International

ಚೀನಾ; ನವಯುಗದ ಜಾಗತಿಕ ಶನಿ!

ಜಗತ್ತಿನ ಇತಿಹಾಸವನ್ನು ಗಮನಿಸಿದರೆ ಆಯಾ ಕಾಲದಲ್ಲಿ ಒಂದಲ್ಲ ಒಂದು ಸಾಮ್ರಾಜ್ಯ (ರಾಷ್ಟ) ಮತ್ತೊಂದರ ಮೇಲೆ ಆಕ್ರಮಣ ಮಾಡುತ್ತಲೇ ಬಂದಿವೆ. ಭಾರತದ ಮೇಲಂತೂ ದಾಳಿ ಮಾಡಿದವರ ಪಟ್ಟಿ ದೊಡ್ಡದಾಗೆ ಇದೆ. ಗ್ರೀಕರು, ಶಖರು, ಕುಶಾನರು, ಹುಣರು, ಮೊಘಲರು, ಅರಬ್ಬರು, ಅಫ಼್ಘನ್ನರು, ತುರ್ಕಿಗಳು, ಪೊರ್ಚುಗಿಸರು, ಫ಼್ರೆಂಚರು, ಡಚ್ಚರು, ಬ್ರಿಟೀಷರು, ಪಾಕೀಸ್ತಾನ, ಚೀನಾ. ಇಷ್ಟೂ ದೇಶದವರು, ಕ್ರಿ.ಪೂ. ೩೩೦ ರ ಗ್ರೀಕಿನ ಅಲೆಕ್ಸಾಂಡರಿಂದ ಹಿಡಿದು ಕ್ರಿ.ಶ. ೧೯೯೯ ರ ಪಾಕೀಸ್ತಾನದ ಪರ್ವೇಜ್ ಮುಷರ್ರಫ಼್ ತನಕ ಬಿಟ್ಟು ಬಿಡದೆ ದಾಳಿ ಮಾಡಿದ್ದಾರೆ. ಇವೆಲ್ಲರನ್ನೂ ಎದುರಿಸಿ ಮೆಟ್ಟಿನಿಂತದ್ದು ಭಾರತ. ೧೯೬೨ರ ವರೆಗಿನ ದಾಳಿಗಳು, ಪಾಕೀಸ್ತಾನ ಮತ್ತು ಅದರ ಪ್ರೇರಿತ ಭಯೋತ್ಪಾದನ ದಾಳಿಗಳನ್ನು ಭಾರತ  ಹೊರಾಡಿ ಮೆಟ್ಟಿನಿಂತ್ತಿತ್ತು. ಆದರೆ, ೧೯೬೨ ರಲ್ಲಿ ಚೀನಾ ಎದುರಿಗೆ ರಾಜಕೀಯದ ಕಾರಣದಿಂದಾಗಿ ಭಾರತ ಸೋತು ನಿಂತ್ತಿತ್ತು.

