National

ಚಿನ್ನದ ಹುಡುಗಿ ಗೋಮತಿ ಮಾರಿಮುತ್ತು!!

ಇತ್ತೀಚೆಗಷ್ಟೇ ಖತಾರ್ ನ ದೋಹಾದಲ್ಲಿ ನಡೆದ ಏಷಿಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಗೋಮತಿ ಮಾರಿಮುತ್ತು ಅವರು 800 ಮೀಟರ್ ರೇಸಿನಲ್ಲಿ ಚಿನ್ನದ ಪದಕ ಪಡೆದು ಭಾರತದ ಗೌರವವನ್ನು ಎತ್ತರಕ್ಕೇರಿಸಿದ್ದಾರೆ. 30 ವರ್ಷದ ಗೋಮತಿ ಮಾರಿಮುತ್ತು ಮೂಲತಃ ಚೆನ್ನೈನ ತಿರುಚಿರಾಪಳ್ಳಿಯ ಹೆಣ್ಣುಮಗಳು.

ಗೋಮತಿಯ ತಂದೆ ಜಮೀನೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೊದಲಿನಿಂದಲೂ ಬಡತನದಲ್ಲಿಯೇ ಬೆಳೆದಿದ್ದರೂ ಈಕೆಯ ಕ್ರೀಡಾ ಆಸಕ್ತಿಯನ್ನು ಕಂಡು ಸ್ವತಃ ಈಕೆಯ ತಂದೆಯೇ ಪ್ರತಿ ಹಂತದಲ್ಲೂ ಪ್ರೋತ್ಸಾಹ, ಬೆಂಬಲ ನೀಡುತ್ತಿದ್ದರು ಎಂದು ಮಾರಿಮುತ್ತು ಅವರು ನೆನಪಿಸಿಕೊಳ್ಳುತ್ತಾರೆ. ಆಕೆಯ ತಂದೆ ಬೆಳಿಗ್ಗೆ 4 ಗಂಟೆಗೇ ಆಟದ ತಯಾರಿ, ವ್ಯಾಯಾಮಗಳಿಗಾಗಿ ಎಬ್ಬಿಸುತ್ತಿದ್ದರು. ಕಿತ್ತು ತಿನ್ನುವ ಬಡತನವಿದ್ದದ್ದರಿಂದ ಮಾರಿಮುತ್ತುವಿನ ತಂದೆ ಮಗಳಿಗೆಂದು ತಮ್ಮ ಪಾಲಿನ ಆಹಾರವನ್ನೂ ತೆಗೆದಿಟ್ಟು ತಾವು ಹಸುವಿನ ಆಹಾರವನ್ನು ತಿನ್ನುತ್ತಿದ್ದರೆಂದು ಸ್ವತಃ ಗೋಮತಿ ಮಾರಿಮುತ್ತು ತಿಳಿಸಿದ್ದಾರೆ.

2016 ರಲ್ಲಿ ಗೋಮತಿಯ ತಂದೆ ಮತ್ತು ಕೋಚ್ ತೀರಿಕೊಂಡರು. ನಂತರ ಆಕೆಗೊಂದು ಅಪಘಾತವೂ ಆಯಿತು. ತಾನಿನ್ನು ತನ್ನ ಪ್ರಿಯವಾದ ಆಟದಲ್ಲಿ ಮುಂದೆ ಬರಲು ಸಾಧ್ಯವಿಲ್ಲವೆಂದು ಕುಳಿತಿದ್ದಾಗ ಭರವಸೆಯ ಬೆಳಕಾಗಿ ಆಕೆಯ ಸ್ನೇಹಿತರು ಆಕೆಯೊಡನೆ ನಿಂತರು. ಆಕೆಯಲ್ಲಿ ಸ್ಫೂರ್ತಿಯನ್ನು ತುಂಬಿದರು. ಗೋಮತಿಯವರು ಹಲವು ರಾಜ್ಯಮಟ್ಟದ ಆಟಗಳಲ್ಲಿ ಸ್ಪರ್ಧಿಸಿ ಹಂತ-ಹಂತವಾಗಿ ಸಾಧನೆಯ ಮೆಟ್ಟಿಲನ್ನು ಏರುತ್ತಾ ಸಾಗಿದರು. ದೋಹಾದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡರು.

2020ರಲ್ಲಿ ನಡೆಯುವ ಟೊಕ್ಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವುದು ತನ್ನ ಮುಂದಿನ ಗುರಿ ಎಂದು ಹೇಳುವ ಮಾರಿಮುತ್ತು ಅವರು ಅದಕ್ಕಾಗಿ ಕಠಿಣ ತಯಾರಿಯಲ್ಲಿ ನಿರತರಾಗಿದ್ದಾರೆ. ಭಾರತದ ಗೋಮತಿ ಮಾರಿಮುತ್ತು ಟೊಕ್ಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ಭಾರತದ ಧ್ವಜವನ್ನು ಮುಗಿಲೆತ್ತರಕ್ಕೇರಿಸುವಂತಾಗಲಿ!!

Click to comment

Leave a Reply

Your email address will not be published. Required fields are marked *

Most Popular

To Top