಚೀನಾ, ಕೊರೋನಾ ವಿಚಾರವನ್ನು ಮುಚ್ಚಿಟ್ಟುಕೊಳ್ಳದೆ, ಸತ್ಯವನ್ನು ಜಗತ್ತಿಗೆ ತಿಳಿಸಿ ತನ್ನಲ್ಲೇ ಆದಷ್ಟೂ ತಡೆಹಿಡಿಯಬಹುದಿತ್ತು. ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಇತರ ವಾಮ ಮಾರ್ಗವನ್ನು ಬಳಸುತ್ತಿದೆ. ಒಂದೆಡೆ ಕೊರೋನಾ ಮತ್ತೊಂದು ಕಡೆ ಲದಾಖ್ ಭಾಗದಲ್ಲಿ ಚೀನಾದ ಅಪ್ರಚೋದಿತ ಆಕ್ರಮಣವನ್ನು ಭಾರತ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಎಡಪಂಕ್ತಿಯ ಚಿಂತನೆಯುಳ್ಳ ಪತ್ರಿಕೆಯಾದಂತಹ ‘ದಿ ಹಿಂದೂ’, ಅಕ್ಟೋಬರ್ 1 ರಂದು ಚೀನಾದ ರಾಷ್ಟ್ರೀಯ ದಿನದ ಪ್ರಯುಕ್ತ ಮುಖಪುಟವನ್ನೊಳಗೊಂಡಂತೆ ಬರೊಬ್ಬರಿ 3 ಪುಟಗಳ ಜಾಹಿರಾತನ್ನು ಪ್ರಕಟಿಸಿತು! ಚೀನಾದಿಂದ ಹಣ ಪಡೆಯುತ್ತಿರುವ ಈ ಪತ್ರಿಕೆ ತನ್ನ ಓದುಗರಲ್ಲಿ ಚೀನಾ ಅಥವಾ ಕಮ್ಯೂನಿಸಂ ಪರವಾದ ಚಿಂತನೆಯನ್ನು ಪ್ರಚಾರ ಮಾಡುತ್ತಿದೆ.

 

ಕೊರೋನಾ ವೈರಸ್ ಹರಡುವಿಕೆಯಲ್ಲಿ ತನ್ನ ಪಾತ್ರದ ಕುರಿತಂತೆ ವಿಶ್ವದಾದ್ಯಂತ ದೇಶಗಳು ಚೀನಾವನ್ನು ಪ್ರಶ್ನಿಸುತ್ತಿದ್ದಂತೆ ಅದು ಪ್ರತಿವಾದ ಮತ್ತು ಇತರ ದೇಶಗಳು ತಮ್ಮ ಜನರನ್ನು ರಕ್ಷಿಸುವಲ್ಲಿ ವಿಫ಼ಲವಾಗಿದೆ ಎಂದು ಆರೋಪ ಮಾಡಲು ಶುರುಮಾಡಿದೆ. ಇದಕ್ಕಾಗಿ ಅಯಾ ದೇಶದ ಪತ್ರಿಕಾ ಮಾಧ್ಯಮಗಳನ್ನೇ ಉಪಯೋಗಿಸಿಕೊಳ್ಳುತ್ತದೆ. ತನ್ನ ವಿಚಾರವನ್ನು ಜಗತ್ತಿನಾದ್ಯಂತ ಹರಡಲು ಇತರ ದೇಶಗಳ ಮಾಧ್ಯಮವನ್ನು ಸಹ ಖರೀದಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಮಾಧ್ಯಮದ ಮೇಲೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಶತಕೋಟಿ ಡಾಲರ್ಗಳಷ್ಟು ಮೊತ್ತವನ್ನು ಚೀನಾ ಹೂಡಿಕೆ ಮಾಡುತ್ತಿದೆ. ಒಂದು ವರದಿಯ ಪ್ರಕಾರ, ಚೀನಾ ಆಡಳಿತವು ವಾರ್ಷಿಕವಾಗಿ 1.3 ಶತಕೋಟಿ ಡಾಲರ್ ಗಳನ್ನು ಹೂಡಿಕೆ ಮಾಡುತ್ತಿದೆ. ಅಮೇರಿಕಾದ ನ್ಯಾಯಲಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಚೀನಾ ಆಡಳಿತ ಮುಖವಾಣಿಯಾದ ‘ಚೀನಾ ಡೈಲಿ’ ಕಳೆದ 4 ವರ್ಷಗಳಲ್ಲಿ ಜಾಹಿರಾತು ಮತ್ತು ಮುದ್ರಣಕ್ಕಾಗಿ ಅಮೇರಿಕಾದ ಪತ್ರಿಕೆಗಳಿಗೆ 19 ದಶಲಕ್ಷ ಡಾಲರ್ ಪಾವತಿಸಿದೆ. ‘ದಿ ವಾಲ್ ಸ್ಟ್ರ್ರೀಟ್ ಜರ್ನಲ್’ ಅಮೇರಿಕಾದ ಹೆಚ್ಚು ಪ್ರಚಲಿತ ಹೊಂದಿರುವ ಪತ್ರಿಕೆಗಳಲ್ಲೋಂದು. ಈ ಪತ್ರಿಕೆ, ಚೀನಾದ ಜಾಹಿರಾತುಗಳ ಮೂಲಕವೇ 2016 ನವೆಂಬರ್ ನಿಂದ 6 ದಶಲಕ್ಷ ಡಾಲರ್ ಅಷ್ಟು ಮೊತ್ತವನ್ನು ಸಂಪಾದಿಸಿದೆ. ಲಾಸ್ ಏಂಜೆಲ್ಸ್, ಬೋಸ್ಟನ್, ಚಿಕಾಗೋದ ಪ್ರಮುಖ ಪತ್ರಿಕೆಗಳು ಚೀನಾ ಡೈಲಿಯ ಗ್ರಾಹಕರು ಎಂದು ಪಟ್ಟಿ ಮಾಡಲಾಗಿದೆ.