೧೯೪೯ ತನಕ ನೆಹರು, ಟಿಬೆಟ್ ಮತ್ತು ಚೀನಾಗಳನ್ನು ಎರಡು ಬಿನ್ನ ಬಿನ್ನ ರಾಷ್ಟ್ರಗಳನ್ನಾಗಿ ನೋಡುತ್ತಿದ್ದರು. ನೋಡ ನೋಡುತ್ತಿದ್ದಂತೆ ಚೀನಾ ಟಿಬೆಟನ್ನು ಆಕ್ರಮಿಸಿಕೊಂಡು, ಭಾರತದ ಶಿರದಿಂದ ಭುಜದ ಸಮೀಪ ಬಂದೇ ಬಿಟ್ಟಿತು. ಆಗಲೂ ಸಹ ನೆಹರು, “ಹಿಂದಿ, ಚೀನಿ ಭಾಯಿ ಭಾಯಿ” ಎಂದು ತಮ್ಮ ಪಾಡಿಗೆ ಕೂಗುತ್ತಲೇ ಇದ್ದರು. ಅದರ ಪರಿಣಾಮ, ಭಾರತ ಆಕ್ಸಯ್ಚಿನ್ ಮತ್ತು ೧೯೬೨ ರಲ್ಲಿ ಮತ್ತಷ್ಟು ಭೂ ಭಾಗವನ್ನು ಕಳೆದು ಕೊಂಡಿತು. ೨೦೧೪ರ ಹೊತ್ತಿಗೆ ಚೀನಾ ಅರುಣಾಚಲ ಪ್ರದೇಶವನ್ನು ತನ್ನದ್ದು ಎಂದು ಹೇಳುವ ಮಟ್ಟಕ್ಕೆ ಬೆಳೆಯಿತು. ೧೯೬೨ರ ಯುದ್ಧದ ನಂತರ ಚೀನಾ ಭಾರತದ ಮೇಲೆ ಯುದ್ಧ ಮಾಡುವ ಗೋಜಿಗೆ ಹೊಗಲಿಲ್ಲ. ಬದಲಿಗೆ  ಪಾಕೀಸ್ತಾನದ ಮೂಲಕ ಭಾರತದ ಗಮನವನ್ನು ಬೇರೆಡೆ ಹರಿಸಿತು ಮತ್ತು ತನ್ನ ಆಂತರಿಕ ಬಲವನ್ನು ವೃದ್ಧಿಗೊಳಿಸಿಕೊಳ್ಳುವತ್ತ ಗಮನ ಹರಿಸಿತು. ಹಿಮಾಲಯದ ಬುಡದಲ್ಲಿ ತನ್ನ ಹೆದ್ದಾರಿಯನ್ನು ಚೆನ್ನಾಗಿ ಅಭಿವೃದ್ಧಿಗೊಳಿಸಿಕೊಂಡಿತು. ಇದು ಚೀನಾ ಭಾರತದೊಂದಿಗೆ ನಡೆದುಕೊಂಡ ರೀತಿಯಾದರೆ, ಬೇರೆ ದೇಶದೊಟ್ಟಿಗೆ ಅದು ನಡೆದುಕೊಂಡ ರೀತಿ ಭಿನ್ನವಾದದ್ದು.

ಎರಡನೇ ಮಹಾಯುದ್ಧದ ನಂತರ, ಚೀನಾ, ಜಗತ್ತಿನಾದ್ಯಂತ ತನ್ನ ಆಕ್ರಮಣಕಾರಿ ಧೋರಣೆಯನ್ನು ತೋರುತ್ತಾ ಬಂದಿದೆ. ೧೯೫೦ ರಲ್ಲಿ ಟಿಬೆಟ್ ಮೇಲೆ, ೧೯೫೧ರಲ್ಲಿ ಉತ್ತರ ಕೋರಿಯಾ ಜೊತೆಗೂಡಿ ದಕ್ಷಿಣ ಕೊರಿಯಾ ಮೇಲೆ, ೧೯೬೨ ಮತ್ತು ೧೯೬೭ರಲ್ಲಿ ಭಾರತದ ಮೇಲೆ, ೧೯೭೪ರಲ್ಲಿ ದಕ್ಷಿಣ ವಿಯಟ್ನಾಂ ಮೇಲೆ, ೧೯೭೬, ೧೯೭೯, ೧೯೮೮ ರಲ್ಲಿ ಮೂರು ಬಾರಿ ವಿಯಟ್ನಾಂ ಮೇಲೆ ಪದೇ ಪದೇ ದಾಳಿ ಮಾಡಿತು. ಒಂದೊಂದು ದಾಳಿಯೂ ಬರ್ಬರವಾಗೆ ಇತ್ತು. ೧೪ನೇ ದಲೈ ಲಾಮ ರವರ ಹೇಳಿಕೆ ಪ್ರಕಾರ ೧೦ ಲಕ್ಷ ಟಿಬೆಟ್ಟಿಯರನ್ನು ಚೀನಿಯರು ಹತ್ಯೆಗಯ್ದಿದ್ದಾರೆ. ವಿಯಟ್ನಾಂ ಮೇಲಿನ ಆಕ್ರಮಣದಲ್ಲಿ ೭೦ ಸಾವಿರ ಜನರನ್ನು ಹತ್ಯೆ ಮಾಡಿದೆ ಎಂದು ಚೀನಾ ಅಂದಾಜು ಮಾಡುತ್ತದೆ. ಈ ರೀತಿ ಆಕ್ರಮಣ ನಡೆಯುತ್ತಿದ್ದ ಸಂದರ್ಭದಲ್ಲಿ, ೧೯೯೫ ರಲ್ಲಿ “ವಿಶ್ವ ವಾಣಿಜ್ಯ ಸಂಸ್ಥೆ” ಜಾರಿಗೆ ಬಂತು. ಈ ಸಂಸ್ಥೆ, ಅಂತರಾಷ್ಟ್ರೀಯ ಮಟ್ಟದಲ್ಲಿನ ವ್ಯಾಪರ ವಹಿವಾಟಿನ ಮಾಗ್ರದರ್ಶಿಯಾಗಿ, ದೇಶ, ದೇಶದ ನಡುವಿನ ವ್ಯಾಜ್ಯವನ್ನು ಸರಿಪಡಿಸುವ ವೇದಿಕೆ ಆಯಿತು. ಇದರ ಅಡಿಯಲ್ಲಿ ಬರುವ ದೇಶಗಳು ಸಂಸ್ಥೆಯ ಶಾಸನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕಾಯಿತು. ಅಂತಹ ದೇಶಗಳ ಪೈಕಿ ಚೀನಾ ಕೂಡ ಒಂದು. ಅಲ್ಲಿಂದಾಚೆಗೆ ಚೀನಾ ತನ್ನ ವರಸೆಯನ್ನು ಬದಲಾಯಿಸಿತು.

