State

ಚಿನ್ನದಂತಹ ನದಿಯೇ ಕಳೆದುಹೋದ ಮೇಲೆ ಚಿನ್ನದ ರಥವೇಕೆ?!

ನಾವೆಷ್ಟು ಬೇಜವಾಬ್ದಾರಿಗಳಾಗುತ್ತಿದ್ದೇವೆಂಬುದು ಕಾಲ ಕಳೆದಂತೆ ಗೋಚರವಾಗುತ್ತಿದೆ. ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳು ನಿಮರ್ಾಣವಾಗುತ್ತಿವೆ ನಿಜ, ಬದುಕಿನ ಸಹಜ ಪಾತ್ರವನ್ನು ಮರೆಯುತ್ತಿದ್ದೇವೆ. ಪ್ಯಾಂಟು, ಶಟರ್ು, ಸೂಟು, ಬೂಟುಗಳ ಯುಗವನ್ನೇನೋ ನಿಮರ್ಾಣ ಮಾಡಿಬಿಟ್ಟಿದ್ದೇವೆ. ಆದರೆ ಸಹಜ ಬದುಕಿನ ತತ್ತ್ವದಿಂದ ಮೈಲುಗಟ್ಟಲೆ ದೂರ ಬಂದಿದ್ದೇವೆ. ಹೀಗನಿಸಲು ಕಾರಣ ಕುಮರಧಾರ ಸ್ವಚ್ಛತೆ. ಕುಕ್ಕೆ ಸುಬ್ರಹ್ಮಣ್ಯದ ಸುತ್ತ ಹರಿಯುವ ಕುಮಾರಧಾರ ನದಿಯನ್ನು ಸ್ವಚ್ಛಗೊಳಿಸಬೇಕೆಂಬ ಸಂಕಲ್ಪ ಯುವಾಬ್ರಿಗೇಡ್ನ ಕಡೆಯಿಂದ ಮಾಡಿದ್ದೇವೆ. ಇದು ಮೊದಲನೆಯದ್ದೇನಲ್ಲ. ಈ ಬಗೆಯ ಏಳು ನದಿಗಳ ಸ್ವಚ್ಛತೆ ಈ ಹಿಂದೆಯೇ ಮಾಡಿದ್ದೆವು. ದಕ್ಷಿಣದ ಕಾವೇರಿಯಿಂದ ಹಿಡಿದು ಉತ್ತರದ ಭೀಮೆವರೆಗೂ ನಮ್ಮ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಕುಮಾರಧಾರೆ ಮಾತ್ರ ನಮಗೆ ನಮ್ಮ ಮಾನಸಿಕ ಸ್ಥಿತಿಯ ಹೊಸ ಆಯಾಮವನ್ನು ತೋರಿಸಿಕೊಟ್ಟಿತು. ಎಂದೋ ಮಾಡಿದ ಸರ್ಪದೋಷದ ಪರಿಹಾರಕ್ಕಾಗಿ ಸರ್ಪಸಂಸ್ಕಾರವನ್ನೋ ಆಶ್ಲೇಷಬಲಿಯನ್ನೋ ಮಾಡಿಸಲು ನಾವು ಶ್ರದ್ಧೆಯಿಂದಲೇ ಮಂದಿರಕ್ಕೆ ಹೋಗುತ್ತೇವೆ. ತೆಂಡೂಲ್ಕರ್ ತರಹದ ಘಟಾನುಘಟಿಗಳೇ ಅಲ್ಲಿಗೆ ಬಂದಿದ್ದಾರೆಂಬ ಪ್ರಚಾರ ಬೇರೆ. ಅಲ್ಲಿ ಹೋದೊಡನೆ ತೀರ್ಥಸ್ನಾನ ಮುಗಿಸಿ ಪೂಜೆಗೆ ಕುಳಿತು ಪಾಪ ಪರಿಹಾರವೇ ಆಯಿತೆಂದುಕೊಂಡು ಮರಳಿ ಬರುತ್ತೇವೆ ನಿಜ. ಅದು ನಮ್ಮ ಶಕ್ತಿಯನ್ನು ವೃದ್ಧಿಸಲು ಶ್ರದ್ಧೆಯ ಕಾರಣಕ್ಕೋಸ್ಕರ ಲಾಭದಾಯಕವೇ. ಆದರೆ ದೇವಸ್ಥಾನದ ಹಿಂಬದಿ ಹರಿಯುವಂತಹ ದರ್ಪಣತೀರ್ಥವನ್ನು ನೀವು ನೋಡಿಬಿಟ್ಟರೆ ನದಿಯಲ್ಲಿ ಸ್ನಾನ ಮಾಡುವುದಿರಲಿ ಕಾಲಿಡಲು ಅಂಜುವುದರಲ್ಲಿ ಅನುಮಾನವೇ ಇಲ್ಲ. ಅದು ತೀರ್ಥವೆನ್ನಿಸಿಕೊಳ್ಳಲು ಯೋಗ್ಯವೇ ಅಲ್ಲ. ನಮ್ಮೂರಿನ ಚರಂಡಿಗಿಂತಲೂ ಕೊಳಕಾಗಿರುವ ಸ್ಥಳ. ದೇವಸ್ಥಾನದ ಹಿಂಬದಿ ನದಿಯೊಂದು ಹೀಗೆ ಕೊಳಕು ರಾಡಿಯಾಗಿ ಹರಿಯುತ್ತಿದೆ ಎಂಬುದು ಯಾರಿಗೂ ಚಿಂತೆಯ ವಿಷಯವೇ ಅಲ್ಲವೆಂಬುದು ದುರಂತಕಾರಿ ಸಂಗತಿ!