ಯೂರೋಪ್ ರಾಷ್ಟ್ರಗಳಲ್ಲೂ ಸಹ ಚೀನಾ ತನ್ನ ಡ್ರಾಗನ್ ಹಸ್ತವನ್ನು ಚಾಚಿದೆ. ಹಾಂಗ್‌ಕಾಂಗ್‌ನಲ್ಲಿ ನಡೆದ ಪ್ರತಿಭಟನೆಗಳ ಚಿತ್ರಣವನ್ನು ಬದಲಾಯಿಸಲು ಚೀನಾದ ಪ್ರಯತ್ನಗಳು ಯೂರೋಪಿನ ಮಾಧ್ಯಮದ ಮೇಲೆ ಪ್ರಭಾವ ಸಾಧಿಸುವ ಕಾರ್ಯತಂತ್ರಕ್ಕೆ ಉದಾಹರಣೆಯಾಗಿದೆ. 2019ರ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಹಾಂಗ್‌ಕಾಂಗ್‌ ಪ್ರತಿಭಟನೆಯ ಸಮಯದಲ್ಲಿ, ಮಧ್ಯ ಮತ್ತು ಪೂರ್ವ ಯುರೋಪಿನ ಚೀನಾ ರಾಯಭಾರ ಕಚೇರಿಗಳು ಸ್ಥಳೀಯ ಮಾಧ್ಯಮಗಳನ್ನು ರಾಯಭಾರಿಗಳ ಲೇಖನ ಅಥವಾ ಸಂದರ್ಶನಗಳನ್ನು ಪ್ರಕಟಿಸುವ ಪ್ರಸ್ತಾಪದೊಂದಿಗೆ ಸಂಪರ್ಕಿಸಿವೆ ಎಂದು ಚೀನಾದ ತಜ್ಞರು ಹೇಳಿದ್ದಾರೆ. ಜೆಕ್ ಗಣರಾಜ್ಯದಲ್ಲಿ, ಚೀನಾದ ರಾಯಭಾರಿ ಜಾಂಗ್ ಜಿಯಾನ್ಮಿನ್ ಹಾಂಗ್‌ಕಾಂಗ್‌ ಪ್ರತಿಭಟನೆಯನ್ನು ಟೀಕಿಸಿ, ವಿದೇಶಿ ಪ್ರಭಾವವನ್ನು ಉಲ್ಲೇಖಿಸಿ ಬರೆದ ಲೇಖನ ಅಲ್ಲಿನ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಎಸ್ಟೋನಿಯಾದಲ್ಲಿ, ಚೀನಾದ ರಾಯಭಾರಿಯ ಲೇಖನ ದೇಶದ ಅತಿದೊಡ್ಡ ಪತ್ರಿಕೆ ‘ಪೋಸ್ಟ್‌ಮೀಸ್‌’ ನಲ್ಲಿ ಪ್ರಕಟವಾಯಿತು. ಲಿಥುವೇನಿಯಾದ ‘ವಿಲ್ನಿಯಸ್ ಡೀನಾ’, ಎಡಪಂಕ್ತಿಯ ಚಿಂತನೆಯುಳ್ಳ ಪೋಲಾಂಡಿನ ‘ಟ್ರೈಬುನಾ’ ಮತ್ತು ಸ್ಲೊವಾಕಿಯಾದ ‘ನೋವೆ ಸ್ಲೊವೊ’ ಚೀನಾದ ಹಣ ಪಡೆದು ಅವರ ಪರವಾದ ಲೇಖನಗಳನ್ನು ಪ್ರಕಟಮಾಡಿದೆ. ಇದಕ್ಕೆಲ್ಲ ಸ್ಲೊವಾಕಿಯಾದಲ್ಲಿದ್ದ ಚೀನಾದ ಅಂದಿನ ರಾಯಭಾರಿ ಲಿನ್ ಲಿನ್ ಸಾಕ್ಷಿ. ಇದಲ್ಲದೇ, ಉತ್ತರ ಮ್ಯಾಸಿಡೋನಿಯಾ, ಬೋಸ್ನಿಯಾ, ಹರ್ಜೆಗೋವಿನಾ ಮತ್ತು ಮಾಂಟೆನೆಗ್ರೊಗಳಲ್ಲಿನ ಮಾಧ್ಯಮಗಳಲ್ಲಿ ಇದೇ ರೀತಿಯ ಲೇಖನಗಳು ಪ್ರಕಟವಾಗಿವೆ.