೧೯೯೯-೨೦೦೦ ರಲ್ಲಿ ಚೀನಾ, ಶಸ್ತ್ರಾಸ್ತ್ರವನ್ನು ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿತ್ತು. ೨೦೧೭ರ ಹೊತ್ತಿಗೆ ಚೀನಾ; ಶಸ್ತ್ರಾಸ್ತ್ರವನ್ನು ರಫ಼್ತು ಮಾಡುವ ಜಗತ್ತಿನ ೫ನೇ ರಾಷ್ಟ್ರವಾಗಿ ಬೆಳೆಯಿತು. ೨೦೧೩ ರಿಂದ ೨೦೧೭ರವರೆಗೆ ಸುಮಾರು ೪೮ ದೇಶಗಳಿಗೆ ಚೀನಾ ಶಸ್ತ್ರಾಸ್ತ್ರಗಳನ್ನು ರಫ಼್ತು ಮಾಡಿದೆ. ಅದರಲ್ಲಿ ಪಾಕಿಸ್ತಾನ (ಶೇ ೩೫), ಬಾಂಗ್ಲಾದೇಶ (ಶೇ ೧೯) ಮತ್ತು ಅಲ್ಜೀರಿಯಾ (ಶೇ ೧೦) ಪ್ರಮುಖ ಮಾರುಕಟ್ಟೆಗಳಾಗಿವೆ. ೨೦೦೮ ಗೆ ಹೋಲಿಸಿದಲ್ಲಿ ಚೀನಾ ತನ್ನ ರಫ಼್ತಿನ ಸಾಮರ್ಥ್ಯವನ್ನು ಶೇ ೩೮ ರಷ್ಟು ಹೆಚ್ಚಿಸಿಕೊಂಡಿದೆ. ಶ್ರೀಲಂಕಾಕ್ಕೆ ೭ ಶತಕೋಟಿ ಡಾಲರ್ ಅಷ್ಟು ಸಾಲ ಕೊಟ್ಟಿದೆ. ಅದಲ್ಲದೆ, ಹಂಬನ್ಟೋಟ ಬಂದರನ್ನು ಅಭಿವೃದ್ದಿ ಪಡಿಸಲು ಸಹ ಸಾಲ ಕೊಟ್ಟಿದೆ. ೨೦೧೩ ನಂತರ ಚೀನಾ ನೇಪಳದಲ್ಲಿ ೩.೩೨ ಶತಕೋಟಿ ಡಾರಲ್ ಅಷ್ಟು ಹೂಡಿಕೆ ಮಾಡಿದೆ. ನೇಪಳಾದಲ್ಲಿ ತಾನು ಹೆದ್ದಾರಿಗಳನ್ನು ನಿರ್ಮಿಸತ್ತಾ ಅಲ್ಲಿನ ವ್ಯಾಪಾರ ವಹಿವಾಟಿಗೆ ಕೈ ಹಾಕಿದೆ. ೨೦೧೮ರಲ್ಲಿ ಚೀನಾ ಆಫ಼್ರಿಕಾದಲ್ಲಿ ೬೦ ಶತಕೋಟಿ ಡಾಲರ್ ಅಷ್ಟು ಹೂಡಿಕೆ ಮಾಡುವುದಾಗಿ ಹೇಳಿಕೆ ಕೊಟ್ಟಿದೆ. ಇದಲ್ಲದೆ ಪಾಕಿಸ್ತಾನದಲ್ಲಿ ೬೨ ಶತಕೋಟಿ ಡಾಲರ್ ಅಷ್ಟು ಹುಡಿಕೆ ಮಾಡಿ ಹೆದ್ದಾರಿ ನಿರ್ಮಿಸುತ್ತಿದೆ. ಮೇಲು ನೋಟಕ್ಕೆ ಇವೆಲ್ಲವೂ ವ್ಯಾಪಾರದ ಉದ್ದೇಶವೆನಿಸಿದರೂ ಇದರ ಹಿಂದೆ ಷಡ್ಯಂತ್ರ ಅಡಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೂಡಿಕೆ ಎಂಬ ಸೋಗಿನಲ್ಲಿ ಬೃಹತ್ ಮಟ್ಟದಲ್ಲಿ ಹೆಚ್ಚಿನ ಬಡ್ಡಿಗೆ ಸಾಲ ಕೊಡುವುದು. ಸಾಲ ಪಡೆದುಕೊಂಡ ರಾಷ್ಟ್ರಗಳು ಕಾಲಕ್ರಮೇಣ ಅದನ್ನು ತೀರಿಸಲಾಗದೆ ಚೀನಾ ಹಾಕುವ ಶರತ್ತುಗಳನ್ನು ಒಪ್ಪಿಕೊಳ್ಳುತ್ತದೆ. ಅಂತಹ ಶರತ್ತುಗಳ ಮೂಲಕ ಆ ದೇಶಗಳಲ್ಲಿ ಚೀನಾ ತನ್ನ ಪ್ರಭುತ್ವವನ್ನು ಸ್ಥಾಪಿಸುತ್ತದೆ. ಉದಾಹರಣೆಗಳು ಹೀಗಿವೆ;