ನೇತ್ರಾವತಿಯನ್ನು ಸ್ವಚ್ಛಮಾಡುವಾಗಲೂ ನಾವು ಕಸ ತೆಗೆದಿದ್ದೇವೆ ನಿಜ, ಆದರೆ ಜೀವ ಅಸಹ್ಯ ಮಾಡಿಕೊಂಡಿರಲಿಲ್ಲ. ದರ್ಪಣತೀರ್ಥ ಬದುಕಿನ ಮೇಲೆ ವಾಕರಿಕೆಯನ್ನು ಹುಟ್ಟಿಸಿಬಿಟ್ಟಿತು. ಭಗವಂತ ತೀರ್ಥ ರೂಪದಲ್ಲಿ ಕೊಟ್ಟಿದ್ದನ್ನು ಹಾಳು ಮಾಡಿ ರೋಗ-ರುಜಿನಕ್ಕೆ ಕಾರಣವಾಗುವಂತೆ ಮಾಡಿಕೊಳ್ಳುವ ಕಲೆ ಮನುಷ್ಯನಿಗೆ ಮಾತ್ರ ಇರುವಂಥದ್ದೇನೋ. ತೀರ್ಥದ ಪಕ್ಕಕ್ಕೆ ಶೌಚಕ್ಕೆ ಕುಳಿತುಕೊಳ್ಳುವ ಜನ, ತಿಂದು ಗುಟ್ಕಾ ಕವರನ್ನು ಎಸೆಯುವ ಅಡುಗೆ ಭಟ್ಟರು, ಅತ್ಯಾಧುನಿಕ ವ್ಯವಸ್ಥೆಗಳಿದ್ದಾಗ್ಯೂ ಶುದ್ಧೀಕರಣಕ್ಕೆ ಯತ್ನಿಸದೇ ಎಲೆ, ನೈಮರ್ಾಲ್ಯ ಮತ್ತು ಅಡುಗೆ ಮಾಡಿದ ಅಷ್ಟೂ ಕೊಳಕನ್ನು ನೇರ ನದಿಗೇ ಬಿಡುವ ಬುದ್ಧಿವಂತರು, ತಮ್ಮ ಮನೆಯ ಅಷ್ಟೂ ಕೊಳಕು ನೀರನ್ನು ಮುಲಾಜಿಲ್ಲದೇ ನದಿಗೆ ಹರಿಸಿಬಿಡುವ ಅಕ್ಕಪಕ್ಕದ ಜನ… ಓಹ್! ಸ್ವಚ್ಛತೆ ಸವಾಲೆನಿಸಿದ್ದು ಮೊದಲ ಬಾರಿಗೆ!