ಆಸ್ಟ್ರೇಲಿಯಾ ಮತ್ತು ಚೀನಾಕ್ಕೂ ವ್ಯಾವಹಾರಿಕವಾಗಿ ನಿಕಟ ಸಂಬಂಧವಿದೆ. ಆಸ್ಟ್ರೇಲಿಯಾದ ಮೂರನೇ ಒಂದು ಭಾಗದಷ್ಟು ರಫ್ತನ್ನು ಚೀನಾ ಕೊಂಡುಕೊಳ್ಳುತ್ತದೆ. ಚೀನಾ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುತ್ತದೆ. ಆಸ್ಟ್ರೇಲಿಯಾದಲ್ಲಿ ವ್ಯಾಸಾಂಗ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳಿಂದ 17% ರಷ್ಟು ಆದಯವನ್ನು ಅಲ್ಲಿನ ವಿಶ್ವವಿದ್ಯಾಲಯಗಳು ಸಂಪಾದಿಸಿದರೆ, ಚೀನಿ ಪ್ರವಾಸಿಗರಿಂದ ಸುಮಾರು 11 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಅಷ್ಟು ಆದಾಯವನ್ನು ಆಸ್ಟ್ರೇಲಿಯಾ ಸಂಪಾದಿಸುತ್ತದೆ. ಆಸ್ಟ್ರೇಲಿಯಾದ ರಾಜಕೀಯ ನೀತಿಯನ್ನು ಬದಲಾಯಿಸಲು ದೊಡ್ಡ ಮೊತ್ತದ ದೇಣಿಗೆಗಳನ್ನು ನೀಡಿ, ನಾಗರೀಕ ಸಮಾಜದ ಚರ್ಚೆಗಳಲ್ಲಿ ಹಸ್ತಕ್ಷೇಪ ಮಾಡಲು ಚೀನಾ ಪ್ರಯತ್ನಪಟ್ಟಿವೆ. ದಕ್ಷಿಣ ಚೀನಾ ಸಮುದ್ರ ನೀತಿಯ ಕುರಿತು 2017 ಅಲ್ಲಿ ಸರ್ಕಾರದ ಚಟುವಟಿಕೆ ಸಂಬಂಧಿತ ರಾಜಕೀಯ ಸುಳಿವನ್ನು ಚೀನಾದ ಮಾಧ್ಯಮಕ್ಕೆ ಬಿಟ್ಟುಕೊಟ್ಟರೆಂದು ಜನಪ್ರಿಯ ರಾಜಕಾರಣಿ; ಸ್ಯಾಮ್ ಡಸ್ತಾರಿ ಅವರನ್ನು ಆಸ್ಟ್ರೇಲಿಯಾದ ಸಂಸತ್ತಿನಿಂದ ಹೊರಹಾಕಲಾಯಿತು. ಈ ಘಟನೆ, ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯಗಳ ಮೇಲೆ ಮತ್ತು ಅಲ್ಲಿನ ಮಾಧ್ಯಮಗಳ ಮೇಲೆ ಬೆಳೆಯುತ್ತಿರುವ ಚೀನಾದ ಪ್ರಭಾವಕ್ಕೆ ಸಾಕ್ಷಿಯಾಗಿದೆ.