೧. ಶ್ರೀಲಂಕಾ ತನ್ನ ಉತ್ಪಾದನೆಯ ಶೇ ೯೫ ರಷ್ಟನ್ನು ಸಾಲ ತೀರಿಸುವುದಕ್ಕೆ ವ್ಯಯಿಸುತ್ತದೆ. ಹಂಬನ್ಟೋಟ ಬಂದರನ್ನು ಚೀನಾ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿತ್ತು ಆದರೆ, ಭಾರತ ಅದನ್ನು ತಡೆಗಟ್ಟಿತು.

೨. CPEC ಪ್ರಾಜೆಕ್ಟಿನ ಮೂಲಕ ಚೀನಾ ಪಾಶ್ವಿಮಾತ್ಯ ರಾಷ್ಟ್ರಗಳಿಗೆ ಪರ್ಯಾಯ ಮಾಗ್ರವನ್ನು ಕಂಡುಕೊಂಡಿದೆ. ವಿದ್ಯುತ್ ಅಭಿವೃದ್ಧಿ ಎಂಬ ಸೋಗಿನಲ್ಲಿ ಪಾಕಿಸ್ತಾನವನ್ನು ತನ್ನ ಮುಷ್ಠಿಯಲ್ಲಿ ಹಿಡಿದಿಟ್ಟಿದೆ.

೩. ಆಫ಼್ರಿಕಾ ದೇಶದಲ್ಲಿರುವ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿಕೊಂಡು ತನ್ನ ದೇಶದ ಇಂಧನ ಪೂರೈಕೆ ಮಾಡಲು ಚೀನಾ ಬಲೆ ಹೆಣೆದಿದೆ.

ಶ್ರೀಲಂಕಾ, ನೇಪಾಳ, ಪಾಕೀಸ್ತಾನಗಳ ಮೂಲಕ ಭಾರತವನ್ನು ಹತೋಟಿಯಲ್ಲಿಡಲು ಪ್ರಯತ್ನ ಪಡುತ್ತಿದೆ.  ಇವು ಏಷಿಯಾ ಮತ್ತು ಆಫ಼್ರಿಕಾ ಖಂಡದಲ್ಲಿ ಚೀನಾ ಖೆಡ್ಡಾ ತೋಡುತ್ತಿರುವ ಸಣ್ಣ ಜಲಖ್ ಅಷ್ಟೇ.