ಕುಮಾರಧಾರದ ಕಥೆಯು ಭಿನ್ನವೇನಲ್ಲ. ಸ್ನಾನಘಟ್ಟದಲ್ಲಿ ನಿಂತ ನೀರು ಕಪ್ಪಾಗಿ ಹೋಗಿತ್ತು. ನದಿಯಲ್ಲೇ ಗಾಡಿ ತೊಳೆಯುವುದರಿಂದ ಎಣ್ಣೆಯ ಅಂಶ ನೀರಿನ ಮೇಲೆ ಆವರಿಸಿದ್ದು ಜಲಚರಗಳಿಗೆ ಬಿಡಿ, ಸ್ನಾನ ಮಾಡಿದ ಭಕ್ತರಿಗೂ ಒಳಿತಲ್ಲ. ನೀರು ನಿಲ್ಲಲೆಂದು ಕಟ್ಟೆ ಕಟ್ಟಿರುವುದರಿಂದ ನಿಂತ ನೀರು ಕಸ ತುಂಬಿ ನಾರುವುದನ್ನು ಕಂಡಾಗ ಎಂಥವನಿಗೂ ಗಾಬರಿಹುಟ್ಟಿಸುವ ದೃಶ್ಯವೇ. ಇದರ ಸ್ವಚ್ಛತೆಗೆಂದು ಇಳಿದರೆ ಎಡ ಭಾಗದಿಂದ ಮುಖ್ಯನದಿಗೆ ಸೇರಿಕೊಳ್ಳುವ ತೊರೆಯೊಂದು ಶುದ್ಧೀಕರಣ ಘಟಕದಿಂದ ಬರುವ ಕೊಳೆತ ನೀರಿನೊಂದಿಗೆ ಸೇರಿಕೊಂಡು ಹಸಿರು ಹಸಿರಾಗಿಬಿಟ್ಟಿದೆ. ಶುದ್ಧೀಕರಣ ಘಟಕದ್ದು ಮತ್ತೊಂದು ಕಥೆ. ಪಂಚಾಯ್ತಿಯ ಸದಸ್ಯರೊಬ್ಬರು ಕೊಟ್ಟ ಮಾಹಿತಿಯ ಪ್ರಕಾರ ಭಕ್ತಾದಿಗಳ ಹಣದ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿಮರ್ಾಣಗೊಂಡಿರುವ ಈ ಘಟಕ ಕೆಲಸ ಮಾಡಿದ್ದೇ ಅಪರೂಪ. ಹೀಗಾಗಿ ಊರ ಕೊಳಕು ರಾಡಿಯೆಲ್ಲಾ ಘಟಕಕ್ಕೆ ಬಂದು ಅಲ್ಲಿ ಕೆಲವು ಹೊತ್ತು ತಂಗಿ ಹಾಗೇ ನದಿಗೆ ಸೇರ್ಪಡೆಯಾಗಿಬಿಡುತ್ತದೆ. ಪವಿತ್ರ ಕುಮಾರಧಾರ ಹೀಗೇ ಮುಂದುವರೆದರೆ ಬೆಂಗಳೂರಿನ ವೃಷಭಾವತಿ ಆಗುವುದರಲ್ಲಿ ಬಹಳ ಸಮಯವಿಲ್ಲ ಎನಿಸುತ್ತದೆ.

ಭಕ್ತಾದಿಗಳದ್ದು ಮತ್ತೊಂದೇ ಕಥೆ. ಟೀವಿಯಲ್ಲಿ ಪ್ರತಿನಿತ್ಯ ಮಾತನಾಡುವ ಜ್ಯೋತಿಷಿಗಳು ನದಿಗೆ ಬಾಗಿನವನ್ನು ಕೊಡಬೇಕೆಂತಲೋ ಮನೆಯ ತೆಂಗಿನಕಾಯಿ ಬಿಡಬೇಕೆಂತಲೋ ಹೇಳಿದ್ದರ ಪರಿಣಾಮವಾಗಿ ಅದು ಟನ್ನುಗಟ್ಟಲೆ ಕಸದ ಆಗರವಾಗಿಬಿಟ್ಟಿದೆ. ನದಿಗೆ ಇದನ್ನು ಬಿಟ್ಟ ನಂತರ ಅದನ್ನು ಶುದ್ಧಗೊಳಿಸುವ ಪ್ರಯತ್ನವನ್ನು ಆಡಳಿತವೂ ಮಾಡದೇ ಇರುವುದರಿಂದ ಕೈ ಹಾಕಿದಲ್ಲೆಲ್ಲಾ ಕಸದ ರಾಶಿಯೇ ಸಿಗುತ್ತದೆ. ಒಂದೆರಡಲ್ಲ ಸುಮಾರು 8 ರಿಂದ 10 ಟನ್ ಕಸವನ್ನು ನದಿಯಿಂದ ಹೆಕ್ಕಲಾಯ್ತು!!