ಇನ್ನು ‘ದಿ ಹಿಂದೂ’ ಪತ್ರಿಕೆಯ ವರದಿಯ ವಿಚಾರಕ್ಕೆ ಬರೋಣ. ಭಾರತದಲ್ಲಿ ‘ದಿ ಹಿಂದೂ’ ಪತ್ರಿಕೆ ಚೀನಾದ ಗ್ರಾಹಕವಾಗಿದೆ. ಅಗತ್ಯವಾದ ಹಕ್ಕು ಮತ್ತು ಇತರ ನಿಯಮಗಳನ್ನು ಪಾಲಿಸಿಕೊಂಡು ಜಾಹಿರಾತುಗಳನ್ನು ಪ್ರಕಟಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೇ, ಚೀನಾದಂತಹ ಶತ್ರು ರಾಷ್ಟ್ರದ ಹಣ ಪಡೆದುಕೊಂಡು ಅದರ ಪರವಾಗಿ ನಮ್ಮ ದೇಶದ ದೈನಂದಿನ ಪತ್ರಿಕೆಯ ಮುಖವಾಣಿಯಲ್ಲಿ ಸುದ್ಧಿ ಪ್ರಕಟವಾಗುವುದು ನಿಜಕ್ಕೂ ಅಪಾಯಕಾರಿ. ಅಕ್ಟೋಬರ್ 1 ರಂದು ಪ್ರಕಟವಾದ ಆ ಜಾಹಿರಾತಿನ ಆರಂಭದಲ್ಲಿ ಚೀನಾದ ರಾಯಭಾರಿ – ಚೀನಾ ಕೋರೋನಾ ವಿರುದ್ಧ ಜಗತ್ತಿಗೆ ಎಷ್ಟು ಧೈರ್ಯದಿಂದ ಸಹಾಯ ಮಾಡಿದೆ, ಕೊರೋನಾ ವೈರಸ್ ಹರಡುವಿಕೆಯಲ್ಲಿ ಚೀನಾದ ಪಾತ್ರವಿಲ್ಲ ಎಂದು ಹೇಳುತ್ತಾ ಭಾರತ- ಚೀನಾ ಸಂಬಂಧ ಮತ್ತು ಇತ್ತೀಚಿನ ಗಡಿ ಉದ್ವಿಗ್ನತೆಯ ಬಗ್ಗೆ ಮತಾಡಿದ್ದಾರೆ. ಗಲ್ವಾನ್ ಪ್ರದೇಶದಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ, ಭಾರತೀಯ ಸೈನ್ಯದ ಮೇಲೆ ಆಕ್ರಮಣ ಮಾಡಿ, ಈಗ ಶಾಂತಿ, ಸಹಕಾರ ಮತ್ತು ಸಂವಹನದ ಅಗತ್ಯತೆಯ ಕುರಿತು ಭಾರತಕ್ಕೆ ಪಾಠ ಮಾಡುವಂತಹ ಮಾತುಗಳನ್ನು ಆ ಜಾಹಿರಾತಿನಲ್ಲಾಡಿದೆ. ಬಡತನವನ್ನು ನಿರ್ಮೂಲನೆ ಮಾಡಿ, ಹೇಗೆ ತನ್ನನ್ನು ಸಮೃದ್ಧ ರಾಷ್ಟ್ರವನ್ನಾಗಿ ಪರಿವರ್ತಿಸಿಕೊಂಡಿದೆ ಎಂಬುದರ ಬಗ್ಗೆ ಆ ಜಾಹಿರಾತಿನಲ್ಲಿ ಚೀನಾ ಹೇಳಿಕೊಂಡಿದೆ.