ಯೂರೋಪ್ ಮತ್ತು ಕೊರಿಯಾ ಮಾರುಕಟ್ಟೆಯನ್ನು ಹಾಳು ಮಾಡುವ ರೀತಿ ಬಲು ವಿಶಿಷ್ಟವಾದದ್ದು. ಇದು ಪಕ್ಕಾ ವ್ಯಾವಹಾರಿಕ ಮತ್ತು ರಾಜಕೀಯ ಒಳಗೊಂಡ ಕುಟಿಲತೆ. ವೊಲ್ವೋ ಕಾರುಗಳ ಬಗ್ಗೆ ಎಲ್ಲರೂ ಕೇಳಿರಬೇಕಲ್ಲ? ಅದೊಂದು, ಕಾರನ್ನು ತಯಾರಿಸುವ ಸ್ವೀಡನ್ ಮೂಲದ ಕಂಪನಿ. ಫ಼ೋರ್ಡ್ ಕಂಪನಿ ಜೊತೆಗಿದ್ದ ವೊಲ್ವೋ, ೨೮ ಅಕ್ಟೋಬರ್ ೨೦೦೯ ರಿಂದ ಚೀನಾ ಮೂಲದ ‘Zhejiang Geely Holding Group (ಜೀಲಿ)’ ಸಂಸ್ಥೆಗೆ ಮಾರಟವಾಗುತ್ತದೆ.

ಅಲ್ಲಿಂದಾಚೆಗೆ ಯೂರೋಪ್ ಮಾದರಿಯ ವಾಹನ ತಂತ್ರಜ್ಞಾನ (European Automotive Technology) ಚೀನಾಕ್ಕೆ ನೇರವಾಗಿ ಸಿಗುವಂತಾಯಿತು. ವೊಲ್ವೊ ಕಂಪನಿಯ ವಾರ್ಷಿಕ ಲಾಭವನ್ನು ಜೀಲಿ ಪಡೆಯಲು ಶುರುಮಾಡಿತು. ಈ ಮೂಲಕ ಯೂರೋಪಿನ ಮಾರುಕಟ್ಟೆಯಲ್ಲಿ ಜರ್ಮನಿ ಎದುರಿಗೆ ತನ್ನ ಛಾಪು ಮೂಡಿಸಲು ಚೀನಾ ಪ್ರಯತ್ನ ಪಟ್ಟಿತು. ಆದರೆ, ‘Cheap Product’ ಎಂಬ ಹಣೆಪಟ್ಟಿ ಹೊಂದಿರುವ ಚೀನಾಕ್ಕೆ ಯೂರೋಪಿನಲ್ಲಿ ಬೆಲೆ ಸಿಗಲಿಲ್ಲ. ಆಗ, ಸ್ವೀಡನ್ನಲ್ಲಿ ತನ್ನ ಆಡಿಯಲ್ಲಿ ೨೦೧೩ರಲ್ಲಿ ಹೊಸದೊಂದು ಕಂಪನಿ ತೆರೆಯಿತು. ಆದುವೆ, China Euro Vehicle Technology (CEVT – ಸೆಫ಼್ಟ್). ಈ ಕಂಪನಿ ಮೂಲಕ ಚೀನಾ, ಸಂಶೋಧನಾತ್ಮಕ ಚಟುವಟಿಕೆಗೆ ಮುಂದಾಯಿತು. ವೋಲ್ವೋ ಕಂಪನಿಯಲ್ಲಿದ್ದ ೧೦-೧೬ ಜನರನ್ನು ಸೇಫ಼್ಟ್ ಗೆ ಹಾಕಿ ತನ್ನ ಸಂಶೋಧನೆಯನ್ನು ಮುಂದುವರೆಸಿತು.