ಇದಕ್ಕಿಂತಲೂ ಕೆಡುಕೆನಿಸಿದ್ದು ಸುಬ್ರಹ್ಮಣ್ಯದ ಇಕ್ಕೆಲಗಳಲ್ಲೂ ಕಂಡುಬರುವ ಬಾಟಲುಗಳ ರಾಶಿ. ಕುಡಿದ ನೀರು, ತಂಪು ಪಾನೀಯಗಳ ಬಾಟಲುಗಳನ್ನು ದಾರಿಯಿಂದಲೇ ಎಸೆದು ಹೋಗುವವರು ಒಂದಷ್ಟು ಜನರಾದರೆ ಪೂಜೆ ಮುಗಿಸಿ ಕುಡಿದ ಹೆಂಡದ ಬಾಟಲಿಯನ್ನು ಎಸೆದು ಹೋಗುವವರು ಮತ್ತೊಂದಷ್ಟು ಜನ. ಒಟ್ಟು ಸಂಗ್ರಹಿಸಿದ ಬಾಟಲಿಗಳ ಸಂಖ್ಯೆ ಎಷ್ಟಿರಬಹುದು ಗೊತ್ತೇ? ಸುಮಾರು 10,000! ಇವುಗಳಲ್ಲಿ ಹೆಂಡದ ಬಾಟಲಿಗಳೇ 3000ಕ್ಕಿಂತಲೂ ಹೆಚ್ಚಿದ್ದವು. ಪ್ರಜ್ಞಾವಂತರೆನಿಸಿಕೊಂಡ ನಾವು, ಸುಶಿಕ್ಷಿತರೆನಿಸಿಕೊಂಡ ನಾವು ತೀರ್ಥಕ್ಷೇತ್ರಗಳಿಗೆ ಹೋದಾಗ ಹೇಗೆ ನಡೆದುಕೊಳ್ಳಬೇಕೆಂಬ ಸಾಮಾನ್ಯ ಪ್ರಜ್ಞೆಯೂ ಇಲ್ಲವಾದರೆ ನಮ್ಮ ಶಿಕ್ಷಣದಲ್ಲಿ ನಿಜಕ್ಕೂ ಕೊರತೆಯಿದೆ ಎಂದು ಸಾಬೀತಾದಂತೆಯೇ. ಒಂದೋ ಶಿಕ್ಷಣವನ್ನು ಸುಧಾರಿಸಬೇಕು ಇಲ್ಲವೇ ಕಾನೂನನ್ನು ಬಲಪಡಿಸಬೇಕು. ಮುಜರಾಯಿ ಇಲಾಖೆಗೆ ಇದನ್ನು ಮಾಡಲು ಸಾಧ್ಯವಾಗದಿದ್ದರೆ ಅವರಿಂದ ಮಂದಿರವನ್ನು ಕಸಿದುಕೊಂಡು ಸಮಾಜದ ತೆಕ್ಕೆಯಲ್ಲಿ ಅದನ್ನು ಇಡಬೇಕು. ಬದಲಾವಣೆಗೆ ಸಮಾಜ ಪಕ್ವವಾಗುತ್ತಿರುವ ಈ ಹೊತ್ತಿನಲ್ಲಿ ಅಧಿಕಾರಿಗಳನ್ನು, ಶಾಸಕರನ್ನು ದುಡಿಸಿಕೊಳ್ಳುವ ಪ್ರಯತ್ನಕ್ಕೆ ನಾವುಗಳೇ ಮುಂದಾಗಬೇಕು.


ಮುಖ್ಯಮಂತ್ರಿಗಳೇನೋ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಚಿನ್ನದ ರಥ ಮಾಡಿಸಬೇಕೆಂದು ಸಂಕಲ್ಪ ಮಾಡಿದ್ದಾರಂತೆ. ಅದು ಮಗನ ಗೆಲುವಿಗಾಗಿ ಮಾಡಿದ ಸಂಕಲ್ಪ. ಹಾಗಂತ ಸ್ವಂತ ದುಡ್ಡಿನಲ್ಲಿ ಅವರು ಅದನ್ನು ಮಾಡಲು ಹೊರಟಿಲ್ಲ. ಭಕ್ತಾದಿಗಳು ನೀಡಿದ ಹಣದಲ್ಲೇ ರಥ ಸಮಪರ್ಿಸುವ ರಾಜಸಂಕಲ್ಪ ಅವರದ್ದು. ಆದರೆ ನೆನಪಿರಲಿ, ಕುಮಾರಧಾರೆ ಲುಪ್ತವಾದರೆ ಕ್ಷೇತ್ರವಿಲ್ಲ, ಕ್ಷೇತ್ರವಿಲ್ಲದೇ ಹೋದರೆ ಅಲ್ಲಿಗೆ ಜನ ಬರುವುದಿಲ್ಲ. ಅದರ ಪರಿಣಾಮ ಸುಂದರವಾದ ಬದುಕು ನಡೆಸುತ್ತಿರುವ ಸ್ಥಳೀಯರ ಬದುಕು ಕತ್ತಲಿಗೆ ದೂಡಿದಂತೆ. ಚಿನ್ನದ ರಥ ಆಮೇಲಿರಲಿ, ಮೊದಲು ಚಿನ್ನದಂತಹ ನದಿಯನ್ನು ಉಳಿಸಿಕೊಡುವ ಕಡೆ ಸಕರ್ಾರ ಗಮನ ಹರಿಸಲಿ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top