‘ದಿ ಹಿಂದೂ’ ಪತ್ರಿಕೆ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಮುಖವಾಣಿ ಎಂಬಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತದೆ. ಆದರೆ, ಚೀನಾದಲ್ಲಿ ಮಸೀದಿಯನ್ನು ಒಡೆದು ಶೌಚಾಲವನ್ನಾಗಿ ಪರಿವರ್ತಿಸಿದ ಕುರಿತು, ಖುರಾನ್ ಅನ್ನು ತಿದ್ದುತ್ತಿರುವ ಕುರಿತು, ಉಯ್ಘರ್ ಮುಸಲ್ಮಾನರನ್ನು ಸಾಯಿಸುತ್ತಿರುವ ಕುರಿತು ಮತ್ತು ಚೀನಾದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಎಂದೂ ಮಾತಾಡುವುದಿಲ್ಲ. ಜಗತ್ತಿನಲ್ಲಿ ಭಯೋತ್ಪಾದನೆಯ ಮೂಲವಾಗಿರುವ ಪಾಕೀಸ್ತಾನದ ಆಪ್ತಮಿತ್ರ ಚೀನಾ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಭಯೋತ್ಪಾದನೆಯನ್ನು ಹತ್ತಿಕ್ಕಲು ಮುಂದಾಗಿರುವ ಜಾಗತಿಕ ಶಕ್ತಿ – ಚೀನಾ ಎಂದು ಹೇಳುವುದನ್ನು ‘ದಿ ಹಿಂದೂ’ ಮರೆಯಲಿಲ್ಲ. ಗಲ್ವಾನ್ ಘರ್ಷಣೆ ಕುರಿತು ಚೀನಾ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಪತ್ರಿಕೆಯು ತನ್ನ ಮುಖಪುಟವನ್ನೇ ಬಿಟ್ಟುಕೊಟ್ಟಿದೆ ಮತ್ತು ಈ ಕ್ರಮಕ್ಕಾಗಿ ಚೀನಾ ‘ದಿ ಹಿಂದೂ’ ಗೆ ಧನ್ಯವಾದವನ್ನೂ ತಿಳಿಸಿದೆ. ರಾಷ್ಟ್ರದ ಹಿತಾಸಕ್ತಿ ಮತ್ತು ಸತ್ಯಾಂಶ ಹೊರತಾಗಿ ಹಣ ಮಾತ್ರ ಈ ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯವನ್ನು ನಿರ್ಧರಿಸುತ್ತದೆ ಎಂಬುದು ಸಾಬೀತಾಗಿದೆ. ಜಗತ್ತಿಗೆ ಕೊರೋನಾವನ್ನು ಹರಡಿದ ದೇಶ – ಚೀನಾ ಎಂದು ಬಿಂಬಿಸುವ ಬದಲು, ಜಾಗತಿಕ ನಾಯಕ – ಚೀನಾ ಎಂದು ಬಿಂಬಿಸಲು ಹೊರಟಿದೆ ‘ದಿ ಹಿಂದೂ’ ಪತ್ರಿಕೆ! ಇದು ಭಾರತದ ಕಳಂಕ ಎಂದೇ ಹೇಳಬಹುದು.

ಚೀನಾ, ಕೊರೋನಾ ವಿಚಾರವಾಗಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು, ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪರದೇಶದ ಪತ್ರಿಕೆಗಳಿಗೆ ಹಣದ ಆಮಿಷ ಒಡ್ಡುತ್ತಿದೆ. ತಾನು ಬೆಳೆಯುವುದಕ್ಕಾಗಿ ಇತರರನ್ನು ಹಾಳು ಮಾಡುವುದರಲ್ಲಿ ಎತ್ತಿದ ಕೈ ಚೀನಾ. ಅದಕ್ಕಾಗಿ ಪತ್ರಿಕಾ ಮಾಧ್ಯಮವನ್ನು ಉಪಯೋಗಿಸಿಕೊಳ್ಳುತ್ತಿದೆ. ಅವರ ಆಮಿಷಕ್ಕೆ ಒಳಗಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಕೊಟ್ಟು ಚೀನಾದ ಪರವಾಗಿ ನಿಲ್ಲುವವರು ಎಡಪಂಕ್ತಿಯ ಕಮ್ಮ್ಯುನಿಸ್ಟರು. ಇಂತಹ ದೇಶದ್ರೋಹಿ ಪತ್ರಿಕೆಗಳನ್ನು ಪ್ರತ್ಯೇಕವಾಗಿರಿಸಿ ನಾವು ಎಚ್ಚರಿಕೆಯಿಂದರಬೇಕು. ಸರ್ಕಾರ ಮತ್ತು ತಂತ್ರಜ್ಞಾನ ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಮುಖ್ಯವಾಗಿ ಚೀನಾದ ಪ್ರಭಾವವನ್ನು ತಗ್ಗಿಸಲು ಮುಂದಾಗಬೇಕು. ಪತ್ರಿಕಾ ಮಾಧ್ಯಮದ ಮೇಲೆ ಸವಾರಿ ಮಾಡುತ್ತಿರುವ ಚೀನಾದ ಆಟಾಟೋಪ ಅಂತ್ಯವಾಗಬೇಕು.

-ಕಾರ್ತಿಕ್ ಕಶ್ಯಪ್

Click to comment

Leave a Reply

Your email address will not be published. Required fields are marked *

Most Popular

To Top