ಈಗ, ವೋಲ್ವೊ ಸ್ವಯಂಚಾಲಿತ ಕಾರಿನ ಕುರಿತು ಸಂಶೋಧನೆ ನಡೆಸುತ್ತಿದೆ. ಆದರ ಕೆಲವು ತಂತ್ರಾಂಶಗಳನ್ನು ತೆಗೆದು ಜೀಲಿ ತನ್ನ ಹೊಸ ಕಾರಿಗೆ ಅಳವಡಿಸುತ್ತಿದೆ. ವೋಲ್ವೊ ತನ್ನ ಹೊಸ ಮಾದರಿಯ ಕಾರನ್ನು ೨೦೨೫-೩೦ರ ಹೊತ್ತಿಗೆ ಹೊರತರಲು ತಯಾರಿ ನಡೆಸಿದೆ. ಆದರೆ ಜೀಲಿ; ೨೦೨೧ರ ಹೊತ್ತಿಗೆ ತನ್ನ ಹೊಸ ಮಾದರಿಯ ಕಾರುಗಳನ್ನು ಚೀನಾದಾದ್ಯಂತ ತರಲು ಮುಂದಾಗಿದೆ. ಇದಕ್ಕೆ, ಚೀನಾ ಸರ್ಕಾರದ ಬೆಂಬಲವೂ ಸಹ ಇದೆ. ಸರ್ಕಾರಿ ನೌಕರರಿಗೆ ಜೀಲಿ ಕಾರ್ಗಳನ್ನೇ ಕೊಳ್ಳಲು ಪ್ರೇರೇಪಿಸುತ್ತಿದೆ. ಈ ಮೂಲಕ ಚೀನಾ, ವಾಹನ ತಂತ್ರಜ್ಞಾನದಲ್ಲಿ ಯೂರೋಪನ್ನು ಆಳಲು ತಯಾರಿ ನಡೆಸಿದೆ. ಆದರೆ, ರಾಜಕೀಯಾಗಿ ಮತ್ತು ಸಾಂಸ್ಕೃತಿಕವಾಗಿ ಯೂರೋಪಿಗೂ ಚೀನಾಕ್ಕೂ ಸರಿ ಹೊಂದುವುದಿಲ್ಲ. ಹಾಗಾಗಿ, ಈ ವಿಚಾರದಲ್ಲಿ ಚೀನಾ ಎಷ್ಟ್ರರ ಮಟ್ಟಿಗೆ ಸಫ಼ಲವಾಗುತ್ತದೆ ಎಂಬುದು ಗೊತ್ತಿಲ್ಲ. ಇದೇ ತತ್ವವನ್ನು ಬಳಸಿ ಹ್ಯುನ್ಡಯ್ ನ ಮಾರುಕಟ್ಟೆಯ ವಿರುದ್ಧ ಬೆಳೆದು ನಿಂತು, ತನ್ಮೂಲಕ ಕೊರಿಯಾಕ್ಕೆ ಸೆಡ್ಡು ಹೊಡೆದು ನಿಲ್ಲುವುದು ಅದರ ಉದ್ದೇಶವಾಗಿದೆ.

ಯೂರೋಪು ‘ಸಮಾನತೆ’ಗೆ ಬೆಲೆಕೊಡುತ್ತದೆ, ಭಾರತ ‘ಸರ್ವೇ ಜನಃ ಸುಖಿನೋ ಭವಂತು’, ‘ಅತಿಥಿ ದೇವೋ ಭವ’ ಎನ್ನುತ್ತದೆ. ಆದರೆ, ಚೀನಾ ಮಾತ್ರ, ಬೇರೆಯವರು ಹಾಳಾದರೂ ಚಿಂತೆ ಇಲ್ಲ ತಾನು ಮಾತ್ರ ಉದ್ದಾರ ಆಗಬೇಕು ಮತ್ತು ಎಲ್ಲರನ್ನು ಆಳುವಂತಾಗಬೇಕು ಎಂಬ ದುರುದ್ದೇಶ ಹೊಂದಿದೆ. ಮೇಲೆ ಹೇಳಿರುವುದೆಲ್ಲವನ್ನು ರಾಜಕೀಯ ಮತ್ತು ವ್ಯಾವಹಾರಿಕ ನೆಲೆಗಟ್ಟಿನಲ್ಲಿ ಸಮರ್ಥಿಸಿಕೊಳ್ಳಬಹುದು. ಆದರೆ, ಚೀನಾದ ಸಾಮಾನ್ಯ ಜನರಲ್ಲಿರುವ ಅಸಡ್ಡೆಯ ಭಾವ, ಕುಟಿಲತೆ ತೀರ ಅಸಹ್ಯ ಹುಟ್ಟಿಸುವಂತಹುದು. ಅವರ ಆ ಕುಟಿಲತೆಯ ಸ್ವಭಾವ ಮತ್ತು ಭಾರತದ ವಿರುದ್ಧದ ಷಡ್ಯಂತ್ರದ ಕುರಿತು ಮತ್ತೊಂದು ಸಂಚಿಕೆಯಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಹೇಗೆ ನೋಡಿದರೂ, ಅಭಿವೃದ್ಧಿ ಹೆಸರಿನಲ್ಲಿ ಚೀನಾ ಜಗತ್ತನ್ನು ಆಕ್ರಮಿಸಿಕೊಳ್ಳುತ್ತಿರುವುದು ಸುಳ್ಳಲ್ಲ. ಹಿಡಿದರೆ ಸುಲಭವಾಗಿ ಬಿಟ್ಟು ಹೋಗುವಂತಹುದಲ್ಲ. ಆದ್ದರಿಂದಲೇ ಚೀನಾ; ನವಯುಗದ ಶನಿ…!!!

-ಕಾರ್ತಿಕ್ ಕಶ್ಯಪ್

Click to comment

Leave a Reply

Your email address will not be published. Required fields are marked *

Most Popular

To Top